ಶನಿವಾರ, ಜೂನ್ 26, 2021

ರೂಪನಿಷ್ಠವಿಮರ್ಶೆ

ರೂಪನಿಷ್ಠವಿಮರ್ಶೆ

ಸಾಹಿತ್ಯ ವಿಮರ್ಶೆಯನ್ನು ವ್ಯಕ್ತಿನಿರಪೇಕ್ಷ ಹಾಗೂ ವಸ್ತುನಿಷ್ಠವಾದ ವೈಜ್ಞಾನಿಕ ಚಿಂತನೆಯ ಸಮೀಪಕ್ಕೆ ಒಯ್ಯಲು ಸಾಧ್ಯವೇ? ಸಾಹಿತ್ಯಿಕ ಕೃತಿಗಳ ಅನನ್ಯತೆಯನ್ನು ಹೇಗೆ, ಯಾವ ಯಾವ ಮಾರ್ಗಗಳಿಂದ ಗುರುತಿಸಬಹುದು? ಸಾಹಿತ್ಯಿಕ ವಿಮರ್ಶಕನ ಜವಾಬ್ದಾರಿಗಳೇನು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಪಾಶ್ಚಾತ್ಯ ಕಾವ್ಯಮೀಮಾಂಸೆ ರೆನಸೆನ್ಸ್ ಯುಗದಿಂದಲೂ ಹುಡುಕುತ್ತಲೇ ಇದೆ; ಮತ್ತು ಕಾಲಕಾಲಕ್ಕೆ ಭಿನ್ನ ಭಿನ್ನ ಉತ್ತರಗಳನ್ನು ಕೊಡುತ್ತಾ ಬಂದಿದೆ : ಪ್ರಕಾರ ವಿಮರ್ಶೆ, ಕರ್ತೃನಿಷ್ಠ ವಿಮರ್ಶೆ, ಚಾರಿತ್ರಿಕ ವಿಮರ್ಶೆ ಇತ್ಯಾದಿ. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಚಾರಿತ್ರಿಕ ವಿಮರ್ಶೆ ಕೊನೆಗೂ ವೈಜ್ಞಾನಿಕ ಮಾರ್ಗದ ಆವಿಷ್ಕಾರವಾಯಿತು ಎಂದು ಸ್ವಾಗತಿಸಲ್ಪಟ್ಟಿತು.

ವಿಮರ್ಶೆಗೆ ವೈಜ್ಞಾನಿಕ ಶಿಸ್ತನ್ನು ಮತ್ತು ವ್ಯಕ್ತಿನಿರಪೇಕ್ಷ ಗುಣವನ್ನು ಕೊಡಲು ಪಾಶ್ಚಾತ್ಯ ಕಾವ್ಯಮೀಮಾಂಸೆ ನಡೆಸಿರುವ ಇಂತಹ ಅನವರತ ಪ್ರಯತ್ನದಲ್ಲಿ ಅತ್ಯಂತ ಮಹತ್ವದ ಘಟ್ಟವೆಂದರೆ ೨೦ನೆಯ ಶತಮಾನದ ಪೂರ್ವಾರ್ಧದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಸಿದ್ಧಿಗೆ ಬಂದ, ಮತ್ತು ಅನೇಕ ಅಪೂರ್ವ ಒಳನೋಟಗಳನ್ನು ಹಾಗೂ ಆಯಾಮಗಳನ್ನು ಸಾಹಿತ್ಯ ಮತ್ತು ವಿಮರ್ಶೆ ಇವೆರಡಕ್ಕೂ ಕೊಟ್ಟ ‘ರೂಪನಿಷ್ಠೆ’ ವಿಮರ್ಶೆ (Formalism)

ಗಿರಡ್ಡಿಯವರು ತಮ್ಮ ಲೇಖನದಲ್ಲಿ (೧೯೭೫) ‘ನವ್ಯ ವಿಮರ್ಶೆ’ ಎಂಬ ಹೆಸರನ್ನೇ ವಿಶಾಲಾರ್ಥದಲ್ಲಿ ಉಪಯೋಗಿಸಿದ್ದಾರೆ. ಇದಕ್ಕೆ ಸಂವಾದಿಯಾಗಿ ಇಂಗ್ಲಿಷ್‌ನಲ್ಲಿ ‘ಫಾರ್ಮಲಿಸಂ’, ‘ನ್ಯೂಕ್ರಿಟಿಸಿಸಂ’, ‘ಆನ್‌ಟಲಾಜಿಕಲ್ ಕ್ರಿಟಿಸಿಸಂ’, ‘ಇನ್‌ಟ್ರಿನ್‌ಸಿಕ್ ಕ್ರಿಟಿಸಿಸಂ’ ಇತ್ಯಾದಿ ಅನೇಕ ಶಬ್ದಗಳು ವಿವಿಧ ವಿಮರ್ಶಕರಿಂದ ಉಪಯೋಗಿಸಲ್ಪಟ್ಟಿವೆ. ಈ ಪುಸ್ತಕದಲ್ಲಿ ರಷ್ಯನ್ – ಅಮೇರಿಕನ್ – ಬ್ರಿಟಿಷ್ ವಿಮರ್ಶಕರಿಗೆಲ್ಲಾ ಒಟ್ಟಾರೆ ಅನ್ವಯವಾಗುವಂತೆ ‘ರೂಪನಿಷ್ಠ’ ಶಬ್ದವನ್ನು ಮತ್ತು ಅಮೇರಿಕನ್ ವಿಮರ್ಶಕರಿಗೆ ಸೀಮಿತವಾಗಿ ಅನ್ವಯವಾಗುವಂತೆ ‘ನವ್ಯ’ ಶಬ್ದವನ್ನು ಬಳಸಲಾಗಿದೆ.

ಪಾಶ್ಚಾತ್ಯ ರೂಪನಿಷ್ಠ ವಿಮರ್ಶೆಯ ತಾತ್ವಿಕ ತಳಹದಿಯನ್ನು ಅನೇಕ ವಿದ್ವಾಂಸರು ಜರ್ಮನ್ ದಾರ್ಶನಿಕ ಕಾಂಟ್‌ನ ವಿಚಾರಗಳಲ್ಲಿಯೂ ಬ್ರಿಟಿಷ್ ಕವಿ – ವಿಮರ್ಶಕ – ಚಿಂತಕ ಕೋಲರಿಜ್‌ನಲ್ಲಿಯೂ ಕಾಣುತ್ತಾರೆ. ರೂಪನಿಷ್ಠ ವಿಮರ್ಶೆಯ ಅಡಿಗಲ್ಲಾದ, ವಿಜ್ಞಾನಕ್ಕೆ ವಿರುದ್ಧವಾಗಿ ಬರುವ ಸಾಹಿತ್ಯಿಕ ಭಾಷೆಯ ಅನನ್ಯತೆಯನ್ನು ಕಾಂಟ್‌’ದ ಕ್ರಿಟೀಕ್ ಆ ಈಸ್ಥೆಟಿಕ್ ಜಜ್‌ಮೆಂಟ್’ ಗ್ರಂಥದಲ್ಲಿ (ಅನು : ೧೯೩೧) ವಿವರಿಸುತ್ತಾನೆ. ಕಾಂಟ್‌ನ ಅಭಿಪ್ರಾಯದಲ್ಲಿ ಸೌಂದರ್ಯಾತ್ಮಕ ಕಲ್ಪನೆ ತಾರ್ಕಿಕ ಕಲ್ಪನೆಯ ಪ್ರತಿರೂಪ (Aesthetic idea is the counterpart of a rational idea). ಪ್ರತಿಭೆಯಿಂದ ರೂಪಿಸಲ್ಪಟ್ಟ ಸೌಂದರ್ಯಾತ್ಮಕ ಕಲ್ಪನೆ ಎಷ್ಟು ಸಂಕೀರ್ಣವಾಗಿರುತ್ತದೆಂದರೆ ಅದನ್ನು ಯಾವುದೇ ಒಂದು ವಿಚಾರದಿಂದ ಅಥವಾ ಪರಿಕಲ್ಪನೆಯಿಂದ ಗುರುತಿಸಲಾಗುವುದಿಲ್ಲ. ಅದು ಪ್ರಚೋದಿಸುವ ವಿಚಾರಗಳನ್ನು ಶಬ್ದಗಳಲ್ಲಿ ಸೆರೆಹಿಡಿಯುವುದು ಅಸಾಧ್ಯ; ಅದರಿಂದ ಉದ್ಭವಿಸುವ ಭಾವನೆಗಳು ವೈಚಾರಿಕತೆಯನ್ನು ತೀಕ್ಷ್ಣಗೊಳಿಸುತ್ತವೆ; ಮತ್ತು ಅದು ಉಪಯೋಗಿಸುವ ಭಾಷೆ ಆತ್ಮವನ್ನು ಸಂಪರ್ಕಿಸುತ್ತದೆ. ಕೋಲ್‌ರಿಜ್ ಕಲಾಕೃತಿಗಳನ್ನು ಸಾವಯವ ಸಂಬಂಧ ಹೊಂದಿದ ಜೈವಿಕ ವಸ್ತುವಿಗೆ ಹೋಲಿಸುತ್ತಾನೆ. ಸಸ್ಯಗಳಂತೆ ಕಲಾಕೃತಿಗಳು ಭಿನ್ನ ಭಿನ್ನ ಪದಾರ್ಥಗಳನ್ನು ತಮ್ಮೊಳಗೆ ಒಂದುಗೂಡಿಸಿಕೊಳ್ಳುತ್ತಾ ಬೆಳೆಯುತ್ತವೆ. ಅವುಗಳು ತಮ್ಮ ಆಂತರಿಕ ಶಕ್ತಿಯಿಂದ ಒಂದು ರೂಪವನ್ನು ಪಡೆಯುತ್ತವೆಯೇ ಹೊರತು ಹೊರಗಿನ ಒತ್ತಡಗಳಿಂದಲ್ಲ. ಅದರ ವಿವಿಧ ಘಟಕಗಳಲ್ಲಿ ಪರಸ್ಪರ ಸಾವಯವ ಸಂಬಂಧವಿದ್ದು ಒಂದು ಮತ್ತೊಂದನ್ನು ಅರ್ಥೈಸುತ್ತದೆ. (Biographia Literaria, ch. xiv).

ಪಾಶ್ಚಾತ್ಯ ರೂಪನಿಷ್ಠ ವಿಮರ್ಶೆಯನ್ನು ನಾವು ಮೂರು ವಿಭಾಗಗಳಲ್ಲಿ ಚರ್ಚಿಸಬಹುದು : ಅ) ರಷ್ಯನ ರೂಪನಿಷ್ಠ ವಿಮರ್ಶೆ ಆ) ಬ್ರಿಟಿಷ್ ರೂಪನಿಷ್ಠ ವಿಮರ್ಶೆ ಮತ್ತು ಇ) ಅಮೆರಿಕನ್ ನವ್ಯ ವಿಮರ್ಶೆ. ತಾತ್ವಿಕ ಗ್ರಹೀತಗಳಲ್ಲಿ ಮತ್ತು ವಿವರಗಳಲ್ಲಿ ಈ ಮೂರು ವಿಭಾಗಗಳಲ್ಲಿ ಅನೇಕ ಭಿನ್ನತೆಗಳಿದ್ದರೂ ಈ ಕೆಳಗಿನ ಪ್ರಮುಖ ವಿಚಾರಗಳು ಸಮಾನವಾಗಿದೆ.

೧. ಸಾಹಿತ್ಯ ಕೃತಿಗಳು ಸ್ವಾಯತ್ತ ಮತ್ತು ಸ್ವಯಂಪೂರ್ಣ ರಚನೆಗಳು (autonomous and autotelic structures)

೨. ಸಾಹಿತ್ಯಿಕ ಭಾಷೆ ಇತರ ಎಲ್ಲಾ ವಿಧದ ಭಾಷೆಯ ಉಪಯೋಗಗಳಿಗಿಂತ ಭಿನ್ನವಾಗಿರುತ್ತದೆ. ಅದರ ಕಾರ್ಯ ‘ಸ್ವಾಭಿಮುಖತೆ’ಯೇ ಹೊರತು, ‘ವಸ್ತು ಸೂಚಕತೆ’ಯಲ್ಲ (Reflexivity and not referentiality).

೩. ಸಾಹಿತ್ಯ ವಿಮರ್ಶೆ ಕೃತಿಯ ಚಾರಿತ್ರಿಕ ಸಂದರ್ಭ, ಲೇಖಕನ ವ್ಯಕ್ತಿತ್ವ ಇತ್ಯಾದಿ ಕೃತಿಯಿಂದ ಹೊರಗಿರುವ ಎಲ್ಲಾ ವಿಧದ ವಿವರಣೆಗಳನ್ನೂ ನಿರ್ಲಕ್ಷಿಸಿ ಸಂಪೂರ್ಣವಾಗಿ ಕೃತಿ – ಕೇಂದ್ರಿತವಾಗಿರಬೇಕು.

ರಷ್ಯನ್ ರೂಪನಿಷ್ಠ ವಿಮರ್ಶೆ

“ರಷ್ಯನ್ ರೂಪನಿಷ್ಠ ವಿಮರ್ಶಕರ ವಿಶಿಷ್ಟ ಹೆಗ್ಗಳಿಕೆಯೆಂದರೆ ‘ಸಾಹಿತ್ಯಿಕತೆ’ಯನ್ನು ಕುರಿತು ಅವರಿಗಿದ್ದ ‘ಬದ್ಧತೆ’ ಮತ್ತು ‘ಸಾಹಿತ್ಯಕ ಸತ್ಯ’ದಿಂದ ದೂರವಾಗಿ ಯಾವುದೇ ವಿಧದ ತಾತ್ವಿಕ ಸೂತ್ರಗಳ ಮಂಡನೆಯ ನಿರಾಕರಣೆ. ಆದ್ದರಿಂದ ಅಂತಿಮವಾಗಿ ಅವರ ವ್ಯವಸ್ಥಿತ ಚಿಂತನೆಯ ಸ್ಥಾನ ಏನೇ ಇರಲಿ – ಸಾಹಿತ್ಯಿಕ ವಿಮರ್ಶೆ ಅವರು ಪ್ರಾರಂಭಿಸಿದ ನೆಲೆಯಿಂದಲೇ ಪ್ರಾರಂಭವಾಗಬೇಕು” – ಎಂದು ಇತ್ತೀಚಿನ ಪ್ರಸಿದ್ಧ ನವ – ಮಾರ್ಕ್ಸ್‌ವಾದೀ ಚಿಂತಕ ಫ್ರೆಡರಿಕ್ ಜೇಮ್‌ಸನ್ ಹೇಳುತ್ತಾನೆ (೧೯೭೨ : ೪೩). ರಷ್ಯನ್ ರೂಪನಿಷ್ಠ ವಿಮರ್ಶೆಯ ಮೂಲ ಕಾಳಜಿಯೆಂದರೆ ಸಾಹಿತ್ಯವನ್ನು ಇತರ ಶಿಸ್ತುಗಳಿಂದ ಬೇರ್ಪಡಿಸಿ, ಅದರ ಆಂತರಿಕ ‘ಸಾಹಿತ್ಯತೆ’ಯನ್ನು ಗುರುತಿಸುವುದು ಮತ್ತು ವಿಶ್ಲೇಷಿಸುವುದು.

೧೯೧೭ರ ಮಹಾಕ್ರಾಂತಿಯ ಮೊದಲೇ ರಷ್ಯಾದಲ್ಲಿ ರೂಪನಿಷ್ಠ ಚಿಂತನೆ ಪುಷ್ಪವಾಗಿ ಬೆಳೆದಿದ್ದಿತು. ೧೯೧೫ ರಲ್ಲಿ ಸ್ಥಾಪಿತವಾದ ‘ಮಾಸ್ಕೊ ಲಿಂಗ್ವಿಸ್ಟಿಕ್ ಸರ್ಕಲ್’ ಮತ್ತು ೧೯೧೬ ರಲ್ಲಿ ಪ್ರಾರಂಭವಾದ ‘ಒಪೋಯಾಜ್’ (ಸಾಹಿತ್ಯಿಕ ಭಾಷೆಯ ಅಧ್ಯಯನ ಸಂಘ) ರೂಪನಿಷ್ಠ ಅಧ್ಯಯನದ ಕೇಂದ್ರಗಳಾಗಿದ್ದುವು. ಮೊದಲನೆಯ ಗುಂಪಿನಲ್ಲಿ ಮುಖ್ಯನಾದವನು ರೋಮನ್ ಯಾಕಬ್‌ಸನ್ (Roman Jakobson). ‘ಒಪೋಯಾಜ್‌’ದ ಮುಖ್ಯ ಚಿಂತಕರು ವಿಕ್ಟರ್ ಶ್ಲಾವ್‌ಸ್ಕಿ (Victor Shklovsky)  ಮತ್ತು ಬೋರಿಸ್ ಐಕನ್‌ಬಾಮ್ (Boris Eikenbaum). ಮಹಾಕ್ರಾಂತಿಯ ಪ್ರಾರಂಭಿಕ ದಿನಗಳಲ್ಲಿ ರೂಪನಿಷ್ಠ ಅಧ್ಯಯನಕ್ಕೆ ವಿರೋಧವೇನೂ ಕ್ರಾಂತಿಕಾರಿ ಸರಕಾರದಿಂದ ಬರಲಿಲ್ಲ. ಆದರೆ ಟ್ರಾಟ್‌ಸ್ಕಿ ೧೯೨೪ ರಲ್ಲಿ ತನ್ನ ‘ಸಾಹಿತ್ಯ ಮತ್ತು ಕ್ರಾಂತಿ’ ಗ್ರಂಥದಲ್ಲಿ ರೂಪನಿಷ್ಠ ಚಿಂತನೆಯನ್ನು ಉಗ್ರವಾಗಿ ಖಂಡಿಸಿದನು. ಅನಂತರ ೧೯೩೦ರಲ್ಲಿ ಸರಕಾರದ ಅಧಿಕೃತ ನಿಷೇಧದಿಂದ ಇಂತಹ ಅಧ್ಯಯನ ರಷ್ಯಾದಲ್ಲಿ ಕೊನೆಗೊಂಡಿತಾದರೂ ಯಾಕಬ್‌ಸನ್, ಟೈನ್ಯನೋವ್‌ಮುಂತಾದವರು ಪ್ರಾಗ್‌ನಲ್ಲಿ ‘ರಾಚನಿಕ ರೂಪನಿಷ್ಠ ಅಧ್ಯಯನ’ವನ್ನು (Structural Formalist Studies)  ಮುಂದುವರಿಸಿದರು. ನಾ‌ಟ್ಸೀ ಚಳುವಳಿಯ ಕಾರಣದಿಂದ ಪ್ರಸಿದ್ಧ ‘ಪ್ರಾಗ್ ಲಿಂಗ್ವಿಸ್ಟಿಕ್ ಸರ್ಕಲ್’ ಮುಚ್ಚಿದಾಗ ಯಾಕಬ್‌ಸನ್, ರೆನೆ ವೆಲೆಕ್ ಮುಂತಾದವರು ಅಮೇರಿಕಾದಲ್ಲಿ ನೆಲೆಸಿ ಅಲ್ಲಿ ನವ್ಯ ವಿಮರ್ಶೆಯ ಬೆಳವಣಿಗೆಯನ್ನು ಅಗಾಧವಾಗಿ ಪ್ರಭಾವಿಸಿದರು.

ರಷ್ಯನ್ ರೂಪನಿಷ್ಠ ವಿಮರ್ಶೆಯ ಮುಖ್ಯ ವಿಚಾರಗಳನ್ನು ಹೀಗೆ ಸಂಗ್ರಹಿಸಬಹುದು :

೧. ಸಾಹಿತ್ಯ ಭಾಷೆಯ ಅನನ್ಯತೆ

೨. ಕಥನ ವಿಶ್ಲೇಷಣೆ

೩. ಸಾಹಿತ್ಯ ಚರಿತ್ರೆಯ ಸ್ವರೂಪ

ಸಾಹಿತ್ಯ ಭಾಷೆಯ ಅನನ್ಯತೆ

ರಷ್ಯನ್ ರೂಪನಿಷ್ಠ ವಿಮರ್ಶಕರ ಪ್ರಕಾರ ಸಾಹಿತ್ಯಿಕ ಭಾಷೆ ಹಾಗೂ ದೈನಂದಿನ ಭಾಷೆ ಇವೆರಡರ ಮಧ್ಯೆ ‘ಡಯಲೆಕ್ಟಿಕ್’ ಸಂಬಂಧವಿದೆ. ಸಾಹಿತ್ಯಿಕ ಭಾಷೆ ದಿನಬಳಕೆಯ ಭಾಷೆಯ ವಿಶಿಷ್ಟ ಅಥವಾ ಪರಿಶುದ್ಧ ರೂಪವಲ್ಲ. ಅದಕ್ಕೆ ತನ್ನದೇ ಆದ ವ್ಯವಸ್ಥೆಯಿದೆ, ಅಸ್ತಿತ್ವವಿದೆ. (Jameson, 1972 : 49). ಸಾಹಿತ್ಯಿಕ ಭಾಷೆ ದಿನಬಳಕೆಯ ವ್ಯಾವಹಾರಿಕ ಭಾಷೆಯನ್ನು ತಿರುಚಿ, ಅದನ್ನು ವಕ್ರೀಕರಿಸಿ ತನ್ನತನವನ್ನು ಉಳಿಸಿ ಕೊಳ್ಳುತ್ತದೆ.

ವಿಕ್ಟರ್ ಶ್ಲಾವ್‌ಸ್ಕಿ ಇಂತಹ ವಕ್ರೀಕರಣವನ್ನು ‘ಅಪರಿಚಿತೀಕರಣ’ (defamiliarisation) ಎಂದು ಕರೆಯುತ್ತಾನೆ. ಅವನ ವಾದವೇನೆಂದರೆ “ಕೊಡುಕೊಳ್ಳುವ ದೈನಂದಿನ ಬದುಕಿನಲ್ಲಿ ನಾವು ಅನಿವಾರ್ಯವಾಗಿ ನಮ್ಮ ಸುತ್ತಲಿನ ವಸ್ತುಗಳ ಗ್ರಹಿಕೆಯಲ್ಲಿರುವ ನಾವೀನ್ಯವನ್ನು ಕಳೆದುಕೊಳ್ಳುತ್ತೇವೆ. ನಮ್ಮ ಗ್ರಹಿಕೆ ಹಾಗೂ ಅರಿವು ಯಾಂತ್ರಿಕ (automatised) ಆಗುತ್ತದೆ. ಇಂತಹ ಸನ್ನಿವೇಶದಲ್ಲಿ ನಮ್ಮ ಗ್ರಹಿಕೆಯಲ್ಲಿ ಹೊಸತನವನ್ನು, ‘ಕನಸುಗಳ ಭವ್ಯತೆ ಮತ್ತು ತಾಜಾತನ’ವನ್ನು ಕೊಡುವುದು ಕಲೆಯ ಕಾರ್ಯ. ಸಾಹಿತ್ಯ ಈ ಕಾರ್ಯವನ್ನು ಅಪರಿಚಿತೀಕರಣದ ಮೂಲಕ ಮಾಡುತ್ತದೆ. ಕಲೆಯ ಉದ್ದೇಶ ವಸ್ತುಗಳನ್ನು ನಾವು ಗ್ರಹಿಸುವುದರಲ್ಲಿರುವ ಅನುಭವವನ್ನು ಕೊಡುವುದು – ವಸ್ತುಗಳನ್ನು ಅಪರಿಚಿತಗೊಳಿಸಿ, ರೂಪಗಳನ್ನು (ಗ್ರಹಿಸಲು) ಕಷ್ಟಸಾಧ್ಯವಾಗಿ ಮಾಡುವುದು ಮತ್ತು ಗ್ರಹಿಕೆಗೆ ಬೇಕಾಗುವ ಕಾಲ ಹಾಗೂ ಪ್ರಯತ್ನವನ್ನು ಹೆಚ್ಚಿಸುವುದು” (Seldon, 1985; 9-10)

ಕಥನ ವಿಶ್ಲೇಷಣೆ (Narrative Analysis)

ರಷ್ಯನ್ ರೂಪನಿಷ್ಠ ವಿಮರ್ಶೆ ಕಥನದ ಅಧ್ಯಯನಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಿತು. ಮುಂದೆ (೧೯೩೬) ತನ್ನ ರಷ್ಯನ್ ಜಾನಪದ ಕಥೆಗಳ ರಾಚನಿಕ ವಿಶ್ಲೇಷಣೆಗೆ ಪ್ರಸಿದ್ಧನಾದ ವ್ಲಾಡಿಮೀರ್ ಪ್ರಾಪ್ ರೂಪನಿಷ್ಠ ಪರಂಪರೆಯ ತುದಿಯಲ್ಲಿ ಬರುತ್ತಾನೆ.

ತಮ್ಮ ಕಥನ ಮೀಮಾಂಸೆಯದಲ್ಲಿ ಶ್ಲಾವ್‌ಸ್ಕಿ ಮುಂತಾದವರು ‘ಕಥೆ’ ಮತ್ತು ‘ಸಂವಿಧಾನ’ ಗಳಲ್ಲಿರುವ ವ್ಯತ್ಯಾಸವನ್ನು ಅತಿ ಮುಖ್ಯವೆಂದು ತಿಳಿಯುತ್ತಾರೆ. ಅವರ ಪ್ರಕಾರ ಸಂವಿಧಾನ ಮಾತ್ರ ಸಾಹಿತ್ಯಕ್ಕೆ ಸಂಬಂಧಿಸಿದುದು; ಕಥೆ ಲೇಖಕನ ಜೋಡಣೆಯ ಕೌಶಲ್ಯವನ್ನು ಕಾಯುತ್ತಿರುವ ಕಚ್ಚಾ ವಸ್ತು. ಸ್ಟರ್ನ್‌ನ ಕಾದಂಬರಿ ‘ಟ್ರಿಸ್ಟ್ರಮ್ ಶ್ಯಾಂಡಿ’ಯ ವಿಶ್ಲೇಷಣೆಯಲ್ಲಿ ಶ್ಲಾವ್‌‌ಸ್ಕಿ ಗ್ರಹಿಸುವಂತೆ ಸಂವಿಧಾನವೆಂದರೆ ಕೇವಲ ಘಟನೆಗಳ ಜೋಡಣೆ ಅಷ್ಟೇ ಅಲ್ಲ; ಕಥನಕ್ರಮವನ್ನು ತಡೆದು ನಿಧಾನಗೊಳಿಸಲು ಕಾದಂಬರಿಕಾರನು ಉಪಯೋಗಿಸುವ ಉಪಕಥೆಗಳು, ಕಾದಂಬರಿಯ ಅಂಗಗಳ ಸ್ಥಳಪಲ್ಲಟ, ಓದುಗರೊಡನೆ ಆಡುವ ಆಟಗಳು ಇತ್ಯಾದಿ ಎಲ್ಲಾ ತಂತ್ರಗಳೂ ಸಂವಿಧಾನದಲ್ಲಿ ಸೇರ್ಪಡೆಯಾಗುತ್ತವೆ. ಈ ಅರ್ಥದಲ್ಲಿ ರೂಢಿಗತ ಸಂವಿಧಾನದ ನಿರೀಕ್ಷೆಗಳನ್ನು ಭಂಗಗೊಳಿಸಿ ಸ್ಟರ್ನ್ ತನ್ನ ಕಾದಂಬರಿಯ ಆಂತರಿಕ ರಚನೆಯ ಬಗ್ಗೆಯೇ – ನಮ್ಮ ಲಕ್ಷ್ಯವನ್ನು ಸೆಳೆಯುತ್ತಾನೆ. ಅರ್ಥಾತ್ ಒಂದು ಯಶಸ್ವೀ ಕೃತಿಯ ಸಂವಿಧಾನ ಆ ಕೃತಿಯ ‘ಸ್ವಾಭಿಮುಖತೆ’ (Self-consicousness) ಯತ್ತ ನಮ್ಮ ಗಮನವನ್ನು ಸೆಳೆಯುವ ಒಂದು ತಂತ್ರ.*

ಸಂವಿಧಾನದ ಕನಿಷ್ಠ ಘಟಕವನ್ನು ‘ಆಶಯ’ (motif) ಎಂದು ಬೋರಿಸ್ ಟೋಮಾಶೆವ್‌ಸ್ಕಿ ಕರೆಯುತ್ತಾನೆ. ಇಲ್ಲಿ ಆಶಯವೆಂದರೆ ಬಿಡಿ ಹೇಳಿಕೆ ಅಥವಾ ಕಾರ್ಯವೆಂದು ತಿಳಿಯಬಹುದು. ಆಶಯಗಳನ್ನು ‘ಮುಕ್ತ’ ಹಾಗೂ ‘ಬದ್ಧ’ ಎಂದು ಟೋಮಾಶೆವ್‌ಸ್ಕಿ ವಿಂಗಡಿಸುತ್ತಾನೆ. ಬದ್ಧ ಆಶಯಗಳು ಕಥೆಯ ಮುಂದುವರಿಕೆಗೆ ಅತಿ ಅಗತ್ಯವಾದವುಗಳು (ಮುಂದೆ ಪ್ರಾಪ್ ‘ಕಾರ್ಯ’ಗಳನ್ನು ಅರ್ಥೈಸುವಂತೆ); ಮುಕ್ತ ಆಶಯಗಳು ಕಥೆಗೆ ಅನವಶ್ಯಕ. ಆದರೆ ಸಾಹಿತ್ಯಿಕ ದೃಷ್ಟಿಯಿಂದ ಮುಕ್ತ ಆಶಯಗಳೇ ಮುಖ್ಯವಾಗುತ್ತವೆ. (Seldon, 1985 : 13). ಉದಾಹರಣೆಗೆ, ಚಂದ್ರಶೇಖರ ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’ ಕಾದಂಬರಿಯಲ್ಲಿ ಒಬ್ಬಳು ಮುದುಕಿ ಕಥೆ ಹೇಳುತ್ತಾಳೆ. ಈ ನಿರೂಪಣಾತಂತ್ರ ಕಥೆಗೆ ಅಗತ್ಯವೇನೂ ಇಲ್ಲ. ಆದ್ದರಿಂದ ಇದು ಮುಕ್ತ ಆಶಯ ; ಆದರೆ ಈ ಕಾದಂಬರಿಯ ದೃಷ್ಟಿಕೋನ, ಅದು ತಿರಸ್ಕರಿಸುವ ಮೌಲ್ಯಗಳು ಇವೆಲ್ಲವೂ, ಈ ವಿಶಿಷ್ಟ ನಿರೂಪಣಾ ತಂತ್ರವನ್ನೇ ಅವಲಂಬಿಸಿವೆ. (ವಿವರಗಳಿಗೆ ನೋಡಿ, ಪು. ೨೦೧-೨೦೪).

ಸಾಹಿತ್ಯ ಚರಿತ್ರೆ

ಸಾಹಿತ್ಯ ಚರಿತ್ರೆಯನ್ನು ಕುರಿತಾದ ಶ್ಲಾವ್‌ಸ್ಕಿ ಮತ್ತವನ ಸಂಗಡಿಗರ ವಿಚಾರಗಳು ಅತ್ಯಂತ ಮೌಲಿಕವಾಗಿವೆ. ಅವರ ಅಭಿಪ್ರಾಯದಲ್ಲಿ ಸಾಹಿತ್ಯಚರಿತ್ರೆಯೆಂದರೆ ಯಾವುದೋ ಮಹಾನ್ ಪರಂಪರೆಯ ಅವಿಚ್ಛಿನ್ನತೆಯ ಇತಿಹಾಸವಲ್ಲ. ಅದು ವಿನಾಕಾರನ, ಹಠಾತ್ತಾಗಿ ಸಂಭವಿಸುವ ವಿಚ್ಛಿನ್ನತೆಗಳ ಚರಿತ್ರೆ; ಭೂತದೊಡನಾಗುವ ಭೀಕರ ವಿಚ್ಛೇದಗಳ ಚರಿತ್ರೆ. ಇಂತಹ ಚರಿತ್ರೆಯಲ್ಲಿ ಪ್ರತಿಯೊಂದು ಸಾಹಿತ್ಯಿಕ ವರ್ತಮಾನವೂ ತನ್ನ ಹಿಂದಿನ ಪೀಳಿಗೆ ಮಾನ್ಯ ಮಾಡಿದ ಸಾಹಿತ್ಯಿಕ ಮಾನದಂಡಗಳನ್ನು ತಿರಸ್ಕರಿಸುತ್ತದೆ ಮತ್ತು ತನ್ನದೇ ಆದ ಹೊಸ ಸಾಹಿತ್ಯಿಕ ಮೌಲ್ಯಗಳನ್ನು ಹಾಗೂ ಮಾನದಂಡಗಳನ್ನು ಸ್ಥಾಪಿಸುತ್ತದೆ. ಸಾಹಿತ್ಯದ ಸ್ವರೂಪವೇ ಇಂತಹ ಅನವರತ ಪರಿವರ್ತನೆಯನ್ನು ಅನಿವಾರ್ಯವಾಗಿಸುತ್ತದೆ. ಹೇಗೆಂದರೆ, ಯಾವುದೇ ಒಂದು ಸಾಹಿತ್ಯಿಕ ರೂಪವೂ ಜನ್ಮ ತಾಳಿ ಬೆಳೆದ ಮೇಲೆ ಅನಿವಾರ್ಯವಾಗಿ ಹಳೆಯದಾಗುತ್ತಾ ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತದೆ. ಆಗ ಅದರ ಸ್ಥಾನದಲ್ಲಿ ಮತ್ತೊಂದು ಬರಲೇಬೇಕಾಗುತ್ತದೆ. ನಿಜವಾದ ಸಾಹಿತ್ಯ ಚರಿತ್ರೆಯೆಂದರೆ ಹೀಗೆ ಸದಾ ನಡೆಯುವ ಬದಲಾವಣೆಗಳ ಮತ್ತು ಅವುಗಳ ಸ್ವರೂಪದ ದಾಖಲೆ. (Jameson, 1972 : 52-53).

ಬ್ರಿಟಿಷ್ ರೂಪನಿಷ್ಠ ವಿಮರ್ಶೆ

ಕಳೆದ ಶತಮಾನದ ಎರಡು ಮತ್ತು ಮೂರನೆಯ ದಶಕಗಳಲ್ಲಿ ಪ್ರಸಿದ್ಧಿಗೆ ಬಂದು, ಬ್ರಿಟಿಷ್ ಮತ್ತು ಅಮೆರಿಕನ್ ಸೃಜನಾತ್ಮಕ ಸಾಹಿತ್ಯ ಮತ್ತು ವಿಮರ್ಶೆ ಇವೆರಡಕ್ಕೂ ಒಂದು ಪ್ರಭಾವೀ ತಿರುವು ಕೊಟ್ಟು ಅಮೂಲಾಗ್ರ ಬದಲಾವಣೆಗಳಿಗೆ ಕಾರಣರಾದ ಬ್ರಿಟಿಷ್ ರೂಪನಿಷ್ಠ ವಿಮರ್ಶಕರಲ್ಲಿ ಪ್ರಮುಖರಾದವರೆಂದರೆ ಟಿ.ಎಸ್. ಎಲಿಯಟ್, ಐ.ಎ. ರಿಚರ್ಡ್ಸ್, ವಿಲಿಯಂ ಎಂಪ್ಸನ್ ಮತ್ತು ಎಫ್.ಆರ್.ಲೀವಿಸ್. ಇವರ ಸಾಧನೆಯನ್ನು ಸರಿಯಾಗಿ ಗುರುತಿಸಲು ೧೯ನೆಯ ಶತಮಾನದ ಅಂತ್ಯಭಾಗದಲ್ಲಿ ಮತ್ತು ೨೦ನೆಯ ಶತಮಾನದ ಪ್ರಾರಂಭ ಕಾಲದಲ್ಲಿ ಪ್ರಬಲವಾಗಿದ್ದ ವಿಮರ್ಶಾ ಮಾರ್ಗಗಳ ಸ್ಥೂಲ ಪರಿಚಯ ಅಗತ್ಯ.

ಆ ಕಾಲದಲ್ಲಿ ಅತ್ಯಂತ ವ್ಯಾಪಕ ಹಾಗೂ ಪ್ರಭಾವಶಾಲಿಯಾಗಿದ್ದ ವಿಮರ್ಶಾಮಾರ್ಗವೆಂದರೆ ಚಾರಿತ್ರಿಕ ವಿಮರ್ಶೆ. ಫ್ರಾನ್ಸ್‌ನ ಟೇನ್ ಉಪಕ್ರಮಿಸಿದ ಈ ಮಾರ್ಗ ಈ ಶತಮಾನದ ಪ್ರಾರಂಭದಲ್ಲಿ ‘ಕೇಂಬ್ರಿಜ್ ಇಂಗ್ಲಿಷ್ ಸಾಹಿತ್ಯದ ಇತಿಹಾಸ’, ಕೂರ್ತ್ ಹೋಪ್‌ನ ‘ಇಂಗ್ಲಿಷ್ ಕಾವ್ಯದ ಇತಿಹಾಸ’ ಇತ್ಯಾದಿ ಪ್ರತಿಷ್ಠಿತ ಸಾಹಿತ್ಯ, ಚರಿತ್ರೆಗಳ ಪ್ರಭಾವದಿಂದ ಜವಾಬ್ದಾರಿಯುತ ಏಕಮೇವ ವಿಮರ್ಶಾಮಾರ್ಗವೆಂದರೆ ಚಾರಿತ್ರಿಕ ಮಾರ್ಗವೆನ್ನುವಷ್ಟು ಪ್ರಸಿದ್ಧಿಯಾಗಿದ್ದಿತು. (ವಿವರಗಳಿಗೆ ನಾಲ್ಕನೆಯ ಅಧ್ಯಾಯವನ್ನು ನೋಡಿ). ಅಂದು ಪ್ರಚಾರದಲ್ಲಿದ್ದ ಉಳಿದ ಮಾರ್ಗಗಳೆಂದರೆ ಕರ್ತೃನಿಷ್ಠ ವಿಮರ್ಶೆ (’ಇಂಗ್ಲೀಷ್ ಮೆನ್ ಆಫ್ ಲೆಟರ್ಸ್ ಮಾಲೆಯಿಂದ ಇಂತಹ ವಿಮರ್ಶೆ ಜನಪ್ರಿಯವಾಗಿದ್ದಿತು). ‘ಪರಿಣಾಮನಿಷ್ಠ ವಿಮರ್ಶೆ’ (ಇಂಪ್ರೆಶನಿಸ್ಟಿಕ್ ಕ್ರಿಟಿಸಿಸಂ – ಆಸ್ಕರ್ ವೈಲ್ಡ್, ವಾಲ್ಟರ್ ಪೇಟರ್, ಎಡ್ಮಂಡ್‌ಗಾಸ್, ಕ್ವಿಲರ್‌ಕೂಚ್ ಇತ್ಯಾದಿ ಈ ಮಾರ್ಗದ ಮುಖ್ಯ ವಿಮರ್ಶಕರು), ಮತ್ತು ಮನೋವೈಜ್ಞಾನಿಕ ವಿಮರ್ಶೆ. ಎಲಿಯಟ್, ಲೀವಿಸ್ ಮುಂತಾದವರ ಅಭಿಪ್ರಾಯದಲ್ಲಿ ಇಂತಹ ವಿಮರ್ಶಾ ಮಾರ್ಗಗಳು ಕೃತಿಗಿಂತ ಹೆಚ್ಚಾಗಿ ಕೃತಿಕಾರನಿಗೆ ಅಥವಾ ಕೃತಿ ಸನ್ನಿವೇಶಕ್ಕೆ ಅಥವಾ ವಿಮರ್ಶಕನ ಸ್ಪಂದನಕ್ಕೆ ಎಂದರೆ ‘ಸಾಹಿತ್ಯೇತರ’ ವಿವರಗಳಿಗೆ ಒತ್ತುಕೊಡುತ್ತವೆ. ಆದ್ದರಿಂದ ಇವೆಲ್ಲಾ ಮಾರ್ಗಗಳನ್ನು ತಿರಸ್ಕರಿಸಿ ಸಾಹಿತ್ಯ ವಿಮರ್ಶೆಯ ಮುಖ್ಯ ಗುರಿ ಕೃತಿಯಾಗಿರಬೇಕಲ್ಲದೆ ಬೇರಾವುದೂ ಅಲ್ಲ ಎಂದು ಕೃತಿನಿಷ್ಠ ವಿಮರ್ಶೆಯನ್ನು ಮಂಡಿಸಿ ಬೆಳೆಸಿದವರು ಎಲಿಯಟ್ ಇತ್ಯಾದಿ ರೂಪನಿಷ್ಠ ವಿಮರ್ಶಕರು.

ರೂಪನಿಷ್ಠ ವಿಮರ್ಶೆಯ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ದಾಖಲಕೆಯೆಂದರೆ ೧೯೧೭ ರಲ್ಲಿ ರಚಿತವಾಗಿ ೧೯೧೯ ರಲ್ಲಿ ಪ್ರಕಟವಾದ ಟಿ.ಎಸ್. ಎಲಿಯಟ್‌ನ ‘ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ’ (Tradition and Individual Talent, 1953).** ರೂಪನಿಷ್ಠ ವಿಮರ್ಶೆಯ ಮುಖ್ಯ ತಾತ್ವಿಕ ಆಧಾರಗಳೆಲ್ಲಾ ಈ ಪ್ರಬಂಧದಲ್ಲಿವೆ; ಮತ್ತು ಈ ಪ್ರಬಂಧದುದ್ದಕ್ಕೂ ಎಲಿಯಟ್ ವ್ಯಕ್ತಿನಿಷ್ಠ ಸಾಹಿತ್ಯ ವಿಮರ್ಶೆ ಮತ್ತು ಚಾರಿತ್ರಿಕ ವಿಮರ್ಶೆಗಳನ್ನು ಖಂಡಿಸುತ್ತಾನೆ. ಮೇಲಿಂದ ಮೇಲೆ ಎಲಿಯಟ್ ವಿಮರ್ಶೆಯಲ್ಲಿ ಕಂಡುಬರುವ ಮುಖ್ಯ ಪರಿಕಲ್ಪನೆಯೆಂದರೆ ಈ ನಾಲ್ಕು ಪರಂಪರೆ. ವ್ಯಕ್ತಿನಿರಪೇಕ್ಷ ಕಲೆ, ವಸ್ತು ಪ್ರತಿರೂಪ ಮತ್ತು ಏಕೀಕೃತ ಸಂವೇದನೆ.

ರಮ್ಯಚಿಂತನೆಯಲ್ಲಿ ಕೇಂದ್ರವಾಗುವ ಲೇಖಕನ ವ್ಯಕ್ತಿತ್ವವನ್ನು ಎರಡು ಬಗೆಯಲ್ಲಿ ಎಲಿಯಟ್ ಕುಗ್ಗಿಸುತ್ತಾನೆ : ತನ್ನ ‘ಪರಂಪರೆ’ಯ ವಿಶಿಷ್ಟ ವ್ಯಾಖ್ಯಾನದ ಮೂಲಕ ಹಾಗೂ ಲೇಖಕನ ವ್ಯಕ್ತಿತ್ವಕ್ಕೂ ಅವನ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಅಲ್ಲಗಳೆಯುವುದರ ಮೂಲಕ. ಪರಂಪರೆಯನ್ನು ಧನಾತ್ಮಕವಾಗಿ ಅರ್ಥೈಸುತ್ತಾ ಪರಂಪರೆಯನ್ನು ನಮ್ಮದಾಗಿಸಿಕೊಳ್ಳಲು ಚಾರಿತ್ರಿಕ ಪ್ರಜ್ಞೆ ನಮ್ಮಲ್ಲಿರಬೇಕು ಎನ್ನುತ್ತಾನೆ. “ಈ ಚಾರಿತ್ರಿಕ ಪ್ರಜ್ಞೆ ಗತಕಾಲದ ಗತ ಸ್ವರೂಪವನ್ನು ಮಾತ್ರವಲ್ಲದೆ ಅದರ ವರ್ತಮಾನ ಸ್ವರೂಪವನ್ನೂ ಗುರುತಿಸಬಲ್ಲದ್ದಾಗಿರಬೇಕಾಗುತ್ತದೆ. ಇಂಥ ಚಾರಿತ್ರಿಕ ಪ್ರಜ್ಞೆ ಇದ್ದ ಲೇಖಕ ತನ್ನ ತಲೆಮಾರಿನ ಜೀವಚೈತನ್ಯವನ್ನು ರಕ್ತಗತವಾಗಿಸಿಕೊಂಡು ಬರೆಯಬೇಕಾಗುತ್ತದಲ್ಲದೆ ಹೋಮರನಿಂದ ಮೊದಲಾಗಿ ಇಡೀ ಯುರೋಪ್ ಖಂಡದ ಸಾಹಿತ್ಯವೆಲ್ಲವೂ ಸಮಕಾಲಿನವಾಗಿ ಒಂದು ಜೀವಂತ ವಿನ್ಯಾಸವಾಗಿ ಏರ್ಪಟ್ಟು ನಿಂತಿರುತ್ತದೆ ಎಂಬ ಅರಿವು ಆತನದಾಗಿರಬೇಕಾಗುತ್ತದೆ” (ಅನು : ಇನಾಂದಾರ್, ೧೯೮೨ : ೫೭೪.) ಪರಂಪರೆಗೆ ಎಲಿಯಟ್ ಕೊಡುವ ಈ ನೂತನ ವ್ಯಾಖ್ಯಾನದ ಧ್ವನಿ ಏನೆಂದರೆ, ವೈಯಕ್ತಿಕ ಲೇಖಕನಿಗಿಂತ ಪರಂಪರೆ ಮಹತ್ವದ್ದು; ಮತ್ತು ಅತ್ಯಂತ ಸ್ವೋಪಜ್ಞ ಲೇಖಕರಲ್ಲಿಯೂ ಪರಂಪರೆಯ ಪಾತ್ರವಿದ್ದೇ ಇರುತ್ತದೆ – ಎಂಬ ವಾದ. ಈ ವಾದದ ಆಧಾರದ ಮೇಲೆಯೇ ಮುಂದೆ ಎಲಿಯಟ್ ‘ಕಲಾವಿದನ ಪ್ರಗತಿಯೆಂದರೆ ನಿರಂತರವಾಗಿ ಸಂಭವಿಸುವ ಕಲಾವಿದನ ವ್ಯಕ್ತಿತ್ವದ ನಿರಸನ’- ಎಂದು ಮಂಡಿಸಲು ಸಾಧ್ಯವಾಗುತ್ತದೆ.

ಲೇಖಕನ ವ್ಯಕ್ತಿತ್ವ ಮತ್ತು ಅವನಿಂದ ಸೃಜಿಸಲ್ಪಟ್ಟ ಸಾಹಿತ್ಯ ಇವುಗಳ ಸಂಬಂಧವನ್ನು  ಎಲಿಯಟ್ ಸಂಪೂರ್ಣವಾಗಿ ಅಲ್ಲಗಳೆಯುತ್ತಾನೆ. ಕಲಾವಿದನು ಎಷ್ಟೆಷ್ಟು ಪರಿಪೂರ್ಣನಾಗುತ್ತಾನೋ ಅಷ್ಟಷ್ಟು ಅವನಲ್ಲಿ ಅನುಭವಿಸುವ ವ್ಯಕ್ತಿ ಮತ್ತು ಸೃಷ್ಟಿಸುವ ಮನಸ್ಸು ಇವೆರಡೂ ಬೇರೆ ಬೇರೆಯಾಗಿರುತ್ತವೆ ಎಂದು ವಾದಿಸುತ್ತಾ, ಲೇಖಕನ ವ್ಯಕ್ತಿತ್ವ ಮತ್ತು ಸಾಹಿತ್ಯಸೃಷ್ಟಿ ಇವುಗಳ ಸಂಬಂಧವನ್ನು ರಸಾಯನಶಾಸ್ತ್ರದ ರೂಪಕದ ಮೂಲಕ (ಸಲ್ಫರ್ ಡಯಾಕ್ಸೈಡ್ ತಯಾರಿಕೆಯ ರೂಪಕದ ಮೂಲಕ) ಸ್ಪಷ್ಟಪಡಿಸುತ್ತಾನೆ. ಎಲಿಯಟ್‌ನ ವಾದವೇನೆಂದರೆ, ಕವಿಗೆ ವ್ಯಕ್ತಿತ್ವವೆಂಬುದು ಕೇವಲ ಒಂದು ಮಾಧ್ಯಮವಷ್ಟೆ; ಮತ್ತು ಆ ಮಾಧ್ಯಮದ ಮೂಲಕ ಕವಿಗೆ ಮುಖ್ಯವಾದ ಮತ್ತು ಅಮುಖ್ಯವಾದ ಅನೇಕಾನೇಕ ಅನುಭವಗಳು ನೂತನ ರೂಪು ಪಡೆದು ಕಾವ್ಯವಾಗಿ ಹೊರಬರುತ್ತವೆ. ಆದ್ದರಿಂದ “ಕಾವ್ಯವೆಂದರೆ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲ – ವ್ಯಕ್ತಿತ್ವದಿಂದ ದೂರವಾಗುವುದು”. ಈ ವಾದ ಕರ್ತೃನಿಷ್ಠ ವಿಮರ್ಶೆಯ ಅಡಿಗಲ್ಲನ್ನೇ ತೆಗೆದೆಸೆಯುತ್ತದೆ. ‘ಕಾವ್ಯ ವ್ಯಕ್ತಿತ್ವದ ಅಭಿವ್ಯಕ್ತಿ’ಯಲ್ಲವಾದರೆ ಕಾವ್ಯವನ್ನು ಅರ್ಥೈಸಲು ಕವಿಯ ವ್ಯಕ್ತಿತ್ವದ ಚರ್ಚೆಯಿಂದ ಪ್ರಯೋಜನವೇನು?

ಹಾಗೆಯೇ ಚಾರಿತ್ರಿಕ ವಿಮರ್ಶೆಯನ್ನೂ ಲೇಖಕನ ವ್ಯಕ್ತಿತ್ವದ ಪಾತ್ರವನ್ನು ಅಲ್ಲಗಳೆಯುವುದರ ಮೂಲಕ ಎಲಿಯಟ್ ತಿರಸ್ಕರಿಸುತ್ತಾನೆ. ಲೇಖಕನ ವ್ಯಕ್ತಿತ್ವವನ್ನು ವಿಶಿಷ್ಟ ರೀತಿಯಲ್ಲಿ ರೂಪಿಸುವುದು ಚಾರಿತ್ರಿಕ ಸನ್ನಿವೇಶ. ಆದರೆ ವ್ಯಕ್ತಿತ್ವಕ್ಕೂ ಮತ್ತು ಸಾಹಿತ್ಯಕ್ಕೂ ಸಂಬಂಧವಿಲ್ಲವೆಂದಾದರೆ, ಆ ವ್ಯಕ್ತಿತ್ವವನ್ನು ರೂಪಿಸಿದ ಚಾರಿತ್ರಿಕ ಸಂದರ್ಭದ ಚರ್ಚೆಯಿಂದೇನು ಫಲ? ಆದ್ದರಿಂದಲೇ ಎಲಿಯಟ್ ಹೇಳುತ್ತಾನೆ : “ಪ್ರಾಮಾಣಿಕ ವಿಮರ್ಶೆ ಮತ್ತು ಸಂವೇದನಶೀಲ ಗುಣಗ್ರಹಣ ಕಾವ್ಯವನ್ನು ಕುರಿತದ್ದಾಗಿರಬೇಕೇ ಹೊರತು ಕವಿಯನ್ನಲ್ಲ”. ಈ ವಿಚಾರವನ್ನು ಎಲಿಯಟ್ ತನ್ನ ‘ವಿಮರ್ಶೆಯ ಮೇರೆಗಳು’ (Frontiers of Criticism, 1936) ಎಂಬ ಭಾಷಣದಲ್ಲಿ ಇನ್ನೂ ಸ್ಪಷ್ಟವಾಗಿ ಹೇಳುತ್ತಾನೆ.

“ಒಂದು ಸರಳ ಉದಾಹರಣೆಯನ್ನು ಕೊಡಬೇಕೆಂದರೆ, ರೂಢಿಯಲ್ಲಿಲ್ಲದ ಪದಗಳನ್ನು ಮತ್ತು ಅವುಗಳ ರೂಪಗಳನ್ನು ತಿಳಿದುಕೊಳ್ಳುವುದು ಛಾಸರ್ ಕವಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವಶ್ಯಕವಾದ ಪೂರ್ವಸಿದ್ಧತೆ; ಅದೊಂದು ವಿವರಣಾತ್ಮಕ ಕ್ರಿಯೆ. ಆದರೆ ಛಾಸರ್‌ಕವಿಯ ಪದಕೋಶ, ಕಾಗುಣಿತ, ವ್ಯಾಕರಣ ಮತ್ತು ಪದಜೋಡಣೆ ಇತ್ಯಾದಿಗಳಲ್ಲಿ ಒಬ್ಬನು ಪ್ರಕಾಂಡ ಪಾಂಡಿತ್ಯವನ್ನು ಪಡೆದೂ, ಛಾಸರ್‌ನ ಯುಗ, ಆ ಯುಗದ ಸಾಮಾಜಿಕ ನಡವಳಿಕೆ, ಅದರ ನಂಬಿಕೆಗಳು, ಅದರ ಜ್ಞಾನಾಜ್ಞಾನಗಳು ಇವೆಲ್ಲವನ್ನೂ ಅಮೂಲಾಗ್ರವಾಗಿ ಅಧ್ಯಯನ ಮಾಡಿಯೂ – ಛಾಸರ್‌ನ ಕಾವ್ಯವನ್ನು ಅರ್ಥ ಮಾಡಿಕೊಳ್ಳದೇ ಇರಲು ಸಾಧ್ಯ” (೧೯೩೬).

ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಬೇಕು. ನವ್ಯ ವಿಮರ್ಶಕರಂತೆ ಎಲಿಯಟ್ ಚಾರಿತ್ರಿಕ ವಿಮರ್ಶೆಯನ್ನು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಅವನು ‘ಚಾರಿತ್ರಿಕ ಪ್ರಜ್ಞೆ’ಗೆ ಕೊಡುವ ಮಹತ್ವವೇ ಈ ಮಾತಿಗೆ ಸಾಕ್ಷಿ. ಎಲಿಯಟ್ ನಿರಾಕರಿಸುವುದು ಚಾರಿತ್ರಿಕ ವಿಮರ್ಶೆಯಲ್ಲಿ ಅಂತರ್ಗತವಾದ ನಿಯತಿವಾದಿ ದೃಷ್ಟಿಕೋನವನ್ನು ಮತ್ತು ಆಕರಗಳಿಗೆ ಹಾಗೂ ಪ್ರಭಾವಗಳಿಗೆ ಬೆಲೆ ಕೊಡುವ ಚಾರಿತ್ರಿಕ ವಿಮರ್ಶೆಯ ಒಂದು ಕವಲನ್ನು ಮಾತ್ರ.

‘ವಸ್ತು ಪ್ರತಿರೂಪ’ (objective correlative) ಪರಿಕಲ್ಪನೆಯನ್ನು ಮೊದಲು ಎಲಿಯಟ್ ‘ಹ್ಯಾಮ್ಲೆಟ್ ಅಂಡ್ ಹಿಸ್ ಪ್ರಾಬ್ಲಮ್ಸ್’ (೧೯೧೯) ಎಂಬ ಲೇಖನದಲ್ಲಿ ಮಂಡಿಸಿದನು. ಕಾವ್ಯಾಭಿವ್ಯಕ್ತಿಯ ಸ್ವರೂಪವನ್ನು ಚರ್ಚಿಸುತ್ತಾ, ಎಲಿಯಟ್ ಹೀಗೆ ಹೇಳುತ್ತಾನೆ :

“ತೀವ್ರ ಭಾವನೆಗಳನ್ನು (emotion) ಕಲೆಯ ರೂಪದಲ್ಲಿ ಅಭಿವ್ಯಕ್ತಿಗೊಳಿಸಲು ಇರುವ ಏಕಮೇವ ಮಾರ್ಗವೆಂದರೆ ‘ವಸ್ತು ಪ್ರತಿರೂಪ’; ಎಂದರೆ, ಒಂದು ವಸ್ತು ಸಮುಚ್ಛಯ, ಒಂದು ಸನ್ನಿವೇಶ, ಘಟನೆಗಳ ಒಂದು ಸರಣಿ – ಇವುಗಳು ಉದ್ದೇಶಿತ ಭಾವನೆಗಳ ಪ್ರಚೋದನೆಗೆ ಸೂತ್ರವಾಗುತ್ತವೆ; ಮತ್ತು ಇಂದ್ರಿಯಗಮ್ಯ ಅನುಭವಗಳಲ್ಲಿಯೇ ಕೊನೆಗೊಳ್ಳಬೇಕಾದ (ಮೇಲೆ ಸೂಚಿಸಿದ) ಬಾಹ್ಯ ಸಂಗತಿಗಳು ಕೊಡಲ್ಪಟ್ಟಾಗ ಆಯಯ ಉದ್ದೇಶಿತ ಭಾವನೆಗಳು ಕೂಡಲೇ ಉದ್ದೀಪನಗೊಳ್ಳುತ್ತವೆ.”

‘ವಿಭಾವಾನುಭಾವ ವ್ಯಭಿಚಾರೀ ಭಾವ ಸಂಯೋಗಾತ್ ರಸನಿಷ್ಪತ್ತಿಃ’ ಎಂಬ ಭರತನ ರಸಸೂತ್ರಕ್ಕೆ ಬಹು ಹತ್ತಿರ ಬರುವ ಎಲಿಯಟ್‌ನ ಈ ವ್ಯಾಖ್ಯಾನ ಹಿಂದೆ ಚರ್ಚಿಸಿದ ಅವನ ವ್ಯಕ್ತಿನಿರಸನ ವಾದದ ಅನುಸಿದ್ಧಾಂತವೇ ಆಗಿದೆ. ಒಂದೆರಡು ದಶಕಗಳ ಕಾಲ ತುಂಬಾ ಪ್ರಸಿದ್ಧವಾಗಿದ್ದ ಈ ಪರಿಕಲ್ಪನೆಗೆ ಕೃತಿಗೇ ಒತ್ತುಕೊಟ್ಟು ಲೇಖಕನನ್ನು ಮತ್ತು ಅವನ ವೈಯಕ್ತಿಕ ಭಾವನೆಗಳನ್ನು ಕೃತಿಯಿಂದ ದೂರವಿಡುತ್ತದೆ; ಮತ್ತು ‘ಕಾವ್ಯ’ವು ನೇರವಾಗಿ ಏನನ್ನೂ ಹೇಳುವುದಿಲ್ಲ ಎಂಬ ಎಲಿಯಟ್, ಪೌಂಡ್ ಮತ್ತಿತರರ ವಾದವನ್ನು ಸಮರ್ಥಿಸುತ್ತದೆ. ಪರೋಕ್ಷವಾಗಿ, ವೈಯಕ್ತಿಕವೆಂದು ತೋರುವ ಭಾವನೆಗಳಿಗೆ, ವಿಚಾರಗಳಿಗೆ ಮತ್ತು ಅನುಭವಗಳಿಗೆ ಒತ್ತುಕೊಡುವ ವರ್ಡ್ಸ್‌ವರ್ತ್ ಮುಂತಾದ ಇಂಗ್ಲಿಷ್ ರಮ್ಯಕವಿಗಳ ಕಾವ್ಯವನ್ನು ಇಲ್ಲಿ ಉಚಿತ ವಸ್ತು ಪ್ರತಿರೂಪವಿಲ್ಲೆಂದು ನಿರಾಕರಿಸಲು ಒಂದು ಸಾಧನವಾಗುತ್ತದೆ.

ಪ್ರಾಯಃ, ಎಲಿಯಟ್‌ನ ಅತ್ಯಂತ ಪ್ರಭಾವಶಾಲೀ ಪರಿಕಲ್ಪನೆಯೆಂದರೆ, ‘ಏಕೀಕೃತ ಸಂವೇದನೆ’ (Unified sensibility). ‘ಮೆಟಫಿಸಿಕಲ್ ಕವಿಗಳನ್ನು ಕುರಿತು’ (On Metaphysical Poets, 1921) ಎಂಬ ಪ್ರಸಿದ್ಧ ಪ್ರಬಂಧದಲ್ಲಿ ಹೇಗೆ ಡನ್, ಮಾರ್ವೆಲ್ ಮುಂತಾದವರ ಕಾವ್ಯ ಮಿಲ್ಟನ್ ಕಾವ್ಯಕ್ಕಿಂತ ಭಿನ್ನ ಮತ್ತು ಹೇಗೆ ಅವರ ಕವನಗಳಲ್ಲಿ ವೈಚಾರಿಕತೆ ಮತ್ತು ಭಾವನೆ ಬೆರೆತು ಒಂದಾಗುತ್ತವೆ ಎಂಬ ಅಂಶವನ್ನು ಚರ್ಚಿಸುತ್ತಾ ಎಲಿಯಟ್ ಹೀಗೆ ಹೇಳುತ್ತಾನೆ :

“ಡನ್ ಕವಿಗೆ ವಿಚಾರವೊಂದು ಅನುಭವವಾಗಿತ್ತು; ಅದು ಅವನ ಇಡೀ ಸಂವೇದನೆಯನ್ನು ಮಾರ್ಪಡಿಸುತ್ತಿತ್ತು. ಕವಿಯ ಮನಸ್ಸು ತನ್ನ (ಸೃಜನ) ಕಾರ್ಯಕ್ಕೆ ಸಂಪೂರ್ಣವಾಗಿ ಸಜ್ಜಾದಾಗ, ಅದು ಸದಾ ಭಿನ್ನ ಭಿನ್ನ ಅನುಭವಗಳನ್ನು ಒಂದುಗೂಡಿಸುತ್ತಿರುತ್ತದೆ. ಸಾಮಾನ್ಯ ವ್ಯಕ್ತಿಯೊಬ್ಬನ ಅನುಭವವು ಅವ್ಯವಸ್ಥಿತವಾಗಿ, ಅಕ್ರಮವಾಗಿ ಮತ್ತು ತುಣುಕು ತುಣುಕಾಗಿರುತ್ತದೆ; ಅವನು ಯಾರನ್ನೋ ಪ್ರೀತಿಸುತ್ತಾನೆ ಮತ್ತು (ದಾರ್ಶನಿಕ) ಸ್ಪಿನೋಜಾನನ್ನು ಓದುತ್ತಾನೆ; ಆದರೆ ಈ ಎರಡು ಅನುಭವಗಳು ಬೇರೆ ಬೇರೆಯಾಗಿಯೇ ಇರುತ್ತವೆ; ಮತ್ತು ಈ ಅನುಭವಗಳಿಗೂ ಒಂದು ಟೈಪ್‌ರೈಟರ್‌ನ ಸದ್ದಿಗೂ ಅಥವಾ ಅಡಿಗೆಯ ವಾಸನೆಗೂ ಏನೂ ಸಂಬಂಧವಿರುವುದಿಲ್ಲ. ಆದರೆ, ಕವಿಯ ಮನಸ್ಸಿನಲ್ಲಿ ಇವೆಲ್ಲಾ ಅನುಭವಗಳು ಒಂದಾಗಿ ಬೆರೆತು ನೂತನ ಅನುಭವ ಪ್ರಕಾರಗಳನ್ನು ನಿರ್ಮಿಸುತ್ತಿರುತ್ತವೆ.”

ಈ ಸಂದರ್ಭದಲ್ಲಿ ಶ್ರೇಷ್ಠ ಕಾವ್ಯವನ್ನು “ಬುದ್ಧಿ-ಭಾವಗಳ ವಿದ್ಯುದಾಲಿಂಗನ” ಎಂದು ಕುವೆಂಪು ಅವರು ವರ್ಣಿಸಿರುವುದು ನೆನಪಿಗೆ ಬರುತ್ತದೆ (ಕಲಾಸುಂದರಿ, ೧೯೯೩ ಮುನ್ನುಡಿ). ಮೇಲ್ಕಾಣಿಸಿದ ಪ್ರಬಂಧದಲ್ಲಿ ಎಲಿಯಟ್ ಮಂಡಿಸುವ ವಾದವೇನೆಂದರೆ ‘ಮೆಟಫಿಸಿಕಲ್ ಕವಿಗಳವರೆಗೆ – ಎಂದರೆ ೧೭ನೆಯ ಶತಮಾನದ ಪೂರ್ವಾರ್ಧದವರೆಗೆ – ಇಂಗ್ಲಿಷ್ ಕಾವ್ಯದಲ್ಲಿ ಏಕೀಕೃತ ಸಂವೇದನೆಯಿತ್ತು; ಆದರೆ, ಅನಂತರ ಮಿಲ್ಟನ್ ಮತ್ತು ೧೮ನೆಯ ಶತಮಾನದ ಪೋಪ್ ಮುಂತಾದ ಕವಿಗಳ ಕಾವ್ಯದಲ್ಲಿ ಸಂವೇದನೆಯ ವಿದಳನ ಕ್ರಿಯೆ ಪ್ರಾರಂಭವಾಗಿ ಕಾವ್ಯ ಕೇವಲ ಬೌದ್ಧಿಕ ಸ್ತರದಲ್ಲಿ ಅಥವಾ ಭಾವನಾ ಸ್ತರದಲ್ಲಿ ಉಳಿಯಿತು” ಎಂಬುದು. ‘ಏಕೀಕೃತ ಸಂವೇದನೆ’ ಕೂಲ್‌ರಿಜ್ ಮಂಡಿಸುವ ಪ್ರತಿಭೆಯ ವ್ಯಾಖ್ಯಾನವನ್ನಾಧರಿಸಿದೆ; ಮತ್ತು ಎಲಿಯಟ್‌ನ ಅಭಿಪ್ರಾಯದಲ್ಲಿ ಅಂತಹ ಸಂವೇದನೆ ಡಾಂಟೆ, ಎಲಿಜಬೀಥನ್ ನಾಟಕಕಾರರು ಮತ್ತು ೧೯ನೆಯ ಶತಮಾನದ ಫ್ರೆಂಚ್ ಸಿಂಬಲಿಸ್ಟ್ ಕವಿಗಳು – ಇವರಲ್ಲಿ ಕಂಡುಬರುತ್ತದೆ.

ಪರಂಪರೆ, ವ್ಯಕ್ತಿನಿರಪೇಕ್ಷ ಕಾವ್ಯ, ವಸ್ತು – ಪ್ರತಿರೂಪ ಮತ್ತು ಏಕೀಕೃತ ಸಂವೇದನೆ – ಎಲಿಯಟ್ ರೂಪಿಸಿದ ಈ ಎಲ್ಲಾ ಪರಿಕಲ್ಪನೆಗಳೂ ಚರ್ಚಾಸ್ಪದ; ಮತ್ತು ಕಳೆದ ಶತಮಾನದ ಏಳನೆಯ ದಶಕದಿಂದ ಅನೇಕ ಕವಿ – ವಿಮರ್ಶಕರು ಈ ಪರಿಕಲ್ಪನೆಗಳನ್ನು ಟೀಕಿಸಿದ್ದಾರೆ. ಎಲ್ಲಾ ಬಗೆಯ ಟೀಕೆ – ವಿಮರ್ಶೆಗಳನ್ನು ಇಲ್ಲಿ ಪ್ರಸ್ತಾಪಿಸಲು ಸಾಧ್ಯವಿಲ್ಲದುದರಿಂದ ಕೆಲವೇ ಕೆಲವು ಬಹುಚರ್ಚಿತ ಅಂಶಗಳನ್ನು ದಾಖಲಿಸಬಹುದು.

ಎಲಿಯಟ್‌ನ ಬಹುಚರ್ಚಿತ ಪರಿಕಲ್ಪನೆಯೆಂದರೆ ಅವನು ರೂಪಿಸುವ ‘ಪರಂಪರೆ’. “ಹೋಮರ್‌ನಿಂದ ಮೊದಲಾಗಿ ಇಡೀ ಯುರೋಪ್ ಖಂಡದ ಸಾಹಿತ್ಯವೆಲ್ಲವೂ ಸಮಕಾಲೀನವಾಗಿ, ಒಂದು ಜೀವಂತ ವಿನ್ಯಾಸವಾಗಿ…” ಎಂದು ಎಲಿಯಟ್ ಮಂಡಿಸುವಾಗ ಎರಡು ಸಾವಿರ ವರ್ಷಗಳ ಅವಧಿಯಲ್ಲಿ, ಇಡೀ ಯುರೋಪ್‌ಖಂಡದಲ್ಲಿ, ಗುರುತಿಸಬಹುದಾದಂತಹ ಒಂದೇ ಅಖಂಡ ಪರಂಪರೆ ಇದ್ದಿತು, ಇದೆ ಎಂಬುದು ಗೃಹೀತ. ಆಧುನಿಕೋತ್ತರ ಚಿಂತಕರು ಆಕ್ಷೇಪಿಸುವಂತೆ ಇದೊಂದು ‘ಮಹಾಕಥನ’ (mega-narrative). ಧಾರ್ಮಿಕ – ಸಾಂಸ್ಕೃತಿ ಕ್ಷೇತ್ರಗಳಿರಲಿ, ಸಾಹಿತ್ಯಕ ಕ್ಷೇತ್ರದಲ್ಲಿಯೂ ಯಾವ ಕಾಲಖಂಡದಲ್ಲಿಯೂ ಏಕಮೇವ ಪರಂಪರೆ ಇರಲು ಸಾಧ್ಯವಿಲ್ಲ; ಯಾವಾಗಲೂ ಪ್ರಮುಖ ಧಾರೆಯೊಡನೆ ಇತರ ‘ಪರಿಧೀಯ’ (marginalised) ಧಾರೆಗಳು ಇರುತ್ತವೆ. ಅರ್ಥಾತ್, ಎಲಿಯಟ್ ಪರಂಪರೆಯನ್ನು ಏಕಮುಖಿಯಾಗಿ ಗ್ರಹಿಸುತ್ತಾನೆ; ಮತ್ತು ಪರಿಣಾಮತಃ ಆ ಗ್ರಹಿಕೆ ಸೀಮಿತ ಹಾಗೂ ಸಂಪ್ರದಾಯವಾದಿ ಎಂದೇ ಒಪ್ಪಬೇಕಾಗುತ್ತದೆ.

ಹಾಗೆ ನೋಡಿದರೆ, ಎಲಿಯಟ್‌ನ ಬಹುತೇಕ ವಿಚಾರಗಳು ಸಾಂಪ್ರದಾಯಿಕವೆಂದು ನಮಗೆ ತೋರುತ್ತವೆ. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಅಮೆರಿಕಾದಲ್ಲಿ ಬೆಳೆಯುತ್ತಿದ್ದ ತೀವ್ರ ವ್ಯಕ್ತಿವಾದ (Individualism) ದಿಂದ ಎಲಿಯಟ್ ಅಸ್ವಸ್ಥವಾಗಿದ್ದ; ವ್ಯಕ್ತಿವಾದದ ವಿರೋಧವೇ ಅವನನ್ನು ರಮ್ಯ ಕಾವ್ಯದ ವಿರೋಧಿಯನ್ನಾಗಿ ಮಾಡಿತು. “ಸಾಹಿತ್ಯದ ಗುರಿ ಉದಾರವಾದದ ವಿರುದ್ಧ ಹೋರಾಡುವುದು” ಎಂದು ಒಂದು ಸಂದರ್ಭದಲ್ಲಿ ಘೋಷಿಸಿದ ಎಲಿಯಟ್, ಇನ್ನೊಂದು ಸಂದರ್ಭದಲ್ಲಿ ತನ್ನನ್ನು ‘ರಾಜಕೀಯದಲ್ಲಿ ರಾಜತ್ವವಾದಿ, ಧರ್ಮದಲ್ಲಿ ಆಂಗ್ಲೋ – ಕ್ಯಾಥೋಲಿಕ್, ಸಾಹಿತ್ಯದಲ್ಲಿ ಅಭಿಜಾತ’ (೧೯೨೮) ಎಂದು ಗುರುತಿಸಿಕೊಂಡನು. “ಆಧುನಿಕ ಸಾಹಿತ್ಯವೆಲ್ಲವೂ ಧರ್ಮನಿರಪೇಕ್ಷತೆಯಿಂದ ಭ್ರಷ್ಟವಾಗಿದೆ” (The whole of modern literature is corrupted by what I call secularism) ಎಂದು ನಂಬಿದ್ದ ಎಲಿಯಟ್ ತನ್ನ ಸಮಕಾಲೀನ ಸಾಹಿತಿಗಳಾದ ಲಾರೆನ್ಸ್, ವರ್ಜೀನಿಯಾ ವುಲ್ಫ್ ಮುಂತಾದವರನ್ನು ಋಣಾತ್ಮಕವಾಗಿಯೇ ಗುರುತಿಸಿದ್ದನು. ಆದ್ದರಿಂದ ಎಲಿಯಟ್‌ನ ಪರಂಪರೆ ಕೇವಲ ಸಾಹಿತ್ಯಕವೇ ಅಲ್ಲದೆ ಧಾರ್ಮಿಕ – ನೈತಿಕ ಪರಂಪರೆಯೂ ಅಹುದು ಎಂಬುದು ನಮಗೆ ಗೊತ್ತಾಗುತ್ತದೆ. ಸುಲಭವಾಗಿ ಈ ಪರಿಕಲ್ಪನೆಯನ್ನು ಒಪ್ಪುವುದು ಅಸಾಧ್ಯ.

ಹಾಗೆಯೇ, ‘ಕವಿಗಿರುವುದು ವ್ಯಕ್ತಿತ್ವಲ್ಲ, ಒಂದು ಮಾಧ್ಯಮ – ಭಿನ್ನ ಭಿನ್ನ ಅಭಿಪ್ರಾಯಗಳನ್ನು ಮತ್ತು ಅನುಭವಗಳನ್ನು ನೂತನ ರೀತಿಗಳಲ್ಲಿ ಸಂಯೋಜಿಸುವ ಮಾಧ್ಯಮ ಮಾತ್ರ’ ಎಂಬ ನಿಲುವನ್ನು ಅನೇಕ ವಿಮರ್ಶಕರು ‘ಇದು ಕಾವ್ಯಸೃಷ್ಟಿಯನ್ನು ಯಾಂತ್ರಿಕವಾಗಿ ನೋಡುತ್ತದೆ’ ಎಂದು ಖಂಡಿಸುವುದನ್ನು ತಿರಸ್ಕರಿಸುವುದು ಕಷ್ಟ ಸ್ವತಃ ಎಲಿಯಟ್ ‘ಕಾವ್ಯದ ಮೂರು ಧ್ವನಿಗಳಲ್ಲಿ ಒಂದು ಕವಿಯದು’ ಎಂದು ಇನ್ನೊಂದು ಸಂದರ್ಭದಲ್ಲಿ ಮಂಡಿಸುತ್ತಾನೆ. ವ್ಯಕ್ತಿತ್ವವು ಕೇವಲ ಮಾಧ್ಯಮವೆಂಬ ನಿಲುವಾಗಲೀ ವಸ್ತುಪ್ರತಿರೂಪ ಪರಿಕಲ್ಪನೆಯಾಗಲೀ, ಕಾವ್ಯವನ್ನು ಸಂಪೂರ್ಣವಾಗಿ ಒಂದು ಪ್ರಜ್ಞಾಪೂರ್ವಕವಾದ ಕ್ರಿಯೆ ಎಂದು ಪರಿಭಾವಿಸುತ್ತದೆ. ಆದರೆ ಯೂಂಗ್ ಮುಂತಾದವರು ಪ್ರತಿಪಾದಿಸುವಂತೆ ಕಾವ್ಯ ಸೃಷ್ಟಿಯಲ್ಲಿ ಸುಪ್ತ ಪ್ರಜ್ಞೆಯ ಕಾರ್ಯವೇ ಹೆಚ್ಚು. ಅಲ್ಲದೆ, ಕಾವ್ಯ/ ಸಾಹಿತ್ಯ ಸೃಷ್ಟಿಯಾಗುವ ಮೊದಲು ಎಲ್ಲಾ ಸ್ವತಂತ್ರವಾಗಿ ಭಾವನೆಗಳು, ಅನುಭವಗಳು ಅಭಿವ್ಯಕ್ತಿಗಾಗಿ ಕಾಯುತ್ತಾ ಇರುವುದಿಲ್ಲ. ಕಾವ್ಯಸೃಷ್ಟಿಯೆಂದರೆ ಒಂದು ಕ್ರಮಬದ್ಧ ಜೋಡಣೆಯಲ್ಲ, ಅಜ್ಞಾತದ ಮೇಲಾಗುವ ಧಾಳಿ (a raid on the inarticulate) – ಕವಿಯಾಗಿ ಕಂಡುದನ್ನು ವಿಮರ್ಶಕನಾಗಿ ಎಲಿಯಟ್ ಒಪ್ಪದಿರುವುದೇ ಅವನ ವಿಮರ್ಶೆಯ ಬಹುದೊಡ್ಡ ವ್ಯಂಗ್ಯ.

ರೂಪನಿಷ್ಠ  ವಿಮರ್ಶೆಯ ಬೆಳವಣಿಗೆಯ ದೃಷ್ಟಿಯಿಂದ ಮುಖ್ಯವಾಗುವ ಐ.ಎ. ರಿಚರ್ಡ್ಸ್‌ನ ವಿಚಾರಗಳೆಂದರೆ, ಭಾಷೆಯ ಎರಡು ಉಪಯೋಗಗಳು ಮತ್ತು ಪ್ರಾಯೋಗಿಕ ವಿಮರ್ಶೆಯ ಪರಿಕಲ್ಪನೆ. ಭಾಷೆಯ ಸ್ವರೂಪ ಮತ್ತು ಉಪಯೋಗಗಳನ್ನು ಕುರಿತು ರಿಚರ್ಡ್ಸ್ ‘ವಿಜ್ಞಾನ ಮತ್ತು ಕಾವ್ಯ’ (Science and Poetry, 1926) ಗ್ರಂಥದಲ್ಲಿಯೂ ಮತ್ತು ‘ಸಾಹಿತ್ಯ ವಿಮರ್ಶೆಯ ತತ್ವಗಳು’ (Principles of Literary Criticism)  ಕೃತಿಯ ‘ಭಾಷೆಯ ಎರಡು ಉಪಯೋಗಗಳು’ ಲೇಖನದಲ್ಲಿಯೂ ಚರ್ಚಿಸುತ್ತಾನೆ (೧೯೨೬ : ೨೬೧-೭೧). ಕಾವ್ಯದಲ್ಲಾಗುವ ಭಾಷೆಯ  ಉಪಯೋಗ ಸಾಹಿತ್ಯೇತರ ಕ್ಷೇತ್ರಗಳಲ್ಲಾಗುವ ಭಾಷೆಯ ಉಪಯೋಗಕ್ಕಿಂತ ತೀರಾ ಭಿನ್ನವಾಗಿರುತ್ತದೆ. ಸಾಹಿತ್ಯೇತರ ಕ್ಷೇತ್ರಗಳಲ್ಲಿ ಉಪಯೋಗಿಸುವ ಭಾಷೆ ‘ವಸ್ತುಸೂಚಕ’ (referential) ವಾಗಿರುತ್ತದೆ, ಎಂದರೆ ಅಲ್ಲಿ ಬರುವ ಹೇಳಿಕೆಗಳು ನಿಜ ಜೀವನಕ್ಕೆ ಅನ್ವಯವಾಗುತ್ತವೆ. ಆದರೆ ಕಾವ್ಯದ (ಸಾಹಿತ್ಯದ) ಭಾಷೆ ‘ಭಾವೋದ್ದೀಪಕ’ (emotive) ವಾಗಿರುತ್ತದೆ, ಇಂತಹ ಭಾಷೆಯ ಗುರಿ ಯಾವುದೇ ವಸ್ತುವನ್ನು ಕುರಿತು ಸತಾರ್ಕಿಕ ನಿರ್ಣಯವನ್ನು ಕೊಡುವದಿಲ್ಲ. ಆದ್ದರಿಂದ ಇಲ್ಲಿ ಹೊರಜಗತ್ತಿಗೆ ಅನ್ವಯಿಸಿ ಕಾವ್ಯದಲ್ಲಿ ಬರುವ ಹೇಳಿಕೆ ಸತ್ಯವೆ ಅಲ್ಲವೆ ಎಂದು ನಿರ್ಧರಿಸುವ  ಪ್ರಶ್ನೆಯೇ ಬರುವುದಿಲ್ಲ. “ಈ ಅರ್ಥದಲ್ಲಿ (ಕಾವ್ಯದಲ್ಲಿ) ‘ಸತ್ಯ’ವೆಂದರೆ ‘ಆಂತರಿಕ ಅಗತ್ಯ’ ಅಥವಾ ‘ಔಚಿತ್ಯ’ (internal necessity or rightness)”  ಎಂದು ರಿಚರ್ಡ್ಸ್ ವಾದಿಸುತ್ತಾನೆ. ಇದೇ ರೀತಿ ಕಾವ್ಯಾತ್ಮಕ ಭಾಷೆಯ ಅನ್ವಯಾತ್ಮಕ ಗುಣವನ್ನು ರಷ್ಯನ್ ರೂಪನಿಷ್ಠ ವಿಮರ್ಶಕರೂ ಮತ್ತು ರಾಚನಿಕ ವಿಮರ್ಶಕರೂ ತಿರಸ್ಕರಿಸುತ್ತಾರೆ. ಆದರೆ ಅಮೆರಿಕನ್ ನವ್ಯ ವಿಮರ್ಶಕರು ಎಲ್ಲೋ ಒಂದು ಕಡೆ ಸಾಹಿತ್ಯಿಕ ಸತ್ಯ ಹೊರಜಗತ್ತಿಗೆ ಅನ್ವಯವಾಗುವುದರಿಂದಲೇ ಸಾಹಿತ್ಯಕ್ಕೆ ಸಮಾಜದಲ್ಲಿ ಪ್ರಮುಖ ಸ್ಥಾನವಿದೆಯೆಂದು ನಂಬುತ್ತಾರೆ. ಆದ್ದರಿಂದಲೇ ನವ್ಯ ವಿಮರ್ಶಕರು ಮೂಲತಃ ಮಾನವತಾವಾದಿಗಳು.

ರಿಚರ್ಡ್ಸ್‌ನ ‘ಪ್ರಾಯೋಗಿಕ ವಿಮರ್ಶೆ’ (Practical Criticism, 1929)  ಅವನು ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಅನೇಕ ವರ್ಷಗಳ ಕಾಲ ತನ್ನ ವಿದ್ಯಾರ್ಥಿಗಳೊಡನೆ ಮಾಡಿದ ಪ್ರಯೋಗದಿಂದ ಜನ್ಮತಾಳಿತು. “ವಿಮರ್ಶಾತ್ಮಕ ತತ್ವಗಳನ್ನು ಬಹು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಖೇದದ ವಿಷಯವೆಂದರೆ ಅತ್ಯುತ್ಕೃಷ್ಟ ವಿಮರ್ಶಾ ವಿಧಿವಿಧಾನಗಳೂ ಒಳ್ಳೆಯ(ಸಾಹಿತ್ಯಿಕ) ತೀರ್ಮಾನಗಳಿಗಿಂತ ಕೆಟ್ಟ ತೀರ್ಮಾನಗಳಿಗೇ ಕಾರಣವಾಗಿವೆ” ಎಂಬ ಊಹೆಯನ್ನು ಪರೀಕ್ಷಿಸಲು ರಿಚರ್ಡ್ಸ್ ತನ್ನ ವಿದ್ಯಾರ್ಥಿಗಳಿಗೆ ಕೆಲವು ಕವಿತೆಗಳನ್ನು ವಿಮರ್ಶೆಗಾಗಿ ಕೊಡುತ್ತಾನೆ. ಈ ಕವಿತೆಗಳಲ್ಲಿ ಕವಿಯ ಹೆಸರು ಮತ್ತು ಕಾಲ ಇವೆರಡರ ಸೂಚನೆ ಎಲ್ಲಿಯೂ ಇಲ್ಲ. ವಿದ್ಯಾರ್ಥಿಗಳಿಂದ ಬಂದ ಇಂತಹ ವಿಮರ್ಶೆಗಳನ್ನು (Protocols) ರಿಚರ್ಡ್ಸ್ ವ್ಯಾಖ್ಯಾನಿಸುತ್ತಾನೆ. ಈ ವ್ಯಾಖ್ಯಾನಗಳಲ್ಲಿ ಪದೇ ಪದೇ ಅವನು ನಮಗೆ ತೋರಿಸಿಕೊಡುವುದು – ನಾವು ಕಾವ್ಯಕ್ಕೆ ಸ್ಪಂದಿಸುವಾಗ ನಮ್ಮ ಪೂರ್ವಾಗ್ರಹಗಳು ಮತ್ತು ರೂಢಿಗತ ಪ್ರತಿಕ್ರಿಯೆಗಳು (Stock responses) ಜಾಗೃತವಾಗಿ ನಮ್ಮ ಕಾವ್ಯ ಸ್ಪಂದನವನ್ನು ಹೇಗೆ ಊಹಿಸಲಾಗದಷ್ಟು ತಪ್ಪು ದಾರಿಗೆಳೆಯುತ್ತವೆ ಎಂಬ ನಿಷ್ಠುರ ಸತ್ಯವನ್ನು. ಈ ಪ್ರಯೋಗದ ಆಧಾರದ ಮೇಲೆ ರಿಚರ್ಡ್ಸ್ ಹೇಳುವುದೇನೆಂದರೆ : ಉತ್ತಮ ಸಾಹಿತ್ಯ ಸ್ಪಂದನವು ತನ್ನಿಂದ ತಾನೇ ಯಾರಿಗೂ ಬರುವುದಿಲ್ಲ; ಅದನ್ನು ಒಂದು ಶಿಸ್ತಾಗಿ ಪರಿಗಣಿಸಿ ವ್ಯವಸ್ಥಿತ ರೀತಿಯಲ್ಲಿ ವಿದ್ಯಾರ್ಥಿಗಳಿಗೆ (ಹಾಗೂ ಸಾಹಿತ್ಯಾಸಕ್ತರಿಗೆ) ಅದರಲ್ಲಿ ತರಬೇತು ನೀಡಬೇಕು. ಈ ತರ್ಕದ ಆಧಾರದ ಮೇಲೆಯೇ, ತರಗತಿಯಲ್ಲಿ ಉಪಯೋಗಿಸುವ ದೃಷ್ಟಿಯಿಂದಲೇ “ಕಾವ್ಯದ ಅರ್ಥಗ್ರಹಣ” (Understanding Poetry, 1943) ಮುಂತಾದ ಸುಪ್ರಸಿದ್ಧ ವಿಮರ್ಶಾತ್ಮಕ ಗ್ರಂಥಗಳನ್ನು ಕ್ಲಿಯಂತ್ ಬ್ರೂಕ್ಸ್ ಮತ್ತು ಆರ್.ಪಿ. ವಾರನ್ ಹೊರತರುತ್ತಾರೆ.

ರಿಚರ್ಡ್ಸ್ ಮಂಡಿಸುವ ವಿಶಿಷ್ಟ ಹಾಗೂ ಅಸಾಂಪ್ರದಾಯಿಕ ‘ಮೌಲ್ಯಮೀಮಾಂಸೆ’ (Theory of Value) ಪ್ರಸಿದ್ಧವಾಗಿದೆ. ಸಾಧಾರಣವಾಗಿ,  ತತ್ವಶಾಸ್ತ್ರಜ್ಞರು ಮತ್ತು ಸಾಹಿತಿ-ವಿಮರ್ಶಕರು ‘ಮೌಲ್ಯ’ವನ್ನು ಸ್ವತಃಸಿದ್ಧವೆಂದು ಬಗೆದು ಅದರ ಆಧ್ಯಾತ್ಮಿಕ – ನೈತಿಕ ನೆಲೆಗಳನ್ನು ಗುರುತಿಸುತ್ತಾರೆ; ಮತ್ತು ಜ್ಞಾನ, ಪ್ರೀತಿ, ಆದರ, ಸೌಂದರ್ಯಾಸ್ವಾದನೆ ಇತ್ಯಾದಿಗಳನ್ನು ಸಾರ್ವಕಾಲಿಕ ಮೌಲ್ಯಗಳ ನಿದರ್ಶನಗಳೆಂದು ಪರಿಗಣಿಸುತ್ತಾರೆ. ಆದರೆ, ಇವೆಲ್ಲವೂ ಸಾಪೇಕ್ಷವೆಂದು ಮತ್ತು ಚರ್ಚೆಯೇ ಸಾಧ್ಯವಾಗದ ಅಮೂರ್ತ ವಿಚಾರಗಳೆಂದು ರಿಚರ್ಡ್ಸ್ ಇಂತಹ ವ್ಯಾಖ್ಯಾನವನ್ನು ತಿರಸ್ಕರಿಸುತ್ತಾನೆ. ‘ಮೌಲ್ಯ’ದ ಮೂರ್ತ ಹಾಗೂ ಪ್ರಾಯೋಗಿಕ ಸ್ವರೂಪದ ವ್ಯಾಖ್ಯಾನವನ್ನು ‘ಮೌಲ್ಯವನ್ನು ಕುರಿತ ಒಂದು ಮನೋವೈಜ್ಞಾನಿಕ ಮೀಮಾಂಸೆ’ ಎಂಬ ಲೇಖನದಲ್ಲಿ ಹೀಗೆ ಕೊಡುತ್ತಾನೆ :

“ಯಾವುದು ನಮ್ಮ ಕಾಂಕ್ಷೆಗಳನ್ನು (appetencies) ತೃಪ್ತಿಪಡಿಸುತ್ತದೋ ಮತ್ತು ಹಾಗೆ ಮಾಡುವಾಗ ಅವುಗಳಿಗಿಂತ ಹೆಚ್ಚಿನ ಕಾಂಕ್ಷೆಗಳನ್ನು ಅತೃಪ್ತಿ ಗೊಳಿಸುವುದಿಲ್ಲವೋ ಅವೆಲ್ಲವೂ ಮೌಲ್ಯಾತ್ಮಕ. ಎಂದರೆ, ಯಾವುದಾದರೂ ಒಂದು ಕಾಂಕ್ಷೆಯನ್ನು ತೃಪ್ತಿಪಡಿಸದಿರಲು ಕಾರಣ ಹಾಗೆ ಮಾಡಿದರೆ ಅದಕ್ಕಿಂತ ಹೆಚ್ಚಿನ ಮಹತ್ವದ ಕಾಂಕ್ಷೆಗಳು ತಿರಸ್ಕರಿಸಲ್ಪಡುತ್ತವೆ ಎಂಬುದು. ಹೀಗೆ ನೋಡಿದಾಗ ನೀತಿಶಾಸ್ತ್ರವೆಂಬುದು ಕೇವಲ ವ್ಯಕ್ತಿಯ/ಸಮಾಜದ ಯುಕ್ತಾಯುಕ್ತ ವಿವೇಚನೆಯೆಂದು ಮತ್ತು ಶೀಲಾಶ್ಲೀಲ ಸಂಹಿತೆ ಅನುಕೂಲ ಸೂತ್ರವೆಂದು ನಮಗರಿವಾಗುತ್ತದೆ’ (‘ಸಾಹಿತ್ಯ ವಿಮರ್ಶೆಯ ತತ್ವಗಳು’, ಪು. ೩೬).

ಪ್ರವೃತ್ತಿಗಳಲ್ಲಿ ಅಥವಾ ಆವೇಗಗಳಲ್ಲಿ (impulses) ತರತಮ ಶ್ರೇಣಿಯನ್ನು ರಿಚರ್ಡ್ಸ್ ಒಪ್ಪುತ್ತಾನೆ; ಮತ್ತು ಕೆಲವು ಪ್ರವೃತ್ತಿಗಳ ತೃಪ್ತಿ ಕೇವಲ ಸಾಧನವಾದರೆ, ಮತ್ತೆ ಕೆಲವು ಪ್ರವೃತ್ತಿಗಳ ತೃಪ್ತಿ ಸಾಧ್ಯವೆಂದೂ ಒಪ್ಪುತ್ತಾನೆ. ರಿಚರ್ಡ್ಸ್‌ನ ವಾದದ ಸಾರಾಂಶವೆಂದರೆ, ‘ಇತರ ಮಹತ್ತರ ಕಾಂಕ್ಷೆಗಳನ್ನು ತಿರಸ್ಕರಿಸದೆ, ಯಾವುದು ಅತಿ ಹೆಚ್ಚಿನ ಕಾಂಕ್ಷೆಗಳನ್ನು ಪೂರೈಸುತ್ತದೋ ಮತ್ತು ಅತೀ ಹೆಚ್ಚು ಜಿಹಾಸೆಗಳನ್ನು (aversions) ದೂರ ಮಾಡುತ್ತದೋ ಅದರ ಮೌಲ್ಯ ಅತಿ ಶ್ರೇಷ್ಟ’ ಆದರೆ ಇಂತಹ ಮೌಲ್ಯಾತ್ಮಕ ಚಟುವಟಿಕೆಗಳಿಗೆ ಆಧುನಿಕ ಸಮಾಜದಲ್ಲಿ ಅವಕಾಶಗಳು ಕಮ್ಮಿಯಾಗುತ್ತಿವೆ. ಯಾಕೆಂದರೆ ಆಧುನಿಕ ಸಮಾಜ ಹೆಚ್ಚು ಹೆಚ್ಚು ಸಾಂಸ್ಥಿಕೀಕರಣಕ್ಕೊಳಗಾಗುತ್ತಿದೆ; ಮತ್ತು ಸಾಂಸ್ಥಿಕೀಕರಣವು ಸಾಮಾಜಿಕ ಬದುಕಿನಲ್ಲಿ ಸಮಾನತೆಯನ್ನು ಸ್ಥಾಪಿಸಲು ವ್ಯಕ್ತಿಯ ಚಟುವಟಿಕೆಗಳ ಮೇಲೆ ಅನೇಕ ವಿಧದ ನಿರ್ಬಂಧಗಳನ್ನು ಹೇರುತ್ತದೆ. ಸಮಷ್ಟಿಯ ಬದುಕಿನಲ್ಲಿ ಸಮಾನತೆಯನ್ನು ನಿರ್ಮಿಸಲು ಪ್ರತಿಯೊಂದು ಸಮಾಜವೂ ಅನೇಕ ಕ್ಷೇತ್ರಗಳಲ್ಲಿ ಸಂಪ್ರದಾಯಗಳನ್ನು ಹುಟ್ಟುಹಾಕುತ್ತದೆ; ಮತ್ತು ಸಂಪ್ರದಾಯಗಳು ನಿಧಾನವಾಗಿ ಬದಲಾಗುತ್ತವೆ. ನಿದರ್ಶನಾರ್ಥವಾಗಿ ಆಧುನಿಕ ಯುಗದಲ್ಲಿಯೂ ಮೌಲ್ಯವೆಂದು ಪರಿಗಣಿಸಿರುವ ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಸಂತಾನ – ನಿಯಂತ್ರಣದ ಬಗ್ಗೆ ಇರುವ ಧಾರ್ಮಿಕ ನಿಲುವು ಇವುಗಳನ್ನು ಪರಿಗಣಿಸಬಹುದು.

ಮೌಲ್ಯದ ಇಂತಹ ವ್ಯಾವಹಾರಿಕ / ಭೌತಿಕ ವ್ಯಾಖ್ಯಾನದ ಆಧಾರದ ಮೇಲೆಯೇ ರಿಚರ್ಡ್ಸ್ ಆಧುನಿಕ ಸಮಾಜದಲ್ಲಿ ಸಾಹಿತ್ಯ, ಸಂಗೀತ ಮುಂತಾದ ಲಲಿತಕಲೆಗಳ ಸ್ಥಾನವನ್ನು ಮತ್ತು ಮಹತ್ವವನ್ನು ಗುರುತಿಸುತ್ತಾನೆ. ತನ್ನ ‘ಸಂವಹನ ಮತ್ತು ಕಲಾವಿದ’ ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾನೆ : “ಲಲಿತಕಲೆಗಳು ದಾಖಲಿಸಲ್ಪಟ್ಟ ನಮ್ಮ ಮೌಲ್ಯಗಳ ಉಗ್ರಾಣ… ಅವುಗಳು ಭಿನ್ನ ಭಿನ್ನ ಅನುಭವಗಳ ಮೌಲ್ಯಗಳ ಬಗ್ಗೆ ಮಾಡಲ್ಪಟ್ಟಿರುವ ಅತಿ ಮುಖ್ಯ ತೀರ್ಮಾನಗಳನ್ನು ದಾಖಲಿಸುತ್ತವೆ… ಕಲಾಕೃತಿಗಳನ್ನು ಹೊರತುಪಡಿಸಿದರೆ ನಮ್ಮ ಭಿನ್ನ ಅನುಭವಗಳನ್ನು ನಾವು ತುಲನಾತ್ಮಕವಾಗಿ ನೋಡುವುದೇ ಅಸಾಧ್ಯವಾಗುತ್ತದೆ. ಏಕೆಂದರೆ, ಯಾವ ಅನುಭವಗಳು ಹೆಚ್ಚು/ ಕಮ್ಮಿ ಮೌಲ್ಯಾತ್ಮಕವಾಗಿವೆ ಎಂದು ನಿರ್ಧರಿಸಲು ಅಗತ್ಯವಾದ ಅತ್ಯುತ್ತಮ ಆಧಾರಗಳನ್ನು ಅಥವಾ ಸಾಕ್ಷ್ಯಗಳನ್ನು ಕಲಾಕೃತಿಗಳು ನಮಗೆ ಒದಗಿಸುತ್ತವೆ” (೧೯೨೪ : ಪು. ೨೨-೨೩).

ಇಲ್ಲಿ ನಾವು ಲಕ್ಷಿಸಬೇಕಾದ ಅಂಶವೆಂದರೆ, ಸಾಹಿತ್ಯವೂ ಸೇರಿದಂತೆ ಲಲಿತಕಲೆಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯಲು, ರಿಚರ್ಡ್ಸ್ ಎಲ್ಲಿಯೂ ಧಾರ್ಮಿಕ, ನೈತಿಕ ಅಥವಾ ಆಧ್ಯಾತ್ಮಿಕ ಸಮರ್ಥನೆಯನ್ನು ಕೊಡುವುದಿಲ್ಲ. ಎಂದರೆ, ಸಾಹಿತ್ಯ, ಸಂಗೀತ ಇತ್ಯಾದಿಗಳ ‘ಬೋಧನೆ’ಯ ಆಯಾಮ ರಿಚರ್ಡ್ಸ್‌ಗೆ ಮುಖ್ಯವಾಗುವುದಿಲ್ಲ. ಅವನ ವಾದವೇನೆಂದರೆ ಶ್ರೇಷ್ಠ ಕಲಾಕೃತಿಯ ಅನುಭವ ಒಂದು ವಿಶಿಷ್ಟ ಮನಸ್ಥಿತಿಗೆ ಕಾರಣವಾಗುತ್ತದೆ. ಪ್ರತಿಕ್ರಿಯೆಗಳಿಗೆ ಅಸಾಧಾರಣ ಸಾಂಗತ್ಯ ಮತ್ತು ಕ್ರಮವನ್ನು ಕೊಡುವ ಯಾವುದೇ ಸಾಹಿತ್ಯಕೃತಿಯೂ / ಕಲಾಕೃತಿಯೂ ‘ಸಂಪೂರ್ಣ ಬಿಡುಗಡೆಯ, ಉಪಶಮನದ, ಹೆಚ್ಚಿದ ಸಾಮರ್ಥ್ಯದ ಮತ್ತು ಆರೋಗ್ಯಪೂರ್ಣ’ ಮನಸ್ಥಿತಿಯನ್ನುಂಟು ಮಾಡುತ್ತದೆ. ಇದೇ ಕಲಾಕೃತಿಯ ಅತಿ ಶ್ರೇಷ್ಠ ಮೌಲ್ಯ. (ಈ ಸಂದರ್ಭದಲ್ಲಿ ಸರಿಸುಮಾರು ಇದೇ ನೆಲೆಯಲ್ಲಿ ಅಭಿನವಗುಪ್ತನು ರಸಾನುಭವವನ್ನು ವ್ಯಾಖ್ಯಾನಿಸುವುದನ್ನು ನಾವು ಗಮನಿಸಬಹುದು…. “ಸಕಲ ವೈಷಯಿಕೋಪರಾಗಶೂನ್ಯ ಶುದ್ಧ ಪರಯೋಗಿಗತಸ್ವಾತ್ಮನಂದೈಕಘನಾನುಭವವಾಚ್ಚ ವಿಶಿಷ್ಯತೆ’ – ‘ಎಲ್ಲಾ ವಿಷಯಜ್ಞಾನವನ್ನು ಶೂನ್ಯವಾಗಿಸಿ ಶುದ್ಧ ರೂಪವನ್ನು ಪಡೆಯುವ ವರಯೋಗಿಗೆ ಸಾಧ್ಯವಾಗುವ ಆತ್ಮಾನಂದ ರೂಪದ ಏಕಘನಾನುಭವದಿಂದ ವಿಶಿಷ್ಟವಾದುದು’ ರಸಾನುಭವ : ‘ಅಭಿನವಗುಪ್ತ’,೧೨೬-೧೨೭). ಈ ಕಾರಣದಿಂದಲೇ, “ಓದುಗರಲ್ಲಿ / (ಪ್ರೇಕ್ಷಕರಲ್ಲಿ) ಸ್ಪಂದನಶೀಲತೆಯ ಮಟ್ಟವನ್ನು ಹೆಚ್ಚಿಸುವುದು ಇಂದಿನ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು; ಮತ್ತು ಸ್ಪಂದನಶೀಲತೆಯ ಮಟ್ಟವನ್ನು ಹೆಚ್ಚಿಸುವ / ಕಮ್ಮಿ ಮಾಡುವ ಸಾಧನಗಳಲ್ಲಿ ಕಲೆಗಳು ಅತಿಮುಖ್ಯ” ಎಂದು ರಿಚರ್ಡ್ಸ್ ವಾದಿಸುತ್ತಾನೆ. (ಕಲೆ, ಆಟ, ಮತ್ತು ನಾಗರಿಕತೆ, ಪು. ೧೮೪).

ಎಫ್.ಆರ್. ಲೀವಿಸ್‌ನ ವಿಚಾರಗಳ ಚರ್ಚೆಗೆ ಮೊದಲು ಸ್ಥೂಲವಾಗಿಯಾದರೂ ರಿಚರ್ಡ್ಸ್‌ನ ಶಿಷ್ಯನಾದ ವಿಲಿಯಮ್ ಎಂಪ್ಸನ್‌ನ ‘ಅರ್ಥಸಂದಿಗ್ಧತೆಯ ಏಳು ಪ್ರಕಾರಗಳು’ (Seven Types of Ambiguity, 1930) ಎಂಬ ಕೃತಿಯನ್ನು ನೋಡಬೇಕು. ಏಕೆಂದರೆ, ಮುಂದೆ ಸುಮಾರು ೧೯೩೦-೬೦ ರವರೆಗೆ ಅತ್ಯಂತ ಪ್ರಭಾವಶಾಲಿಯಾಗಿದ್ದ ನವ್ಯ ವಿಮರ್ಶೆ ನಿಜವಾಗಿ ಎಂಪ್ಸನ್‌ನಿಂದಲೇ ಪ್ರಾರಂಭವಾಗುತ್ತದೆ. ಗ್ರಂಥದ ಹೆಸರು ಸಂದಿಗ್ಧತೆಯ ‘ಏಳು’ ಪ್ರಕಾರಗಳು ಎಂದಿದ್ದರೂ ಎಂಪ್ಸನ್ ಸ್ವತಃ ಒಪ್ಪಿಕೊಳ್ಳುವಂತೆ ಆ ಸಂಖ್ಯೆ ಕೇವಲ ಯಾದೃಚ್ಛಿಕ; ಪ್ರಕಾರಗಳು ಆರೂ ಆಗಬಹುದು. ‘ಸಂದಿಗ್ಧತೆ’ (ambiguity) ಯನ್ನು ಎಂಪ್ಸನ್‌ಹೀಗೆ ವ್ಯಾಖ್ಯಾನಿಸುತ್ತಾನೆ :

“ಹೀಗೆ ಒಂದೇ ಪದವು ಪರಸ್ಪರ ಸಂಬಂಧಿತ ಅಥವಾ ಪರಸ್ಪರ ಪೂರಕ, ಅಥವಾ ಎಲ್ಲವು ಒಟ್ಟಾರೆಯಾಗಿ ಒಂದು ಸಂಬಂಧವನ್ನು ಅಥವಾ ಪ್ರಕ್ರಿಯೆಯನ್ನು ಸೂಚಿಸುವ ಭಿನ್ನ ಅರ್ಥಗಳನ್ನು ಹೊಂದಿರಬಹುದು. ಈ ವಿಧದ (ವಿಶ್ಲೇಷಣಾತ್ಮಕ) ಶ್ರೇಣಿಯನ್ನು ನಾವು ಉದ್ದಕ್ಕೂ ಪುನರಾವರ್ತಿಸಬಹುದು. ‘ಸಂದಿಗ್ಧತೆ’ಯೆಂಬುದೇ ಉದ್ದೇಶಿತ ಅರ್ಥದ ಅನಿಶ್ಚಯತೆಯನ್ನು, ಅನೇಕ ಅರ್ಥಗಳನ್ನು ಸೂಚಿಸುವ ಉದ್ದೇಶವನ್ನು, ಎರಡು ಸೂಚಿತ ಅರ್ಥಗಳನ್ನು ಸೂಚಿಸುವ ಉದ್ದೇಶವನ್ನು, ಎರಡು ಸೂಚಿತ ಅರ್ಥಗಳಲ್ಲಿ ಯಾವುದಾದರೂ ಉದ್ದೇಶಿತವಾಗಬಹುದಾದ ಸಾಧ್ಯತೆಯನ್ನು ಮತ್ತು ಒಂದು ಹೇಳಿಕೆಗೆ ಅನೇಕಾರ್ಥಗಳು ಇರುತ್ತವೆಯೆಂಬ ಸಂಗತಿಯನ್ನು ನಮ್ಮ ಅರಿವಿಗೆ ತರುತ್ತದೆ”.

ಇದೇ ವಿಧದ ವ್ಯಾಖ್ಯಾನವನ್ನು ಮುಂದುವರಿಸಿ, ಇನ್ನೊಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾನೆ : “ವಿಶೇಷತಃ (ಅರ್ಥಗಳಲ್ಲಿ) ಸ್ವವಿರೋಧವಿದ್ದರೆ, ಅದು ಕರ್ಷಣವನ್ನು (tension) ಸೂಚಿಸುತ್ತದೆ; ಸ್ವವಿರೋಧ ಹೆಚ್ಚಾದಷ್ಟೂ ಅವುಗಳ ಕರ್ಷಣವು ತೀವ್ರವಾಗುತ್ತದೆ”.

ಈ ವ್ಯಾಖ್ಯಾನದ ಹಿನ್ನೆಲೆಯಲ್ಲಿ, ಅನೇಕ ಪ್ರಸಿದ್ಧ – ಅಪ್ರಸಿದ್ಧ ಇಂಗ್ಲಿಷ್ ಕವನಗಳ (ಶೇಕ್ಸ್‌ಪಿಯರ್‌ಗೆ ಅಗ್ರಸ್ಥಾನ) ಅತಿ ಸೂಕ್ಷ್ಮ, ಅರ್ಥಪೂರ್ಣ ಹಾಗೂ ರೋಚಕ ವಿಶ್ಲೇಷಣೆಯನ್ನು ಎಂಪ್ಸನ್‌ಕೈಗೊಳ್ಳುತ್ತಾನೆ. ಇವನ ದೃಷ್ಟಿಯಲ್ಲಿ ಯಾವ ಶ್ಲೇಷೆಯೂ (ಶೇಕ್ಸ್‌ಪಿಯರ್‌ನಲ್ಲಿ) ಯಾಂತ್ರಿಕ ಅಥವಾ ನಿರುಪಯುಕ್ತವಲ್ಲ; ಯಾವುದೂ ಅಚ್ಚಿನ ದೋಷವಲ್ಲ, ಲೇಖಕನ ನಿರ್ಲಕ್ಷ್ಯದ ಪರಿಣಾಮವಲ್ಲ. ಒಂದು ಸಾಲು, ಪದ್ಯ ಕ್ಲಿಷ್ಟವಾಗಿದ್ದಷ್ಟೂ ಆ ಕ್ಲಿಷ್ಟತೆಯನ್ನು ಬಗೆ ಬಗೆಯಾಗಿ ವ್ಯಾಖ್ಯಾನಿಸುವುದರಲ್ಲಿ ಎಂಪ್ಸನ್‌ಗೆ ಮಹದಾನಂದ.

ಸಂಕ್ಷೇಪವಾಗಿ ಹೇಳಬೇಕಾದರೆ, ಎಂಪ್ಸನ್‌ನ ವಿಶಿಷ್ಟ ಸಾಧನೆಯೆಂದರೆ ಯಾವ ಯಾವ ಅಂಶಗಳನ್ನು ಕ್ಲಿಷ್ಟ, ಅಸ್ಪಷ್ಟ, ಅತಾರ್ಕಿಕ ಎಂದೆಲ್ಲಾ ಇತರ ಪಂಡಿತರು ತಿರಸ್ಕರಿಸುತ್ತಿದ್ದರೋ, ಕಾವ್ಯದ ಮಿತಿ ಅಥವಾ ದೌರ್ಬಲ್ಯವೆಂದು ಪರಿಗಣಿಸುತ್ತಿದ್ದರೋ ಅವೇ ಅಂಶಗಳನ್ನು ಶ್ರೇಷ್ಠ ಕಾವ್ಯದ ಪ್ರಮುಖ ಲಕ್ಷಣಗಳೆಂದು ಸಮರ್ಥಿಸಿದುದು. ಎಂಪ್ಸನ್‌ನ ಮತ್ತೊಂದು ಹೆಗ್ಗಳಿಕೆಯೆಂದರೆ ಇವನಿಗಿಂತ ಮೂರು – ನಾಲ್ಕು ದಶಕಗಳ ನಂತರ ಮೂಡಿಬಂದ ವಾಚಕಸ್ಪಂದನ ಸಿದ್ಧಾಂತಿಗಳ ಅನೇಕ ಪರಿಕಲ್ಪನೆಗಳ ಮುನ್ನೋಟವನ್ನು ಕೊಟ್ಟಿದ್ದು.

ಕೊನೆಯದಾಗಿ, ಭಾರತೀಯರಾಗಿ ನಮಗೆ ಆಸಕ್ತಿಯನ್ನುಂಟು ಮಾಡುವ ಅಂಶ : ಎಂಪ್ಸನ್‌ನ ಸಂದಿಗ್ಧತೆಯ ಪರಿಕಲ್ಪನೆ ಆನಂದವರ್ಧನನ ಧ್ವನಿಸಿದ್ಧಾಂತಕ್ಕೆ ಬಹಳ ಹತ್ತಿರ ಬರುತ್ತದೆ. ಆದರೆ ಎಂಪ್ಸನ್‌ತನ್ನ ಪರಿಕಲ್ಪನೆಯ ಮೂಲವನ್ನು ಬೌದ್ಧ ಚಿಂತನೆಯಲ್ಲಿ ಕಾಣುತ್ತಾನೆ : “ಈ ಕ್ಷೇತ್ರದಲ್ಲಿ ವ್ಯಾಪಕವಾಗಿರುವ ಜರ್ಮನ್ ಪರಂಪರೆ ಮೂಲತಃ ಭಾರತೀಯ ವಿಚಾರಗಳನ್ನು, ವಿಶೇಷವಾಗಿ ಬೌದ್ಧ ತತ್ವಗಳನ್ನು ಆಧರಿಸಿದೆ” (ಪು. ೧೯೩).

ರೂಪನಿಷ್ಠ ವಿಮರ್ಶೆಯ ಒಂದು ಕವಲಿನಲ್ಲಿ ಅಂತರ್ಗತವಾಗಿರುವ ‘ಉದಾರ ಮಾನವತಾವಾದೀ’ಮುಖವನ್ನು (liberal humanistic aspect) ಎಫ್‌.ಆರ್. ಲೀವಿಸ್ ಪ್ರತಿನಿಧಿಸುತ್ತಾನೆ. ಇಂಗ್ಲೆಂಡಿನಲ್ಲಿ ಸರಿಸುಮಾರು ಎರಡು ದಶಕಗಳ ಕಾಲ (೧೯೩೦-೧೯೫೦) ಅತ್ಯಂತ ಪ್ರಭಾವಶಾಲಿ ಹಾಗೂ ವಿವಾದಾಸ್ಪದವಾಗಿದ್ದ, ಎಲ್ಲಾ ವಿಧದ ವ್ಯವಸ್ಥಿತ ಸಂಸ್ಥೆಗಳನ್ನು (Establishment) ವಿರೋಧಿಸಿದ, ಒಂದು ಕಡೆಯಲ್ಲಿ ವ್ಯಕ್ತಿ ಸ್ವಾತಂರ್ತ್ರ‍್ಯವನ್ನು  ಎತ್ತಿ ಹಿಡಿದು ಮತ್ತೊಂದು ಕಡೆ ‘ಪರಂಪರೆ’ಗೆ ಮಹತ್ವ ಕೊಟ್ಟ, “ಸಾಹಿತ್ಯವೆಂದರೆ ಉತ್ತಮ ಮೌಲ್ಯಗಳ ಮಹತ್ವಪೂರ್ಣ ದಾಖಲೆ’ಯೆಂದು ಅಕ್ಷರಶಃ ನಂಬಿದ್ದ, ಧೀಮಂತ ಅಧ್ಯಾಪಕ – ವಿಮರ್ಶಕ ಡಾ. ಲೀವಿಸ್. ಸಾಹಿತ್ಯ, ಸಾಹಿತ್ಯ, ವಿಮರ್ಶೆ, ಸಂಸ್ಕೃತಿ ಮತ್ತು ಪರಂಪರೆ ಇವುಗಳನ್ನು ಲೀವಿಸ್ ಬೇರೆ ಬೇರೆಯಾಗಿ, ಕಾಣುವುದಿಲ್ಲ. ಒಂದು ಕಡೆ ಲೀವಿಸ್ ಹೀಗೆ ಹೇಳುತ್ತಾನೆ : “ಇಂದಿನ ಸಾಂಸ್ಕೃತಿಕ ಸಂದರ್ಭದಲ್ಲಿ ವಿಮರ್ಶೆಯ ಕಾರ್ಯದ ಬಗ್ಗೆ ಕಾಳಜಿ; ವಿಶಿಷ್ಟ ಅಧ್ಯಯನ ವಿಭಾಗಗಳ ಸಮಷ್ಟಿಗಿಂತ ಭಿನ್ನವಾದ ವಿಶ್ವವಿದ್ಯಾನಿಲಯಗಳ ಕಲ್ಪನೆಯ ಬಗ್ಗೆ ಕಾಳಜಿ – ಸರಿಯಾಗಿ ನೋಡಿದರೆ ಈ ಎಲ್ಲಾ ಕಾಳಜಿಗಳೂ ಅಂತರ್ಯದಲ್ಲಿ ಒಂದೇ ಆಗಿವೆ”.

ಇಷ್ಟಾದರೂ ಸಾಹಿತ್ಯವನ್ನು ಮತ್ತು ಸಾಹಿತ್ಯ ವಿಮರ್ಶೆಯನ್ನು ಕುರಿತು ಲೀವಿಸ್‌ನ ವಿಚಾರಗಳೇನು ಎಂಬ ಪ್ರಶ್ನೆಗೆ ಉತ್ತರವನ್ನು ಖಚಿತವಾಗಿ ಹೇಳುವುದು ಪ್ರಯಾಸಕರ. ಏಕೆಂದರೆ ಅಮೂರ್ತ ಸ್ವರೂಪದ ಸೈದ್ಧಾಂತಿಕತೆಯನ್ನು ಲೀವಿಸ್ ಯಾವಾಗಲೂ ತಿರಸ್ಕರಿಸಿದ್ದನು. ಆದರೂ ಲೀವಿಸ್ ಮಾಡಿದ ಸಾಹಿತ್ಯಿಕ ತೀರ್ಮಾನಗಳ ಆಧಾರದ ಮೇಲೆ ಸ್ಥೂಲವಾಗಿ ಲೀವಿಸ್‌ನ ವಿಮರ್ಶಾ ಮಾರ್ಗವನ್ನು ಹೀಗೆ ಸಂಗ್ರಹಿಸಬಹುದು :

ವಿಮರ್ಶಕನ ಲಕ್ಷ್ಯ ಚರ್ಚಿಸಲು ಸಾಧ್ಯವಾಗುವಂತಹ ಕೃತಿಯ ನಿರ್ದಿಷ್ಟ ವಿವರಗಳೇ ಹೊರತು. ಲೇಖಕನ ವೈಯಕ್ತಿಕ ಜೀವನ ಅಥವಾ ಕೃತಿನಿರ್ಮಾಣದ ಸನ್ನಿವೇಶವಲ್ಲ. ಸಾಹಿತ್ಯ ವಿಮರ್ಶೆಯೆಂದರೆ ಲೇಖಕನ ಜೀವನದರ್ಶನ ಇತ್ಯಾದಿಗಳನ್ನು ಕುರಿತು ಅಮೂರ್ತ ಸ್ವರೂಪದ ಹೇಳಿಕೆಗಳನ್ನು ಕೊಡುವುದಿಲ್ಲ; ಮತ್ತು ವಿಮರ್ಶಕನಿಗೆ ಲೇಖಕನ ಆಶಯವೂ ಮುಖ್ಯವಾಗುವುದಿಲ್ಲ. “ಕೃತಿಯಲ್ಲಿ ನಿಜವಾಗದ ಆಶಯಗಳಿಗೆ ಏನೂ ಮಹತ್ವವಿಲ್ಲ”. ವಿಮರ್ಶಕನು ಜನರಿಂದ ದೂರವಾಗಿ ಯಾವುದೋ ದಂತಗೋಪುರದಲ್ಲಿ ಕುಳಿತು ಚಿಂತಿಸುವ ವಿಶೇಷಜ್ಞನಲ್ಲ : ‘ಆದರ್ಶ ವಿಮರ್ಶಕನೆಂದರೆ ಆದರ್ಶ ಓದುಗ’.

ಲೀವಿಸ್‌ನ ಸಾಹಿತ್ಯ ವಿಮರ್ಶೆಯಲ್ಲೆಲ್ಲಾ ಹಾಸುಹೊಕ್ಕಾಗಿರುವ ಒಂದು ಸಂಗತಿಯೆಂದರೆ ಅವನಿಗೆ ‘ಸಾಹಿತ್ಯ ಸಂಸ್ಕೃತಿ’ಯ ಜೀವಂತ ಸ್ವರೂಪದಲ್ಲಿರುವ ನಂಬಿಕೆ. ಸಾಹಿತ್ಯಕೃತಿಗಳನ್ನು ಮಾನವೀಯ ಮೌಲ್ಯಗಳ ದಾಖಲೆಗಳ ಸಂಚಯವೆಂದು ನಂಬುವ ಲೀವಿಸ್ ಇಂತಹ ದೃಷ್ಟಿಕೋನವನ್ನುಳ್ಳ ಜನರು ಯಾವ ಸಮಾಜದಲ್ಲಿಯೂ ಅಲ್ಪಸಂಖ್ಯಾತರಾಗಿಯೇ ಇರುತ್ತಾರೆಂದೂ, ಮತ್ತು ಈ ಅತ್ಯಲ್ಪ ಸಂಖ್ಯಾತ ವರ್ಗದ ಅಸ್ತಿತ್ವವನ್ನು ರಕ್ಷಿಸುವುದು ಲೇಖಕನ / ವಿಮರ್ಶಕನ ಆದ್ಯ ಕರ್ತವ್ಯವೆಂದೂ ಹೇಳುತ್ತಾನೆ. ಈ ಸಂದರ್ಭದಲ್ಲಿ ಪರಂಪರೆಗೆ ಲೀವಿಸ್ ಕೊಡುವ ವ್ಯಾಖ್ಯಾನ ಮಹತ್ವದ್ದಾಗುತ್ತದೆ. ಲೀವಿಸ್‌ನ ದೃಷ್ಟಿಯಲ್ಲಿ ಒಂದು ಜೀವಂತ ಪರಂಪರೆಯೆಂದರೆ ಸದಭಿರುಚಿಯನ್ನು ಉಳಿಸಿ, ಪೋಷಿಸುವ ಏಕಮೇವ ಮಾರ್ಗ. ಆದ್ದರಿಂದಲೇ ಕಾವ್ಯಪ್ರಭೇದದಲ್ಲಿ ಮತ್ತು ಕಾದಂಬರಿ ಪ್ರಭೇದದಲ್ಲಿ ಸಜೀವ ಬ್ರಿಟಿಷ್ ಪರಂಪರೆ ಯಾವುದೆನ್ನುವುದು, ಮತ್ತು ಆ ಪರಂಪರೆ ಒಳಗೊಳ್ಳುವ ಲೇಖಕರು ಯಾರು ಎನ್ನುವುದು ಲೇವಿಸ್‌‌ಗೆ ಬಹುಮುಖ್ಯವಾಗುತ್ತದೆ. ವೈಯಕ್ತಿಕ ಲೇಖಕರ ಸಾಧನೆಯನ್ನು ಅಳೆಯುವ ಮಾನದಂಡಗಳೂ ಪರಂಪರೆಯಲ್ಲಿಯೇ ದೊರಕುತ್ತವೆ.

ಲೀವಿಸ್ ರೂಪಿಸುವ ‘ಜೀವಂತ ಪರಂಪರೆ’ಯ ಲಕ್ಷಣಗಳೇನು? ‘ಮಹಾಪರಂಪರೆ’ (The Greate Tradition, 1948) ಕೃತಿಯ ಮುನ್ನುಡಿಯಲ್ಲಿ ಲೀವಿಸ್ ಹೀಗೆ ಹೇಳುತ್ತಾನೆ : “(ಈ ಪರಂಪರೆಗೆ ಸೇರಿದ ಲೇಖಕರು) ಇತರ ಲೇಖಕರ ಮತ್ತು ಓದುಗರ ಪಾಲಿಗೆ ಕಲೆಯ ಸಾಧ್ಯತೆಗಳನ್ನು ಬದಲಾಯಿಸುತ್ತಾರೆ. ಅಷ್ಟೇ ಅಲ್ಲದೆ ಅವರು ಪೋಷಿಸುವ ಮಾನವತೆಯ ಅರಿವಿನ ಕಾರಣದಿಂದಲೂ ಅವರು ಮುಖ್ಯರಾಗುತ್ತಾರೆ” (೧೯೬೨ : ೨). ಈ ಪರಂಪರೆಗೆ ಸೇರುವ ಎಲ್ಲಾ ಲೇಖಕರಲ್ಲಿಯೂ ಲೀವಿಸ್ ಕಾಣುವ ಪ್ರಮುಖ ಗುಣವೆಂದರೆ ‘ಉನ್ನತ ನೈತಿಕ ದೃಷ್ಟಿ’ (High moral seriousness). ನೈತಿಕತೆಯೆಂದರೆ ‘ಬದುಕಿನ ಬಗೆಗಿರುವ ಅಪಾರ ಶ್ರದ್ಧೆ ಹಾಗೂ ಆಸ್ಥೆ’. ಲೀವಿಸ್ ಒಂದು ಕೃತಿಯ ಬಗ್ಗೆ ಎತ್ತುವ ಮೂಲಭೂತ ಪ್ರಶ್ನೆ ಎಂದರೆ – ‘ಈ ಕೃತಿ ಎತ್ತಿ ಹಿಡಿಯುವ ಮೌಲ್ಯಗಳು ಜೀವನದ ಪರವಾಗಿಯೇ ಅಥವಾ ಜೀವನ ವಿಮುಖವಾಗಿವೆಯೇ’ ಎಂಬುದು. ಆದ್ದರಿಂದ ಲೀವಿಸ್ ತನ್ನ ಬದುಕಿನುದ್ದಕ್ಕೂ ಒಂದು ಕಡೆ ಕೇವಲ ಆರ್ಥಿಕ ಸಂಬಂಧಗಳಿಗೆ ಒತ್ತು ಕೊಡುವ ಮಾರ್ಕ್ಸ್‌ವಾದಿ ವಿಮರ್ಶಕರ ವಿರುದ್ಧ ಹಾಗೂ ಮತ್ತೊಂದು ಕಡೆ ವಿಮರ್ಶೆಯಲ್ಲಿ ಕೇವಲ ವಿವರಣೆ ಮತ್ತು ವಿಶ್ಲೇಷಣೆಗೆ ಪ್ರಾಧಾನ್ಯ ಕೊಡುವ ಶೈಲಿಶಾಸ್ತ್ರಜ್ಞರ ಮತ್ತು ರಾಚನಿಕ ವಿಮರ್ಶಕರ ವಿರುದ್ಧ ಹೋರಾಡುತ್ತಲೇ ಬಂದ.

ವಿಮರ್ಶೆಯ ಸ್ವರೂಪದ ನೆಲೆಯಲ್ಲಿ ತುಂಬಾ ಮುಖ್ಯವಾಗುವ ಲೀವಿಸ್‌ನ ಒಂದು ಪರಿಕಲ್ಪನೆಯೆಂದರೆ ‘ಮೂರನೆಯ ಕ್ಷೇತ್ರ’ (Third Realm). ಪ್ರಾಯಃ ಅನೇಕ ವಿಮರ್ಶಕರು ಗುರುತಿಸಿರುವಂತೆ, ಈ ಪರಿಕಲ್ಪನೆ ಗ್ರೀಕ್ ದಾರ್ಶನಿಕ ಪ್ಲೇಟೋಗೆ ಸಂಬಂಧಿಸಿದುದು. ತನ್ನ ‘ರಿಪಬ್ಲಿಕ್’ ಗ್ರಂಥದಲ್ಲಿ ಪ್ಲೇಟೋ ಎರಡು ಬಗೆಯ ಕ್ಷೇತ್ರಗಳನ್ನು (ಅಥವಾ ಸ್ಥಳಗಳನ್ನು) ವಿವರಿಸುತ್ತಾನೆ : ಮೊದಲನೆಯದು ಅಖಂಡ ಸತ್ಯದ ಕ್ಷೇತ್ರ : ಆದರ್ಶ ಸ್ವರೂಪದ ತತ್ವಗಳ ಮತ್ತು ಆಕೃತಿಗಳ ಕ್ಷೇತ್ರ (The realm of Ideas and Forms); ಎರಡನೆಯದು ಅವುಗಳ ರೂಪಣೆಯ ನಿಜ ಭೌತಿಕ ಕ್ಷೇತ್ರ (the realm of Representation). ಮೊದಲನೆಯ ಕ್ಷೇತ್ರದಲ್ಲಿ ಜ್ಞಾನವಿದ್ದರೆ ಎರಡನೆಯ ಕ್ಷೇತ್ರದಲ್ಲಿ ಕೇವಲ ಅಭಿಪ್ರಾಯಗಳಿರುತ್ತವೆ. ಪರಿಣಾಮತ, ಮೊದಲನೆಯ ಜ್ಞಾನಕ್ಷೇತ್ರವನ್ನು ಸಾರ್ವಜನಿಕವೆಂದು ಎರಡನೆಯ ಅಭಿಪ್ರಾಯ ಕ್ಷೇತ್ರವನ್ನು ವೈಯಕ್ತಿಕವೆಂದೂ ನಾವು ಗ್ರಹಿಸಬಹುದು. ಲೀವಿಸ್ ಯೋಜಿಸುವ ‘ಮೂರನೆಯ ಕ್ಷೇತ್ರ’ ಇವೆರಡನ್ನೂ ಒಂದೆಡೆ ತರುತ್ತದೆ.

ಅನೇಕ ಸಂದರ್ಭಗಳಲ್ಲಿ ಲೀವಿಸ್ ಮೂರನೆಯ ಕ್ಷೇತ್ರದ ಸ್ವರೂಪವನ್ನು ವ್ಯಾಖ್ಯಾನಿಸುತ್ತಾನೆ. ಒಂದು ಸಂದರ್ಭದಲ್ಲಿ ಹೀಗೆ ಹೇಳುತ್ತಾನೆ : “ಸಾಹಿತ್ಯದ ಅಧ್ಯಯನದಲ್ಲಿ, ಅದೂ ತನ್ನದೇ ಭಾಷೆಯ ಸಾಹಿತ್ಯಿಕ ಅಧ್ಯಯನದಲ್ಲಿ ಮಾತ್ರ ನಾವು ಮೂರನೆಯ ಕ್ಷೇತ್ರದ ಸ್ವರೂಪ ಮತ್ತು ಮಹತ್ವವನ್ನು… ಅರಿಯಲು ಸಾಧ್ಯವಾಗುತ್ತದೆ. ಈ ಕ್ಷೇತ್ರವು ಸಂಪೂರ್ಣವಾಗಿ ವೈಯಕ್ತಿಕವೂ ಅಲ್ಲ ಅಥವಾ ಸಾರ್ವಜನಿಕವೂ ಅಲ್ಲ” (೧೯೭೨ : ೬೨). ಇನ್ನೊಂದು ಸಂದರ್ಭದಲ್ಲಿ ಈ ಅಂಶವನ್ನು ಇನ್ನೂ ಸ್ಪಷ್ಟಪಡಿಸುತ್ತಾನೆ : “(ಕಾವ್ಯವು) ವೈಯಕ್ತಿಕ ನೆಲೆಯಲ್ಲಿಯೇ ಉಳಿಯದೆ ಭಿನ್ನ ಭಿನ್ನ ಪ್ರಜ್ಞೆಗಳಿಂದ ಗ್ರಹಿಸಲ್ಪಟ್ಟಾಗ ಮಾತ್ರ ಅದು ಅಸ್ತಿತ್ವಕ್ಕೆ ಬರುತ್ತದೆ. ಅದು (ಕಾವ್ಯ) ಭಿನ್ನ ಪ್ರಜ್ಞೆಗಳು ಸಂಧಿಸುವ ಸ್ಥಳ; ನಮ್ಮ ಕಾರ್ಯವೆಂದರೆ ಅದನ್ನು ಅಸ್ತಿತ್ವಕ್ಕೆ ತಂದು ಅದರಲ್ಲಿ ಸಂಧಿಸುವುದು. ಅದು ವೈಯಕ್ತಿಕವೂ ಅಹುದು ಮತ್ತು ಸಾರ್ವತ್ರಿಕವೂ ಅಹುದು… ಮೂರನೆಯ ಕ್ಷೇತ್ರವೊಂದಿದೆ ಮತ್ತು ಕಾವ್ಯ ಆ ಕ್ಷೇತ್ರಕ್ಕೆ ಸೇರುತ್ತದೆ. (೧೯೬೯ : ೪೮). ಲೀವಿಸ್ ರೂಪಿಸುವ ಈ ಪರಿಕಲ್ಪನೆಯ ಮಹತ್ವವೇನೆಂದರೆ, ಅವನ ದೃಷ್ಟಿಯಲ್ಲಿ ಕಾವ್ಯಸ್ಪಂದನೆ ಮತ್ತು ಕಾವ್ಯವಿಮರ್ಶೆ ವೈಯಕ್ತಿಕ ಅನಿಸಿಕೆಗಳ ನೆಲೆಯಲ್ಲಿಯೇ ನಿಲ್ಲಬಾರದು; ಅದೊಂದು ಸಹೋದ್ಯಮ, ಒಂದು ಸಾಮೂಹಿಕ ಕಾರ್ಯ (collaboration) – ಪ್ರಮಾಣಗಳಿಗಾರಿ, ಮೌಲ್ಯಗಳಿಗಾಗಿ ಇಡೀ ಒಂದು ಸಮಾಜ ಸಾಮೂಹಿಕವಾಗಿ ನಡೆಸುವ ಪ್ರಯತ್ನ. ಈ ನಂಬಿಕೆಯ ನೆಲೆಯಲ್ಲಿಯೇ ತನ್ನ ಒಂದು ಮುಖ್ಯ ವಿಮರ್ಶಾಕೃತಿಯನ್ನು ‘ಸಾಮೂಹಿಕ ಶೋಧ’ (Common Pursuit) (೧೯೫೨) ಎಂದು (ಎಲಿಯಟ್‌ನ ಪದಗಳಲ್ಲಿ) ಹೆಸರಿಸುತ್ತಾನೆ.

ಈ ಸಂದರ್ಭದಲ್ಲಿ, ‘ತೃತೀಯ ಜಗತ್ತಿನ’ ಓದುಗರಿಗೆ ಅತಿಮುಖ್ಯವಾಗುವ ಮತ್ತೂ ಒಂದು ಅಂಶವನ್ನು ಒತ್ತಿ ಹೇಳಬೇಕು. ಸಾಹಿತ್ಯ ‘ಪ್ರಬುದ್ಧ ಪ್ರಜ್ಞೆಯ ಮೌಲ್ಯಾತ್ಮಕ ನಿರ್ಣಯಗಳು’ ಎಂದು ಕಾಣುವ ಲೀವಿಸ್ ಸಾಹಿತ್ಯಾಧ್ಯಯನಕ್ಕೆ ತುಂಬಾ ಎತ್ತರದ ಸ್ಥಾನವನ್ನು ಕೊಡುತ್ತಾನೆ. ಆದರೆ, ಅಂತಹ ಗಂಭೀರ ಅಧ್ಯಯನ ‘ತನ್ನ ಭಾಷೆಯ ಸಾಹಿತ್ಯ’ದ ಅಧ್ಯಯನ. ಅರ್ಥಾತ್ ಕನ್ನಡಗರಿಗೆ/ ತಮಿಳರಿಗೆ… ಸಾಹಿತ್ಯಾಧ್ಯಯನದಿಂದ ಏನಾದರೂ ಪ್ರಯೋಜನವಾಗುವಂತಿದ್ದರೆ ಅದು ಕನ್ನಡದ / ತಮಿಳಿನ… ಸಾಹಿತ್ಯಗಳ ಅಧ್ಯಯನದಿಂದ ಮಾತ್ರ. ಇದರ ಅರ್ಥ ಇಂಗ್ಲಿಷ್ ಮುಂತಾದ ಇತರ ಸಾಹಿತ್ಯಗಳ ಅಧ್ಯಯನ ನಿಷ್ಪ್ರಯೋಜಕ ಎಂದೇನೂ ಅಲ್ಲ. ಆದರೆ, ಸ್ವಂತಿಕೆಯನ್ನು ನಿರ್ಮಿಸಿಕೊಳ್ಳಲು ಮತ್ತು ಜವಾಬ್ದಾರಿಯುತ ತೀರ್ಮಾನಗಳನ್ನು ಕೈಗೊಳ್ಳಲು ನಾವು ನಮ್ಮ ಭಾಷೆಯ ಸಾಹಿತ್ಯದಿಂದಲೇ ಪ್ರಾರಂಭ ಮಾಡಬೇಕು.

ಕೊನೆಯದಾಗಿ, ಲೀವಿಸ್ ಮತ್ತು ಇತರ ಅನೇಕ ಚಿಂತಕರು ಗುರುತಿಸಿರುವಂತೆ ಇಂದು ಆಧುನಿಕ ಜಗತ್ತು ಜ್ಞಾನಕ್ಷೇತ್ರಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸುತ್ತಿದೆ. ವಿಜ್ಞಾನ, ಸಾಹಿತ್ಯ, ಶಿಕ್ಷಣ, ಸಂಗೀತ ಇವುಗಳಿಗೆ ಏನೂ ಪರಸ್ಪರ ಸಂಬಂಧವಿಲ್ಲವೆಂದು ನಾವಿಂದು ಪರಿಗಣಿಸುತ್ತೇವೆ. ಆದರೆ, ಲೀವಿಸ್‌ನ ‘ಏಕತ್ರಿತ’ (holistic) ಚಿಂತನೆಯಲ್ಲಿ ಇವೆಲ್ಲವೂ ಪರಸ್ಪರ ಸಂಬಂಧಿಸಿದ ವಿಷಯಗಳೇ. (ಇಂತಹ ‘ಏಕತ್ರಿತ ಕಾಳಜಿ’ಗಳನ್ನೇ ನಾವು ೧೯೩೨ – ೫೩ ಈ ಅವಧಿಯಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ, ಲೀವಿಸ್ ಸಂಪಾದಿಸುತ್ತಿದ್ದ ‘ಸ್ಕ್ರೂಟಿನಿ’ ನಿಯತಕಾಲಿಕೆಯ ಪ್ರತಿಯೊಂದು ಲೇಖನದಲ್ಲಿಯೂ ಕಾಣುತ್ತೇವೆ). ಇಂತಹ ಏಕತ್ರಿತ ‘ಸಂಪೂರ್ಣ ಜ್ಞಾನ’ವನ್ನು ನೀಡುವುದೇ ಶಾಲಾ ಕಾಲೇಜುಗಳ ಮತ್ತು ವಿಶ್ವವಿದ್ಯಾನಿಲಯಗಳ ಕರ್ತವ್ಯವಾಗಬೇಕೆಂದು ತನ್ನ ಅನೇಕ ಗ್ರಂಥಗಳಲ್ಲಿ/ ಲೇಖನಗಳಲ್ಲಿ ಲೀವಿಸ್ ಪ್ರತಿಪಾದಿಸುತ್ತಾನೆ. ಇಂದಿನ ಪರಿಸ್ಥಿತಿಯಲ್ಲಿ ನಮಗೆ, ಭಾರತೀಯರಿಗೆ, ಅತ್ಯಂತ ಪ್ರಸ್ತುತವಾಗುವ ಈ ವ್ಯಾಖ್ಯಾನದಿಂದ ನಮ್ಮ ಚರ್ಚೆಯನ್ನು ಮುಗಿಸಬಹುದು.

“ವಿಶ್ವವಿದ್ಯಾನಿಲಯಗಳು ಸಾಂಸ್ಕೃತಿಕ ಪರಂಪರೆಯ ಸಂಕೇತಗಳೆಂದು ಗುರುತಿಸಲ್ಪಟ್ಟಿವೆ. ಆಧುನಿಕ ನಾಗರಿಕತೆಗಿಂತ ಹೆಚ್ಚಿನ ಜ್ಞಾನವನ್ನು ಪ್ರತಿನಿಧಿಸುವ ಮತ್ತು ಭೌತಿಕ ಹಾಗೂ ಯಾಂತ್ರಿಕ ಪ್ರಗತಿಯತ್ತ ಆಗುತ್ತಿರುವ ಕುರುಡು ಚಲನೆಯನ್ನು ತಡೆಯುವ ಹಾಗೂ ನಿಯಂತ್ರಿಸುವ ಶಕ್ತಿ ಇಂತಹ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರ ಇರುತ್ತದೆ. ಪ್ರಾಚೀನ ವಿಶ್ವವಿದ್ಯಾನಿಲಯುಗಳು ಕೇವಲ ಸಂಕೇತಗಳಲ್ಲ; ಅವು ಮಾನವೀಯ ಪರಂಪರೆಯನ್ನು ನಿರ್ಮಿಸಿ, ಮುಂದುವರಿಸುವ ಎಲ್ಲಾ ಪ್ರಯತ್ನಗಳ ಕೇಂದ್ರಗಳು” (‘ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯ’, ೧೯೪೩).


* ಕನ್ನಡದಲ್ಲಿ ಈ ಬಗೆಯ ಅಭ್ಯಾಸದ ಮಾದರಿಗಾಗಿ ನೋಡಿರಿ : ಸಿ.ಎನ್. ರಾಮಚಂದ್ರನ್ (೧೯೮೬), ‘ಸ್ವಾಭಿಮುಖ ಸಾಹಿತ್ಯ’, ‘ಶಿಲ್ಪವಿನ್ಯಾಸ’, ಕನ್ನಡ ಸಂಘ, ಪುತ್ತೂರು.

** ಈ ಪ್ರಬಂಧದ ವಿಶ್ಲೇಷಣಾತ್ಮಕ ಅನುವಾದಕ್ಕಾಗಿ ನೋಡಿ : ಗಿರಡ್ಡಿ ಗೋವಿಂದರಾಜ (೧೯೧೮), ‘ಸಾಹಿತ್ಯ ಮತ್ತು ಪರಂಪರೆ’, ಅಭಿಜಾತ ಗ್ರಂಥಮಾಲೆ, ಬೆಂಗಳೂರು. – ಸಂ.

ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ

ನಮ್ಮ ಜೀವನದಲ್ಲಿ ವೈರಾಣುಗಳ ಪಾತ್ರ.

ವೈರಾಣುವು ಜೀವಿಯೋ ಅಲ್ಲವೋ ಎಂಬುದರ ಬಗ್ಗೆ ಇರುವ ಅನುಮಾನಗಳನ್ನು ಪಕ್ಕಕ್ಕಿಟ್ಟು, ವೈರಸ್ಗಳಿಂದ ನಮಗಿರುವ ಅನುಕೂಲ ಹಾಗೂ ಅಪಾಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ; ವೈರಾಣುಗಳ ಅನನ್ಯ ಗುಣವಿಶೇಷಗಳ ಕಾರಣದಿಂದ, ನೈಸರ್ಗಿಕ ಹಾಗೂ ಮಾನವನಿರ್ಮಿತ ಉಪಯುಕ್ತತೆ, ಅಷ್ಟೇ ಅಲ್ಲದೆ, ಸಸ್ಯಗಳು, ಪ್ರಾಣಿಗಳು ಹಾಗೂ ಮಾನವರಲ್ಲಿ ವೈರಾಣುಗಳು ಉಂಟುಮಾಡುವ ಕಾಯಿಲೆಗಳ ಬಗ್ಗೆ ಕೂಡ ಗಮನಿಸೋಣ.

ಸಸ್ಯಗಳಲ್ಲಿ ವೈರಾಣುಜನ್ಯ ರೋಗಗಳು

ವೈರಾಣುಗಳು, ಆಹಾರ ಬೆಳೆಗಳು ಹಾಗೂ ವಾಣಿಜ್ಯಿಕ ಬೆಳೆಗಳಲ್ಲಿ ಏಕರೂಪದ ಸೋಂಕು ಉಂಟುಮಾಡುತ್ತವೆ. ಕಬ್ಬು, ತಂಬಾಕು, ಜೋಳ, ಅವರೆಕಾಯಿ, ಮೆಣಸಿನಕಾಯಿ, ಹೂಕೋಸು, ಸೇಬು, ದ್ರಾಕ್ಷಿ, ಸೌತೆಕಾಯಿ ಬೆಳೆಗಳಲ್ಲಿ ಎಲೆ ಮಚ್ಚೆ ರೋಗಗಳಿಗೆ ವೈರಾಣುಗಳು ಕಾರಣವಾಗುತ್ತವೆ. ಈ ರೋಗದ ಪರಿಣಾಮವಾಗಿ ಸಸ್ಯಗಳು ತಕ್ಷಣ ಸಾವನ್ನಪ್ಪುವುದಿಲ್ಲ; ಆದರೆ, ಎಲೆಗಳ ಮೇಲೆ ಗಾಢ ಹಸಿರು ಹಾಗೂ ತಿಳಿ ಹಸಿರು ಬಣ್ಣದ ಮಚ್ಚೆಗಳು ಮೂಡಿ, ಎಲೆಗಳ ಕೆಲವು ಭಾಗಗಳು ಸಾಯುತ್ತವೆ; ಇದರ ಫಲವಾಗಿ ಸಸ್ಯದ ಒಟ್ಟಾರೆ ಬೆಳವಣಿಗೆ ಹಾಗೂ ಇಳುವರಿಯಲ್ಲಿ ಇಳಿಕೆ ಕಂಡುಬರುತ್ತದೆ. ಹತ್ತಿ, ಟೊಮೇಟೊ, ಪಪ್ಪಾಯ ಬೆಳೆಗಳಲ್ಲಿ ಎಲೆ ಸುರುಳಿ ರೋಗಗಳನ್ನು, ವಿವಿಧ ವೈರಾಣುಗಳು ಉಂಟುಮಾಡುತ್ತವೆ. ಈ ರೋಗದ ಹೆಸರೇ ಸೂಚಿಸುವಂತೆ, ಎಲೆಗಳು ಸುರುಳಿ ಸುತ್ತಿಕೊಂಡು, ಮುರುಟುತ್ತವೆ. ಮುರುಟಿದ ಎಲೆಗಳಲ್ಲಿ ಎಷ್ಟರಮಟ್ಟಿಗೆ ದ್ಯುತಿಸಂಶ್ಲೇಷಣೆ ನಡೆದೀತು? ಇದರ ಫಲವಾಗಿ ಹಣ್ಣುಗಳ ಸಂಖ್ಯೆ ಹಾಗೂ ಗುಣಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. ಸೋಂಕಿಗೆ ಈಡಾದ ಎಲೆಗಳು ಬಹಳ ಬೇಗ ಉದುರುತ್ತವೆ ಕೂಡ. ಸಸ್ಯದ ಒಟ್ಟಾರೆ ಬೆಳವಣಿಗೆ ಹಾಗೂ ಇಳುವರಿಯಲ್ಲಿ ಇಳಿಕೆ ಕಂಡುಬರುತ್ತದೆ. ವಿವಿಧ ವೈರಾಣುಗಳು ಭತ್ತ, ಟೊಮೇಟೊ, ಕಡ್ಲೇಕಾಯಿ ಸಸ್ಯಗಳನ್ನು ಗಿಡ್ದಾಗಿಸೋ ರೋಗವನ್ನು ಉಂಟುಮಾಡುತ್ತವೆ. ಹುಟ್ಟಿನಿಂದಲೇ ಕುಂಠಿತ ಬೆಳವಣಿಗೆಯನ್ನು ಪ್ರದರ್ಶಿಸುವ ಈ ರೋಗಗ್ರಸ್ತ ಬೆಳೆಗಳು, ಸರಿಯಾದ ಸಮಯಕ್ಕೆ ಹೂವು, ಕಾಯಿ, ಹಣ್ಣುಗಳನ್ನು ಬಿಡದೇ, ಬೆಳವಣಿಗೆಯ ಜೊತೆಗೇ ಇಳುವರಿಯಲ್ಲೂ ಇಳಿಕೆಯನ್ನು ತೋರ್ಪಡಿಸುತ್ತವೆ.

ಪ್ರಾಣಿಗಳಲ್ಲಿ ವೈರಾಣುಜನ್ಯ ರೋಗಗಳು

ಪ್ರಾಣಿ ಪಕ್ಷಿಗಳನ್ನೂ ವೈರಾಣುಗಳ ಕಾಟ ಬಿಟ್ಟಿಲ್ಲ; ಜಾನುವಾರು, ಬೆಕ್ಕು, ನಾಯಿ, ಕೋಳಿ, ಬಾತು ಕೋಳಿಗಳನ್ನು ಒಳಗೊಂಡಂತೆ ನಮ್ಮ ಜೀವನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಾಸುಹೊಕ್ಕಾಗಿರುವ ಪ್ರಾಣಿ ಪಕ್ಷಿಗಳಲ್ಲಿ ಬಹಳಷ್ಟು ಮಾರಕ ರೋಗಗಳಿಗೆ ವೈರಾಣುಗಳು ಕಾರಣ. ಕುದುರೆಗಳಲ್ಲಿ ಕಂಡುಬರುವ ಜೌಗು ಜ್ವರ, ಜಾನುವಾರು, ಬೆಕ್ಕು, ಇಲಿಗಳಲ್ಲಿ ಕಂಡುಬರುವ ರಕ್ತದ ಕ್ಯಾನ್ಸರ್, ಆಹಾರ ಮೆಲುಕು ಹಾಕುವ ಜಾನುವಾರು, ಜಿಂಕೆ, ಜಿರಾಫೆಯಂತಹ ಪ್ರಾಣಿಗಳಲ್ಲಿ ಶ್ವಾಸಕೋಶದ ಉರಿಯೂತ (ನ್ಯುಮೋನಿಯ), ಸಂಧಿವಾತ ಮತ್ತು ನರಸಂಬಂಧಿ ರೋಗಗಳಿಗೆ ವೈರಾಣುಗಳು ಕಾರಣವಾಗುತ್ತವೆ. ಮಾಂಸಾಹಾರ ಉದ್ದಿಮೆಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟುಮಾಡುವ ಕೋಳಿಜ್ವರ, ಹಂದಿಜ್ವರಕ್ಕೂ ವೈರಾಣುಗಳೇ ಕಾರಣ. ಜಾನುವಾರುಗಳಲ್ಲಿ ಒಂದರಿಂದ ಮತ್ತೊಂದಕ್ಕೆ ಕಾಡ್ಗಿಚ್ಚಿನಂತೆ ಹರಡುವ ಕಾಲು-ಬಾಯಿ ರೋಗವೂ ವೈರಾಣುಗಳ ಕೊಡುಗೆಯೇ. ನಾಯಿಗಳಲ್ಲಿ ಕಂಡುಬರುವ ರೇಬಿಸ್ನಂತಹ ಮಾರಣಾಂತಿಕ ರೋಗಕ್ಕೂ ವೈರಾಣುವೇ ಕಾರಣ, ಇತ್ತೀಚಿಗೆ ಮನುಷ್ಯರನ್ನೂ ಕಂಗೆಡಿಸಿದ ಎಬೋಲ ವೈರಸ್ ಮತ್ತು ನಿಪಾಹ್ ವೈರಸ್ಗಳು, ಪ್ರಾಣಿಗಳಲ್ಲೂ ಕಾಯಿಲೆ ಉಂಟುಮಾಡುತ್ತವೆ. ಎಬೋಲ ವೈರಾಣುವು ಮಂಗ, ಚಿಂಪಾಂಜಿ, ಗೊರಿಲ್ಲಾ, ಬಾವಲಿಗಳಲ್ಲಿ ಜ್ವರ, ತಲೆನೋವು, ಸುಸ್ತು, ಭೇದಿ, ಅನಿಯಮಿತ ಆಂತರಿಕ ರಕ್ತಸ್ರಾವವನ್ನು ಉಂಟುಮಾಡುತ್ತದೆ ಹಾಗೂ ನಿಪಾಹ್ ವೈರಾಣುವು  ಬಾವಲಿಗಳಲ್ಲಿ, ಹಂದಿ, ಬೆಕ್ಕು, ನಾಯಿಗಳಲ್ಲಿ  ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಮೆದುಳುಜ್ವರ ಉಂಟುಮಾಡುತ್ತದೆ.

ಮನುಷ್ಯರಲ್ಲಿ ವೈರಾಣುಜನ್ಯ ರೋಗಗಳು

ವೈರಾಣುಗಳು ಮನುಷ್ಯರಲ್ಲಿ ಉಂಟುಮಾಡುವ ರೋಗಗಳ ಯಾದಿ ಬಹಳ ದೊಡ್ಡದಿದೆ; ಸಾಮಾನ್ಯವಾಗಿ ಹಲವಾರು ವೈರಾಣುಜನ್ಯ ಕಾಯಿಲೆಗಳು ಮಾರಣಾಂತಿಕವೆಂದು ಕಂಡುಬಂದಿವೆ. ಆದರೆ, ಈಗೀಗ ಸುಧಾರಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಲಭ್ಯತೆ ಜೊತೆಗೆ ಕಾಯಿಲೆಗಳ ಬಗ್ಗೆ ಜನರಲ್ಲಿ ಹೆಚ್ಚಿದ ಅರಿವು, ಇವುಗಳ  ತೀವ್ರತೆಯನ್ನು ಕಡಿಮೆಗೊಳಿಸಿವೆ.

ಕೆಲವು ದಶಕಗಳ ಹಿಂದೆ ಪ್ರಾಣಾಂತಿಕವೆಂದು ಸಾಬೀತಾಗಿದ್ದ, ಸಾವಿರಾರು ಎಳೆಯ ಜೀವಗಳನ್ನು ಬಲಿಪಡೆದಿದ್ದ ಸಿಡುಬು, ವೇರಿಯೋಲಾ ವೈರಾಣುವಿನ ಕೊಡುಗೆ. ಅದರ ಸೌಮ್ಯವಾದ ಆವೃತ್ತಿಯಾದ ಚಿಕನ್ ಪಾಕ್ಸ್ ಅಥವಾ ಸಣ್ಣಮ್ಮ ಎಂದು ಕರೆಯಲಾಗುವ ಕಾಯಿಲೆಯು, ಹರ್ಪಿಸ್ ಜ್ಹಾಸ್ಟರ್ ವೈರಾಣುವಿನಿಂದ ಉಂಟಾಗುತ್ತದೆ.  ಈಗ ಚುಚ್ಚುಮದ್ದು ಲಭ್ಯವಿರುವ ಪೋಲಿಯೋ ರೋಗಕ್ಕೂ ವೈರಸ್ಗಳೇ ಕಾರಣ. ಶ್ವಾಸಕೋಶ ಹಾಗೂ ಚರ್ಮಕ್ಕೆ ಸಂಬಂಧಿತ ದಡಾರ, ಗಂಟಲು ಹಾಗೂ ಲಾಲಾರಸ ಗ್ರಂಥಿಗಳ ಊತ ರೋಗವಾದ ಮಂಪ್ಸ್ ಅಥವಾ ಗದ್ದಬಾವು ಕೂಡ ವೈರಾಣುಜನ್ಯ ರೋಗಗಳೇ. ಚಿಕಿತ್ಸೆ ಲಭ್ಯವಾಗದಿದ್ದಲ್ಲಿ ಕುರುಡುತನಕ್ಕೆ ಕಾರಣವಾಗುವ ರವೆಗಣ್ಣು ರೋಗಕ್ಕೆ, ಕ್ಲಮೈಡಿಯ ಎಂಬ ವೈರಾಣುವು ಕಾರಣ., ಸಾಮಾನ್ಯವಾಗಿ ಹವಾಮಾನ ಬದಲಾವಣೆಯಾದ ತಕ್ಷಣ ಕಾಡುವ ನೆಗಡಿ, ಮೈಕೈನೋವು ಜ್ವರಕ್ಕೂ ಮಿಕ್ಸೋವೈರಸ್ ಎಂಬ ವೈರಾಣುವು ಕಾರಣ.

ವೈರಾಣುಗಳ ನೈಸರ್ಗಿಕ ಉಪಯುಕ್ತತೆ

ವೈರಾಣುಗಳು ಬ್ಯಾಕ್ಟೀರಿಯಾಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದು, ಬ್ಯಾಕ್ಟೀರಿಯಾದ ಜೀವಕೋಶದಲ್ಲಿನ ಕೋಶಾಂಶಗಳನ್ನು ತನ್ನ ಉಳಿವಿಗಾಗಿ ಬಳಸಿಕೊಳ್ಳುತ್ತವೆ; ತಮ್ಮ ಚಯಾಪಚಯ ಕ್ರಿಯೆ ಹಾಗೂ ಸಂತಾನೋತ್ಪತ್ತಿ ನಡೆದ ನಂತರ, ಬ್ಯಾಕ್ಟೀರಿಯಾದ ಜೀವಕೋಶವನ್ನು ಒಡೆದು ಹೊರಬರುತ್ತವೆ. ಹೀಗೆ, ಬ್ಯಾಕ್ಟೀರಿಯಾದೊಳಗೆ ಸೋಂಕುಂಟು ಮಾಡಿ, ಅವುಗಳ ನಾಶಕ್ಕೆ ಕಾರಣವಾಗುವ ‘ಬ್ಯಾಕ್ಟೀರಿಯೋಫಾಜ್’ ಎಂಬ ಈ ವೈರಾಣುಗಳು, ಕೆಲವು ಅಪಾಯಕಾರಿ ಬ್ಯಾಕ್ಟೀರಿಯಾದ ನಿರ್ನಾಮಕ್ಕೆ ನೈಸರ್ಗಿಕವಾಗಿ ಸಹಕಾರಿ.

ಇದೇ ‘ಬ್ಯಾಕ್ಟೀರಿಯೋಫಾಜ್’ ಎಂಬ ವೈರಾಣುಗಳು, ನದಿ – ಕೆರೆ – ಸಮುದ್ರಗಳಲ್ಲಿ ಹೆಚ್ಚುವ ಶೈವಲಗಳನ್ನು(ಆಲ್ಗೆ) ಇದೇ ರೀತಿ ನಾಶಪಡಿಸಿ, ಜಲಪಾತ್ರದ ಪರಿಸರೀಯ ಸಮತೋಲನವನ್ನು ಕಾಪಾಡುತ್ತವೆ. ಜಲವಾಸಿ ಸಸ್ಯಗಳ ದ್ಯುತಿಸಂಶ್ಲೇಷಣೆಯನ್ನು ಹೆಚ್ಚಿಸುವಲ್ಲಿ ಪರೋಕ್ಷ ಪಾತ್ರವಹಿಸುವ ಈ ವೈರಾಣುಗಳು, ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ನ ಪ್ರಮಾಣ ತಗ್ಗಿಸುವಲ್ಲಿ ಸಹಕಾರಿ.

ವೈರಾಣುಗಳ ಮಾನವ ನಿರ್ಮಿತ ಉಪಯುಕ್ತತೆ

ವೈರಸ್ಗಳನ್ನು ತಳಿವಿಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ  ಪ್ರತಿರಕ್ಷಾವಿಜ್ಞಾನದ ಸಂಶೋಧನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ವಂಶವಾಹಿಗಳ ಬಗ್ಗೆ, ಡಿಎನ್ಎ ಪ್ರತಿಕೃತಿ ರಚನೆ, ಡಿ.ಎನ್.ಎ – ಆರ್.ಎನ್.ಎ ನ್ಯೂಕ್ಲಿಕ್ ಆಮ್ಲಗಳನ್ನು ನಕಲುಮಾಡುವುದು, ಆರ್.ಎನ್.ಎ ಮತ್ತು ಪ್ರೋಟೀನ್ ರಚನೆಯಂತಹ ವಿಷಯಗಳ ಬಗ್ಗೆ, ನಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳುವ ಸಲುವಾಗಿ ನಡೆಸುವ ಪ್ರಯೋಗಗಳಲ್ಲಿ, ವೈರಾಣುಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ವೈರಾಣುಗಳು ಅತ್ಯಂತ ಸರಳ ದೇಹರಚನೆಯುಳ್ಳ ವ್ಯವಸ್ಥೆಗಳು ಎಂಬುದೇ, ಅಣ್ವಿಕ ಜೀವವಿಜ್ಞಾನ ಹಾಗೂ ಕೋಶೀಯ ಜೀವವಿಜ್ಞಾನದ ಮೂಲಭೂತ ತತ್ವಗಳನ್ನು ಅರಿಯಲು ಇವುಗಳನ್ನು ಬಳಸುವುದರ ಹಿಂದಿನ ಪ್ರಮುಖ ಕಾರಣ.

ವೈದ್ಯಕೀಯ ಕ್ಷೇತ್ರದಲ್ಲಿ ವೈರಾಣುಗಳನ್ನು ಹಲವಾರು ರೀತಿಯಲ್ಲಿ ಬಳಸುತ್ತಾರೆ; ಅವುಗಳಲ್ಲಿ ಪ್ರಮುಖವಾಗಿ ಕ್ಯಾನ್ಸರ್ ಮತ್ತು ಅನುವಂಶಿಕ ರೋಗಗಳ ಆಳವಾದ ಅಧ್ಯಯನದಲ್ಲಿ ಹಾಗೂ ಔಷಧಿಗಳ ವಾಹಕಗಳಾಗಿ ಉಪಯೋಗಿಸಲಾಗುತ್ತದೆ. ವೈರಾಣುಗಳಲ್ಲಿರುವ ರೋಗಕಾರಕ ಜೀನ್ಗಳನ್ನು ಹೊರತೆಗೆದು, ಅವುಗಳನ್ನು ನಿರುಪದ್ರವಿಗಳನ್ನಾಗಿ ಮಾಡಿ, ಅವುಗಳ ಒಳಗೆ ಔಷಧಿಗಳನ್ನು ಇರಿಸಿ, ರೋಗಿಗೆ ನೀಡಲಾಗುತ್ತದೆ. ಸಾಮಾನ್ಯ ವಿಧಾನಗಳ ಮೂಲಕ ಸಾಧಿಸಲಾಗದ ಮಾಯಕ ಫಲಿತಾಂಶಗಳನ್ನು, ವೈರಾಣು ವಾಹಕಗಳ ಮೂಲಕ ಸಾಧಿಸಬಹುದು ಎಂದು ಕಂಡುಬಂದಿದೆ. ರೋಗಕಾರಕ ಬ್ಯಾಕ್ಟೀರಿಯಾವನ್ನು ಗುರಿಯಾಗಿಸಿ, ನಾಶಮಾಡುವ ಚಿಕಿತ್ಸಕ ವಿಧಾನದಲ್ಲಿ ‘ಬ್ಯಾಕ್ಟೀರಿಯೋಫಾಜ್’ ವೈರಾಣುಗಳನ್ನು ಬಳಸಲಾಗುತ್ತದೆ.

ನ್ಯಾನೋ ತಂತ್ರಜ್ಞಾನದಲ್ಲೂ ವಾಹಕಗಳಾಗಿ ವೈರಾಣುಗಳ ಬಳಕೆ ಮಾಡಲಾಗುತ್ತದೆ; ತಳೀಯವಾಗಿ ಮಾರ್ಪಡಿಸಲಾದ ಜೀನ್ ಅನುಕ್ರಮಗಳನ್ನು, ಅತಿಥೇಯ ಜೀವಕೋಶಕ್ಕೆ ನ್ಯಾನೋ ಮಟ್ಟದಲ್ಲಿ ವಿತರಣೆ ಮಾಡಲು, ಅತ್ಯಂತ ಸಣ್ಣ ಗಾತ್ರದ ವೈರಾಣುಗಳನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.

ವೈರಾಣುಗಳನ್ನು ಜೀನ್ ವಾಹಕಗಳಾಗಿ  ಬಳಸಿ, ಕುಲಾಂತರಿ ಸಸ್ಯಗಳನ್ನು ಹಾಗೂ ಪ್ರಾಣಿಗಳನ್ನು ಹುಟ್ಟುಹಾಕಬಹುದು; ಇದರಿಂದ ಸಸ್ಯಗಳು ಹಾಗೂ ಪ್ರಾಣಿಗಳು, ಹೆಚ್ಚು ಫಲದಾಯಕವಾಗುತ್ತವೆ ಎಂದು ಕಂಡುಬಂದಿದೆ.

ವಂಶವಾಹಿ ಚಿಕಿತ್ಸೆಯ ಮೂಲಕ, ಕಾರ್ಯಪ್ರವೃತ್ತ ಜೀನನ್ನು ಕ್ಯಾನ್ಸರ್ ಪೀಡಿತ ರೋಗಿಯ ಜೀವಕೋಶದೊಳಗೆ ಪರಿಚಯಿಸಲು, ‘ಅಡೆನೋವೈರಾಣು’ಗಳು ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ; ಇದರ ಮೂಲಕ ಹಲವು ಬಗೆಯ ಕ್ಯಾನ್ಸರ್ಗಳು ಉಪಶಮನಗೊಂಡಿವೆ ಎಂದು ಕಂಡುಬಂದಿದೆ.

ಎಡ್ವರ್ಡ್ ಜೆನ್ನರನು ಮೊದಲ ಬಾರಿಗೆ ಸಿಡುಬಿನ ವಿರುದ್ಧ ಉಪಯುಕ್ತ ಲಸಿಕೆಯನ್ನು ಕಂಡುಹಿಡಿದಾಗ, ಆತ ಬಳಸಿದ್ದು ನಿರುಪದ್ರವಿಯಾಗಿಸಿದ್ದ ವೈರಾಣುಗಳನ್ನೇ; ಇದೇ ವಿಧಾನವು ಇಂದಿಗೂ ಚಾಲ್ತಿಯಲ್ಲಿದ್ದು, ವೈರಾಣುವಿನ ರೋಗಕಾರಕ ಅಂಶವನ್ನು ತೆಗೆದುಹಾಕಿ, ಉಳಿದ ವೈರಾಣುವಿನ ಭಾಗಗಳನ್ನು ಲಸಿಕೆಯ ರೂಪದಲ್ಲಿ ಸಂಸ್ಕರಿಸಿ, ಬಳಸಲಾಗುತ್ತದೆ; ನೂರಾರು ರೋಗಗಳ ವಿರುದ್ಧ ಜಾಗತಿಕವಾಗಿ ಮಾನವಕುಲವು ಸಾಧಿಸಿರುವ ಗೆಲುವಿನಲ್ಲಿ, ವೈರಾಣುಗಳು ಪ್ರಮುಖ ಪಾತ್ರ ವಹಿಸಿವೆ. ದಡಾರ, ಗದ್ದಬಾವು ಹಾಗೂ ರುಬೇಲ್ಲಾ ಸೋಂಕು ತಡೆಗಟ್ಟಲು ನೀಡುವ ಎಂ.ಎಂ.ಆರ್ ಲಸಿಕೆ, ಚಿಕನ್ ಪಾಕ್ಸ್ ಅಥವಾ ಸಣ್ಣಮ್ಮ ಸೋಂಕು ತಡೆಗಟ್ಟಲು ನೀಡುವ ಲಸಿಕೆ, ಪೋಲಿಯೋ ಲಸಿಕೆ – ಇವೆಲ್ಲವೂ ವೈರಸ್ಗಳನ್ನು ಕೊಂದು ಅಥವಾ ನಿಶಕ್ತಗೊಳಿಸಿ ತಯಾರಿಸಲಾದ ಲಸಿಕೆಗಳೇ.

ನಿರ್ದಿಷ್ಟ ಜೀವಕೋಶಗಳಲ್ಲಿ ನಿರ್ದಿಷ್ಟ ಕಿಣ್ವಗಳನ್ನು ಸೇರಿಸಲು ಕೂಡ, ವೈರಾಣುಗಳ ಸಹಾಯ ಪಡೆಯಲಾಗುತ್ತದೆ; ಈ ಕಿಣ್ವಗಳ ಅಭಿವ್ಯಕ್ತಿಯ ಫಲವಾಗಿ, ನಿಷ್ಕ್ರಿಯವಾಗಿದ್ದ ಹಲವು ಉಪಯುಕ್ತ ಜೀವರಾಸಾಯನಿಕ ಮಾರ್ಗಗಳು ಸಕ್ರಿಯಗೊಳ್ಳುತ್ತವೆ ಮತ್ತು ಮಾನವನ ಆರೋಗ್ಯದ ನಿರ್ವಹಣೆಯಲ್ಲಿ ಸಹಕಾರಿಯಾಗುತ್ತವೆ.

ಜೈವಿಕ ಕೀಟ ನಿಯಂತ್ರಣದಲ್ಲಿ ವೈರಾಣುಗಳನ್ನು ಬಳಸಬಹುದು ಎಂದು ಕೃಷಿತಜ್ಞರು ಸಾರಿದ್ದಾರೆ; ಹಾನಿಕಾರಕ ಕೀಟಗಳನ್ನು ನಿಯಂತ್ರಿಸಲು ‘ನ್ಯೂಕ್ಲಿಯಾರ್ ಪಾಲಿಹೆಡ್ರೋಸಿಸ್ ವೈರಸ್’ನಂತಹ ಕೆಲವು ನಿರ್ದಿಷ್ಟ ವೈರಾಣುಳನ್ನು ಬಳಸಿ, ಬೆಳೆಗಳನ್ನು ಕೀಟಗಳ ಹಾವಳಿಯಿಂದ ಕಾಪಾಡಿಕೊಳ್ಳಬಹುದು ಎಂದು ಕಂಡುಬಂದಿದೆ.

ಮೂರನೆಯ ಜಾಗತಿಕ ಮಹಾಯುದ್ಧವೇನಾದರೂ ನಡೆದರೆ, ಅದು ಜೈವಿಕ ಶಸ್ತ್ರಾಸ್ತ್ರಗಳ ಬಳಕೆಯ ಮೂಲಕವೇ ಎನ್ನುತ್ತಾರೆ ಹಲವು ಸಂಶೋಧಕರು ಹಾಗೂ ಇತಿಹಾಸತಜ್ಞರು. ಇದು ಎಷ್ಟರಮಟ್ಟಿಗೆ ಸತ್ಯಕ್ಕೆ ಹತ್ತಿರ ಎಂಬುದು ಮನಗಾಣಲು ಅಪಾರ ಲೋಕಜ್ಞಾನ ಬೇಕು; ಆದರೆ, ಅತ್ಯಂತ ಅಪಾಯಕಾರಿ ಜೈವಿಕ ಶಸ್ತ್ರಾಸ್ತ್ರಗಳ ತಯಾರಿ ಅಷ್ಟೇನೂ ಕಷ್ಟವಲ್ಲ. ಜೈವಿಕ ಶಸ್ತ್ರಾಸ್ತ್ರವೆಂದರೆ ಬೃಹತ್ ಫಿರಂಗಿ, ತುಪಾಕಿ, ಪಿಸ್ತೂಲು, ಮದ್ದುಗುಂಡು – ಇವ್ಯಾವುದೂ ಅಲ್ಲ; ಕೆಲವೇ ಕೆಲವು ಗ್ರಾಂಗಳಷ್ಟು ಅಪಾಯಕಾರಿ ಮಾರಣಾಂತಿಕ ರೋಗಕಾರಕ ಸೂಕ್ಷ್ಮಾಣುಜೀವಿ ಸಾಕು. ಕ್ಷಣಮಾತ್ರದಲ್ಲಿ, ಗಾಳಿಯ ಅಥವಾ ನೀರಿನ ಮೂಲಕ ಹರಡಬಲ್ಲ ರೋಗಕಾರಕ ಸೂಕ್ಷ್ಮಾಣುಜೀವಿಗಳು ಸೃಷ್ಟಿಸುವ ಅಲ್ಲೋಲ ಕಲ್ಲೋಲ ಬಹಳ ದೊಡ್ಡ ಮಟ್ಟದ್ದೇ! ಇಂತಹ ಜೈವಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಬಳಸಲಾಗುವ ಸೂಕ್ಷ್ಮಾಣುಜೀವಿಗಳ ಪಟ್ಟಿಯಲ್ಲಿ ಮೊದಲ ಹೆಸರು ಈ ವೈರಸ್ಗಳದ್ದೇ. ಇದಕ್ಕೆ ಕಾರಣ, ಈ ವೈರಾಣುಗಳು, ಜೀವಕೋಶದ ಹೊರಗೆ ನಿರ್ಜೀವ ಧೂಳಿನ ಕಣದಂತೆ ಇದ್ದು, ಗಾಳಿಯ ಅಥವಾ ನೀರಿನ ಮೂಲಕ ಯಾವುದೇ ಜೀವಿಯ ದೇಹ ಸೇರಿದರೆ, ಸುಪ್ತ ಸ್ಥಿತಿಯಿಂದ ಹೊರಬಂದು, ಸಕ್ರಿಯವಾಗಿ, ತನ್ನ ಗುಣವಿಶೇಷವಾದ ರೋಗವನ್ನು ಅತಿಥೇಯ ಜೀವಿಯಲ್ಲಿ ಸುಲಭವಾಗಿ ಉಂಟುಮಾಡುತ್ತವೆ. ಇದು ನಿಜಾರ್ಥದಲ್ಲಿ ಜಗದ ಒಳಿತಿಗೆ ಉಪಯುಕ್ತವಲ್ಲದಿದ್ದರೂ, ಮಾನವನು ಕಂಡುಕೊಂಡ ವೈರಾಣುಗಳ ಅನ್ವಯಗಳಲ್ಲಿ ಒಂದಾದ್ದರಿಂದ, ಮಾನವನಿರ್ಮಿತ  ಉಪಯುಕ್ತತೆ ಎಂದು ಪರಿಗಣಿಸಬೇಕಾಗಿದೆ.

ತ್ಯಾಜ್ಯನೀರಿನ ಜೈವಿಕ ಸಂಸ್ಕರಣ ಪ್ರಕ್ರಿಯೆಗಳಲ್ಲಿ ವೈರಾಣುಗಳನ್ನು, ಅದರಲ್ಲೂ ಮುಖ್ಯವಾಗಿ, ಬ್ಯಾಕ್ಟೀರಿಯೋಫಾಜ್ಗಳನ್ನೂ ಬಳಸಲಾಗುತ್ತದೆ; ಪ್ರಯೋಗಾಲಯಗಳೊಳಗೆ ಅಪಾರ ಪ್ರಮಾಣದಲ್ಲಿ ಈ ನಿರ್ದಿಷ್ಟ ವೈರಾಣುಗಳನ್ನು ಸಂಶ್ಲೇಷಿಸಿ ಮತ್ತು ಸಂಸ್ಕರಿಸಿ, ತ್ಯಾಜ್ಯನೀರಿನಲ್ಲಿ  ಅವುಗಳನ್ನು ಪರಿಚಯಿಸಿದರೆ ನಮ್ಮ ಕೆಲಸ ಮುಗಿದ ಹಾಗೇ! ನಿರ್ದಿಷ್ಟ ಹಾನಿಕಾರಕ ಸೂಕ್ಷ್ಮಾಣುಜೀವಿಯನ್ನು ನಿರ್ದಿಷ್ಟ ವೈರಾಣುವು ಗುರಿ ಮಾಡಿ, ಆವುಗಳನ್ನು ಸುಲಭವಾಗಿ ನಿವಾರಿಸುತ್ತವೆ; ಸಂಸ್ಕರಣ ಪ್ರಕ್ರಿಯೆಯ ನಂತರ, ಈ ವೈರಾಣುಗಳನ್ನು ಹಿಂಪಡೆದು, ಸ್ಫಟಿಕೀಕರಣಗೊಳಿಸಿ, ಮತ್ತೊಮ್ಮೆ ಉಪಯೋಗಿಸಲು ಶೇಖರಿಸಿಡಬಹುದು.

ಮಾನವಕುಲವನ್ನು ಮುನ್ನಡೆಸಿಕೊಂಡು ಹೋಗುವಂತಹ ಪ್ರಧಾನಕಾರ್ಯದಲ್ಲೂ, ಈ ಪುಟ್ಟ ವೈರಾಣುಗಳ ಪಾತ್ರವಿದೆಯೆಂದರೆ ನಂಬುತ್ತೀರಾ? ಮಾನವನ ವಿಕಾಸದ ಪ್ರಾಥಮಿಕ ಪ್ರಕ್ರಿಯೆಯಲ್ಲಿ, ವೈರಸ್ಗಳ ಮೂಲಕ ಕೆಲವು ಪ್ರಮುಖ ಜೀನ್ಗಳು, ಮಾನವನ ವಂಶವಾಹಿಯ ಅವಿಭಾಜ್ಯ ಅಂಗಗಳಾಗಿವೆ. ಈ ಜೀನ್ ನ ಅನುಪಸ್ಥಿತಿಯಲ್ಲಿ, ಗರ್ಭಕೋಶದಲ್ಲಿ ಮಾಸುಚೀಲದ ರಚನೆಯು ಪರಿಪೂರ್ಣವಾಗಿ ಆಗುವುದು ಸಾಧ್ಯವಿಲ್ಲ; ಅಂದರೆ, ಮಾನವನಿಗಿಂತಾ ಮೊದಲೇ ಭೂಮಿಯಲ್ಲಿದ್ದ ವೈರಸ್ಗಳು, ಮಾನವನಿಗೆ ಕೊಡಮಾಡಿದ ಅತ್ಯುಪಯುಕ್ತ ವಂಶವಾಹಿ ಅನುಕ್ರಮದ ಕಾರಣ, ಇಂದಿನವರೆಗೂ ಸಮಂಜಸವಾದ ಗರ್ಭಧಾರಣೆ ಹಾಗೂ ಯುಕ್ತವಾದ ಮಾಸುಚೀಲ, ಹೊಕ್ಕಳುಬಳ್ಳಿಯ ರಚನೆಯನ್ನೂ ಒಳಗೊಂಡಂತೆ ಸರಿಯಾದ ಗರ್ಭಾವಸ್ಥೆ ಹಾಗೂ ಆರೋಗ್ಯವಂತ ಶಿಶುವಿನ ಜನನ ಮುಂದುವರೆದಿದ್ದು, ಇದರ ಮುಖಾಂತರ, ಮಾನವಕುಲದ ಉಳಿವಿಗೆ ವೈರಾಣುಗಳು ಎಷ್ಟು ಪ್ರಮುಖ ಕೊಡುಗೆ ನೀಡಿವೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು.

ಸಾಮಾನ್ಯವಾಗಿ, ಯಾವುದೇ ಸೂಕ್ಷ್ಮಾಣುಜೀವಿಯೂ, ತಮ್ಮ ಅಪಾಯಕಾರಿ ಗುಣವಿಶೇಷಗಳಿಂದ ಜನರಲ್ಲಿ ಭಯ ಹುಟ್ಟಿಸಿ, ಕುಖ್ಯಾತವಾಗಿ, ನಂತರದ ಸಂಶೋಧನೆಗಳಿಂದ ತಮ್ಮ ಉಪಕಾರಿ ಪ್ರವೃತ್ತಿಯನ್ನೂ ಹೊರಗೆಡವಿ, ಪ್ರಖ್ಯಾತವಾಗುತ್ತವೆ; ಹಾಗಾಗಿ, ಈಗಾಗಲೇ ನಮಗೆ ತಿಳಿದಿರುವ ಪ್ರಕಾರ, ವೈರಾಣುಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಸೂಕ್ಷ್ಮಾಣುಜೀವಿಗಳೂ ಉಪಕಾರಿಗಳೂ ಹೌದು, ಅಪಾಯಕಾರಿಯೂ ಹೌದು; ಅವುಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಷ್ಟೂ ನಾವು ಅವುಗಳ ಅಪಾಯದಿಂದ ಸುಲಭವಾಗಿ ಪಾರಾಗಬಹುದು ಹಾಗೂ ಅವುಗಳ ಉಪಕಾರವನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ.

– ಕ್ಷಮಾ ವಿ ಭಾನುಪ್ರಕಾಶ್

ಸಮಾಜಕೇಂದ್ರಿತ ವಿಮರ್ಶೆ

ಸಮಾಜಕೇಂದ್ರಿತ ವಿಮರ್ಶೆ

ಸಾಹಿತಿಯೂ ಒಂದು ಸಮಾಜದ, ಒಂದು ಸಾಂಸ್ಕೃತಿಕ ಘಟಕದ ಅಂಗ. ಇತರರಂತೆಯೇ ಅವನೂ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ, ಒಂದು ವಿಶಿಷ್ಟ ಸಮಾಜ ವ್ಯವಸ್ಥೆಯಲ್ಲಿ ಬೇರುಬಿಟ್ಟಿರುತ್ತಾನೆ. ಆದ್ದರಿಂದ ಆ ವಿಶಿಷ್ಟ ವ್ಯವಸ್ಥೆಯಿಂದ, ಮತ್ತು ಆ ಕಾಲಘಟ್ಟದಲ್ಲಿ ಪ್ರಭಾವಶಾಲಿಯಾದ ವೈಚಾರಿಕ ಪ್ರಣಾಲಿಗಳಿಂದ ಅವನು ಪ್ರಭಾವಿತನಾಗದೇ ಇರಲು ಸಾಧ್ಯವಿಲ್ಲ. ತನ್ನ ಸಮಕಾಲೀನ ವ್ಯವಸ್ಥೆಯನ್ನೂ ವೈಚಾರಿಕತೆಯನ್ನೂ ಅವನು ವಿರೋಧಿಸಬಹುದು, ಅಥವಾ ಒಪ್ಪಿಕೊಳ್ಳಬಹುದು ಅಥವಾ ಸುಧಾರಿಸಲು ಪ್ರಯತ್ನಿಸಬಹುದು, ಅಥವಾ ಅವೆಲ್ಲವನ್ನೂ ಮೀರಿ ನಿಂತು ತನ್ನತನವನ್ನು ಕಂಡುಕೊಳ್ಳಬಹುದು. ಆದರೆ ಒಂದಲ್ಲ ಒಂದು ರೀತಿಯಲ್ಲಿ ಅವುಗಳಿಗೆ ಸ್ಪಂದಿಸದೆ ಇರಲು ಸಾಧ್ಯವಿಲ್ಲ. ಈ ಮಾತು ವಾಸ್ತವಿಕತೆಗೆ ಸಂಬಂಧವಿಲ್ಲದಂತೆ ತೋರುವ ಮಕ್ಕಳ ಕಿನ್ನರ ಕಥೆಗಳಿಗೆ ಮತ್ತು ವೈಜ್ಞಾನಿಕ ಕತೆಗಳಿಗೆ ಕೂಡ ಅನ್ವಯಿಸುತ್ತದೆ. ಇವುಗಳೂ ಕೂಡ ಯಾವುದೋ ಒಂದು ನೆಲೆಯಲ್ಲಿ ವಾಸ್ತವಿಕತೆಗೇ ಪ್ರತಿಕ್ರಿಯಿಸುತ್ತಿರುತ್ತವೆ.

ಹಾಗೆಯೇ, ಆದಿಕವಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸಾಹಿತಿಗಳಿಗೂ ಒಂದು ಸಾಹಿತ್ಯಿಕ ಪರಂಪರೆಯಿರುತ್ತದೆ; ಮತ್ತು ಈ ಪರಂಪರೆಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೋರ್ವ ಸಾಹಿತಿಯೂ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಆ ಪರಂಪರೆಯನ್ನು ಅವನು ಮುಂದುವರಿಸಲಿ ಅಥವಾ ತಿರಸ್ಕರಿಸಲಿ – ಆ ಪರಂಪರೆಯ ಅಸ್ತಿತ್ವವನ್ನು ಅವನು ಅಲ್ಲಗಳೆಯಲಾಗುವುದಿಲ್ಲ. ಪರಿಪೂರ್ಣ ಸ್ವೋಪಜ್ಞತೆ ಸಾಹಿತ್ಯಕ್ಷೇತ್ರದಲ್ಲಿ ಒಂದು ಮಿಥ್ಯೆಯೇ ಸರಿ.

ಈ ಕಾರಣಗಳಿಂದಾಗಿ ಯಾವುದೇ ಒಂದು ಸಾಹಿತ್ಯ ಕೃತಿಯನ್ನು ನಾವು ಅರ್ಥ ಮಾಡಿಕೊಳ್ಳಲು ಮತ್ತು ಮೌಲ್ಯಮಾಪನ ಮಾಡಲು ಆ ಕೃತಿ ರಚನೆಯಾದ ಸಾಮಾಜಿಕ ವ್ಯವಸ್ಥೆ ಆ ಕಾಲದಲ್ಲಿದ್ದ ಪ್ರಮುಖ ವೈಚಾರಿಕ ಪ್ರಣಾಲಿ, ಮತ್ತು ಆ ಕೃತಿಯ ಹಿಂದಿದ್ದ ಸಾಹಿತ್ಯಿಕ ಪರಂಪರೆ ಇವುಗಳ ಅರಿವು ನಮಗಿರಲೇಬೇಕು; ಮತ್ತು ಈ ಅರಿವಿನಲ್ಲಿಯೇ ಒಂದು ಕೃತಿ ಹಾಗೂ ಅದು ನಿರ್ಮಾಣವಾದ ಸಮಾಜ, ಕೃತಿ ಹಾಗೂ ಆ ಕಾಲದ ವೈಚಾರಿಕತೆ – ಇವುಗಳ ನಡುವಣ ಸಂಕೀರ್ಣ ಸಂಬಂಧಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುವುದೇ ವಿಮರ್ಶಕನ ಮೂಲಭೂತ ಕರ್ತವ್ಯ – ಎಂಬ ನಿಲುವಿನಲ್ಲಿ ಹೊರಡುವ ವಿಮರ್ಶೆಯನ್ನು ಸಮಾಜಕೇಂದ್ರಿತ ವಿಮರ್ಶೆ ಎನ್ನಬಹುದು.

ಸಮಾಜಕೇಂದ್ರಿತ ವಿಮರ್ಶೆ ಈ ಶತಮಾನದಲ್ಲಿ ನಾನಾ ಮಾರ್ಗಗಳಲ್ಲಿ, ನಾನಾ ರೂಪಗಳಲ್ಲಿ ಬೆಳೆದು ಶ್ರೀಮಂತವಾಗಿದೆ. ನಮ್ಮ ಅಧ್ಯಯನದ ಅನುಕೂಲಕ್ಕಾಗಿ ನಾವು ಇಂತಹ ವಿಮರ್ಶೆಯ ಮೂರು ಮುಖ್ಯ ಪ್ರಭೇದಗಳನ್ನು ಗುರುತಿಸಬಹುದು. ಅವೆಂದರೆ ಚಾರಿತ್ರಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ ಮತ್ತು ಸ್ತ್ರೀನಿಷ್ಠ ವಿಮರ್ಶೆ.

ಚಾರಿತ್ರಿಕವಿಮರ್ಶೆ:

ಚಾರಿತ್ರಿಕ ವಿಮರ್ಶೆಯ ಮುಖ್ಯ ಪರಿಮಾಣಗಳನ್ನು (Parameters) ಗುರುತಿಸುವುದು ಕಷ್ಟಸಾಧ್ಯ. ಏಕೆಂದರೆ ಚಾರಿತ್ರಿಕ ವಿಮರ್ಶೆಯ ಲಕ್ಷಣಗಳು ವಿಮರ್ಶಕನಿಂದ ವಿಮರ್ಶಕನಿಗೆ ಬದಲಾಗುತ್ತಾ ಹೋಗುತ್ತವೆ.

೧) ಲೇಖಕನೊಬ್ಬನ ಸಮಕಾಲೀನ ಸಾಹಿತ್ಯಿಕ ಅಥವಾ / ಮತ್ತು ಸಾಂಸ್ಕೃತಿಕ ಸನ್ನಿವೇಶವನ್ನು ಅಪಾರ ಪಾಂಡಿತ್ಯ ಹಾಗೂ ಶ್ರಮದ ಮೂಲಕ ಪುನರ್ನಿರ್ಮಿಸುವುದು; ೨) ಕೃತಿ-ನಿರ್ಮಾಣ ಕಾಲದಲ್ಲಿ ಪ್ರಭಾವಶಾಲಿಯಾಗಿದ್ದ ವೈಚಾರಿಕತೆಯನ್ನು ಗುರುತಿಸುವುದು ೩) ಒಂದು ಕೃತಿಯ ಸಾಹಿತ್ಯಿಕ ಆಕರಗಳು ಮತ್ತು ಒಂದು ಕೃತಿಯ ಮೇಲೆ ಪ್ರಭಾವ ಬೀರಿರಬಹುದಾದ ಇತರ ಕೃತಿಗಳು – ಇವನ್ನು ಸಂಶೋಧಿಸುವುದು; ೪) ಪ್ರಾಚೀನ ಕಾಲದ ಕೃತಿಯ ಅನೇಕ ಪಾಠಾಂತರಗಳನ್ನು ಪರಿಶೀಲಿಸಿ ಯೋಗ್ಯ ‘ಪಠ್ಯ’ವನ್ನು ಸಿದ್ಧಪಡಿಸುವುದು; ೫) ಒಂದು ಕೃತಿಯ ಕಾಲ –  ನಿರ್ದೇಶನ ಮಾಡುವುದು ; ೬) ಕೃತಿಕಾರನ ವೈಚಾರಿಕ ಮೌಲ್ಯಗಳನ್ನು ಗುರುತಿಸುವುದು ೭) ಕೃತಿಕಾರನ ಜೀವನ ಚರಿತ್ರೆಯನ್ನು ಸಿದ್ಧಪಡಿಸುವುದು – ಇವೆಲ್ಲವೂ ಚಾರಿತ್ರಿಕ ವಿಮರ್ಶೆಯ ವ್ಯಾಪ್ತಿಯೊಳಗೇ ಬರುತ್ತವೆ. (ನೋಡಿ :  Handy and Westbrook, ೧೯೭೪ : ೩೦೪-೬). ಎಂದರೆ, ಇವೆಲ್ಲಾ ಕಾಳಜಿಗಳೂ ಎಲ್ಲಾ ಚಾರಿತ್ರಿಕ ವಿಮರ್ಶಕರಲ್ಲಿರುತ್ತವೆ ಎಂದಲ್ಲ, ಕೆಲ ಕೆಲವು ಕಾಳಜಿಗಳು ಕೆಲ ವಿಮರ್ಶಕರಲ್ಲಿ ಮುಖ್ಯವಾಗಿ ಕಂಡುಬರುತ್ತವೆ.

ಎಡ್ಮಂಡ್ ವಿಲ್ಸನ್‌ನ ಪ್ರಕಾರ ಚಾರಿತ್ರಿಕ ವಿಮರ್ಶೆ ೧೮ನೆಯ ಶತಮಾನದ ಇಟಾಲಿಯನ್ ದಾರ್ಶನಿಕ ವಿಕೋನಿಂದಲೇ ಪ್ರಾರಂಭವಾಗುತ್ತದೆ. ವಿಕೋ ಹೋಮರ್ ರಚಿಸಿದ ‘ಇಲಿಯಡ್’ನ ಗ್ರೀಕ್ ಸಮಾಜವನ್ನು ‘ಒಡಿಸ್ಸಿ’ಯ ಗ್ರೀಕ್ ಸಮಾಜದೊಡನೆ ತುಲನೆ ಮಾಡುತ್ತಾ ಅವರೆಡು ಕೃತಿಗಳಿಗೂ ಮತ್ತು ಅವೆರಡರ ಸಮಾಜ ವ್ಯವಸ್ಥೆಗಳಿಗೂ ಇರುವ ಸಂಬಂಧವನ್ನು ಚರ್ಚಿಸುತ್ತಾನೆ. ಆದರೆ ಚಾರಿತ್ರಿಕ ವಿಮರ್ಶೆಯ ಜನಕನೆಂದರೆ ೧೯ನೆಯ ಶತಮಾನದ ಫ್ರೆಂಚ್ ವಿಮರ್ಶಕ – ಇತಿಹಾಸಕಾರ ಹಿಪೋಲಿಟ್ ಟೇನ್ (Hyppolyte Taine). ತನ್ನ ಸುಪ್ರಸಿದ್ಧ ‘ಇಂಗ್ಲಿಷ್ ಸಾಹಿತ್ಯದ ಇತಿಹಾಸ’ (1863) ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಟೇನ್ ಚಾರಿತ್ರಿಕ ವಿಮರ್ಶೆಯ ಮೂಲ ಸಿದ್ಧಾಂತಗಳನ್ನು ವಿವರಿಸುತ್ತಾನೆ. ಅದೇ ಕಾಲದ ಕ್ರಾಂತಿಕಾರಕ ಇತಿಹಾಸಕಾರ ಲೆಪಲ್ಡ್ ರ್ಯಾಂಕ್ (Leopold Ranke)ನ ವಿಚಾರಗಳಿಂದ ಪ್ರಭಾವಿತನಾದ ಟೇನ್ ಸಾಹಿತ್ಯ ವಿಮರ್ಶೆಯಲ್ಲಿ ಅನುಸರಿಸಬೇಕಾದ ಮೂರು ನಿರ್ಣಾಯಕ ಪ್ರಮಾಣಗಳನ್ನು ‘ಜನಾಂಗ – ಕಾಲಘಟ್ಟ – ಯುಗ’ (race -moment-milieu; ತನ್ನ ಮೊದಲಿನ ಆವೃತ್ತಿಯಲ್ಲಿ ಅವನು `race – surroundings – epoch’ ಎಂದು ಗುರುತಿಸಿದ್ದನು) ಎಂದು ಮಂಡಿಸುತ್ತಾನೆ. ಟೇನ್‌ನ ಪ್ರಕಾರ (ಅಥವಾ ರ್ಯಾಂಕ್‌ನ ವಿಚಾರವನ್ನು ಟೇನ್ ಹೇಳುವಂತೆ) ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ವಿಶಿಷ್ಟ ಪ್ರತಿಭೆಯಿದೆ (genius of the race) ಮತ್ತು ಈ ವಿಶಿಷ್ಟ ಪ್ರತಿಭೆಯನ್ನು ಆ ಜನಾಂಗ ವಾಸಿಸುವ ನಾಡಿನ ಭೌಗೋಳಿಕತೆ (ಅತಿಶೀತ ಪ್ರದೇಶ ಅಥವಾ ಅತ್ಯುಷ್ಣ ಪ್ರದೇಶ, ಫಲವತ್ತಾದ ನೆಲ ಅಥವಾ ಕೃಷಿ ಕಷ್ಟಸಾಧ್ಯವಾಗಿರುವ ಇತ್ಯಾದಿ) ರೂಪಿಸಿರುತ್ತದೆ. ಕಾಲಘಟ್ಟವೆಂದರೆ ಒಂದು ವಿಶಿಷ್ಟ ಚಾರಿತ್ರಿಕ ಕಾಲ (ವ್ಯಕ್ತಿಯ ಜೀವನದಲ್ಲಿ ಹಾಗೂ ಸಮಾಜದಲ್ಲಿ) : ಲೇಖಕ ಒಂದು ಕೃತಿಯನ್ನು ರಚಿಸುವಾಗ ಅಂಧನಾಗಿರುವುದು ಅಥವಾ ದೇಶಭ್ರಷ್ಟನಾಗಿರುವುದು; ಹಾಗೆಯೇ ಸಮಾಜದಲ್ಲಿ ಪರರ ಆಳ್ವಿಕೆ ಇರುವ ಕಾಲ, ಸ್ವತಂತ್ರ ಕಾಲ, ಕ್ರಾಂತಿಯಾದ ಕಾಲ, ಇತ್ಯಾದಿ. ‘ಯುಗ’ವನ್ನು (milieu) ಟೇನ್ ವೈಚಾರಿಕವಾಗಿ ಮತ್ತು ಸಾಹಿತ್ಯಿಕವಾಗಿ ನೋಡುತ್ತಾನೆ. ಎಂದರೆ ಕೃತಿ ರಚನೆಯ ಕಾಲದಲ್ಲಿ ಮಾನವ-ದೇವರು, ಸ್ತ್ರೀ – ಪುರುಷ, ಮಾನವ- ನಿಸರ್ಗ ಇವುಗಳ ಸಂಬಂಧವನ್ನು ಕುರಿತಾಗಿದ್ದ ವಿಶಿಷ್ಟ – ವೈಚಾರಿಕ ಪ್ರಣಾಲಿ ಮತ್ತು ಕೃತಿರಚನೆಯ ಕಾಲದಲ್ಲಿದ್ದ ಸಾಹಿತ್ಯಿಕ ಸನ್ನಿವೇಶ (ಯಾವ ಸಾಹಿತ್ಯ ಪ್ರಭೇದ ಜನಪ್ರಿಯವಾಗಿದ್ದಿತು? ಯಾವ ವಿಧದ ಸಾಹಿತ್ಯ ಪರಂಪರೆಯಿದ್ದಿತು? ಇತ್ಯಾದಿ) – ಇವೆರಡನ್ನೂ ಟೇನ್ ‘ಯುಗ’ವೆಂದು ಕರೆಯುತ್ತಾನೆ.

ರ್ಯಾಂಕ್ ಇತಿಹಾಸ ರಚನೆಗೆ ವಿಜ್ಞಾನಶಾಸ್ತ್ರಗಳ ತಾರ್ಕಿಕ ಶುದ್ಧತೆ ಮತ್ತು ವ್ಯಕ್ತಿ ನಿರಪೇಕ್ಷತೆಗಳನ್ನು ತರಲು ಪ್ರಯತ್ನಿಸಿದಂತೆಯೇ ಸಾಹಿತ್ಯ ಚರಿತ್ರೆಯಲ್ಲಿಯೂ ಈ ಗುಣಗಳನ್ನು ತರಬೇಕಾದರೆ ಟೇನ್‌ನ ಪ್ರಕಾರ ನಾವು ‘ಜನಾಂಗ – ಕಾಲಘಟ್ಟ – ಯುಗ’ ಈ ಮೂರು ಪರಿಕಲ್ಪನೆಗಳ ಚೌಕಟ್ಟನಲ್ಲಿ ಪ್ರತಿಯೊಬ್ಬ ಲೇಖಕನನ್ನೂ ಮತ್ತು ಕೃತಿಯನ್ನೂ ಅರ್ಥೈಸಬೇಕು. ತಾತ್ವಿಕ ನೆಲೆಯಲ್ಲಿ ಈ ಮೂರೂ ಪರಿಕಲ್ಪನೆಗಳು ಸಮಾನವಾಗಿದ್ದರೂ ಆಚರಣೆಯಲ್ಲಿ ಒತ್ತು ಬೀಳುವುದು ಯುಗಕ್ಕೆಂದು ನಮಗೆ ಟೇನ್‌ನ ಸಾಹಿತ್ಯ ಚರಿತ್ರೆಯಿಂದ ಕಂಡುಬರುತ್ತದೆ. ಜನಾಂಗದ ಪ್ರಶ್ನೆ ಮರೆತೇ ಹೋಗುತ್ತದೆ; ಮತ್ತು ‘ಕಾಲಘಟ್ಟ’ ಯುಗದ ಚರ್ಚೆಯಲ್ಲಿಯೇ ಕೂಡಿಕೊಳ್ಳುತ್ತದೆ.

ಟೇನ್ ಸಾಹಿತ್ಯ ವಿಮರ್ಶೆಯ ಪರಿಮಾಣಗಳನ್ನು ಮಂಡಿಸಿದಾಗ ವಿಮರ್ಶೆಯ ಹೊಸ ಯುಗವೇ ಆರಂಭವಾಯಿತೆಂದು ಸಾಧಾರಣವಾಗಿ ಎಲ್ಲರೂ ಭಾವಿಸಿದರು. “ಅಂತೂ ಕೊನೆಗೆ ವ್ಯಕ್ತಿ ನಿರಪೇಕ್ಷ ವಿಮರ್ಶೆ ಸಾಧ್ಯವಾಯಿತು” ಎಂದು ಲೆಸ್ಲಿ ಸ್ಟೀಫನ್ ಚಾರಿತ್ರಿಕ ವಿಮರ್ಶೆಯನ್ನು ಸ್ವಾಗತಿಸಿದನು. ೧೮೯೫ – ೧೯೧೦ರ ಅವಧಿಯಲ್ಲಿ ಪ್ರಕಟವಾದ ಕೂರ್ತ್‌‌ಹೋಪ್‌ನ (W.J. Courthope) “ಇಂಗ್ಲಿಷ್ ಕಾವ್ಯದ ಇತಿಹಾಸ’ ಗ್ರಂಥದ ಮೂಲಕ ಟೇನ್‌ಪ್ರಾರಂಭಿಸಿದ ಚಾರಿತ್ರಿಕ ವಿಮರ್ಶೆ ತನ್ನ ಸಾಧ್ಯತೆಯ ಶಿಖರವನ್ನು ಮುಟ್ಟಿತು. ದೀರ್ಘವಾದ ಮತ್ತು ಮಹತ್ವಾಕಾಂಕ್ಷೆಯ ಈ ಗ್ರಂಥದಲ್ಲಿ ಕೂರ್ತ್‌‌ಹೋಪ್ ಬ್ರಿಟಿಷ್ ಜನಾಂಗದ ಪ್ರತಿಭೆ ಮತ್ತು ಬ್ರಿಟಿಷ್ ರಾಜಕೀಯ ಸಂಸ್ಥೆಗಳು ಇವೆರಡನ್ನೂ ಒಟ್ಟಿಗೇ ಅಭ್ಯಸಿಸುತ್ತಾ ಇಂಗ್ಲೆಂಡ್‌ನಲ್ಲಿ ಇತಿಹಾಸದುದ್ದಕ್ಕೂ ವ್ಯಕ್ತಿವಾದ ಮತ್ತು ಸಮಷ್ಟಿವಾದ ಇವುಗಳ ನಡುವೆ ಗತಿ ತಾರ್ಕಿಕ (ಡಯಲೆಕ್ಟಿಕಲ್) ಸಂಘರ್ಷ ನಡೆದಿದೆಯೆಂಬ ಸಿದ್ಧಾಂತವನ್ನು ಮಂಡಿಸುತ್ತಾನೆ. ಕೂರ್ತ್‌ಹೋಪ್‌ನ ಸಾಹಿತ್ಯಚರಿತ್ರೆ ಬಂದ ಒಂದು ದಶಕದ ನಂತರ ಸುಪ್ರಸಿದ್ಧ “ಕೇಂಬ್ರಿಜ್ ಇಂಗ್ಲಿಷ್ ಸಾಹಿತ್ಯದ ಇತಿಹಾಸ” ೧೨ ಭಾಗಗಳಲ್ಲಿ ಹೊರಬಂದಿತು. ಮತ್ತೆ ಅನೇಕಾನೇಕ ಸಂಗ್ರಹ ಸಾಹಿತ್ಯ ಚರಿತ್ರೆಗಳು, ಒಂದೊಂದು ಸಾಹಿತ್ಯ ಪ್ರಭೇದದ ಚರಿತ್ರೆಗಳು, ಒಂದು ಕಾಲಘಟ್ಟದ ಸಮಗ್ರ ಸಾಹಿತ್ಯದ ಅಧ್ಯಯನ, ಸಾಹಿತ್ಯ ಸಂಶೋಧನೆ ಇತ್ಯಾದಿ ವಿಫುಲವಾಗಿ ಹೊರಬಂದುವು.

೨೦ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಚಾರಿತ್ರಿಕ ವಿಮರ್ಶೆಯ ವಿರುದ್ಧ ಎಲಿಯಟ್ ತನ್ನ ಧ್ವನಿಯೆತ್ತಿದರೂ ಈ ವಿಮರ್ಶಾ ಮಾರ್ಗವನ್ನು ಬಲವಾಗಿ ಖಂಡಿಸಿದವರು ಅಮೆರಿಕನ್ ನವ್ಯ ವಿಮರ್ಶಕರು. ಇದೇ ಕಾಲದಲ್ಲಿ (೧೯೩೦ರ ದಶಕದಲ್ಲಿ) ಭಾಷಾಶಾಸ್ತ್ರದಲ್ಲಿಯೂ ಸೊಸ್ಯೊ (Saussure), ಬ್ಲೂಮ್‌ಫೀಲ್ಡ್ ಮುಂತಾದವರು ಚಾರಿತ್ರಿಕ ಮಾರ್ಗವನ್ನು ತ್ಯಜಿಸಿ ರಾಚನಿಕ ಮಾರ್ಗವನ್ನು ಕೈಗೊಂಡಿದ್ದುದೂ ಸಾಹಿತ್ಯ ವಿಮರ್ಶೆಯಲ್ಲಿ ಚಾರಿತ್ರಿಕತೆಯ ತಿರಸ್ಕಾರಕ್ಕೆ ಪೂರಕವಾಗಿರಬಹುದು. ಚಾರಿತ್ರಿಕ ವಿಮರ್ಶೆಯನ್ನು ಕುರಿತ ಎಲಿಯಟ್, ರ‍್ಯಾನ್‌ಸಮ್‌, ಕ್ಲಿಯಂತ್‌ಬ್ರೂಕ್ಸ್ ಮುಂತಾದವರ ನಿಲುವನ್ನು ಸ್ಥೂಲವಾಗಿ ಹೀಗೆ ಸಂಗ್ರಹಿಸಬಹುದು :

೧. ಚಾರಿತ್ರಿಕ ವಿಮರ್ಶೆ ತನ್ನ ನಿಯತಿವಾದೀ (deterministic) ಧೋರಣೆಯಿಂದ ಯಾಂತ್ರಿಕವಾಗುತ್ತದೆ ಮತ್ತು ಸಾಹಿತಿಯ ವಿಶಿಷ್ಟ ಪ್ರತಿಭೆಯನ್ನು ಅಗಣ್ಯ ಮಾಡುತ್ತದೆ. ಟೇನ್‌, ಕೂರ್ತ್‌ಹೋಪ್‌ಇವರು ಜನಾಂಗ, ಕಾಲಘಟ್ಟ – ಯುಗ ಇವುಗಳನ್ನು ವಿಶ್ಲೇಷಿಸಿ, “ಇಂತಹ ಸನ್ನಿವೇಶ ಇಂತಿಂತಹ ಲೇಖಕನಿಗೇ / ಕೃತಿಗಳಿಗೇ ಜನ್ಮ ಕೊಡುತ್ತದೆ” ಎಂದು ನಿರ್ಣಯಿಸುತ್ತಾರೆ. ಆದ್ದರಿಂದ ಇವರುಗಳು ಆನಂತರ ಕೈಗೊಳ್ಳುವ ಕೃತಿಯ ಅಭ್ಯಾಸ – ವ್ಯಾಖ್ಯಾನಗಳು ಪೂರ್ವನಿಶ್ಚಿತ ನಿರ್ಣಯಗಳ ನಿದರ್ಶನಗಳಾಗುತ್ತವೆ.

೨. ಸಾಮಾಜಿಕ – ಸಾಹಿತ್ಯಿಕ ಪರಿಸರ ಎಲ್ಲ ಲೇಖಕರ ಮೇಲೆ ಸಮಾನವಾಗಿ, ಒಂದೇ ರೀತಿಯಾಗಿ ಪ್ರಭಾವ ಬೀರುವುದಿಲ್ಲ. “ಕಲೆಗಳ ಮತ್ತು ವಿಜ್ಞಾನಗಳ ಇತಿಹಾಸವನ್ನು ನಾವು ಗುರುತಿಸಲು ತೊಡಗುವಾಗ ಇತರ ಕ್ಷೇತ್ರಗಳಲ್ಲಿರುವುದಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಮುಂದುವರಿಯಬೇಕು. ಇಲ್ಲದಿದ್ದರೆ ಅಸ್ತಿತ್ವದಲ್ಲಿರದಿದ್ದ ಕಾರಣಗಳನ್ನು ಹುಡುಕುತ್ತಾ ನಾವು ಆನುಷಂಗಿಕ ವಾದವನ್ನು ಸಾರ್ವಕಾಲಿಕ ಸತ್ಯಗಳೆಂದು ತೀರ್ಮಾನಿಸುವ ಸಾಧ್ಯತೆ ಇದೆ” ಎಂದು ಹ್ಯೂಮ್‌ಹೇಳುವುದನ್ನು ನವ್ಯ ವಿಮರ್ಶಕರು ಪುನರುಚ್ಛರಿಸುತ್ತಾರೆ.

೩. ಈ ಎರಡೂ ಕಾರಣಗಳಿಗಿಂತ ಹೆಚ್ಚು ಮಹತ್ವದ್ದಾಗಿ ನವ್ಯ ವಿಮರ್ಶಕರಿಗೆ ಕಾಣುವುದು ಚಾರಿತ್ರಿಕ ವಿಮರ್ಶೆಯಲ್ಲಿ ಕೃತಿಯ ಕಾಲ, ಸಾಮಾಜಿಕ ಪರಿಸರ, ಕೃತಿಕಾರನ ವೈಯಕ್ತಿಕ ವ್ಯಕ್ತಿತ್ವ – ಈ ವಿವರಗಳಲ್ಲಿ ಕೃತಿಯೇ ಕಡೆಗಣಿಸಲ್ಪಡಬಹುದಾದ ಸಾಧ್ಯತೆ. ಈ ಭೀತಿಯನ್ನು ಅತ್ಯಂತ ಸಮರ್ಥವಾಗಿ ಎಲಿಯಟ್ ತನ್ನ ‘ವಿಮರ್ಶೆಯ ಮೇರೆಗಳು’ (The Frontiers of Criticism, 1956) ಲೇಖನದಲ್ಲಿ ವ್ಯಕ್ತಪಡಿಸುತ್ತಾನೆ : “ನಾವು ಛಾಸರ್ ಕವಿಯ ಶಬ್ದಸಂಪತ್ತಿ, ಕಾಗುಣಿತ, ವ್ಯಾಕರಣ, ವಾಕ್ಯರಚನೆ – ಮತ್ತು ಇನ್ನೂ ಮುಂದೆ ಹೋಗಿ ಛಾಸರ್‌ನ ಕಾಲ, ಆ ಕಾಲದ ಸಾಮಾಜಿಕ ರೀತಿ – ನೀತಿಗಳು, ನಂಬಿಕೆಗಳು, ವೈಚಾರಿಕತೆ – ಇವೆಲ್ಲವನ್ನೂ ಕೂಲಂಕಷವಾಗಿ ಮನನ ಮಾಡಿಯೂ ಛಾಸರನ ಕಾವ್ಯವನ್ನು ಅರ್ಥ ಮಾಡಿಕೊಳ್ಳದೇ ಹೋಗಬಹುದು.”

ಚಾರಿತ್ರಿಕ ವಿಮರ್ಶೆ ವಿರುದ್ಧ ನಮ್ಮ ವಿಮರ್ಶಕರ ಅತಿರೇಕದ ನಿಲುವನ್ನು ನವ್ಯ ವಿಮರ್ಶೆಗೆ ಸಮೀಪವಿರುವ ಲಯನಲ್ ಟ್ರಿಲಿಂಗ್ ತನ್ನ ‘ಗತಕಾಲದ ಪ್ರಜ್ಞೆ’ (The Sense of the Past) ಎಂಬ ಲೇಖನದಲ್ಲಿ ಈ ರೀತಿ ಗುರುತಿಸುತ್ತಾನೆ : “ಚಾರಿತ್ರಿಕ ವಿಮರ್ಶೆಯ ಮಾರ್ಗವನ್ನು ಮಂಡಿಸುವಾಗ ನವ್ಯ ವಿಮರ್ಶಕರು ಒಂದು ಸಾಹಿತ್ಯಿಕ ಕೃತಿಯೂ ಅನಿವರ್ಯವಾದ ಚಾರಿತ್ರಿಕ ಸಂಗತಿಯೇ; ಮತ್ತು ಆ ಕೃತಿಯ ಚಾರಿತ್ರಿಕತೆಯೇ ನಮ್ಮ ಕಲಾನುಭವದ ಭಾಗ ಎಂಬ ವಿಚಾರವನ್ನು ಮರೆಯುತ್ತಾರೆ.”

ಚಾರಿತ್ರಿಕ ವಿಮರ್ಶೆಯ ಇನ್ನೊಂದು ಮುಖ್ಯ ಕವಲೆಂದರೆ ‘ವಿಚಾರಗಳ ಚರಿತ್ರೆ’ (History of Ideas). ಈ ಮಾರ್ಗದಲ್ಲಿ ವಿಮರ್ಶಕನು ಯಾವುದಾದರೂ ಒಂದು ಮುಖ್ಯ ವಿಚಾರವನ್ನು ಕೇಂದ್ರವಾಗಿಟ್ಟುಕೊಂಡು ಆ ವಿಚಾರದ ಉಗಮ, ವ್ಯಾಪ್ತಿ ಮತ್ತು ಬೆಳವಣಿಗೆಯನ್ನು ಒಂದು ದೇಶದ ಒಟ್ಟಾರೆ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಸಾಹಿತ್ಯ ಕೃತಿಗಳ ಆಧಾರದ ಮೇಲೆ ಗುರುತಿಸುತ್ತಾನೆ. ಇಂತಹ ವಿಮರ್ಶಾಮಾರ್ಗದ ಪ್ರಮುಖ ವಿಮರ್ಶಕನೆಂದರೆ ಎ.ಒ.ಲವ್‌ಜಾಯ್‌(Lovejoy). ಇವನು ಇಂತಹ ವಿಮರ್ಶೆಗೇ ಮೀಸಲಾಗಿಟ್ಟ “ಜರ್ನಲ್ ಆಫ್ ದ ಹಿಸ್ಟರಿ ಆಫ್ ಐಡಿಯಾಸ್” ಪತ್ರಿಕೆಯನ್ನು ೧೯೪೦ ರಲ್ಲಿ ಸ್ಥಾಪಿಸಿದನು. ಇವನು ಐತಿಹಾಸಿಕವಾಗಿ ಗುರುತಿಸುವ ಒಂದು ಮುಖ್ಯ ವಿಚಾರವೆಂದರೆ ‘ಜೈವಿಕ ಸರಪಳಿ’ (Chain of being). “ಸೃಷ್ಟಿಯಲ್ಲಿನ ಜೀವಜಾತಿಗಳೆಲ್ಲಾ ಒಂದು ಶ್ರೇಣಿಯಲ್ಲಿ ಬಂಧಿಸಲ್ಪಟ್ಟಿವೆ; ಮತ್ತು ಪ್ರತಿಯೊಂದು ಜೀವಜಾತಿಗೂ ತನ್ನ ಮೇಲಿನ ಮತ್ತು ಕೆಳಗಿನ ಜೀವ ಜಾತಿಯೊಡನೆ ಘನಿಷ್ಠ ಸಂಬಂಧವಿರುತ್ತದೆ” – ಎಂಬ ವಿಚಾರವು ಹೇಗೆ ೧೮ನೆಯ ಶತಮಾನದ ಆಂಗ್ಲ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿದೆ ಎಂಬುದನ್ನು ಲವ್‌ಜಾಯ್ ಆಳವಾಗಿ ವ್ಯಾಖ್ಯಾನಿಸುತ್ತಾನೆ.

ಕನ್ನಡದಲ್ಲಿ ಆರ್. ನರಸಿಂಹಾಚಾರ್ ಅವರ ‘ಕವಿಚರಿತೆ’, ರಂ. ಶ್ರೀ. ಮುಗಳಿಯವರ ‘ಕನ್ನಡ ಸಾಹಿತ್ಯ ಚರಿತ್ರೆ’, ಪಂಪನ ಕಾಲ-ದೇಶ-ವೈಚಾರಿಕತೆಗಳನ್ನು ಗುರುತಿಸುವ ಮುಳಿಯ ತಿಮ್ಮಪ್ಪಯ್ಯನವರ ‘ನಾಡೋಜ ಪಂಪ’, ಇತಿಹಾಸ – ಸಾಹಿತ್ಯಗಳನ್ನು ಕುರಿತಾದ ಗೋವಿಂದ ಪೈಯವರ ಸಂಶೋಧನಾತ್ಮಕ ಲೇಖನಗಳು. ಸೇಡಿಯಾಪು ಕೃಷ್ಣ ಭಟ್ಟರ ‘ವಿಚಾರ ಪ್ರಪಂಚ’, ಸಿ. ವೀರಣ್ಣನವರ ‘ಕನ್ನಡ ಸಾಹಿತ್ಯ : ಚಾರಿತ್ರಿಕ ಬೆಳವಣಿಗೆ’ – ಇವು ಚಾರಿತ್ರಿಕ ವಿಮರ್ಶೆಯ ಕೆಲವು ಮುಖ್ಯ ಉದಾಹರಣೆಗಳು.

ಕಳೆದೆರಡು ದಶಕಗಳಿಂದ ಚಾರಿತ್ರಿಕ ವಿಮರ್ಶೆ ‘ನವಚಾರಿತ್ರಿಕ ವಾದ’ (New Historicism) ಎಂಬ ಹೆಸರಿನಲ್ಲಿ ಮರುಹುಟ್ಟು ಪಡೆದು ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ. ಒಂದು ನೆಲೆಯಲ್ಲಿ ಈ ವಾದ ಫುಕೋನ ಸಂಕಥನ ಅತವಾ ಡಿಸ್‌ಕೋರ್ಸ್ ಪರಿಕಲ್ಪನೆಯಿಂದ ಪ್ರಭಾವಿತವಾಗಿ ಸೈದ್ ಪ್ರಣೀತ ವಸಾಹತೋತ್ತರ ಚಿಂತನೆಗೆ ಸಮೀಪವಿದ್ದರೆ, ಮತ್ತೊಂದು ನೆಲೆಯಲ್ಲಿ ನವಮಾರ್ಕ್ಸ್‌ವಾದಿ ಲೂಯಿ ಆಲ್‌ಥೂಸರ್‌ನ ಐಡಿಯಾಲಜಿಯ ವ್ಯಾಖ್ಯಾನವನ್ನು ಆಧರಿಸಿದೆ. (ಮುಂದಿನ ಭಾಗದಲ್ಲಿ ವಿವರಿಸುವಂತೆ ಆಲ್‌ಥೂಸರ್ ಸಾಂಪ್ರದಾಯಿಕ ಮಾರ್ಕ್ಸಿಸ್ಟ್‌ಚಿಂತಕರು ಆಗ್ರಹಿಸುವಂತೆ ಐಡಿಯಾಲಜಿ ಸರ್ವಶಕ್ತವೆಂದು ನಂಬುವುದಿಲ್ಲ; ಮತ್ತು ಸಾಹಿತ್ಯಕೃತಿಗಳ ‘ಸಾಪೇಕ್ಷ ಸ್ವಾಯತ್ತೆ’ಯನ್ನು ಪ್ರತಿಪಾದಿಸುತ್ತಾನೆ.) ನವಚಾರಿತ್ರಿಕತೆಯ ಪ್ರಮುಖ ವಕ್ತಾರರೆಂದರೆ ಸ್ಟೀಫನ್ ಗ್ರೀನ್‌ಬ್ಲಾಟ್, ಲೂಯಿ ಮಾನ್‌ಟ್ರೋಸ್, ಕ್ಲಿಫರ್ಡ್ ಜೀರ್ಟ್ಸ್ ಮುಂತಾದವರು (Stephen Greenblatt, Louiss Montrose, Clifford Geertz).

ಎಂ.ಎಚ್. ಏಬ್ರಮ್ಸ್ ದಾಖಲಿಸುವಂತೆ ‘ನವಚಾರಿತ್ರಿಕತೆ’ ಎಂಬ ವಿಮರ್ಶಾತ್ಮಕ ಪರಿಕಲ್ಪನೆಯನ್ನು ಮೊದಲಗೆ Genre ಎಂಬ ನಿಯತಕಾಲಿಕೆಯ ೧೫ನೆಯ ಸಂಪುಟದಲ್ಲಿ (೧೯೮೨) ಪ್ರಯೋಗಿಸಿ, ಅಂತಹುದೊಂದು ‘ಪ್ರಸ್ಥಾನ’ವನ್ನು ಹುಟ್ಟುಹಾಕಿದವನು ಸ್ಟೀಫನ್ ಗ್ರೀನ್‌ಬ್ಲಾಟ್ (ಏಬ್ರಮ್ಸ್, ೧೯೯೩, ಪು. ೨೫೨). ಅನಂತರ, ಲೂಯಿ ಮಾನ್‌ಟ್ರೋಸ್ “ಪಠ್ಯಗಳ ಚಾರಿತ್ರಿಕತೆ ಮತ್ತು ಚರಿತ್ರೆಗಳ ಪಠ್ಯತೆ ಇವುಗಳ ನಡುವಿನ ಪರಸ್ಪರ ಸಂಬಂಧ ನವಚಾರಿತ್ರಿಕತೆಯ ಕಾಳಜಿ” ಎಂದು ಘೋಷಿಸಿ, ಅಂತಹ ವಿಮರ್ಶಾವಿಧಾನಕ್ಕೆ ಮನ್ನಣೆ ಗಳಿಸಿಕೊಟ್ಟನು. (”A reciprocal concern with the historicity of texts and the textuality of history”). ಗ್ರೀನ್‌ಬ್ಲಾಟ್ ಮತ್ತು ಇತರ ನವಚಾರಿತ್ರಿಕವಾದಿಗಳ ಮುಖ್ಯ ಗೃಹೀತಗಳನ್ನು ಹೀಗೆ ಸಂಗ್ರಹಿಸಬಹುದು :

೧. ಸಾಂಪ್ರದಾಯಿಕ ಮಾರ್ಕ್ಸ್‌ವಾದಿಗಳು ನಂಬುವಂತೆ, ಚರಿತ್ರೆಯ ಗತಿ ಸದಾ ಏಕಮುಖಿಯಾಗಿ ಪ್ರಗತಿಗಾಮಿಯಾಗಿರುವುದಿಲ್ಲ; ಚರಿತ್ರೆಯೆಂದರೆ ವಿಚ್ಛಿನ್ನತೆಗಳ, ಆಕಸ್ಮಿಕಗಳ ಚರಿತ್ರೆ. (ಇದು ಫುಕೋನ ಡಿಸ್‌ಕೋರ್ಸ್ ಪರಿಕಲ್ಪನೆಯ ಒಂದು ಮುಖ್ಯ ಅಂಶ.)

೨. ಸಾಹಿತ್ಯಿಕ ಪಠ್ಯಗಳೂ ಇತರ ಚಾರಿತ್ರಿಕ, ಮಾನವಿಕ ಶಾಸ್ತ್ರೀಯ ಪಠ್ಯಗಳಂತೆ, ವಿಶಿಷ್ಟ ಕಾಲ ದೇಶಗಳ, ವಿಶಿಷ್ಟ ಸಾಂಸ್ಕೃತಿಕ ಸಂದರ್ಭಗಳ ‘ಉತ್ಪನ್ನ’. ಆದ್ದರಿಂದ ನವ್ಯ/ ರೂಪನಿಷ್ಟ ವಿಮರ್ಶಕರಂತೆ ಸಾಹಿತ್ಯಕೃತಿಗಳನ್ನು ಅವುಗಳ ರಾಜಕೀಯ – ಸಾಂಸ್ಕೃತಿಕ ಸಂದರ್ಭಗಳಿಂದ ಹೊರತುಪಡಿಸಿ ವ್ಯಾಖ್ಯಾನ ಮಾಡಲಾಗುವುದಿಲ್ಲ.

೩. ಸಾಹಿತ್ಯಕ ಪಠ್ಯಗಳೂ ಸಮಕಾಲೀನ ಅಧಿಕಾರ – ಸಂಬಂಧಗಳನ್ನು ಬಲಪಡಿಸುವ / ಸಮರ್ಥಿಸುವ ಐಡಿಯಾಲಜಿಯಿಂದಲೇ ರೂಪಿಸಲ್ಪಟ್ಟಿರುತ್ತವೆ. ಆದರೆ, ಎಲ್ಲೋ ಒಂದು ಕಡೆ ಇವುಗಳು ಐಡಿಯಾಜಿಯ ನಿಯಂತ್ರಣವನ್ನು ಮೀರಿ ಅದರಲ್ಲಡಗಿರುವ ಸ್ವವಿರೋಧಗಳನ್ನೂ ದರ್ಶಿಸುತ್ತವೆ. ಆದ್ದರಿಂದ ಒಂದು ಸಾಹಿತ್ಯಕ ಪಠ್ಯವೆಂದರೆ ‘ವಿಸಂಗತ ದನಿಗಳ ತುಮುಲದ ಸ್ಥಳ’. (ಈ ಅಂಶ ಬಕ್ತಿನ್ ಚರ್ಚಿಸುವ ‘polyphony’ ಅಥವಾ ಬಹುಧ್ವನಿತ್ವದ ಪರಿಕಲ್ಪನೆಯಿಂದ ಪ್ರಭಾವಿತವಾಗಿದೆ.)

೪. ಎಲ್ಲಾ ಪ್ರಭಾವೀ ರಾಜಕೀಯ – ಸಾಂಸ್ಕೃತಿಕ ಸಂಸ್ಥೆಗಳೂ ಒಂದು ಮಟ್ಟದವರೆಗೆ ತಮಗೆ ವಿರುದ್ಧವಿರುವ ಶಕ್ತಿಗಳನ್ನು ಪೋಷಿಸಿ, ಪ್ರೋತ್ಸಾಹಿಸುತ್ತವೆ; ಇಂತಹ ಪೋಷಣೆ – ಪ್ರೋತ್ಸಾಹಗಳ ಹಿಂದಿನ ಉದ್ದೇಶ ತಮ್ಮ ನಿಯಂತ್ರಣ ಹಾಗೂ ಅಧಿಕಾರಗಳನ್ನು ಬಲಪಡಿಸುವುದೇ ಆಗಿದೆ.

೫. ವಿಮರ್ಶಕನ ಗುರಿಯೆಂದರೆ ಒಂದು ಸಾಹಿತ್ಯಕ ಪಠ್ಯದಲ್ಲಿರುವ ಎಲ್ಲಾ ಬಗೆಯ ‘ವಿಸಂಗತ ದನಿ’ಗಳನ್ನು ಗುರುತಿಸಿ, ಒಂದು ಕೃತಿ ಒಂದು ನಿರ್ದಿಷ್ಟ ಸ್ಥಳ ಮತ್ತು ಕಾಲದಲ್ಲಿ ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬರುತ್ತದೆ ಎಂದು ಶೋಧಿಸುವುದು. ಹಾಗೆಯೇ, ಅದೇ ನೆಲೆಯಲ್ಲಿ, ಒಂದು ಪಠ್ಯದಲ್ಲಿ ‘ಅಡಗಿಸಲ್ಪಟ್ಟಿರುವ’ ಅಥವಾ ‘ಅಚಿಗೆ ತಳ್ಳಲ್ಪಟ್ಟಿರುವ’ ದನಿಗಳನ್ನು ಗುರುತಿಸುವುದು.

ನವ್ಯ ವಿಮರ್ಶೆ ಮತ್ತು ನಿರಚನ ವಿಮರ್ಶೆ ಇವೆರಡನ್ನೂ ತಿರಸ್ಕರಿಸುವ, ರಾಚನಿಕೋತ್ತರ ವಾದಗಳಲ್ಲಿ ಒಂದಾಗಿರುವ, ನವಚಾರಿತ್ರಿಕವಾದ ವಸಾಹತೋತ್ತರ ಚಿಂತನೆಗೆ ಸರಿಸಮವಾಗಿ ಕಳೆದೆರಡು ದಶಕಗಳಿಂದ ಬೆಳೆಯುತ್ತಾ ಬಂದಿದೆ. ವಿಶೇಷತಃ ‘ಟೆಂಪೆಸ್ಟ್’. ಹೆನ್ರಿ ನಾಟಕಮಾಲೆ, ಇತ್ಯಾದಿ ಷೇಕ್ಸ್‌ಪಯರ್‌ನ ನಾಟಕಗಳಲ್ಲಿ ಅಂದು, ಎಂದರೆ ಸಾಮ್ರಾಜ್ಯವಾದದ ಪ್ರಾಥಮಿಕ ಘಟ್ಟವಾದ ೧೬ನೆಯ ಶತಮಾನದಲ್ಲಿ, ಪ್ರಚಲಿತವಾಗಿದ್ದ ಬಿಳಿಯರ ಜಾನಾಂಗಿಕ ಪೂರ್ವಾಗ್ರಹಗಳು, ತಮ್ಮ ರಾಜಕೀಯ – ಸಾಂಸ್ಕೃತಿಕ ವ್ಯವಸ್ಥೆಗಳ ಬಗ್ಗೆ ಅವರಿಗಿದ್ದ ಹೆಮ್ಮೆ ಮತ್ತು ಅಹಂ, ಇವೆಲ್ಲವೂ ಹೇಗೆ ರೂಪಣೆಗೊಂಡಿವೆ ಎಂಬುದನ್ನು ದಾಖಲಿಸುವ ಗ್ರೀನ್‌ಬ್ಲಾಟ್‌ನ ವಿಮರ್ಶೆ – ವ್ಯಾಖ್ಯಾನಗಳನ್ನು ನವಚಾರಿತ್ರಿಕವಾದದ ಪ್ರಾತಿನಿಧಿಕ ಪ್ರಯೋಗಗಳೆಂದು ಪರಿಗಣಿಸಬಹುದು. (ಹೆಚ್ಚಿನ ಮಾಹಿತಿಗೆ ನೋಡಿ : Aram Veeser, ed. The New Historicism (1989); M.H. Abrams, A. Glossary of Literary Terms, Revd. (1993); ಮನು ಚಕ್ರವರ್ತಿ, ‘ಬಹುಮುಖ’ (೧೯೯೯) ಇತ್ಯಾದಿ.

ಮಾರ್ಕ್ಸ್ವಾದಿವಿಮರ್ಶೆ:

ಕಾಲ್ಸ್‌ಮಾಕ್ಸ್‌ಮತ್ತು ಫ್ರೆಡರಿಕ್ ಎಂಗೆಲ್ಸ್ ಇವರ ಆರ್ಥಿಕ – ಸಾಮಾಜಿಕ ಸಿದ್ಧಾಂತಗಳ ಆಧಾರದ ಮೇಲೆ ಸಾಹಿತ್ಯವನ್ನು ಹಾಗೂ ಆ ಸಾಹಿತ್ಯಕ್ಕೆ ಕಾರಣವಾದ ಒಂದು ವಿಶಿಷ್ಟ ಸಮಾಜ ರಚನೆಯನ್ನು ಮಾರ್ಕ್ಸ್‌ವಾದಿ ವಿಮರ್ಶಕರು ಅಭ್ಯಸಿಸುತ್ತಾರೆ ಮತ್ತು ವ್ಯಾಖ್ಯಾನಿಸುತ್ತಾರೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಮಾರ್ಕ್ಸ್‌ವಾದಿ ವಿಮರ್ಶಕರ ದೃಷ್ಟಿಯಲ್ಲಿ ಇತರ ವಿಮರ್ಶಾ ಮಾರ್ಗಗಳಂತೆ ಮಾರ್ಕ್ಸ್‌ವಾದಿ ವಿಮರ್ಶೆಯೂ ಒಂದು ಮಾರ್ಗವಲ್ಲ. ಮಾರ್ಕ್ಸ್‌ವಾದೆಂದರೆ ಮಾನವ ಸಮಾಜಗಳನ್ನು ಮತ್ತು ಅವುಗಳ ಪರಿವರ್ತನೆಯನ್ನು ಕುರಿತಾದ ‘ವೈಜ್ಞಾನಿಕ’ ಸಿದ್ಧಾಂತವೆಂದು ನಂಬುವ ಈ ಮಾರ್ಗದ ವಿಮರ್ಶಕರಿಗೆ ಮಾರ್ಕ್ಸ್‌ವಾದಿ ವಿಮರ್ಶೆಯೊಂದೇ  ‘ನಿಜವಾದ’ ಏಕಮೇವ ವಿಮರ್ಶಾಮಾರ್ಗ.

ಅತ್ಯಂತ ಜಟಿಲ ಹಾಗೂ ಸಂಕೀರ್ಣ ವೈಚಾರಿಕ ಪ್ರಣಾಲಿಯನ್ನು ಸರಳೀಕರಣಗೊಳಿಸುವ ಅಪಾಯವನ್ನು ಒಪ್ಪಿಕೊಂಡೂ ಮಾರ್ಕ್ಸ್‌ವಾದಿ ವಿಮರ್ಶೆಯ ಮುಖ್ಯ ವೈಚಾರಿಕ ನಿಲುವನ್ನು ಸ್ಥೂಲವಾಗಿ ಹೀಗೆ ಗುರುತಿಸಬಹುದು. ಕಾರ್ಲ್‌ಮಾರ್ಕ್ಸ್‌ನ ಎರಡು ಮುಖ್ಯ ಹೇಳಿಕೆಗಳು ಈ ವಿಮರ್ಶಾ ಕ್ರಮದ ಉಗಮವನ್ನು ನಿರ್ದೇಶಿಸುತ್ತವೆ :

೧. ದಾರ್ಶನಿಕರು ಅನೇಕ ರೀತಿಗಳಲ್ಲಿ ಈ ಜಗತ್ತನ್ನು ಕೇವಲ ಅರ್ಥೈಸಿದ್ದಾರೆ, ಅಷ್ಟೇ. ನಮಗೀಗ ಬೇಕಾಗಿರುವುದು ಜಗತ್ತನ್ನು ಪರಿವರ್ತಿಸುವುದು.

೨. ಮಾನವರ ಅಸ್ತಿತ್ವವನ್ನು ನಿರ್ಧರಿಸುವುದು ಅವರ ಪ್ರಜ್ಞೆಯಲ್ಲ; ಇದಕ್ಕೆ ವಿರುದ್ಧವಾಗಿ, ಮಾನವರ ಸಾಮಾಜಿಕ ಅಸ್ತಿತ್ವ ಅವರ ಪ್ರಜ್ಞೆಯನ್ನು ನಿರ್ಧರಿಸುತ್ತದೆ.

ಜರ್ಮನ್ ದಾರ್ಶನಿಕ ಹೆಗೆಲ್ ಮತ್ತು ಅವನ ಅನುಯಾಯಿಗಳು “ಜಗತ್ತನ್ನು ರೂಪಿಸುವುದು ವಿಚಾರಶಕ್ತಿ (Thought)” ಎಂದು ನಂಬಿ “ಇತಿಹಾಸದ ಪ್ರಕ್ರಿಯೆಯೆಂದರೆ ಕ್ರಮಕ್ರಮವಾಗಿ ಆಗುವ ವಿವೇಚನಾ ಶಕ್ತಿಯ ತಾರ್ಕಿಕ ಅವಿರ್ಭಾವ” (”The process of history is the gradual dialectic unfolding of the laws of Reason”) ಎಂದು ಸಿದ್ಧಾಂತಿಸಿದರು. ಅವರ ಮತದಂತೆ ಮಾನವರ ವಿಚಾರಗಳು, ಅವರ ಸಾಂಸ್ಕೃತಿಕ ಜೀವನ, ನ್ಯಾಯಶಾಸ್ತ್ರಗಳು ಮತ್ತು ಮತ-ಧರ್ಮಗಳು – ಇವೆಲ್ಲವೂ ಮಾನವ ಮತ್ತು ದೈವಿಕ ‘ವಿವೇಚನಾ ಶಕ್ತಿ’ (Reason) ಯ ಸೃಷ್ಟಿಗಳು. ಹೆಗೆಲ್‌ನ ಇಂತಹ ‘ಆದರ್ಶವಾದಿ’ (Idealistic) ವೈಚಾರಿಕತೆಯನ್ನು ಮಾರ್ಕ್ಸ್ ಅಲ್ಲಗಳೆದು, ಎಲ್ಲಾ ವೈಚಾರಿಕ ವ್ಯವಸ್ಥೆಗಳು ಸಾಮಾಜಿಕ – ಆರ್ಥಿಕ ವ್ಯವಸ್ಥೆಗಳ ‘ಉತ್ಪನ್ನ’ಗಳೆಂದು ವಾದಿಸುತ್ತಾನೆ. ಅವನ ದೃಷ್ಟಿಯಲ್ಲಿ ಪ್ರಮುಖ ಚಾರಿತ್ರಿಕ ಬದಲಾವಣೆಗಳು ಆಗುವುದು ಹೆಗೆಲ್ ಗ್ರಹಿಸಿದಂತೆ ತಾತ್ವಿಕ ಸ್ವವಿರೋಧಗಳಿಂದಲ್ಲದೆ ಉತ್ಪಾದನಾ ವಿಧಾನಗಳ ಪಲ್ಲಟಗಳಿಂದ. ಈ ವಿಚಾರಗಳನ್ನು ಕುರಿತಂತೆ ಮಾರ್ಕ್ಸ್ ೧೮೪೬ ರಲ್ಲಿ ಬರೆದ (ಆದರೆ ಪ್ರಕಟವಾದದ್ದು ೧೯೩೨ರಲ್ಲಿ) ‘ದ ಜರ್ಮನ್ ಐಡಿಯಾಲಜಿ’ಯಲ್ಲಿ ಹೀಗೆ ಹೇಳುತ್ತಾನೆ :

“ಪರಿಕಲ್ಪನೆಗಳು, ವಿಚಾರಗಳು ಇತ್ಯಾದಿಗಳ ಉತ್ಪಾದಕರು ಮಾನವರು – ನಿಹ ಹಾಗೂ ಕಾರ್ಯಶೀಲ ಮಾನವರು; ಮತ್ತು ಅವರು ತಮ್ಮ ಉತ್ಪಾದಕ ಶಕ್ತಿಗಳ ಖಚಿತ ವಿಕಾಸದಿಂದ ರೂಪಿಸಲ್ಪಡುತ್ತಾರೆ. ಪ್ರಜ್ಞೆ ಎಂಬುದು ಪ್ರಜ್ಞಾಶೀಲ ಅಸ್ತಿತ್ವಕ್ಕಿಂತ ಬೇರೆಯಾಗಿರಲು ಸಾಧ್ಯವಿಲ್ಲ; ಮತ್ತು ಮಾನವರ ಅಸ್ತಿತ್ವವು ಅವರು ವಾಸ್ತವದಲ್ಲಿ ಬದುಕುವ ಪ್ರಕ್ರಿಯೆಯೇ ಆಗಿದೆ.. ಸ್ವರ್ಗದಿಂದ ಭೂಮಿಗೆ ಇಳಿಯುವ ಜರ್ಮನ್ ತತ್ವಶಾಸ್ತ್ರಕ್ಕಿಂತ ಭಿನ್ನವಾಗಿ ನಾವಿಲ್ಲಿ ಭೂಮಿಯಿಂದ ಸ್ವರ್ಗಕ್ಕೆ ಏರುತ್ತಿದ್ದೇವೆ. ಎಂದರೆ, ರಕ್ತಮಾಂಸಗಳಿಂದ ಕೂಡಿದ ಮಾನವರನ್ನು ಅರಿತುಕೊಳ್ಳಲು ಅವರು ಏನು ಹೇಳುತ್ತಾರೆ, ಕಲ್ಪಿಸುತ್ತಾರೆ, ಗ್ರಹಿಸುತ್ತಾನೆ. ಅಥವಾ ಹೇಗೆ ಅವರು ಕಥಿಸಲ್ಪಟ್ಟಿದ್ದಾರೆ, ಕಲ್ಪಿಸಲ್ಪಟ್ಟಿದ್ದಾರೆ, ಗ್ರಹಿಸಲ್ಪಟ್ಟಿದ್ದಾರೆ. – ಇವುಗಳ ಮೂಲಕ ಹೊರಡುವುದಲ್ಲ. ನಿಜ ಹಾಗೂ ಕಾರ್ಯಶೀಲ ಮಾನವರಿಂದ ನಾವು ಪ್ರಾರಂಭಿಸಿ, ಅವರ ವಾಸ್ತವ ಬದುಕಿನ ಆಧಾರದ ಮೇಲೆ ತಾತ್ವಿಕ ಚಿಂತನೆಗಳನ್ನು ಮತ್ತ ಜೀವನಪ್ರಕ್ರಿಯೆಯ ಮಾರ್ದನಿಗಳನ್ನು ಪ್ರತಿಪಾದಿಸುತ್ತೇವೆ. ಮಾನವನ ಮೆದುಳಿನಲ್ಲಿ ಜನ್ಮಿಸುವ ಭ್ರಮೆಗಳೂ ಕೂಡ ಅನಿವಾರ್ಯವಾಗಿ, ಭೌತಿಕ ಜೀವನ ಪ್ರಕ್ರಿಯೆಯ ರೂಪಾಂತರಗಳೇ ಆಗಿವೆ. ಪರಿಣಾಮತಃ ನೈತಿಕತೆ, ಧರ್ಮ, ಆಧ್ಯಾತ್ಮ ಹಾಗೂ ವೈಚಾರಿಕತೆಯ ಮಿಕ್ಕ ಎಲ್ಲಾ ರೂಪಗಳು ಮತ್ತು ಅವುಗಳಿಗನುವಾದ ಪ್ರಜ್ಞೆಯ ಆಕೃತಿಗಳು – ಇವುಗಳಿಗೆ ಸ್ವತಂತ್ರ ಅಸ್ತಿತ್ವದ ಲವಲೇಶವೂ ಇಲ್ಲ. ಇವುಗಳಿಗೆ ಇತಿಹಾಸವೂ ಇಲ್ಲ, ಪ್ರಗತಿಯೂ ಇಲ್ಲ. ಆದರೆ ಮಾನವರು, ತಮ್ಮ ಭೌತಿಕ ಉತ್ಪಾದನೆಯನ್ನು ಮತ್ತು ಸಾಮೂಹಿಕ, ಆರ್ಥಿಕ ಸ್ಥಿತಿಯನ್ನು ವೃದ್ಧಿಸಿಕೊಂಡು, ತಮ್ಮ ಬದುಕಿನ ಸ್ವರೂಪವನ್ನು, ತಮ್ಮ ವೈಚಾರಿಕತೆಯನ್ನು, ತಮ್ಮ ವೈಚಾರಿಕತೆಯ ಉತ್ಪನ್ನಗಳನ್ನೂ ಬದಲಾಯಿಸುತ್ತಾರೆ. ಪ್ರಜ್ಞೆ ಬದುಕಿನಿಂದಲ್ಲದೆ ಬದುಕು ಪ್ರಜ್ಞೆಯಿಂದ ನಿರ್ಧರಿಸಲ್ಪಡುವುದಿಲ್ಲ. (Life is not determined by consciousness, but consciousness by life) ಕಾರ್ಯಶೀಲ ಜೀವನ – ಪ್ರಕ್ರಿಯೆ (life – Process)ಯನ್ನು ಈ ಬಗೆಯಲ್ಲಿ ವಿವರಿಸಿದ ಕೂಡಲೇ ಅನುಭವೈಕ್ಯ ವಾದವು (Empiricism) ನಂಬುವಂತೆ ಇತಿಹಾಸವು ನಿರ್ಜೀವ ಸಂಗತಿಗಳ ಸಂಕಲನವಾಗುವುದು ನಿಲ್ಲುತ್ತದೆ; ಮತ್ತು (ಆದರ್ಶವಾದಿಗಳು – Idealists – ನಂಬುವಂತೆ) ಕಾಲ್ಪನಿಕ ವ್ಯಕ್ತಿಗಳ ಕಾಲ್ಪನಿಕ ಕಾರ್ಯಗಳ ಮೊತ್ತವಾಗುವುದೂ ತಪ್ಪುತ್ತದೆ” (David H. Richter, 1989, pp. 564-65).

ಮಾನವರ ಸಾಮಾಜಿಕ – ಆರ್ಥಿಕ ಸಂಬಂಧಗಳನ್ನು ಮಾರ್ಕ್ಸ್ ಇನ್ನೊಂದು ಸಂದರ್ಭದಲ್ಲಿ (Contribution to Critique of Political Economy, 1859) ಹೀಗೆ ಒಂದು ವಾಸ್ತುಶಿಲ್ಪ ರೂಪಕದ ಮೂಲಕ ವಿವರಿಸುತ್ತಾನೆ.

“ತಮ್ಮ ಸಾಮಾಜಿಕ ಉತ್ಪಾದನೆಯಲ್ಲಿ ಮಾನವರು ಅನಿವಾರ್ಯವಾಗಿ ಅವರ ಇಚ್ಛಾಶಕ್ತಿಯನ್ನು ಮೀರಿದ ಖಚಿತ ಸಂಬಂಧಗಳನ್ನು ಒಳಗೊಳ್ಳುತ್ತಾರೆ; ಮತ್ತು ಇಂತಹ ಉತ್ಪಾದನಾ – ಸಂಬಂಧಗಳು ಅವರ ಭೌತಿಕ ಉತ್ಪಾದನಾ – ಶಕ್ತಿಗಳು ವಿಕಾಸವನ್ನು ಅನುಸರಿಸುತ್ತವೆ. ಉತ್ಪಾದನಾ – ಸಂಬಂಧಗಳ ಒಟ್ಟು ಮೊತ್ತ ಸಮಾಜವೊಂದರ ಆರ್ಥಿಕ ರಚನೆಯನ್ನು ಸ್ಥಾಪಿಸುತ್ತದೆ. ಆರ್ಥಿಕ ರಚನೆಯ ವಾಸ್ತವ ಬುನಾದಿಯ ಮೇಲೆ ಶಾಸಕೀಯ ಮತ್ತು ರಾಜಕೀಯ ಮೇಲ್‌ರಚನೆಯು ಏಳುತ್ತದೆ; ಮತ್ತು ಖಚಿತ ರೂಪಗಳು ಈ ಆರ್ಥಿಕ ರಚನೆಗೆ ಅನುರೂಪವಾಗುತ್ತದೆ. ವಾಸ್ತವ ಪ್ರಪಂಚದ ಉತ್ಪಾದನಾ ವಿಧಾನಗಳು (Modes of Production) ಸಾಧಾರಣವಾಗಿ, ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಪ್ರಕ್ರಿಯೆಗಳನ್ನು ನಿರ್ಧರಿಸುತ್ತವೆಮಾನವರ ಅಸ್ತಿತ್ವವನ್ನು ನಿರ್ಧರಿಸುವುದು ಅವರ ಪ್ರಜ್ಞೆಯಲ್ಲಇದಕ್ಕೆ ಬದಲಾಗಿ ಅವರ ಸಾಮಾಜಿಕ ಅಸ್ತಿತ್ವವೂ ಅವರ ಪ್ರಜ್ಞೆಯನ್ನು ನಿರ್ಧರಿಸುತ್ತದೆ ಆರ್ಥಿಕ ಬುನಾದಿಯ ಬದಲಾವಣೆಯೊಡನೆ, ಇಡೀ ಮೇಲ್‌ರಚನೆಯ ಸಂಪೂರ್ಣವಾಗಿ ಮತ್ತು ಶೀಘ್ರಗತಿಯಲ್ಲಿ ಪರಿವರ್ತನೆಗೊಳ್ಳುತ್ತದೆ” (Richter, P. 569)

ಇಲ್ಲಿ ನಮಗೆ ಮುಖ್ಯವಾಗುವ ಸಂಗತಿಯೆಂದರೆ, ಮಾರ್ಕ್ಸ್‌ವಾದದ ಪ್ರಕಾರ ಸಾಹಿತ್ಯವೂ ಸೇರಿದಂತೆ ಕಲೆ ಸಮಾಜದ ಮೇಲ್‌ರಚನೆಗೆ ಸೇರಿರುವುದು. ಆದ್ದರಿಂದ ಸಮಾಜದ ಕೆಳರಚನೆಯ ಅರಿವಿಲ್ಲದೆ, ಎಂದರೆ ಸಮಾಜದ ಆರ್ಥಿಕ ಸಂಬಂಧಗಳ ಪೂರ್ಣ ಜ್ಞಾನವಿಲ್ಲದೆ, ಮೇಲ್‌ರಚನೆಯಲ್ಲಿರುವ ಸಾಹಿತ್ಯ, ಕಲೆ ಇವುಗಳನ್ನು ಅರ್ಥೈಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಮಾರ್ಕ್ಸ್ ಹೇಳುವ ಮೌಲಿಕ ವಿಚಾರವೇನೆಂದರೆ – ಗ್ರೀಕರ ಕಾಲದಿಂದಲೂ ಆರ್ಷೇಯವಾಗಿ ನಂಬಿಕೊಂಡು ಬಂದಿರುವಂತೆ ‘ಸಂಸ್ಕೃತಿ’ ಎಂಬುದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ. ಮಾನವರು ತಮ್ಮ ಭೌತಿಕ ಜೀವನವನ್ನು ನಿರ್ಮಿಸಿಕೊಳ್ಳುವ ಚಾರಿತ್ರಿಕ ಸಂದರ್ಭಗಳಿಂದ ಸಂಸ್ಕೃತಿಯನ್ನು ಬೇರ್ಪಡಿಸಲಾಗುವುದಿಲ್ಲ. ಎಂದರೆ, ಮಾನವ ಚರಿತ್ರೆಯ ಒಂದು ಘಟ್ಟದ ವಿಶಿಷ್ಟ ಸಾಮಾಜಿಕ – ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುವ ‘ಒಡೆತನ – ಅಧೀನತೆ’ ಸಂಬಂಧಗಳು ಆ ಕಾಲದ ಸಂಸ್ಕೃತಿಯನ್ನು ರೂಪಿಸುತ್ತವೆ; ಮತ್ತು ವರ್ಗನಿಷ್ಠ ಸಮಾಜಗಳು ಅವುಗಳಲ್ಲಿನ ಪ್ರಬಲ ವರ್ಗಗಳ ಆರ್ಥಿಕ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವ ವಿಚಾರಗಳನ್ನು ಮತ್ತು ನಂಬಿಕೆಗಳನ್ನು ಪೋಷಿಸುತ್ತವೆ.

ಈ ವಿಚಾರಗಳೊಂದಿಗೆ ಮತ್ತೆ ಕೆಲವು ಸಾಮಾನ್ಯ ‘ಸಿದ್ಧಾಂತ’ಗಳನ್ನೂ ಮಾರ್ಕ್ಸ್‌ವಾದಿಗಳು ಒಪ್ಪುತ್ತಾರೆ. ಅವೆಂದರೆ ೧. ವರ್ಗನಿಷ್ಠ ಸಮಾಜದಲ್ಲಿ ವರ್ಗಕಲಹ ಅನಿವಾರ್ಯ ಮತ್ತು ವರ್ಗಕಲಹದ ಮೂಲಕ ಒಂದಲ್ಲ ಒಂದು ದಿನ ‘ನಿಜ ಉತ್ಪಾದಕರ ವರ್ಗ’, ‘ಉಪಭೋಕ್ತ ವರ್ಗ’ದ ಮೇಲೆ ಜಯವನ್ನು ಸಾಧಿಸುತ್ತದೆ. ೨. ಉತ್ಪಾದಕ ವರ್ಗದೊಡನೆ ತನಗಿರುವ ಸಂಬಂಧಗಳನ್ನು ನಿರಾಕರಿಸುವುದರಿಂದ, ನಿಜ ಉತ್ಪಾದಕರಲ್ಲದೆ ಬೂರ್ಜ್ವಾ ವರ್ಗದ ವಿಶ್ವವನ್ನು ಕುರಿತಾದ ದೃಷ್ಟಿಕೋನ (World – view)  ಅನಿವಾರ್ಯವಾಗಿ ಸತ್ಯದಿಂದ ದೂರವಾಗಿ, ಕೃತಕವಾಗಿರುತ್ತದೆ. ೩. ಇಂತಹ ಕೃತಕ ಅಥವಾ ಪೊಳ್ಳು ದೃಷ್ಟಿಕೋನದ ಕಾರಣದಿಂದ ಉಪಭೋಕ್ತ ವರ್ಗದಲ್ಲಿ ದ್ವಂದ್ವಗಳು ಹಾಗೂ ಕರ್ಷಣಗಳು ಸಹಜವಾಗಿಯೇ ಉದ್ಭವಿಸುತ್ತವೆ.

ಈ ವೈಚಾರಿಕ ನೆಲೆಯನ್ನೊಪ್ಪುವ ಮಾರ್ಕ್ಸ್‌ವಾದಿ ವಿಮರ್ಶಕನಿಗೆ ಒಂದು ಕೃತಿಯ ವ್ಯಾಖ್ಯಾನ ಆ ಕೃತಿಯ ಸಾಹಿತ್ಯಿಕ ಹಿನ್ನೆಲೆ, ಪ್ರತಿಮೆಗಳು ಮತ್ತು ಅಲಂಕಾರಗಳು, ಸಾಂಕೇತಿಕತೆ – ಇವುಗಳ ವ್ಯಾಖ್ಯಾನವೇ ಆಗುವುದಿಲ್ಲ. ಈ ಕೃತಿಗಳು ಪ್ರತಿಬಿಂಬಿಸುವ ಒಂದು ವಿಶಿಷ್ಟ ಸಮಾಜದ ‘ಐಡಿಯಾಲಜಿ’ (ಆ ಸಮಾಜ ಮಾನ್ಯ ಮಾಡಿದ ವಿಚಾರಗಳು, ನಂಬಿಕೆಗಳು, ಮೌಲ್ಯಗಳು, ವ್ಯವಸ್ಥೆಗಳು ಇತ್ಯಾದಿಗಳ ಮೊತ್ತ) ಮುಖ್ಯವಾಗುತ್ತದೆ. ಐಡಿಯಾಲಜಿಯ ವಿಶ್ಲೇಷಣೆ, ಆ ವಿಶಿಷ್ಟ ಐಡಿಯಾಲಜಿಯನ್ನು ರೂಪಿಸಿದ ಒಂದು ನಿರ್ದಿಷ್ಟ ವರ್ಗದ ಹಿತಾಸಕ್ತಿಗಳು ಮತ್ತು ಮೌಲ್ಯಗಳು ಹಾಗೂ ಜಗತ್ತನ್ನು ಪರಿಭಾವಿಸುವ ಒಂದು ದೃಷ್ಟಿಕೋನ ಇವುಗಳ ವಿಶ್ಲೇಷಣೆಯಾಗುತ್ತದೆ.

ಸಂಗ್ರಹವಾಗಿ ಹೇಳಬೇಕೆಂದರೆ, ಮೌಲಿಕ ಮಾರ್ಕ್ಸ್‌ವಾದಿ ವಿಮರ್ಶೆ ಎರಡು ಹಂತದಲ್ಲಿ ಮುಂದುವರಿಯುತ್ತದೆ. ಮೊದಲನೆಯ ಹಂತದಲ್ಲಿ ವಿಮರ್ಶಕರನು ಒಂದು ಕೃತಿಯ ಭಾಷೆ, ಶಿಲ್ಪ, ಕಥಾಸನ್ನಿವೇಶಗಳು, ನಿರೂಪಣೆ, ಪ್ರತಿಮೆಗಳು ಮತ್ತು ಸಂಕೇತಗಳು – ಇವೆಲ್ಲವುಗಳ ವಿಶ್ಲೇಷಣೆಯ ಮೂಲಕ ಆ ಕೃತಿಯನ್ನು ರೂಪಿಸಿದ ಮತ್ತು ಕೃತಿಯಲ್ಲಿ ಅಭಿವ್ಯಕ್ತಿಗೊಂಡ ವಿಶಿಷ್ಟ ‘ಐಡಿಯಾಲಜಿ’ಯನ್ನು ಗುರುತಿಸುತ್ತಾನೆ. ಅನಂತರ ಎರಡನೆಯ ಹಂತದಲ್ಲಿ, ಇಂತಹ ಐಡಿಯಾಲಜಿ ಸತ್ಯದೂರವಾಗಿರುವುದರಿಂದ (ಶ್ರೇಣೀಕೃತ ಸಮಾಜದ ‘ಐಡಿಯಾಲಜಿ’ ಸತ್ಯದೂರವಾಗಿರಲೇಬೇಕಾದ್ದರಿಂದ) ಆ ಕೃತಿಯಲ್ಲಿ ಯಾವ ಬಗೆಯ ವೈರುಧ್ಯಗಳು ಹಾಗೂ ವಿಸಂಗತಿಗಳು ಉದ್ಭವಿಸಿವೆ ಎಂದು ಶೋಧಿಸುತ್ತಾನೆ. ಮೇಲ್ನೋಟಕ್ಕೆ ಕೃತಿಯಲ್ಲಿ ಯಾವ ಬಗೆಯ ವಿರೋಧಗಳೂ ಕರ್ಷಣಗಳೂ ಇಲ್ಲವೆಂದು ಭಾಸವಾದರೂ ಆಳವಾದ ವಿಶ್ಲೇಷಣೆ ಅವುಗಳನ್ನು ಪ್ರಕಟಪಡಿಸಬಲ್ಲದು ಎಂಬುದು ಮಾರ್ಕ್ಸ್‌ವಾದಿ ವಿಮರ್ಶಕನ ನಿಲುವು. (ಹೆಚ್ಚಿನ ವಿವರಗಳಿಗೆ ನೋಡಿ : Terry Eagleton, 1976, Christopher Butler, 1984)

ಸುಮಾರು ನೂರು ವರ್ಷಗಳ ಇತಿಹಾಸವಿರುವ ಮಾರ್ಕ್ಸ್‌ವಾದಿ ವಿಮರ್ಶೆ ಅನೇಕ ಬಗೆಯ ಒಳಪಂಥಗಳನ್ನು ಮತ್ತು ಚಿಂತಕರನ್ನು ಒಳಗೊಂಡಿದೆ. ಹಾಗೆಯೇ, ಅಂತಹ ಒಳಪಂಥಗಳಲ್ಲಿಯೇ ತಾತ್ವಿಕ ನೆಲೆಯಲ್ಲಿ ಮತ್ತು ವಿಮರ್ಶಾ ಕ್ರಮದಲ್ಲಿ ಪರಸ್ಪರ ವಿರೋಧವೂ ಕಂಡುಬರುವುದು ಸಹಜ. ಆದ್ದರಿಂದ ಮಾರ್ಕ್ಸ್‌ವಾದೀ ವಿಮರ್ಶೆಯನ್ನು ಕಾಲಕ್ರಮಕ್ಕೆ ಅನುಸಾರವಾಗಿ ನಿರೂಪಿಸುವುದಾಗಲೀ ಅಥವಾ ಎಲ್ಲಾ ಪ್ರಮುಖ ಮಾರ್ಕ್ಸ್‌ವಾದೀ ವಿಮರ್ಶಕರನ್ನು ಚರ್ಚಿಸುವುದಾಗಲೀ ಈ ಪುಸ್ತಿಕೆಯ ಚೌಕಟ್ಟಿನಲ್ಲಿ ಅಸಾಧ್ಯ. ಆದ್ದರಿಂದ, ನಾನು ಇಲ್ಲಿಂದ ಮುಂದೆ ಮೊದಲು ಸಾಂಪ್ರದಾಯಿಕ ಮಾರ್ಕ್ಸ್‌ವಾದದ ಪ್ರಾತಿನಿಧಿಕ ವಿಮರ್ಶಕ ಜಾರ್ಜ್ ಲೂಕಾಕ್ಸ್‌ನನ್ನು ಪರಿಚಯಿಸಿ, ಅನಂತರ ಸಂಕ್ಷಿಪ್ತವಾಗಿ ಕೆಲವು ಪ್ರಮುಖ ಮಾರ್ಕ್ಸ್‌ವಾದೀ ಪರಿಕಲ್ಪನೆಗಳನ್ನು ಚರ್ಚಿಸುತ್ತೇನೆ. ಕೊನೆಯಲ್ಲಿ ಇಂದಿನ ಭಾರತಯ ಪರಿಸ್ಥಿತಿಯಲ್ಲಿ ಅತ್ಯಂತ ಪ್ರಸ್ತುತವಾಗುವ, ಜನಪ್ರಿಯ ಕಲೆಗಳ ಬಗ್ಗೆ ಮಾರ್ಕ್ಸ್‌ವಾದವು ಕಾಲಕಾಲಕ್ಕೆ ಭಿನ್ನ ನೆಲೆಗಳಲ್ಲಿ ಪ್ರತಿಕ್ರಿಯಿಸಿರುವುದನ್ನು ಸ್ವಲ್ಪ ದೀರ್ಘವಾಗಿ ಚರ್ಚಿಸುತ್ತೇನೆ.

ವಾಸ್ತವವಾದ ಮತ್ತು ಜಾರ್ಜ್‌‌ಲೂಕಾಕ್ಸ್ :

ಮೂಲತಃ ಹಂಗರಿಯವನಾದ ಜಾರ್ಜ್ ಲೂಕಾರ್ಕ್ಸ್ (Georg Lucaks) ಶ್ರೇಷ್ಠ ಸಾಂಪ್ರದಾಯಿಕ ಮಾರ್ಕ್ಸ್‌ವಾದೀ ವಿಮರ್ಶೆಯಲ್ಲಿ ಒಬ್ಬನೆಂದು ಗುರುತಿಸಲ್ಪಟ್ಟಿದ್ದಾನೆ. ಇವನ ಪ್ರಮುಖ ವಿಮರ್ಶಾ ಗ್ರಂಥಗಳೆಂದರೆ ‘ಚಾರಿತ್ರಿಕ ಕಾದಂಬರಿ’ (The Historical Novel, 1937), ‘ಯುರೋಪಿನ ವಾಸ್ತವತಾವಾದದ ಅಧ್ಯಯನಗಳು’ (Studies in European Realism, 1950) ಇತ್ಯಾದಿ. ಇವನು ಮಾರ್ಕ್ಸ್‌ವಾದದ ಹೆಗೆಲ್ – ಕವಲನ್ನು ಪ್ರತಿನಿಧಿಸುತ್ತಾನೆ.

ಹತ್ತೊಂಭತ್ತನೆಯ ಶತಮಾನದ ಯುರೋಪ್ ಮತ್ತು ಅಮೇರಿಕಾ ದೇಶಗಳಲ್ಲಿ (ಮುಖ್ಯವಾಗಿ ಫ್ರಾನ್ಸ್‌ನಲ್ಲಿ) ಎಮಿಲಿ ಜೊಲಾ, ಥಿಯಡೋರ್ ಡ್ರೇಸರ್‌ಮುಂತಾದ ಲೇಖಕರ ಕಾದಂಬರಿಗಳಲ್ಲಿ ‘ಪ್ರಕೃತಿವಾದ’ವು (Naturalism) ವಿಜೃಂಭಿಸುತ್ತಿತ್ತು. ಮಾನವ ಬದುಕಿನಲ್ಲಿ ಆನುವಂಶಿಕತೆಯನ್ನು ಮತ್ತು ಸಾಮಾಜಿಕ ಪರಿಸರವನ್ನು ನಿರ್ಧಾರಕವಾಗಿ ಕಾಣುವ ‘ಪ್ರಕೃತಿವಾದ’ವನ್ನು (ಇದು ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಮಂಡಿಸಿ ‘ವಿಕಾಸವಾದ’ದ ಸಾಮಾಜಿಕ ಕವಲು) ಲೂಕಾಕ್ಸ್ ಸಂಪೂರ್ಣವಾಗಿ ತಿರಸ್ಕರಿಸುತ್ತಾನೆ. ಏಕೆಂದರೆ, ಆ ವಾದದ ಪ್ರಕಾರ ಮಾನವರೆಲ್ಲರೂ ಅಸ್ವತಂತ್ರರು ಮತ್ತು ಜನ್ಮ ತಾಳುವಾಗಲೇ ತಮ್ಮ ವಿಶಿಷ್ಟ ಆನುವಂಶಿಕತೆ ಮತ್ತು ಪರಿಸರಗಳಲ್ಲಿ ಸಿಕ್ಕಿ ಬಿದ್ದಿರುವವರು. ಪ್ರಕೃತಿವಾದಕ್ಕೆ ವಿರುದ್ಧವಾಗಿ ಲೂಕಾಕ್ಸ್‌, ವಾಸ್ತವವಾದವನ್ನು ರೂಪಿಸುತ್ತಾನೆ. ಹಾಗೆಯೇ ಕಾಫ್ಕ, ಜಾಯ್ಸ್ ಮುಂತಾದ ಆಧುನಿಕತಾವಾದಿ (Modernist) ಲೇಖಕರನ್ನು ಅವರು ವ್ಯಕ್ತಿಯನ್ನು ಮತ್ತು ಮಾನಸಿಕ ಪ್ರಕ್ರಿಯೆಗಳನ್ನು ಎತ್ತಿ ಹಿಡಿಯುತ್ತಾರೆ ಮತ್ತು ಪರಿವರ್ತನಶೀಲ ಸಾಮಾಜಿಕ ಚಲನೆಗಳನ್ನು ನಿರ್ಲಕ್ಷಿಸುತ್ತಾರೆ ಎಂಬ ಕಾರಣಗಳಿಗಾಗಿ ತಿರಸ್ಕರಿಸುತ್ತಾನೆ.

ಪ್ರಕೃತಿವಾದ ಮತ್ತು ಆಧುನಿಕತಾವಾದಗಳಿಗೆ ವಿರುದ್ಧವಾಗಿ ಲೂಕಾಕ್ಸ್‌ತನ್ನ ವಾಸ್ತವತಾವಾದವನ್ನು ಕಟ್ಟುತ್ತಾನೆ. ಲೂಕಾಕ್ಸ್ ಸಾಹಿತ್ಯದಲ್ಲಿ ‘ವಾಸ್ತವತೆ’ಯನ್ನು ಒಂದು ಸಂಕೀರ್ಣ ಪರಿಕಲ್ಪನೆಯಾಗಿ ವ್ಯಾಖ್ಯಾನಿಸುತ್ತಾನೆ. ಅವನ ವಾದದ ಸಾರಾಂಶವನ್ನು ಹೀಗೆ ಗ್ರಹಿಸಬಹುದು : ಔದ್ಯೋಗಿಕ ಕ್ರಾಂತಿ ನಂತರ ಅಸ್ತಿತ್ವಕ್ಕೆ ಬಂದ ಬಂಡವಾಳ ಶಾಹಿ ಸಮಾಜದಲ್ಲಿ ಚಿಂತನೆ ಮತ್ತು ಅನುಭವ, ವ್ಯಕ್ತಿ ಮತ್ತು ಸಮಾಜ, ಜ್ಞೇಯ ಮತ್ತು ಜ್ಞಾತೃ – ಇವುಗಳ ನಡುವೆ ತೀವ್ರ ವಿರೋಧವನ್ನು ನಾವು ಕಾಣುತ್ತೇವೆ. ಆದರೆ ಶ್ರೇಷ್ಠ ಲೇಖಕನೊಬ್ಬನಿಗೆ ಇಂತಹ ಪರಸ್ಪರ ವಿರೋಧಗಳನ್ನು ತಾರ್ಕಿಕವಾಗಿ (Dialectical) ಸಮನ್ವಯಗೊಳಿಸಿ, ಬದುಕಿನ ಅಖಂಡತೆಯ ದರ್ಶನವನ್ನು ಕೊಡಲು ಸಾಧ್ಯವಾಗುತ್ತದೆ. ಶ್ರೇಣೀಕೃತ ಹಾಗೂ ದ್ವಂದ್ವಾತ್ಮಕ ಸಮಾಜದಲ್ಲಿ ಅಖಂಡ ಸತ್ಯವನ್ನು ಪ್ರತಿಫಲಿಸಬಲ್ಲ. ಆ ಬಗೆಯ ಕಲೆಯನ್ನು – ಶ್ರೇಣೀಕೃತ, ದ್ವಂದ್ವಪೂರ್ಣ ಸಮಾಜದಲ್ಲಿ ಅಖಂಡ ಸತ್ಯವನ್ನು ಪ್ರತಿಫಲಿಸಬಲ್ಲ ಮತ್ತು ಹಾಗೆ ಮಾಡುವುದರ ಮೂಲಕವೇ ಉಪಭೋಕ್ತ ಸಮಾಜದ ‘ಪರಕೀಯತೆ’ (Alienation) ಮತ್ತು ‘ಛಿದ್ರೀಕರಣ’  (Fragmentation) ಪ್ರವೃತ್ತಿಗಳನ್ನು ಸಫಲವಾಗಿ ಎದುರಿಸುವ ಕಲೆಯನ್ನು – ಲೂಕಾಕ್ಸ್ ವಾಸ್ತವವಾದಿ ಕಲೆಯೆಂದು ಕರೆಯುತ್ತಾನೆ. ಅವನ ದೃಷ್ಟಿಯಲ್ಲಿ ಗ್ರೀಕ್ ಸಾಹಿತಿಗಳು, ಶೇಕ್ಸ್‌ಪಿಯರ್‌, ಬಾಲ್‌ಜಾಕ್ ಮತ್ತು ಟಾಲ್‌ಸ್ಟಾಯ್ ಇಂತಹ ವಾಸ್ತವವಾದಿ ಲೇಖಕರು.

ಲ್ಯೂಕಾಕ್ಸ್‌ನ ಇತರ ಮುಖ್ಯ ಪರಿಕಲ್ಪನೆಗಳೆಂದರೆ ‘ಅಖಂಡತೆ’ (totality), ‘ಪ್ರಾತಿನಿಧ್ಯತೆ’ (typicality) ಮತ್ತು ‘ವಿಶ್ವ – ಚಾರಿತ್ರಿಕತೆ’ (World-Historical). ‘ಅಖಂಡತೆ’ ಎಂದರೆ ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದಿಂದ ಪರಕೀಯವಾಗದೇ ಇದ್ದಂತಹ ಒಂದು ಸಮಾಜದ ಸ್ಥಿತಿ. ಸಮಾಜದ ಇಂತಹ ಸ್ಥಿತಿಯಲ್ಲಿ ಸಾಧಾರಣ ಮತ್ತು ವಿಶಿಷ್ಟ, ಚಿಂತನೀಯ ಮತ್ತು ಅನುಭವಗಮ್ಯ, ಸಾಮಾಜಿಕ ಮತ್ತು ವೈಯಕ್ತಿಕ – ಇವೇ ಮುಂತಾದ ಸ್ತರಗಳಲ್ಲಿ ಪರಸ್ಪರ ವಿರೋಧವಿರುವುದಿಲ್ಲ. ಇಂತಹ ಅಖಂಡತೆಯನ್ನು ಪ್ರತಿಫಲಿಸುವ ಮೂಲಕ ಶ್ರೇಷ್ಠ ಸಾಹಿತ್ಯಕೃತಿ ಮಾನವನ ಪರಕೀಯತೆಯನ್ನು ಮತ್ತು ಸಮಾಜದ ಛಿದ್ರೀಕರಣ ಪ್ರವೃತ್ತಿಯನ್ನು ಯಶಸ್ವಿಯಾಗಿ ಎದುರಿಸುತ್ತದೆ. ‘ಪ್ರಾತಿನಿಧ್ಯತೆ’ ಎಂದರೆ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಚಾರಿತ್ರಿಕವಾಗಿ ಮುಖ್ಯವಾಗುವ ಹಾಗೂ ಪ್ರಗತಿಪರವಾಗಿರುವ ಮತ್ತು ಒಂದು ಸಮಾಜದ ಆಂತರಿಕ ರಚನೆ ಹಾಗೂ ಕ್ರಿಯಾಶೀಲತೆ ಇವುಗಳನ್ನು ಸ್ಪಷ್ಟಪಡಿಸುವ, ಆ ಸಮಾಜದ ಆಳದಲ್ಲಿ ಹುದುಗಿರುವ ಶಕ್ತಿ. ಲ್ಯೂಕಾಕ್ಸ್‌ನ ಅಭಿಪ್ರಾಯದಲ್ಲಿ ‘ವಾಸ್ತವತಾವಾದೀ’ ಲೇಖಕನ ಕರ್ತವ್ಯವೆಂದರೆ ಇಂತಹ ಪ್ರಾತಿನಿಧಿಕ ಗುಪ್ತ ಶಕ್ತಿಗಳನ್ನು ಕೃತಿಗಳಲ್ಲಿ ಇಂದ್ರಿಯಗಮ್ಯವಾಗಿ ಅಭಿವ್ಯಕ್ತಗೊಂಡ ಪಾತ್ರಗಳಲ್ಲಿ ಮತ್ತು ಕಾರ್ಯಗಳಲ್ಲಿ ಗುರುತಿಸುವುದು. ‘ವಿಶ್ವ-ಚಾರಿತ್ರಿಕ’ವೆಂದರೆ ಈ ಜಗತ್ತಿನ ಇತಿಹಾಸದಲ್ಲಿ ಪ್ರಮುಖವಾಗಿ ಕಂಡುಬರುವ ಆಂದೋಳನಗಳು (ಫ್ರಾನ್ಸಿನ ಮಹಾಕ್ರಾಂತಿ, ರಶ್ಯಾದಲ್ಲಾದ ಮಹಾಕ್ರಾಂತಿ ಇತ್ಯಾದಿ). ಎಂದರೆ ‘ವಾಸ್ತವತಾವಾದಿ’ ಲೇಖಕನು ಪ್ರಾತಿನಿಧಿಕ ಗುಪ್ತ ಶಕ್ತಿಗಳನ್ನು ಗುರುತಿಸುವ ಮೂಲಕ ವ್ಯಕ್ತಿಯನ್ನು ಒಟ್ಟು ಸಮಾಜದೊಡನೆ ಮತ್ತು ಕಾಲ – ದೇಶಗಳಿಂದ ಸೀಮಿತವಾದ ಒಂದು ಸಮಾಜದ ವಿಶಿಷ್ಟ ವಿವರಗಳನ್ನು ವಿಶ್ವಚಾರಿತ್ರಿಕ ಗತಿಯೊಡನೆ ಒಂದುಗೂಡಿಸಲು ಸಮರ್ಥನಾಗುತ್ತಾನೆ (Eagleton, 1976 : 27- 28).

ಸ್ತ್ರೀನಿಷ್ಠವಿಮರ್ಶೆ

ಸ್ತ್ರೀನಿಷ್ಠವಿಮರ್ಶೆ:

ಕಳೆದ ಶತಕದ ಉತ್ತರಾರ್ಧದಲ್ಲಿ ಹೆಚ್ಚಾಗಿ ಅಮೆರಿಕಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಬೆಳೆದು ಬಂದ ‘ಸ್ತ್ರೀ ಸ್ವಾತಂತ್ರ್ಯ ಚಳುವಳಿ’ಯ ಒಂದು ಮುಖ ‘ಸ್ತ್ರೀನಿಷ್ಠ ವಿಮರ್ಶೆ’ (Feminist Criticism). ಇಂತಹ ವಿಮರ್ಶೆ ಸಮಾಜಕೇಂದ್ರಿತ ವಿಮರ್ಶೆಯ ಒಂದು ಮುಖ್ಯ ಕವಲಾಗಿದ್ದು ಮನೋವೈಜ್ಞಾನಿಕ ವಿಮರ್ಶೆ ಮತ್ತು ಮಾರ್ಕ್ಸ್‌ವಾದಿ ವಿಮರ್ಶೆ ಇವೆರಡಕ್ಕೂ ಸಮೀಪವಾಗಿದೆ.

ಸ್ತ್ರೀನಿಷ್ಠ ವಿಮರ್ಶೆಯ ಸೈದ್ಧಾಂತಿಕ ನೆಲೆಗಳನ್ನು ಗುರುತಿಸುವುದು ಕಷ್ಟ ಏಕೆಂದರೆ ಮಾರ್ಕ್ಸ್‌ವಾದಿ ವಿಮರ್ಶೆಯಂತೆಯೇ ಇದು ನಾನಾ ರೂಪಗಳಲ್ಲಿ – ಕೆಲ ಸಂದರ್ಭಗಳಲ್ಲಿ ಪರಸ್ಪರ ವಿರೋಧೀ ರೂಪಗಳಲ್ಲಿ ಕೂಡಾ – ಬೆಳೆಯುತ್ತದೆ. ಎರಡನೆಯದಾಗಿ, ಸ್ತ್ರೀನಿಷ್ಠ ವಿಮರ್ಶೆಗೆ ಒಂದು ಸೈದ್ಧಾಂತಿಕ ನೆಲೆಯನ್ನು ಮಂಡಿಸುವ ಪ್ರಯತ್ನವನ್ನೇ ಕೆಲವು ವಿಮರ್ಶಕಿಯರು ವಿರೋಧಿಸುತ್ತಾರೆ. ಕಾರಣ ಅವರ ದೃಷ್ಟಿಯಲ್ಲಿ ಎಲ್ಲಾ ಸಿದ್ಧಾಂತಗಳ ಮತ್ತು ತತ್ವ ಪ್ರಣಾಲಿಗಳ ಹಿಂದಿರುವ ಮನೋಭಾವ ‘ಪುರುಷತ್ವ’ (male principle). ಅವರು ಸ್ತ್ರೀತ್ವವನ್ನು ಯಾವ ಒಂದು ಸಿದ್ಧಾಂತಕ್ಕೂ ಕಟ್ಟುಬೀಳದ, ವಿವಿಧ ಕ್ಷೇತ್ರಗಳಲ್ಲಿ ಸರಾಗವಾಗಿ ಹರಿಯುವ ಪ್ರಜ್ಞೆಯೆಂದೇ ಪರಿಗಣಿಸುತ್ತಾರೆ. ಆದರೂ ಸ್ಥೂಲವಾಗಿ ಈ ವಿಮರ್ಶಾ ಮಾರ್ಗದ ನೆಲೆಯನ್ನು ಸ್ತ್ರೀ ಚಳುವಳಿಯ ಮುಖ್ಯ ವಕ್ತಾರರಾದ ಸಿಮೋನ್ ದ ಬೋವಾ, ಜೂಲಿಯ ಕ್ರಿಸ್ಟೇವ ಮತ್ತು ಕೇಟ್ ಮಿಲೆಟ್ ಅವರ ಗ್ರಂಥಗಳಲ್ಲಿ ಕಾಣಬಹುದು.

ಸ್ತ್ರೀನಿಷ್ಠ ಚಿಂತನೆಯ ಪ್ರಾರಂಭವನ್ನು ಸಾಹಿತ್ಯಕ ಇತಿಹಾಸಕಾರರು ೧೮ನೆಯ ಶತಮಾನದ ಲೇಡಿ ಮೇರಿ ವರ್ಟ್‌ಲಿ ಮಾಂಟೆಗೊ (Lady Mary Wortly Mantagu  1689 – 1772) ಮತ್ತು ಮೇರಿ ವುಲ್‌ಸ್ಟನ್ ಕ್ರಾಫ್ಟ್ (Mary Wollstone Craft, 1759 – 1797) ಇವರಲ್ಲಿ ಗುರುತಿಸುತ್ತಾರೆ. ಹೆಚ್ಚಿನ ಶ್ರೀಮಂತ ಮಹಿಳೆಯರು ಉನ್ನತ ಶಿಕ್ಷಣದಿಂದ ದೂರವಿರುತ್ತಿದ್ದ ಕಾಲದಲ್ಲಿ ಲೇಡಿ ಮೇರಿ ಉನ್ನತ ಶಿಕ್ಷಣವನ್ನು ಪಡೆದ ಅಪರೂಪದ ಬುದ್ಧಿಜೀವಿಯಾಗಿದ್ದಳು. ಅವಳ ‘ಪತ್ರಗಳು’ (Letters, 1763) ಅಂದು ಅತ್ಯಂತ ಪ್ರಸಿದ್ಧವಾಗಿದ್ದುವು. ಅಂತಹ ಪತ್ರಗಳಲ್ಲಿ ಮುಖ್ಯವಾದವುಗಳು ಅಂದಿನ ಟರ್ಕಿಯ ಮುಸ್ಲಿಂ ಸಮಾಜದ ಮಹಿಳೆಯ ಬಗ್ಗೆ ಬರೆದ ಪತ್ರಗಳು. ಅವುಗಳಲ್ಲಿ ಅಂದು ಪಾಶ್ಚಾತ್ಯ ಸಮಾಜಗಳಲ್ಲಿ ಟರ್ಕಿಯ ಸಮಾಜದ ಬಗ್ಗೆ ಬೇರೂರಿದ್ದ ಪೂರ್ವಗ್ರಹಗಳನ್ನು ಲೇಡಿ ಮೇರಿ ದೂರಮಾಡಿ, ಅಂದಿನ ಮುಸ್ಲಿಂ ಸಮಾಜದ ಮಹಿಳೆಯ ಮತ್ತು ಕ್ರಿಶ್ಚಿಯನ್ ಸಮಾಜದ ಮಹಿಳೆಯ ಸ್ಥಿತಿಗತಿಯ ಬಗ್ಗೆ ಅರ್ಥಪೂರ್ಣ ಟಿಪ್ಪಣಿಗಳನ್ನು ಕೊಡುತ್ತಾಳೆ. ಮೇರಿ ವುಲ್‌ಸ್ಟನ್ ಕ್ರಾಫ್ಟ್ ೧೭೯೨ ರಲ್ಲಿ ಬರೆದ ‘ಸ್ತ್ರೀಯರ ಹಕ್ಕುಗಳ ಸಮರ್ಥನೆ’ (Vindication of the Rights of Women) ಇಂದಿಗೂ ಸ್ತ್ರೀನಿಷ್ಠ ಚಿಂತನೆಯ ಪ್ರಪ್ರಥಮ ಮತ್ತು ಅತಮುಖ್ಯ ಅಭಿವ್ಯಕ್ತಿಯೊಂದು ಮಾನ್ಯ ಮಾಡಲ್ಪಟ್ಟಿದೆ. ಮೇರಿ ಆಗ್ರಹಿಸುವ ಹಕ್ಕುಗಳು ಎಲ್ಲಾ ಸ್ತ್ರೀಯರಿಗೆ ಸಮಾನವಾಗಿ ಇರುವಂತಹವುಗಳು; ಕೇವಲ ಕುಲೀನ, ಶ್ರೀಮಂತ ಸ್ತ್ರೀಯರ ಅವಶ್ಯಕತೆಗಳಲ್ಲ. ಅವಳ ಅಭಿಪ್ರಾಯದಲ್ಲಿ ಸ್ತ್ರೀಯರು ಸ್ತ್ರೀತ್ವವನ್ನು ಬೆಳೆಸಿಕೊಳ್ಳಬೇಕೇ ಹೊರತು ಸ್ಕರ್ಟ್ ತೊಟ್ಟ ಪುರುಷರಂತಾಗುವುದಲ್ಲ. ಸಹಶಿಕ್ಷಣ ಮತ್ತು ಸಮಾನ ಶಿಕ್ಷಣಾವಕಾಶಗಳಿಗೆ ಆಗ್ರಹಿಸುವ ವುಲ್‌ಸ್ಟನ್ ಕ್ರಾಫ್ಟ್ ಪುರುಷನ ಆಧಾರವನ್ನು ಸದಾ ಬಯಸುವ ಸ್ತ್ರೀ – ಮಾದರಿಯನ್ನು (ಮರವನ್ನು ತಬ್ಬಿ ಬೆಳೆಯುವ ಲತೆಯ ಮಾದರಿ) ‘ಪುರುಷನಿರ್ಮಿತ ಮಾದರಿ’ ಎಂದು ತಿರಸ್ಕರಿಸುತ್ತಾಳೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಮೊದಲು ದಾಖಲಿಸಬೇಕಾದ ಹೆಸರೆಂದರೆ ಪ್ರಸಿದ್ಧ ಕಾದಂಬರಿಕಾರ್ತಿ ವರ್ಜೀನಿಯಾ ವುಲ್ಫ್ (೧೮೮೨ – ೧೯೪೧). ಸ್ತ್ರೀಯ ಆಂತರಂಗಿಕ ವಿಶ್ವವೇ ಕೇಂದ್ರದಲ್ಲಿರುವ ‘ಮಿಸಿಸ್ ಡ್ಯಾಲೋವೇ’, ‘ಟು ದ ಲೈಟ್‌ಹೌಸ್’ ಇತ್ಯಾದಿ ಅಸಾಮಾನ್ಯ ಕಾದಂಬರಿಗಳನ್ನು ರಚಿಸಿರುವ ವುಲ್ಫ್ “ತನ್ನದೇ ಆದ ಸ್ವತಂತ್ರ ಕೊಠಡಿ” (A Room of One’s Own, 1929) ಎಂಬ ದೀರ್ಘ ಪ್ರಬಂಧದಲ್ಲಿ ಆಧುನಿಕ ಸ್ತ್ರೀವಾದದ ಮುಖ್ಯಾಂಶಗಳೆಲ್ಲವನ್ನೂ ಮಂಡಿಸುತ್ತಾಳೆ. “ಓರ್ವ ಸ್ತ್ರೀ ಉತ್ತಮ ಸಾಹಿತ್ಯವನ್ನು ರಚಿಸಬೇಕಾದರೆ ಅವಳಿಗೆ ತನ್ನದೇ ಆದ ಕೊಠಡಿ/ ಸ್ವತಂತ್ರ ಸ್ಥಳ ಮತ್ತು ಸ್ವಂತ ಆದಾಯಗಳಿರಬೇಕು” ಎಂದು ವಾದಿಸುವ ಈ ಕೃತಿಯ ‘ಸ್ವಂತ ಕೊಠಡಿ /ಸ್ಥಳ’ ಇಡೀ ಆಧುನಿಕ ಸ್ತ್ರೀವಾದದ ಕೇಂದ್ರ ರೂಪಕವಾಗಿದೆ. ಮುಂದೆ ಸಿಮೋನ್ ದ ಬೊವಾ ಮತ್ತಿತರರು ವ್ಯಾಪಕವಾಗಿ ಚರ್ಚಿಸಲಿದ್ದ ‘ಪುರುಷನು ಸ್ತ್ರೀಯನ್ನು ಅನ್ಯಳಾಗಿಸುವಿಕೆ’, ‘ಸ್ತ್ರೀ-ಪುರುಷ ಸ್ಥಾನಮಾನಗಳು’ ಇತ್ಯಾದಿ ಒಂದು ನಿರ್ದಿಷ್ಟಜ ಕಾಲಮಾನದ ಸಾಮಾಜಿಕ ನಿರ್ಮಿತಿಗಳೇ ಹೊರತು ಜನ್ಮಜಾತವಲ್ಲ’ ಎಂಬಂತಹ ಮೌಲಿಕ ವಿಚಾರಗಳನ್ನು ವುಲ್ಫ್ ಈ ಲೇಖನದಲ್ಲಿ ಚರ್ಚಿಸುತ್ತಾಳೆ.

ವ್ಯಾಪಕವಾಗಿ, ಶಾಸ್ತ್ರೀಯವಾಗಿ ಮತ್ತು ಪ್ರಭಾವಶಾಲಿಯಾಗಿ ಸ್ತ್ರೀಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಸಿಮೋನ್ ದ ಬೋವಾ (Simone de Beauvoir, 1908-86). ೧೯೦೮ ರಲ್ಲಿ ಪ್ಯಾರಿಸ್‌ನಲ್ಲಿ ಜನಿಸಿದ ಬೋವಾ ಪ್ರಸಿದ್ಧ ಸೋರ್‌ಬಾನ್ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದಲ್ಲಿ ಪದವಿ ಪಡೆದಳು. ಪ್ರಸಿದ್ಧ ಕ್ರಾಂತಿಕಾರಿ – ತತ್ವಶಾಸ್ತ್ರಜ್ಞ – ಸಾಹಿತಿ ಜ.ಪಾ. ಸಾರ್ತ್ (Jean Paul Sartre) ಇಲ್ಲಿ ಸಿಮೋನ್‌ಳ ಸಹಪಾಠಿಯಾಗಿದ್ದ. ಮೂರು ಕಾದಂಬರಿಗಳು, ನಾಟಕಗಳು ಮತ್ತು ವೈಚಾರಿಕ ಕೃತಿಗಳನ್ನು ರಚಿಸಿರುವ ಬೋವಾ ಸ್ತ್ರೀಪರ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಳು. ಇವಳ ಪ್ರಸಿದ್ಧ ಸ್ತ್ರೀವಾದಿ ಕೃತಿ ‘ದ್ವಿತೀಯ ಲಿಂಗ’ (The Second Sex) ಫ್ರೆಂಚ್ ಭಾಷೆಯಲ್ಲಿ ೧೯೪೯ ರಲ್ಲಿ ಪ್ರಕಟವಾಯಿತು. (ಇಂಗ್ಲಿಷ್ ಅನುವಾದ ೧೯೫೩). ೭೪೧ ಪುಟಗಳಿರುವ ಈ ಬೃಹತ್ ಕೃತಿಯಲ್ಲಿ ಮನಃಶಾಸ್ತ್ರ, ಮತ- ಧರ್ಮಗಳು, ಚರಿತ್ರೆ, ಸಾಹಿತ್ಯ – ಇವೆಲ್ಲವುಗಳ ನೆಲೆಯಲ್ಲಿ ಪ್ರಾಚೀನ ಕಾಲದಿಂದಲೂ ಎಲ್ಲಾ ಸಮಾಜಗಳಲ್ಲಿ ಸ್ತ್ರೀ ಹೇಗೆ ‘ಎರಡನೆಯ ದರ್ಜೆಯ ಪ್ರಜೆ’ಯಾಗಿಯೇ ಉಳಿದಿದ್ದಾಳೆಂದು ಮತ್ತು ಇಂತಹ ಲಿಂಗಭೇದ ಹೇಗೆ ಸ್ತ್ರೀಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಹಾನಿಕಾರಕವೆಂದು ಸಿಮೋನ್ ಆಗ್ರಹಪೂರ್ವಕವಾಗಿ ವಾದಿಸುತ್ತಾಳೆ.

‘ದ್ವಿತೀಯ ಲಿಂಗ’ ಕೃತಿಯಲ್ಲಿ ಮುಖ್ಯವಾಗಿ ಎರಡು ಭಾಗಗಳಿವೆ. ‘ಸತ್ಯ ಮತ್ತು ಕಟ್ಟುಕಥೆಗಳು’ (Facts and Myths) ಎಂಬ ಮೊದಲನೆಯ ಭಾಗದಲ್ಲಿ ಹೇಗೆ ಪ್ರಾಚೀನ ಕಾಲದಿಂದಲೂ ಪುರುಷರು ಸ್ತ್ರೀಯನ್ನು ಸ್ವತಂತ್ರ ವ್ಯಕ್ತಿಯಂತಲ್ಲದೆ, ಪುರುಷತ್ವಕ್ಕೆ ಪೂರಕವಾಗುವ ‘ತಾಯಿ’, ‘ಪತ್ನಿ’, ‘ವೇಶ್ಯೆ’ ಇತ್ಯಾದಿ ಸಿದ್ದ ಪಡಿಯಚ್ಚುಗಳಲ್ಲ ಕಂಡಿದ್ದಾರೆಂಬುದನ್ನು ಸಾಧಾರವಾಗಿ ಸಿಮೋನ್ ದಾಖಲಿಸುತ್ತಾಳೆ. ‘ಇಂದು ಸ್ತ್ರೀಯ ಬದುಕು’ ಎಂಬ ಎರಡನೆಯ ಭಾಗದಲ್ಲಿ ಸ್ತ್ರೀಯ ಪಾಲನೆ, ಅವಳಿಗೆ ನೀಡುವ ಶಿಕ್ಷಣ, ಅವಳ ಸಾಮಾಜಿಕ ಪರಿಸ್ಥಿತಿ ಇವೆಲ್ಲವೂ ಹೇಗೆ ಸ್ತ್ರೀಯನ್ನು ಒಂದು ಪೂರ್ವನಿರ್ಧಾರಿತ ಪ್ರಕಾರದಲ್ಲಿ ನಿಯಂತ್ರಿಸಿ ಸ್ವತಃ ಅವಳೇ ತನ್ನ ಪರಾಧೀನ ಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ವಿವರಿಸುತ್ತಾಳೆ. ‘ವಿಮುಕ್ತಿಯುತ್ತ’ ಎಂಬ ಕೃತಿಯ ಕೊನೆಯ ಭಾಗದಲ್ಲಿ ತನ್ನ ಪರಾಧೀನ ಪರಿಸ್ಥಿತಿಯಿಂದ ಸ್ತ್ರೀ ಹೊರಬರಬೇಕಾದರೆ ಆಗಬೇಕಾದ ಸಾಮಾಜಿಕ – ವೈಚಾರಿಕ ಪರಿವರ್ತನೆಗಳ ಚರ್ಚೆಯಿದೆ. ಸಿಮೋನ್ ದ ಬೋವಾ ಮಂಡಿಸುವ ವಾದಗಳ ಕೆಲವು ಮುಖ್ಯ ಎಳೆಗಳನ್ನು ಹೀಗೆ ಸಂಗ್ರಹಿಸಬಹುದು :

ಅನ್ಯವಾಗಿಸುವಿಕೆ (Othering) : ಅನಾದಿ ಕಾಲದಿಂದ ಸ್ತ್ರೀ – ಪುರುಷರು ಸಮಾನ ಸಂಖ್ಯೆಯಲ್ಲಿದ್ದರೂ ಮತ್ತು ಸಮಾನವಾಗಿ ಮಾನವ ಕುಲದ ಮುಂದುವರಿಕೆಗೆ ಕಾರಣವಾಗಿದ್ದರೂ, ಸ್ತ್ರೀ ಮಾತ್ರ ಮೊದಲಿಗೆ ‘ನಾನು ಹೆಣ್ಣು’ ಎಂದು ಹೇಳಿಯೇ ಮುಂದುವರಿಯಬೇಕು. ಪುರುಷನಾದರೋ ತನ್ನನ್ನು ‘ಮಾನವ’ನೆಂದು ಮಾತ್ರ ಗುರುತಿಸಿಕೊಳ್ಳುತ್ತಾನೆ. ಪ್ರಾಚೀನ ಕಾಲದಲ್ಲಿ ಗಣಿತಜ್ಞರು ಮೊದಲು ಒಂದು ಸ್ವಯಂಪೂರ್ಣ ಲಂಬರೇಖೆಯನ್ನು ಸ್ಥಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಇತರ ರೇಖೆಗಳನ್ನು ಗುರುತಿಸುತ್ತಿದ್ದರು. ಹಾಗೆಯೇ ಪುರುಷನನ್ನು ಮಾನವತೆಯ ಸ್ವಯಂಪೂರ್ಣ ಪ್ರತಿನಿಧಿಯೆಂದು ಒಪ್ಪಿಕೊಂಡು, ಆ ‘ಪುರುಷ ತತ್ವ’ದ ಆಧಾರದ ಮೇಲೆ ಸ್ತ್ರೀ ತನ್ನನ್ನು ಎಂದರೆ ತನ್ನ ‘ಮಿತಿ’ಗಳನ್ನು ಕೊರತೆಗಳನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಗ್ರೀಕ್ ದಾರ್ಶನಿಕ ಅರಿಸ್ಟಾಟಲ್ ಹೇಳುತ್ತಾನೆ : “ಹೆಣ್ಣು ತನ್ನಲ್ಲಿರುವ ಕೆಲವು ಕೊರತೆಗಳಿಂದಾಗಿ ಹೆಣ್ಣಾಗಿದ್ದಾಳೆ. ಮತ್ತು ಹೆಣ್ಣಿನ ಸ್ವಭಾವವು ಕೆಲವು ನಿಸರ್ಗದತ್ತ ಮಿತಿಗಳಿಂದ ರೂಪಿಸಲ್ಪಟ್ಟಿದೆ”. ಹೆಣ್ಣಿಗಿರುವಂತೆ ಗಂಡಿಗೂ ವಿಶಿಷ್ಟ ದೈಹಿಕ ಅಂಗಗಳಿವೆಯೆಂದು, ದೈಹಿಕ ಮಿತಿಗಳಿವೆಯೆಂದು ಪುರುಷನಿಗೆ ತೋಚುವುದೇ ಇಲ್ಲ.

“ಅರ್ಥಾತ್, ಮಾನವ ಜಾತಿಯೆಂದರೆ ಪುರುಷ; ಸ್ತ್ರೀಯನ್ನು ‘ಪುರುಷನಲ್ಲದವಳು’ ಎಂದೇ ಪುರುಷರು ಅವಳನ್ನು ವ್ಯಾಖ್ಯಾನಿಸುತ್ತಾನೆ. ಸ್ತ್ರೀಯೆಂದರೆ ಹೀಗೆ ಸ್ವತಂತ್ರ ಅಸ್ತಿತ್ವವಿಲ್ಲದಿರುವವಳು. ಪುರುಷನು ಅನಿವಾರ್ಯ ಮೂಲಭೂತ ವಸ್ತು; ಸ್ತ್ರೀ ಅನಾವಶ್ಯಕ ಅನುಬಂಧ. ಅವನು ಸ್ವಯಂಪೂರ್ಣ, ಕರ್ತೃ; ಅವಳು ಅಪೂರ್ಣ, ಅನ್ಯಳು (the other)” (ಪು. ೧೬).

ಮುಂದೆ, ಎಲ್ಲಾ ಸಮಾಜರಚನೆಗಳಲ್ಲಿಯೂ ಮತ್ತು ಪುರಾಣಗಳಲ್ಲಿಯೂ ‘ತಾನು – ಅನ್ಯರು’ (the self – the other) ಎಂಬ ಪರಿಕಲ್ಪನೆ ಹೇಗೆ ಅನಿವಾರ್ಯವಾಗುತ್ತದೆಂದು ಬೋವಾ ಚರ್ಚಿಸುತ್ತಾಳೆ; ‘ಹೆಣ್ಣು ಹೇಗೆ ಅನ್ಯಳು, ಹೊರಗಿನವಳು ಆದಳು?’ ಎಂಬ ಪ್ರಶ್ನೆಯನ್ನೆತ್ತಿ, ಉತ್ತರಗಳನ್ನು ಇತಿಹಾಸ, ಧರ್ಮಶಾಸ್ತ್ರ, ಪುರಾಣಗಳು ಇವೆಲ್ಲವನ್ನೂ ವಿಶ್ಲೇಷಿಸುತ್ತಾಳೆ. ಇಂತಹ ವಿಶ್ಲೇಷಣೆಯಿಂದ ಬೋವಾ ತೀರ್ಮಾನಿಸುವುದೇನೆಂದರೆ, ಇತಿಹಾಸದ ಪ್ರಾರಂಭಿಕ ಘಟ್ಟದಿಂದಲೂ ಪುರುಷರ ಮಧ್ಯೆ ಹಂಚಿಹೋಗಿರುವ ಸ್ತ್ರೀಗೆ ಪ್ರತ್ಯೇಕ ಚರಿತ್ರೆಯಿಲ್ಲ, ಪ್ರತ್ಯೇಕ ಸಂಘಟನೆಯಿಲ್ಲ, ಪ್ರತ್ಯೇಕ ಅಸ್ತಿತ್ವವೂ ಇಲ್ಲ. ಇತಿಹಾಸದುದ್ದಕ್ಕೂ ಅವಳು ಪುರುಷನ ನೆರಳಾಗಿ ಬದುಕುತ್ತಾ ಬಂದಿದ್ದಾಳೆ.

ಲಿಂಗಭೇದ ಮತ್ತು ಲಿಂಗಾಧಾರಿತ ಅಸಮಾನತೆ : ಸ್ತ್ರೀಯನ್ನು ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅಂಚಿಗೆ ತಳ್ಳಿದ ನಂತರ ಅವಳ ಅಂತಹ ‘ಪರಿಧೀಯ ಅವಸ್ಥೆ’ಯನ್ನು ಶಾಸಕರು, ದಾರ್ಶನಿಕರು, ಲೇಖಕರು, ವಿಜ್ಞಾನಿಗಳು ಮುಂತಾದವರು ‘ಸ್ತ್ರೀಯ ಪರಾಧೀನ ಸ್ಥಿತಿ ದೈವಮಾನ್ಯವಾಗಿದೆ ಮತ್ತು ಈ ಪ್ರಪಂಚದಲ್ಲಿ ಉಪಯುಕ್ತವಾಗಿದೆ’ ಎಂದು ಸಮರ್ಥಿಸುತ್ತಾ ಬಂದಿದ್ದಾರೆ. ತಮ್ಮ ಸಮರ್ಥನೆಯನ್ನು ಬಲಗೊಳಿಸಲು ಅವರು ಜೈವಿಕಶಾಸ್ತ್ರ, ಸಂವಹನ, ಮನೋವಿಜ್ಞಾನ ಇತ್ಯಾದಿ ಎಲ್ಲಾ ಕ್ಷೇತ್ರಗಳಿಂದಲೂ ‘ಸಾಕ್ಷ್ಯ’ವನ್ನು ಶೋಧಿಸಿದ್ದಾರೆ (ಸ್ತ್ರೀಗೆ ಗರ್ಭಕೋಶವಿರುವುದರ ಅರ್ಥ ಅವಳ ಬದುಕಿನ ಮುಖ್ಯ ಉದ್ದೇಶ ಸಂತಾನವೃದ್ಧಿ; ಸ್ತ್ರೀ ಮುಖ್ಯವಾಗಿ ಭಾವನಾಜೀವಿ; ಸ್ತ್ರೀಗೆ ಪುರುಷನಷ್ಟು ದೈಹಿಕ ಶಕ್ತಿ ಇಲ್ಲ; ಇತ್ಯಾದಿ.)

ಇಂತಹ ಸ್ತ್ರೀ-ಪುರುಷ ಭಿನ್ನತೆಯನ್ನು ಬೋವಾ ಒಪ್ಪಿಕೊಂಡು ಹೀಗೆ ಹೇಳುತ್ತಾಳೆ : “ಒಟ್ಟಿನಲ್ಲಿ ಜೈವಿಕವಾಗಿ ಸ್ತ್ರೀ ನಿಸರ್ಗ ಶಪಿತಳೇ ಹೌದು. ಮಾಸಿಕ ಋತುಸ್ರಾವ, ಗರ್ಭಧಾರಣೆ, ಪ್ರಸವ ವೇದನೆ, ಪ್ರಸವ ಇತ್ಯಾದಿ ಅವ್ಯಾಹತ ಸಂಕಟಗಳನ್ನು ಸ್ತ್ರೀ ಸದಾ ಎದುರಿಸಬೇಕಾಗುತ್ತದೆ. ಸ್ತ್ರೀ ಪುರುಷರಂತೆ ವೇಗವಾಗಿ ಓಡಲಾರಳು; ಅವನಷ್ಟೇ ಭಾರ ಎತ್ತಲಾರಳು; ದುರ್ಬಲಳು ಮತ್ತು ಮಾನಸಿಕವಾಗಿ ಅವಳಿಗೆ ಪುರುಷನಿಗಿರುವಷ್ಟು ಸಂಕಲ್ಪ ಶಕ್ತಿಯಿಲ್ಲ” (ಪು. ೬೬).

ಬೋವಾ ವಾದಿಸುವುದೇನೆಂದರೆ ಇಂತಹ ಜೈವಿಕ ಸಾಕ್ಷ್ಯ ಸ್ತ್ರೀಯನ್ನು ಪುರುಷನಿಗಿಂತ ಭಿನ್ನಳೆಂದು ಸ್ಥಾಪಿಸುತ್ತದೆಯೇ ಹೊರತು ಅವನಿಗಿಂತ ಕೀಳು ಎಂದಲ್ಲ. ಎಂದರೆ ಲಿಂಗಭೇದ ಒಂದು ಶ್ರೇಣೀಕೃತ ಮೌಲ್ಯವಲ್ಲ. ಈ ಸಂದರ್ಭದಲ್ಲಿ ಬೋವಾ ನಮ್ಮ ಗಮನಕ್ಕೆ ತರುವ ಅತಿ ಮುಖ್ಯ ಅಂಶವೆಂದರೆ “ಜೈವಿಕ ಸಂಗತಿಗಳಿಗೆ ಒಂದು ಮೌಲ್ಯ ಬರುವುದು ಸಾಮಾಜಿಕ ಕಟ್ಟುಪಾಡುಗಳಿಂದ, ವಿಧಿ ನಿಷೇಧಗಳಿಂದ”. ವಿಶಿಷ್ಟ ಸಾಮಾಜಿಕ ಮೌಲ್ಯ ವ್ಯವಸ್ಥೆಯನ್ನು ಮರೆತು ಯಾವುದೇ ವಿಧದ ದೈಹಿಕ – ಮಾನಸಿಕ ಲಕ್ಷಣಗಳನ್ನು ತರ – ತಮ ವ್ಯವಸ್ಥೆಗೆ ಆಧಾರವೆಂದು ಪರಿಗಣಿಸಲು ಸಾಧ್ಯವಿಲ್ಲ.

ಸ್ತ್ರೀಗೆ ತನ್ನ ಸ್ತ್ರೀತ್ವವನ್ನು ಕುರಿತಾದ ವಿಶಿಷ್ಟ ಪ್ರಜ್ಞೆ (ನೈಚ್ಯ ಮನೋಭಾವ) ಮಾನವ ಇತಿಹಾಸದ ಒಂದು ಘಟ್ಟದಲ್ಲಿ ಒಂದು ಸಮಾಜ ನಿರ್ಮಿಸಿದ ಆರ್ಥಿಕ ವ್ಯವಸ್ಥೆಯಿಂದ ರೂಪಿಸಲ್ಪಡುತ್ತದೆ – ಎಂಬ ಚಾರಿತ್ರಿಕ – ಭೌತವಾದಿಗಳ (ಮುಖ್ಯವಾಗಿ ಎಂಗೆಲ್ಸ್ ತನ್ನ “ರಾಷ್ಟ್ರ, ವೈಯಕ್ತಿಕ ಸಂಪತ್ತು ಮತ್ತು ಕುಟುಂಬ : ಇವುಗಳ ಉಗಮ” ಎಂಬ ಗ್ರಂಥದಲ್ಲಿ ಮಂಡಿಸುವ) ವಾದವನ್ನು ಬೋವಾ ಪೂರ್ಣವಾಗಿ ಒಪ್ಪುವುದಿಲ್ಲ. ಆರ್ಥಿಕ ಪರಾವಲಂಬನೆ ಸ್ತ್ರೀಯ ಸಾಮಾಜಿಕ – ಕೌಟುಂಬಿಕ ಸ್ಥಾನಮಾನಗಳನ್ನು ನಿಕೃಷ್ಟವಾಗಿಸಿದೆ ನಿಜ. ಆದರೆ ಆರ್ಥಿಕ ಸ್ವಾತಂತ್ರ್ಯವೊಂದೇ ಸ್ತ್ರೀಗೆ ತನ್ನತನವನ್ನು ಕೊಡಲಾರದು ಎಂದು ಬೋವಾ ವಾದಿಸುತ್ತಾಳೆ (ಪು. ೭೩೪). ಅವಳ ಅಭಿಪ್ರಾಯದಲ್ಲಿ, ಎಂದಿನವರೆಗೆ ಪುರುಷ ನಿರ್ಮಿತ ಮಾನಸಿಕ – ವೈಚಾರಿಕ ಚೌಕಟ್ಟು ಗಳಲ್ಲಿಯೇ ಸ್ತ್ರೀ ಬದುಕಬೇಕಾಗುತ್ತದೋ ಅಲ್ಲಿಯವರೆಗೆ ನಿಜವಾದ ಅರ್ಥದಲ್ಲಿ ಸ್ತ್ರೀ ಸ್ವತಂತ್ರಳಾಗುವುದಿಲ್ಲ. ಸಂಪೂರ್ಣ ಸ್ತ್ರೀ ಸ್ವಾತಂತ್ರ್ಯವನ್ನು ಬೋವಾ ಹೀಗೆ ಗುರುತಿಸುತ್ತಾಳೆ, ಅಸ್ತಿತ್ವವಾದದ ನೆಲೆಯಲ್ಲಿ : “ವಿವಿಧ ಸ್ವಾತಂತ್ರ್ಯಗಳನ್ನು ಸತತವಾಗಿ ಶೋಧಿಸುವುದರ ಮೂಲಕವೇ ಪ್ರತಿಯೊಬ್ಬನೂ ಸ್ವತಂತ್ರನಾಗುತ್ತಾನೆ. ಅಜ್ಞಾತ, ಅಪಾರ ಭವಿಷ್ಯದತ್ತ ಗರಿಗೆದರಿ ಹಾರುವ ಸಾಧ್ಯತೆಯೊಂದೇ ನಮ್ಮ ಅಸ್ತಿತ್ವಕ್ಕೆ ಸಮರ್ಥನೆ. ಪ್ರತಿಯೊಬ್ಬಳ/ನ ಅಸ್ತಿತ್ವವು ಅರ್ಥಪೂರ್ಣವಾಗುವುದು ತನ್ನ ಮಿತಿಗಳನ್ನು ಮೀರಿ ಹೊರಬರುವ, ಸ್ವತಂತ್ರವಾಗಿ ಆಯ್ಕೆ ಮಾಡಿಕೊಂಡ ಯೋಜನೆಗಳನ್ನು ತನ್ನನ್ನು ತೊಡಗಿಸಿಕೊಳ್ಳುವ ಅದಮ್ಯ ಬಯಕೆಯಲ್ಲಿ ಮಾತ್ರ” (ಹೆಚ್ಚಿನ ವಿವರಗಳಿಗೆ ನೋಡಿ : ಸಿ.ಎನ್. ರಾಮಚಂದ್ರನ್, ಆಶಯ – ಆಕೃತಿ, ಪು. ೯೮-೧೦೯).

ಹೀಗೆ ಸ್ತ್ರೀಕೇಂದ್ರಿತ ಚಿಂತನೆಗೆ ಒಂದು ಸೈದ್ಧಾಂತಿಕ ಹಾಗೂ ವ್ಯಾಪಕ ತಳಹದಿ ಬೋವಾಳ ‘ದ್ವಿತೀಯ ಲಿಂಗ’ ಕೃತಿಯಿಂದ ದೊರಕಿದ ನಂತರ, ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ವಿಶೇಷತಃ ಅಮೇರಿಕಾ ಮತ್ತು ಫ್ರಾನ್ಸ್ ದೇಶಗಳಲ್ಲಿ ಸ್ತ್ರೀವಾದ ಶ್ರೀಮಂತವಾಗಿ, ಬಹುಮುಖಿಯಾಗಿ ಬೆಳೆಯಿತು. ಈ ದಿಕ್ಕಿನಲ್ಲಿ ಕೇಟ್ ಮಿಲೆಟ್‌ಳ ‘ಲೈಂಗಿಕ ರಾಜಕೀಯ’ (Kate Miller, Sexual Politics, 1970) ಕೃತಿಯನ್ನು ಒಂದು ಮುಖ್ಯ ಮೈಲಿಗಲ್ಲೆಂದು ಗುರುತಿಸಬಹುದು. ಈ ಕೃತಿಯಲ್ಲಿ ಸ್ತ್ರೀಯರ ಪಾರತಂತ್ರ್ಯಕ್ಕೆ ಕಾರಣ ‘ಪಿತೃಪ್ರಧಾನ ವ್ಯವಸ್ಥೆ’ (patriarchy) ಎಂದು ವಾದಿಸುತ್ತಾ ಮಿಲೆಟ್ ‘ರಾಜಕೀಯ’ ಶಬ್ದಕ್ಕೆ ಒಂದು ನೂತನ ವ್ಯಾಖ್ಯಾನವನ್ನು ನೀಡುತ್ತಾಳೆ. “ಎರಡು ಸಮುದಾಯಗಳ ನಡುವಿನ ಅಸಮಾನ ಅಧಿಕಾರಾಧಾರಿತ ಸಂಬಂಧವನ್ನು ನಾವು ರಾಜಕೀಯವೆಂದು ಕರೆಯಬಹುದು”. ಈ ನೆಲೆಯಲ್ಲಿ ಸ್ತ್ರೀಯರು ಪುರುಷರ ‘ಲೈಂಗಿಕ ರಾಜಕೀಯ’ದ ಬಲಿಪಶುಗಳಾಗಿ, ಅನಾದಿ ಕಾಲದಿಂದಲೂ ತಮ್ಮದೆಂದು ಪುರುಷರಿಂದ ನಿರ್ಧರಿಸಲ್ಪಟ್ಟಿದ್ದ ಸಿದ್ಧ ಪಡಿಯಚ್ಚುಗಳ ಒಳಗೇ ಬದುಕುತ್ತಿದ್ದಾರೆ, ಎಂದು ಮಿಲೆಟ್ ತೀರ್ಮಾನಿಸುತ್ತಾಳೆ. ಬೋವಾ ವಾದವನ್ನು ಮುಂದುವರಿಸುತ್ತಾ ಮಿಲೆಟ್ ‘ಲಿಂಗಭೇದ’ಕ್ಕೂ ‘ಲಿಂಗಪ್ರಜ್ಞೆ’ಗೂ (Sex ಮತ್ತು Gender) ಇರುವ ವ್ಯತ್ಯಾಸವನ್ನು ಪ್ರಬಲವಾಗಿ ಮಂಡಿಸುತ್ತಾಳೆ. ಲಿಂಗಭೇದವು ಜೈವಿಕವಾಗಿ ನಿರ್ಧರಿಸಲ್ಪಟ್ಟಿದ್ದರೆ, ಲಿಂಗಪ್ರಜ್ಞೆಯನ್ನು ಶಿಕ್ಷಣ, ಸಂಸ್ಕೃತಿ, ಮತ – ಧರ್ಮಾಚರಣೆಗಳು ಮತ್ತು ನಂಬಿಕೆಗಳು ರೂಪಿಸುತ್ತವೆ. ತನ್ನ ವಾದದ ಸಮರ್ಥನೆಗಾಗಿ ‘ಸಾಕ್ಷ್ಯ’ದಂತೆ ಮಿಲೆಟ್ ೨೦ನೆಯ ಶತಮಾನದ ಪ್ರಸಿದ್ಧ ಕಾದಂಬರಿಕಾರರಾದ ಹೆನ್ರಿ ಮಿಲರ್, ಡಿ.ಎಚ್. ಲಾರೆನ್ಸ್, ನಾರ್ಮನ್ ಮೇಲರ್ ಮುಂತಾದವರ ಕಾದಂಬರಿಗಳನ್ನು ವಿಶ್ಲೇಷಿಸುತ್ತಾ, ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸುವ ಸ್ತ್ರೀ ಪಾತ್ರಗಳು ಮತ್ತು ಸ್ತ್ರೀ-ಪುರುಷ ಸಂಬಂಧಗಳು ಹೇಗೆ ಕೆಲವೊಮ್ಮೆ ನೇರವಾಗಿ ಕೆಲವೊಮ್ಮೆ ಪರೋಕ್ಷವಾಗಿ, ‘ಲೈಂಗಿಕ ರಾಜಕೀಯ’ದಿಂದ ಪ್ರಭಾವಿತವಾಗಿವೆ ಎಂಬುದನ್ನು ದಾಖಲಿಸುತ್ತಾಳೆ.

ಸಿಮೋನ್ ದ ಬೋವಾ, ಕೇಟ್ ಮಿಲೆಟ್, ಜರ್ಮೇನ್ ಗ್ರಿಯರ್‌ಮುಂತಾದವರು ಸ್ತ್ರೀ ಚಿಂತನೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ – ರಾಜಕೀಯ ಚಳುವಳಿಗಳಲ್ಲಿಯೂ ಸ್ತ್ರೀಯರು ನೇರವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ವಾದಿಸುತ್ತಾರೆ. ಇವರುಗಳ ದೃಷ್ಟಿಯಲ್ಲಿ ಸ್ತ್ರೀಯರು ಅಲ್ಪಸಂಖ್ಯಾತರಲ್ಲ (Minorities); ಆದರೂ ಇತರ ಧಾರ್ಮಿಕ – ಭಾಷಿಕ – ವರ್ಣೀಯ ಅಲ್ಪ ಸಂಖ್ಯಾತರಂತೆ ಸಮಾಜದಲ್ಲಿ ಶೋಷಣೆಗೊಳಪಟ್ಟಿದ್ದಾರೆ; ಅಧಿಕಾರ – ಶಿಕ್ಷಣ – ಸಮೂಹ ಮಾಧ್ಯಮ ಕ್ಷೇತ್ರಗಳಲ್ಲಿ ಪರಿಧೀಯ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ (Marginalised). ಆದ್ದರಿಂದ, ಇತರ ಅಲ್ಪಸಂಖ್ಯಾತರಂತೆ ಸ್ತ್ರೀಯರೂ ಸಂಘಟಿತರಾಗಿ, ಸಾಂಘಿಕವಾಗಿ ತಮ್ಮ ಹಕ್ಕು ಬಾಧ್ಯತೆಗಳಿಗಾಗಿ ಹೋರಾಟ ಮಾಡಬೇಕು.

ಹೀಗೆ, ರಾಜಕೀಯ – ಸಾಮಾಜಿಕ – ಸಾಂಸ್ಕೃತಿಕ ಆಯಾಮಗಳನ್ನುಳ್ಳ ಸ್ತ್ರೀನಿಷ್ಠ ಚಿಂತನೆಯ ಸಾಹಿತ್ಯಕ ದಿಕ್ಕುಗಳನ್ನು ಶಾರನ್ ಸ್ಪೆನ್ಸರ್ (Sharon Spencer) ಹೀಗೆ ಗುರುತಿಸುತ್ತಾಳೆ :

(೧) ಇಂದು ಅಲಭ್ಯವಾಗಿರುವ ಅಥವಾ ವಿನಾಕಾರಣ ದುರ್ಲಕ್ಷಿಸಲ್ಪಟ್ಟಿರುವ ಸ್ತ್ರೀಯರಿಂದ ಬರೆಯಲ್ಪಟ್ಟ ಸೃಜನಶೀಲ ಹಾಗೂ ವೈಚಾರಿಕ ಕೃತಿಗಳನ್ನು ಶೋಧಿಸಿ ಬೆಳಕಿಗೆ ತರುವುದು. (ಕನ್ನಡದಲ್ಲಿ ಚಿ.ನ. ಮಂಗಳಾ ಅವರು ತಿರುಮಲಾಂಬಾ ಅವರ ಕೃತಿಗಳನ್ನು ಗುರುತಿಸಿ ಬೆಳಕಿಗೆ ತಂದಂತೆ; ಇಂಗ್ಲಿಷ್‌ನಲ್ಲಿ ಸೂಸಿ ತಾರು ಮತ್ತು ಲಲಿತಾ ಭಾರತದ ವಿವಿಧ ಭಾಷೆಗಳಲ್ಲಿ ‘ಕೇಳಿಸಿಕೊಳ್ಳದಿದ್ದ’ ಬಗೆ ಬಗೆಯ ಸ್ತ್ರೀಯರ ಧ್ವನಿಗಳನ್ನು ದಾಖಲಿಸಿದಂತೆ (Women Writing in India, 2 vols., 1991).

(೨) ಪ್ರಾಚೀನ ಹಾಗೂ ಅರ್ವಾಚೀನ ಸಾಹಿತ್ಯಗಳಲ್ಲಿ ಮೂಡಿಬಂದಿರುವ ಸ್ತ್ರೀಯರ ಮತ್ತು ಸ್ತ್ರೀ – ಪುರುಷ ಸಂಬಂಧಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾ.

(೩) ಲೇಖಕಿಯರನ್ನು ಮತ್ತು ಅವರ ಕೃತಿಗಳನ್ನು ಕುರಿತು ಪುರುಷ ಲೇಖಕ / ವಿಮರ್ಶಕರಿಂದ ಬಂದಿರುವ ವಿಮರ್ಶೆ – ವ್ಯಾಖ್ಯಾನಗಳ ವಿಶ್ಲೇಷಣೆ.

(೪) ಸ್ತ್ರೀ ಕೇಂದ್ರಿತ ವೈಚಾರಿಕ ನೆಲೆಯಲ್ಲಿ ಸೃಜನಶೀಲ ಮತ್ತು ವೈಚಾರಿಕ ಕೃತಿಗಳನ್ನು ವಿಫುಲವಾಗಿ ರಚಿಸಿ, ‘ಸ್ತ್ರೀ ವಿಶಿಷ್ಟ ಪ್ರಜ್ಞೆ’ಗೆ ಅಭಿವ್ಯಕ್ತಿ ಮತ್ತು ಪ್ರಸಾರ ಕೊಡುವುದು. (Spencer, 1982).

ಸರಿಸುಮಾರು ಇದೇ ನಾಲ್ಕು ಅಂಶಗಳನ್ನು ಹೆಚ್ಚು ಸೈದ್ಧಾಂತಿಕವಾಗಿ ಮತ್ತು ವಿದ್ವತ್ಪೂರ್ಣವಾಗಿ ಇಲೇನ್ ಶೋವಾಲ್ಟರ್ ತನ್ನ ‘ಸ್ತ್ರೀ ಕಾವ್ಯಮೀಮಾಂಸೆಯ ಬಗ್ಗೆ (Towards A Feminist Poetics, 1979) ಎಂಬ ಒಂದು ಮುಖ್ಯ ಲೇಖನದಲ್ಲಿ ಚರ್ಚಿಸುತ್ತಾಳೆ. ಶೋವಾಲ್ಟರ್ ಆಧುನಿಕ ಸ್ತ್ರೀವಾದವನ್ನು (ಸಾಹಿತ್ಯಕ ನೆಲೆಯಲ್ಲಿ ಎರಡು ವರ್ಗಗಳಲ್ಲಿ ವಿಂಗಡಿಸುತ್ತಾಳೆ. ಅವಳ ಅಭಿಪ್ರಾಯದಲ್ಲಿ ಮೊದಲನೆಯ ವರ್ಗವು, ‘ಸ್ತ್ರೀಯನ್ನು ಓದುಗಳಾಗಿ’ (Woman as Reader) ಪರಿಗಣಿಸುತ್ತದೆ. ಎಂದರೆ ಪುರುಷ ನಿರ್ಮಿತ ವಾಙ್ಮಯವನ್ನು ಸ್ತ್ರೀ ಓದುವಾಗ ಅದರಲ್ಲಿ ಕಂಡುಬರುವ ನೈತಿಕ – ಲೈಂಗಿಕ ಸಂಹಿತೆಗಳಿಗೆ ಪ್ರತಿಕ್ರಿಯಿಸುತ್ತಾ, ಸಾಹಿತ್ಯಕ ಸಂಗತಿಗಳ ಆಳದಲ್ಲಿರುವ ತಾತ್ವಿಕ ಗೃಹೀತಗಳನ್ನು ಬೆಳಕಿಗೆ ತರುವುದು. ಇಂತಹ ವಿಮರ್ಶೆಯನ್ನು ಶೋವಾಲ್ಟರ್ ‘ಸ್ತ್ರೀವಾದೀ ವಿಮರ್ಶೆ’ (Feminist Critique) ಎಂದು ಹೆಸರಿಸುತ್ತಾಳೆ. ಎರಡನೆಯ ವರ್ಗ ‘ಸ್ತ್ರೀಯನ್ನು ಲೇಖಕಿ’ಯಂತೆ (Woman as writer) ನೋಡುತ್ತದೆ. ಎಂದರೆ ಸ್ತ್ರೀಯರಿಂದ ರಚಿಸಲ್ಪಟ್ಟ ಸಾಹಿತ್ಯ, ಅದರ ವಸ್ತು ಮತ್ತು ವಿನ್ಯಾಸಗಳು, ಇತಿಹಾಸ ಇವುಗಳನ್ನು ವ್ಯಾಖ್ಯಾನಿಸುವುದು. ಈ ವರ್ಗದ ಆಸಕ್ತಿ ಸ್ತ್ರೀಯ ಸೃಜನಶೀಲತೆಯ ಒತ್ತಡಗಳು, ಸ್ತ್ರೀ ವಿಶಿಷ್ಟ ಸಂವೇದನೆ ಮತ್ತು ಭಾಷಿಕ ವಿನ್ಯಾಸಗಳು ಇವುಗಳತ್ತ ಇರುತ್ತದೆ. ಈ ವರ್ಗದಲ್ಲಿ ಬರುವ (ಅಥವಾ ಬರಬೇಕಾದ) ವಿಮರ್ಶೆಗೆ ಶೋವಾಲ್ಟರ್ ‘ಸ್ತ್ರೀನಿಷ್ಠ ವಿಮರ್ಶೆ’ (Gynocriticism) ಎಂಬ ತಾನೇ ರೂಪಿಸಿದ ಹೆಸರನ್ನು ಕೊಡುತ್ತಾಳೆ.

ಶೋವಾಲ್ಟರ್ ಮಂಡಿಸುವ ವಾದವೇನೆಂದರೆ, ಮೊದಲನೆಯ ವರ್ಗದ ‘ಸ್ತ್ರೀವಾದಿ ವಿಮರ್ಶೆ’ಯ ಕಾಳಜಿಗಳು ಮೂಲತಃ ರಾಜಕೀಯ ಕಾಳಜಿಗಳು; ಮತ್ತು ಅಂತಹ ವಿಮರ್ಶೆ ಮಾರ್ಕ್ಸಿಸ್ಟ್ ಸಾಮಾಜಿಕ – ಸೌಂದರ್ಯಾತ್ಮಕ ಚಿಂತನೆಗೆ ಹತ್ತಿರ ಬರುತ್ತದೆ. ಆದರೆ ‘ಸ್ತ್ರೀನಿಷ್ಠ ವಿಮರ್ಶೆ’ ಅಥವಾ ‘ಗೈನೋಕ್ರಿಟಿಸಿಸಂ’ ಹೆಚ್ಚು ಸ್ವತಂತ್ರವಾಗಿ ಪ್ರಯೋಗಾತ್ಮಕವಾಗಿ ನಡೆಯುತ್ತಿರುವ ಸ್ತ್ರೀಪರ ಸಂಶೋಧನೆಗಳೊಡನೆ ಸಂಲಗ್ನಗೊಂಡಿರುತ್ತದೆ. ಇಂದು ನಮಗೆ ಬೇಕಾದುದು ಇಂತಹ ಸ್ತ್ರೀ ವಿಶಿಷ್ಟ ಚಿಂತನಾಕ್ರಮ; ಮತ್ತು ಇದರ ಲಕ್ಷ್ಯ ಚರಿತ್ರೆಯಲ್ಲಿ, ಮಾನವ ಶಾಸ್ತ್ರದಲ್ಲಿ, ಮನೋವಿಜ್ಞಾನದಲ್ಲಿ ದಮನಿಸಲ್ಪಟ್ಟಿರುವ ಸ್ತ್ರೀಯರ ದನಿಗಳನ್ನು ಶೋಧಿಸುವುದು; ಮತ್ತು ಸ್ತ್ರೀಗೆ ‘ಹೇಳಲು ಸಾಧ್ಯವಾಗದ’ (feminine not-said) ಅಂಶಗಳನ್ನು ಹಾಗೂ ವಿಚಾರಗಳನ್ನು ಗುರುತಿಸುವುದು.

ಮೇಲೆ ಹೇಳಿದ ನಾಲ್ಕೂ ದಿಕ್ಕುಗಳಲ್ಲಿ ಇಂದು ಪಾಶ್ಚಾತ್ಯ ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಕಾರ್ಯವಾಗುತ್ತಿದೆ. ಪ್ರಾಚೀನ ಹಾಗೂ ಅರ್ವಾಚೀನ ಸಾಹಿತ್ಯದಲ್ಲಿ ಹೇಗೆ ಸ್ತ್ರೀಯರು ‘ಅಕ್ಷತ ಕನ್ಯೆ’ ಅಥವಾ ‘ವೇಶ್ಯೆ’, ‘ದೇವತೆ ಅಥವಾ ರಾಕ್ಷಸಿ’, ‘ಪತಿವ್ರತೆ ಅಥವಾ ಚಂಡಿ’, ‘ತಾಯಿ ಅಥವಾ ಮೋಹಿನಿ’ – ಹೀಗೆ ಕೆಲವೇ ಕೆಲವು ಸೀಮಿತ ಪಡಿಯಚ್ಚುಗಳಲ್ಲಿ ಚಿತ್ರಿಸಲ್ಪಟ್ಟಿದ್ದಾರೆಂದು ಸಫಲವಾಗಿ ಮೇರಿ ಫರ್ಗುಸನ್ ಮುಂತಾದವರು ವಿಶ್ಲೇಷಿಸಿದ್ದಾರೆ. ಹಾಗೆಯೇ ಪುರುಷರಿಂದ ಮಾಡಲ್ಪಟ್ಟ ವಿಮರ್ಶೆ ಹೇಗೆ ‘ಎಲ್ಲಾ ಉತ್ತಮ ಸಾಹಿತ್ಯವೂ ಪುರುಷ ರಚಿತ ಸಾಹಿತ್ಯದ ಮಾದರಿಯನ್ನೇ ಆದರ್ಶವಾಗಿ ಎತ್ತಿ ಹಿಡಿದು ಸ್ತ್ರೀ – ರಚಿತ ಸಾಹಿತ್ಯವನ್ನು ಕಡೆಗಾಣಿಸುತ್ತದೆ’ – ಎಂದು ಆಧಾರಪೂರ್ವಕವಾಗಿ ಆನೆಟ್ ಕೋಲೋಡ್ನಿ (Annette Kolodny) ಮುಂತಾದವರು ಚರ್ಚಿಸಿದ್ದಾರೆ. ಇವರುಗಳ ದೃಷ್ಟಿಯಲ್ಲಿ ವಿಮರ್ಶೆ ನಿರಪೇಕ್ಷವಾಗಿ ನಿಷ್ಪಕ್ಷಪಾತವಾಗಿ ಇರಲು ಸಾಧ್ಯವೇ ಇಲ್ಲ.

ಸ್ತ್ರೀನಿಷ್ಠ ವಿಮರ್ಶೆ ‘ಕೃತಿನಿಷ್ಠ’ವಾಗಿಯೂ ಮತ್ತು ‘ಸಂದರ್ಭನಿಷ್ಠ’ವಾಗಿಯೂ ಇರಬೇಕೆಂದು ಆನಿಸ್ ಪ್ರ್ಯಾಟ್ (Annis Pratt) ವಾದಿಸುತ್ತಾಳೆ. ಸಾಹಿತ್ಯಿಕವಾಗಿ ಒಂದು ಕೃತಿ ಯಶಸ್ವಿಯಾಗಿದೆಯೇ ಇಲ್ಲವೇ ಎಂದು ನೋಡಲು ಕೃತಿನಿಷ್ಠ ನವ್ಯವಿಮರ್ಶೆ ಮತ್ತು ಒಂದು ಕೃತಿ ಅಷ್ಟು ಸಫಲವಾಗಿರದಿದ್ದರೂ ಏಕೆ ಮತ್ತು ಯಾವ ಚಾರಿತ್ರಿಕ ಕಾರಣಗಳಿಂದ ಸಫಲವಾಗಿಲ್ಲವೆಂದು ತಿಳಿಯಲು ಆ ಕೃತಿಯ ಸಾಮಾಜಿಕ – ಸಾಂಸ್ಕೃತಿಕ ಸಂದರ್ಭದ ವಿಮರ್ಶೆ ಇವೆರಡೂ ಮುಖ್ಯವೆಂದು ಪ್ರ್ಯಾಟ್ ವಾದಿಸುತ್ತಾಳೆ.

ಇನ್ನೂ ಕೇವಲ ಮೂರು – ನಾಲ್ಕು ದಶಕಗಳ ಇತಿಹಾಸವಿರುವ ‘ಸ್ತ್ರೀನಿಷ್ಠ’ ವಿಮರ್ಶೆಯ ಇಂದಿನ ಸಂಧಿಕಾಲದಲ್ಲಿ ಸಹಜವಾಗಿಯೇ ಆಂತರಿಕ ವಿರೋಧಗಳು ಹಾಗೂ ಭಿನ್ನಾಭಿಪ್ರಾಯಗಳು ಕಂಡುಬರುತ್ತವೆ. ಮುಖ್ಯವಾಗಿ ಮಾರ್ಕ್ಸ್‌ವಾದಿ ಧೋರಣೆಯನ್ನುಳ್ಳ ಮಿಶೆಲ್ ಬ್ಯಾರಟ್, ಜೂಲಿಯ ಕ್ರಿಸ್ಟೇವ ಮುಂತಾದವರು ಒಂದು ಪ್ರಮುಖ ಕವಲನ್ನು ಪ್ರತಿನಿಧಿಸಿದರೆ, ಜೇನ್ ಗ್ಯಾಲಪ್ ಮುಂತಾದವರು ಮತ್ತೊಂದು ವರ್ಗವನ್ನು ಪ್ರತಿನಿಧಿಸುತ್ತಾರೆ. ಸ್ತ್ರೀಕೇಂದ್ರಿತ ವಿಚಾರ ಪ್ರಣಾಲಿಯ ಮೂಲದಲ್ಲಿರುವ ಸಮಸ್ಯೆಯೆಂದರೆ : ಸ್ತ್ರೀಯು ಪುರುಷನಿಗಿಂತ ಯಾವ ರೀತಿಯಲ್ಲೂ ಭಿನ್ನಳ್ಳ ಎಂದು ನಂಬಿ ಪುರುಷರೊಡನೆ ಸಮಾನತೆಗೆ ಹೋರಾಡಬೇಕೇ; ಅಥವಾ ಪುರುಷನಿಗಿಂತ ಪ್ರಜ್ಞೆಯಲ್ಲಿ, ಪ್ರತಿಸ್ಪಂದನೆಯಲ್ಲಿ ಸ್ತ್ರೀ ಭಿನ್ನಳು, ಮತ್ತು ಈ ಭಿನ್ನತೆಯೇ ಸ್ತ್ರೀಯ ವಿಶಿಷ್ಟ ಶಕ್ತಿ ಎಂದು ಮುಂದುವರಿಯಬೇಕೇ ಎಂಬುದು. ಮೊದಲಿನ ಪೀಳಿಗೆಯ ಕೇಟ್ ಮಿಲೆಟ್ ಮುಂತಾದವರು ಪುರುಷ – ಸಮಾನತೆಗೆ ಒತ್ತುಕೊಟ್ಟರೆ ಇತ್ತೀಚೆಗಿನ ಜೂಲಿಯ ಕ್ರಿಸ್ಟೇವ್ ಮುಂತಾದವರು ಸ್ತ್ರೀಯ ವಿಶಿಷ್ಟ ಭಿನ್ನತೆಯನ್ನು ಎತ್ತಿಹಿಡಿಯುತ್ತಾರೆ. ಪುರುಷಕಲ್ಪಿತ ‘ನಿಯತಗಳು ಮತ್ತು ನಿಶ್ಚಿತಗಳು’ (fixities and difinities) ಇವುಗಳನ್ನು ಮೀರಿ ಸ್ತ್ರೀ – ಸಂವಹನ (feminist discourse) ನಾನಾ ಸಾಧ್ಯತೆಗಳುಳ್ಳ ಹಾಗೂ ಯಾವುದೇ ರೀತಿಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಟ್ಟುಪಾಡುಗಳಿಗೆ ಒಳಪಡದ ಮುಕ್ತ ಪ್ರಜ್ಞೆಯೇ ಸ್ತ್ರೀಸಾಹಿತ್ಯದ ಸ್ವೋಪಜ್ಞ ಕೊಡುಗೆಯಾಗಬಲ್ಲದೆಂದು ಜೂಲಿಯಾ ಕ್ರಿಸ್ಟೇವಾ ವಾದಿಸುತ್ತಾಳೆ.

ಅಖಿಲ ಭಾರತ ವ್ಯಾಪ್ತಿಯಲ್ಲಾದಂತೆ, ಕನ್ನಡದಲ್ಲೂ ಕಳೆದೆರಡು ದಶಕಗಳಿಂದ ಸ್ತ್ರೀವಾದ ಮತ್ತು ಸ್ತ್ರೀನಿಷ್ಠ ಚಿಂತನೆ ಸಾಕಷ್ಟು ಅರ್ಥಪೂರ್ಣವಾಗಿ ಬೆಳೆದಿದೆ, ಬೆಳೆಯುತ್ತಿದೆ. ಆದರೆ ಭಾರತೀಯ ಸ್ತ್ರೀವಾದಿಗಳು ಪಾಶ್ಚಿಮಾತ್ಯ ಸ್ತ್ರೀವಾದಿಗಳಿಗಿಂತ ಭಿನ್ನವಾದ ಕೆಲವು ವೈಚಾರಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ, ಭಾರತ, ಇಂಗ್ಲೆಂಡ್ – ಫ್ರಾನ್ಸ್‌ಗಳಂತಲ್ಲದೆ ಬಹುಧರ್ಮೀಯ, ಬಹುಧಾರ್ಮಿಕ, ಬಹುಭಾಷಿಕ ರಾಷ್ಟ್ರ. ಆದ್ದರಿಂದ ಡಿ. ಆರ್. ನಾಗರಾಜ್ ಮತ್ತು ಮನು ಚಕ್ರವರ್ತಿ ವಾದಿಸುವಂತೆ, ಭಾರತೀಯ ಸ್ತ್ರೀವಾದ ಪಾಶ್ಚಿಮಾತ್ಯ ಸ್ತ್ರೀವಾದದ ಸಾರಾಸಗಟು ಆಮದು ಆಗಬಾರದು ; ಮತ್ತು ಬಹು ಆಕೃತಿಯ ಭಾರತೀಯ ಸಮಾಜ – ಸಂಸ್ಕೃತಿಗಳಿಗೆ ತಕ್ಕದಾಗುವಂತೆ ನಮ್ಮದೇ ಆದ ಸ್ತ್ರೀವಾದವನ್ನು ಬೆಳೆಸಬೇಕು. (ವಿವರಗಳಿಗೆ ನೋಡಿ : ಮನು ಚಕ್ರವರ್ತಿ (ಸಂ.), ‘ಭಾರತೀಯ ಸ್ತ್ರೀವಾದ’, ೧೯೯೩).

ಭಾರತೀಯವಾದ ಸ್ತ್ರೀವಾದವನ್ನು ಬೆಳೆಸಲು ಪ್ರಯತ್ನಿಸುವಾಗ ಭಾರತೀಯ/ ಕನ್ನಡದ ಸ್ತ್ರೀವಾದಿಗಳು ಒಂದು ಬಗೆಯ ವೈಚಾರಿಕತೆಯ ದ್ವಂದ್ವದಲ್ಲಿ ಸಿಕ್ಕಿ ಬೀಳುತ್ತಾರೆ. ಈ ದ್ವಂದ್ವವನ್ನು ವಸಾಹತೋತ್ತರ ಸಾಂಸ್ಕೃತಿಕ – ವೈಚಾರಿಕ ಒತ್ತಡಗಳು ಮತ್ತು ಸ್ತ್ರೀ ಸ್ವಾತಂತ್ರ್ಯದ ಜರೂರು ಇವುಗಳ ನಡುವಿನ ಸಂಘರ್ಷವೆಂದು ಗುರುತಿಸಬಹುದು. ಒಂದೆಡೆ, ಭಾರತೀಯ ಸ್ತ್ರೀ (ಹಿಂದೂ / ಮುಸ್ಲಿಂ / ಸಿಖ್/ ಕ್ರಿಶ್ಚಿಯನ್…) ಧಾರ್ಮಿಕ – ಸಾಮಾಜಿಕ ನಿರ್ಬಂಧಗಳಲ್ಲಿ, ಸಿದ್ಧ ಪಡಿಯಚ್ಚುಗಳಲ್ಲಿ, ತನ್ನ ಅಸ್ತಿತ್ವವನ್ನೇ ನಷ್ಟಗೊಳಿಸಿಕೊಂಡಿದ್ದಾಳೆ ಎಂಬ ಸತ್ಯಕ್ಕೆ ಒತ್ತುಕೊಟ್ಟರೆ ವಸಾಹತುವಾದವನ್ನು (ವಸಾಹತುಶಾಹಿ ನೂತನ ಶಿಕ್ಷಣ ಪ್ರಣಾಲಿ, ಶಾಸನ ವ್ಯವಸ್ಥೆ ಇತ್ಯಾದಿಗಳಿಂದ ಭಾರತದಂತಹ ‘ಹಿಂದುಳಿದ’ ರಾಷ್ಟ್ರಗಳಿಗೆ ಪ್ರಗತಿಪರ ವೈಚಾರಿಕತೆಯನ್ನು ಕೊಟ್ಟಿತು ಎಂಬ ವಾದವನ್ನು) ಬಲಪಡಿಸಿದಂತಾಗುತ್ತದೆ. ಇದರ ವಿರುದ್ಧವಾಗಿ, ಭಾರತೀಯ ಸಾಂಸ್ಕೃತಿಕ – ಸಾಮಾಜಿಕ ಅನನ್ಯತೆಗೆ ಒತ್ತುಕೊಟ್ಟರೆ ಭಾರತೀಯ ಸ್ತ್ರೀಯ ಪಾರತಂತ್ರ್ಯವನ್ನೇ ವೈಭವೀಕರಿಸಿದಂತಾಗುತ್ತದೆ. ಇವೆರಡೂ ಸಾಧ್ಯತೆಗಳನ್ನು ನಾವಿಂದು ಭಾರತೀಯ / ಕನ್ನಡ ಸ್ತ್ರೀವಾದಿಗಳಲ್ಲಿ ನೋಡುತ್ತಿದ್ದೇವೆ. ವಸಾಹತುಶಾಹಿ ವಾದವನ್ನು ತೀವ್ರವಾಗಿ ವಿರೋಧಿಸುತ್ತಾ, ಭಾರತದಲ್ಲಿ ವೇದಕಾಲದಿಂದಲೂ ಸ್ತ್ರೀಗೆ ಸಮಾನ ಸ್ಥಾನಮಾನಗಳು ಮತ್ತು ಗೌರವಾದರಗಳು ಇದ್ದುವೆಂದು ಚಿ. ನ. ಮಂಗಳ ತಮ್ಮ ‘ಭಾರತೀಯ ಸ್ತ್ರೀ’ ಎಂಬ ಲೇಖನ ಮಾಲೆಯಲ್ಲಿ ವಾದಿಸುತ್ತಾರೆ. ಹಾಗೆಯೇ, ಮಹಾಭಾರತದಲ್ಲೇ ದಾಖಲಾಗಿರುವ ಮತ್ತು ಎರಡು ಸಾವಿರ ವರ್ಷಗಳಿಂದ ಹಿಂದೂ ಸಮಾಜದ ಮೇಲ್ವರ್ಗದ ಸ್ತ್ರೀಯರಿಗೆ ಶಾಪವಾಗಿ ಕಾಡಿದ್ದ ‘ಸತಿ’ ಪದ್ಧತಿಯ ಬಗ್ಗೆಯೂ ಮಧು ಕಿಶ್ವರ್, ಲತಾ ಮಣಿ ಮುಂತಾದವರು ಒಂದು ಬಗೆಯ ದ್ವಂದ್ವಾತ್ಮಕ ನಿಲುವನ್ನು ತಾಳುತ್ತಾರೆ. ಬ್ರಿಟಿಷರು ಬರುವವರೆಗೆ ಭಾರತದಲ್ಲಿ ‘ಸತಿ’ ಆಚರಣೆ ಗಣನೀಯವಾಗಿರಲಿಲ್ಲವೆಂದೂ, ‘ಸತಿ ನಿರ್ಮೂಲನ ಶಾಸನ’ವಾದ ನಂತರವೇ ಸತಿಯಾದ ಸ್ತ್ರೀಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತೆಂದೂ, ಮತ್ತು ಈ ವೃದ್ಧಿಗೆ ಕಾರಣ ವಸಾಹತುಶಾಹಿಗೆ ಪ್ರತಿರೋಧವಾಗಿ ಮೂಡಿಬಂದ ಅಸ್ಮಿತೆಯ ಒತ್ತಡವೆಂದೂ ಅವರು ವಾದಿಸುತ್ತಾರೆ. (ವಿವರಗಳಿಗೆ ನೋಡಿ : ಲತಾ ಮಣಿ, ೧೯೮೯, ಮಧು ಕಿಶ್ವರ್, ೧೯೯೯ ಇತ್ಯಾದಿ.)

ಭಾರತದಲ್ಲಿ ಸ್ತ್ರೀವಾದವನ್ನು ಮತ್ತಷ್ಟು ಗೊಂದಲಗೊಳಿಸುವ ಸಂಗತಿಯೆಂದರೆ ಇಲ್ಲಿಯ ಬಹುಸಂಖ್ಯಾತ ಧರ್ಮವಾದ ಹಿಂದೂ ಧರ್ಮವು ನಿರ್ಮಿಸಿರುವ ಜಾತಿಪದ್ಧತಿ. ಜಾತಿ – ಉಪಜಾತಿ – ಉಪ ಉಪಜಾತಿಗಳಾಗಿ ಸೀಳು ಸೀಳಾಗಿರುವ ಹಿಂದೂ ಸಮಾಜದಲ್ಲಿ, ಪ್ರಾಯಃ ಸ್ತ್ರೀಯರ ಬಗ್ಗೆ ಸಾಧಾರಣೀಕೃತ ಹೇಳಿಕೆ ಕೊಡಲು ಸಾಧ್ಯವೇ ಇಲ್ಲ. ಒಂದು ಜಾತಿಯ / ಕಸುಬಿನ ಸ್ತ್ರೀಯರ ಸಮಸ್ಯೆಗು ಹಾಗೂ ಆತಂಕಗಳು ಮತ್ತೊಂದು ಜಾತಿಯ / ಕಸುಬಿನ ಸ್ತ್ರೀಯರಿಗೆ ಅಪ್ರಸ್ತುತವಾಗುತ್ತವೆ. ಹಾಗೆಯೇ, ಜಾತಿಯ ಆಧಾರದ ಮೇಲೆ ನಿರ್ಮಿಸಲ್ಪಟ್ಟ ಶ್ರೇಣೀಕೃತ ಹಿಂದೂ ಸಮಾಜದಲ್ಲಿ ಮೇಲು ಮೇಲಕ್ಕೆ ಹೋದಂತೆ ಸ್ತ್ರೀಯ ಪಾರತಂತ್ರ್ಯ ಹೆಚ್ಚಾಗುತ್ತಾ ಹೋಗುತ್ತದಲ್ಲದೆ, ಮುಖ್ಯವಾದಿ ಅದು ಆ ಜಾತಿಯ ‘ವಿಶಿಷ್ಟತೆ’ಯಂತೆ ಭಾವಿಸಲಾಗುತ್ತದೆ. ಉತ್ತರ ಭಾರತದಲ್ಲಿ ಕುಲೀನ ಸ್ತ್ರೀಯರು ಮುಖಕ್ಕೆ ಹಾಕುವ ಘೋಷಾ ಅವರ ಕುಲೀನತೆಯ ಸಾಕ್ಷ್ಯವಾಗುತ್ತದೆ; ದಕ್ಷಿಣ ಭಾರತದಲ್ಲಿ ಬ್ರಾಹ್ಮಣ ಸ್ತ್ರೀಯರು ಮಡಿ – ಮೈಲಿಗೆ – ವ್ರತಾಚರಣೆಗಳಲ್ಲಿ ತಮ್ಮನ್ನು ದಂಡಿಸಿಕೊಳ್ಳುವುದೇ ಅವರ ‘ಬ್ರಾಹ್ಮಣ್ಯ’ದ ನಿದರ್ಶನವಾಗುತ್ತದೆ. ತೀವ್ರ ಆಲರ್ಜಿಯಿಂದ ಒದ್ದಾಡುತ್ತಿದ್ದರೂ ಕುಂಕುಮ ಹಾಕುವುದು ಸಾಂಸ್ಕೃತಿಕ ಕುರುಹಾಗುತ್ತದೆ. ಇಂತಹ ವಿಚಿತ್ರ ಪರಿಸ್ಥಿತಿಯಲ್ಲಿ ಭಾರತೀಯ ಸ್ತ್ರೀವಾದಿಗಳು ಏನೇ ಮಾಡಿದರೂ / ಮಾಡದಿದ್ದರೂ ಒಂದಲ್ಲ ಒಂದು ಬಗೆಯ ಬಿಕ್ಕಟ್ಟಿನಲ್ಲಿ ಸಿಕ್ಕಿ ಬೀಳುವ ಸಾಧ್ಯತೆಯಿದೆ.

ಕಳೆದೆರಡು ದಶಕಗಳಲ್ಲಿ ಕನ್ನಡದಲ್ಲಿ ಸಾಕಷ್ಟು ಸ್ತ್ರೀವಾದೀ ಚಿಂತನೆ ಬೆಳೆದಿದೆ. ಕನ್ನಡದ ಪ್ರಮುಖ ಸ್ತ್ರೀವಾದೀ ವಿಮರ್ಶಕಿಯರೆಂದರೆ ತೇಜಸ್ವಿನಿ ನಿರಂಜನ, ವಿಜಯಾ ದಬ್ಬೆ, ಬಿ.ಎನ್. ಸುಮಿತ್ರಾಬಾಯಿ, ನೇಮಿಚಂದ್ರ, ಎನ್. ಗಾಯತ್ರಿ, ಬಿ.ಎಂ. ರೋಹಿಣಿ ಮುಂತಾದವರು. ಹೆಚ್ಚಿನ ವಿವರಗಳಿಗೆ ನೋಡಿ : ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ (ಸಂ.) ಸ್ತ್ರೀವಾದಿ ಸಾಹಿತ್ಯ ವಿಮರ್ಶೆ (೧೯೯೪); ಬಿ.ಎನ್. ಸುಮಿತ್ರಾಬಾಯಿ ಮತ್ತು ಎನ್. ಗಾಯತ್ರಿ (ಸಂ.), ಸ್ತ್ರೀವಾದಿ  ಪ್ರವೇಶಿಕೆ (೧೯೯೫); ಬರಗೂರು ರಾಮಚಂದ್ರಪ್ಪ (ಸಂ.), ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆ (೧೯೯೩) ಇತ್ಯಾದಿ.

ಒಟ್ಟಾರೆಯಾಗಿ ಹೇಳಬೇಕಾದರೆ, ಸ್ತ್ರೀನಿಷ್ಠ ಚಿಂತನೆಯನ್ನು ‘ಜೈವಿಕ ನಿಯತಿವಾದ’ದ (Biological Determinism) ವಿರುದ್ಧ ವಿಶ್ವಾದ್ಯಂತ ನಡೆದಿರುವ ಹೋರಾಟವೆಂದು ನೋಡಬಹುದು. ಮಾರ್ಕ್ಸ್ ಹೇಳುವಂತೆ “ಒಂದು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸ್ತ್ರೀ ಪುರುಷ ಸಂಬಂಧದ ಸ್ವರೂಪವು ಮಾನವ ತನ್ನ ಪಶುಸ್ಥಿತಿಯಿಂದ ಮಾನವತೆಯ ದಿಕ್ಕಿನಲ್ಲಿ ಎಷ್ಟು ದೂರ ಒಂದು ಕಾಲಘಟ್ಟದಲ್ಲಿ ಸಾಗಿದ್ದಾನೆಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ” (ಸಿಮೋನ್ ದ ಬೋವಾ ಉದಾಹರಿಸಿದಂತೆ).

* * *

By |

ಭಾನುವಾರ, ಜೂನ್ 13, 2021

Zimbabwean Author Tsitsi Dangarembga wins PEN Pinter prize

Zimbabwean Author Tsitsi Dangarembga wins PEN Pinter prize

Tsitsi Dangarembga, the booker-shortlisted writer from Zimbabwe, has won the PEN Pinter Prize 2021. According to the website, the annual award is given to an author who has a ‘significant body of poetry, essays, plays, or fiction of outstanding literary merit, written in English’.

On winning the prestigious honour, Dangarembga was quoted saying “I am grateful that my casting- in the words of Harold Pinter- an ‘unflinching, unswerving gaze' upon my country and its society has resonated with many people across the globe and this year with the jury of PEN Pinter Prize. I believe that the positive reception of literary works like mine helps to prove that we can unite around that which is positively human”.

Tsitsi Dangarembga, the author of the book ‘Nervous Conditions’, was arrested in 2020 while she was protesting and taking a stand against corruption. She was also shortlisted for Booker Prize 2020 for her work, ‘This Mournable Body’.

While announcing the winner of the PEN Pinter Prize 2021, English PEN also informed via Twitter that Tsitsi Dangarembga will be receiving the award at a public ceremony on October 11, 2021, in partnership with the British Library.

We are so pleased to hear that 2020 Booker Prize shortlisted author @efie41209591 has won the PEN Pinter Prize 2021. Congratulations Tsitsi. #PENPinterPrize https://t.co/nMuUcW6HH4

An acclaimed novelist:

Tsitsi Dangarembga is the author of the book ‘Nervous Conditions’, which she wrote when she was 25. Her work has been described as one of the important novels of the 20th century. The book is a story of a village girl called Tambudzai.

Nervous Conditions was then followed by ‘The Book of Not’, which is about Tambu’s teenage years, and the third part of the trilogy ‘This Mournable Body’, which was also Booker-shortlisted, was set in the Post-colonial Zimbabwe of the 1990s.

A Film-maker, an activist:

Dangarembga is also a playwright, filmmaker, and activist, who was arrested in 2020 while protesting in Harare.

She was charged with an intention to incite public violence. However, her case did not progress and the free speech organisations, along with her fellow writers, called for the charges against her to be dropped.

The English PEN Trustee, Claire Armitstead stated that through her trilogy of novels, she has chartered the development of Zimbabwe from a British Colony to an autocratic and troubled free state.

In doing so, Dangarembga has held a magnifying glass up to the struggles of the ordinary people, in so many parts of the world, to lead good lives in the fractured and increasingly corrupt new world order.

The prestigious prize goes to a writer of outstanding literary merit who, as Harold Pinter had put in his Nobel speech, shows a fierce intellectual determination to define the real truth of our lives and societies.

The previous winners of the award include Margaret Atwood, Chimamanda Ngozi Adichie, and Linton Kwesi Johnson.

PEN Pinter Prize was established in 2009. It is given by the free speech campaigners English PEN in the memory of Nobel-laureate playwright Harold Pinter. The website informs that the winning writer must be a resident in the Republic of Ireland, Britain, the commonwealth, or the former commonwealth.

World day against child labour 2021: theme, history, significance


World day against child labour 2021: theme, history, significance

Each year, June 12 is observed as World Day Against Child Labour to raise awareness and end child labour on a global scale.

Millions of children across the world are deprived of health, education, basic rights, and freedom because they are trapped in the worst forms of child labour such as illicit activities, hazardous environments, slavery, and all forms of forced labour.

2021 has been declared as the International Year for the Elimination of Child Labour by the UN General Assembly.

World Day Against Child Labour 2021 is the first child labour day being observed since the ratification of the ILO’s Convention No. 182 on the Worst Forms of Child Labour.

World Day in 2021 comes at a time when the pandemic poses the biggest threat of reversing all the progress in ending child labour.

For the first time, the International Labour Organization and UNICEF jointly published a report Child Labour: 2020 global estimates, trends, and the road forwards to end child labour.

As per the report, there has been a 38 per cent decrease in child labour in the last decade, however, 152 million children are still trapped in child labour.

• Act Now, End Child Labour is the theme for World Day Against Child Labour 2021.

• This year, a ‘Week of Action’ will be launched on June 12, 2021, comprising of activities and events that will be opportunities to showcase progress in executing ‘2021 Action Pledges’ for the 2021 International Year for the Elimination of Child Labour.

• World Day Against Child Labour was launched by the International Labour Organization (ILO) in 2002 with an aim to raise awareness and end child labour on a global scale.

• Each year on June 12, the world comes together to take immediate and effective actions to eradicate child labour.

• As per the United Nations, approximately one in ten children across the world are trapped in child labour. Since 2000, the number of children in child labour has declined by 94 million however in recent years, the rate has slowed down by two-thirds.

• The UN Sustainable Development Goals Target 8.7 focuses on ending child labour in all its forms by 2025.

• Countrywise, the UN states that Africa has the highest number of children, around 72 million in child labour. Asia and Pacific regions rank second highest in terms of child labour with around 62 million children trapped in child labour. America, Europe and Centra Asia, and the Arab States account for 11 million, 6 million, and 1 million children in child labour, respectively.

• The World Day Against Child Labour 2021 comes at a time when the pandemic poses the biggest threat at reversing all the progress in ending child labour. The 2021 Action Pledges this year will make way to end child labour by 2025.

• Individuals, governments, organizations, and everyone around the world can take action and make their 2021 Action Pledge.

Pulitzer prizes-2021, the new York time's, associated press win big for civid -19, black lives matter coverage


The Pulitzer Prizes 2021, the highest honour in journalism, were announced on June 11, 2021.

The awards recognized the work of news outlets and their groundbreaking coverage of various historic events that shaped 2020, including devastating global pandemic, racial justice reckoning, or polarizing Presidential elections in the US.

One of the biggest contenders for the 2021 Pulitzer Prize was the New York Times investigation of the Income Tax information that the former US President Donald Trump kept from the public.

Even though the story did not take home the prize, The Times won two honours- Public Service and Criticism Pulitzers- for its extensive and in-depth COVID-19 coverage.

Another notable honour, the Breaking News Award went to the Star Tribune of Minneapolis for its reporting following George Floyd’s killing.

The Associated Press bagged two Pulitzer Prizes in photography for its coverage of the racial injustice protests as well as the Coronavirus’s toll on the elderly.

Congratulations to the 105th class of #Pulitzer Prize winners and finalists!

Read the full list of those recognized by the Pulitzer Board, watch the video of the Prize announcement and explore the work:https://t.co/zbpKDjSASO

Pulitzer Prizes 2021 were originally scheduled for April 19, but the awards were postponed for the second consecutive year so that its 18 members board can deliberate in person, rather than remotely.

Notably, the 18-year old Darnella Frazier was honoured with the Special Citation for her cell phone recording of George Floyd’s murder. Her video spurred protests against police brutality all over the world, highlighting the significant role of citizens in journalists’ quest for truth and justice.

Congratulations to #DarnellaFrazier#Pulitzer pic.twitter.com/MdXk1Sspqo

You can check the complete list of winners of 2021 Pulitzer Prizes for journalism, photography below:

Breaking News Reporting

Star Tribune

Investigative Reporting

The Boston Globe

Explanatory Reporting

The Atlantic and Reuters

Local Reporting

Tampa Bay Times

National Reporting

Al.com, Birmingham; IndyStar, Indianapolis; the Invisible Institute, Chicago

International Reporting

Buzzfeed News

Feature Writing

The California Sunday Magazine and Runner’s World

Commentary

Richmond Times-Dispatch

Criticism

The New York Times

Editorial Writing

Los Angeles Times

Breaking News Photography

Photography Staff of Associated Press

Feature Photography

Associated Press

Public Service

The New York Times

It is an award for achievements in magazine and online journalism, newspaper, literature, and musical composition. Pulitzer Prize was established in 1917 by the provisions in the will of Joseph Pulitzer, who made his fortune as a newspaper publisher. The prize is administered by the Columbia University.

Each winner of the Pulitzer Prize receives a certificate and a $15000 cash award. The winner in the public service category of Pulitzer is awarded a gold medal.