ಶನಿವಾರ, ಆಗಸ್ಟ್ 26, 2017

ರಿಯಲ್ ಮ್ಯಾಡ್ರೀಡ್ ಗೆ ಯುರೋಪಿಯನ್ ಕಪ್

ರಿಯಲ್ ಮ್ಯಾಡ್ರಿಡ್ ಗೆ ಯುರೋಪಿಯನ್ ಕಪ್

ಕಾರ್ಡಿಫ್, ಜೂ.4: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ದಾಖಲಿಸಿದ ಅವಳಿ ಗೋಲುಗಳ ನೆರವಿನಿಂದ ರಿಯಲ್ ಮಾಡ್ರಿಡ್ ತಂಡ ಜುವೆಂಟಸ್ ತಂಡವನ್ನು ಹೀನಾಯವಾಗಿ ಸೋಲಿಸಿ  ಯುರೋಪಿಯನ್ ಕಪ್ ತನ್ನಲ್ಲೇ ಉಳಿಸಿಕೊಂಡಿತು. ಶನಿವಾರ ಇಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ಸೂಪರ್ ಸ್ಟಾರ್ ರೊನಾಲ್ಡೊ(20, 64ನೆ ನಿಮಿಷ) ಅವಳಿ ಗೋಲು, ಕಾಸೆಮಿರೊ(61ನೆ ನಿ.), ಮಾರ್ಕೊ ಅಸೆನ್ಸಿಯೊ(90ನೆ ನಿ.) ದಾಖಲಿಸಿದ ತಲಾ ಒಂದು ಗೋಲು ನೆರವಿನಿಂದ ಮ್ಯಾಡ್ರಿಡ್ ತಂಡ 4-1 ಗೋಲುಗಳ ಅಂತರದಿಂದ ಇಟಾಲಿಯನ್ ಫುಟ್ಬಾಲ್ ಕ್ಲಬ್ ಜುವೆಂಟಸ್ನ್ನು ಮಣಿಸಿತು. ಜುವೆಂಟಸ್ ತಂಡದ ಪರ ಮರಿಯೊ ಮ್ಯಾಂಡ್ಝುಕಿಟ್(27) ಏಕೈಕ ಗೋಲು ಬಾರಿಸಿದರು. ಚಾಂಪಿಯನ್ಸ್ ಲೀಗ್ನ ಹೊಸ ಮಾದರಿ ಜಾರಿಯಾದ ಬಳಿಕ ಸತತ ಎರಡನೆ ಪ್ರಶಸ್ತಿ ಜಯಿಸಿದ ಮೊದಲ ತಂಡ ಎನಿಸಿಕೊಂಡಿರುವ ಮ್ಯಾಡ್ರಿಡ್ ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಒಟ್ಟಾರೆ 12ನೆ ಬಾರಿ ಯುರೋಪಿಯನ್ ಕಪ್ನ್ನು ಗೆದ್ದುಕೊಂಡಿತು. ನಾಲ್ಕನೆ ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಎತ್ತಿಹಿಡಿದಿರುವ ರೊನಾಲ್ಡೊ ಸತತ ಐದನೆ ವರ್ಷವೂ ಟೂರ್ನಿಯಲ್ಲಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. 17 ತಿಂಗಳ ಹಿಂದೆಯಷ್ಟೇ ಮ್ಯಾಡ್ರಿಡ್ ಕೋಚ್ ಆಗಿ ನೇಮಕಗೊಂಡಿರುವ ಝೈನುದ್ದೀನ್ ಝೈದಾನ್ ಸತತ ಟ್ರೋಫಿ ಜಯಿಸಿದ ಮೊದಲ ಮ್ಯಾನೇಜರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಪ್ರತಿಷ್ಠಿತ ಲಾ ಲಿಗ ಪ್ರಶಸ್ತಿಯನ್ನು ಜಯಿಸಿದ್ದ ಮ್ಯಾಡ್ರಿಡ್ ತಂಡ ಇದೀಗ ಯುರೋಪಿಯನ್ ಕಪ್ ಗೆಲ್ಲುವುದರೊಂದಿಗೆ 1958ರ ಬಳಿಕ ಡಬಲ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದೆ.

ಜುವೆಂಟಸ್ ತಂಡ ಸತತ ಐದನೆ ಬಾರಿ ಚಾಂಪಿಯನ್ಸ್ ಲೀಗ್ ಫೈನಲ್ನಲ್ಲಿ ಸೋಲುಂಡಿದೆ. ಒಟ್ಟಾರೆ ಏಳನೆ ಬಾರಿ ಸೋತಿರುವ ಈ ತಂಡ ಸೋಲಿನ ದಾಖಲೆಯನ್ನು ಮುಂದುವರಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ