KannadaLiteratureProse & Poetry
ಕನ್ನಡದ ಕವಿಗಳು ಮತ್ತು ಜನವರಿ ೩೦
By
Arun Meshtru -
January 30, 2018
ಜನವರಿ ೩೦.
ಮಹಾತ್ಮಾ ಗಾಂಧಿಯವರು ಹತ್ಯೆಗೀಡಾದ ದಿನ.
ಗಾಂಧೀಜಿಯವರನ್ನು ಸ್ಮರಿಸುತ್ತ, ಆ ಕಾಲದ ಕನ್ನಡದ ಪ್ರಮುಖ ಕವಿಗಳು ಮಹಾತ್ಮಾ ಗಾಂಧಿಯವರ ಬಗ್ಗೆ ಬರೆದ ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಶ್ರೀ ಪು.ತಿ.ನರಸಿಂಹಾಚಾರ್ಯರು ತಮ್ಮ “ರಸ ಸರಸ್ವತಿ” ಕವನ ಸಂಕಲನದಲ್ಲಿ ಬರೆದಿರುವ “ಗಾಂಧೀಸ್ತವ” ಕವನದ ಆರಂಭದಲ್ಲೇ ಗಾಂಧೀಜಿಯವರನ್ನು ಹೀಗೆ ನೆನೆಯುತ್ತಾರೆ:
ನೆನೆವೆನೀ ದಿನ ಪುಣ್ಯಜಾತನ ನಮ್ಮ ನಾಡವಿಧಾತನ
ಜನಪದ ಸ್ವಾತಂತ್ರ್ಯದಾತನ ಸಕಲಹೃದಯೋಪೇತನ
ನೆನೆಯುತಚ್ಚರಿಗೊಳುವ ಮಹಿಮನ ದಿವ್ಯಮಂಗಳ ಚರಿತೆಗೆ
ಕೊನೆಯ ಕೇಡಿಗೆ ದುಗುಡಗೊಳುವೆನು ರಿಕ್ತವಾದೀ ಜನತೆಗೆ!
ಆ ಕಾಲದ ಎಲ್ಲ ಕವಿಗಳೂ “ನಾಡವಿಧಾತ”ನೆಂಬ ರೂಪಕವನ್ನು ಗಾಂಧೀಜಿಗೆ ಬಳಸಿದ್ದರೆನ್ನಿಸುತ್ತೆ. ಕವನವನ್ನು ಮುಂದುವರೆಸುತ್ತ ಪುತಿನ ಅವರು
ಕೇಡಿಗೆ ಕೇಡೆಣಿಸುವ ಬಗೆ ದೇವಗು ತಪ್ಪದೆನೆ
ಹಾಡುವೆವೆಂಟವತಾರದ ಗೋವಿಂದನ ಭವವ
ಈಡಾಗದೆ ಈತೆರ ಖಲಶಾಪಕೆ ಮಾತವಸಿ
ನೀಡಿದನಭಯವ ಲೋಕಕೆ – ಈತನಿಗಾವನೆಣೆ?
ಎಂದು ಹಾಡಿ ಹೊಗಳುತ್ತಾರೆ.
“ಶಿಲಾಲತೆ” ಎಂಬ ಕವನ ಸಂಕಲನದಲ್ಲಿ ಇದೇ ಶೀರ್ಷಿಕೆಯ, ಅಂದರೆ “ಗಾಂಧೀಸ್ತವನ” ಎಂಬ ಶೀರ್ಷಿಕೆಯ ಪದ್ಯವೊಂದನ್ನು ಶ್ರೀ ಕೆ.ಎಸ್.ನರಸಿಂಹಸ್ವಾಮಿಯವರು ಬರೆದಿರುತ್ತಾರೆ.
ಲೋಕಸೇವೆಗೆ ಮುಡಿಪು ದೇಹವೆಂದರೆ, ಲೋಕ
ನುಡಿದವನ ದೇಹವನೆ ಬಲಿಗೊಂಡಿತು.
ನೆಲದ ನೋವನು ಅರಿತು ಅಮೃತಪಾತ್ರೆಯ ತಂದ
ದಾನಿಯನೆ ಕೈಯಾರ ಕೊಂದರಿವರು.
ಎಂದು ಮರುಗುತ್ತ, “ದೀಪವಿತ್ತು, ದೀಪವಿಲ್ಲ; ದೀಪವಿತ್ತು, ದೀಪವಿಲ್ಲ.” ಎಂದು ನೋವಿನ ಸಾಲುಗಳನ್ನು ಬರೆಯುತ್ತಾರೆ. ಅಲ್ಲದೆ,
ನಿನ್ನ ಹೆಸರಿಡಬಹುದು ಬೀದಿ ಬೀದಿಗೆ, ಸುಲಭ;
ನಿನ್ನಂತೆ ಬದುಕುವುದು ದುರ್ಲಭ.
ನಿನ್ನ ಹೆಸರೆತ್ತಿದರೆ, ನಿನ್ನ ಮಾತಾಡಿದರೆ
ನಿನ್ನ ವೈರಿಗೆ ಕೂಡ ಲಾಭ.
ಎಂದು ಗಾಂಧೀಜಿಯ ಹೆಸರನ್ನು “ಬಳಸಿಕೊಳ್ಳುವ” ಜನರಿಗೆನ್ನುವಂತೆ ಹೇಳುತ್ತಾರೆ.
ಕನ್ನಡದ ಮೊದಲ ರಾಷ್ಟ್ರಕವಿ ಶ್ರೀ ಎಂ. ಗೋವಿಂದ ಪೈಗಳಂತೂ ಗಾಂಧೀಜಿಯವರ ಬಗ್ಗೆ ಹತ್ತಾರು ಕವನಗಳನ್ನು ಬರೆದಿದ್ದಾರೆ. “ವಿಟಂಕ” ಕವನ ಸಂಕಲನದ “ವರುಷ ಒಂದಾಯ್ತು” ಎಂಬ ಒಂದು ಪದ್ಯ ಈ ರೀತಿ ಆರಂಭವಾಗುತ್ತದೆ.
ವರುಷ ಒಂದಾಯ್ತು ನೀನಗಲಿ ನಮ್ಮಿಂದ!
ಭಾರತವ ನಿನ್ನಾತ್ಮ ಬಿಟ್ಟು ಹೋಗುವುದೆ?
ಇಲ್ಲಿ ಕೊನೆವರಮೆನಿತೊ ಕಷ್ಟವಂ ಮಿಂದ
ನಾಗೆ ಹೂವ, ಮಹಾತ್ಮ, ಕಂಪು ನೀಗುವುದೆ?
ಈ ಕವನವನ್ನು ಹೀಗೆ ಭಾವುಕರಾಗಿ ಮುಗಿಸುತ್ತಾರೆ.
ನಿನ್ನ ಮೂರ್ತಿಯನಿಂದು ತಳೆವೆನೆದೆ ತೀವೆ
ಪ್ರಥಮಾಬ್ದಿಕದಲಿ ಬಾಷ್ಪಾಂಜಲಿಯನೀವೆ!
ಭಾರತೀಯ ಕಾವ್ಯಮೀಮಾಂಸೆಯನ್ನು ಕನ್ನಡಿಗರಿಗೆ ದಯಪಾಲಿಸಿದ ಕವಿ ಶ್ರೀ ತಿ.ನಂ.ಶ್ರೀಕಂಠಯ್ಯನವರ “ಪೂರ್ಣಾಹುತಿ” ಕವನದಲ್ಲಿ ಗೋಡ್ಸೆಯ ಕೊಲೆಗಡುಕತನವನ್ನು ಟೀಕಿಸಿ ಕಂಬನಿ ಮಿಡಿಯುತ್ತಾರೆ.
ದ್ವೇಷಮಾರಿಯ ಮಹಾತೃಷೆಗೆ ತರ್ಪಣವಾಗಿ
ಸುರಿಸಿದನೆ ಈ ಪ್ರೇಮನಿಧಿಯ ರಕ್ತವನು,
ಸಲಿಸಿದನೆ ಕಾಣಿಕೆಗೆ ಇವನ ಪ್ರಾಣವನು,
ಉರಿಸಿದನೆ ಜಗದಳಲ ಕಕ್ಕಡವನು!
ದ್ವೇಷವೆಂಬ ಮಾರಿಯು ಕೈಯನ್ನು ಬಿರುಸು ಮಾಡುವುದಲ್ಲದೆ ಮನಸ್ಸನ್ನು ಹೊಲಸು ಮಾಡುವುದೆಂದು ಕೊಲೆಗಾರನನ್ನು ಕಠೋರವಾಗಿ ಟೀಕಿಸುತ್ತಾರೆ.
ಕೈಯೆಂತು ಬಿರುಸಾಯ್ತೊ, ಮನವೆಂತು ಹೊಲಸಾಯ್ತೊ,
ಕೊಲೆಗಾರನರಿವೆಂತು ವಿಲಯವಾಯ್ತೊ?
ಭಾರತದ ಕಣ್‍ಬೆಳಕು ನಂದಿಹೋಯ್ತೋ!
ಶ್ರೀ ಕಯ್ಯಾರ ಕಿಞ್ಞಣ್ಣ ರೈ ಅವರ “ಹೇ ರಾಮ” ಎಂಬ ಸುದೀರ್ಘ ಕವನದಲ್ಲಿ “ನಾವೆಂಥ ಪಾಪಿಜನ!” ಎಂಬ ಮಾತು ನೋವಿನಿಂದ ಬರುತ್ತದೆ.
ಹೊಡೆದೆವೋ ಹೊಡೆತದಲಿ ನೋಯದನ.
ಕೊಂದೆವೋ ಕೊಲಬಾರದೆಂದವನ,
ಸುಟ್ಟೆವೋ ಬೆಂಕಿಯಲಿ ಸುಡದವನ,
ಮರೆತೆವೋ ನಾವ್ ಮರೆಯಬಾರದನ
ಕಳೆದೆವಯ್ಯೋ ಕಳಕೊಳ್ಳಬಾರದನ
ಹೇರಾಮS ನಾವೆಂಥ ಪಾಪಿಜನ!
ಕೊನೆಯಲ್ಲಿ ಶ್ರೀರಾಮನಂತೆಯೇ ಗಾಂಧೀಜಿಯೂ ಸಹ ಎನ್ನುವಂತಹ ಮಾತು ಬರುತ್ತದೆ.
ಹೇರಾಮS ಕೈ ಮುಗಿಯುತ ನಿಂತೆ,
ಹೇರಾಮS ಮೈ ನಡುಗುವುದಂತೆ;
ಹೇರಾಮS ಕಂಬನಿಯೊಸರಿತ್ತೆ?
ಹೇರಾಮS ನನಗಿದುವೇ ಚಿಂತೆ;
ಹೇರಾಮS ನಮಗಾಗಿಯೆ ಸತ್ತೆ;
ಹೇರಾಮS ನಿನಗಾಗಿಯೆ ಅತ್ತೆ!
ಕವಿ ಶ್ರೀ ಕೆ.ಎಸ್.ನಿಸಾರ್ ಅಹಮದ್‍ರವರು ತಮ್ಮ “ಸಂಜೆ ಐದರ ಮಳೆ“ಯ “ಬಾಪೂ” ಎಂಬ ಕವನದ ಕೊನೆಯಲ್ಲಿ ಬಾಪೂರನ್ನು ಒಂದು ರೀತಿಯಲ್ಲಿ ಹೀಗೆ ಪ್ರಾರ್ಥಿಸುತ್ತಾರೆ:
ನಿನಗಿಂತ ಹಿರಿಯರನು ಕಾಣೆ ಮಹಾತ್ಮ
ಮಿತಿಮೀರಿ ಏರಿರುವೆ, ಬಾಳಿಗೆ ದಕ್ಕದೆ ಮೀರಿರುವೆ –
ವಾಸ್ತವತೆ ನಾನು ಆದರ್ಶ ನೀನು.
ಲೋಕವನೆ ದಹಿಸಿರುವ ಸೂರ್ಯನಿಗೆ ತಡೆಯಾಗಿ
ನಿನ್ನ ಕೊಡೆ ನೆತ್ತಿಯನು ಕಾಯುತಿರಲಿ;
ಕಾದ ಹಾದಿಯ ನಡೆಯೆ ಸ್ವಾನುಭವ ಕೆರವಾಗಿ
ಸ್ವಂತ ಜೀವನದೊಡನೆ ತೇಯುತಿರಲಿ.
“ಕಟ್ಟುವೆವು ನಾವು” ಕವನ ಸಂಕಲನದಲ್ಲಿ ಕವಿ ಶ್ರೀ ಗೋಪಾಲಕೃಷ್ಣ ಅಡಿಗರು “ಭಾರತದ ತಂದೆ ಗಾಂಧಿ” ಎಂಬ ಸುದೀರ್ಘ ಕವನವೊಂದನ್ನು ರಚಿಸಿದ್ದಾರೆ. ಕವನದ ಮೊದಲೆರಡು ಭಾಗಗಳಲ್ಲಿ ಗಾಂಧೀಜಿಯವರ ಜೀವನದ ಚಿತ್ರಣವು ಮೂಡಿದ್ದರೆ, ಮೂರನೆಯ ಭಾಗದಲ್ಲಿ ಗಾಂಧೀಜಿಯ ಸಾವಿನಿಂದಾದ ನೋವು ತುಂಬಿದೆ.
ಬರಸಿಡಿಲಂತೆರಗಿತು: ಹಾ! ಕೊಲೆಗಡುಕನ ಕೈ
ಜರಾಜೀರ್ಣ, ತ್ಯಾಗಶೀರ್ಣ ಎಲುಬುಗೂಡು ಮೈ
ಬಿತ್ತು ಕೆಳಗೆ, ಬಿದ್ದ ಹಾಗೆ
ನ್ಯಾಯಸತ್ಯದಯಾಧರ್ಮದೊಂದೆ ಆಧಾರವು;
ನಮ್ಮ ತಲೆಯ ಮೇಲೆ ಬಿತ್ತು
ನಮ್ಮ ಪಾಪಭಾರವು!
ಪದ್ಯದ ಕೊನೆಯಲ್ಲಿ ವಾಚಕರಿಗೆ ಗಾಂಧೀಜಿಯ ದಾರಿಯಲ್ಲಿ ಸಾಗೋಣವೆಂದು ಹೀಗೆ ಕರೆ ಕೊಡುತ್ತಾರೆ ಅಡಿಗರು:
ಅವನ ದಾರಿಯೊಂದೆ ದಾರಿ; ಉಳಿದುದೆಲ್ಲ ಹಳುವವು;
ಅವನ ಗುರಿಯೆ ಗುರಿಯು, ಉಳಿದುದೆಲ್ಲ ವಿಫಲ ಚಪಲವು!
ಶ್ರೀ ಎ.ಎನ್.ಮೂರ್ತಿರಾಯರು ತಮ್ಮ ಆತ್ಮಕಥನವಾದ “ಸಂಜೆಗಣ್ಣಿನ ಹಿನ್ನೋಟ“ದಲ್ಲಿ “1948ರ ವಿದ್ಯಮಾನಗಳು” ಎಂಬ ಒಂದು ಅಧ್ಯಾಯವನ್ನೇ ಬರೆದಿರುತ್ತಾರೆ. ಅಹಿಂಸಾತತ್ತ್ವವು ಪ್ರಸ್ತುತವೋ ಅಪ್ರಸ್ತುತವೋ ಎಂಬ ವೈಚಾರಿಕತೆಯನ್ನೂ ಚರ್ಚಿಸುತ್ತಾರೆ. ಆದರೆ ಗಾಂಧೀಹತ್ಯೆಯಾದ ನಂತರದ ದಿನಗಳಲ್ಲಿ ತಮ್ಮ ತರಗತಿಯಲ್ಲಾದ ಅನುಭವವನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ:
“ಆ ದಿನ (ಗಾಂಧೀಹತ್ಯೆಯಾದ ದಿನ) ಕಳೆದ ಮೇಲೆ ನಾನು ತೆಗೆದುಕೊಂಡ ಮೊದಲ ಒಂದೆರಡು ತರಗತಿಗಳಲ್ಲಿ ಹುಡುಗರು “ಇವತ್ತು ಪಾಠ ಬೇಡ ಸಾರ್, ಗಾಂಧಿಯವರ ವಿಷಯ ಹೇಳಿ” ಎಂದರು. ನನಗೂ ಪಾಠ ಬೇಕಿರಲಿಲ್ಲ. ಮನಸ್ಸಿನಲ್ಲಿ, ಹೃದಯದಲ್ಲಿ ಕುದಿಯುತ್ತಿದ್ದುದನ್ನು ಹೊರಹಾಕುವುದು ಆವಶ್ಯಕವಾಗಿತ್ತು. ಭಾವನೆಗಳು ಉಕ್ಕಿಬಂದವು. ಅವತ್ತು ನಾನು ಮನೆಗೆ ಹೊರಟಾಗ ಆರೇಳು ಜನ ಹುಡುಗರು ಗಾಂಧಿಯವರ ಬದುಕನ್ನೂ ತತ್ತ್ವಗಳನ್ನೂ ಕುರಿತು ಮಾತಾಡುತ್ತಾ ಮನೆವರೆಗೂ ಬಂದರು..” (ಮುಂದಿನ ಸಾಲುಗಳಲ್ಲಿ ಅಹಿಂಸೆಯನ್ನು ಅನುಸರಿಸುವುದು ಹೇಗೆ, ಅದು ಸಾಧ್ಯವೋ ಇಲ್ಲವೋ, ಮತ್ತು ಈ ವಿಷಯದ ಬಗ್ಗೆ ಆ ಕ್ಷಣದಲ್ಲಿ ಲೇಖಕರಿಗೆ ಸಮರ್ಪಕವಾದ ಉತ್ತರವನ್ನು ಕೊಡಲು ಆಗಲಿಲ್ಲವೆಂಬ ವಿಷಯವು ಬರುತ್ತದೆ. ಕೊನೆಯಲ್ಲಿ ಗಾಂಧೀಜಿಯ ಮೂಲತತ್ವವು ದ್ವೇಷವಿಲ್ಲವಿರುವುದು ಎಂಬ ವಿವರಣೆಯನ್ನು ನೀಡುತ್ತಾರೆ).
ರಾಷ್ಟ್ರಕವಿ ಶ್ರೀ ಕುವೆಂಪುರವರು “ದಿವಂಗತ ರಾಷ್ಟ್ರಪಿತ” ಎಂಬ ಲೇಖನವನ್ನು (ಗಾಂಧೀಜಿಯವರ ನಿಧನದ ಮರುದಿನ ಸಂಜೆ ಮೈಸೂರು ಆಕಾಶವಾಣಿಯಲ್ಲಿ ಮಾಡಿದ ಪ್ರಸಾರ ಭಾಷಣ) ಹೀಗೆ ಆರಂಭಿಸುತ್ತಾರೆ:
ರಾಷ್ಟ್ರಪಿತ ದಿವಂಗತ
ಉನ್ಮತ್ತ ಹಸ್ತ ಹತ!
ನರಹೃದಯದ ವಿಷವಾರ್ಧಿಗೆ
ಜೀವಾಮೃತ ಸಮರ್ಪಿತ!
ಕ್ಷಮಿಸು, ಓ ಜಗತ್ ಪಿತ:
ಅದೃಷ್ಟ ಹೀನ ಭಾರತ!
ಗಾಂಧೀಜಿಯವರ ಹತ್ಯೆಯ ಬಗ್ಗೆ ಹೀಗೊಂದು ಮಾತನ್ನು ಹೇಳುತ್ತಾರೆ ಕುವೆಂಪುರವರು: “ಈ ಪಾಪಕರ್ಮಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದರೆ ನಮಗೆ ಯೇಸು ಕ್ರಿಸ್ತನನ್ನು ಮೊಳೆ ಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೋ ಏನೋ ಎಂದು ಹೆದರಿಕೆಯಾಗುತ್ತಿದೆ!”
“ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತಾ ಕೂರುವುದು ಅವಿವೇಕವೆ! ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊತ್ತಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ. ಶ್ರೀರಾಮಚಂದ್ರನಿಗೆ ಕೊನೆ ಬಂದ ಪರಿಯನ್ನು ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ. ನಮಗೆ ಅನರ್ಥವಾಗಿ ತೋರುವುದು ಈಶ್ವರನ ಸಮದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು? ಮಹಾತ್ಮರೇ ಹೇಳುತ್ತಿದ್ದರು: ’ನನ್ನನ್ನು ಕೊಲ್ಲುವ ಸಾಮರ್ಥ್ಯ ಇರುವುದು ಈಶ್ವರನೊಬ್ಬನಿಗೇ’ ಎಂದು. ಕೊಂದವನು ಯಃಕಶ್ಚಿತ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು.” ಎಂದು ಇಡೀ ಘಟನೆಯನ್ನು ತತ್ತ್ವದೃಷ್ಟಿಯಿಂದ ನೋಡುತ್ತಾರೆ.
ನಂತರದ “ಬಾಪೂಜಿಗೆ ಬಾಷ್ಪಾಂಜಲಿ” ಎಂಬ ಲೇಖನದಲ್ಲಿ (ಗಾಂಧೀಜಿಯವರ ಅಸ್ಥಿವಿಸರ್ಜನೆಯ ನಂತರ ಮೈಸೂರಿನಲ್ಲಿ ಮಾಡಿದ ಭಾಷಣ) ಗಾಂಧೀಜಿಯನ್ನು ಸ್ಮರಿಸುತ್ತ, “ಹೇ ಲೋಕಗುರು, ನಮ್ಮ ಮುನ್ನಡೆಗೆ ಮಾರ್ಗದರ್ಶಕ ಪರಂಜ್ಯೋತಿಯಾಗು. ಕವಿದಿರುವ ಈ ಕತ್ತಲೆಯಲ್ಲಿ ನಿನ್ನ ಕಿರಣ ಹಸ್ತದಿಂದ ನಮ್ಮನ್ನು ಕೈ ಹಿಡಿದು ನಡಸು. ನಮ್ಮ ಹೃದಯದಲ್ಲಿ ಹೆಡೆಯೆತ್ತಿರುವ ಕ್ರೋಧ ಹಿಂಸೆ ಪ್ರತೀಕಾರಾದಿ ಅಹಂಕಾರ ಸರ್ಪಗಳಿಗೆ ಗರುಡಮಣಿಯಾಗಿ ನಮ್ಮನ್ನು ರಕ್ಷಿಸು. ಅಸತ್ತಿನಿಂದ ಸತ್ತಿಗೆ, ತಮಸ್ಸಿನಿಂದ ಜ್ಯೋತಿಗೆ, ಮೃತ್ಯುವಿನಿಂದ ಅಮೃತಕ್ಕೆ ನಮ್ಮನ್ನು ಕೊಂಡೊಯ್!” ಎಂದು ಪ್ರಾರ್ಥಿಸುತ್ತಾರೆ.
ಶ್ರೀ ಶಿವರಾಮ ಕಾರಂತರು ಗಾಂಧೀಜಿಯವರ ಬಗ್ಗೆ ಬರೆದ ಪ್ರಬಂಧದ ಶೀರ್ಷಿಕೆ: “ಬದುಕಿದಾಗ ಮುಳ್ಳಿನ ಹಾಸಿಗೆ, ಬದುಕಿನ ಬಳಿಕ ಹೂವಿನ ಹಾಸಿಗೆ” ಎಂದು. ಪ್ರಬಂಧದುದ್ದಕ್ಕೂ ಗಾಂಧೀಜಿಯವರ ಹತ್ಯೆಯನ್ನು ಖಂಡಿಸುತ್ತ, ಅಂತಹ ಕೃತ್ಯವನ್ನೆಸಗುವುದು “ಪಶುಸ್ವಭಾವ”ವೆನ್ನುತ್ತಾರೆ. ಪ್ರಬಂಧದ ಒಂದು ಹಂತದಲ್ಲಿ ಹೀಗೆ ಬರೆಯುತ್ತಾರೆ:
“ತುಸು, ತುಸುವಾಗಿ ಅನೇಕ ಬಗೆಯಿಂದ ನಾವು ಅವರನ್ನು ಚುಚ್ಚಿದ್ದೇವೆ, ಗಾಯಗೊಳಿಸಿದ್ದೇವೆ, ಸಾಯಿಸಲಿಲ್ಲ ಮಾತ್ರ!” ಎಂದು.
ಪ್ರಬಂಧವನ್ನು ಮುಂದುವರೆಸುತ್ತ ಕಾರಂತರು ಹೀಗೆನ್ನುತ್ತಾರೆ:
“ಗಾಂಧೀಜಿಯವರನ್ನು ಅವರು ಬೇಡವೆಂದರೂ, ನಾವು ಮಹಾತ್ಮರನ್ನಾಗಿ ಮಾಡಿದೆವು. ನಮಗೆ ಅವರನ್ನು ಅನುಕರಿಸುವ ಇಷ್ಟವಿದ್ದಿಲ್ಲವಾದರೂ, ಅನುಕರಿಸದೆ ಹೋದರೂ, ಅವರನ್ನು ದೇವರನ್ನಾಗಿ ಮಾಡಿದೆವು. ಸಾವಿನ ಬಳಿಕವಂತೂ, ಯಾವ ದೇವರಿಗೂ ದೊರೆಯದ ಸನ್ಮಾನ ಅವರಿಗೆ ಸಲ್ಲುವುದು ನಿಶ್ಚಯ.”
“ಎಂದೋ ಕೊಲ್ಲಬಹುದಾಗಿದ್ದ ಅವರನ್ನು, ಮೊನ್ನೆ ದಿನ, ನಮಸ್ಕರಿಸಿದ ಕೈಯೇ ಕೊಂದಿತು. ಈ ಮಾತು ಅಕ್ಷರಶಃ ನಿಜವಾಗಿರುವಂತೆ ವಿಶಾಲಾರ್ಥದಲ್ಲೂ ನಿಜವಾದುದೇ!” ಎಂಬ ಕಾರಂತರ ಈ ಮಾತು ಮನಮುಟ್ಟುವ ಹಾಗಿದೆ.
ಪ್ರಬಂಧದ ಕೊನೆಯಲ್ಲಿ,
“ಜಗತ್ತಿನ ಕೆಲವೇ ಮಂದಿ ಗಾಂಧಿಯವರನ್ನು ತಿಳಿಯಬಲ್ಲರು; ಅದಕ್ಕಿಂತ ಕಡಿಮೆ ಮಂದಿ ಅವರನ್ನು ಅನುಕರಿಸಬಲ್ಲರು. ಬಹುಮಂದಿ ಮಾಡಬಹುದಾದ ಒಂದೇ ಒಂದು ಕೆಲಸ – ಅವರ ’ಜಯಘೋಷ!’ ನಾವು ಅವರಿಗೆ ಸಲ್ಲಿಸಿದ ಹೂವಿನ ಹಾಸಿಗೆಯೆಲ್ಲ (ಮರಣದ ಬಳಿಕ) ಅದಕ್ಕೇನೆ. ಜಯಘೋಷ, ಸಂತಾಪ ಸೂಚನೆಗಳಿಂದಲೇ ನಾವು ಅವರಿಗೆ ಕೃತಜ್ಞತೆ ಸಲ್ಲಿಸಿ – ಮರೆತು ಬಿಡುವವರು!” ಎಂದು ಕಾರಂತರು ಹೇಳುತ್ತಾರೆ.
ಈ ಮಾತುಗಳು ಈ ಹೊತ್ತಿಗೂ ಸತ್ಯವೆಂದು ತೋರುತ್ತದೆ.
– ಅ
30.01.2018
ಕೃಪೆ:- ಬ್ಯಾಂಗಲೂರಿಜಮ್(Bangaloorism)