ಶುಕ್ರವಾರ, ಫೆಬ್ರವರಿ 4, 2022

ಒಂಟಿಯಾಗಿರುವ ಆಫ್ರಿಕಾ ಮೂಲದ ಆನೆಯನ್ನು ಮರಳಿ ತಾಯ್ನಾಡಿಗೆ ಕಳುಹಿಸುವಂತೆ ಒತ್ತಾಯಿಸಿ ಹೈಕೋರ್ಟ್ ನಲ್ಲಿ ಅರ್ಜಿ

ಒಂಟಿಯಾಗಿರುವ ಆಫ್ರಿಕಾ ಮೂಲದ ಆನೆಯನ್ನು ಮರಳಿ ತಾಯ್ನಾಡಿಗೆ ಕಳುಹಿಸುವಂತೆ ಒತ್ತಾಯಿಸಿ ಹೈಕೋರ್ಟ್ ನಲ್ಲಿ ಅರ್ಜಿ

04th February, 2022 08:33 IST

ದೆಹಲಿ: ಒಂಟಿಯಾಗಿರುವ ಆಫ್ರಿಕಾದ ಆನೆಯನ್ನು ಭಾರತದಿಂದ ಮರಳಿ ತನ್ನ ತಾಯ್ನಾಡಿಗೆ ಕಳುಹಿಸುವಂತೆ ಲಾಭೋದ್ದೇಶವಿಲ್ಲದ ಯೂತ್ ಫಾರ್ ಅನಿಮಲ್ಸ್ ಸಂಸ್ಥಾಪಕಿ ನಿಕಿತಾ ಧವನ್ ಮನವಿ ಮಾಡಿದ್ದಾರೆ.

ಇಪ್ಪತ್ನಾಲ್ಕು ವರ್ಷಗಳ ಹಿಂದೆ ಅಂದರೆ 1998ರಲ್ಲಿ, ಶಂಕರ್ ಎಂಬ ಆನೆಯನ್ನು ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿತ್ತು. ಈ ಆನೆ ದೆಹಲಿ ಮೃಗಾಲಯದಲ್ಲಿದೆ. ಅದರ ದುಸ್ಥಿತಿ ನೋಡಿ ಅದನ್ನು ಮರಳಿ ಕಳುಹಿಸುವಂತೆ ಹೈಕೋರ್ಟ್ ನಲ್ಲಿ ನಿಕಿತಾ ಮನವಿ ಮಾಡಿದ್ದಾರೆ.

ಹೈಕೋರ್ಟ್ ನಲ್ಲಿ ನಿಕಿತಾ ಧವನ್ ಸಲ್ಲಿಸಿರುವ ಅರ್ಜಿಯಲ್ಲಿ ಶಂಕರ್ ಹಲವಾರು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದೆ ಎಂದು ಅವರು ದೂರಿದ್ದಾರೆ. ಹೀಗಾಗಿ ಈ ಮೃಗಾಲಯದಿಂದ ಅದನ್ನು ಮರಳಿ ಆಫ್ರಿಕಾದ ಆನೆಗಳಿರುವ ವನ್ಯಜೀವಿ ಅಭಯಾರಣ್ಯದಲ್ಲಿ ಪುನರ್ವಸತಿ ಮಾಡಬೇಕೆಂದು ನಿಕಿತಾ ಒತ್ತಾಯಿಸಿದ್ದಾರೆ.

ಅಲ್ಲದೆ ಮೃಗಾಲಯದ ಅಧಿಕಾರಿಗಳು ಗಜರಾಜನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಶಂಕರ್ ಮೂಲಕ, ದೇಶದ ಎಲ್ಲಾ ಬಂಧಿತ ಆನೆಗಳ ದುರವಸ್ಥೆಯ ಬಗ್ಗೆ ಅರಿವು ಮೂಡಿಸಲು ಬಯಸುವುದಾಗಿ ನಿಕಿತಾ ಧವನ್ ತಿಳಿಸಿದ್ದಾರೆ.

ಕೆಲವು ವರ್ಷಗಳವರೆಗೆ, ಶಂಕರ್ ಮತ್ತು ಬಾಂಬೆ ಬಹಳ ಚೆನ್ನಾಗಿಯೇ ಆರೋಗ್ಯವಾಗಿ ಬದುಕು ಸವೆಸುತ್ತಿತ್ತು. ಆದರೆ, 2005 ರಲ್ಲಿ ಬಾಂಬೆ ಅನಿರೀಕ್ಷಿತವಾಗಿ ಮೃತಪಟ್ಟ ಬಳಿಕ ಶಂಕರ್ ಒಂಟಿ ಜೀವನ ನಡೆಸುತ್ತಿದ್ದ. ಈಗ 26 ವರ್ಷಕ್ಕಿಂತ ಮೇಲ್ಪಟ್ಟ ಗಜರಾಜನನ್ನು ಉಕ್ಕಿನ ಕಂಬಗಳು ಮತ್ತು ಲೋಹದ ಬೇಲಿಗಳ ಬ್ಲಾಕ್ ಆವರಣದಲ್ಲಿ ಇರಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಮೃಗಾಲಯಕ್ಕೆ ಭೇಟಿ ನೀಡಿ ಶಂಕರ್‌ ದುಸ್ಥಿತಿ ನೋಡಿದ ನಂತರ ನಿಕಿತಾ ಧವನ್ ಅದರ ಬಿಡುಗಡೆಗಾಗಿ ಹೋರಾಡಲು ನಿರ್ಧರಿಸಿದ್ದು, ಇದೀಗ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ