ಶನಿವಾರ, ಮಾರ್ಚ್ 12, 2022

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

ಹಣಕಾಸು ಆಯೋಗ

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

Posted On: 09 NOV 2020 1:00PM

ಶ್ರೀ ಎನ್.ಕೆ. ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗ (XVFC) ಇಂದು 2021-22 ರಿಂದ 2025-26ನೇ ಸಾಲಿನ ತನ್ನ ವರದಿಯನ್ನು ಭಾರತದ ಮಾನ್ಯ ರಾಷ್ಟ್ರಪತಿಯವರಿಗೆ ಸಲ್ಲಿಸಿತು. ಆಯೋಗದ ಸದಸ್ಯರಾದ ಶ್ರೀ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ. ಅಶೋಕ್ ಲಹಿರಿ ಮತ್ತು ಡಾ. ರಮೇಶ್ ಚಂದ್ ಅವರೊಂದಿಗೆ ಆಯೋಗದ ಕಾರ್ಯದರ್ಶಿ ಶ್ರೀ ಅರವಿಂದ್ ಮೆಹ್ತಾ ಅವರು ಅಧ್ಯಕ್ಷರ ಜೊತೆಗಿದ್ದರು.

ಉಲ್ಲೇಖಿತ ನಿಯಮಗಳ (ಟಿಓಆರ್) ಅನ್ವಯ, 2021-22 ರಿಂದ 2025-26ರ ಸಾಲಿನವರೆಗೆ ಐದು ವರ್ಷಗಳ ಕಾಲದ ತನ್ನ ಶಿಫಾರಸುಗಳನ್ನು 2020ರ ಅಕ್ಟೋಬರ್ 30ರೊಳಗೆ ಸಲ್ಲಿಸುವುದು ಆಯೋಗಕ್ಕೆ ಕಡ್ಡಾಯವಾಗಿತ್ತು. ಕಳೆದ ವರ್ಷ, ಆಯೋಗವು 2020-21ರ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿತ್ತು, ಕೇಂದ್ರ ಸರ್ಕಾರ ಅದನ್ನು ಅಂಗೀಕರಿಸಿತ್ತು ಹಾಗೂ 2020 ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿತ್ತು.

ಉಲ್ಲೇಖಿತ ನಿಯಮಗಳನ್ವಯ ಅನನ್ಯ ಮತ್ತು ವಿಸ್ತೃತ ಶ್ರೇಣಿಯ ವಿಚಾರಗಳ ಕುರಿತಂತೆ ತನ್ನ ಶಿಫಾರಸುಗಳನ್ನು ನೀಡಲು ಆಯೋಗಕ್ಕೆ ಕೇಳಲಾಗಿತ್ತು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗಿನ ತೆರಿಗೆ ಹಂಚಿಕೆ,  ಸ್ಥಳೀಯ ಸರ್ಕಾರಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ವಲಯ, ಡಿಬಿಟಿ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ  ಹಲವು ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಕಾರ್ಯಕ್ಷಮತೆ ಪ್ರೋತ್ಸಾಹಕ ಪರೀಕ್ಷೆ ಮತ್ತು ಶಿಫಾರಸು ಮಾಡಲು ಆಯೋಗವನ್ನು ಕೇಳಲಾಗಿತ್ತು. ರಕ್ಷಣಾ ಮತ್ತು ಆಂತರಿಕ ಭದ್ರತೆಗೆ ಧನ ಸಹಾಯಕ್ಕಾಗಿ ಪ್ರತ್ಯೇಕ ಕಾರ್ಯವಿಧಾನವನ್ನು ಸ್ಥಾಪಿಸಬೇಕೇ ಎಂದು ಪರಿಶೀಲಿಸಲು ಮತ್ತು ಹಾಗಿದ್ದಲ್ಲಿ ಅಂತಹ ಕಾರ್ಯವಿಧಾನವನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂದೂ ಕೇಳಲಾಗಿತ್ತು. ಆಯೋಗವು ಈ ವರದಿಯಲ್ಲಿ ತನ್ನ ಎಲ್ಲಾ ಅಭಿಮತವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿದೆ.

ಈ ವರದಿಯನ್ನು ನಾಲ್ಕು ಸಂಪುಟಗಳಲ್ಲಿ ಸಂಯೋಜಿಸಲಾಗಿದೆ. ಸಂಪುಟ 1 ಮತ್ತು 2 ಈ ಹಿಂದಿನಂತೆಯೇ ಪ್ರಮುಖ ವರದಿ ಮತ್ತು ಅದಕ್ಕೆ ಪೂರಕವಾದ ಪರಿವಿಡಿಗಳನ್ನು ಒಳಗೊಂಡಿದೆ. ಸಂಪುಟ 3 ಕೇಂದ್ರ ಸರ್ಕಾರಕ್ಕೆ ಮೀಸಲಾಗಿದ್ದು,  ಮಧ್ಯಮ-ಅವಧಿಯ ಸವಾಲುಗಳು ಮತ್ತು ಮಾರ್ಗಸೂಚಿಯೊಂದಿಗೆ ಪ್ರಮುಖ ವಿಭಾಗಗಳನ್ನು ಹೆಚ್ಚು ಆಳವಾಗಿ ಪರಿಶೀಲಿಸುತ್ತದೆ. ಸಂಪುಟ 4 ಸಂಪೂರ್ಣವಾಗಿ ರಾಜ್ಯಗಳಿಗೆ ಮೀಸಲಾಗಿದ್ದು, ಆಯೋಗವು ಪ್ರತಿ ರಾಜ್ಯದ ಹಣಕಾಸನ್ನು ಬಹಳ ಆಳವಾಗಿ ವಿಶ್ಲೇಷಿಸಿದೆ ಮತ್ತು ಪ್ರತ್ಯೇಕವಾಗಿ ರಾಜ್ಯಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಎದುರಿಸಲು ರಾಜ್ಯ-ನಿರ್ದಿಷ್ಟ ಪರಿಗಣನೆಗಳನ್ನೂ ಒಳಗೊಂಡಿದೆ.

ಕೇಂದ್ರ ಸರ್ಕಾರ ಈ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ತರುವಾಯ ವರದಿಯಲ್ಲಿರುವ ಶಿಫಾರಸುಗಳ ಬಗ್ಗೆ ವಿವರಣಾತ್ಮಕ ಜ್ಞಾಪನಾ ಪತ್ರ / ಕೈಗೊಂಡ ಕ್ರಮದ ವರದಿಯೊಂದಿಗೆ ಇದು ಸಾರ್ವಜನಿಕ ತಾಣಗಳಲ್ಲಿ ಲಭ್ಯವಾಗಲಿದೆ. ವರದಿಯ ಮುಖಪುಟ ಮತ್ತು ಶೀರ್ಷಿಕೆ ಈ ವರದಿಯಲ್ಲಿ ವಿಶಿಷ್ಟವಾಗಿವೆ- “ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ” ಹಾಗೂ ರಾಜ್ಯಗಳು ಮತ್ತು ಒಕ್ಕೂಟದ ನಡುವಿನ ಸಮತೋಲನವನ್ನು ಸೂಚಿಸುವ ರಕ್ಷಾಪುಟದಲ್ಲಿ ಮಾಪಕ ಬಳಸಲಾಗಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ