ಬುಧವಾರ, ಜನವರಿ 25, 2023

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

ಮೀರ್ ಸಾದಿಕ್

ಹೈದರಾಲಿಯ ಕಾಲದ ಮೈಸೂರು ಸಂಸ್ಥಾನದ ಅಧಿಕಾರಿಗಳಲ್ಲೊಬ್ಬ. ಪ್ರೀತಿ, ವಿಶ್ವಾಸಗಳಿಗೆ ಪಾತ್ರನಾಗಿದ್ದುದರಿಂದ ಟಿಪ್ಪುಸುಲ್ತಾನ್ ಇವನನ್ನೇ ತನ್ನ ದಿವಾನನಾಗಿ ನೇಮಿಸಿದ. ಈತ ಕಂದಾಯ ಮತ್ತು ಹಣಕಾಸಿನ ಅಧ್ಯಕ್ಷನೂ ಆಗಿದ್ದ.

ಟಿಪ್ಪುವಿಗೆ ಕಾದಿದ್ದ ಕರಾಳ ಭವಿಷ್ಯ ಮನಗಂಡ ಈತ ಬ್ರಿಟಿಷರೊಂದಿಗೆ ಸಹಕರಿಸಲು ಆರಂಭಿಸಿದ. ಬ್ರಿಟಿಷ್ ಗವರ್ನರ್ ಜನರಲ್ ಕಾರ್ನ್‍ವಾಲೀಸ್ ಮೈಸೂರಿನ ಮೇಲೆ ದಂಡೆತ್ತಿ ಬಂದ ಕಾಲದಿಂದಲೇ ಅವರೊಂದಿಗೆ ಸಂಪರ್ಕ ಬೆಳೆಸಿದ. ಶ್ರೀರಂಗಪಟ್ಟಣದ ಒಪ್ಪಂದದ ತನಕ ಮಾತ್ರ (1792) ಟಿಪ್ಪುವಿಗೆ ನಿಷ್ಠೆಯಿಂದಿದ್ದ. ದಿವಾನನ ಇಂಗಿತ ಅರಿತ ಟಿಪ್ಪು ಇವನನ್ನು ಬಂಧಿಸಿ ಸೆರೆಯಲ್ಲಿಟ್ಟ. ವಿಧೇಯನಾಗಿರುವ ಭರವಸೆಯ ಮೇಲೆ ಮೊದಲಿನ ಸ್ಥಾನದಲ್ಲಿ ನೇಮಿಸಿದ. ಆದರೆ ಇವನು ಸ್ವಾಮಿದ್ರೋಹಿಯಾಗಿಯೇ ಮುಂದುವರೆದ. ಇವನೊಂದಿಗೆ ಅನೇಕ ಅಧಿಕಾರಿಗಳು ಬ್ರಿಟಿಷರು ಹೂಡಿದ ಒಳಸಂಚಿನಲ್ಲಿ ಭಾಗಿಯಾಗಿದ್ದರು. ಇದನ್ನು ಅರಿತ ಟಿಪ್ಪು ಗಲ್ಲಿಗೇರಿಸಬೇಕಾಗಿದ್ದ ದೇಶದ್ರೋಹಿಗಳ ಪಟ್ಟಿ ತಯಾರಿಸಿದ. ಆ ಪಟ್ಟಿಯಲ್ಲಿ ಮೊದಲ ಹೆಸರು ಮೀರ್ ಸಾದಿಕ್‍ನದು. ದರ್ಬಾರಿನ ಸೇವಕನೊಬ್ಬ ಇದನ್ನು ಅರಿತು ವಿಷಯವನ್ನು ಸಾದಿಕ್‍ನಿಗೆ ತಿಳಿಸಿದ. ಆಗ ಈತ ಟಿಪ್ಪುವಿನ ಆಜ್ಞೆ ಕಾರ್ಯಗತಗೊಳ್ಳುವುದಕ್ಕೆ ಮುನ್ನವೇ ಕೋಟೆಯನ್ನು ಬ್ರಿಟಿಷರಿಗೆ ಒಪ್ಪಿಸಲು ಏರ್ಪಾಡುಮಾಡಿದ. ಜೊತೆಗೆ ಟಿಪ್ಪು ತಪ್ಪಿಸಿಕೊಳ್ಳದಂತೆಯೂ ಕ್ರಮ ಕೈಗೊಂಡ.

ಈತ ಬ್ರಿಟಿಷರೊಂದಿಗೆ ನಡೆಸಿದ ಒಳಸಂಚಿನಂತೆ 1799 ಮೇ 2ರಂದು ಕೋಟೆಯನ್ನು ಕಾಯುತ್ತಿದ್ದ ಮೈಸೂರಿನ ಸೈನಿಕರನ್ನು ವೇತನ ಹೆಚ್ಚಳದ ನೆಪದಲ್ಲಿ ಹಿಂದಕ್ಕೆ ಕರೆಯಿಸಿಕೊಂಡ. ಕಾವಲು ಸೈನಿಕರ ನಿರ್ಗಮನದ ವಿರುದ್ಧ ಪ್ರತಿಭಟಿಸುವವರಾರೂ ಇರಲಿಲ್ಲ. ಸುಲ್ತಾನನ ನಿಷ್ಠಾವಂತ ಸೇನಾನಿ ಸಯಿದ್ ಗಫಾರ್ ಫಿರಂಗಿ ಗುಂಡಿಗೆ ಬಲಿಯಾಗಿದ್ದ. ಅತನು ಮರಣಹೊಂದಿದ ಕೂಡಲೇ ಮೀರ್ ಸಾದಿಕ್ ಕೋಟೆಯ ಮೇಲಿಂದ ಬಿಳಿಕರವಸ್ತ್ರ ಹಿಡಿದಾಗ ಕಂದಕದಲ್ಲಿ ಅಡಗಿಕೊಂಡಿದ್ದ ಬ್ರಿಟಿಷ್ ಯೋಧರು ಮುನ್ನೆಡೆದು ಕೋಟೆಯ ಸಂಧಿಯೊಂದರಲ್ಲಿ ತಮ್ಮ ಧ್ವಜ ನೆಟ್ಟರು. ಮೀರ್ ಸಾದಿಕನ ಕುತಂತ್ರ ತನ್ನ ಒಡಯನನ್ನೇ ಬಲಿತೆಗೆದುಕೊಂಡಿತು. ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಟಿಪ್ಪುವಿನ ಸೊಕ್ಕನ್ನಡಗಿಸುವ ಆಸೆ ಫಲಿಸಿತು. ಸಾದಿಕ್ ತನ್ನ ಕುತಂತ್ರದ ಫಲವನ್ನುಣ್ಣಲು ಬಹಳ ಕಾಲ ಬಾಳಲಿಲ್ಲ. ಬ್ರಿಟಿಷರೊಂದಿಗೆ ಸೇರಿಕೊಳ್ಳಲು ರಹಸ್ಯವಾಗಿ ಪಲಾಯನಕ್ಕೆ ಯತ್ನಿಸಿದಾಗ ಮೈಸೂರಿನ ಸೈನಿಕರೇ ಇವನನ್ನು ಕೊಲೆಗೈದರು. ಇವನ ದುಷ್ಕøತದ ಬಗ್ಗೆ ತಿಳಿದ ಅವರು ಶವವನ್ನು ಹೂತ ಮೇಲೂ ಹೊರತೆಗೆದು ಅವಮಾನ ಪಡಿಸಿದರು. ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಶವವನ್ನು ಸುತ್ತುವರಿದು ಅದರ ಮೇಲೆ ಹೊಸಲು ಚೆಲ್ಲಿದರು. ಎರಡು ವಾರಗಳ ಅನಂತರ ಪರಿಸ್ಥಿತಿ ಸುಧಾರಿಸಲು ಬ್ರಿಟಿಷರೇ ಮಧ್ಯೆ ಪ್ರವೇಶಿಸಬೇಕಾಯಿತು. ಟಿಪ್ಪುವಿನ ಸ್ಮರಣಾರ್ಥ ಶ್ರೀರಂಗಪಟ್ಟಣ ಸಂದರ್ಶಿಸುವವರು ಇಂದಿಗೂ ಮೀರ್ ಸಾದಿಕ್ ಕೊಲೆಗೀಡಾದ ಜಾಗದಲ್ಲಿ ಕಲ್ಲೆಸೆಯುತ್ತಾರೆ. (ಸಿ.ಬಿ.ಆರ್.)

ಕೃಪೆ:- ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ