ಸೋಮವಾರ, ಮೇ 30, 2022

2022 ರ 15 ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗುಜರಾತ್ ಟೈಟಾನ್ಸ್ ಗೆದ್ದುಕೊಂಡಿತು.

ಅಹಮದಾಬಾದ್: ಗುಜರಾತ್ ಟೈಟನ್ಸ್ ತಂಡವು ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.

ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ 15ನೇ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ 7 ವಿಕೆಟ್‌ಗಳಿಂದ ಜಯಿಸಿತು. 2008ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡದ ಕನಸು ಕಮರಿತು. ನಾಯಕ ಹಾರ್ದಿಕ್ ಪಾಂಡ್ಯ (17ಕ್ಕೆ3 ಮತ್ತು 34 ರನ್ ) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ತಂಡವು ವಿಜಯೋತ್ಸವ ಆಚರಿಸಿತು.

131 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಟೈಟನ್ಸ್‌ 18.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 133 ರನ್ ಗಳಿಸಿತು. 19ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆತ್ತಿದ ಯುವ ಬ್ಯಾಟರ್ ಶುಭಮನ್ ಗಿಲ್ ಗೆಲುವಿನ ಕೇಕೆ ಹಾಕಿದರು. ಸುಡ್ಡು

ಮದ್ದುಗಳ ಬೆಳಕು ಪ್ರಜ್ವಲಿಸಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಪುಟಿದೆದ್ದಿತು. ಗಣ್ಯರ ಗ್ಯಾಲರಿಯಿಂದ ಓಡಿಬಂದ ನತಾಶಾ ಸ್ಟಾಂಕೊವಿಚ್ ತಮ್ಮ ಪತಿ ಹಾರ್ದಿಕ್ ಅವರನ್ನು ಆಲಂಗಿಸಿಕೊಂಡು ಅಭಿನಂದಿಸಿದರು.

ಹಾರ್ದಿಕ್ ಬೌಲಿಂಗ್: ಪಂದ್ಯದಲ್ಲಿ ಟಾಸ್‌ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 130 ರನ್‌ ಗಳಿಸಿತು. ಹಾರ್ದಿಕ್ (17ಕ್ಕೆ3) ಪರಿಣಾಮಕಾರಿ ದಾಳಿಯಿಂದಾಗಿ ರಾಜಸ್ಥಾನ ಬ್ಯಾಟಿಂಗ್ ಪಡೆಯು ವೈಫಲ್ಯ ಅನುಭವಿಸಿತು. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಮತ್ತು ಶಿಮ್ರೊನ್ ಹೆಟ್ಮೆಯರ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿದ ಪಾಂಡ್ಯ ತಮ್ಮ ತಂಡದ ಮೇಲುಗೈಗೆ ಕಾರಣರಾದರು.

ಎರಡನೇ ಕ್ವಾಲಿಫೈಯರ್‌ನಲ್ಲಿ ರನ್‌ಗಳ ಹೊಳೆ ಹರಿಸಿದ್ದ ರಾಜಸ್ಥಾನ ತಂಡವು ಇಲ್ಲಿ ನೂರು ರನ್‌ಗಳ ಮೊತ್ತ ದಾಟಲು ಪರದಾಡಿತು. ಸಾಯಿ ಕಿಶೋರ್, ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಮುಂದೆ ದೊಡ್ಡ ಮೊತ್ತ ಗಳಿಸಲು ರಾಜಸ್ಥಾನಕ್ಕೆ ಸಾಧ್ಯವಾಗಲಿಲ್ಲ.

ಗಿಲ್‌ ಕ್ಯಾಚ್ ಕೈಬಿಟ್ಟರು: ಶುಭಮನ್ ಗಿಲ್‌ ಅವರಿಗೆ ಎರಡು ಬಾರಿ ಕ್ಯಾಚ್ ಕೈಚೆಲ್ಲಿದ್ದು ರಾಯಲ್ಸ್‌ ತಂಡಕ್ಕೆ ದುಬಾರಿಯಾಯಿತು. ಮೊದಲ ಮತ್ತು ಆರಣೇ ಓವರ್‌ನಲ್ಲಿ ಅವರಿಗೆ ಜೀವದಾನ ಲಭಿಸಿತ್ತು.

ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಎರಡನೇ ಓವರ್‌ನಲ್ಲಿಯೇ ಪ್ರಸಿದ್ಧ ಕೃಷ್ಣ ಪೆಟ್ಟು ಕೊಟ್ಟರು. ವೃದ್ಧಿಮಾನ್ ಸಹಾ ವಿಕೆಟ್ ಎಗರಿಸಿದ ಪ್ರಸಿದ್ಧ ಸಂಭ್ರಮಿಸಿದರು. ಐದನೇ ಓವರ್‌ನಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಗಳಿಸಿದ ಟ್ರೆಂಟ್‌ ಬೌಲ್ಟ್ ಮತ್ತೊಂದು ಯಶಸ್ಸು ಗಳಿಸಿಕೊಟ್ಟರು. ಆದರೆ, ಈ ಸಂಭ್ರಮಕ್ಕೆ ಗಿಲ್ (45; 43ಎ) ಮತ್ತು ಪಾಂಡ್ಯ ತಣ್ಣೀರು ಎರಚಿದರು.

ಮೂರನೇ ವಿಕೆಟ್ ಗೆ 63 ರನ್‌ ಸೇರಿಸಿದ ಈ ಜೊತೆಯಾಟವನ್ನು ಲೆಗ್‌ಸ್ಪಿನ್ನರ್ ಚಾಹಲ್ ಮುರಿದರು. ಹಾರ್ದಿಕ್ ವಿಕೆಟ್ ಗಳಿಸಿದ ಚಾಹಲ್ ತಂಡದಲ್ಲಿ ಮತ್ತೆ ನಿರೀಕ್ಷೆ ಮೂಡಿಸಿದರು. ಆದರೆ ಗಿಲ್ ಜೊತೆ ಸೇರಿದ ಡೇವಿಡ್ ಮಿಲ್ಲರ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಶನಿವಾರ, ಮೇ 28, 2022

ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್‌ ಆಫ್ ಸ್ಯಾಂಡ್-ಮರಳಿನ ಸಮಾಧಿ' (Tomb of Sand) ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ.


ಲಂಡನ್: 
ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) (Tomb of Sand) ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇದರೊಂದಿಗೆ ಹಿಂದಿ ಪುಸ್ತಕವೊಂದು ಬೂಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಇದೇ ಮೊದಲು ಎಂಬ ಹೆಗ್ಗಳಿಕೆಗೆ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) ಪಾತ್ರವಾಗಿದೆ.

ಗುರುವಾರ ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಗೀತಾಂಜಲಿ ಶ್ರೀ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಪ್ರಶಸ್ತಿಯೂ 50,000 ಸಾವಿರ ಪೌಂಡ್ (ಸುಮಾರು ₹50 ಲಕ್ಷ) ಮೌಲ್ಯದ ಬಹುಮಾನವನ್ನು ಒಳಗೊಂಡಿದ್ದು, ಡೈಸಿ ರಾಕ್‌ವೆಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

‘ನಾನು ಬೂಕರ್ ಪ್ರಶಸ್ತಿ ಬಗ್ಗೆ ಕನಸು ಕಂಡಿರಲಿಲ್ಲ. ಎಂದಿಗೂ ಯೋಚನೆಯನ್ನೂ ಮಾಡಿರಲಿಲ್ಲ. ಎಂತಹ ದೊಡ್ಡ ಮನ್ನಣೆ, ನಾನು ಆಶ್ಚರ್ಯಚಕಿತಳಾಗಿದ್ದೇನೆ. ಗೌರವ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ’ ಎಂದು ಗೀತಾಂಜಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ವಿಶ್ವದ 13 ಪುಸ್ತಕಗಳಲ್ಲಿ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) ಒಂದಾಗಿತ್ತು. ಈ ಹಿಂದಿ ಕಾದಂಬರಿಯನ್ನು ಡೈಸಿ ರಾಕ್‌ವೆಲ್ ಅವರು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದರು.

ಈ ಪುಸ್ತಕ ₹50 ಲಕ್ಷ ಮೌಲ್ಯದ ಪ್ರಶಸ್ತಿ ವಿಭಾಗದಲ್ಲಿ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಇದೀಗ ಈ ಪುಸ್ತಕ ಬೂಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಅದರಿಂದ ಬಂದ ಹಣವು ಲೇಖಕಿ ಮತ್ತು ಅನುವಾದಕಾರರ ಮಧ್ಯೆ ಹಂಚಿಕೆಯಾಗಿದೆ.

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಜನಿಸಿದ ಗೀತಾಂಜಲಿ ಅವರು ಮೂರು ಕಾದಂಬರಿ ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನಿ ಹಾಗೂ ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.

‘ಟೂಮ್‌ ಆಫ್ ಸ್ಯಾಂಡ್‌(ಮರಳಿನ ಸಮಾಧಿ)' ಕಾದಂಬರಿಯು ಉತ್ತರ ಭಾರತದ 80 ವರ್ಷದ ವೃದ್ಧೆ ತನ್ನ ಪತಿಯನ್ನು ಕಳೆದುಕೊಂಡ ಬಳಿಕ ತೀವ್ರ ಖಿನ್ನತೆಗೆ ಒಳಗಾಗುವುದು ಮತ್ತು ಅದರಿಂದ ಹೊರಬರುವುದು ಸೇರಿದಂತೆ ಹಲವು ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ.


ಸೋಮವಾರ, ಮೇ 23, 2022

ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ -ಸಚಿವ ಬಿ ಸಿ ನಾಗೇಶ ಭರವಸೆ.

*ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ,*
*ಸಚಿವ ಬಿ ಸಿ ನಾಗೇಶ ಭರವಸೆ*

ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ಆಡಳಿತವಲ್ಲ, ಸುತ್ತೋಲೆ ನಮ್ಮ ಅನುಕೂಲಕ್ಕೆ ಮಾತ್ರ ಇವೆ. ಹಾಗಾಗಿ, ನೇಮಕಾತಿ ವಿಚಾರದಲ್ಲಿ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳನ್ನೂ ಹಿಂದಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕು ಎಂದು ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು..

ಬೆಂಗಳೂರು : ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ರ ಪ್ರಕಾರ ಅನರ್ಹರಾಗಿದ್ದು, ಇವರನ್ನೂ ಪರಿಗಣಿಸುವ ಕುರಿತು ಆದಷ್ಟು ಬೇಗ ಅಧಿಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್​​ನಲ್ಲಿ ನಿಯಮ‌ 72ರ ಅಡಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಮಂಡಿಸಿದ ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವಿ ಸಂಕನೂರು, ಆಯನೂರು ಮಂಜುನಾಥ್ ಹಾಗೂ ಶಶೀಲ್ ಜಿ. ನಮೋಶಿ ಅವರು, ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ರ ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿರುವರು.

ಇದರಿಂದ 2016ರ ಪೂರ್ವದಲ್ಲಿ ಹಿಂದಿ ಬಿ.ಇಡಿ ಪಡೆದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೀದಿ ಪಾಲಾಗಿರುವ ಸನ್ನಿವೇಶ ಉಂಟಾಗಿದೆ. ಕೂಡಲೇ ಇವರಿಗೂ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕರ್ನಾಟಕ ಉನ್ನತ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ 2772/ 2011 69822-69826/2012 ಯಡಿ ನೀಡಿರುವ ತೀರ್ಪಿನಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು 20020 ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಭಾಷಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ on N.C.T.E (National Council for Teacher Education) F ಪಡಿಸಿರುವ ವಿದ್ಯಾರ್ಹತೆಗಿಂತ ಕಡಿಮೆ ಇರುವ ಕಾರಣ 2002ರ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ರದ್ದುಪಡಿಸಿರುತ್ತದೆ ಎಂದರು.

ಸಂಸತ್ತಿನ ಶಾಸನದ ಪ್ರಕಾರ ಸ್ಥಾಪಿತವಾದ ಸಂಸ್ಥೆಯಾದ ಎನ್‌ಸಿಟಿಇಯಿಂದ ಮಾನ್ಯತೆ ಪಡೆಯದ ಸಂಸ್ಥೆಗಳಿಂದ ಪಡೆದ ಬಿ.ಇಡಿ ಪದವಿಯು ಶಿಕ್ಷಕರ ಹುದ್ದೆಗೆ ನೇಮಕಾತಿ ಹೊಂದಲು ಅನರ್ಹವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ-2016ರ ಪ್ರಕಾರ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳು ಹಿಂದಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅನರ್ಹರಾಗಿದ್ದಾರೆ. ಸದರಿ ಪರೀಕ್ಷೆ/ಪದವಿಗಳಿಗೆ ತತ್ಸಮಾನತೆ ಪರಿಗಣಿಸಿ ನೀಡಿರುವ ಸರ್ಕಾರದ ಆದೇಶಗಳನ್ನು ಸರ್ಕಾರ 18/04/2017ರಲ್ಲಿ ರದ್ದುಪಡಿಸಿದೆ ಎಂದು ಮಾಹಿತಿ ನೀಡಿದರು.

ಪುಸ್ತುತ ಚಾಲ್ತಿಯಲ್ಲಿರುವ 2016ರ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಅನುಸರಿಸಿ ಪ್ರೌಢ ಶಾಲಾ ಹಿಂದಿ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

*ಹಿಂದಿ ರಾಷ್ಟ್ರಭಾಷೆ ಚರ್ಚೆ :* ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಶಿಲ್‌ ನಮೋಷಿ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಲೇಬೇಕು, ಅದರಲ್ಲಿ ಎರಡು ಮಾತಿಲ್ಲ. ‌ಆದರೆ, ಹಿಂದಿ ರಾಷ್ಟ್ರಭಾಷೆ ಆಗಿದೆ. ಅದಕ್ಕೂ ಕೊಡಬೇಕಾದ ಆದ್ಯತೆ ಕೊಡಬೇಕಿದೆ. ನೇಮಕಾತಿ ವಿಚಾರದಲ್ಲಿ ಆಗಿರುವ ಲೋಪ ಸರಿಪಡಿಸಬೇಕು ಎಂದರು.


ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಹಿಂದಿ ನಮ್ಮ ರಾಷ್ಟ್ರದಲ್ಲಿ ಅಧಿಕೃತ ಭಾಷೆ ಅಷ್ಟೇ ಹೊರತು ರಾಷ್ಟ್ರ ಭಾಷೆ ಅಲ್ಲ. ಎಲ್ಲಾ ಭಾಷೆಗಳ ರೀತಿ ಅದು ಒಂದು ಭಾಷೆ ಅಷ್ಟೇ ಎಂದರು.

*ಸುತ್ತೋಲೆಗಳ ಆಡಳಿತವಾಗಬಾರದು :* ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸುತ್ತೋಲೆಗಳ ಮೇಲೆ ಅಧಿಕಾರಿಗಳು ಆಡಳಿತ ನಡೆಸಲು ಹೊರಟಿದ್ದಾರೆ. ಸುತ್ತೋಲೆ ಆಡಳಿತ ನಡೆಯಬಾರದು ಕಾಯ್ದೆಗಳ,ಕಾನೂನುಗಳ ಆಡಳಿತ ನಡೆಯಬೇಕು. ಒಂದು ಕಡೆ ಅವಕಾಶ ಕೊಡಲಾಗುತ್ತದೆ, ಮತ್ತೊಂದು ಕಡೆ ನಿರಾಕರಿಸಲಾಗುತ್ತದೆ.

ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ಆಡಳಿತವಲ್ಲ, ಸುತ್ತೋಲೆ ನಮ್ಮ ಅನುಕೂಲಕ್ಕೆ ಮಾತ್ರ ಇವೆ. ಹಾಗಾಗಿ, ನೇಮಕಾತಿ ವಿಚಾರದಲ್ಲಿ ಹಿಂದಿ ಪ್ರಚಾರ ಸಭಾಗಳಿಂದ ಹಿಂದಿ ಬಿ.ಇಡಿ ಪದವಿ ಪಡೆದ ವಿದ್ಯಾರ್ಥಿಗಳನ್ನೂ ಹಿಂದಿ ಶಿಕ್ಷಕರ ನೇಮಕಾತಿಗೆ ಪರಿಗಣಿಸಬೇಕು ಎಂದರು.

*ನೇಮಕಾತಿ ಕಾಯ್ದೆಗೆ ತಿದ್ದುಪಡಿ ತನ್ನಿ :* ಜೆಡಿಎಸ್‌ನ ಶ್ರೀಕಂಠೇಗೌಡ ಮಾತನಾಡಿ, ಹತ್ತು ಇಪ್ಪತ್ತು ವರ್ಷದಿಂದ ಪಾಠ ಮಾಡುತ್ತಿರುವ ಹಿಂದಿ ಶಿಕ್ಷಕರು ಬೀದಿಗೆ ಬೀಳಲಿದ್ದಾರೆ. ಭವಿಷ್ಯದಲ್ಲಿ ಬೇಕಾದರೂ ಹೊಸ ಕಾನೂನಿನಂತೆ ನೇಮಕ ಮಾಡಿಕೊಳ್ಳಿ. ಆದರೆ, ಈಗ ಇರುವವರಿಗೆ ಅವಕಾಶ ಕಲ್ಪಿಸಲೇಬೇಕು, ಅಗತ್ಯವಾದಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮ 2016ಕ್ಕೆ ತಿದ್ದುಪಡಿಯನ್ನು ತನ್ನಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ನಾಗೇಶ್, ಸಿ ಅಂಡ್ ಆರ್ ರೂಲ್ ಅನ್ನು ಹೈಕೋರ್ಟ್ ನಿರ್ದೇಶನದ ಆಧಾರದಲ್ಲಿ 2016ರಲ್ಲಿ ತಂದಿದ್ದಾರೆ. ಮುಂದಿನ ದಿನದಲ್ಲಿ ಈ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಎಸ್.ವಿ ಸಂಕನೂರು, ಕೂಡಲೇ ಇದಕ್ಕೊಂದು ಸಮಿತಿ ರಚನೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆಯಿರಿ, ಪರಿಷತ್ ಸದಸ್ಯರ ಅಹವಾಲು ಆಲಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ನಿರ್ದೇಶಿಸಿದರು. ಸಭಾಪತಿ ನೀಡಿದ ನಿರ್ದೇಶನಕ್ಕೆ ಸಹಮತ ವ್ಯಕ್ತಪಡಿಸಿದ ಸಚಿವ ನಾಗೇಶ್, ಆದಷ್ಟು ಬೇಗ ಸಭೆ ನಡೆಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.