ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ (೧)
ಪ್ರಸ್ತಾವನೆ:
ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತನಾದ ನಂತರ ನಾನು ಧಾರವಾಡದಲ್ಲಿ ನೆಲಸಿದೆ. ಈ ಹದಿನೇಳು ವರ್ಷಗಳಲ್ಲಿ(೧೯೮೪-೨೦೦೧) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತದ ಅನುಭವದಿಂದ ನಾನು ಕಲಿತ ಮುಖ್ಯ ಪಾಠಗಳು:
೧) ನಗರವಾಸಿಯರ ದಿನದಿನದ ಜೀವನದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗಿಂತ ನಗರ ಪಾಲಿಕೆಯ ಆಡಳಿತ ಹೆಚ್ಚು ಸಮೀಪ ಮತ್ತು ಹೆಚ್ಚು ಪ್ರಭಾವಪೂರ್ಣ.
೨) ಆದರೂ ನಗರ ಪಾಲಿಕಾ ಕಾನೂನು, ಆಡಳಿತ ವ್ಯವಸ್ಥೆ, ಕಾರ್ಯವೈಖರಿಗಳ ಬಗ್ಗೆ ಇಲ್ಲಿಯ ನಿವಾಸಿಗಳಿಗೆ ಸಾಮಾನ್ಯ ತಿಳುವಳಿಕೆ, ಆಸಕ್ತಿ ತೀರಾ ಕಡಿಮೆ; ಇಲ್ಲವೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ;
೩) ಯಾವುದಾದರೂ ಒಂದು ವಿಶೇಷ ಸಮಸ್ಯೆ ಎದುರಾದಾಗ ಅದನ್ನು ವೈಯಕ್ತಿಕವಾಗಿ, ಆಗಿನ ಪೂರ್ತಿ, ಹೇಗಾದರೂ, ಯಾವುದಾದರೂ ರೀತಿಯಲ್ಲಿ ತೊಲಗಿಸಿಕೊಂಡರೆ ಸಾಕು – ಇದು ಸಾಮಾನ್ಯ ಧೋರಣೆ.
ಇದು ಜವಾಬ್ದಾರಿಯುತ ನಾಗರಿಕತನವಲ್ಲ. ನಗರ ಪಾಲಿಕೆಯು ಒಂದು ಸ್ಥಳೀಯ ಸ್ವ-ಆಡಳಿತ ಸಂಸ್ಥೆ (Local Self-Government Unit) ಗ್ರಾಮ, ಮಂಡಲ, ಜಿಲ್ಲಾ ಪಂಚಾಯತಿಗಳಂತೆ. ಪ್ರಜಾಪ್ರಭುತ್ವದಲ್ಲಿ ಮೊದಲನೆಯ ಹಂತ; ನಂತರ ರಾಜ್ಯ, ತದನಂತರ ಕೇಂದ್ರ ಸರಕಾರಗಳು. ಒಂದು ರೀತಿಯಲ್ಲಿ ಇದು ಪ್ರಜಾಪ್ರಭುತ್ವ ಪದ್ಧತಿಯ ಕಮ್ಮಟ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು. ಈ ಹಂತದಲ್ಲಿ ಪ್ರಜಾಪ್ರಭುತ್ವ ಸಫಲವಾಗಲು ಕೆಲವು ವಿಶೇಷ ಅನುಕೂಲಗಳಿವೆ:
೧) ಇದರಲ್ಲಿಯ ಕ್ಷೇತ್ರ, ಜನಸಂಖ್ಯೆ, ಕಡಿಮೆ ಆದ್ದರಿಂದ ಪರಸ್ಪರ ತಿಳುವಳಿಕೆ, ಸಂಪರ್ಕ, ಸಂಬಂಧ ಹೆಚ್ಚು ಅನ್ಯೋನ್ಯ. ೨) ಆದಕಾರಣ ಆಡಳಿತ ನಿಯಮಗಳು, ಕ್ರಮಗಳು, ಆಗು ಹೋಗುಗಳು -ಹಿತವಾಗಲೀ, ಅಹಿತವಾಗಲೀ-ಎಲ್ಲರಿಗೂ ಹತ್ತುತ್ತವೆ. ಹೀಗಾಗಿ ಯಾರಾದರೂ ಔದಾಸೀನ್ಯ ತಾಳಿದರೆ ಅವರಿಗೆ ಹಾನಿ.
೩) ಆಸಕ್ತಿ ಇದ್ದವರಿಗೆ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ದೊರಕಿಸಿಕೊಳ್ಳುವುದು ಕಷ್ಟವಲ್ಲ; ದೊರಕಿಸಿಕೊಂಡು, ಆಗುತ್ತಿರುವುದು ಸರಿಯೋ ತಪ್ಪೋ ಎನ್ನುವುದರ ಬಗ್ಗೆ ಯೋಚಿಸಿ, ಹತ್ತಿರದ ಇತರರ ಸಂಗಡ ಸಮಾಲೋಚಿಸಿ, ಒಂದು ನಿರ್ಣಯಕ್ಕೆ ಬರುವುದೂ ಕಷ್ಟವಲ್ಲ. ನಿರ್ಣಯಕ್ಕೆ ಬಂದ ಮೇಲೆ ತಪ್ಪನ್ನು ತಿದ್ದಿಸಲೂ, ಸರಿಯನ್ನು ದೃಢಪಡಿಸಲೂ, ಪ್ರಜರಾಗಿ, ಪ್ರಭುತ್ವವೇ ತಾವಾಗಿ, ಏನು ಮಾಡಬೇಕೆಂಬುವುದನ್ನು ತಿಳಿದುಕೊಂಡು, ಅದನ್ನು ನೇರವಾಗಿಯಾಗಲೀ, ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕವಾಗಲೀ, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಾಯದಿಂದಾಗಲೀ, ಕೈಗೊಂಡು ಸಾಧಿಸಲು ಸಾರ್ಧಯ. ಇದೇ “ಪ್ರತ್ಯಕ್ಷ ಪ್ರಜಾಪ್ರಭುತ್ವ”(Direct Democracy).
೪) ಆದರೆ ಈ ಕ್ಷಮತೆಯನ್ನು ಸ್ವಂತ ಅಥವಾ ಒಂದು ಸಣ್ಣ ಗುಂಪಿನ ಸ್ವಾರ್ಥಕ್ಕಾಗಿ ಬಳಸಹೋದರೆ ಈ ಸಣ್ಣ ಕ್ಷೇತ್ರದಲ್ಲಿ ಅದನ್ನು ಮರೆಮಾಚುವುದು ಕಠಿಣ. ಅದರ ಬದಲು ಸಾಮಾನ್ಯ ಹಿತಕ್ಕಾಗಿ ಬಳಸಿದರೆ ಜೊತೆಗೆ ಸ್ವ-ಹಿತವೂ ಸಾಧಿಸುತ್ತದೆ. ಹೀಗೆ ಸಾಮಾನ್ಯ ಹಿತಕ್ಕಾಗಿ ಹೆಣಗಾಡಲು ನಮ್ಮಲ್ಲಿ ಕೆಲವು ಸಕಾರಾತ್ಮಕ ಮನೋಧೋರಣೆಗಳು ಅಗತ್ಯ.
i) ಸಾಮಾನ್ಯ ಹಿತದ ಬಗ್ಗೆ ಪ್ರಜ್ಞೆ, ಶ್ರದ್ಧೆ.
ii) ಪ್ರತಿಯೊಬ್ಬ ನಿವಾಸಿಯೂ ಮೊದಲು ಪ್ರಜೆ, ಸಾಮಾನ್ಯ, ಹಿತ, ಅಹಿತಗಳಲ್ಲಿ ಪಾಲುಗಾರ-ನಂತರ ಇತರ, ಪ್ರಜಾಪ್ರತಿನಿಧಿ ಇರಬಹುದು. ಆಡಳಿತದ ಅಧಿಕಾರಿ-ಸಿಬ್ಬಂದಿ, ಮತ್ತೇನಾದರೂ ಕೊನೆಗೂ ಪ್ರಜೆಯೇ. ನಡುವಿನ ಸಂಕುಚಿತ ದೃಷ್ಟಿಕೋನದಿಂದ ಸಾಮಾನ್ಯ. ಅಹಿತಕ್ಕೆ ಎಡೆ ಮಾಡಿಕೊಟ್ಟರೆ ಅದು ತನಗೂ ತಗುಲುತ್ತದೆ.
iii) ನಮ್ಮ ಕರ್ತವ್ಯ ಹಾಗೂ ಹಕ್ಕು-ಇವೆರಡರ ಬಗ್ಗೆಯೂ ಸಮಾನ ನಿಷ್ಠೆ:
iv) ಸಾಮಾನ್ಯ ಪ್ರಜರೂ, ಅವರ ಚುನಾಯಿತ ಪ್ರತಿನಿಧಿಗಳೂ, ಆಡಳಿತ ವರ್ಗದ ಅಧಿಕಾರಿ ಸಿಬ್ಬಂದಿಯವರೂ ಮೂರು ಬೇರೆ ಬೇರೆ ಅಂಶಗಳು ಕೂಡಿ ಯಾವುದೇ ಸದುದ್ದೇಶ, ಗುರಿ ಹೊಂದಿರದೇ, ಒಂದು ಇನ್ನೊಂದರ ಕೂಡ ಪೈಪೋಟಿಯಲ್ಲಿವೆ ಎಂಬ ವಿಧ್ವಂಸಕ ಕಲ್ಪನೆಯನ್ನು ಕಿತ್ತುಹಾಕಿ, ಮೂರೂ ಪರಸ್ಪರ ಪೂರಕ ಅಂಶಗಳು. ಎಲ್ಲರ ಹಿತವೇ ಅವರೆಲ್ಲರ ಉದ್ದೇಶ, ಗುರಿ ಎಂದು ದೃಢವಾಗಿ ನಂಬಿ, ಸಂಪೂರ್ಣ ಸಹಕಾರದಿಂದ ವರ್ತಿಸಬೇಕು. ಅಂದರೆ ಮಾತ್ರ ಪ್ರಜಾಪ್ರಭುತ್ವವು ನಿರ್ಲಕ್ಷ್ಯ, ಬೇಜವಾಬ್ದಾರಿ, ಸ್ವಾರ್ಥಸಾಧನೆ, ಅವ್ಯವಹಾರ, ಭ್ರಷ್ಟಾಚಾರಗಳಂಥ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಬಹುದು.
ಸಂವಿಧಾನ:
ನಮ್ಮ ದೇಶದ ಸಾರ್ವಜನಿಕ ಆಡಳಿತದ ಮೂಲ ಆಧಾರ ೧೯೫೦ರಲ್ಲಿ ಜಾರಿಗೆ ಬಂದ “ಭಾರತದ ಸಂವಿಧಾನ”. ಸಂವಿಧಾನದ ೪೦ನೆಯ ಕಲಂನಲ್ಲಿ ಒಂದು ಸೈದ್ಧಾಂತಿಕ ಆದೇಶವಿದೆ – “ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಿ, ಅವುಗಳಿಗೆ, ತಾವು ಸ್ವಾಯತ್ತ ಘಟಕಗಳಾಗಿ ಕಾರ್ಯನಿರ್ವಹಿಸಲು, ಅಗತ್ಯ ಅಧಿಕಾರಗಳನ್ನು ಕೊಡಲು ಸೂಕ್ತ ಕ್ರಮಗಳನ್ನು ಪ್ರಭುತ್ವ ಕೈಗೊಳ್ಳಬೇಕು”. ಬ್ರಿಟಿಷರ ಕಾಲದಲ್ಲೂ ಸ್ಥಳೀಯ ಸ್ವ-ಆಡಳಿತ ಘಟಕಗಳು ಇದ್ದವು – ನಗರ ಪಾಲಿಕೆಗಳು, ತಾಲೂಕು, ಜಿಲ್ಲಾ ಬೋರ್ಡುಗಳು, ಸ್ವಾತಂತ್ಯ್ರಾನಂತರ ‘ಬಲವಂತರಾಯ ಮೆಹತಾ’, ‘ಅಶೋಕ ಮೆಹತಾ’ ಮುಂತಾದ ಸಮಿತಿಗಳು ಈ ಬಗ್ಗೆ ವರದಿಗಳನ್ನು ಕೊಟ್ಟವು. ಕೆಲ ಮಟ್ಟಿಗೆ ಅನುಷ್ಠಾನಕ್ಕೂ ತರಲಾದವು. ಆದರೆ ಸಂವಿಧಾನದ ೭೩, ೭೪ನೆಯ ತಿದ್ದುಪಡಿಗಳ ನಂತರವೇ ೧೯೯೨ರಲ್ಲಿ ಸ್ಥಳೀಯ ಘಟಕಗಳಿಗೆ ಒಂದು ನಿರ್ದಿಷ್ಟ ಇರವು, ಸ್ಥಾನ ದೊರಕಿದವು. ಅಲ್ಲದೆ ಅವು ಅಳಿಸಿ ಹೋಗದಂತೆ ನೋಡಿಕೊಳ್ಳಲು “ರಾಜ್ಯ ಚುನಾವಣಾ ಆಯೋಗ”ವನ್ನೂ ಮತ್ತು ಅವುಗಳಿಗೆ ತಮ್ಮ ಕಾರ್ಯನಿರ್ವಹಣೆಗೆ ಅಗತ್ಯ ಆರ್ಥಿಕ ಶಕ್ತಿಯನ್ನು ಒದಗಿಸಲು ಸೂಕ್ತ ಶಿಫಾರಸು ಮಾಡಲು ಒಂದು “ರಾಜ್ಯ ಹಣಕಾಸು ಆಯೋಗ”ವನ್ನೂ ಈ ತಿದ್ದುಪಡಿಗಳು ಸ್ಥಾಪಿಸಿದವು. ಆದರೆ ಇವುಗಳ ಕಾರ್ಯವ್ಯಾಪ್ತಿ, ಅಧಿಕಾರ ಮುಂತಾದ ಎಲ್ಲಾ ಮೂಲಭೂತ ವಿಷಯಗಳು ರಾಜ್ಯ ಶಾಸಕಾಂಗದ ನಿರ್ಣಯಾಧೀನವೆಂದು ಇವೇ ತಿದ್ದುಪಡಿಗಳು ಹೇಳಿವೆ. ಇವುಗಳ ಕಾರ್ಯಕ್ಷೇತ್ರಗಳ ಪಟ್ಟಿಯನ್ನು ಸಂವಿಧಾನದ ಅನುಬಂಧಗಳಲ್ಲಿ(೧೧ನೆಯ, ೧೨ನೆಯ) ಸೂಚಿಸಿದ್ದರೂ, ಆ ಕ್ಷೇತ್ರಗಳಲ್ಲಿಯೂ ಯಾವ ಕರ್ತವ್ಯ, ಅಧಿಕಾರಗಳನ್ನು ಈ ಘಟಕಗಳಿಗೆ ವಹಿಸಬೇಕೆನ್ನುವುದನ್ನು ಶಾಸಕಾಂಗವೇ ನಿರ್ಣಯಿಸುತ್ತದೆ. ಹೀಗಾಗಿ ಮಹಾನಗರ ಪಾಲಿಕೆಗಳು ಈಗಲೂ ೧೯೭೬ರಲ್ಲಿಯೇ ಜಾರಿಗೆ ಬಂದ “ಕರ್ನಾಟಕ ಮಹಾನಗರ ಪಾಲಿಕಾ ಕಾನೂನಿ”ನ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ೧೯೯೪ರಲ್ಲಿ ಸಂವಿಧಾನದ ತಿದ್ದುಪಡಿಗಳನ್ನನುಸರಿಸಿ, ಈ ಕಾನೂನಿನಲ್ಲಿಯೂ ಕೆಲವು ಅವಶ್ಯ ತಿದ್ದುಪಡಿಗಳನ್ನು ಮಾಡಿದೆ-ಮುಖ್ಯವಾಗಿ “ರಾಜ್ಯ ಚುನಾವಣಾ ಆಯೋಗ” ಮತ್ತು “ರಾಜ್ಯ ಹಣಕಾಸು ಆಯೋಗ”ಗಳ ಬಗ್ಗೆ. ಆದರೂ ಈಗಲೂ ಈ ಕಾನೂನಿನ ಪ್ರಕಾರ ಪಾಲಿಕೆಯ ಎಲ್ಲ ಪ್ರಮುಖ ಗೊತ್ತುವಳಿಗಳಿಗೂ ರಾಜ್ಯ ಸರಕಾರದ ಒಪ್ಪಿಗೆ ಬೇಕು. ಸರಕಾರವು ಪಾಲಿಕೆಯ ಕಾರ್ಯಗಳಲ್ಲಿ ಕೈ ಹಾಕಬಹುದು, ಆದೇಶಗಳನ್ನು ಕೊಡಬಹುದು, ಅದರ ನಿರ್ಣಯಗಳನ್ನು ತಳ್ಳಿ ಹಾಕಬಹುದು. ಅಷ್ಟೇ ಅಲ್ಲ ಪಾಲಿಲಕೆಯ ಚುನಾಯಿತ ಸದಸ್ಯರ ತೆರಿಗೆ ಅಪೀಲು ಸಮಿತಿಯ ನಿರ್ಣಯಗಳ ವಿರುದ್ಧ ಸರಕಾರದ ಅಧಿಕಾರಿಯೂ ಸಹಿತ (ಡಿವಿಜನಲ್‌ಕಮೀಷನರ್) ತೀರ್ಪು ಕೊಡಬಹುದು. ಇದೆಲ್ಲದರ ಸಾರಾಂಶವೆಂದರೆ ಈ ಘಟಕಗಳಿಗೆ ಸಂವಿಧಾನದಲ್ಲಿ “ಸ್ಥಾನ” ದೊರೆತಿದೆ, “ಮಾನ”(ಸ್ವಾಯತ್ತತೆ) ಇನ್ನೂ ದೊರೆತಿಲ್ಲ. ಇವುಗಳಿಗೆ ನಿಜವಾದ ಸ್ವಾಯತ್ತತೆ ದೊರೆತರೆ “ಅಧಿಕಾರ”ದ ಬೆನ್ನಹಿಂಧೆಯೇ “ಜವಾಬ್ದಾರಿತನ”ದ ಸಂಪೂರ್ಣ ಪ್ರಜ್ಞೆ ಉಂಟಾಗುತ್ತದೆ.
ಕರ್ನಾಟಕ ಮಹಾನಗರ ಪಾಲಿಕಾ ಕಾನೂನು, ೧೯೭೬:
ಯಾವುದೇ ಸರಕಾರ ಅಥವಾ ಆಡಳಿತ ಸಂಸ್ಥೆಯ ಕಾರ್ಯಕ್ಷೇತ್ರದಲ್ಲಿ ಅರ್ಥ ವ್ಯವಸ್ಥೆ ಪ್ರಮುಖ ಅಂಶ – ಅಂದರೆ ಆಯ-ವ್ಯಯ, ಆಯ ಅಥವಾ ವರಮಾನ ಹೆಚ್ಚದ್ದರೆ ಸಮಾಧಾನ, ವ್ಯಲಯ ಅಥವಾ ಖರ್ಚು ಹೆಚ್ಚಾದರೆ ಚಿಂತೆ. ಇದು ಮೇಲ್ನೋಟಕ್ಕೆ ಸರಿಯಿರಬಹುದು. ಹೀಗಿದ್ದೂ ಸಂಸ್ಥೆಯ ಉದ್ದೇಶಗಳು ನೆರವೇರಿರಲಿಕ್ಕಿಲ್ಲ. ಆಯ-ವ್ಯಯಗಳಲ್ಲಿ ತಾರತಮ್ಯ, ಸೋರುವಿಕೆ ನಡೆದಿರಬಹುದು. ಉದಾಹರಣೆಗೆ -ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ವರ್ಷದ ಬಜೆಟ್‌ನಲ್ಲಿ ವರ್ಷಾಂತ್ಯಕ್ಕೆ (೩೧-೩-೨೦೦೨ರಂದು) ಸುಮಾರು ೧೦ ಲಕ್ಷ ರೂಪಾಯಿಯ ಶಿಲ್ಕು ಉಳಿಯುವ ಅಂದಾಜು ಮಾಡಲಾಗಿದೆ. ಆದರೆ ಪಾಲಿಕೆಯ ಸೇವೆ ಸೌಕರ್ಯಗಳ ಬಗ್ಗೆ ನಿವಾಸಿಗಳಿಗೆ ಸಮಾಧಾನವಿಲ್ಲ. ಸ್ವಚ್ಛತೆ, ನೀರು ಸರಬರಾಜು, ರಸ್ತೆಗಳ ದುರಸ್ತಿ, ಕರಾಕರಣೆಯೂ ಹೆಚ್ಚು ಎನ್ನುತ್ತಾರೆ. ಪಾಲಿಕೆಯ ಆಡಳಿತ ವರ್ಗ ಇನ್ನೂ ಹೆಚ್ಚು ಉತ್ಪನ್ನವಿದ್ದರೆ, ಕರದಾತರು ಕರವಸೂಲಿಯಲ್ಲಿ ಸಹಕರಿಸಿದರೆ ಹೆಚ್ಚು ಸೌಕರ್ಯ ಒದಗಿಸಬಹುದು ಎನ್ನುತ್ತಾರೆ. ಯಾರು ಸರಿ, ಎಷ್ಟು ಪಾಲು ಸರಿ? ನಿಜ ಪರಿಸ್ಥಿತಿಯನ್ನು ಇನ್ನೂ ವಿವರವಾಗಿ, ಸ್ಪಷ್ಟವಾಗಿ ತಿಳಿದುಕೊಳ್ಳಬಹುದು ಅಗತ್ಯ.
ಕಾನೂನಿನಲ್ಲಿ ಇದರ ಬಗ್ಗೆ ಇರುವ ನಿಯಮಗಳ ಸಾರಾಂಶವನ್ನು ನೋಡೋಣ:
ಕಲಂ ೫೮ – ಮಹಾನಗರ ಪಾಲಿಕೆಯ ಮುಖ್ಯ ಕಡ್ಡಾಯ ಕರ್ತವ್ಯಗಳು:
i) ಸಾರ್ವಜನಿಕ ರಸ್ತೆಗಳು, ಮಾರುಕಟ್ಟೆಗಳು, ಕಸಾಯಿಖಾನೆ, ಪ್ರವಾಸ, ವಿಶ್ರಾಂತಿ ಸ್ಥಳ ಮುಂತಾದವುಗಳ ನಿರ್ಮಾಣ, ಸಂರಕ್ಷಣೆ, ದುರಸ್ತಿ, ಸ್ವಚ್ಛತೆ ಮತ್ತು ಅಲ್ಲಿ ದೀಪಗಳ ವ್ಯವಸ್ಥೆ;
ii) ಚರಂಡಿ, ಸಾರ್ವಜನಿಕ ಮೂತ್ರಿ, ಕಕ್ಕಸಗಳ ನಿರ್ಮಾಣ, ಸಂರಕ್ಷಣೆ, ಎಲ್ಲ ರೊಚ್ಚು, ಸಾರ, ಹೊಲಸು, ಕಸಗಳನ್ನು ಕಲೆ ಹಾಕಿ, ತೆಗೆದು, ಸಂಸ್ಕರಿಸಿ, ಗೊಬ್ಬರ ತಯಾರಿಸುವುದು.
iii) ಅಸಹ್ಯಕರ, ಅಪಾಯಕರ ಕಸುಬು, ಉದ್ದಿಮೆಗಳ ನಿಯಂತ್ರಣ;
iv) ಸ್ಮಶಾನಗಳ ನಿರ್ಮಾಣ, ನಿರ್ವಹಣೆ.
v) ನೀರಿನ ಸರಬರಾಜು ಮತ್ತು ಅದಕ್ಕಾಗಿ ಯಂತ್ರಾಲಯ ಮುಂತಾದವುಗಳ ನಿರ್ಮಾಣ, ನಿರ್ವಹಣೆ ಮುಂತಾದವುಗಳು.
ಕಲಂ ೫೯ – ಇಲ್ಲಿ ಮಹಾನಗರ ಪಾಲಿಕೆಯು ತನ್ನ ಯುಕ್ತಾಯುಕ್ತ ವಿವೇಚನೆಯಂತೆ ನಾಗರಿಕರ ಅನುಕೂಲ, ಹಿತಕ್ಕಾಗಿ ಇನ್ನೂ ಅನೇಕ ಸೌಕರ್ಯ ಸೌಲಭ್ಯಗಳನ್ನೂ ಒದಗಿಸಬಹುದು. ಉದಾಹರಣೆ – ಆಸ್ಪತ್ರೆಗಳು, ಈಜುಕೊಳಗಳು, ಕಲಾ ಮತ್ತಿತರ ವಸ್ತು ಸಂಗ್ರಹ, ಪ್ರದರ್ಶನಾಲಯಗಳು, ಮೃಗಾಲಯ, ಅನಾಥಾಲಯ, ಕೊಳಚೆ ಪ್ರದೇಶಗಳ ಸುಧಾರಣೆ ಮುಂತಾದವು.
ಈ ಕಡ್ಡಾಯದ ಮತ್ತು ಐಚ್ಛಿಕ ಕರ್ತವ್ಯಗಳ ಪಾಲನೆಗಾಗಿ ಪಾಲಿಕೆಯು ಸಿಬ್ಬಂದಿ, ಸಾಮಾನು, ಕೆಲಸಗಳ ರೂಪದಲ್ಲಿ ಹಣ ವಿನಿಯೋಗಿಸಬೇಕಾಗುತ್ತದೆ. ಅವಶ್ಯ ಹಣಕ್ಕಾಗಿ ಕಾನೂನು ಕೆಲವು ಆದಾಯ ಮೂಲಗಳನ್ನು ದೊರಕಿಸಿದೆ:
i) ಪಾಲಿಕೆಯೇ ವಿಧಿಸಿ ವಸೂಲಿ ಮಾಡುವ ತೆರಿಗೆಗಳು.
ii) ಸರಕಾರದ ಕೆಲವು ತೆರಿಗೆಗಳಲ್ಲಿಯ ಪಾಲು ಮತ್ತು ಅನುದಾನಗಳು.
iii) ಪಾಲಿಕೆಯ ಪರವಾನಿಗೆ ಅಥವಾ ವಿಶೇಷ ಸೇವೆಗಳಿಗಾಗಿ ಶುಲ್ಕಗಳು.
iv) ಇತರ ಮಿಶ್ರ ವರಮಾನಗಳು.
ಪಾಲಿಕೆಯ ತೆರಿಗೆಗಳು:
ಕಾನೂನಿನ ೧೦ನೇ ಪ್ರಕರಣದಲ್ಲಿ ಕಲಂ ೧೦೩ ರಿಂದ ೧೪೮ರ ವರೆಗೆ ಮತ್ತು ೩ನೇ ಅನುಬಂಧದಲ್ಲಿ ಸಾಮಾನ್ಯ ನಿಯಮಗಳೂ ೩ನೇ ಪ್ರಕರಣದ ಕಲಂ ೧೯೧, ೨೦೬, ೨೧೨ ಗಳಲ್ಲಿ ನೀರಿನ ಕರದ ಬಗ್ಗೆ ಕೆಲವು ವಿಶೇಷ ನಿಯಮಗಳೂ ಇವೆ.
ಕಲಂ ೧೦೩ ರಲ್ಲಿ ಪಾಲಿಕಲೆಯು ವಿಧಿಸಬಹುದಾದ ತೆರಿಗೆಗಳ ಪಟ್ಟಿಯನ್ನು ಕೊಟ್ಟಿದೆ. ಇವುಗಳಲ್ಲಿ ಮುಖ್ಯವಾದವು (೧) ಆಸ್ತಿ ತೆರಿಗೆ (೨) ನೀರಿನ ಕರ. ಉಳಿದ ತೆರಿಗೆಗಳು – ಜಾಹೀರಾತು ತೆರಿಗೆ ಮತ್ತು ಮೋಟಾರ್ ವಾಹನಗಳಲ್ಲದ ಇತರ ವಾಹನಗಳ ಕರ-ತರುವ ಆದಾಯ ಅತ್ಯಲ್ಪ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೨೦೦೧-೨೦೦೨ರ ಬಜೆಟ್ಟಿನಲ್ಲಿ ಈ ವರಮಾನಗಳ ಮಾಹಿತಿ ಹೀಗಿದೆ:
ತೆರಿಗೆ೧೯೯೯-೨೦೦೦೪ ವಾಸ್ತವಿಕ೨೦೦೦-೨೦೦೧ ಮೊದಲ ಅಂದಾಜು೨೦೦೦-೨೦೦೧ ಪರಿಷ್ಕೃತ ಅಂದಾಜು೨೦೦೧-೨೦೦೨ ಮೊದಲ ಅಂದಾಜು೧)ಅಸ್ತಿ ತೆರಿಗೆ೫೫೦ ಲಕ್ಷ೧,೫೦೦ ಲಕ್ಷ೧,೦೦೦ ಲಕ್ಷ೧,೬೦೦ ಲಕ್ಷ೨)ನೀರಿನ ಕರ೩೫೧ ಲಕ್ಷ೬೦೦ ಲಕ್ಷ೪೦೦ ಲಕ್ಷ೭೦೦ ಲಕ್ಷ೩)ಜಾಹೀರಾತು ತೆರಿಗೆ೩ ಲಕ್ಷ೨೦ ಲಕ್ಷ೫ ಲಕ್ಷ೧೦ ಲಕ್ಷ
ಪಾಲಿಕೆಯು ತೆರಿಗೆಯನ್ನು ವಿಧಿಸಲಿಕ್ಕೆ ಅಥವಾ ಹೆಚ್ಚಿಸಲಿಕ್ಕೆ ಅನುಸರಿಸಬೇಕಾದ ವಿಧಾನವನ್ನು ಕಾನೂನಿನಲ್ಲಿ ಹೀಗೆ ಕೊಟ್ಟಿದೆ:
i) ಚುನಾಯಿತ ಸರ್ವ ಸದಸ್ಯರ ಸಭೆಯ ಮುಂದೆ ಆ ಪ್ರಸ್ತಾಪವನ್ನು ಮಂಡಿಸಬೇಕು. ಸಭೆಯು ಚರ್ಚಾನಂತರ ಮಂಜೂರು ಮಾಡಬೇಕು.
ii) ಮಂಜೂರಾದ ಪ್ರಸ್ತಾಪವನ್ನು ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಬೇಕು. ನಿವಾಸಿ ಯಾರಾದರೂ ಒಂದು ತಿಂಗಳಿನೊಳಗಾಗಿ ಆಕ್ಷೇಪಣೆಗಳೇನಾದರೂ ಇದ್ದರೆ ಪಾಲಿಕೆಗೆ ಬರೆಹದಲ್ಲಿ ತಿಳಿಸಬೇಕು. ಸರ್ವ ಸದಸ್ಯರ ಸಭೆ ಮತ್ತೊಮ್ಮೆ ಕೂಡಿ ಬಂದ ಆಕ್ಷೇಪಣೆಗಳೆಲ್ಲವನ್ನೂ ಪರಿಶೀಲಿಸಿ, ಚರ್ಚಿಸಿ ಅಂತಿಮ ನಿರ್ಣಯಕ್ಕೆ ಬರಬೇಕು. ನಂತರ ಪ್ರಸ್ತಾಪವನ್ನೂ ಬಂದ ಎಲ್ಲ ಆಕ್ಷೇಪಣೆಗಳನ್ನೂ ಪ್ರಸ್ತಾಪದಲ್ಲಿ ಮಾಡಲಾದ ಬದಲಾವಣೆಗಳನ್ನೂ ಪಾಲಿಕೆಯು ಸರಕಾರದ ಒಪ್ಪಿಗೆಗಾಗಿ ಕಳುಹಿಸಬೇಕು.
iii) ಇವನ್ನೆಲ್ಲ ಪರಿಶೀಲಿಸಿ ಸರಕಾರವು ಪ್ರಸ್ತಾಪವನ್ನು
(೧) ತಿರಸ್ಕರಿಸಬಹುದು ಅಥವಾ ಮರುಪರಿಶೀಲನೆಗಾಗಿ ವಾಪಸು ಕಳುಹಿಸಬಹುದು. ಅಥವಾ
(ಆ) ಅನುಮೋದಿಸಬಹುದು.
i) ಏನೂ ಬದಲಾವಣೆಗಳಿಲ್ಲದೆ, ಇಲ್ಲವೇ
ii) ಬದಲಾವಣೆಗಳೊಂದಿಗೆ (ಆದರೆ ತೆರಿಗೆಯನ್ನು ಹೆಚ್ಚಿಸದೇ) ಅಥವಾ
iii) ಷರತ್ತುಗಳೊಂದಿಗೆ,
iv) ಸರಕಾರದ ಒಪ್ಪಿಗೆ ಪಡೆದ ಪ್ರಸ್ತಾಪವನ್ನೂ, ಅದು ಜಾರಿಗೆ ಬರುವ ದಿನಾಂಕವನ್ನೂ ಸಾರ್ವಜನಿಕರಿಗಾಗಿ ಪ್ರಕಟಿಸಬೇಕು. ಆದರೆ ಜಾರಿಗೆ ಬರುವ ದಿನವು ಪ್ರಕಟಣೆಯ ದಿನದಿಂದ ಕನಿಷ್ಠ ಒಂದು ತಿಂಗಳಾದರೂ ನಂತರವಿರಬೇಕು.
ಇಲ್ಲಿ ಪಾಲಿಕೆಯು ತೆರಿಗೆ ವಿಧಿಸುವ ವ್ಯವಸ್ಥೆಗೂ, ರಾಜ್ಯ ಮತ್ತು ಕೇಂದ್ರ ಸರಕಾರಗಳು ತೆರಿಗೆ ವಿಧಿಸುವ ವ್ಯವಸ್ಥೆಗೂ ಇರುವ ಒಂದು ಮಹತ್ವದ ವ್ಯತ್ಯಾಸವನ್ನು ಗಮನಿಸಬೇಕು. ಪಾಲಿಕೆಯು ತನ್ನ ಪ್ರಸ್ತಾಪವನ್ನು ನಿವಾಸಿಗಳ ಮುಂದಿಟ್ಟು, ಅವರ ಆಕ್ಷೇಪಣೆಗಳನ್ನು ಸ್ವೀಕರಿಸಿ, ಪರಿಶೀಲಿಸಿ, ಚರ್ಚಿಸಿ, ನಂತರ ಮಾತ್ರ ಕೊನೆಯ ನಿರ್ಣಯಕ್ಕೆ ತಲುಪಬಹುದು. ಅಲ್ಲದೇ ತನ್ನ ಕೊನೆಯ ನಿರ್ಣಯವನ್ನು ಸರಕಾರದ ಒಪ್ಪಿಗೆಗೆ ಕಳುಹಿಸುವಾಗ ನಿವಾಸಿಗಳ ಆಕ್ಷೇಪಣೆಗಳನ್ನೂ ಸರಕಾರಕ್ಕೆ ಕಳುಹಿಸಬೇಕು. ಅಂದರೆ ಸರಕಾರವೂ ಆ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡೇ ನಿರ್ಣಯಕ್ಕೆ ಬರಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಈ ತರಹದ ಕಟ್ಟಳೆಯಿಲ್ಲ. ಬದಲಾಗಿ ತೆರಿಗೆಗಳು ಜಾರಿಗೆ ಬರುವವರೆಗೆ ರಹಸ್ಯವಾಗಿಯೇ ಇಟ್ಟಿರುತ್ತಾರೆ. ಪಾಲಿಕೆಯ ಆಡಳಿತ ವ್ಯಾಪ್ತಿ ಸಣ್ಣದು; ಮತ್ತು ಅದು ವಿಧಿಸುವ ತೆರಿಗೆಗಳಿಗೂ, ನಿವಾಸಿಗಳು ಪಡೆಯಬೇಕಾದ ಸೇವೆ, ಸೌಕರ್ಯಗಳಿಗೂ ನೇರ ಸಂಬಂಧವಿದೆ. ಇದರಿಂದ ತಾವು ಬಯಸುವ ಸೌಕರ್ಯಗಳು ತಾವು ಕೊಡುವ ತೆರಿಗೆಗಳ ಮೇಲೆ ಅವಲಂಬಿಸಿವೆ ಎನ್ನುವುದು ನಿವಾಸಿಗಳಿಗೆ ಮನದಟ್ಟಾಗುತ್ತದೆ. ಆಗ ಅವರಿಗೆ ತಮ್ಮ ಎರಡು ರೀತಿಯ ಜವಾಬ್ದಾರಿಗಳ ತಿಳುವಳಿಕೆ ಮೂಡುತ್ತದೆ: i) ಸೌಕರ್ಯ ಬಯಸಿದಂತೆ ತೆರಿಗೆ ಕೊಡಲು ತಯಾರಿರಬೇಕು ಮತ್ತು ii) ಪಾಲಿಕೆಯು ತನ್ನ ಆದಾಯವನ್ನು ಪೋಲು ಮಾಡದೆ, ಸರಿಯಾಗಿ ಪ್ರಾಮಾಣಿಕತನದಿಂದ ಪರಿಣಾಮಕಾರಿಯಾಗಿ ಖರ್ಚು ಮಾಡದಿದ್ದಲ್ಲಿ ಹಾನಿ ತಮ್ಮದೇ. ಇದರಿಂದ ಪಾಲಿಕೆಯು ತೆರಿಗೆ ವಿಧಿಸುವಲ್ಲಿ, ವಸೂಲಿ ಮಾಡುವಲ್ಲಿ ಯಾವ ತರಹದ ತಾರತಮ್ಯ, ಅವ್ಯವಹಾರ, ಭ್ರಷ್ಟಾಚಾರಗಳಿಗೆ ಆಸ್ಪದವಿರಬಾರದು. ನಿವಾಸಿಗಳೇ ಯಾರೂ ಅವಕ್ಕೆ ಆಸ್ಪದ ಕೊಡಬಾರದು; ನ್ಯಾಯವಾದ ತೆರಿಗೆಯನ್ನು ಕಾಲಕ್ಕೆ ಸರಿಯಾಗಿ ತಾವೂ ಕೊಡಬೇಕು, ಇತರರೂ ಕೊಡಬೇಕು ಎಂದು ಸ್ಪಷ್ಟವಾಗುತ್ತದೆ.
ಹಾಗೆಯೇ ಖರ್ಚಿನಲ್ಲಿ ಪೋಲಾದರೆ, ಖರ್ಚು ತೋರಿಸಿ, ಕೆಲಸವೇ ಆಗದಿದ್ದರೆ ಅಥವಾ ಕಳಪೆಯಾದರೆ, ತಾವು ಕೊಟ್ಟ ತೆರಿಗೆ ವ್ಯರ್ಥವಾಗುತ್ತದೆಂದು ಅರಿತು, ಅದನ್ನು ಆಗಗೊಡಬಾರದೆಂಬುದೂ ಸ್ಪಷ್ಟವಾಗುತ್ತದೆ. ಇದೇ “ನೇರ ಪ್ರಜಾಪ್ರಭುತ್ವ” (Direct Democracy).
ಆಸ್ತಿ ತೆರಿಗೆ ಕಾನೂನಿನ ಪ್ರಕಾರ (ಕಲಂ ೧೦೮[೨] ಆಸ್ತಿ ತೆರಿಗೆಯ ದರವು “ಆಸ್ತಿ ಬೆಲೆ” (Rateable value) ಶೇಕಡ ೨೦ ರಿಂದ ೨೫ರ ವರೆಗೆ ಇರತಕ್ಕದ್ದು. ಆದಕಾರಣ “ಆಸ್ತಿ ಬೆಲೆ”ಯನ್ನು ಮೊದಲು ಕಂಡುಹಿಡಿಯಬೇಕು. ಇದಕ್ಕೆ ಕಾನೂನು ಎರಡು ಮಾರ್ಗಗಳನ್ನು ಕೊಟ್ಟಿದೆ. (ಕಲಂ ೧೦೯[೨]
i) ಆಸ್ತಿಯು ತರಬಹುದಾದ ವಾರ್ಷಿಕ ಬಾಡಿಗೆಯ ಅಂದಾಜು ಮಾಡಿ ಅದರಲ್ಲಿ ೨ ತಿಂಗಳ ಬಾಡಿಗೆಯನ್ನು ಆಸ್ತಿಯ ದುರಸ್ತಿ ಮುಂತಾದವುಗಳಿಗೆ ವಜಾ ಮಾಡಿ ೧೦ ತಿಂಗಳ ಬಾಡಿಗೆಯನ್ನು “ಆಸ್ತಿ ಬೆಲೆ” ಎಂದು ತೆಗೆದುಕೊಳ್ಳುವುದು; ಇಲ್ಲವೇ
ii) ತೆರಿಗೆಯ ಸಮಯದಲ್ಲಿ ಆಸ್ತಿಯ ನಿವೇಶನದ ಸಾಧಾರಣ ಮಾರ್ಕೆಟ್‌ಬೆಲೆಯ ಅಂದಾಜು ಮಾಡಿ, ಅದಕ್ಕೆ ಆ ಕಟ್ಟಡದ ನಿರ್ಮಾಣಕ್ಕೆ ಆಗಬಹುದಾದ ಅಂದಾಜು ಖರ್ಚನ್ನು ಕೂಡಿಸಿ (ಸವಕಳಿಗಾಗಿ ಕನಿಷ್ಠ ಶೇಕಡಾ ೧೦ರಷ್ಟು ಕಳೆದು), ಬಂದ ಮೊತ್ತದ ಶೇಕಡ ೬ರಷ್ಟನ್ನು “ಆಸ್ತಿ ಬೆಲೆ”ಯಾಗಿ ತೆಗೆದುಕೊಳ್ಳುವುದು.
ಎರಡೂ ಮಾರ್ಗಗಳ ಆಧಾರ “ಅಂದಾಜು”ಗಳು. ಇದು ಸಾಕಷ್ಟು ಸಮಸ್ಯೆಗಳನ್ನೊಡ್ಡುತ್ತದೆ. ವಾದ ವಿವಾದಗಳೂ, ಇಲ್ಲವೇ ಅವ್ಯವಹಾರ, ಅನ್ಯಾಯ, ಭ್ರಷ್ಟಾಚಾರಗಳ ಭಯ. ಆದಕಾರಣ, ವಿವಾದಾಸ್ಪದವಿಲ್ಲದ, ನಿರ್ದಿಷ್ಟ ಅಳತೆ ಮಾಡಬಹುದಾದ ವಾಸ್ತವಿಕ “ಅಂಶ”ಗಳ ಮೇಲೆ “ಆಸ್ತಿ ಬೆಲೆ” ಅಥವಾ ನೇರವಾಗಿ “ಆಸ್ತಿ ತೆರಿಗೆ”ಯನ್ನೇ ನಿರ್ಣಯಿಸುವ ಮೂರನೆಯ ಮಾರ್ಗ ಅಗತ್ಯ. ಇಂತಹ ಒಂದು ಹೊಸ ಪದ್ಧತಿಯನ್ನು ಸುವರ್ಣ ಮಹೋತ್ಸವ ವರ್ಷ ೨೦೦೦ದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು “ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ” ಹೆಸರಿನಲ್ಲಿ ಜಾರಿಗೆ ತಂದಿತು. ಈ ಯೋಜನೆಯನ್ನು ನಿವಾಸಿಗಳ ಗಮನಕ್ಕೆ ತರಲು ಅಲ್ಲಿಯ ಮಹಾಪೌರರೂ, ಆಯುಕ್ತರೂ ಕೂಡಿ ಬರೆದ ಪತ್ರದಲ್ಲಿ ಹೀಗಿದೆ: “ಅಸ್ತಿ ತೆರಿಗೆಯನ್ನು ಪ್ರಕರಣ ೧೦೯(೨)ರ ಅಡಿಯಲ್ಲಿ ನಿರ್ಧರಿಸಲಾಗುತ್ತಿದೆಯಾದರೂ, ನಗರ ಪಾಲಿಗೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ವಾರ್ಷಿಕ ಬಾಡಿಗೆಯನ್ನು ನಿಗದಿಪಡಿಸುವ ಬಗ್ಗೆ ಯಾವುದೇ ವಿಧವಾದ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಿರುವುದಿಲ್ಲ. ಆದಕಾರಣ, ಅವರವರ ವಿವೇಚನೆಗೆ ತಕ್ಕಂತೆ ಹಾಗೂ ಒಂದೇ ವಿಧವಾದ ಕಟ್ಟಡಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸುವುದೇ ಮೊದಲಾದ ತಾರತಮ್ಯಗಳಿಂದ ನಾಗರೀಕರಲ್ಲಿ ಬಹಳಷ್ಟು ಅಸಮಾಧಾನ ಉಂಟಾಗುವುದೇ ಅಲ್ಲದೆ ನಗರ ಪಾಲಿಕೆ ವರಮಾನದಲ್ಲಿ ಬಹಳಷ್ಟು ಸೋರಿಕೆ ಉಂಟಾಗುತ್ತಿದೆ. ಅಂದರೆ ಪ್ರಸಕ್ತ ಪದ್ಧತಿಯು ನಾಗರೀಕರಿಗಾಗಲೀ ಅಥವಾ ನಗರ ಪಾಲಿಕೆಗಾಗಲೀ ಉತ್ತೇಜನಕಾರಿಯಾಗಿಲ್ಲ ಎಂಬುದು ಬಹಳ ಸ್ಪಷ್ಟವಾಗಿ ಕಂಡುಬರುತ್ತಿದೆ. ಆದಷ್ಟು ನಾಗರೀಕರೊಂದಿಗೆ ಅನ್ಯೋನ್ಯತೆ ಹೊಂದಲು ಸಮಂಜಸ ಮತ್ತು ಏಕತೆರವಾದ ದರಗಳಿಂದ ಹಾಗೂ ಪಾರದರ್ಶಕತೆಯುಳ್ಳ ತೆರಿಗೆ ನಿರ್ಧರಿಸುವ ಪದ್ಧತಿಯನ್ನು ಜಾರಿಗೆ ತರುವುದು ಅತ್ಯಾವಶ್ಯಕವೆಂದು ಪರಿಗಣಿಸಲಾಗಿದೆ.”
ಈ ಹೊಸ ಪದ್ಧತಿಯ ಮುಖ್ಯ ಆಧಾರಾಂಶಗಳು:
i) ಅಲ್ಲಲ್ಲಿಯ ಸಾಮಾನ್ಯ ಆಸ್ತಿ ಬೆಲೆಗಳ ಆಧಾರದ ಮೇಲೆ ಇಡೀ ನಗರವನ್ನು ಆರು ವಲಯಗಳಲ್ಲಿ ವಿಂಗಡಿಸಿದೆ.
ii) ಸಾಮಾನ್ಯ ಕಟ್ಟಡ ನಿರ್ಮಾಣ ವೆಚ್ಚದ ಮೇಲೆ ಕಟ್ಟಡಗಳನ್ನು ೫ ನಮೂನೆಗಳಲ್ಲಿ ವಿಂಗಡಸಿದೆ – ಆರ್.ಸಿ.ಸಿ. ಕಟ್ಟಡಗಳ ೩ ನಮೂನೆಗಳು, ಹೆಂಚುಶೀಟು ಛಾವಣಿಗಳು, ಗುಡಿಸಲು ತಡಿಕೆಮನೆ.
iii) ಆಸ್ತಿಯ ಉಪಯೋಗ-ವಸತಿ ಅಥವಾ ವಸತಿಯೇತರ.
iv) ಆಸ್ತಿಯ ಸ್ಥಾನ-ಸ್ವಂತ ವಹಿವಾಟು ಅಥವಾ ಬಾಡಿಗೆಗೆ.
ಈ ನಾಲ್ಕು ಅಂಶಗಳನ್ನಾಧರಿಸಿ ಚದುರಡಿ ದರಗಳನ್ನು ನಿರ್ಧರಿಸಲಾಗಿದ್ದು “ಆಸ್ತಿಯ ವಿಸ್ತೀರ್ಣ”ಕ್ಕೆ ಸೂಕ್ತ ದರಗಳನ್ನು ಹೆಚ್ಚಿ ಗುಣಿಸಬೇಕು. ಹಳೆಯ ಕಟ್ಟಡಗಳಿಗೆ ವಯಸ್ಸಿಗನುಗುಣವಾಗಿ ಸವಕಳಿಯ ಶೇಕಡಾ ದರಗಳನ್ನು ನಿರ್ಧರಿಸಿದೆ. ಈ ಸವಕಳಿಯನ್ನು ಬೆಲೆಯಲ್ಲಿ ಕಳೆದು “ಆಸ್ತಿಬೆಲೆ”ಯನ್ನು ಪಡೆಯಬೇಕು.
ಹಿಂದಿನ “ಅಂಧ” ಅಂದಾಜು ಪದ್ಧತಿಗಿಂತ ಈ ಹೊಸ ಪದ್ಧತಿ ಹೆಚ್ಚು ಸಮಂಜಸ. ಉಳಿದಿರಬಹುದಾದ ಲೋಪದೋಷಗಳನ್ನು ಅನುಭಾವದ ಮೇಲೆ ತಿದ್ದಿಕೊಳ್ಳಬಹುದು. ಉದಾಹರಣೆಗೆ- (i) “ಆಸ್ತಿ ಬೆಲೆ”ಯ ದರಗಳನ್ನು ಹಚ್ಚಿ “ಆಸ್ತಿಬೆಲೆ”ಯನ್ನು ಕಂಡುಕೊಂಡು ಅದರ ಮೇಲೆ ತೆರಿಗೆಯ ದರವನ್ನು(ಶೇಕಡಾ) ಹಚ್ಚಿ ತೆರಿಗೆಯ ಮೊತ್ತವನ್ನು ಪ್ರತಿ ಆಸ್ತಿಗೆ ಬೇರೆ ಬೇರೆಯಾಗಿ ಗುಣಿಸುವುದರ ಬದಲು, ಚದುರಡಿಗೆ ಆಸ್ತಿ ತೆರಿಗೆಯ ದರಗಳನ್ನೇ ಮೊದಲಿಗೇ ನಿರ್ಧರಿಸಿ, ತೆರಿಗೆಯನ್ನೇ ಸೀದಾ ಕಂಡುಕೊಳ್ಳಬಹುದು. ii) ಬಹಳ ಅಂತಸ್ತುಗಳ ಕಟ್ಟಡಗಳಲ್ಲಿ (ವಸತಿಯಗಲೀ, ವಸತಿಯೇತರವಾಗಲೀ) ನೆಲ ಮತ್ತು ಮೊದಲ ಅಂತಸ್ತುಗಳಿಗೂ, ಅವಕ್ಕೂ ಮೇಲಿನ ಅಂತಸ್ತುಗಳಿಗೂ ದರಗಳಲ್ಲಿ ರಿಯಾಯತಿ ಇರಬೇಕಾಗುತ್ತದೆ. ಈ ಬಗ್ಗೆ ಕಾನೂನಿನಲ್ಲಿ ತಿದ್ದುಪಡಿ ಆಗುವುದಿದೆಯೆಂದು ತಿಳಿದುಬಂದಿದೆ.
ಸರಕಾರದ ಆಸ್ತಿಗಳ ಮೇಲೆ ಸೇವಾ ಶುಲ್ಕ:
ಸರಕಾರಿ ಆಡಳಿತಕ್ಕಾಗಿ ಮಾತ್ರ ಉಪಯೋಗಿಸಲ್ಪಡುವ ಸರಕಾರಿ ಆಸ್ತಿಗಳ ಮೇಲೆ ಆಸ್ತಿ ತೆರಿಗೆ ಹತ್ತುವುದಿಲ್ಲ. ಆದರೆ ನಗರ ಪಾಲಿಕೆಯು ನೀಡುತ್ತಿರುವ ಸೇವಾ, ಸೌಕರ್ಯಗಳಿಗನುಗುಣವಾಗಿ “ಸೇವಾಶುಲ್ಕ”ವನ್ನು ವಿಧಿಸಬಹುದು. ಅಲ್ಲದೇ ವಸತಿಗಾಗಿ ಅಥವಾ ವಾಣಿಜ್ಯಕ್ಕಾಗಿ ಉಪಯೋಗಿಸಲ್ಪಡುವ ಸರಕಾರಿ ಆಸ್ತಿಗಳ ಮೇಲೆ ಸಂಪೂರ್ಣ ‘ಆಸ್ತಿ ತೆರಿಗೆ’ ಹತ್ತುತ್ತದೆ. ಈ ಆಸ್ತಿಗಳ ಮೇಲೆ ‘ಆಸ್ತಿ ತೆರಿಗೆ’ ಅಥವಾ ‘ಸೇವಾ ಶುಲ್ಕ’ ವಸೂಲಿಯಾಗದಿದ್ದಲ್ಲಿ ಪಾಲಿಕೆಗೂ ಹಾನಿ ಮತ್ತು ಪಾಲಿಕೆಯ ನಿವಾಸಿ ಕರದಾತರಿಗೆ ಅನ್ಯಾಯ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಜೆಟ್‌ನೋಡಿದರೆ ಇವುಗಳ ವಸೂಲಿ ೧೯೯೫-೧೯೯೬ ರಿಂದ ಎಳ್ಳಷ್ಟೂ ಆಗಿಲ್ಲವೆಂದು ಕಂಡುಬರುತ್ತದೆ. ಇದರ ಬಗ್ಗೆ ಅಂದಾಜುಗಳು ಇದ್ದರೂ ವಾಸ್ತವಿಕ ವಸೂಲಿ ತೋರಿಸಿಯೇ ಇಲ್ಲ. ಇತರ ನಗರ ಪಾಲಿಕೆಗಳೂ ಈ ಬಗ್ಗೆ ಗಮನ ಕೊಡಬೇಕು.
ನೀರಿನ ಕರ:
ನೀರಿನ ಸರಬರಾಜು ಪಾಲಿಕೆಯ ಕಡ್ಡಾಯ ಕರ್ತವ್ಯಗಳಲ್ಲೊಂದು. ಕಾನೂನಿನ ೧೯೧ನೇ ಕಲಂ ಪ್ರಕಾರ ಒದಗಿಸಿದ ನೀರಿನ ಮೇಲೆ ನಿರ್ಣಾಯಿತ ದರಗಳಂತೆ ಹಣವನ್ನು ತೆರಿಗೆಯ ರೂಪದಲ್ಲಿ ವಸೂಲಿ ಮಾಡಬಹುದು. ಈ ಕರವನ್ನು ವಿಧಿಸುವ, ಹೆಚ್ಚಿಸುವ, ವಸೂಲಿ ಮಾಡುವ ವಿಧಾನಗಳೆಲ್ಲವೂ ಆಸ್ತಿ ತೆರಿಗೆಯಂತೆಯೇ. ಬೆಂಗಳೂರಲ್ಲಿ ನೀರನ್ನು ಒದಗಿಸುವದೂ, ಹಂಚುವುದೂ ಮತ್ತು ಹಣ ವಸೂಲಿ ಮಾಡುವುದು ಎಲ್ಲವೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಧೀನ. ಉಳಿದ ಕಡೆ ಕರ್ನಾಟಕ ರಾಜ್ಯ ಮಂಡಳಿ ನೀರನ್ನು ನಗರಪಾಲಿಕೆಗಳಿಗೆ ಮಾರುತ್ತದೆ. ಪಾಲಿಕೆಗಳು ನೀರು ಹಂಚುವಿಕೆ ಮತ್ತು ಹಣ ವಸೂಲಿ ಮಾಡುತ್ತಿವೆ. ಮಂಡಳಿಯು ಒದಗಿಸಿದ ನೀರಿನ ಪ್ರಮಾಣಕ್ಕೂ, ಪಾಲಿಕೆಗಳು ಹಂಚಿದ ನೀರಿನ ಲೆಕ್ಕಕ್ಕೂ ಹೊಂದಿಕೆಯಾಗದಿದ್ದುದರಿಂದ ರಾಜ್ಯ ಸರಕಾರವು ೧೯೯೬ರಲ್ಲಿ ಪಾಲಿಕೆಗಳಿಗೆ ಒಂದು ಆದೇಶವನ್ನು ನೀಡಿತು. ನೀರಿನ ಬಳಕೆದಾರರು ಯಾರಾದರೂ ಮೀಟರ್ ಜೋಡಿಸದೆ, ಖಾಸಗಿಯಾಗಿ ನೀರನ್ನು ಪಡೆಯುತ್ತಿದ್ದರೆ, ಅವರನ್ನು ಒಂದು ವರ್ಷದೊಳಗೆ ಮೀಟರ್ ಜೋಡಿಸಿಕೊಳ್ಳುವಂತೆ ಒತ್ತಾಯ ಮಾಡಲು ಅವರಿಂದ ಮೊದಲ ೬ ತಿಂಗಳು, ತಿಂಗಳಿಗೆ ೪೫ ರೂಪಾಯಿಗಳಂತೆ, ನಂತರದ ಮೂರು ತಿಂಗಳು ೯೦ ರೂಪಾಯಿಗಳಂತೆ, ಕೊನೆಯ ಮೂರು ತಿಂಗಳು, ೧೩೫ ರೂಪಾಯಿಗಳಂತೆ ವಸೂಲಿ ಮಾಡಿ, ವರ್ಷದ ಕೊನೆಗೆ ಮೀಟರ್ ಇನ್ನೂ ಜೋಡಿಸಿಲ್ಲವಾದರೆ ನೀರನ್ನು ನಿಲ್ಲಿಸಬೇಕು. ಮೀಟರ್ ಜೋಡಿಸಿಕೊಂಡಿದ್ದರೆ ಒದಿಗಿಸದ ನೀರಿನ ಪ್ರಮಾಣವನ್ನು ಮೀಟರಿನಿಂದ ಓದಿ, ಅದಕ್ಕೆ ಒಂದು ಸಾವಿರ ಲೀಟರಿಗೆ ಹಂತ ಹಂತದಲ್ಲಿ ನಿರ್ಧರಿಸಿದ ದರಗಳನ್ನು ಹಚ್ಚಿ ಕರ ವಸೂಲಿ ಮಾಡಬೇಕು. ಈ ದರಗಳ ಪ್ರಕಾರ ೪೫ ರೂಪಾಯಿಗಳಿಗೆ ೨೮,೦೦೦ ಲೀಟರ್ ನೀರು ಒದಗಿಸಬೇಕಾಗುತ್ತದೆ. ಆದರೆ ಸಾಧಾರಣವಾಗಿ ಒಂದು ಕುಟುಂಬವು ೧೦,೦೦೦ ಲೀಟರಿನಷ್ಟು ನೀರನ್ನು ಉಪಯೋಗಿಸಬಹುದು. ಅಲ್ಲದೆ ನಗರಪಾಲಿಕೆಯು ಸರಾಸರಿ ೧೦-೧೫ ಸಾವಿರ ಲೀಟರಿಗಿಂತ ಹೆಚ್ಚು ಸರಬರಾಜು ಮಾಡುವುದು ಈಗಿನ ಪರಿಸ್ಥಿತಿಯಲ್ಲಿ ಅಸಾಧ್ಯ.
ಸರಕಾರದ ಈ ಆದೇಶವನ್ನು ಪಾಲಿಕೆಯು ಕಾನೂನಿನಲ್ಲಿ ವಿಧಿಸಿದ ಕ್ರಮಗಳನ್ನು ಅನುಸರಿಸದೇ ಹಾಗೆಯೇ ಜಾರಿಗೆ ತಂದಿತು. ಕಾನೂನಿನ ೧೪೬ನೇ ಕಲಂ ಪ್ರಕಾರ ಇಂತಹ ಸರಕಾರದ ಆದೇಶಗಳನ್ನು ಪಾಲಿಕೆಯು ಜಾರಿಗೆ ತರುವುದಕ್ಕೆ ಮುಂಚೆ ಸಾರ್ವಜನಿಕರಿಗಾಗಿ ಪ್ರಕಟಿಸಿ, ಅವರ ಆಕ್ಷೇಪಣೆಗಳಿಗೆ ಒಂದು ತಿಂಗಳ ಅವಕಾಶ ಕೊಟ್ಟು, ಬಂದ ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ, ಚರ್ಚಿಸಿ ಕೊನೆಯ ನಿರ್ಣಯ ತೆಗೆದುಕೊಂಡು, ಅದನ್ನು ಮತ್ತೆ ಪ್ರಕಟಿಸಿ, ಪ್ರಕಟಣೆಯ ಒಂದು ತಿಂಗಳ ನಂತರವೇ ಜಾರಿಗೆ ತರಬಹುದಿತ್ತು. ಇಲ್ಲಿ ಕಾನೂನಿನ ನೇರ ಉಲ್ಲಂಘನೆಯಾಯಿತು. ಪ್ರಜಾಪ್ರಭುತ್ವ ತತ್ವವನ್ನೇ ತಿರಸ್ಕರಿಸಲಾಯಿತು. ಇಷ್ಟೇ ಅಲ್ಲ. ಬರೀ ಆಡಳಿತದ ಹಿತದ ಕಡೆ ನೋಡಿದರೆ ಸಹಿತ ಇದರಿಂದ ಆಡಳಿತದ, ಸರಕಾರದ ಉದ್ದೇಶಗಳಿಗೇ ಹಾನಿಯುಂಟಾಯಿತು. ಪಾಲಿಕೆಯು ಈ ಆದೇಶವನ್ನು ಜಾರಿಗೆ ತಂದಾಗ ಮೀಟರ್ ಇದ್ದವರಿಗೂ ಈ ೪೫ ರೂಪಾಯಿಗಳ ಕರವನ್ನು ವಿಧಿಸಿ ವಸೂಲಿ ಮಾಡಿತು. ಇದರಿಂದ ಮೀಟರ್ ಇಲ್ಲದವರಿಗೆ ಮೀಟರ್ ಹಚ್ಚುವುದರಲ್ಲಿ ಏನೂ ಲಾಭ ಕಾಣದೆ ಅವರನ್ನು ಮೀಟರ್ ಹಚ್ಚಲು ಒತ್ತಾಯ ಪಡಿಸುವ ಸರಕಾರದ ಉದ್ದೇಶ ನೆರವೇರಲಿಲ್ಲ. ಇದರಿಂದ ಇನ್ನೊಂದು ಹಾನಿಯೂ ಸಂಭವಿಸಿದೆ. ಕಡಿಮೆ ನೀರು ಬಳಸಿದರೂ ೪೫ ರೂಪಾಯಿಗಳನ್ನು ಕೊಡಲೇ ಬೇಕೆಂದಾಗ ಜನರಿಗೆ ನೀರಿನ ಮಿತವ್ಯಯದ ಬದಲಿ ಅಪವ್ಯಯ ಮಾಡಲು ಸೂಚಿಸಿದ ಹಾಗಾಯಿತು.
ಈ ತಪ್ಪು ಪದ್ಧತಿ ಇನ್ನೂ ಜಾರಿಯಲ್ಲಿದೆ. ಇತರ ನಗರ ಪಾಲಿಕೆಗಳಲ್ಲೂ ಇರಬಹುದು. ಇದರಿಂದ ಒಂದು ಪಾಠ ಕಲಿಯಬಹುದು. ಪಾಲಿಕೆಯ ಸದಸ್ಯರಿಗೂ, ಆಡಳಿತ ಅಧಿಕಾರಿ-ಸಿಬ್ಬಂದಿ ವರ್ಗದವರಿಗೂ ಕಾನೂನಿನ ಮತ್ತು ಆಡಳಿತ ಹಿತದ ಬಗ್ಗೆ ಸರಿಯಾದ ಶಿಕ್ಷಣ ದೊರೆಯಬೇಕು. ಕಾನೂನನ್ನು ಗೌರವಿಸುವುದನ್ನು ಅವರು ಸೇವೆಗೆ ಸೇರುವಾಗಲೇ ಕಲಿತಿರಬೇಕು.
ಪುಸ್ತಕ: ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ
ಲೇಖಕರು: ಪಂಚಪ್ಪ
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ