ಪ್ರತಿಭೆ
ಕೋಲ್‌ರಿಜ್‌ನ ಈ ಪ್ರತಿಭಾ ತತ್ವದೊಂದಿಗೆ, ಅವನ ಸಮಕಾಲೀನನಾದ ಷೆಲ್ಲಿ ತನ್ನ ಕಾವ್ಯ ಸಮರ್ಥನೆ (A Defence of Poetry) ಯಲ್ಲಿ Imagination ಅನ್ನು ಕುರಿತು ಹೇಳಿದ ಒಂದು ಮಾತನ್ನು ಇಲ್ಲಿ ಪರಿಶೀಲಿಸುವುದು ಅಗತ್ಯವೆಂದು ತೋರುತ್ತದೆ. “The great instrument of moral good is Imagination”
[1] ಎಂಬುದು ಅವನ ಮಾತು. “ನೈತಿಕ ಶ್ರೇಯಸ್ಸಿನ ದೊಡ್ಡ ಉಪಕರಣವೇ ಪ್ರತಿಭೆ.”
ಈ ಹೇಳಿಕೆಯ ಪ್ರಕಾರ ನೈತಿಕ ಒಳ್ಪನ್ನು ಸಾಧಿಸುವ ಹಲವು ವಿಧಾನಗಳಲ್ಲಿ ಪ್ರತಿಭೆ ದೊಡ್ಡದು ಅಥವಾ ಶ್ರೇಷ್ಠವಾದದ್ದು. ಎಂದರೆ ಕಾವ್ಯ ನೀತಿಪ್ರಸಾರದ ಮುಖ್ಯಸಾಧನ ಎಂಬ ನೀತಿವಾದಿಗಳ ಕಾವ್ಯತತ್ವವನ್ನು ಷೆಲ್ಲಿ ಎತ್ತಿ ಹಿಡಿದಿದ್ದಾನೆ ಎಂದು ಮೇಲುನೋಟಕ್ಕೆ ತೋರಬಹುದು. ನೀತಿಯನ್ನು, ತತ್ವವನ್ನು, ಧರ್ಮವನ್ನು ಸಾಧಿಸುವುದರಲ್ಲಿ ಕಾವ್ಯದ ಪಾತ್ರ ಬಹು ದೊಡ್ಡದು ಎಂದು ಜಗತ್ತಿನ ಅನೇಕ ದೊಡ್ಡ ಕವಿಗಳೂ ವಿಮರ್ಶಕರೂ ಸಾರುತ್ತಾ ಬಂದಿದ್ದಾರೆ ಎಂಬುದೂ ನಿಜವೆ. ಆದರೆ ಷೆಲ್ಲಿ ‘moral good’ ಎಂಬ ಪದವನ್ನು ನೀತಿವಾದಿಗಳು ಯಾವ ಅರ್ಥದಲ್ಲಿ ಸಾಮಾನ್ಯವಾಗಿ ಬಳಸುತ್ತಾರೋ ಆ ಅರ್ಥದಲ್ಲಿ ಬಳಸಿಲ್ಲ. ಹಾಗೆಯೇ ‘ನೀತಿ’ ಎಂಬ ಮಾತಿಗೆ ಷೆಲ್ಲಿ ಕೊಡುವ ಅರ್ಥವ್ಯಾಪ್ತಿ ಬೇರೆಯ ರೀತಿಯದು. ಇಲ್ಲಿಯೇ ಷೆಲ್ಲಿಯ ಈ ಸೂತ್ರ ನೀತಿವಾದಿಗಳ ಮತದಿಂದ ತೀರಾ ಬೇರೆಯಾಗಿರುವುದು.
ನೀತಿ ಎಂದರೆ ಸಾಮಾನ್ಯವಾದ ಅರ್ಥದಲ್ಲಿ, ಬದುಕಿನ ನಡೆವಳಿಕೆಯಲ್ಲಿರ ಬಹುದಾದ ಕೆಲವು ವಿಧಿ-ನಿಷೇಧಗಳ ಅರಿವು. ‘ನೈತಿಕ ಒಳ್ಪು’ (moral good) ಎಂದರೆ ನಾವು ದಿನದಿನದ ಬದುಕಿನಲ್ಲಿ ಹೇಗೆ ನಡೆದುಕೊಂಡರೆ, ನಮಗೂ ಇತರರಿಗೂ ಒಳ್ಳೆಯದಾಗುವುದೋ ಅದು. ನೀತಿಯ ದೃಷ್ಟಿಗೆ ಒಳ್ಳೆಯದು-ಕೆಟ್ಟದ್ದು, ಪಾಪ-ಪುಣ್ಯ, ಸ್ವರ್ಗ-ನರಕ, ಧರ್ಮ-ಅಧರ್ಮ-ಇತ್ಯಾದಿ ದ್ವಂದ್ವಗಳ ಅರಿವಿದೆ. ನಾವು ಲೋಕದಲ್ಲಿ ಕಾಣುವ ಜನಗಳ ನಡವಳಿಕೆಯನ್ನು ಕೆಲವು ಸಿದ್ಧ ನೈತಿಕ ಸೂತ್ರಗಳಿಂದ ಅಳೆದು, ಅವರ ನಡವಳಿಕೆ ಒಳ್ಳೆಯದು-ಕೆಟ್ಟದ್ದು ಎಂದು ವಿಂಗಡಿಸಿ ನೋಡಬಲ್ಲೆವೇ ಹೊರತು, ಈ ಎರಡರಾಚೆಗೆ ನಿಂತು ಅಥವಾ ಎರಡರ ಅಂತರಾಳವನ್ನು ಹೊಕ್ಕು ವ್ಯಕ್ತಿಯ ಸ್ವಭಾವವನ್ನು ಸಮಗ್ರವಾಗಿ ನೋಡಲಾರೆವು. ಯಾಕೆಂದರೆ ಒಬ್ಬ ವ್ಯಕ್ತಿಯನ್ನು ನೈತಿಕವಾಗಿ ನಾವು ಅಳೆಯುವಾಗಲೂ ನಮ್ಮ ಇಷ್ಟ-ಅನಿಷ್ಟ ಪ್ರಿಯ-ಅಪ್ರಿಯವಾದ ಎಷ್ಟೋ ವೈಯಕ್ತಿಕ ಪರಿಮಿತಿಗಳೂ ಬೆರೆತುಕೊಂಡಿರುತ್ತವೆ. ಇದರಿಂದಾಗಿ ಸಮಾಜ ಒಪ್ಪಿಕೊಂಡು, ಬಂದ ಕೆಲವು ಕಟ್ಟುಪಾಡುಗಳಿಗೆ ಅನುಸಾರವಾಗಿ ನಡೆಯುವವರನ್ನು ‘ನೀತಿವಂತ’ರೆಂದೂ, ಅದನ್ನು ಮೀರಿ ನಡೆಯುವವರನ್ನು ‘ಅನೀತಿವಂತ’ರೆಂದೂ, ಸುಲಭವಾಗಿ ನಿರ್ಣಯಿಸಿ ಬಿಡುತ್ತೇವೆ. ‘ನೈತಿಕ ಒಳ್ಪು’ ಎಂದರೆ, ಹೇಗೆ ನಡೆದುಕೊಂಡರೆ, ಸಾಮಾಜಿಕವಾದ ಒಳ್ಪು ಅಥವಾ ಶ್ರೇಯಸ್ಸು ಸಾಧಿತವಾಗುವುದೋ ಆ ಬಗೆಯ ನಡವಳಿಕೆ. ಕಾವ್ಯ ಕೂಡ ಇತರ ಮತ ಪ್ರಚಾರಕರ ಹಾಗೆ, ನೀತಿವಾದಿಗಳ ಹಾಗೆ, ಧಾರ್ಮಿಕ ಮುಖಂಡರ ಹಾಗೆ ಈ ಬಗೆಯ ನೀತಿ ಪ್ರಸಾರವನ್ನೂ ಕೈಕೊಳ್ಳುವುದುಂಟು.
ಆದರೆ ಷೆಲ್ಲಿಯ ದೃಷ್ಟಿಗೆ moral good ಎಂದರೆ, ನೀತಿವಾದಿಗಳು ಅಥವಾ ಎಲ್ಲರೂ ತಿಳಿದುಕೊಂಡ ಅರ್ಥದಿಂದ ಭಿನ್ನವಾದದ್ದು ಎಂಬುದೂ ಅವನ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ.
ಮೊದಲನೆಯದಾಗಿ moral ಎಂದರೆ ಷೆಲ್ಲಿಯ, ದೃಷ್ಟಿಗೆ, ಎಲ್ಲರೂ ಯಾವುದನ್ನು ‘ನೀತಿ’ ಎಂದುಕೊಂಡಿದ್ದಾರೋ ಅದಲ್ಲ; ಅವನ ಪ್ರಕಾರ ನೀತಿಯ ಪರಮರಹಸ್ಯ ಪ್ರೀತಿಯೆ. ಪ್ರೀತಿಯಿಲ್ಲದೆ ನಾವು ನಮ್ಮ ಸ್ವಾರ್ಥಮೂಲವಾದ ಅಹಂವ್ಯಕ್ತಿತ್ವದಿಂದ ಆಚೆಗೆ ಹೋಗಿ ಬೇರೊಂದನ್ನು ತಿಳಿಯಲಾರೆವು. ಆದಕಾರಣ ನಿಜವಾದ ಒಳ್ಳೆಯತನ ಅಥವಾ ನೀತಿವಂತಿಕೆ ಎಂದರೆ, ಅನ್ಯಮನೋಧರ್ಮಗಳನ್ನು ಪ್ರವೇಶಿಸಿ, ತಲ್ಲೀನವಾಗಿ ಅನುಕಂಪೆಯಿಂದ ಅನುಭವಿಸುವ ಸಾಮರ್ಥ್ಯ. ಕವಿಯಾದವನು ಮಾಡುವುದು ಇದನ್ನೆ. ಕವಿಯ ವ್ಯಕ್ತಿತ್ವ ಸದಾ ಅನ್ಯಮನೋಧರ್ಮಗಳನ್ನು ಒಳಹೊಕ್ಕು ಸಹಾನುಭೂತಿಯಿಂದ ಬೆರೆಯುತ್ತದೆ. ಹೀಗೆ ಹೊಕ್ಕು ನೋಡಲು ಕವಿಗಿರುವ ಸಾಧನ ಪ್ರತಿಭೆ. ಪ್ರತಿಭೆಯ ಮೂಲಕ ಕವಿ ಅನ್ಯಮನೋಧರ್ಮಗಳನ್ನು ಒಳಹೊಕ್ಕು ಅದರ ಪದರ ಪದರಗಳನ್ನು ಸಹಾನುಭೂತಿಯಿಂದ ಕಂಡು, ಹಾಗೆ ಸಮಗ್ರವಾಗಿ ತಾನು ಕಂಡದ್ದನ್ನು ಅಭಿವ್ಯಕ್ತಪಡಿಸುತ್ತಾನೆ. ಅನ್ಯಮನೋಧರ್ಮಗಳನ್ನು ಸಹಾನುಭೂತಿಯಿಂದ ಒಳಹೊಕ್ಕು ಅನುಭವಿಸುವ ಸಾಮರ್ಥ್ಯವೇ ನಿಜವಾದ ನೈತಿಕ ದೃಷ್ಟಿ. ಈ ನೈತಿಕ ಶ್ರೇಯಸ್ಸಿನ ಉಪಕರಣವೇ ಪ್ರತಿಭೆ.
ನಾವು ಲೋಕದಲ್ಲಿ ಏನನ್ನೂ ಸಮಗ್ರವಾಗಿ ನೋಡಲಾರೆವು. ಕಾರಣ, ನಮ್ಮ ದೃಷ್ಟಿ ಏಕಮುಖವಾದದ್ದು, ಮತ್ತು ಸ್ವಾರ್ಥಮೂಲವಾದದ್ದು. ಆದರೆ ಕವಿಯಾದರೋ, ಅದು ಎಂತಹ ಪಾತ್ರವೇ ಆಗಿರಲಿ, ಅದರ ಅಂತರಂಗವನ್ನು ‘ಪ್ರೀತಿ’ಯಿಂದ ಒಳಹೊಕ್ಕು ನೋಡಿ ಅದನ್ನು ಸಮಗ್ರವಾಗಿ ಚಿತ್ರಿಸಬಲ್ಲನು. ನಿದರ್ಶನಕ್ಕೆ ದುರ್ಯೋಧನನಂತಹ ದುಷ್ಟ ಪಾತ್ರದ ವಿಷಯವನ್ನೇ ತೆಗೆದುಕೊಳ್ಳೋಣ. ಸಾಮಾನ್ಯ ನೀತಿ, ದುರ್ಯೋಧನ ನಂಥವನು ಮಾಡಿದ ಅಕಾರ್ಯಗಳನ್ನು ಪಟ್ಟಿಹಾಕಿ, ಅವನ ನಡವಳಿಕೆಯನ್ನು ಖಂಡಿಸಿ ಅವನು ‘ದುಷ್ಟ’ ಎಂದು ತೀರ್ಪು ಕೊಡುತ್ತದೆ. ಆದರೆ ಕವಿಯಾದವನು ಇಂಥ ‘ದುಷ್ಟ’ನ ಅಂತರಂಗದಲ್ಲಿರುವ ಸ್ನೇಹ, ಕರುಣೆ, ವಾತ್ಸಲ್ಯ, ಛಲ, ದೊಡ್ಡದನ್ನು ಕಂಡರೆ ಗೌರವಿಸುವ ಉದಾರತೆ, ವೀರತೆ ಇತ್ಯಾದಿಗಳನ್ನೂ ಗಮನಿಸಿ ಚಿತ್ರಿಸುವುದರ ಮೂಲಕ, ದುರ್ಯೋಧನನ ಸಮಗ್ರ ವ್ಯಕ್ತಿತ್ವ ಅಥವಾ ನಿಜವಾದ ವ್ಯಕ್ತಿತ್ವ, ನಾವು ಸುಮ್ಮನೆ ತಿಳಿದುಕೊಂಡದ್ದಕ್ಕಿಂತ ಬೇರೆ ಎಂಬಂತೆ, ಆ ಪಾತ್ರದ ಬಗ್ಗೆ ಓದುಗರ ಸಹಾನುಭೂತಿ ಗೌರವಗಳುಕ್ಕುವಂತೆ ಮಾಡುತ್ತಾನೆ. ಹೀಗೆ ಮಾಡುವುದರಿಂದ ಕವಿ ದುರ್ಯೋಧನನ ದೌಷ್ಟ್ಯವನ್ನು ಸಮರ್ಥಿಸುತ್ತಾನೆಂದು ಅರ್ಥವಲ್ಲ; ಅದರ ಬದಲು ಆ ಪಾತ್ರದ ಅಂತರಂಗದ ಇತರ ಒಳ್ಳೆಯ ಗುಣಗಳನ್ನೂ, ಒಳಗಿನ ಸಂಘರ್ಷಗಳನ್ನೂ ಚಿತ್ರಿಸಿ ನಾವು ದ್ವೇಷಿಸುವುದಕ್ಕಿಂತ ಮಿಗಿಲಾಗಿ ಮೆಚ್ಚುವಂಥ ಅಂಶಗಳೂ ಆ ವ್ಯಕ್ತಿಯಲ್ಲಿವೆ ಎನ್ನುವುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾನೆ. ಹೀಗೆ ಕವಿ ಪಾತ್ರದ ಒಳಗನ್ನು ಕಾಣಬೇಕಾದರೆ ಅವನಿಗೆ ಪ್ರತಿಭೆ ಬೇಕು. ಈ ಪ್ರತಿಭೆಗೆ ಮೂಲವಾದ ಪ್ರೀತಿ ಬೇಕು. ಪ್ರೀತಿ ಅಥವಾ ಪ್ರತಿಭೆಯಿಂದ ಕವಿ ಅನ್ಯ ಮನೋಧರ್ಮಗಳನ್ನು ಅತ್ಯಂತ ಸಹಾನುಭೂತಿಯಿಂದ ಒಳಹೊಕ್ಕು ನೋಡಲು ಸಾಧ್ಯವಾಗುತ್ತದೆ. ಹೀಗೆ ನೋಡುವುದೇ ನಿಜವಾದ ನೀತಿ; ಈ ದೃಷ್ಟಿಯಿಂದ ಪ್ರತಿಭೆ ಎನ್ನುವುದು ನೈತಿಕ ಶ್ರೇಯಸ್ಸಿನ ಬಹು ದೊಡ್ಡ ಉಪಕರಣ.[2]
ಷೆಲ್ಲಿಯ ಅಭಿಪ್ರಾಯದಲ್ಲಿ ಪ್ರತಿಭೆಗೆ ಹೆಸರು ಪ್ರೀತಿ. ಯಾರಿಗೆ ಪ್ರೀತಿ ಇಲ್ಲವೋ ಅವನು ಕವಿಯಾಗಲಾರ. ಬದುಕಿನ ಬಗೆಗೆ ತೀವ್ರವಾದ ಪ್ರೀತಿಯಿಲ್ಲದವನು ಕವಿಯೇ ಆಗಲಾರ ಎಂದು ವಿಮರ್ಶಕರೊಬ್ಬರ ಮತ.[3] ಒಳಿತು-ಕೆಟ್ಟದೆಂಬ ಪಕ್ಷಪಾತವಿಲ್ಲದೆ, ಎಲ್ಲದರ ಅಂತರಂಗವನ್ನೂ ಅನುಕಂಪೆಯಿಂದ ಒಳಹೊಕ್ಕು ಬೆರೆಯಬಲ್ಲ, ಅರಿಯಬಲ್ಲ ಮನೋಧರ್ಮವೇ ನಿಜವಾದ ನೈತಿಕ ದೃಷ್ಟಿ. ಹೀಗಾಗಿ ಇಲ್ಲಿ ಪ್ರೀತಿಯೇ ನೀತಿ; ಈ ನೀತಿಯ ಬಹು ದೊಡ್ಡ ಉಪಕರಣವೇ ಪ್ರತಿಭೆ.
೯
ಕವಿಯ ಸಮಸ್ತ ವ್ಯಕ್ತಿತ್ವವು ತನಗೆ ದತ್ತವಾದ ಭಾವಾನುಭವಗಳನ್ನು ಕಾವ್ಯವನ್ನಾಗಿ ಪರಿವರ್ತಿಸುವ ಸೃಜನ ಕ್ರಿಯೆಲ್ಲಿ ತೊಡಗಿದಾಗ, ಕವಿ ಪ್ರತಿಭೆ ಅಭಿವ್ಯಕ್ತಿಯಲ್ಲಿ ಮೈದೋರುವ ರೀತಿಯ ಮೇಲಿನಿಂದ, ಪ್ರತಿಭೆಯ ಹಲವು ಬಗೆಗಳನ್ನು ಹೆಸರಿಸುವ ಸಂಗತಿ ಗಮನಾರ್ಹವಾದುದಾಗಿದೆ. ಎಲ್ಲಿ ಕವಿ ಪ್ರತಿಭೆ ಬದುಕಿನ ಬಹಿರಂಗ ಮುಖಗಳನ್ನು ರೂಪಿಸಿ ತೋರುತ್ತವೆಯೋ ಅದನ್ನು ವಸ್ತುನಿಷ್ಠ ಪ್ರತಿಭೆ (Objective Imagination) ಎಂದೂ, ಎಲ್ಲಿ ಕವಿ ಪ್ರತಿಭೆ ಮಾನಸಿಕ ಹಾಗೂ ಭಾವುಕ ಮೂಡಿಕೆ (Impressions) ಗಳನ್ನು ರೂಪಿಸಿ ತೋರುತ್ತದೆಯೋ ಅದನ್ನು ವ್ಯಕ್ತಿನಿಷ್ಠ ಪ್ರತಿಭೆ (Subjective Imagination) ಎಂದೂ, ಶ್ರೀ ಅರವಿಂದರು ಕರೆಯುತ್ತಾರೆ.[4] ವಾಸ್ತವವಾಗಿ ಈ ವಿಭಜನೆ ಔಪಚಾರಿಕವಾದದ್ದು. ಯಾಕೆಂದರೆ ಕವಿ ಪ್ರತಿಭೆಗೆ ವಸ್ತುವಾಗತಕ್ಕದ್ದು ಒಳಗಿನದೂ ಆಗಬಹುದು, ಹೊರಗಿನದೂ ಆಗಬಹುದು. ತನಗೆ ಎಟುಕಿದಷ್ಟು ಅನುಭವಕ್ಕೆ ಉಚಿತವಾದ ರೂಪನಿರ್ಮಾಣ ಮಾಡುವುದೇ ಪ್ರತಿಭೆಯ ಕಾರ್ಯಗಳಲ್ಲಿ ಮುಖ್ಯವಾದದ್ದು. ಪ್ರತಿಭೆಗೆ ಇರುವ ಈ ರೂಪ ನಿರ್ಮಾಣ ಕ್ರಿಯೆನ್ನು ಕೋಲ್‌ರಿಜ್ ‘ಎಸೆಂಪ್ಲಾಸ್ಟಿಕ್’ ಎಂದು ಕರೆದಿದ್ದಾನೆ. ಕವಿ ಪ್ರತಿಭೆಯ ಈ ರೂಪ ನಿರ್ಮಾಣ ಕ್ರಿಯೆ, ಕೆಲವು ಸಲ ಹೇಳಬೇಕಾದ್ದನ್ನು ಅತ್ಯಂತ ಸ್ಪಷ್ಟವೂ, ಖಚಿತವೂ ಆದ ರೀತಿಯಲ್ಲಿ ಅಭಿವ್ಯಕ್ತಿ ಪಡಿಸುವಂತೆ, ಮತ್ತೆ ಕೆಲವು ಸಲ ಅತ್ಯಂತ ಅಸ್ಪಷ್ಟವೂ, ಅಖಚಿತವೂ, ಆದ ರೀತಿಯಲ್ಲಿಯೂ ಅಭಿವ್ಯಕ್ತಪಡಿಸುತ್ತದೆ. ಈ ವ್ಯತ್ಯಾಸದ ಮೇಲಿನಿಂದ Imagination ಅನ್ನು Plastic Imagination ಮತ್ತು Diffluent Imagination ಎಂಬ ಮಾತನ್ನು ಮೊದಲು ಬಳಸಿದವನು ಫ್ರೆಂಚ್ ಲೇಖಕ ‘ರಿಂಬೊ’ (Rimbaud). ಕವಿ ಪ್ರತಿಭೆಯಲ್ಲಿನ ಗ್ರಹಿಕೆಯ ಸ್ಪಷ್ಟತೆ, ಅಭಿವ್ಯಕ್ತಿಯಲ್ಲಿ ಕಂಡುಬರುವ ವ್ಯವಸ್ಥಿತ ಸೊಗಸು, ‘ಪ್ಲಾಸ್ಟಿಕ್ ಇಮ್ಯಾಜಿನೇಷನ್’ನ ಮುಖ್ಯ ಲಕ್ಷಣ. ಪ್ಲಾಸ್ಟಿಕ್ ಇಮ್ಯಾಜಿನೇಷನ್‌ಗೆ, ಕಾಮನ ಬಿಲ್ಲು ತನ್ನ ಸಪ್ತವರ್ಣಸಮನ್ವಿತವಾದ ಕಾಮನಬಿಲ್ಲಿನಂತೆಯೇ ಕಾಣುತ್ತದೆ. ಮತ್ತು ಕವಿ ಈ ವಸ್ತು ಸೌಂದರ್ಯವನ್ನು ತನ್ನ ಅಭಿವ್ಯಕ್ತಿಯಲ್ಲಿ ನಮ್ಮ ಮನಸ್ಸಿಗೆ ಮುಟ್ಟಿಸುತ್ತಾನೆ. ಆದರೆ, Diffluent Imaginationಗೆ ಕಾಮಬಿಲ್ಲು ಒಂದು ರಹಸ್ಯದಂತೆ, ವ್ಯಕ್ತದಿಂದ ಅವ್ಯಕ್ತದೆಡೆಗೆ ಬೀಸಿದ ಸೇತುವೆಯಂತೆ ತೋರುತ್ತದೆ. ಶಿಲ್ಪಿ, ಚಿತ್ರಕಾರ ಇವರು ಸಾಮಾನ್ಯವಾಗಿ ಖಚಿತಾಕಾರ ನಿರ್ಮಾಣ ಪ್ರತಿಭೆಯ (Plastic Imagination) ಪ್ರಮಾಣವನ್ನು ಹೆಚ್ಚಾಗಿ ಉಳ್ಳವರು ಎಂದೂ, ಅನುಭಾವಿ, ಸಂಗೀತಗಾರ ಇಂಥವರು ಅಸ್ಪಷ್ಟತಾಕಾರ ನಿರ್ಮಾಣ ಪ್ರತಿಭೆಯ (Diffluent Imagination) ಪ್ರಮಾಣವನ್ನು ಹೆಚ್ಚಾಗಿ ಉಳ್ಳವರು ಎಂದೂ ಹೇಳಬಹುದು. ಸಾಹಿತ್ಯಾಭಿವ್ಯಕ್ತಿಯಲ್ಲಿ ಈ ಎರಡನ್ನೂ ಗುರುತಿಸಬಹುದು.[5] ನಿದರ್ಶನಕ್ಕೆ ಕುವೆಂಪು ಮತ್ತು ಬೇಂದ್ರೆ ಅವರ ಕವಿತೆಯಿಂದ ಆಯ್ದ ಎರಡು ತುಣುಕುಗಳನ್ನು ಗಮನಿಸಬಹುದು. ಶರತ್ಕಾಲದ ಸೂರ್ಯೋದಯದಲ್ಲಿ ಕುವೆಂಪು ತಾವು ಕಂಡ ಇಬ್ಬನಿಗಳನ್ನು ವರ್ಣಿಸುವ ರೀತಿ ಹೀಗಿದೆ:-
ಹಚ್ಚನೆ ಪಚ್ಚನೆ ವೇದಿಕೆಯಲ್ಲಿ
ಸಾಸಿರ ಗಟ್ಟಲೆ ಮುತ್ತನು ಚೆಲ್ಲಿ
ರನ್ನದ ಕಿರು ಹಣತೆಗಳಲ್ಲಿ
ಶ್ಯಾಮಲ ತೈಲದಿ ಹೊನ್ನಿನ ಬತ್ತಿ
ಕಾಮನ ಬಿಲ್ಲಿನ ಬೆಂಕಿಯು ಹೊತ್ತಿ
ಸೊಡರುರಿಯುತ್ತಿವೆ ಅಲ್ಲಲ್ಲಿ.
ಎಂಬ ಈ ವರ್ಣನೆಯಲ್ಲಿ ‘ಖಚಿತಾಕಾರ ಪ್ರತಿಭೆ’ಯನ್ನು ಗುರುತಿಸಬಹುದು. ಇಲ್ಲಿ ಕವಿ ಪ್ರತಿಭೆ ವರ್ಣಶಿಲ್ಪಿಯಂತೆ ತಾನು ಕಂಡದ್ದನ್ನು ತಕ್ಕ ಶಬ್ದ ಚಿತ್ರಗಳಲ್ಲಿ ಯಾವ ಅಸ್ಪಷ್ಟತೆಗೂ ಅಸ್ಪದವಿಲ್ಲದಂತೆ ಸ್ಪಷ್ಟ ರಮ್ಯವಾಗಿ ಹಿಡಿದಿರಿಸಿದೆ. ಆದರೆ ಬೇಂದ್ರೆಯವರ ಗಂಗಾವತರಣದ ಒಂದು ಭಾಗದಲ್ಲಿ,
ಸುರಸ್ವಪ್ನವಿದ್ದ
ಪ್ರತಿಬಿಂದ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಂದು ಗಂಗೆಯನ್ನು ವರ್ಣಿಸಲಾಗಿದೆ. ಇಲ್ಲಿ ಮಾತಿನ ಮೂಲಕ ಅಭಿವ್ಯಕ್ತವಾಗುವ ಚಿತ್ರ ಅಸ್ಪಷ್ಟವಾಗಿ, ಅಖಚಿತವಾಗಿ, ‘ಅಸ್ಪಷ್ಟತಾಕಾರ ನಿರ್ಮಾಣ ಪ್ರತಿಭೆ’ಗೆ ನಿದರ್ಶನವಾಗಿದೆ. ಇದೊಂದು ರೀತಿಯಲ್ಲಿ ಮಂಜಿನೊಳಗಣ ಚಿತ್ರದಂತೆ. ಯಾವ ಪ್ರತಿಭೆ ಜಗತ್ತನ್ನು ಸಚಿತ್ರವಾಗಿ, ಸವರ್ಣವಾಗಿ ಗ್ರಹಿಸಿ, ತಕ್ಕ ಶಬ್ದಚಿತ್ರಗಳ ಮೂಲಕ, ವಸ್ತುಗಳನ್ನು ಅವುಗಳ ಕಾಲ-ದೇಶ ಸಂಬಂಧಗಳ ಸಹಿತ ರೂಪಿಸುತ್ತದೆಯೋ, ವಾಸ್ತವವನ್ನು ಅಥವಾ ಅನುಭವಗಳನ್ನು ಒಂದು ರಹಸ್ಯವೆಂಬಂತೆ ರೂಪಿಸುತ್ತದೋ ಅದು Diffluent Imagination.[6] ಸಮರ್ಥನಾದ ಕವಿಯ ಪ್ರತಿಭೆ ಈ ಎರಡೂ ರೀತಿಗಳಲ್ಲಿ ಕೆಲಸ ಮಾಡುತ್ತದೆ.
ಈಗ ಪ್ರಸ್ತಾಪಿಸಿದ Diffluent Imagination, ಮುಖ್ಯವಾಗಿ, ವಸ್ತುಸತ್ಯವನ್ನು ಯಥಾರ್ಥವಾಗಿ ಚಿತ್ರಿಸುವುದಕ್ಕಿಂತ, ಅದರೊಳಗಿನ ರಹಸ್ಯವನ್ನು ಪ್ರತಿಮಿಸುತ್ತದೆ ಎಂದು ವರ್ಣಿತವಾಗಿದೆ. ಇದೇ ರೀತಿಯಲ್ಲಿ ಅನುಭಾವದ ವಿಸ್ತಾರಗಳನ್ನು, ಅನುಭಾವಿಕ ಸತ್ಯಗಳನ್ನು ಪ್ರತೀಕಗಳ ಮೂಲಕ ಅಭಿವ್ಯಕ್ತಪಡಿಸುವ ಕ್ರಿಯೆಯನ್ನು Symbolic Imagination ಎಂದು ಗುರುತಿಸಲಾಗಿದೆ. ‘ಪ್ರತೀಕಾತ್ಮಕ ಪ್ರತಿಭೆ’ ಮುಖ್ಯವಾಗಿ ಕೆಲಸ ಮಾಡುವುದು ದೃಷ್ಟಾಂತ (Analogy)ಗಳ ಮೂಲಕ. ಅಜ್ಞಾತವಾದದ್ದನ್ನು ಜ್ಞಾತವನ್ನಾಗಿಸುವ, ಅನುಭಾವಿಕ ಸತ್ಯಗಳನ್ನು ಮೂರ್ತೀಕರಿಸುವ ಪ್ರಯತ್ನ ಇಲ್ಲಿ ಪ್ರಧಾನವಾದದ್ದು. ವೇದಗಳಲ್ಲಿ ಈ ವಿಶ್ವವನ್ನು ‘ಬ್ರಹ್ಮಾಂಡ’ ಎಂಬ ಪ್ರತೀಕದಲ್ಲಿ ಹೇಳಲಾಗಿದೆ. ಇಲ್ಲಿ ‘ಬ್ರಹ್ಮಾಂಡ ಎನ್ನುವುದು ಜಗತ್ತಿನ ಕಲ್ಪನೆಗೆ ಒಂದು ವಸ್ತು ಪ್ರತಿರೂಪ, (Objective Correlative).[7] ಹಾಗೆ ನೋಡಿದರೆ ಪ್ರತಿಭೆಯ ಕಾರ್ಯವೇ ಮೂಲತಃ ಪ್ರತೀಕಗಳನ್ನು ನಿರ್ಮಾಣ ಮಾಡುವುದು. ಅದು ವರ್ಣನೆ, ನಿರೂಪಣೆ, ಸಂಕೇತ-ಪ್ರತೀಕ-ಪ್ರತಿಮೆ ಇತ್ಯಾದಿಗಳ ಮೂಲಕ ಅನುಭವವನ್ನು ಕಟ್ಟಿ ತೋರಿಸುತ್ತದೆ. ‘ಮುಖ ಕಮಲ’ ಎಂಬಂಥ ಸವಕಲು ಅಲಂಕಾರ ಕೂಡಾ, ಕವಿ ಕಂಡ ಮುಖದ ಸೌಂದರ್ಯಾನುಭವದ ಅಭಿವ್ಯಕ್ತಿಗೆ ನಿರ್ಮಿತವಾದ ಒಂದು ಪ್ರತೀಕವೇ. ಈ ಬಗೆಯ ಪ್ರತೀಕಗಳಿಂದ ಹಿಡಿದು; ಧ್ವನಿಪೂರ್ಣವಾದ ಪ್ರತಿಮಾ ನಿರ್ಮಿತಿಯವರೆಗೂ ಕ್ರಿಯಾಭಿಮುಖವಾಗಿರುವುದು ಕವಿ ಪ್ರತಿಭೆಯೇ. ‘ಅಭಿವ್ಯಕ್ತಿಯಲ್ಲಿ ಕಂಡುಬರುವ ವೈಚಿತ್ರ್ಯಗಳೇನಿವೆಯೋ, ಅವೆಲ್ಲವೂ ಕವಿ ಪ್ರತಿಭೆಯಿಂದ ಉದ್ಭವವಾದವುಗಳೇ’ (ಯತ್ಕಿಂಚನಾಪಿ ವೈಚಿತ್ರ ಂ ತತ್ ಸರ್ವಂ ಪ್ರತಿಭೋದ್ಭವಂ) ಎಂಬ ಕುಂತಕನ ಮಾತು ಪ್ರತಿಭೆಯ ಪಾರಮ್ಯವನ್ನು ಸೊಗಸಾಗಿ ವರ್ಣಿಸುತ್ತದೆ.
ಕವಿ ಪ್ರತಿಭೆ, ಅನುಭವಗಳನ್ನು ಮೂರ್ತಗೊಳಿಸುವುದು ಭಾಷೆಯ ಮೂಲಕವೆ. ಹೀಗೆ ಭಾಷೆಯೊಂದನ್ನು ಕವಿ ತನ್ನ ಅಭಿವ್ಯಕ್ತಿಗೆ ಬಳಸುವಾಗ, ಕವಿ ಆ ಭಾಷೆಯಲ್ಲಿನ ಪದಗಳಿಗೆ ಹಾಗೂ ಅವು ಹೊರಡಿಸುವ ಅರ್ಥಗಳಿಗೆ ಹೊಸತೊಂದು ಜೀವಂತಿಕೆ ತುಂಬಿಕೊಳ್ಳುವ ಹಾಗೆ, ಭಾಷೆಯನ್ನೂ ಒಂದು ಅರ್ಥದಲ್ಲಿ ಪುನಃ ಸೃಷ್ಟಿಸುತ್ತಾನೆ. ಹೀಗೆ ಭಾಷೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಟಿ.ಎಸ್. ಇಲಿಯಟ್ Auditory Imagination (ಶ್ರಾವಣಪ್ರತಿಭೆ) ಎಂದು ಕರೆದಿದ್ದಾನೆ. ಒಂದು ಭಾಷೆಯ ಸಂದರ್ಭದಲ್ಲಿ ಕೆಲಸ ಮಾಡುವ ಕವಿಗೆ ಆ ಭಾಷೆಯ ಪರಂಪರೆ ಅಥವಾ ಚರಿತ್ರೆ ಚೆನ್ನಾಗಿ ಗೊತ್ತಿರಬೇಕು. ಕೇವಲ ಅಲೋಚನೆ ಅಥವಾ ಭಾವನೆಗಳ ಸ್ತರದಿಂದ, ಪ್ರಜ್ಞೆಯ ತಲಾತಲಕ್ಕೆ ಇಳಿದು ತಾನು ಬಳಸುವ ಒಂದೊಂದು ಮಾತಿಗೂ ಇರುವ ಅರ್ಥ-ನಾದ-ಲಯಗಳನ್ನು ಗ್ರಹಿಸಿ, ತನ್ನ ವರ್ತಮಾನದ ಭಾಷೆಗೆ ಹೊಸ ನುಡಿಗಟ್ಟನ್ನೂ ಜೀವಂತಿಕೆಯನ್ನೂ ತಂದು ಕೊಡಬೇಕು. ಹೀಗೆ ಭಾಷೆಯ ಪಾರಂಪರಿಕ ಸ್ತರಗಳಿಗೆ ಇಳಿದು, ಅದರ ಬೇರುಗಳ ತನಕವೂ ಹೋಗಿ, ಅತ್ಯಂತ ಪ್ರಾಚೀನವೂ ಹಾಗೂ ವಿಸ್ಕೃತಿಯ ತಲಾತಲದಲ್ಲಿರುವಂಥದೂ ಆದ ಅರ್ಥವನ್ನು, ತನ್ನ ವರ್ತಮಾನದ ಭಾಷೆಗೆ ತುಂಬಿ, ಅದನ್ನು ಸಚೇತನವನ್ನಾಗಿಸುವ ಕವಿಪ್ರತಿಭೆಯೇ ‘ಆಡಿಟರಿ ಇಮ್ಯಾಜಿನೇಷನ್.’[8]
ಭಾರತೀಯ ಕಾವ್ಯಮೀಮಾಂಸೆಯ ಸಂದರ್ಭದಲ್ಲಿ ರಾಜಶೇಖರನೆಂಬ ಆಲಂಕಾರಿಕನು, ಪ್ರತಿಭೆಯನ್ನು ಕುರಿತು ಹೇಳುವ ವಿಶಿಷ್ಟವಾದ ಮಾತೆಂದರೆ, ಪ್ರತಿಭೆ ಕವಿಯ ಕಾವ್ಯನಿರ್ಮಾಣಕ್ಕೆ ಹೇಗೆ ಅಗತ್ಯವೋ, ಹಾಗೆಯೇ, ಕವಿ ಕೃತಿಯನ್ನು ಆಸ್ವಾದಿಸುವ ಸಹೃದಯನಿಗೂ ಅಗತ್ಯ ಎನ್ನುವುದು. ಅವನ ಪ್ರಕಾರ ಪ್ರತಿಭೆ ಎರಡು ರೀತಿಯದು. ಒಂದು ಕಾರಯಿತ್ರೀ ಪ್ರತಿಭೆ, ಮತ್ತೊಂದು ಭಾವಯಿತ್ರೀ ಪ್ರತಿಭೆ. ಕಾರಯಿತ್ರೀ ಪ್ರತಿಭೆ ಕಾವ್ಯನಿರ್ಮಾಣ ಸಮರ್ಥವಾದ ಕವಿ ಪ್ರತಿಭೆ; ಭಾವಯಿತ್ರೀ ಪ್ರತಿಭೆ ಕವಿಕೃತಿಯನ್ನು ತನ್ನಲ್ಲಿ ಪುನಃ ಸೃಷ್ಟಿಸಿಕೊಳ್ಳುವ ಸಹೃದಯನ ಪ್ರತಿಭೆ. ಕಾವ್ಯನಿರ್ಮಿತಿ ಮಾತ್ರವಲ್ಲ; ಕಾವ್ಯಾಸ್ವಾದವೂ ಕೂಡ ಒಂದು ಸೃಜನ ಪ್ರಕ್ರಿಯೆ ಎಂಬ ಸಂಗತಿಯನ್ನು ಹತ್ತನೆಯ ಶತಮಾನದಷ್ಟು ಹಿಂದೆಯೇ ರಾಜಶೇಖರನು ಹೇಳಿದ್ದು ವಿಶೇಷದ ಸಂಗತಿಯಾಗಿದೆ.
೧೦
ಪೂರ್ವ ಹಾಗೂ ಪಶ್ಚಿಮದ ಅಭಿಪ್ರಾಯಗಳ ಪ್ರಕಾರ ಪ್ರತಿಭೆ ಎನ್ನುವುದು, ಕವಿಯಾದವನು ತನ್ನ ಅಂತರಂಗದ ತೀವ್ರಾನುಭವಗಳಿಗೆ ಭಾಷೆಯ ಮಾಧ್ಯಮದಲ್ಲಿ ರೂಪನೀಡುವ ಸಮಗ್ರ ಕ್ರಿಯೆಯನ್ನು ಸೂಚಿಸುತ್ತದೆ. ಪ್ರತಿಭಾಕ್ರಿಯೆ ಒಂದು ವಿಶೇಷವಾದ ಮಾನಸಿಕ ಸ್ಥಿತಿ. “ಕವಿಯ ವ್ಯಕ್ತಿತ್ವ ಸಮಸ್ತವೂ, ತನ್ನೆಲ್ಲ ಶಕ್ತಿ ಸಾಮರ್ಥ್ಯಗಳೊಂದಿಗೆ ಕೇಂದ್ರ ಬಿಂದುವೊಂದಕ್ಕೆ ಬಂದು ಕ್ರಿಯಾಶೀಲವಾಗುವ ವಿಧಾನ ಅದು.”[9] ಅಲ್ಲಿ ಕಾವ್ಯಾನುಭವಗಳನ್ನು ಹೊಸಹೊಸದಾಗಿ ಕಾಣುವ (ನವ ನವ ಉನ್ಮೇಷ ಶಾಲಿನಿ) ಮತ್ತು ಕಂಡದ್ದನ್ನು ಹೊಸ ಹೊಸದಾಗಿ ಕಟ್ಟುವ (ನವ ನವ ಉಲ್ಲೇಖ ಶಾಲಿನಿ) ಕ್ರಿಯೆ ಸುಗಮವಾಗಿ ನಡೆಯುತ್ತದೆ. ಆದರೆ ಹೀಗೆ ಭಾವ ಭಾವನೆಗಳಿಗೆ ರೂಪನಿರ್ಮಾಣ ಕ್ರಿಯೆ ನಡೆಯುವಾಗ ಕೇವಲ ಪ್ರತಿಭೆಯೊಂದೇ ಸಾಲದು. ಜತೆಗೆ ಶಾಸ್ತ್ರ ಸಂಸ್ಕಾರ ಹಾಗೂ ವಿಮರ್ಶನ ಪ್ರಜ್ಞೆಯ ನೆರವೂ ಬೇಕು ಎನ್ನುವ ಅಂಶವನ್ನು ನಮ್ಮ ಆಲಂಕಾರಿಕರು ಒತ್ತಿಹೇಳಿದ್ದಾರೆ. ಕೇವಲ ಶಾಸ್ತ್ರಬುದ್ಧಿಯಿಂದ ಕಲಾತ್ಮಕ ಸೃಜನೆ ಸಾಧ್ಯವಿಲ್ಲ; ಅಥವಾ ಶಾಸ್ತ್ರಬಲವಿಲ್ಲದ ಕೇವಲ ಪ್ರತಿಭೆಯೊಂದೇ ಕಾವ್ಯನಿರ್ಮಿತಿಗೆ ಸಾಕಾಗುವುದಿಲ್ಲ. ಮತ್ತು ಈ ಪ್ರತಿಭೆ ಎನ್ನುವುದು ಶಾಸ್ತ್ರಗಳಂತೆ ಪ್ರಯತ್ನಪೂರ್ವಕವಾಗಿ ಸಂಪಾದಿಸಿಕೊಳ್ಳತಕ್ಕದ್ದಲ್ಲ. ಭಾಮಹನು ಹೇಳುವಂತೆ “ಮಂದಬುದ್ಧಿಗಳು ಬೇಕಾದರೂ ಗುರುಗಳ ಉಪದೇಶದಿಂದ ಶಾಸ್ತ್ರವನ್ನು ಅಭ್ಯಾಸ ಮಾಡಬಹುದು. ಆದರೆ ಕಾವ್ಯ ಹುಟ್ಟುವುದು ಎಲ್ಲೋ ಲಕ್ಷಕ್ಕೊಬ್ಬ ಪ್ರತಿಭಾಶಾಲಿಯಿಂದ ಮಾತ್ರ.”[10] ಪ್ರತಿಭೆ ಎನ್ನುವುದು ಹೇಗೋ ಕೆಲವರಿಗೆ ಸಹಜವಾಗಿ ಬಂದಿರುತ್ತದೆ. ಎಲ್ಲರಲ್ಲಿಯೂ ಈ ಪ್ರಮಾಣದಲ್ಲಿ ಕಾಣದ, ಎಲ್ಲೋ ಕೆಲವರಲ್ಲಿ ಮಾತ್ರ ವಿಶೇಷ ರೀತಿಯಲ್ಲಿ ಕಾಣಿಸಿಕೊಳ್ಳುವ ಈ ಕಾವ್ಯಕಲಾ ನಿರ್ಮಾಣ ಸಾಮರ್ಥ್ಯ ರೂಪವಾದ ಪ್ರತಿಭೆಯನ್ನು ಕುರಿತು, ಅದರ ಬಗ್ಗೆ ವಿಶೇಷವಾದ ಪೂಜ್ಯತೆಯನ್ನೂ, ಅಲೌಕಿಕ ಕಾರಣಗಳನ್ನೂ ಕಲ್ಪಿಸುವ ಪ್ರವೃತ್ತಿಗಳು ಕಾವ್ಯಮೀಮಾಂಸೆಯ ಹೆಸರಿನಲ್ಲಿ ರೂಢಿಯಾಗಿವೆ. ಅದೊಂದು ದೈವೀಕೃಪೆ ಎಂದೋ, ಜನ್ಮಾಂತರ ಸಂಸ್ಕಾರ ವಿಶೇಷವೆಂದೋ, ಅದರಲ್ಲಿ ಏನೋ ಒಂದು ರಹಸ್ಯಮಯತೆ ಇದೆ ಎಂದೋ ಬಹುಮಂದಿ ಪ್ರತಿಭೆಯನ್ನು ಕುರಿತು ಮಾತನಾಡಿದ್ದಾರೆ. ಈ ಪ್ರವೃತ್ತಿಯನ್ನು ಖಂಡಿಸಲೆಂದೋ ಏನೋ, ಪಾಶ್ಚಾತ್ಯ ವಿಮರ್ಶಕನಾದ ಐ.ಎ. ರಿಚರ್ಡ್ಸ್ “ಪ್ರತಿಭೆಯಲ್ಲಿ ಅಂತಹ ವಿಲಕ್ಷಣ ರಹಸ್ಯತಮವಾದದ್ದೇನೂ ಇಲ್ಲ; ಮಾನವಮತಿಯ ಇತರ ವ್ಯಾಪಾರಗಳಿಗೆ ಇಲ್ಲದ ಅದ್ಭುತವೇನೂ ಅದಕ್ಕಿಲ್ಲ. ಆದರೂ ಅನೇಕ ವೇಳೆ ನಾವು ಬಹು ಎಚ್ಚರಿಕೆಯಿಂದ ಕಾಣಬೇಕಾದ ರಹಸ್ಯವೆಂಬಂತೆ ಅದು ಪರಿಗಣಿತವಾಗಿದೆ.”[11] -ಎನ್ನುತ್ತಾನೆ. ಈ ಅಭಿಪ್ರಾಯವನ್ನು ನಾವು ಪ್ರತಿಭೆಗೆ ಅಥವಾ ಕಾವ್ಯಕ್ಕೆ ವಿರೋಧಿಯಾದದ್ದೆಂದು ಗ್ರಹಿಸುವ ಕಾರಣವಿಲ್ಲ; ಪ್ರತಿಭೆಯ ವಿಚಾರದಲ್ಲಿ ಅನವಶ್ಯಕ ಸಂಭ್ರಾಂತಿಯಿಂದ ಉಜ್ವಲವಾಗಿ ಮಾತನಾಡುವ ಪ್ರವೃತ್ತಿಗೆ ಮಾತ್ರ ವಿರೋಧವಾಗಿದೆ, ಅಷ್ಟೆ. ಆದರೂ ರಿಚರ್ಡ್ಸ್‌ನ ಹೇಳಿಕೆ ನಾವು ಊಹಿಸಿದಷ್ಟನ್ನು ಸಾಧಿಸುವುದರ ಜೊತೆಗೆ, ವಿಮರ್ಶೆಯ ವೈಜ್ಞಾನಿಕ ಚಿಕಿತ್ಸಕ ಬುದ್ಧಿಯ ನೆಪದಲ್ಲಿ, ಮತ್ತೊಂದು ಅತಿರೇಕಕ್ಕೆ ಹೋಗುವ ಅಪಾಯದ ಹಾದಿಯಲ್ಲಿದೆಯೇನೊ ಎಂಬ ಸಂದೇಹಕ್ಕೂ ಆಸ್ಪದವಾಗಿದೆ. ಪ್ರತಿಭಾಶಕ್ತಿಯ ಬಗೆಗೆ ಅಲೌಕಿಕಾಂಶಗಳನ್ನು ಆರೋಪಿಸಿ ಆದರ್ಶಮಯವಾಗಿ ಮಾತನಾಡುವವರು ಒಂದು ಅತಿರೇಕದ ಅಂಚಿಗೆ ಹೋದರೆ, ಐ.ಎ. ರಿಚರ್ಡ್ಸ್ ತಾಳುವ ನಿಲುವು, ಪ್ರತಿಭೆಯಲ್ಲಿ ಅಂತಹ ವಿಲಕ್ಷಣಮಯತೆ ಯಾಗಲಿ, ಅಸಾಧಾರಣತೆಯಾಗಲಿ ಇಲ್ಲ ಎಂದು ಕಾವ್ಯನಿರ್ಮಿತಿಯ ವಿಶೇಷತೆಯನ್ನೇ ಅಲ್ಲಗಳೆದು, ಮತ್ತೊಂದು ಅತಿರೇಕದ ಅಂಚಿಗೆ ಇಳಿಯುತ್ತದೆ. ಪ್ರತಿಭೆಯ ಬಗೆಗೆ ಈ ಮಾತನ್ನು ಹೇಳಿದ್ದು ಮಾತ್ರ ಅಲ್ಲ, ಈ ಪ್ರತಿಭಾನಿರ್ಮಿತಿಯಾದ ಕಾವ್ಯದಿಂದ ಒದಗುವ ‘ರಸಾನುಭವ’ದ (Aesthetic Experience) ವಿಚಾರದಲ್ಲೂ ಕೂಡ, ಇದೇ ಬಗೆಯ ಧೋರಣೆಯನ್ನು ಪ್ರಕಟಿಸಿ, ಕಾವ್ಯ-ಕಲೆಗಳಿಂದ ಒದಗುವ ರಸಾನುಭವ ಎನ್ನುವುದು ಕೂಡಾ ಅಂತಹ ಅನುಪಮವಾದ ಅಂಶಗಳಿಂದ ಕೂಡಿದುದಲ್ಲ, ದೈನಂದಿನ ಸರಳ ಸಾಧಾರಣ ಅನುಭವಗಳಲ್ಲಿ ಇಲ್ಲದ ವಿಶೇಷತೆಯೇನೂ ಇದಕ್ಕಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾನೆ.[12] ಇಷ್ಟು ಸಾಲದೆಂಬಂತೆ “ಪ್ರತಿಭಾ ನಿರ್ಮಿತಿಯಾದ ಕಾವ್ಯಲೋಕ ಯಾವ ರೀತಿಯಲ್ಲಿಯೂ ನಮ್ಮ ವಾಸ್ತವಲೋಕದಿಂದ ಬೇರೆಯಾದ ಅಸ್ತಿತ್ವವನ್ನಾಗಲಿ ವಿಶೇಷ ನಿಯಮಗಳನ್ನಾಗಲಿ, ಅನ್ಯಲೋಕ ವಿಲಕ್ಷಣತೆಗಳನ್ನಾಗಲಿ ಪಡೆದಿಲ್ಲ”[13] ಎಂಬ ಸಿದ್ಧಾಂತದಲ್ಲಿ ಅವನ ವಾದ ಪರ್ಯವಸಾನವಾಗುತ್ತದೆ. ಅಂತೂ ಕಾವ್ಯನಿರ್ಮಾಣ ಸಾಮರ್ಥ್ಯವಾದ ಪ್ರತಿಭೆ, ಪ್ರತಿಭಾ ನಿರ್ಮಿತವಾದ ಕಾವ್ಯಜಗತ್ತು ಮತ್ತು ಈ ಕಾವ್ಯ ನೀಡುವ ಅನುಭವ – ಈ ಮೂರರಲ್ಲಿಯೂ, ಇದುವರೆಗು ಅನೇಕ ವಿಮರ್ಶಕರು ತಿಳಿದುಕೊಂಡಂತೆ, ಅಂಥ ಯಾವ ವಿಲಕ್ಷಣತೆಯಾಗಲಿ, ರಹಸ್ಯಮಯತೆಯಾಗಲಿ ಇಲ್ಲ ಎನ್ನುವುದೇ ರಿಚರ್ಡ್ಸ್‌ನ ಸಿದ್ಧಾಂತ. ಇಲ್ಲಿ ಪ್ರತಿಭೆಯನ್ನು ಕುರಿತು ಅಲ್ಲದೆ, ಅವನ ಇನ್ನೆರಡು ಹೇಳಿಕೆಗಳನ್ನು ವಿಮರ್ಶಿಸುವ ಅಗತ್ಯವಿಲ್ಲ. ಈ ಎರಡಕ್ಕೂ ನೆಲೆಗಟ್ಟಾಗಿರುವ ಪ್ರತಿಭೆಯನ್ನು ಕುರಿತು ಅವನು ಹೇಳಿರುವ ಮಾತುಗಳನ್ನು ಪರಿಶೀಲಿಸೋಣ: ಪ್ರತಿಭೆಯಲ್ಲಿ ಅಂತಹ ವಿಲಕ್ಷಣತೆಯೇನೂ -ಇಲ್ಲ -ಎನ್ನುವುದು ಕಾವ್ಯಕ್ಕೆ ಅನ್ಯಾಯ ಮಾಡುವ ಮಾತು. ಯಾಕೆಂದರೆ ಪ್ರತಿಭೆಗೆ, ದೈನಂದಿನ ಸರಳ ಸಾಧಾರಣ ಅನುಭವಗಳಲ್ಲಿ ಇಲ್ಲದ, ದೈನಂದಿನ ಭಾಷೆಯಲ್ಲಿ ಕಾಣದ ಒಂದು ವಿಶೇಷತೆಯನ್ನು ನಿರ್ಮಾಣ ಮಾಡುವ ಸಾಮರ್ಥ್ಯವಿದೆ ಎನ್ನುವುದನ್ನು ಮತ್ತೆ ನಾವು ಸಮರ್ಥಿಸುವ ಅಗತ್ಯವಿಲ್ಲ. “ಅದು ಕೂಡ ಮನಸ್ಸಿನ ಒಂದು ಶಕ್ತಿ: ಮನಸ್ಸಿನ ಇತರ ಕಾರ್ಯ ವಿಧಾನಗಳಲ್ಲಿ ಇಲ್ಲದ ಅದ್ಭುತವೇನೂ ಅದರಲ್ಲಿ ಇಲ್ಲ” -ಎನ್ನುವ ಮಾತಿನಲ್ಲಿ ನಾವು ಒಪ್ಪಬಹುದಾದದ್ದು, “ಅದು ಕೂಡಾ ಮನಸ್ಸಿನ ಒಂದು ಶಕ್ತಿ” ಎಂಬಷ್ಟನ್ನು ಮಾತ್ರ. ಮನಸ್ಸಿನ ರೀತಿ ನೀತಿಗಳೆಲ್ಲಾ ಅದ್ಭುತವೇ; ಅಂಥದರಲ್ಲಿ ಪ್ರತಿಭೆಯ ಕಾರ್ಯವೂ ಒಂದು ಎನ್ನುವುದಾದರೆ, ಮನಸ್ಸಿನ ಯಾವೆಲ್ಲ ವ್ಯಾಪಾರಗಳಿಗೂ, ನಾವು ಯಾವುದನ್ನು ‘ಪ್ರತಿಭೆ’ ಎಂಬ ವಿಶೇಷವಾದ ಒಂದು ‘ಸಾಮರ್ಥ್ಯ’ವನ್ನು ಕುರಿತು ಹೇಳುತ್ತೇವೋ ಆ ಒಂದು ಸಾಮರ್ಥ್ಯ ಯಾಕೆ ಇಲ್ಲ ಎಂದು ಪ್ರಶ್ನೆ ಹಾಕಬೇಕಾಗುತ್ತದೆ. ನಿಜ, ಪ್ರತಿಭೆ ಕೂಡ ಮನಸ್ಸಿನ ಇತರ ಕ್ರಿಯೆಗಳಂತೆ ಒಂದು ಕ್ರಿಯೆಯೇ. ಆದರೆ ಯಾವ ಮನಸ್ಸಿನ, ಎಂಥ ಮನಸ್ಸಿನ ಎಂಬ ಅಂಶಗಳನ್ನು ತಣ್ಣಗೆ ನಿರ್ಲಕ್ಷಿಸಿ, ಪ್ರತಿಭೆಯ ವಿಷಯವನ್ನು ಮಾತನಾಡುವುದು ಸರಿಯಾದುದಲ್ಲ. ಅದು ಯಾವೆಲ್ಲ ಮನಸ್ಸಿನ, ಹಾಗೂ ಯಾರೆಲ್ಲರ ಪ್ರಯತ್ನದ ಪರಿಣಾಮವಾಗಿದ್ದರೆ ಆ ಮಾತು ಬೇರೆ. ಆದರೆ ನಿಜವಾದ ಸಂಗತಿಯೆ ಬೇರೆ. “ಪ್ರತಿಭೆಯ ಶಕ್ತಿ-ಸತ್ವಗಳು ನಾವು ಬಯಸಿದಂತೆ ಅಥವಾ ಇಚ್ಛಿಸಿದಂತೆ ನಡೆಯತಕ್ಕವಲ್ಲ; ಅವು ಪುಟಿಯುವ ಚಿಲುಮೆಗಳು, ಯಂತ್ರಗಳಲ್ಲ.[14]
[1] English Critical Essays (19th Century) Ed. Edmund D. Jones, p. 112. (A Defence of Poetry : Shelly).
[2] English Critical Essays : Ed. Edmund D. Jones (19th Century, p. 122 (A Defence of Poetry : Shelly) : the Great Secret of morals is love; or going out of our nature, and an identification of ourselves with the beautiful which exists in thought, action, or person, not our own. A man to be greatly good must imagine intensely and comprehensively; he must put himself in the place of another and many others; the pains and pleasures of his species must become his own. The great instrument of moral good is imagination : and poetry administers to the effect by acting upon the cause.
[3] “A man cannot, I repeat, know a thing unless he loves it. Poets are like the rest of us, but they love things more than we do, and therefore know them better and approach more nearly to the heart of their mystery – Aubrey de selincourt: on Reading Poetry p. 31.
[4] Sri Aurobindo; The Future poetry, p. 24-25.
[5] June E. Downey : Creative Imagination. p. 17.
[6] ಅಲ್ಲೇ, p. 18.
[7] B.B. Paliwal : Symbolic Imagination, and Dhvani, p. 169.
[8] F.O. Mathiessen : The Achievement of T.S. Eliot, p. 81, 82.
[9] Coleridge : BiographiaLiteraria, Vol. II, p. 12
[10] ಭಾಮಹ : ಕಾವ್ಯಾಲಂಕಾರ, (ಡಾ. ಕೆ. ಕೃಷ್ಣಮೂರ್ತಿಯವರ ಅನುವಾದ) ಪು. ೧-೫.
[11] I.A. Richards : Principles of Literary Criticism, p. 191.
[12] I.A. Richards : Principles of Literary Criticism, p. 78.
[13] ಅಲ್ಲೇ, ಪು. ೧೬
[14] D.J. James : Scepticism and poetry, p. 155.