ಭಾನುವಾರ, ಆಗಸ್ಟ್ 14, 2016

ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ (೨)

ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ (೨)

ಜಕಾತಿ:

ಇದು ಸಂವಿಧಾನದ ಏಳನೆಯ ಅನುಬಂಧದ ಎರಡನೆಯ ಪಟ್ಟಿ(ರಾಜ್ಯ ಶಾಸನಾಧೀನ ವಿಷಯಗಳ ಪಟ್ಟಿ)ಯಲ್ಲಿ ನಂ. ೫೨ ಇದ್ದು ೧೯೭೯ರ ವರೆಗೆ ಇದನ್ನು ನಗರ ಪಾಲಿಕೆಗಳು ವಿಧಿಸಿ ವಸೂಲಿ ಮಾಡುತ್ತಿದ್ದವು. ವರಮಾನವೂ ಗಣನೀಯ ಮಟ್ಟದಲ್ಲಿ ಇರುತ್ತಿತ್ತು. ಆದರೆ ಇದರ ವಿರುದ್ಧ ಅರ್ಥಶಾಸ್ತ್ರಜ್ಞರೂ, ಆಡಳಿತ ತಜ್ಞರೂ, ಅನೇಕ ಸರಕಾರಿ ಸಮಿತಿಗಳೂ ಪ್ರಬಲವಾದ ವಾದಗಳನ್ನು ಮಂಡಿಸಿದ್ದರು. ಮುಖ್ಯವಾಗಿ –

i) ಜಕಾತಿ ವಸೂಲಿ ಕ್ರಮದಿಂದ ಸಾರಿಗೆ ವಾಹನಗಳ ನಿಲುಗಡೆ, ಮುಂತಾದವುಗಳಿಂದ ಸಾಮಾನು ಸಾರಿಗೆಗೆ ಹೆಚ್ಚಿನ ಅಡಚಣೆ, ವಿಳಂಬ ಉಂಟಾಗಿ ಸಾರಿಗೆಯ ಖರ್ಚು ವೃಥಾ ಹೆಚ್ಚಾಗಿ, ಗ್ರಾಹಕರಿಗೆ, ಕಸುಬು ಉದ್ದಿಮೆಗಳಿಗೆ ಭಾರವಾಗಿ ರಾಷ್ಟ್ರಕ್ಕೇ ಆರ್ಥಿಕ ಹಾನಿಯಾಗುತ್ತಿದೆ.

ii) ವಸೂಲಿ ಕ್ರಮದಲ್ಲಿ ಸೋರುವಿಕೆ ಮತ್ತು ಭ್ರಷ್ಟಾಚಾರಗಳಿಗೆ ವಿಶೇಷ ಆಸ್ಪದವಿದೆ.

iii) ಜಕಾತಿಯಿಂದ ಸಿಗಬಹುದಾದ ವರಮಾನವನ್ನು ಪಡೆಯಲು ಮೇಲಿನ ಆಕ್ಷೇಪಣೆಗಳಿಲ್ಲದ ಪರ್ಯಾಯ ವ್ಯವಸ್ಥೆ ಸಾಧ್ಯವಿದೆ.

ಕರ್ನಾಟಕದಲ್ಲಿ ಜಕಾತಿಯನ್ನು ೧೯೭೯ರಲ್ಲಿ ರದ್ದು ಮಾಡಿ ಸರಕಾರವು ತನ್ನ ಬೊಕ್ಕಸದಿಂದ “ಜಕಾತಿ ಪರಿಹಾರ ಧನ”ವನ್ನು ಪಾಲಿಕೆಗಳಿಗೆ ವರ್ಗಾಯಿಸುತ್ತಿದೆ. ಇತರ ಕೆಲವು ರಾಜ್ಯಗಳೂ ಇದನ್ನು ರದ್ದು ಮಾಡಿವೆ. ಆದರೆ ಕೆಲವು ರಾಜ್ಯಗಳಲ್ಲಿ- ಮುಖ್ಯವಾಗಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಲ – ಇದು ಇನ್ನೂ ಜಾರಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಆಗ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿದ್ದ ಶ್ರೀ ಜ್ಯೋತಿ ಬಸು ಅವರ ನೇತೃತ್ವದಲ್ಲಿ ಒಂದು ರಾಜ್ಯ ಮಂತ್ರಿಗಳ ಸಮಿತಿ ಕೂಡಿ ಜಕಾತಿಯು ಜಾರಿಯಲ್ಲಿರುವ ರಾಜ್ಯಗಳಲ್ಲಿ ಅದನ್ನು ಮುಂದುವರಿಸಬೇಕೆಂಬ ವರದಿಯನ್ನು ಕೊಟ್ಟಿದೆ. ತಮ್ಮ ಸಲಹೆಯ ಬೆಂಬಲದಲ್ಲಿ ಅದು ತರುವ ವರಮಾನದ ಪ್ರಮಾಣವಲ್ಲದೆ ಇನ್ನೊಂದು ಮುಖ್ಯ ಕಾರಣವು ಸಂವಿಧಾನದಲ್ಲಿ ಜಕಾತಿಯ ಅಸ್ತಿತ್ವವಿರುವುದೇ ಸಾಕೆಂದು ಸೂಚಿಸಿದೆಯಂತೆ. ಈ ರೀತಿಯ ವಿಚಾರಕ್ಕೆ ಮನ್ನಣೆ, ಮಹತ್ವ ಕೊಡುವುದಾದರೆ ರಾಜ್ಯಪಟ್ಟಿಯಲ್ಲಿ ‘ಜಕಾತಿ’ಯ ಮಗ್ಗುಲಲ್ಲೇ ೫೧ನೇ ಸ್ಥಾನದಲ್ಲಿ “ಸೆರೆ ಮತ್ತು ಅಫೀಮು ಗಾಂಜಾ” ಮುಂತಾದವುಗಳು ಅವುಗಳ ಮೇಲೆ “ಉತ್ಪಾದನಾ ತೆರಿಗೆ” ಎಂದಿರುವುದರಿಂದ ಅವುಗಳಿಂದಲೂ ಹೆಚ್ಚಿಗೆ ವರಮಾನ ಪಡೆಯಬಹುದಲ್ಲವೇ? ತೆರಿಗೆಯಿಂದ ಬರಬಹುದದ ವರಮಾನವೊಂಧೇ ಅಲ್ಲ ಅದರಿಂದ ಉಂಟಾಗಬಹುದಾದ ಲಾಭ-ಹಾನಿಗಳ ಸಮಗ್ರ ಚಿತ್ರವನ್ನು ಲಕ್ಷ್ಯದಲ್ಲಿಟ್ಟುಕೊಂಡು ನಿರ್ಣಯಕ್ಕೆ ಬರಬೇಕಾಗುತ್ತದೆ.

ಕರ್ನಾಟಕದಲ್ಲಿ ಜಕಾತಿಯ ಪರ್ಯಾಯ ವ್ಯವಸ್ಥೆ “ಜಕಾತಿ ಪರಿಹಾರ ಧನ”, ೧೯೯೯-೨೦೦೦ದಲ್ಲಿ ಸರಕಾರವು ೨೪.೦೬ ಲಕ್ಷ ರೂಪಾಯಿಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡಿತು. ಇದು ಈ ಪಾಲಿಕೆಯ ಅದೇ ವರ್ಷದ ತನ್ನ ಎಲ್ಲಾ ತೆರಿಗೆಗಳ ವರಮಾನವಾಗಿದ್ದ ೯೦೮ ಲಕ್ಷದ ಎರಡು ಪಟ್ಟಿಗಿಂತ ಹೆಚ್ಚಿತ್ತು. ಆದರೂ ನಗರಪಾಲಿಕೆಗಳು ಇನ್ನೂ ‘ಜಕಾತಿ’ ಬೇಕೆಂದು ಒತ್ತಾಯ ಪಡಿಸುತ್ತವೆಯಂತೆ. ಇದಕ್ಕೆ ಕಾರಣಗಳು:

i) ತಾವೇ ಜಕಾತಿ ವಿಧಿಸಿ ವಸೂಲಿ ಮಾಡಿದರೆ ಈಗ ಸಿಗುತ್ತಿರುವ “ಜಕಾತಿ ಪರಿಹಾರ ಧನ”ಕ್ಕಿಂತ ಹೆಚ್ಚು ಸಿಗಬಹುದು;

ii) ವಸೂಲಿ ಮಾಡಿದ ಹಣ ನೇರವಾಗಿ ಪಾಲಿಕೆಯ ಬೊಕ್ಕಸಕ್ಕೆ ಸೇರುತ್ತದೆ. ಈಗಿನ ವ್ಯವಸ್ಥೆಯಲ್ಲಿ “ಪರಿಹಾರ ಧನ” ಎಷ್ಟು ಸಿಗಬಹುದು, ಎಷ್ಟು ಕಂಥುಗಳಲ್ಲಿ, ಯಾವ್ಯಾವಾಗ ಸಿಗಬಹುದು ಮತ್ತು ದೊರಕಿಸಿಕೊಳ್ಳಲಿಕ್ಕೆ ಪಾಲಿಕೆಯ ಅಧಿಕಾರಿಗಳು-ಆಯುಕ್ತರೂ, ಒಮ್ಮೊಮ್ಮೆ ಮಹಾಪೌರರೂ ಸಹಿತ-ವಿಧಾನಸೌಧದ ಯಾತ್ರೆ ಎಷ್ಟು ಸಲ ಕೈಗೊಳ್ಳಬೇಕಾಗಬಹುದು ಎಂಬ ಪ್ರಶ್ನೆಗಳಿಗೆ ಉತ್ತರ ಪಾಲಿಕೆಯ ಕೈಯಲ್ಲಿರುವುದಿಲ್ಲ.

ರಾಜ್ಯ ಸರಕಾರದಲ್ಲಿಯೂ ಜಕಾತಿ ವಾಪಸು ತಂದರೆ ಈಗ ಕೊಡುತ್ತಿರುವ “ಪರಿಹಾರ ಧನ” ಸರಕಾರಕ್ಕೇ ಉಳಿಯಬಹುದೆಂಬ ಒಂದು ಮತವೂ ಇರಬಹುದು.

ಈ ಗಣಿತಗಳಲ್ಲಿ ಲಾಭವೊಂದನ್ನೇ ನೋಡಿ ಆಗಬಹುದಾದ ದುಷ್ಪರಿಣಾಮಗಳನ್ನು ಮರೆತಿದ್ದಾರೆ. ಜಕಾತಿಯಾಗಲೀ, ಜಕಾತಿ ಪರಿಹಾರ ಧನವಾಗಲೀ ಅಥವಾ ಯಾವುದೆ ಸಾಮಾನುಗಳ ಮೇಲೆ ಹೇರುವ ಯಾವುದೇ ಕರವಾಗಲೀ, ಅವುಗಳ ಭಾರ ಸಾಮಾನನ್ನು ತಯಾರಿಸುವವನ ಮೇಲಾಗಲೀ ಅಥವಾ ಅದನ್ನು ಗ್ರಾಹಕರಿಗೆ ತಲುಪಿಸುವ ವರ್ತಕನ ಮೇಲಾಗಲೀ ಬೀಳುವುದಿಲ್ಲ. ಅದು ಸಾಮಾನಿನ ನಿಜವಾದ ಬೆಲೆಯ ಸಂಗಡ ಗ್ರಾಹಕನ ಮೇಲೆ, ಅಂದರೆ ಸಾಮಾನ್ಯ ಪ್ರಜರ ಮೇಲೆಯೇ ಬೀಳುತ್ತದೆ. ಹೆಚ್ಚು ವರಮಾನ ಬೇಕೆಂದರೆ, ಪ್ರಜರು ಸಾಮಾನುಗಳಿಗಾಗಿ ಹೆಚ್ಚು ಹಣ ಖರ್ಚು ಮಾಡಲೇಬೇಕಾಗುತ್ತದೆ. ಸರಕಾರವು ಮಾರಾಟ ಕರವನ್ನು ಹೆಚ್ಚಿಸಿ ಒಂದು ಪಾಲನ್ನು “ಜಕಾತಿ ಪರಿಹಾರ ಧನ” ವಾಗಿ ಪಾಲಿಕೆಗೆ ನೀಡಿದರೂ ಅಷ್ಟೇ ಅಥವಾ ಸರಕಾರವೇ ಆಗಲೀ ಪಾಲಿಕೆಯೇ ಆಗಲಿ ಬೇರೆಯಾಗಿ ‘ಜಕಾತಿ’ಯನ್ನು ವಿಧಿಸಿ, ಅದನ್ನು ಪಾಲಿಕೆಗೆ ವಸೂಲಿ ಮಾಡಲು ಬಿಟ್ಟರೂ ಅಷ್ಟೇ ಅಥವಾ ಸರಕಾರವು ಪಾಲಿಕೆಗೆ ಮಾರಾಟಕರದ ಮೇಲೆ ಒಂದು ಸರಚಾರ್ಜ್ ವಿಧಿಸಲು ಅಧಿಕಾರ ಕೊಟ್ಟು, ವಸೂಲಿಯನ್ನು ಮಾರಾಟಕರ ಖಾತೆಯಿಂದಲೇ ಮಾಡಿಸಿ, ಆ ಸರಚಾರ್ಜ್ ಹಣವನ್ನು ಖಜಾನೆಗೆ ಪ್ರತ್ಯೇಕ ವರಮಾನ ಹಣಕಾಸು ಶೀರ್ಷಿಕೆಯಡಿ ತುಂಬಿಸಿ, ಖಜಾನೆಯಿಂದ ನೇರವಾಗಿ ಪಾಲಿಕೆಗೆ ವರ್ಗಾಯಿಸಿದರೂ ಅಷ್ಟೆ. ಈ ಮೂರೂ ವಿಧಾನಗಳಲ್ಲಿ “ವರಮಾನ, ಪ್ರಜರ ಮೇಲಿನ ಭಾರ”ಗಳಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಇತರ ದುಷ್ಪರಿಣಾಮಗಳನ್ನು ತಪ್ಪಿಸಬೇಕಾದರೆ ಈ ಕೆಳಗೆ ಸೂಚಿಸಿದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

i) ಕರಾಕರಣೆ (ಅಂದರೆ ಕಾನೂನಿನ ಕರದ ದರವನ್ನು ಹಚ್ಚಿ ಕರದ ಮೊತ್ತವನ್ನು ಗಣಿಸುವುದು) ಮತ್ತು ಕರವಸೂಲಿಗಳಲ್ಲಿ ಬೇಕಾಗುವ ದಾಖಲೆಗಳು, ಅವುಗಳ ಪರಿಶೀಲನೆ ಮತ್ತಿತರ ಕ್ರಮಗಳು ಈಗಿನಕ್ಕಿಂತ ಹೆಚ್ಚಾದರೆ, ಹೆಚ್ಚು ಖಾತೆಗಳಾಗಲೀ, ಅಧಿಕಾರಿ-ಸಿಬ್ಬಂದಿಗಳಾಗಲೀ, ಅದರಲ್ಲಿ ಕೈಹಾಕಿದರೆ ಕಾಲ ವಿಳಂಬ, ಅವ್ಯವಹಾರ, ಆಡಳಿತ ಖರ್ಚು, ಭ್ರಷ್ಟಾಚಾರಗಳಿಗೆ ಆಸ್ಪದ, ಹೆಚ್ಚು. ಇವನ್ನು ತಪ್ಪಿಸಬೇಕಾದರೆ ಈಗಿನಂತೆ ಮಾರಾಟಕರ ಖಾತೆಯೇ ಎಲ್ಲ ಮಾಡಬೇಕು.

ii) ಜಕಾತಿಯ ಪರ್ಯಾಯ ಕ್ರಮದಿಂದ(ಅದು ಯಾವುದೇ ಇರಲಿ) ವಸೂಲಿ ಆದ ಹಣ, ಸರಕಾರಿ ಖಜಾನೆಯಲ್ಲಿ ಪ್ರತ್ಯೇಕ ಶೀರ್ಷಿಕೆಯಡಿ ಜಮಾ ಆಗಿ, ಕಾಲಕಾಲಕ್ಕೆ ಸರಿಯಾಗಿ ಖಜಾನೆಯೇ ಸ್ವಯಂ (ಸರಕಾರದ ಆದೇಶದ ಅಗತ್ಯವಿಲ್ಲದೇ) ನೇರವಾಗಿ ಪಾಲಿಕೆಗೆ ವರ್ಗಾಯಿಸಬೇಕು. ಇಂಥ ಪದ್ಧತಿ ಈಗಾಗಲೇ ಸ್ಟಾಂಪ ತೆರಿಗೆಯ ಮೇಲಿನ ಸರಚಾರ್ಜ ಬಗ್ಗೆ ರೂಢಿಯಲ್ಲಿದೆ.

ಈಗ ಇದನ್ನು ವಿಧಿಸುವ ವಿಧಾನ-ಮೇಲೆ ಹೇಳಿದ ಹಾಗೆ ಯಾವ ವಿಧಾನವಾದರೂ, ಸರಕಾರ ವಿಧಿಸಿದರೂ, ಪಾಲಿಕೆ ವಿಧಿಸಿದರೂ ವರಮಾನ, ಪ್ರಜರ ಮೇಲಿನ ಭಾರ ಬದಲಾಗುವುದಿಲ್ಲ. ಆದರೆ ಪಾಲಿಕೆಗೇ ಮಾರಾಟ ಕರದ ಮೇಲೆ ಪಾಲಿಕೆಯ ಸರಚಾರ್ಜ ಎಂದು ವಿಧಿಸಲು (ಅದರ ದರವನ್ನು ನಿರ್ಣಯಿಸಲೂ) ಅಧಿಕಾರವಿದ್ದರೆ, ಪಾಲಿಕೆಯ ಸ್ವಾಯತ್ತತೆಯ ಜವಾಬ್ದಾರಿ ಅದಕ್ಕೆ ಮನದಟ್ಟಾಗುತ್ತದೆ. ಆಗ ಅಲ್ಲಿಯ ನಿವಾಸಿಗಳೂ ಜಕಾತಿಯ ವರಮಾನ ಹೆಚ್ಚಾಗಬೇಕೆಂದರೆ, ತಾವು ಸಾಮಾನುಗಳಿಗಾಗಿ ಕೊಡಬೇಕಾದ ಬೆಲೆಯೂ ಹೆಚ್ಚಾಗಬೇಕಾಗುತ್ತಿದೆ ಎಂದು ಅರಿತುಕೊಂಡು, ಪಾಲಿಕೆಯೂ, ನಿವಾಸಿಗಳೂ ಹಾಸಿಗೆಯೂ ತಮ್ಮದೇ ಚಾಚಿಕೊಳ್ಳುವ ಕಾಲುಗಳೂ ತಮ್ಮವೇ ಎಂಬ ತಿಳುವಳಿಕೆ ಪಡೆಯುತ್ತಾರೆ. ಇದೇ ಜವಾಬ್ದಾರಿ ಪ್ರಜಾಪ್ರಭುತ್ವದ ಹಾದಿ.

ಸರಕಾರದ ತೆರಿಗೆಗಳಲ್ಲಿ ಪಾಲು ಮತ್ತು ಅನುದಾನ:

ಸರಕಾರವು ತಾನು ವಿಧಿಸಿ, ವಸೂಲಿ ಮಾಡಿದ ತೆರಿಗೆಗಳ ವರಮಾನದಲ್ಲಿ ಸ್ವಲ್ಪ ಪಾಲನ್ನು ಪಾಲಿಕೆಗಳಿಗೆ ನೀಡುತ್ತದೆ. ಮುಂಚೆ ಮನರಂಜನೆ ತೆರಿಗೆ ಮತ್ತು ಮೋಟಾರ್ ಗಾಡಿಗಳ ಮೇಲಿನ ತೆರಿಗೆಗಳಿಂದ ಸಿಗುತ್ತಿದ್ದ ಪಾಲು ಈಗ ಸಿಗುತ್ತಿಲ್ಲ. ಸ್ಟಾಂಪ್‌ತೆರಿಗೆ ಮೇಲಿನ ಸರಚಾರ್ಜ್ ಮಾತ್ರ ಇನ್ನೂ ಸಿಗುತ್ತಿದೆ. ೧೯೯೯-೨೦೦೦ದಲ್ಲಿ ಇದರಿಂದ ೨೬೮ ಲಕ್ಷ ರೂಪಾಯಿಗಳು ದೊರೆತವು. ಜಿಲ್ಲಾ ನೋಂದಣಿ ಅಧಿಕಾರಿಗಳು ಈ ಮೊತ್ತವನ್ನು ಪ್ರತಿ ತಿಂಗಳು ನೇರವಾಗಿ ಪಾಲಿಕೆಗೆ ವರ್ಗಾಯಿಸುತ್ತಿದ್ದಾರೆ. ಇದೇ ಪದ್ಧತಿಯನ್ನು ಸರಕಾರ ಎಲ್ಲ ತೆರಿಗೆಗಳ ಅಥವಾ ಪರಿಹಾರ ಧನದ ವರ್ಗಾವಣೆಗೂ ಅನುಸರಿಸಿದರೆ ಪಾಲಿಕೆಗೆ ಅನುಕೂಲ.

ಮನರಂಜನಾ ತೆರಿಗೆಯು ಸಂವಿಧಾನದ ಏಳನೆಯ ಅನುಬಂಧದ ರಾಜ್ಯ ವಿಷಯ ಪಟ್ಟಿಯಲ್ಲಿ ನಂ. ೬೨ ಆದ “ಭೋಗ ವಸ್ತುಗಳು, ಮನರಂಜನೆ, ಜೂಜು ಪಂದ್ಯಗಳನ್ನೊಳಗೊಂಡು, ಮೇಲಿನ ಕರ”ದಲ್ಲಿದೆ ಮತ್ತು ಅದೇ ಪಟ್ಟಿಯ ೬೦ನೆಯದು “ವೃತ್ತಿಕರ”. ಇವೆರಡೂ ಪಾಲಿಕೆಗಳ ತೆರಿಗೆಗಳಾಗುವುದು ವಿಹಿತ. ವೃತ್ತಿಗೆ ಆಸ್ಪದ, ಮತ್ತು ಭೋಗ ವಸ್ತುಗಳ, ಮನರಂಜನೆ ಮುಂತಾದವುಗಳ ಬೇಡಿಕೆ, ನಗರದ ಜನಸಂಖ್ಯೆ ಮತ್ತು ಪಾಲಿಕೆಯು ಒದಗಿಸುವ ಸೌಕರ್ಯ ಸೌಲಭ್ಯಗಳನ್ನು ಅವಲಂಬಿಸಿವೆ. ಅವು ಪ್ರಾರಂಭವಾಗಲು, ವೃದ್ಧಿಸಲು ಅಥವಾ ಕ್ಷೀಣಿಸಲು ನಗರದ ಪರಿಸರವೇ ಕಾರಣೀಭೂತ. ಅಲ್ಲದೇ ಇವುಗಳಿಗೆ ಸಂಬಂಧವಿರುವ ಜಾಹೀರಾತುಗಳ ಮೇಲಿನ ಕರ ಈಗಲೂ ಪಾಲಿಕೆಯದ್ದಾಗಿದೆ. ವಸತಿ ಗೃಹಗಳು (ಅಂದರೆ ದೊಡ್ಡ ಹೋಟೆಲ್ಲುಗಳೂ ಸಹಿತ), ಕಸಬು ಉದ್ದಿಮೆಗಳು ಪಾಲಿಕೆಯ ಪರವಾನಿಗೆ ಪಡೆಯಲೇಬೇಕು. ಆದಕಾರಣ ಈ ಎರಡೂ ತೆರಿಗೆಗಳನ್ನು ಪಾಲಿಕೆಗೆ ಕೊಟ್ಟು ಅವುಗಳ ವರಮಾನವನ್ನು ಸಂಪೂರ್ಣವಾಗಿ ಪಾಲಿಕೆಯೇ ಪಡೆಯಬೇಕು. ಇಡೀ ರಾಜ್ಯದಲ್ಲಿ ಸಮಾನ ದರಗಳು ಜಾರಿಯಲ್ಲಿ ಇರುವುದು ಸಮಂಜಸವೆನಿಸಿದರೆ, ದರಗಳನ್ನು ರಾಜ್ಯ ಶಾಸಕಂಗ ವಿಧಿಸಬಹುದು. “ಇಲ್ಲಿ ಇನ್ನೊಂದು ಮಹತ್ವದ ಪ್ರಶ್ನೆ. ಈಗ ಪಾಲಿಕೆಯ ಅಧಿಕಾರ, ಕಾರ್ಯಗಳ ಬಗ್ಗೆ ರಾಜ್ಯ ಶಾಸಕಾಂಗವು ಕಾನೂನು ಮಾಡಲು ಸ್ವತಂತ್ರವಿದೆ. ರಾಜ್ಯ ಸರಕಾರವು ಶಾಸಕಾಂಗದ ಒಪ್ಪಿಗೆ ಪಡೆದು ಪಾಲಿಕೆಗಳ ಅಧಿಕಾರದಲ್ಲಿ ಬದಲಾವಣೆಗಳನ್ನು ಮಾಡಬಹುದು. ಅದನ್ನು ಮೊಟಕುಗೊಳಿಸಲೂಬಹುದು. ಈಗಿರುವ ತೆರಿಗೆ ಅಧಿಕಾರವನ್ನು ಕಿತ್ತುಕೊಳ್ಳಬಹುದು. ಇದನ್ನು ತಡೆಯಲಿಕ್ಕೆ ಪಾಲಿಕೆಗಳ ತೆರಿಗೆ-ಅಧಿಕಾರವನ್ನು ಸಂವಿಧಾನದಲ್ಲಿಯೇ ದೃಢೀಕರಿಸಬೇಕು.

ಈ ಸಲಹೆಗೆ ಇನ್ನೊಂದು ಕಾರಣವಿದೆ. ಸಂವಿಧಾನದಲ್ಲಿ “ರಾಜ್ಯ ಹಣಕಾಸು ಆಯೋಗ”ದ ನೇಮಕ, ಅದರ ಶಿಫಾರಸುಗಳ ಪರಿಶೀಲನೆ, ಇವುಗಳ ಬಗ್ಗೆ ನಿಯಮಗಳಿವೆ. ಕರ್ನಾಟಕ ರಾಜ್ಯಪಾಲರು ಮೊದಲನೆಯ ಆಯೋಗವನ್ನು ಅರ್ಥಶಾಸ್ತ್ರಜ್ಞ ಡಾ. ತಿಮ್ಮಯ್ಯ ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಆ ಆಯೋಗ ೧೯೯೬ರಲ್ಲಿಯೇ ತನ್ನ ವರದಿಗಳನ್ನು ರಾಜ್ಯಪಾಲರಿಗೆ ಒಪ್ಪಿಸಿತು. ರಾಜ್ಯ ಸರಕಾರವು ಆ ವರದಿಯನ್ನು ಪರಿಶೀಲಿಸಿ, ಶಿಫಾರಸುಗಳ ಬಗ್ಗೆ ನಿರ್ಣಯ ತೆಗೆದುಕೊಂಡು, ವರದಿಯನ್ನೂ ತನ್ನ ನಿರ್ಣಯಗಳನ್ನೂ ರಾಜ್ಯಾಂಗದ ಮುಂದಿಡಬೇಕಾಗಿತ್ತು. ನನಗೆ ತಿಳಿದ ಮಟ್ಟಿಗೆ ಈ ಕಾರ್ಯ ಇನ್ನೂ ಸಂಪೂರ್ಣವಾಗಿಲ್ಲ. ಈಗ ಶ್ರೀ ನರಸಿಂಹಮೂರ್ತಿಯವರ ನೇತೃತ್ವದಲ್ಲಿ ಎರಡನೆಯ ಆಯೋಗವು ಕಾರ್ಯ ಪ್ರಾರಂಭಿಸಿದೆ. “ರಾಜ್ಯ ಹಣಕಾಸು ಆಯೋಗ”ದ ಸಂರಕ್ಷಣೆ ನಗರ ಪಾಲಿಕೆಗಳಿಗೆ ಪರಿಣಾಮಕಾರಿಯಾಗಿ ದೊರೆಯಬೇಕೆಂದರೆ ಸಂವಿಧಾನದಲ್ಲಿಯೇ ಈ ಇಡೀ ಕಾರ್ಯಕ್ರಮದ ವಿವಿಧ ಹಂತಗಳಿಗೆ – ಆಯೋಗದ ವರದಿ, ಸರಕಾರದ ಪರಿಶೀಲನೆ, ನಿರ್ಣಯ , ಶಾಸಕಾಂಗದಲ್ಲಿ ಮಂಡನೆ ಮತ್ತು ಶಿಫಾರಸುಗಳ ಅನುಷ್ಠಾನ-ಸೂಕ್ತ ಕಾಲಮಿತಿಗಳಿರಬೇಕು.

ಶುಲ್ಕಗಳು – ಮಿಶ್ರ ವರಮಾನಗಳು:

ಪಾಲಿಕೆಯಿಂದ ವಿಶೇಷ ಪರವಾನಿಗೆ, ಸೇವೆ ಅಥವಾ ಸೌಕರ್ಯಗಳನ್ನು ಪಡೆಯಲು ನಿರ್ಧರಿಸಿದ ದರಗಳಂತೆ ಶುಲ್ಕ ಕೊಡಬೇಕು. ಹುಬ್ಬಳ್ಳಿ-ಧಾರವಾಡದ ಬಜೆಟ್‌ನಲ್ಲಿ ಪ್ರಮುಖ ಬಾಬುಗಳ ವರಮಾನ:

 ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨ರ ಅಂದಾಜು೧) ಮಾರುಕಟ್ಟೆ ಸ್ಟಾಲುಗಳ ಶುಲ್ಕ೧೬೯ ಲಕ್ಷ೪೧೧ ಲಕ್ಷ೨) ನೀರು ಕೊಳವೆ ಜೋಡಣೆ ಶುಲ್ಕ೩೪ ಲಕ್ಷ೫೫ ಲಕ್ಷ೩) ಇಮಾರತಿ ಕಟ್ಟಡ ಅನುಮತಿ ಶುಲ್ಕ೩೧ ಲಕ್ಷ೪೦ ಲಕ್ಷ೪) ಕೈಗಾರಿಕಾ ಉದ್ದಿಮೆ ಪರವಾನಿಗೆ ಶುಲ್ಕ೧೦ ಲಕ್ಷ೨೩ ಲಕ್ಷ೫) ಉಪಹಾರ, ವಸತಿ ಗೃಹ ಮುಂ. ಅನುಮತಿ, ನವೀಕರಣ ಶುಲ್ಕ೭ ಲಕ್ಷ೧೪ ಲಕ್ಷ

ಇವುಗಳಲ್ಲಿ “ಮಾರುಕಟ್ಟೆ ಸ್ಟಾಲುಗಳ ಶುಲ್ಕ” ಪಾಲಿಕೆಯು ಕಟ್ಟಿಸಿದ ಮಾರುಕಟ್ಟೆಗಳ ಬಾಡಿಗೆ ಇದು ಶುಲ್ಕವಲ್ಲ. ಪರವಾನಿಗೆ, ಸೇವೆ ಅಥವಾ ಸೌಕರ್ಯಗಳನ್ನು ವಿಶೇಷವಾಗಿ ಕೊಡುವಲ್ಲಿ ಪಾಲಿಕೆಯು ಹಣ ಖರ್ಚು ಮಾಡಬೇಕಾಗುತ್ತದೆ. ಆ ಖರ್ಚನ್ನು ತುಂಬಿಕೊಳ್ಳುವುದಕ್ಕಾಗಿ ಶುಲ್ಕವನ್ನು ವಿಧಿಸುತ್ತದೆ. ಶುಲ್ಕದ ವರಮಾನದ ಎದುರು ಸಂಬಂಧಿಸಿದ ವೆಚ್ಚವಿರುತ್ತದೆ. ಬಂಡವಾಳ ಹೂಡಿ ಸ್ಥಿರಾಸ್ತಿ ನಿರ್ಮಿಸಿ ಅದರ ಬಾಡಿಗೆ ಪಡೆಯುವುದು ಶುಲ್ಕವಲ್ಲ. ಮಿಶ್ರ ವರಮಾನವೆಂದೆಣಿಸಬೇಕು. ಇದೇ ರೀತಿ “ಮಿಶ್ರ ವರಮಾನಗಳ” ಪಟ್ಟಿಯಲ್ಲಿ ಕೆಲವು ಶುಲ್ಕಗಳನ್ನು ಸೇರಿಸಿರುವುದನ್ನೂ ನೋಡುತ್ತೇವೆ. ಇವುಗಳಲ್ಲಿ ತರ್ಕಬದ್ಧ ವಿಂಗಡಣೆ ಆಗಬೇಕು.

ಮಿಶ್ರ ವರಮಾನಗಳ ಪ್ರಮುಖ ಬಾಬುಗಳು

  ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨ರ ಅಂದಾಜುi)ಭೂಭಾಡೆ೮ ಲಕ್ಷ೧೦ ಲಕ್ಷii)ವಿವಿಧ ಇಮಾರತಿ ಬಾಡಿಗೆ೧೩ ಲಕ್ಷ೧೮ ಲಕ್ಷiii)ತುಂಡು ಭೂಮಿಗಳ ಮಾರಾಟ೨೪ ಲಕ್ಷ೧೦ ಲಕ್ಷiv)ನಿವೇಶನಗಳ ಮಾರಾಟ—೨೫ ಲಕ್ಷv)ಕಡಿಮೆ ಆದಾಯದವರಿಗೆ ಕಟ್ಟಿದ ಮನೆಗಳ ಮಾರಾಟ೬ ಲಕ್ಷ೭ ಲಕ್ಷvi)ಅಭಿವೃದ್ಧಿ ಶುಲ್ಕ೨ ಸಾವಿರ ಮಾತ್ರ೬೫ ಲಕ್ಷvii)ಖಾತೆ ಬದಲು ಮಾಡಲು ಶುಲ್ಕ೩೭ ಲಕ್ಷ೪೫ ಲಕ್ಷviii)ರಸ್ತೆ ಕಡಿಯುವ ಶುಲ್ಕ೭೨ ಲಕ್ಷ೭೫ ಲಕ್ಷix)ವೈದ್ಯಕೀಯ ಸಂಸ್ಥೆಗಳಿಂದ ಉತ್ಪನ್ನ೯ ಲಕ್ಷ೧೫ ಲಕ್ಷx)ಕಸಾಯಿಖಾನೆ ಉತ್ಪನ್ನ೨ ಲಕ್ಷ೧೧ ಲಕ್ಷ

ಇವುಗಳಲ್ಲಿ vi vii, viii, ಶುಲ್ಕಗಳಿದ್ದು, ಮಿಶ್ರ ವರಮಾನಗಳಲ್ಲಿ ಕೂಡಿಸಬಾರದಿತ್ತು. ಉಳಿದ ಬಾಬುಗಳು ಪಾಲಿಕೆಯು ಬಂಡವಾಳ ಹೂಡಿ ನಿರ್ಮಿಸಿದ ಆಸ್ತಿಗಳಿಂದ ಬಂದ ಬಾಡಿಗೆ, ಮಾರಾಟ ಕ್ರಯ ಅಥವಾ ಉತ್ಪನ್ನಗಳು.

ಬಂಡವಾಳ ಖಾತೆ ಪಾಲಿಕೆಗಳು ನಾಗರಿಕರ ಸೌಕರ್ಯಕ್ಕಾಗಿಯೂ, ಬಾಡಿಗೆ ಮುಂತಾದ ವರಮಾನ ಪಡೆಯುವುದಕ್ಕಾಗಿಯೂ ಬಂಡವಾಳ ಹೂಡಿ ಹೊಸ ಆಸ್ತಿಗಳನ್ನು ನಿರ್ಮಿಸುತ್ತವೆ. ಆದರೆ ಈ ಬಂಡವಾಳವನ್ನು ವಾರ್ಷಿಕ ವರಮಾನದಲ್ಲಿಯೇ ಉಳಿತಾಯದಿಂದ ಪಡೆಯುವುದು ಅಸಾಧ್ಯ. ಹೀಗಾಗಿ ಸರಕಾರದಿಂದ ಅನುದಾನಗಳ ರೂಪದಲ್ಲಾಗಲೀ ಅಥವಾ ಸರಕಾರದಿಂದಾಗಲೀ, ಇತರ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದಾಗಲೀ ಸಾಲದ ರೂಪದಲ್ಲಾಗಲೀ ದೊರಕಿಸಿಕೊಳ್ಳುತ್ತವೆ.

ಹೀಗೆ ಪಡೆದ ಆದಾಯವನ್ನು ಮಾಡಿದ ವೆಚ್ಚವನ್ನು ವಾರ್ಷಿಕ ಆಯ-ವ್ಯಯದಲ್ಲಿ ಸೇರಿಸದೆ ಪ್ರತ್ಯೇಕವಾಗಿ ಬಜೆಟ್‌ನಲ್ಲಿ ಆಯಾ ಯೋಜನೆಯ ಅಡಿಯಲ್ಲಿ ತೋರಿಸುತ್ತಾರೆ. ಹುಬ್ಬಳ್ಳಿ-ಧಾರವಾಡದ ಈ ವರ್ಷದ ಬಜೆಟ್‌ನಲ್ಲಿ ಪ್ರಮುಖ ಯೋಜನೆಗಳು:

i) ರಂಗಮಂದಿರ ಕಟ್ಟುವುದು ಕೇಂದ್ರ ಸರಕಾರದ ಅನುದಾನ.ii) ಮಲಪ್ರಭಾ ನೀರು ಸರಬರಾಜು ಯೋಜನೆ ಕೊಳವೆ ಹಾಗೂ ಜಲಾಶಯ ಕಟ್ಟುವುದು ಸರಕಾರ ಮತ್ತು ಎಲ್‌.ಐ.ಸಿ. ಯಿಂದ ಸಾಲ.iii) ಅಂಬೇಡಕರ್ ವಸತಿ ಯೋಜನೆ iv) ಆಶ್ರಯ ಯೋಜನೆರಾಜ್ಯ ಸರಕಾರv) ವಾಣಿಜ್ಯ ಸಂಕೀರ್ಣ ಕಟ್ಟುವುದು ಹುಡ್ಕೋ ಸಾಲvi) ಸ್ವರ್ಣಜಯಂತಿ ಶಹರೀ ರೋಜಗಾರ ಯೋಜನೆ 

ಇವುಗಳ ಆಯ-ವ್ಯಯ ಶಿಲ್ಕುಗಳ ಲೆಕ್ಕಗಳು ಹಲವು ವರ್ಷಗಳ ವರೆಗೆ ನಡೆಯುತ್ತವೆ. ಆದಕಾರಣ ಆಯಾ ಯೋಜನೆಗಳ ಪ್ರಗತಿ, ಸಾಫಲ್ಯಗಳನ್ನು ಪರಿಶೀಲಿಸಲು ಪ್ರಾರಂಭದಿಂದ ಕೊನೆಯವರೆಗಿನ ಅಂಕಿ-ಸಂಖ್ಯೆಗಳನ್ನು ಜೋಡಿಸಿಕೊಂಡು, ವೆಚ್ಚಕ್ಕೆ ಅನುಗುಣವಾಗಿ ವಾಸ್ತವ ಪ್ರಗತಿ ಸಾಗಿದೆಯಾ ಅಥವಾ ಸಾಲ, ಅನುದಾನಗಳ ಕಂತುಗಳಲ್ಲಿ ತಡವಾಗಿಯಾಗಲೀ, ಪಾಲಿಕೆಯ ಆಡಳಿತದಲ್ಲಿಯೇ ಲೋಪದೋಷಗಳಿಂದಾಗಲೀ ಅಥವಾ ಅನಿರೀಕ್ಷಿತ ಘಟನೆಗಳಿಂದಾಗಲೀ ಪ್ರಗತಿ ಕುಂಠಿತವಾಗಿ, ಖರ್ಚು ಮೊದಲಿನ ಅಂದಾಜಿಗಿಂತಲೂ ಹೆಚ್ಚಾಗುತ್ತಿದೆಯಾ, ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ. ಇದು ಪಾಲಿಕೆಯ ಕರ್ತವ್ಯ ಹಾಗೂ ನಾಗರೀಕರಲ್ಲಿ ತಜ್ಞರ ಕರ್ತವ್ಯವೂ ಹೌದು. ಈ ಸಾಲಗಳ ಮರುಪಾವತಿಯನ್ನು ಸಾಧಾರಣವಾಗಿ ವಾರ್ಷಿಕ ವರಮಾನದಿಂದ ತೆಗೆಯುತ್ತಾರೆ.

ಇನ್ನು ವಾರ್ಷಿಕ ವ್ಯಯದ ಬಗ್ಗೆ ನೋಡೋಣ. ಪಾಲಿಕೆಯು ತನ್ನ ಕರ್ತವ್ಯ ಪಾಲನೆಯಲ್ಲಿ ಸಿಬ್ಬಂದಿ, ಸಾಮಾನುಗಳು ಮತ್ತು ಕೆಲಸಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಮಾಡಿದ ಖರ್ಚು ಅಧಿಕೃತವಾಗಿತ್ತಾ, ಪ್ರಯೋಜನಕಾರಿಯಾಗಿತ್ತಾ, ಪೋಲಾಗದೆ ಹಿಡಿತದಲ್ಲೇ ಉಳಿದಿತ್ತಾ ಎನ್ನುವುದರ ಪರಿಶೀಲನೆಯಾಗಬೇಕು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೨೦೦೧-೨೦೦೨ರ ಬಜೆಟ್ಟಿನಲ್ಲಿ ಪ್ರಮುಖ ಬಾಬುಗಳು ಹೀಗಿವೆ:

  ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨ರ ಅಂದಾಜುi)ಒಟ್ಟು ಖರ್ಚು೪೨.೩೮ ಲಕ್ಷ೬೮.೦೦ ಲಕ್ಷii)ಲೋಕೋಪಯೋಗಿ ಖಾತೆ೧೨.೧೮ ಲಕ್ಷ೧೪.೫೨ ಲಕ್ಷiii)ಆರೋಗ್ಯ ಇಲಾಖೆ೯.೨೭ ಲಕ್ಷ೧೦.೨೦ ಲಕ್ಷiv)ನೀರು ಸರಬರಾಜು೪.೮೬ ಲಕ್ಷ೬.೬೫ ಲಕ್ಷv)ಕಂದಾಯ ಇಲಾಖೆ೨.೮೦ ಲಕ್ಷ೪.೦೩ ಲಕ್ಷvi)ಪರಿಶಿಷ್ಟ ಜಾತಿ ಜನಾಂಗದವರಿಗಾಗಿ ಪ್ರತಿಶತ ೧೮ ರಷ್ಟು೨.೫೩ ಲಕ್ಷ೩.೮೫ ಲಕ್ಷvii)ದೀಪದ ಖಾತೆ೧.೦೬ ಲಕ್ಷ೨.೦೪ ಲಕ್ಷviii)ದವಾಖಾನೆ ಔಷಧಾಲಯಗಳು೧.೪೪ ಲಕ್ಷ೧.೯೬ ಲಕ್ಷix)ಸಾಮಾನ್ಯ ಆಡಳಿತ ವಿಭಾಗ೧.೬೧ ಲಕ್ಷ೧.೯೧ ಲಕ್ಷx)ಕೌನ್ಸಿಲ್‌(ಚುನಾಯಿತ ಸದಸ್ಯರು)೫೬ ಲಕ್ಷ೧.೧೧ ಲಕ್ಷ

 

ಒಟ್ಟು ಖರ್ಚಿನಲ್ಲಿ ಸಿಬ್ಬಂದಿಯ ಖರ್ಚಿನ ಪ್ರಮಾಣ ಹೀಗಿದೆ:

i)ಒಟ್ಟು ಮಹಾನಗರ ಪಾಲಿಕೆ೧೬.೭೯ ಲಕ್ಷ೧೬.೧೨ ಲಕ್ಷ(೩೯.೬%)(೨೩.೭%)ii)ಲೋಕೋಪಯೋಗಿ ಖಾತೆ೩.೪೧ ಲಕ್ಷ೩.೫೭ ಲಕ್ಷ(೨೮%)(೨೪.೬%)iii)ಆರೋಗ್ಯ ಖಾತೆ೭.೬೧ ಲಕ್ಷ೮.೦೦ ಲಕ್ಷ(೮೨%)(೭೮%)iv)ದವಾಖಾನೆಗಳು೧.೨೧ ಲಕ್ಷ೧.೯೬ ಲಕ್ಷ(೮೪%)(೯೨%)

 

ಲೋಕೋಪಯೋಗಿ ಖಾತೆಯ ಪ್ರಮುಖ ಕಾರ್ಯಗಳು:

 ೧೯೯೯-೨೦೦೦ರ ವಾಸ್ತವಿಕ೨೦೦೧-೨೦೦೨೪ ಅಂದಾಜುi) ಚರಂಡಿಗಳು, ನಿರ್ಮಾಣ, ಸಂರಕ್ಷಣೆ, ಕೊಳವೆ ಹಾಕುವುದು, ಮುಂ.೩.೮೯ ಲಕ್ಷ೩.೮೪ ಲಕ್ಷii) ರಸ್ತೆಗಳ ನಿರ್ಮಾಣ, ಖಡಿ ಹಾಕುವುದು ಡಾಮಬರ ಪುನರ್ ಲೇಪನ, ಕಾಲ್ದಾರಿ೨.೭೬ ಲಕ್ಷ೪.೪೪ ಲಕ್ಷiii) ಕಟ್ಟಡ ಕಟ್ಟುವುದು, ಕಟ್ಟಡಗಳ ಸಂರಕ್ಷಣೆ೯೬ ಲಕ್ಷ೯೩ ಲಕ್ಷ

ಆರೋಗ್ಯ ಇಲಾಖೆಯಲ್ಲಿ ಶೇಕಡಾ ೮೦ರಷ್ಟು ಖರ್ಚು ಸಿಬ್ಬಂದಿಯ ಮೇಲೆ. ಇದರಲ್ಲಿ ಸುಮಾರು ಅರ್ಧದಷ್ಟು ಪೌರ ಕಾರ್ಮಿಕರಿಗಾಗಿರಬಹುದು. ಆದರೆ ನಿವಾಸಿಗಳ ಪ್ರಕಾರ ರಸ್ತೆ, ಚರಂಡಿ ಮುಂತಾದವುಗಳ ಸ್ವಚ್ಛತೆ ಸಮಾಧಾನಕರವಿಲ್ಲ. ನಗರದ ಎಷ್ಟೋ ಭಾಗಗಳಲ್ಲಿ ಪೌರ ಕಾರ್ಮಿಕರು ಕಣ್ಣಿಗೇ ಬೀಳುವುದಿಲ್ಲ ಎಂದು ಕೆಲವು ನಗರ, ಮಹಾನಗರಗಳಲ್ಲಿ ಈ ಕೆಲಸವನ್ನು ಗುತ್ತಿಗೆದಾರರಿಗೆ ಒಪ್ಪಿಸುವ ಯೋಜನೆಗಳೂ ಇವೆ. ಇಲ್ಲಿಯೇ ಮಾರುಕಟ್ಟೆ, ಸ್ವಚ್ಛತೆಯನ್ನು ಕಸ ಸಾಗಾಣಿಕೆಯನ್ನೂ ಗುತ್ತಿಗೆದಾರರಿಗೆ ಒಪ್ಪಿಸಿದೆ. ಇದರಿಂದ ಕೆಲಸ ಹೆಚ್ಚು ಸಮಾಧಾನಕರವಿದೆಯಾ? ಈ ಪ್ರಯೋಗವನ್ನು ಇತರ ಕಡೆಯೂ ಹೂಡಬಹುದಾ? ಯೋಚಿಸಬೇಕು. ದವಾಖಾನೆ, ಔಷಧಾಲಯಗಳಲ್ಲೂ ಸಿಬ್ಬಂದಿ ಖರ್ಚು ಶೇಕಡಾ ೮೪ ರಿಂದ ೯೨ರ ವರೆಗೆ. ಇದನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ೧೯೯೯-೨೦೦೦ರಲ್ಲಿ ವಾಸ್ತವವಾಗಿ(ಅಂದಾಜು ಅಲ್ಲ) ೧೨೧ ಲಕ್ಷ ಸಿಬ್ಬಂದಿಗೆ ಮತ್ತು ಸಾದಿಲವಾರಕ್ಕೆ ೨೧ ಲಕ್ಷ ಖರ್ಚು ಮಾಡಿ ೨ ಲಕ್ಷ ರೂಪಾಯಿಗಳ ಔಷಧ ಖರೀದಿಸಲಾಯಿತು. ೧೮ ಸಾವಿರ ರೂಪಾಯಿ ಪಥ್ಯಾನ್ನಕ್ಕೆ ಖರ್ಚು ಮಾಡಲಾಯಿತು. ೨೦೦೧-೨೦೦೨ ಅಂದಾಜು ಪ್ರಕಾರ ೧೮೦ ಲಕ್ಷ ಸಿಬ್ಬಂದಿಗೆ ಬರೀ ೩ ಲಕ್ಷ ಸಾದಿಲವಾರಕ್ಕೆ ಖರ್ಚು ಮಾಡಿ ೧೦ ಲಕ್ಷಕ್ಕೆ ಔಷಧ ೧ ಲಕ್ಷದ ಪಥ್ಯಾನ್ನದ ಖರ್ಚು ಮಾಡುವುದಿದೆ. ೨೦೦೦-೨೦೦೧ರಲ್ಲಿ ಮೊದಲ ಅಂದಾಜು ೧೫ ಲಕ್ಷವಿತ್ತು. ಔಷಧ ಖರೀದಿಗೆ, ಪರಿಷ್ಕೃತ ಅಂದಾಜಿನಲ್ಲಿ ಅದು ೫ ಲಕ್ಷಕ್ಕೆ ಇಳಿಯಿತು. ವಾಸ್ತವ ಖರ್ಚು ಮುಂದಿನ ಬಜೆಟ್‌ನಲ್ಲಿ ತಿಳಿಯುತ್ತದೆ. ವೆಚ್ಚದ ಅಂದಾಜು ಮಾಡುವಾಗ ಅದರ ಅವಶ್ಯಕತೆ, ಪ್ರಯೋಜನ ಮತ್ತು ಆ ಕಾರ್ಯವನ್ನು ಕೈಗೆತ್ತಿಕೊಳ್ಳುವ, ಮುಗಿಸುವ ಸಾಧ್ಯಾಸಾಧ್ಯತೆಗಳನ್ನು ಜವಾಬ್ದಾರಿತನದಿಂದ, ಆದಷ್ಟು ಸಂಪೂರ್ಣ ಮಾಹಿತಿಯನ್ನು ಒದಗಿಸಿಕೊಂಡು ಪರಿಶೀಲಿಸಿ ನಂತರ ಪ್ರಸ್ತಾಪವನ್ನು ಸೂಚಿಸಬೇಕು. ನಂತರ ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ತಾಂತ್ರಿಕ, ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲೂ, ಮುಗಿಸಲೂ ಸಂಬಂಧಿಸಿದ ಖಾತೆ, ಸಿಬ್ಬಂದಿ ಪೂರ್ಣ ತಯಾರಿಯಲ್ಲಿರಬೇಕು ಹಾಗೂ ಕಾರ್ಯ ಸುರುವಾದ ನಂತರ ಅದರ ಪ್ರಗತಿ, ಗುಣಮಟ್ಟದ, ಹಣದ ವ್ಯವಸ್ಥಿತ, ಸಮಯೋಚಿತ ಪ್ರಾಮಾಣಿಕ ವಿನಿಯೋಗ ಇವೆಲ್ಲವುಗಳನ್ನೂ ಲಕ್ಷ್ಯದಲ್ಲಿಡಬೇಕು.

ಈ ಸಂದರ್ಭದಲ್ಲಿ ಸಂವಿಧಾನದ ೭೪ನೆಯ ತಿದ್ದುಪಡಿಯಲ್ಲಿ “ನಗರ ವಿಭಾಗ ಸಮಿತಿ” (Ward Committee) ರಚಿಸುವ ಕಡ್ಡಾಯ ನಿಯಮವಿದೆ. ಇದನ್ನು ಕರ್ನಾಟಕ ಮಹಾನಗರ ಪಾಲಿಕಾ ಕಾನೂನು, ೧೯೭೬ರಲ್ಲಿ ಕಲಂ ೧೩-ಎ ಆಗಿ ಸೇರಿಸಿದೆ. ಇದರ ಪ್ರಕಾರ ೩ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರದಲ್ಲಿ ಈ ಸಮಿತಿಗಳನ್ನು ರಚಿಸಿಯೇ ತೀರಬೇಕೆಂಬ ಕಡ್ಡಾಯ ನಿಯಮವಿದೆ. ಈ ಸಮಿತಿಯಲ್ಲಿ ಆ ವಾರ್ಡಿನ ಚುನಾಯಿತ ಸದಸ್ಯರೂ, ಗರಿಷ್ಟ ೫ ಜನ ಪಾಲಿಕೆಯ ಆಡಳಿತದ ಅನುಭವವಿದ್ದವರು ಮತ್ತು ಗರಿಷ್ಟ ೩ ಜನ ಸರಕಾರೇತರ ಸಂಸ್ಥೆಗಳ ಸದಸ್ಯರು ಇರಬೇಕು. ಇಂತಹ ಸಮಿತಿಯ ಕಾರ್ಯ ಕರ್ತವ್ಯಗಳನ್ನು ಸರಕಾರವು ನಿರ್ದೇಶಿಸುತ್ತದೆ. ಪ್ರತಿ ವಾರ್ಡಿನಲ್ಲಿ ಇಂತಹ ಸಮಿತಿಗಳು ಕಾರ್ಯ ಪ್ರವೃತ್ತರಾದರೆ ನಿವಾಸಿಗಳ ಕೊರತೆಗಳನ್ನೂ, ಆಯಾ ವಾರ್ಡಿನಲ್ಲಿ ಕೈಗೊಳ್ಳಬೇಕಾದ, ಕೈಗೊಂಡು ನಡೆಸುತ್ತಿರುವ ಕೆಲಸಗಳನ್ನೂ ಗಮನದಲ್ಲಿಟ್ಟುಕೊಂಡು ಪಾಲಿಕೆಯ ಉತ್ತಮ ಕಾರ್ಯನಿರ್ವಹಣೆಗೆ ಸಹಾಯಕರಾಗುತ್ತಾರೆ. ಪಾಲಿಕೆಯ ಹಣದ ಸದ್ವಿನಿಯೋಗದ ಬಗ್ಗೆಯೂ ಪರಿಣಾಮಕಾರಿ ಪಾತ್ರವನ್ನು ವಹಿಸಬಹುದು.

ಬಜೆಟ್‌:

ಸಂವಿಧಾನ ಮತ್ತು ಮಹಾನಗರ ಪಾಲಿಕಾ ಕಾನೂನು ಇವುಗಳ ನಂತರ ಆಡಳಿತದ ವಾರ್ಷಿಕ ಆಯ-ವ್ಯಯ ಅಂದಾಜು ಪತ್ರಿಕೆಗಳು(ಬಜೆಟ್‌) ಮಹತ್ವದ ದಾಖಲೆಗಳು. ಇವುಗಳಿಂದ ಆಯಾ ವರ್ಷದ ವರಮಾನ, ಖರ್ಚುಗಳು, ಬಂಡವಾಳ ಯೋಜನೆಗಳಲ್ಲದೆ, ಆಯಾ ವರ್ಷದ ಕಾರ್ಯಕಲಾಪಗಳ ಬಗ್ಗೆಯೂ ಮಾಹಿತಿ ದೊರೆಯುತ್ತದೆ. ಪಾಲಿಕೆಯ ಸದಸ್ಯರೂ ಮತ್ತು ಆಸಕ್ತ ನಿವಾಸಿಗಳೂ ಇವುಗಳನ್ನು ಗಮನಿಸಬೇಕು. (ಕಲಂ ೧೬೬ ರಿಂದ ಕಲಂ ೧೭೦)

ಪ್ರತಿ ವರ್ಷ ಜನೇವರಿ ೧೫ರೊಳಗೆ ಆಯುಕ್ತರು ಮುಂದಿನ ವರ್ಷದ (ಏಪ್ರಿಲ್‌೧ ರಿಂದ ಮಾರ್ಚ ೩೧ರ ವರೆಗೆ) ಆಯ-ವ್ಯಯಗಳ ಅಂದಾಜುಗಳ ಪತ್ರಿಕೆಯನ್ನು (ಬಜೆಟ್‌) ತಯಾರಿಸಿ, ತೆರಿಗೆ ಅಥವಾ ಸಾಲಗಳ ಬಗ್ಗೆ ಏನಾದರೂ ಅಗತ್ಯವೆನಿಸಿದ ಪ್ರಸ್ತಾಪಗಳನ್ನೂ ಸೇರಿಸಿ, ಪಾಲಿಕೆಯ ತೆರಿಗೆ ಸ್ಥಾಯಿ ಸಮಿತಿಗೆ ಸಲ್ಲಿಸಬೇಕು. ಸ್ಥಾಯಿ ಸಮಿತಿಯು ಅವುಗಳನ್ನು ಪರಿಷ್ಕರಿಸಿ ಪಾಲಿಕೆಯ ಸರ್ವ ಸದಸ್ಯರ ಸಭೆಯ ಮುಂದೆ ಮಂಡಿಸಬೇಕು. ಪಾಲಿಕೆಯು ಮರು ವರ್ಷದ ಸುರುವಿಗಿಂತ ಕನಿಷ್ಠ ೩ ವಾರಗಳ ಮುಂಚೆ ಅಂದರೆ ಹಾಲಿ ವರ್ಷದ ಮಾರ್ಚ ೧೦ರೊಳಗೆ ಅದನ್ನು ಮಂಜೂರು ಮಾಡಿ (ಅವಶ್ಯವೆನಿಸಿದ ತಿದ್ದುಪಡಿಗಳೊಂದಿಗೆ) ಒಂದು ಪ್ರತಿಯನ್ನು ಕೂಡಲೇ ರಾಜ್ಯ ಸರಕಾರಕ್ಕೆ ಅದರ ಒಪ್ಪಿಗೆಗಾಗಿ ಕಳುಹಿಸಬೇಕು. ಸರಕಾರವು ಸಂಪೂರ್ಣವಾಗಿ ಅಥವಾ ಬದಲಾವಣೆಗಳೊಂದಿಗೆ ಒಪ್ಪಿಗೆ ಕೊಡಬಹುದು. ಎರಡು ತಿಂಗಳೊಳಗೆ ಉತ್ತರ ಬರದಿದ್ದರೆ ಸರಕಾರದ ಒಪ್ಪಿಗೆಯಿದ ಎಂದು ಪಾಲಿಕೆಯು ಮುಂದೆ ಸಾಗಬಹುದು.

ಬಜೆಟ್‌ನಲ್ಲಿ ಮೂರು ವರ್ಷಗಳ ಮಾಹಿತಿ ಇರುತ್ತದೆ. ಸರಕಾರದ ಒಪ್ಪಿಗೆಯ ಮರುವರ್ಷದ ಅಂದಾಜುಗಳ ಸಂಗಡ, ನಡೆಯುತ್ತಿರುವ ವರ್ಷದ ಮೊದಲ ಅಂದಾಜುಗಳು (ಅಂದರೆ ಒಂದು ವರ್ಷದ ಹಿಂದೆ ಹೀಗೆಯೇ ಸರಕಾರದ ಒಪ್ಪಿಗೆ ಪಡೆದ) ಮತ್ತು ನಂತರ ಕೆಲವು ತಿಂಗಳುಗಳ ಅನುಭಾವದ ಮೇಲೆ ಅವೇ ಅಂದಾಜುಗಳನ್ನು ಮರುಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಿದ ಪರಿಷ್ಕೃತ ಅಂದಾಜುಗಳೂ ಹಾಗೂ ಹಿಂದಿನ ವರ್ಷದ ವಾಸ್ತವಿಕ ಲೆಕ್ಕಗಳೂ ಇರುತ್ತವೆ. ಉದಾಹರಣೆಗೆ – ೨೦೦೧ರ ಜನೇವರಿ-ಮಾರ್ಚಗಳಲ್ಲಿ ತಯಾರಿಸಿ ಒಪ್ಪಿಗೆ ಪಡೆದ ೨೦೦೧-೨೦೦೨ರ ಅಂದಾಜುಗಳ ಸಂಗಡ ೨೦೦೦-೨೦೦೧ರ ಮೊದಲ ಮತ್ತು ಪರಿಷ್ಕೃತ ಅಂದಾಜುಗಳೂ ಹಾಗೂ ೧೯೯೯-೨೦೦೦ರ ವಾಸ್ತವಿಕ ಲೆಕ್ಕಗಳೂ ಈ ೨೦೦೧-೨೦೦೨ರ ಬಜೆಟ್‌ನಲ್ಲಿ ದೊರಕುತ್ತವೆ.

ಬಜೆಟ್‌ನಲ್ಲಿ ಮೊದಲು ವಿವಿಧ ಮೂಲಗಳಿಂಧ ಬರುವ ವರಮಾನಗಳನ್ನು, ನಂತರ ವಿವಿಧ ಖಾತೆಗಳ ವಿವಿಧ ಬಾಬುಗಳ ಮೇಲೆ ಆಗುವ ವೆಚ್ಚಗಳನ್ನು ಬೇರೆ ಬೇರೆಯಾಗಿ ಸೂಕ್ತ ಶೀರ್ಷಿಕೆಗಳ (Heads of Account) ಅಡಿಯಲ್ಲಿ ಕೊಟ್ಟಿರುತ್ತದೆ. ಮೂರು ವರ್ಷಗಳ ಮಾಹಿತಿ ಶೀರ್ಷಿಕೆಗಳನ್ನೂ, ಅವುಗಳ ಅರ್ಥ ಮತ್ತು ವ್ಯಾಪ್ತಿಯನ್ನು ಬದಲಿ ಮಾಡದೇ ಹಾಗೆ ಉಳಿಸಿಕೊಂಡರೆ ವರ್ಷ ವರ್ಷಗಳ ನಡುವೆ, ಪಾಲಿಕೆ-ಪಾಲಿಕೆಗಳ ನಡುವೆ ಪ್ರಯೋಜನಕಾರಿ ತೌಲನಿಕ ಅಧ್ಯಯನ ಸಾಧ್ಯವಾಗುತ್ತದೆ. ಇದರಿಂದ ಅಂದಾಜುಗಳನ್ನು ಮಾಡುವುದರಲ್ಲಿ, ನಂತರ ವರಮಾನ, ವೆಚ್ಚಗಳ ಪ್ರಗತಿಯಿಂದ, ಪಾಲಿಕೆಯ ಕಾರ್ಯವೈಖರಿ, ಪ್ರಗತಿಗಳಲ್ಲಿ ಇರಬಹುದಾದ ಲೋಪದೋಷಗಳೂ,. ಅವಕ್ಕೆ ಸರಿಸುಧಾರಣಾ ಸಲಹೆ ಸೂಚನೆಗಳೂ ಹೊಳೆಯುತ್ತವೆ. ಒಂದು ವರ್ಷದ ಮೊದಲ ಅಂದಾಜು ಮಾಡಲು ಹಿಂದಣ ವರ್ಷದ ಮೊದಲ ಮತ್ತು ಪರಿಷ್ಕೃತ ಅಂದಾಜುಗಳನ್ನೂ, ಅದರ ಹಿಂದಿನ ವರ್ಷದ ವಾಸ್ತವಿಕ ಲೆಕ್ಕಗಳನ್ನೂ, ಮುಂದೆ ಆಗಬಹುದಾದ ಮಹತ್ವದ ಬದಲಾವಣೆಗಳನ್ನೂ ಆಧಾರವಾಗಿಟ್ಟುಕೊಂಡಿರುತ್ತದೆ. ವರ್ಷದ ನಡುವೆ ಅಲ್ಲಿಯವರೆಗೆ ಆದ ವರಮಾನ ವೆಚ್ಚಗಳ ಪ್ರಗತಿ, ಅನಿರೀಕ್ಷಿತ ಬದಲಾವಣೆಗಳನ್ನು ನೋಡಿಕೊಂಡು ಮೊದಲ ಅಂದಾಜುಗಳನ್ನು ಸರಿಪಡಿಸಿ ಪರಿಷ್ಕೃತ ಅಂದಾಜುಗಳನ್ನು ಮಾಡುತ್ತದೆ. ವರ್ಷ ಮುಗಿದು ಎಲ್ಲಾ ಲೆಕ್ಕ ಪತ್ರಗಳ ಕಾರ್ಯ ಮುಕ್ತಾಯವಾದಾಗ ವಾಸ್ತವವಾಗಿ ಆದ ವರಮಾನ ವೆಚ್ಚಗಳ ವಾಸ್ತವಿಕ ಲೆಕ್ಕಗಳು ತಯಾರಾಗುತ್ತವೆ. ಇವುಗಳಲ್ಲಿ ಏನಾದರೂ ವಿಶೇಷ ತಿದ್ದುಪಡಿ, ಅಂತರವಾದಲ್ಲಿ ಅದರ ಕಾರಣಗಳನ್ನು ಸಂಕ್ಷಿಪ್ತ ಟಿಪ್ಪಣಿಯಲ್ಲಿ ಸೂಚಿಸುತ್ತಾರೆ. ಬಜೆಟ್‌ಗಳು ಈ ವ್ಯವಸ್ಥಿತ ಅರ್ಥಪೂರ್ಣ ರೀತಿಯಲ್ಲಿ ತಯಾರಾದರೆ ಪಾಲಿಕೆಯ ಅರ್ಥವ್ಯವಸ್ಥೆಯನ್ನು ಪಾಲಿಕೆಯ ಸದಸ್ಯರೂ, ನಾಗರೀಕರು ತಿಳಿದುಕೊಳ್ಳಲಾಗುತ್ತದೆ. ಅದರ ಹಿಂದೆಯೇ ಆಡಳಿತದ ಕ್ಷಮತೆ, ಸಾಫಲ್ಯಗಳನ್ನೂ, ವರ್ಷ ವರ್ಷಕ್ಕೆ ಸಾಧಿಸಿದ ಪ್ರಗತಿಯನ್ನೂ ಕಾಣಬಹುದು.

ಕೊನೆಯ ಹಾರೈಕೆ:

ಬೆಂಗಳೂರು ಮಹಾನಗರ ಪಾಲಿಕೆಯು ಹೊಸ “ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆಯನ್ನು ಜಾರಿಗೆ ತಂದ ಪತ್ರದಲ್ಲಿ ಅದನ್ನು ನಾಗರೀಕರೊಂದಿಗೆ ಅನ್ಯೋನ್ಯತೆ ಹೊಂದಲು ಸಮಂಜಸ ಮತ್ತು ಏಕತೆರವಾದ ದರಗಳಿಂದ ಹಾಗೂ ಪಾರದರ್ಶಕತೆಯುಳ್ಳ ತೆರಿಗೆ ನಿರ್ಧರಿಸುವ ಪದ್ಧತಿ” ಎಂದು ಕರೆದಿದ್ದನ್ನು ಹಿಂದೆ ಉಲ್ಲೇಖಿಸಲಾಗಿದೆ. ಅನ್ಯೋನ್ಯತೆಯೇ ಆಡಳಿತಕ್ಕೂ ಪ್ರಜರಿಗೂ ಸ್ಥಳೀಯ ಸ್ವ-ಆಡಳಿತ ಘಟಕಗಳಲ್ಲಿ ಇರಬೇಕಾದ ಬಹುಮುಖ್ಯ ಮತ್ತು ಅತ್ಯಂತ ಅಗತ್ಯ ಸಂಬಂಧ. ತೆರಿಗೆಯ ಬಗ್ಗೆ ಅಷ್ಟೇ ಅಲ್ಲ. ಎಲ್ಲಾ ವಿಷಯಗಳಲ್ಲೂ ಸೇವೆ ಸೌಕರ್ಯ ಒದಗಿಸುವುದರಲ್ಲಿ, ಅದಕ್ಕಾಗಿ ಮಾಡಿದ ಖರ್ಚಿನ ಬಗ್ಗೆಯೂ ಪಾರದರ್ಶಕತೆ ಅಷ್ಟೇ ಅಗತ್ಯ. ಪಾರದರ್ಶಕತೆ ಎಂದರೆ ಆಡಳಿತದ ಬಗ್ಗೆ ಎಲ್ಲಾ ಮಾಹಿತಿ ತೆರದ ಪುಸ್ತಕದಂತಿರಬೇಕು. ಆಸಕ್ತ ಪ್ರಜೆಗೆ ಅಡ್ಡಿಯಿಲ್ಲದೆ ಸುಲಭವಾಗಿ ದೊರೆಯಬೇಕು. ಹಾಗೆಯೇ ಪ್ರಜರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಕೊಡಬೇಕಾದ ತೆರಿಗೆ, ಶುಲ್ಕ ಅಥವಾ ಇತರ ಹಣವನ್ನು ಕಾಲ ಕಾಲಕ್ಕೆ ಸರಿಯಾಗಿ, ಮುಚ್ಚುಮರೆ ಮಾಡದೆ, ತಡಮಾಡದೆ, ಪೂರ್ಣ ಸಹಕಾರ ಭಾವದಿಂದ ಮುಟ್ಟಿಸಬೇಕು. ಆಡಳಿತ ಕ್ಷೇತ್ರದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ಅವನ್ನು ತಮ್ಮ ಸಕಾರಾತ್ಮಕ ಸಲಹೆ-ಸೂಚನೆಗಳೊಂದಿಗೆ ಸಂಬಂಧಪಟ್ಟ ಖಾತೆ, ಅಧಿಕಾರಿಗೆ ತಿಳಿಸಬೇಕು. ಆಡಳಿತ ಮತ್ತು ಪ್ರಜರು ಎದುರಾಳಿಗಳಲ್ಲ, ಎಲ್ಲರ ಒಳಿತು ಒಂದೇ ಎಂಬುದನ್ನು ಮರೆಯಬಾರದು.

ಈ ಅನ್ಯೋನ್ಯತೆ ಮತ್ತು ಪಾರದರ್ಶಕತೆಯನ್ನು ಮೂಡಿಸುವಲ್ಲಿ ಮೊದಲ ಹೆಜ್ಜೆಯು ಆಡಳಿತದ್ದು.

ಪುಸ್ತಕ: ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ
ಲೇಖಕರು: ಪಂಚಪ್ಪ
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ

ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ (೧)

ಪ್ರಸ್ತಾವನೆ:

ಕೇಂದ್ರ ಸರಕಾರದ ಸೇವೆಯಿಂದ ನಿವೃತ್ತನಾದ ನಂತರ ನಾನು ಧಾರವಾಡದಲ್ಲಿ ನೆಲಸಿದೆ. ಈ ಹದಿನೇಳು ವರ್ಷಗಳಲ್ಲಿ(೧೯೮೪-೨೦೦೧) ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತದ ಅನುಭವದಿಂದ ನಾನು ಕಲಿತ ಮುಖ್ಯ ಪಾಠಗಳು:

೧) ನಗರವಾಸಿಯರ ದಿನದಿನದ ಜೀವನದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗಿಂತ ನಗರ ಪಾಲಿಕೆಯ ಆಡಳಿತ ಹೆಚ್ಚು ಸಮೀಪ ಮತ್ತು ಹೆಚ್ಚು ಪ್ರಭಾವಪೂರ್ಣ.

೨) ಆದರೂ ನಗರ ಪಾಲಿಕಾ ಕಾನೂನು, ಆಡಳಿತ ವ್ಯವಸ್ಥೆ, ಕಾರ್ಯವೈಖರಿಗಳ ಬಗ್ಗೆ ಇಲ್ಲಿಯ ನಿವಾಸಿಗಳಿಗೆ ಸಾಮಾನ್ಯ ತಿಳುವಳಿಕೆ, ಆಸಕ್ತಿ ತೀರಾ ಕಡಿಮೆ; ಇಲ್ಲವೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ;

೩) ಯಾವುದಾದರೂ ಒಂದು ವಿಶೇಷ ಸಮಸ್ಯೆ ಎದುರಾದಾಗ ಅದನ್ನು ವೈಯಕ್ತಿಕವಾಗಿ, ಆಗಿನ ಪೂರ್ತಿ, ಹೇಗಾದರೂ, ಯಾವುದಾದರೂ ರೀತಿಯಲ್ಲಿ ತೊಲಗಿಸಿಕೊಂಡರೆ ಸಾಕು – ಇದು ಸಾಮಾನ್ಯ ಧೋರಣೆ.

ಇದು ಜವಾಬ್ದಾರಿಯುತ ನಾಗರಿಕತನವಲ್ಲ. ನಗರ ಪಾಲಿಕೆಯು ಒಂದು ಸ್ಥಳೀಯ ಸ್ವ-ಆಡಳಿತ ಸಂಸ್ಥೆ (Local Self-Government Unit) ಗ್ರಾಮ, ಮಂಡಲ, ಜಿಲ್ಲಾ ಪಂಚಾಯತಿಗಳಂತೆ. ಪ್ರಜಾಪ್ರಭುತ್ವದಲ್ಲಿ ಮೊದಲನೆಯ ಹಂತ; ನಂತರ ರಾಜ್ಯ, ತದನಂತರ ಕೇಂದ್ರ ಸರಕಾರಗಳು. ಒಂದು ರೀತಿಯಲ್ಲಿ ಇದು ಪ್ರಜಾಪ್ರಭುತ್ವ ಪದ್ಧತಿಯ ಕಮ್ಮಟ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು. ಈ ಹಂತದಲ್ಲಿ ಪ್ರಜಾಪ್ರಭುತ್ವ ಸಫಲವಾಗಲು ಕೆಲವು ವಿಶೇಷ ಅನುಕೂಲಗಳಿವೆ:

೧) ಇದರಲ್ಲಿಯ ಕ್ಷೇತ್ರ, ಜನಸಂಖ್ಯೆ, ಕಡಿಮೆ ಆದ್ದರಿಂದ ಪರಸ್ಪರ ತಿಳುವಳಿಕೆ, ಸಂಪರ್ಕ, ಸಂಬಂಧ ಹೆಚ್ಚು ಅನ್ಯೋನ್ಯ. ೨) ಆದಕಾರಣ ಆಡಳಿತ ನಿಯಮಗಳು, ಕ್ರಮಗಳು, ಆಗು ಹೋಗುಗಳು -ಹಿತವಾಗಲೀ, ಅಹಿತವಾಗಲೀ-ಎಲ್ಲರಿಗೂ ಹತ್ತುತ್ತವೆ. ಹೀಗಾಗಿ ಯಾರಾದರೂ ಔದಾಸೀನ್ಯ ತಾಳಿದರೆ ಅವರಿಗೆ ಹಾನಿ.

೩) ಆಸಕ್ತಿ ಇದ್ದವರಿಗೆ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ದೊರಕಿಸಿಕೊಳ್ಳುವುದು ಕಷ್ಟವಲ್ಲ; ದೊರಕಿಸಿಕೊಂಡು, ಆಗುತ್ತಿರುವುದು ಸರಿಯೋ ತಪ್ಪೋ ಎನ್ನುವುದರ ಬಗ್ಗೆ ಯೋಚಿಸಿ, ಹತ್ತಿರದ ಇತರರ ಸಂಗಡ ಸಮಾಲೋಚಿಸಿ, ಒಂದು ನಿರ್ಣಯಕ್ಕೆ ಬರುವುದೂ ಕಷ್ಟವಲ್ಲ. ನಿರ್ಣಯಕ್ಕೆ ಬಂದ ಮೇಲೆ ತಪ್ಪನ್ನು ತಿದ್ದಿಸಲೂ, ಸರಿಯನ್ನು ದೃಢಪಡಿಸಲೂ, ಪ್ರಜರಾಗಿ, ಪ್ರಭುತ್ವವೇ ತಾವಾಗಿ, ಏನು ಮಾಡಬೇಕೆಂಬುವುದನ್ನು ತಿಳಿದುಕೊಂಡು, ಅದನ್ನು ನೇರವಾಗಿಯಾಗಲೀ, ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕವಾಗಲೀ, ಸಾರ್ವಜನಿಕ ಸಂಘ ಸಂಸ್ಥೆಗಳ ಸಹಾಯದಿಂದಾಗಲೀ, ಕೈಗೊಂಡು ಸಾಧಿಸಲು ಸಾರ್ಧಯ. ಇದೇ “ಪ್ರತ್ಯಕ್ಷ ಪ್ರಜಾಪ್ರಭುತ್ವ”(Direct Democracy).

೪) ಆದರೆ ಈ ಕ್ಷಮತೆಯನ್ನು ಸ್ವಂತ ಅಥವಾ ಒಂದು ಸಣ್ಣ ಗುಂಪಿನ ಸ್ವಾರ್ಥಕ್ಕಾಗಿ ಬಳಸಹೋದರೆ ಈ ಸಣ್ಣ ಕ್ಷೇತ್ರದಲ್ಲಿ ಅದನ್ನು ಮರೆಮಾಚುವುದು ಕಠಿಣ. ಅದರ ಬದಲು ಸಾಮಾನ್ಯ ಹಿತಕ್ಕಾಗಿ ಬಳಸಿದರೆ ಜೊತೆಗೆ ಸ್ವ-ಹಿತವೂ ಸಾಧಿಸುತ್ತದೆ. ಹೀಗೆ ಸಾಮಾನ್ಯ ಹಿತಕ್ಕಾಗಿ ಹೆಣಗಾಡಲು ನಮ್ಮಲ್ಲಿ ಕೆಲವು ಸಕಾರಾತ್ಮಕ ಮನೋಧೋರಣೆಗಳು ಅಗತ್ಯ.

i) ಸಾಮಾನ್ಯ ಹಿತದ ಬಗ್ಗೆ ಪ್ರಜ್ಞೆ, ಶ್ರದ್ಧೆ.

ii) ಪ್ರತಿಯೊಬ್ಬ ನಿವಾಸಿಯೂ ಮೊದಲು ಪ್ರಜೆ, ಸಾಮಾನ್ಯ, ಹಿತ, ಅಹಿತಗಳಲ್ಲಿ ಪಾಲುಗಾರ-ನಂತರ ಇತರ, ಪ್ರಜಾಪ್ರತಿನಿಧಿ ಇರಬಹುದು. ಆಡಳಿತದ ಅಧಿಕಾರಿ-ಸಿಬ್ಬಂದಿ, ಮತ್ತೇನಾದರೂ ಕೊನೆಗೂ ಪ್ರಜೆಯೇ. ನಡುವಿನ ಸಂಕುಚಿತ ದೃಷ್ಟಿಕೋನದಿಂದ ಸಾಮಾನ್ಯ. ಅಹಿತಕ್ಕೆ ಎಡೆ ಮಾಡಿಕೊಟ್ಟರೆ ಅದು ತನಗೂ ತಗುಲುತ್ತದೆ.

iii) ನಮ್ಮ ಕರ್ತವ್ಯ ಹಾಗೂ ಹಕ್ಕು-ಇವೆರಡರ ಬಗ್ಗೆಯೂ ಸಮಾನ ನಿಷ್ಠೆ:

iv) ಸಾಮಾನ್ಯ ಪ್ರಜರೂ, ಅವರ ಚುನಾಯಿತ ಪ್ರತಿನಿಧಿಗಳೂ, ಆಡಳಿತ ವರ್ಗದ ಅಧಿಕಾರಿ ಸಿಬ್ಬಂದಿಯವರೂ ಮೂರು ಬೇರೆ ಬೇರೆ ಅಂಶಗಳು ಕೂಡಿ ಯಾವುದೇ ಸದುದ್ದೇಶ, ಗುರಿ ಹೊಂದಿರದೇ, ಒಂದು ಇನ್ನೊಂದರ ಕೂಡ ಪೈಪೋಟಿಯಲ್ಲಿವೆ ಎಂಬ ವಿಧ್ವಂಸಕ ಕಲ್ಪನೆಯನ್ನು ಕಿತ್ತುಹಾಕಿ, ಮೂರೂ ಪರಸ್ಪರ ಪೂರಕ ಅಂಶಗಳು. ಎಲ್ಲರ ಹಿತವೇ ಅವರೆಲ್ಲರ ಉದ್ದೇಶ, ಗುರಿ ಎಂದು ದೃಢವಾಗಿ ನಂಬಿ, ಸಂಪೂರ್ಣ ಸಹಕಾರದಿಂದ ವರ್ತಿಸಬೇಕು. ಅಂದರೆ ಮಾತ್ರ ಪ್ರಜಾಪ್ರಭುತ್ವವು ನಿರ್ಲಕ್ಷ್ಯ, ಬೇಜವಾಬ್ದಾರಿ, ಸ್ವಾರ್ಥಸಾಧನೆ, ಅವ್ಯವಹಾರ, ಭ್ರಷ್ಟಾಚಾರಗಳಂಥ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಬಹುದು.

ಸಂವಿಧಾನ:

ನಮ್ಮ ದೇಶದ ಸಾರ್ವಜನಿಕ ಆಡಳಿತದ ಮೂಲ ಆಧಾರ ೧೯೫೦ರಲ್ಲಿ ಜಾರಿಗೆ ಬಂದ “ಭಾರತದ ಸಂವಿಧಾನ”. ಸಂವಿಧಾನದ ೪೦ನೆಯ ಕಲಂನಲ್ಲಿ ಒಂದು ಸೈದ್ಧಾಂತಿಕ ಆದೇಶವಿದೆ – “ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಿ, ಅವುಗಳಿಗೆ, ತಾವು ಸ್ವಾಯತ್ತ ಘಟಕಗಳಾಗಿ ಕಾರ್ಯನಿರ್ವಹಿಸಲು, ಅಗತ್ಯ ಅಧಿಕಾರಗಳನ್ನು ಕೊಡಲು ಸೂಕ್ತ ಕ್ರಮಗಳನ್ನು ಪ್ರಭುತ್ವ ಕೈಗೊಳ್ಳಬೇಕು”. ಬ್ರಿಟಿಷರ ಕಾಲದಲ್ಲೂ ಸ್ಥಳೀಯ ಸ್ವ-ಆಡಳಿತ ಘಟಕಗಳು ಇದ್ದವು – ನಗರ ಪಾಲಿಕೆಗಳು, ತಾಲೂಕು, ಜಿಲ್ಲಾ ಬೋರ್ಡುಗಳು, ಸ್ವಾತಂತ್ಯ್ರಾನಂತರ ‘ಬಲವಂತರಾಯ ಮೆಹತಾ’, ‘ಅಶೋಕ ಮೆಹತಾ’ ಮುಂತಾದ ಸಮಿತಿಗಳು ಈ ಬಗ್ಗೆ ವರದಿಗಳನ್ನು ಕೊಟ್ಟವು. ಕೆಲ ಮಟ್ಟಿಗೆ ಅನುಷ್ಠಾನಕ್ಕೂ ತರಲಾದವು. ಆದರೆ ಸಂವಿಧಾನದ ೭೩, ೭೪ನೆಯ ತಿದ್ದುಪಡಿಗಳ ನಂತರವೇ ೧೯೯೨ರಲ್ಲಿ ಸ್ಥಳೀಯ ಘಟಕಗಳಿಗೆ ಒಂದು ನಿರ್ದಿಷ್ಟ ಇರವು, ಸ್ಥಾನ ದೊರಕಿದವು. ಅಲ್ಲದೆ ಅವು ಅಳಿಸಿ ಹೋಗದಂತೆ ನೋಡಿಕೊಳ್ಳಲು “ರಾಜ್ಯ ಚುನಾವಣಾ ಆಯೋಗ”ವನ್ನೂ ಮತ್ತು ಅವುಗಳಿಗೆ ತಮ್ಮ ಕಾರ್ಯನಿರ್ವಹಣೆಗೆ ಅಗತ್ಯ ಆರ್ಥಿಕ ಶಕ್ತಿಯನ್ನು ಒದಗಿಸಲು ಸೂಕ್ತ ಶಿಫಾರಸು ಮಾಡಲು ಒಂದು “ರಾಜ್ಯ ಹಣಕಾಸು ಆಯೋಗ”ವನ್ನೂ ಈ ತಿದ್ದುಪಡಿಗಳು ಸ್ಥಾಪಿಸಿದವು. ಆದರೆ ಇವುಗಳ ಕಾರ್ಯವ್ಯಾಪ್ತಿ, ಅಧಿಕಾರ ಮುಂತಾದ ಎಲ್ಲಾ ಮೂಲಭೂತ ವಿಷಯಗಳು ರಾಜ್ಯ ಶಾಸಕಾಂಗದ ನಿರ್ಣಯಾಧೀನವೆಂದು ಇವೇ ತಿದ್ದುಪಡಿಗಳು ಹೇಳಿವೆ. ಇವುಗಳ ಕಾರ್ಯಕ್ಷೇತ್ರಗಳ ಪಟ್ಟಿಯನ್ನು ಸಂವಿಧಾನದ ಅನುಬಂಧಗಳಲ್ಲಿ(೧೧ನೆಯ, ೧೨ನೆಯ) ಸೂಚಿಸಿದ್ದರೂ, ಆ ಕ್ಷೇತ್ರಗಳಲ್ಲಿಯೂ ಯಾವ ಕರ್ತವ್ಯ, ಅಧಿಕಾರಗಳನ್ನು ಈ ಘಟಕಗಳಿಗೆ ವಹಿಸಬೇಕೆನ್ನುವುದನ್ನು ಶಾಸಕಾಂಗವೇ ನಿರ್ಣಯಿಸುತ್ತದೆ. ಹೀಗಾಗಿ ಮಹಾನಗರ ಪಾಲಿಕೆಗಳು ಈಗಲೂ ೧೯೭೬ರಲ್ಲಿಯೇ ಜಾರಿಗೆ ಬಂದ “ಕರ್ನಾಟಕ ಮಹಾನಗರ ಪಾಲಿಕಾ ಕಾನೂನಿ”ನ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ೧೯೯೪ರಲ್ಲಿ ಸಂವಿಧಾನದ ತಿದ್ದುಪಡಿಗಳನ್ನನುಸರಿಸಿ, ಈ ಕಾನೂನಿನಲ್ಲಿಯೂ ಕೆಲವು ಅವಶ್ಯ ತಿದ್ದುಪಡಿಗಳನ್ನು ಮಾಡಿದೆ-ಮುಖ್ಯವಾಗಿ “ರಾಜ್ಯ ಚುನಾವಣಾ ಆಯೋಗ” ಮತ್ತು “ರಾಜ್ಯ ಹಣಕಾಸು ಆಯೋಗ”ಗಳ ಬಗ್ಗೆ. ಆದರೂ ಈಗಲೂ ಈ ಕಾನೂನಿನ ಪ್ರಕಾರ ಪಾಲಿಕೆಯ ಎಲ್ಲ ಪ್ರಮುಖ ಗೊತ್ತುವಳಿಗಳಿಗೂ ರಾಜ್ಯ ಸರಕಾರದ ಒಪ್ಪಿಗೆ ಬೇಕು. ಸರಕಾರವು ಪಾಲಿಕೆಯ ಕಾರ್ಯಗಳಲ್ಲಿ ಕೈ ಹಾಕಬಹುದು, ಆದೇಶಗಳನ್ನು ಕೊಡಬಹುದು, ಅದರ ನಿರ್ಣಯಗಳನ್ನು ತಳ್ಳಿ ಹಾಕಬಹುದು. ಅಷ್ಟೇ ಅಲ್ಲ ಪಾಲಿಲಕೆಯ ಚುನಾಯಿತ ಸದಸ್ಯರ ತೆರಿಗೆ ಅಪೀಲು ಸಮಿತಿಯ ನಿರ್ಣಯಗಳ ವಿರುದ್ಧ ಸರಕಾರದ ಅಧಿಕಾರಿಯೂ ಸಹಿತ (ಡಿವಿಜನಲ್‌ಕಮೀಷನರ್) ತೀರ್ಪು ಕೊಡಬಹುದು. ಇದೆಲ್ಲದರ ಸಾರಾಂಶವೆಂದರೆ ಈ ಘಟಕಗಳಿಗೆ ಸಂವಿಧಾನದಲ್ಲಿ “ಸ್ಥಾನ” ದೊರೆತಿದೆ, “ಮಾನ”(ಸ್ವಾಯತ್ತತೆ) ಇನ್ನೂ ದೊರೆತಿಲ್ಲ. ಇವುಗಳಿಗೆ ನಿಜವಾದ ಸ್ವಾಯತ್ತತೆ ದೊರೆತರೆ “ಅಧಿಕಾರ”ದ ಬೆನ್ನಹಿಂಧೆಯೇ “ಜವಾಬ್ದಾರಿತನ”ದ ಸಂಪೂರ್ಣ ಪ್ರಜ್ಞೆ ಉಂಟಾಗುತ್ತದೆ.

ಕರ್ನಾಟಕ ಮಹಾನಗರ ಪಾಲಿಕಾ ಕಾನೂನು೧೯೭೬:

ಯಾವುದೇ ಸರಕಾರ ಅಥವಾ ಆಡಳಿತ ಸಂಸ್ಥೆಯ ಕಾರ್ಯಕ್ಷೇತ್ರದಲ್ಲಿ ಅರ್ಥ ವ್ಯವಸ್ಥೆ ಪ್ರಮುಖ ಅಂಶ – ಅಂದರೆ ಆಯ-ವ್ಯಯ, ಆಯ ಅಥವಾ ವರಮಾನ ಹೆಚ್ಚದ್ದರೆ ಸಮಾಧಾನ, ವ್ಯಲಯ ಅಥವಾ ಖರ್ಚು ಹೆಚ್ಚಾದರೆ ಚಿಂತೆ. ಇದು ಮೇಲ್ನೋಟಕ್ಕೆ ಸರಿಯಿರಬಹುದು. ಹೀಗಿದ್ದೂ ಸಂಸ್ಥೆಯ ಉದ್ದೇಶಗಳು ನೆರವೇರಿರಲಿಕ್ಕಿಲ್ಲ. ಆಯ-ವ್ಯಯಗಳಲ್ಲಿ ತಾರತಮ್ಯ, ಸೋರುವಿಕೆ ನಡೆದಿರಬಹುದು. ಉದಾಹರಣೆಗೆ -ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಈ ವರ್ಷದ ಬಜೆಟ್‌ನಲ್ಲಿ ವರ್ಷಾಂತ್ಯಕ್ಕೆ (೩೧-೩-೨೦೦೨ರಂದು) ಸುಮಾರು ೧೦ ಲಕ್ಷ ರೂಪಾಯಿಯ ಶಿಲ್ಕು ಉಳಿಯುವ ಅಂದಾಜು ಮಾಡಲಾಗಿದೆ. ಆದರೆ ಪಾಲಿಕೆಯ ಸೇವೆ ಸೌಕರ್ಯಗಳ ಬಗ್ಗೆ ನಿವಾಸಿಗಳಿಗೆ ಸಮಾಧಾನವಿಲ್ಲ. ಸ್ವಚ್ಛತೆ, ನೀರು ಸರಬರಾಜು, ರಸ್ತೆಗಳ ದುರಸ್ತಿ, ಕರಾಕರಣೆಯೂ ಹೆಚ್ಚು ಎನ್ನುತ್ತಾರೆ. ಪಾಲಿಕೆಯ ಆಡಳಿತ ವರ್ಗ ಇನ್ನೂ ಹೆಚ್ಚು ಉತ್ಪನ್ನವಿದ್ದರೆ, ಕರದಾತರು ಕರವಸೂಲಿಯಲ್ಲಿ ಸಹಕರಿಸಿದರೆ ಹೆಚ್ಚು ಸೌಕರ್ಯ ಒದಗಿಸಬಹುದು ಎನ್ನುತ್ತಾರೆ. ಯಾರು ಸರಿ, ಎಷ್ಟು ಪಾಲು ಸರಿ? ನಿಜ ಪರಿಸ್ಥಿತಿಯನ್ನು ಇನ್ನೂ ವಿವರವಾಗಿ, ಸ್ಪಷ್ಟವಾಗಿ ತಿಳಿದುಕೊಳ್ಳಬಹುದು ಅಗತ್ಯ.

ಕಾನೂನಿನಲ್ಲಿ ಇದರ ಬಗ್ಗೆ ಇರುವ ನಿಯಮಗಳ ಸಾರಾಂಶವನ್ನು ನೋಡೋಣ:

ಕಲಂ ೫೮ – ಮಹಾನಗರ ಪಾಲಿಕೆಯ ಮುಖ್ಯ ಕಡ್ಡಾಯ ಕರ್ತವ್ಯಗಳು:

i) ಸಾರ್ವಜನಿಕ ರಸ್ತೆಗಳು, ಮಾರುಕಟ್ಟೆಗಳು, ಕಸಾಯಿಖಾನೆ, ಪ್ರವಾಸ, ವಿಶ್ರಾಂತಿ ಸ್ಥಳ ಮುಂತಾದವುಗಳ ನಿರ್ಮಾಣ, ಸಂರಕ್ಷಣೆ, ದುರಸ್ತಿ, ಸ್ವಚ್ಛತೆ ಮತ್ತು ಅಲ್ಲಿ ದೀಪಗಳ ವ್ಯವಸ್ಥೆ;

ii) ಚರಂಡಿ, ಸಾರ್ವಜನಿಕ ಮೂತ್ರಿ, ಕಕ್ಕಸಗಳ ನಿರ್ಮಾಣ, ಸಂರಕ್ಷಣೆ, ಎಲ್ಲ ರೊಚ್ಚು, ಸಾರ, ಹೊಲಸು, ಕಸಗಳನ್ನು ಕಲೆ ಹಾಕಿ, ತೆಗೆದು, ಸಂಸ್ಕರಿಸಿ, ಗೊಬ್ಬರ ತಯಾರಿಸುವುದು.

iii) ಅಸಹ್ಯಕರ, ಅಪಾಯಕರ ಕಸುಬು, ಉದ್ದಿಮೆಗಳ ನಿಯಂತ್ರಣ;

iv) ಸ್ಮಶಾನಗಳ ನಿರ್ಮಾಣ, ನಿರ್ವಹಣೆ.

v) ನೀರಿನ ಸರಬರಾಜು ಮತ್ತು ಅದಕ್ಕಾಗಿ ಯಂತ್ರಾಲಯ ಮುಂತಾದವುಗಳ ನಿರ್ಮಾಣ, ನಿರ್ವಹಣೆ ಮುಂತಾದವುಗಳು.

ಕಲಂ ೫೯ – ಇಲ್ಲಿ ಮಹಾನಗರ ಪಾಲಿಕೆಯು ತನ್ನ ಯುಕ್ತಾಯುಕ್ತ ವಿವೇಚನೆಯಂತೆ ನಾಗರಿಕರ ಅನುಕೂಲ, ಹಿತಕ್ಕಾಗಿ ಇನ್ನೂ ಅನೇಕ ಸೌಕರ್ಯ ಸೌಲಭ್ಯಗಳನ್ನೂ ಒದಗಿಸಬಹುದು. ಉದಾಹರಣೆ – ಆಸ್ಪತ್ರೆಗಳು, ಈಜುಕೊಳಗಳು, ಕಲಾ ಮತ್ತಿತರ ವಸ್ತು ಸಂಗ್ರಹ, ಪ್ರದರ್ಶನಾಲಯಗಳು, ಮೃಗಾಲಯ, ಅನಾಥಾಲಯ, ಕೊಳಚೆ ಪ್ರದೇಶಗಳ ಸುಧಾರಣೆ ಮುಂತಾದವು.

ಈ ಕಡ್ಡಾಯದ ಮತ್ತು ಐಚ್ಛಿಕ ಕರ್ತವ್ಯಗಳ ಪಾಲನೆಗಾಗಿ ಪಾಲಿಕೆಯು ಸಿಬ್ಬಂದಿ, ಸಾಮಾನು, ಕೆಲಸಗಳ ರೂಪದಲ್ಲಿ ಹಣ ವಿನಿಯೋಗಿಸಬೇಕಾಗುತ್ತದೆ. ಅವಶ್ಯ ಹಣಕ್ಕಾಗಿ ಕಾನೂನು ಕೆಲವು ಆದಾಯ ಮೂಲಗಳನ್ನು ದೊರಕಿಸಿದೆ:

i) ಪಾಲಿಕೆಯೇ ವಿಧಿಸಿ ವಸೂಲಿ ಮಾಡುವ ತೆರಿಗೆಗಳು.

ii) ಸರಕಾರದ ಕೆಲವು ತೆರಿಗೆಗಳಲ್ಲಿಯ ಪಾಲು ಮತ್ತು ಅನುದಾನಗಳು.

iii) ಪಾಲಿಕೆಯ ಪರವಾನಿಗೆ ಅಥವಾ ವಿಶೇಷ ಸೇವೆಗಳಿಗಾಗಿ ಶುಲ್ಕಗಳು.

iv) ಇತರ ಮಿಶ್ರ ವರಮಾನಗಳು.

ಪಾಲಿಕೆಯ ತೆರಿಗೆಗಳು:

ಕಾನೂನಿನ ೧೦ನೇ ಪ್ರಕರಣದಲ್ಲಿ ಕಲಂ ೧೦೩ ರಿಂದ ೧೪೮ರ ವರೆಗೆ ಮತ್ತು ೩ನೇ ಅನುಬಂಧದಲ್ಲಿ ಸಾಮಾನ್ಯ ನಿಯಮಗಳೂ ೩ನೇ ಪ್ರಕರಣದ ಕಲಂ ೧೯೧, ೨೦೬, ೨೧೨ ಗಳಲ್ಲಿ ನೀರಿನ ಕರದ ಬಗ್ಗೆ ಕೆಲವು ವಿಶೇಷ ನಿಯಮಗಳೂ ಇವೆ.

ಕಲಂ ೧೦೩ ರಲ್ಲಿ ಪಾಲಿಕಲೆಯು ವಿಧಿಸಬಹುದಾದ ತೆರಿಗೆಗಳ ಪಟ್ಟಿಯನ್ನು ಕೊಟ್ಟಿದೆ. ಇವುಗಳಲ್ಲಿ ಮುಖ್ಯವಾದವು (೧) ಆಸ್ತಿ ತೆರಿಗೆ (೨) ನೀರಿನ ಕರ. ಉಳಿದ ತೆರಿಗೆಗಳು – ಜಾಹೀರಾತು ತೆರಿಗೆ ಮತ್ತು ಮೋಟಾರ್ ವಾಹನಗಳಲ್ಲದ ಇತರ ವಾಹನಗಳ ಕರ-ತರುವ ಆದಾಯ ಅತ್ಯಲ್ಪ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ೨೦೦೧-೨೦೦೨ರ ಬಜೆಟ್ಟಿನಲ್ಲಿ ಈ ವರಮಾನಗಳ ಮಾಹಿತಿ ಹೀಗಿದೆ:

 ತೆರಿಗೆ೧೯೯೯-೨೦೦೦೪ ವಾಸ್ತವಿಕ೨೦೦೦-೨೦೦೧ ಮೊದಲ ಅಂದಾಜು೨೦೦೦-೨೦೦೧ ಪರಿಷ್ಕೃತ ಅಂದಾಜು೨೦೦೧-೨೦೦೨ ಮೊದಲ ಅಂದಾಜು)ಅಸ್ತಿ ತೆರಿಗೆ೫೫೦ ಲಕ್ಷ೧,೫೦೦ ಲಕ್ಷ೧,೦೦೦ ಲಕ್ಷ೧,೬೦೦ ಲಕ್ಷ೨)ನೀರಿನ ಕರ೩೫೧ ಲಕ್ಷ೬೦೦ ಲಕ್ಷ೪೦೦ ಲಕ್ಷ೭೦೦ ಲಕ್ಷ೩)ಜಾಹೀರಾತು ತೆರಿಗೆ೩ ಲಕ್ಷ೨೦ ಲಕ್ಷ೫ ಲಕ್ಷ೧೦ ಲಕ್ಷ

ಪಾಲಿಕೆಯು ತೆರಿಗೆಯನ್ನು ವಿಧಿಸಲಿಕ್ಕೆ ಅಥವಾ ಹೆಚ್ಚಿಸಲಿಕ್ಕೆ ಅನುಸರಿಸಬೇಕಾದ ವಿಧಾನವನ್ನು ಕಾನೂನಿನಲ್ಲಿ ಹೀಗೆ ಕೊಟ್ಟಿದೆ:

i) ಚುನಾಯಿತ ಸರ್ವ ಸದಸ್ಯರ ಸಭೆಯ ಮುಂದೆ ಆ ಪ್ರಸ್ತಾಪವನ್ನು ಮಂಡಿಸಬೇಕು. ಸಭೆಯು ಚರ್ಚಾನಂತರ ಮಂಜೂರು ಮಾಡಬೇಕು.

ii) ಮಂಜೂರಾದ ಪ್ರಸ್ತಾಪವನ್ನು ಸಾರ್ವಜನಿಕರ ಗಮನಕ್ಕಾಗಿ ಪ್ರಕಟಿಸಬೇಕು. ನಿವಾಸಿ ಯಾರಾದರೂ ಒಂದು ತಿಂಗಳಿನೊಳಗಾಗಿ ಆಕ್ಷೇಪಣೆಗಳೇನಾದರೂ ಇದ್ದರೆ ಪಾಲಿಕೆಗೆ ಬರೆಹದಲ್ಲಿ ತಿಳಿಸಬೇಕು. ಸರ್ವ ಸದಸ್ಯರ ಸಭೆ ಮತ್ತೊಮ್ಮೆ ಕೂಡಿ ಬಂದ ಆಕ್ಷೇಪಣೆಗಳೆಲ್ಲವನ್ನೂ ಪರಿಶೀಲಿಸಿ, ಚರ್ಚಿಸಿ ಅಂತಿಮ ನಿರ್ಣಯಕ್ಕೆ ಬರಬೇಕು. ನಂತರ ಪ್ರಸ್ತಾಪವನ್ನೂ ಬಂದ ಎಲ್ಲ ಆಕ್ಷೇಪಣೆಗಳನ್ನೂ ಪ್ರಸ್ತಾಪದಲ್ಲಿ ಮಾಡಲಾದ ಬದಲಾವಣೆಗಳನ್ನೂ ಪಾಲಿಕೆಯು ಸರಕಾರದ ಒಪ್ಪಿಗೆಗಾಗಿ ಕಳುಹಿಸಬೇಕು.

iii) ಇವನ್ನೆಲ್ಲ ಪರಿಶೀಲಿಸಿ ಸರಕಾರವು ಪ್ರಸ್ತಾಪವನ್ನು

(೧) ತಿರಸ್ಕರಿಸಬಹುದು ಅಥವಾ ಮರುಪರಿಶೀಲನೆಗಾಗಿ ವಾಪಸು ಕಳುಹಿಸಬಹುದು. ಅಥವಾ

(ಆ) ಅನುಮೋದಿಸಬಹುದು.
i) ಏನೂ ಬದಲಾವಣೆಗಳಿಲ್ಲದೆ, ಇಲ್ಲವೇ
ii) ಬದಲಾವಣೆಗಳೊಂದಿಗೆ (ಆದರೆ ತೆರಿಗೆಯನ್ನು ಹೆಚ್ಚಿಸದೇ) ಅಥವಾ
iii) ಷರತ್ತುಗಳೊಂದಿಗೆ,

iv) ಸರಕಾರದ ಒಪ್ಪಿಗೆ ಪಡೆದ ಪ್ರಸ್ತಾಪವನ್ನೂ, ಅದು ಜಾರಿಗೆ ಬರುವ ದಿನಾಂಕವನ್ನೂ ಸಾರ್ವಜನಿಕರಿಗಾಗಿ ಪ್ರಕಟಿಸಬೇಕು. ಆದರೆ ಜಾರಿಗೆ ಬರುವ ದಿನವು ಪ್ರಕಟಣೆಯ ದಿನದಿಂದ ಕನಿಷ್ಠ ಒಂದು ತಿಂಗಳಾದರೂ ನಂತರವಿರಬೇಕು.

ಇಲ್ಲಿ ಪಾಲಿಕೆಯು ತೆರಿಗೆ ವಿಧಿಸುವ ವ್ಯವಸ್ಥೆಗೂ, ರಾಜ್ಯ ಮತ್ತು ಕೇಂದ್ರ ಸರಕಾರಗಳು ತೆರಿಗೆ ವಿಧಿಸುವ ವ್ಯವಸ್ಥೆಗೂ ಇರುವ ಒಂದು ಮಹತ್ವದ ವ್ಯತ್ಯಾಸವನ್ನು ಗಮನಿಸಬೇಕು. ಪಾಲಿಕೆಯು ತನ್ನ ಪ್ರಸ್ತಾಪವನ್ನು ನಿವಾಸಿಗಳ ಮುಂದಿಟ್ಟು, ಅವರ ಆಕ್ಷೇಪಣೆಗಳನ್ನು ಸ್ವೀಕರಿಸಿ, ಪರಿಶೀಲಿಸಿ, ಚರ್ಚಿಸಿ, ನಂತರ ಮಾತ್ರ ಕೊನೆಯ ನಿರ್ಣಯಕ್ಕೆ ತಲುಪಬಹುದು. ಅಲ್ಲದೇ ತನ್ನ ಕೊನೆಯ ನಿರ್ಣಯವನ್ನು ಸರಕಾರದ ಒಪ್ಪಿಗೆಗೆ ಕಳುಹಿಸುವಾಗ ನಿವಾಸಿಗಳ ಆಕ್ಷೇಪಣೆಗಳನ್ನೂ ಸರಕಾರಕ್ಕೆ ಕಳುಹಿಸಬೇಕು. ಅಂದರೆ ಸರಕಾರವೂ ಆ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡೇ ನಿರ್ಣಯಕ್ಕೆ ಬರಬೇಕು. ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಈ ತರಹದ ಕಟ್ಟಳೆಯಿಲ್ಲ. ಬದಲಾಗಿ ತೆರಿಗೆಗಳು ಜಾರಿಗೆ ಬರುವವರೆಗೆ ರಹಸ್ಯವಾಗಿಯೇ ಇಟ್ಟಿರುತ್ತಾರೆ. ಪಾಲಿಕೆಯ ಆಡಳಿತ ವ್ಯಾಪ್ತಿ ಸಣ್ಣದು; ಮತ್ತು ಅದು ವಿಧಿಸುವ ತೆರಿಗೆಗಳಿಗೂ, ನಿವಾಸಿಗಳು ಪಡೆಯಬೇಕಾದ ಸೇವೆ, ಸೌಕರ್ಯಗಳಿಗೂ ನೇರ ಸಂಬಂಧವಿದೆ. ಇದರಿಂದ ತಾವು ಬಯಸುವ ಸೌಕರ್ಯಗಳು ತಾವು ಕೊಡುವ ತೆರಿಗೆಗಳ ಮೇಲೆ ಅವಲಂಬಿಸಿವೆ ಎನ್ನುವುದು ನಿವಾಸಿಗಳಿಗೆ ಮನದಟ್ಟಾಗುತ್ತದೆ. ಆಗ ಅವರಿಗೆ ತಮ್ಮ ಎರಡು ರೀತಿಯ ಜವಾಬ್ದಾರಿಗಳ ತಿಳುವಳಿಕೆ ಮೂಡುತ್ತದೆ: i) ಸೌಕರ್ಯ ಬಯಸಿದಂತೆ ತೆರಿಗೆ ಕೊಡಲು ತಯಾರಿರಬೇಕು ಮತ್ತು ii) ಪಾಲಿಕೆಯು ತನ್ನ ಆದಾಯವನ್ನು ಪೋಲು ಮಾಡದೆ, ಸರಿಯಾಗಿ ಪ್ರಾಮಾಣಿಕತನದಿಂದ ಪರಿಣಾಮಕಾರಿಯಾಗಿ ಖರ್ಚು ಮಾಡದಿದ್ದಲ್ಲಿ ಹಾನಿ ತಮ್ಮದೇ. ಇದರಿಂದ ಪಾಲಿಕೆಯು ತೆರಿಗೆ ವಿಧಿಸುವಲ್ಲಿ, ವಸೂಲಿ ಮಾಡುವಲ್ಲಿ ಯಾವ ತರಹದ ತಾರತಮ್ಯ, ಅವ್ಯವಹಾರ, ಭ್ರಷ್ಟಾಚಾರಗಳಿಗೆ ಆಸ್ಪದವಿರಬಾರದು. ನಿವಾಸಿಗಳೇ ಯಾರೂ ಅವಕ್ಕೆ ಆಸ್ಪದ ಕೊಡಬಾರದು; ನ್ಯಾಯವಾದ ತೆರಿಗೆಯನ್ನು ಕಾಲಕ್ಕೆ ಸರಿಯಾಗಿ ತಾವೂ ಕೊಡಬೇಕು, ಇತರರೂ ಕೊಡಬೇಕು ಎಂದು ಸ್ಪಷ್ಟವಾಗುತ್ತದೆ.

ಹಾಗೆಯೇ ಖರ್ಚಿನಲ್ಲಿ ಪೋಲಾದರೆ, ಖರ್ಚು ತೋರಿಸಿ, ಕೆಲಸವೇ ಆಗದಿದ್ದರೆ ಅಥವಾ ಕಳಪೆಯಾದರೆ, ತಾವು ಕೊಟ್ಟ ತೆರಿಗೆ ವ್ಯರ್ಥವಾಗುತ್ತದೆಂದು ಅರಿತು, ಅದನ್ನು ಆಗಗೊಡಬಾರದೆಂಬುದೂ ಸ್ಪಷ್ಟವಾಗುತ್ತದೆ. ಇದೇ “ನೇರ ಪ್ರಜಾಪ್ರಭುತ್ವ” (Direct Democracy).

ಆಸ್ತಿ ತೆರಿಗೆ ಕಾನೂನಿನ ಪ್ರಕಾರ (ಕಲಂ ೧೦೮[೨] ಆಸ್ತಿ ತೆರಿಗೆಯ ದರವು “ಆಸ್ತಿ ಬೆಲೆ” (Rateable value) ಶೇಕಡ ೨೦ ರಿಂದ ೨೫ರ ವರೆಗೆ ಇರತಕ್ಕದ್ದು. ಆದಕಾರಣ “ಆಸ್ತಿ ಬೆಲೆ”ಯನ್ನು ಮೊದಲು ಕಂಡುಹಿಡಿಯಬೇಕು. ಇದಕ್ಕೆ ಕಾನೂನು ಎರಡು ಮಾರ್ಗಗಳನ್ನು ಕೊಟ್ಟಿದೆ. (ಕಲಂ ೧೦೯[೨]

i) ಆಸ್ತಿಯು ತರಬಹುದಾದ ವಾರ್ಷಿಕ ಬಾಡಿಗೆಯ ಅಂದಾಜು ಮಾಡಿ ಅದರಲ್ಲಿ ೨ ತಿಂಗಳ ಬಾಡಿಗೆಯನ್ನು ಆಸ್ತಿಯ ದುರಸ್ತಿ ಮುಂತಾದವುಗಳಿಗೆ ವಜಾ ಮಾಡಿ ೧೦ ತಿಂಗಳ ಬಾಡಿಗೆಯನ್ನು “ಆಸ್ತಿ ಬೆಲೆ” ಎಂದು ತೆಗೆದುಕೊಳ್ಳುವುದು; ಇಲ್ಲವೇ

ii) ತೆರಿಗೆಯ ಸಮಯದಲ್ಲಿ ಆಸ್ತಿಯ ನಿವೇಶನದ ಸಾಧಾರಣ ಮಾರ್ಕೆಟ್‌ಬೆಲೆಯ ಅಂದಾಜು ಮಾಡಿ, ಅದಕ್ಕೆ ಆ ಕಟ್ಟಡದ ನಿರ್ಮಾಣಕ್ಕೆ ಆಗಬಹುದಾದ ಅಂದಾಜು ಖರ್ಚನ್ನು ಕೂಡಿಸಿ (ಸವಕಳಿಗಾಗಿ ಕನಿಷ್ಠ ಶೇಕಡಾ ೧೦ರಷ್ಟು ಕಳೆದು), ಬಂದ ಮೊತ್ತದ ಶೇಕಡ ೬ರಷ್ಟನ್ನು “ಆಸ್ತಿ ಬೆಲೆ”ಯಾಗಿ ತೆಗೆದುಕೊಳ್ಳುವುದು.

ಎರಡೂ ಮಾರ್ಗಗಳ ಆಧಾರ “ಅಂದಾಜು”ಗಳು. ಇದು ಸಾಕಷ್ಟು ಸಮಸ್ಯೆಗಳನ್ನೊಡ್ಡುತ್ತದೆ. ವಾದ ವಿವಾದಗಳೂ, ಇಲ್ಲವೇ ಅವ್ಯವಹಾರ, ಅನ್ಯಾಯ, ಭ್ರಷ್ಟಾಚಾರಗಳ ಭಯ. ಆದಕಾರಣ, ವಿವಾದಾಸ್ಪದವಿಲ್ಲದ, ನಿರ್ದಿಷ್ಟ ಅಳತೆ ಮಾಡಬಹುದಾದ ವಾಸ್ತವಿಕ “ಅಂಶ”ಗಳ ಮೇಲೆ “ಆಸ್ತಿ ಬೆಲೆ” ಅಥವಾ ನೇರವಾಗಿ “ಆಸ್ತಿ ತೆರಿಗೆ”ಯನ್ನೇ ನಿರ್ಣಯಿಸುವ ಮೂರನೆಯ ಮಾರ್ಗ ಅಗತ್ಯ. ಇಂತಹ ಒಂದು ಹೊಸ ಪದ್ಧತಿಯನ್ನು ಸುವರ್ಣ ಮಹೋತ್ಸವ ವರ್ಷ ೨೦೦೦ದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು “ಸ್ವಯಂ ಘೋಷಿತ ಆಸ್ತಿ ತೆರಿಗೆ ಯೋಜನೆ” ಹೆಸರಿನಲ್ಲಿ ಜಾರಿಗೆ ತಂದಿತು. ಈ ಯೋಜನೆಯನ್ನು ನಿವಾಸಿಗಳ ಗಮನಕ್ಕೆ ತರಲು ಅಲ್ಲಿಯ ಮಹಾಪೌರರೂ, ಆಯುಕ್ತರೂ ಕೂಡಿ ಬರೆದ ಪತ್ರದಲ್ಲಿ ಹೀಗಿದೆ: “ಅಸ್ತಿ ತೆರಿಗೆಯನ್ನು ಪ್ರಕರಣ ೧೦೯(೨)ರ ಅಡಿಯಲ್ಲಿ ನಿರ್ಧರಿಸಲಾಗುತ್ತಿದೆಯಾದರೂ, ನಗರ ಪಾಲಿಗೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ವಾರ್ಷಿಕ ಬಾಡಿಗೆಯನ್ನು ನಿಗದಿಪಡಿಸುವ ಬಗ್ಗೆ ಯಾವುದೇ ವಿಧವಾದ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಿರುವುದಿಲ್ಲ. ಆದಕಾರಣ, ಅವರವರ ವಿವೇಚನೆಗೆ ತಕ್ಕಂತೆ ಹಾಗೂ ಒಂದೇ ವಿಧವಾದ ಕಟ್ಟಡಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸುವುದೇ ಮೊದಲಾದ ತಾರತಮ್ಯಗಳಿಂದ ನಾಗರೀಕರಲ್ಲಿ ಬಹಳಷ್ಟು ಅಸಮಾಧಾನ ಉಂಟಾಗುವುದೇ ಅಲ್ಲದೆ ನಗರ ಪಾಲಿಕೆ ವರಮಾನದಲ್ಲಿ ಬಹಳಷ್ಟು ಸೋರಿಕೆ ಉಂಟಾಗುತ್ತಿದೆ. ಅಂದರೆ ಪ್ರಸಕ್ತ ಪದ್ಧತಿಯು ನಾಗರೀಕರಿಗಾಗಲೀ ಅಥವಾ ನಗರ ಪಾಲಿಕೆಗಾಗಲೀ ಉತ್ತೇಜನಕಾರಿಯಾಗಿಲ್ಲ ಎಂಬುದು ಬಹಳ ಸ್ಪಷ್ಟವಾಗಿ ಕಂಡುಬರುತ್ತಿದೆ. ಆದಷ್ಟು ನಾಗರೀಕರೊಂದಿಗೆ ಅನ್ಯೋನ್ಯತೆ ಹೊಂದಲು ಸಮಂಜಸ ಮತ್ತು ಏಕತೆರವಾದ ದರಗಳಿಂದ ಹಾಗೂ ಪಾರದರ್ಶಕತೆಯುಳ್ಳ ತೆರಿಗೆ ನಿರ್ಧರಿಸುವ ಪದ್ಧತಿಯನ್ನು ಜಾರಿಗೆ ತರುವುದು ಅತ್ಯಾವಶ್ಯಕವೆಂದು ಪರಿಗಣಿಸಲಾಗಿದೆ.”

ಈ ಹೊಸ ಪದ್ಧತಿಯ ಮುಖ್ಯ ಆಧಾರಾಂಶಗಳು:

i) ಅಲ್ಲಲ್ಲಿಯ ಸಾಮಾನ್ಯ ಆಸ್ತಿ ಬೆಲೆಗಳ ಆಧಾರದ ಮೇಲೆ ಇಡೀ ನಗರವನ್ನು ಆರು ವಲಯಗಳಲ್ಲಿ ವಿಂಗಡಿಸಿದೆ.

ii) ಸಾಮಾನ್ಯ ಕಟ್ಟಡ ನಿರ್ಮಾಣ ವೆಚ್ಚದ ಮೇಲೆ ಕಟ್ಟಡಗಳನ್ನು ೫ ನಮೂನೆಗಳಲ್ಲಿ ವಿಂಗಡಸಿದೆ – ಆರ್.ಸಿ.ಸಿ. ಕಟ್ಟಡಗಳ ೩ ನಮೂನೆಗಳು, ಹೆಂಚುಶೀಟು ಛಾವಣಿಗಳು, ಗುಡಿಸಲು ತಡಿಕೆಮನೆ.

iii) ಆಸ್ತಿಯ ಉಪಯೋಗ-ವಸತಿ ಅಥವಾ ವಸತಿಯೇತರ.

iv) ಆಸ್ತಿಯ ಸ್ಥಾನ-ಸ್ವಂತ ವಹಿವಾಟು ಅಥವಾ ಬಾಡಿಗೆಗೆ.

ಈ ನಾಲ್ಕು ಅಂಶಗಳನ್ನಾಧರಿಸಿ ಚದುರಡಿ ದರಗಳನ್ನು ನಿರ್ಧರಿಸಲಾಗಿದ್ದು “ಆಸ್ತಿಯ ವಿಸ್ತೀರ್ಣ”ಕ್ಕೆ ಸೂಕ್ತ ದರಗಳನ್ನು ಹೆಚ್ಚಿ ಗುಣಿಸಬೇಕು. ಹಳೆಯ ಕಟ್ಟಡಗಳಿಗೆ ವಯಸ್ಸಿಗನುಗುಣವಾಗಿ ಸವಕಳಿಯ ಶೇಕಡಾ ದರಗಳನ್ನು ನಿರ್ಧರಿಸಿದೆ. ಈ ಸವಕಳಿಯನ್ನು ಬೆಲೆಯಲ್ಲಿ ಕಳೆದು “ಆಸ್ತಿಬೆಲೆ”ಯನ್ನು ಪಡೆಯಬೇಕು.

ಹಿಂದಿನ “ಅಂಧ” ಅಂದಾಜು ಪದ್ಧತಿಗಿಂತ ಈ ಹೊಸ ಪದ್ಧತಿ ಹೆಚ್ಚು ಸಮಂಜಸ. ಉಳಿದಿರಬಹುದಾದ ಲೋಪದೋಷಗಳನ್ನು ಅನುಭಾವದ ಮೇಲೆ ತಿದ್ದಿಕೊಳ್ಳಬಹುದು. ಉದಾಹರಣೆಗೆ- (i) “ಆಸ್ತಿ ಬೆಲೆ”ಯ ದರಗಳನ್ನು ಹಚ್ಚಿ “ಆಸ್ತಿಬೆಲೆ”ಯನ್ನು ಕಂಡುಕೊಂಡು ಅದರ ಮೇಲೆ ತೆರಿಗೆಯ ದರವನ್ನು(ಶೇಕಡಾ) ಹಚ್ಚಿ ತೆರಿಗೆಯ ಮೊತ್ತವನ್ನು ಪ್ರತಿ ಆಸ್ತಿಗೆ ಬೇರೆ ಬೇರೆಯಾಗಿ ಗುಣಿಸುವುದರ ಬದಲು, ಚದುರಡಿಗೆ ಆಸ್ತಿ ತೆರಿಗೆಯ ದರಗಳನ್ನೇ ಮೊದಲಿಗೇ ನಿರ್ಧರಿಸಿ, ತೆರಿಗೆಯನ್ನೇ ಸೀದಾ ಕಂಡುಕೊಳ್ಳಬಹುದು. ii) ಬಹಳ ಅಂತಸ್ತುಗಳ ಕಟ್ಟಡಗಳಲ್ಲಿ (ವಸತಿಯಗಲೀ, ವಸತಿಯೇತರವಾಗಲೀ) ನೆಲ ಮತ್ತು ಮೊದಲ ಅಂತಸ್ತುಗಳಿಗೂ, ಅವಕ್ಕೂ ಮೇಲಿನ ಅಂತಸ್ತುಗಳಿಗೂ ದರಗಳಲ್ಲಿ ರಿಯಾಯತಿ ಇರಬೇಕಾಗುತ್ತದೆ. ಈ ಬಗ್ಗೆ ಕಾನೂನಿನಲ್ಲಿ ತಿದ್ದುಪಡಿ ಆಗುವುದಿದೆಯೆಂದು ತಿಳಿದುಬಂದಿದೆ.

ಸರಕಾರದ ಆಸ್ತಿಗಳ ಮೇಲೆ ಸೇವಾ ಶುಲ್ಕ:

ಸರಕಾರಿ ಆಡಳಿತಕ್ಕಾಗಿ ಮಾತ್ರ ಉಪಯೋಗಿಸಲ್ಪಡುವ ಸರಕಾರಿ ಆಸ್ತಿಗಳ ಮೇಲೆ ಆಸ್ತಿ ತೆರಿಗೆ ಹತ್ತುವುದಿಲ್ಲ. ಆದರೆ ನಗರ ಪಾಲಿಕೆಯು ನೀಡುತ್ತಿರುವ ಸೇವಾ, ಸೌಕರ್ಯಗಳಿಗನುಗುಣವಾಗಿ “ಸೇವಾಶುಲ್ಕ”ವನ್ನು ವಿಧಿಸಬಹುದು. ಅಲ್ಲದೇ ವಸತಿಗಾಗಿ ಅಥವಾ ವಾಣಿಜ್ಯಕ್ಕಾಗಿ ಉಪಯೋಗಿಸಲ್ಪಡುವ ಸರಕಾರಿ ಆಸ್ತಿಗಳ ಮೇಲೆ ಸಂಪೂರ್ಣ ‘ಆಸ್ತಿ ತೆರಿಗೆ’ ಹತ್ತುತ್ತದೆ. ಈ ಆಸ್ತಿಗಳ ಮೇಲೆ ‘ಆಸ್ತಿ ತೆರಿಗೆ’ ಅಥವಾ ‘ಸೇವಾ ಶುಲ್ಕ’ ವಸೂಲಿಯಾಗದಿದ್ದಲ್ಲಿ ಪಾಲಿಕೆಗೂ ಹಾನಿ ಮತ್ತು ಪಾಲಿಕೆಯ ನಿವಾಸಿ ಕರದಾತರಿಗೆ ಅನ್ಯಾಯ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಜೆಟ್‌ನೋಡಿದರೆ ಇವುಗಳ ವಸೂಲಿ ೧೯೯೫-೧೯೯೬ ರಿಂದ ಎಳ್ಳಷ್ಟೂ ಆಗಿಲ್ಲವೆಂದು ಕಂಡುಬರುತ್ತದೆ. ಇದರ ಬಗ್ಗೆ ಅಂದಾಜುಗಳು ಇದ್ದರೂ ವಾಸ್ತವಿಕ ವಸೂಲಿ ತೋರಿಸಿಯೇ ಇಲ್ಲ. ಇತರ ನಗರ ಪಾಲಿಕೆಗಳೂ ಈ ಬಗ್ಗೆ ಗಮನ ಕೊಡಬೇಕು.

ನೀರಿನ ಕರ:

ನೀರಿನ ಸರಬರಾಜು ಪಾಲಿಕೆಯ ಕಡ್ಡಾಯ ಕರ್ತವ್ಯಗಳಲ್ಲೊಂದು. ಕಾನೂನಿನ ೧೯೧ನೇ ಕಲಂ ಪ್ರಕಾರ ಒದಗಿಸಿದ ನೀರಿನ ಮೇಲೆ ನಿರ್ಣಾಯಿತ ದರಗಳಂತೆ ಹಣವನ್ನು ತೆರಿಗೆಯ ರೂಪದಲ್ಲಿ ವಸೂಲಿ ಮಾಡಬಹುದು. ಈ ಕರವನ್ನು ವಿಧಿಸುವ, ಹೆಚ್ಚಿಸುವ, ವಸೂಲಿ ಮಾಡುವ ವಿಧಾನಗಳೆಲ್ಲವೂ ಆಸ್ತಿ ತೆರಿಗೆಯಂತೆಯೇ. ಬೆಂಗಳೂರಲ್ಲಿ ನೀರನ್ನು ಒದಗಿಸುವದೂ, ಹಂಚುವುದೂ ಮತ್ತು ಹಣ ವಸೂಲಿ ಮಾಡುವುದು ಎಲ್ಲವೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಧೀನ. ಉಳಿದ ಕಡೆ ಕರ್ನಾಟಕ ರಾಜ್ಯ ಮಂಡಳಿ ನೀರನ್ನು ನಗರಪಾಲಿಕೆಗಳಿಗೆ ಮಾರುತ್ತದೆ. ಪಾಲಿಕೆಗಳು ನೀರು ಹಂಚುವಿಕೆ ಮತ್ತು ಹಣ ವಸೂಲಿ ಮಾಡುತ್ತಿವೆ. ಮಂಡಳಿಯು ಒದಗಿಸಿದ ನೀರಿನ ಪ್ರಮಾಣಕ್ಕೂ, ಪಾಲಿಕೆಗಳು ಹಂಚಿದ ನೀರಿನ ಲೆಕ್ಕಕ್ಕೂ ಹೊಂದಿಕೆಯಾಗದಿದ್ದುದರಿಂದ ರಾಜ್ಯ ಸರಕಾರವು ೧೯೯೬ರಲ್ಲಿ ಪಾಲಿಕೆಗಳಿಗೆ ಒಂದು ಆದೇಶವನ್ನು ನೀಡಿತು. ನೀರಿನ ಬಳಕೆದಾರರು ಯಾರಾದರೂ ಮೀಟರ್ ಜೋಡಿಸದೆ, ಖಾಸಗಿಯಾಗಿ ನೀರನ್ನು ಪಡೆಯುತ್ತಿದ್ದರೆ, ಅವರನ್ನು ಒಂದು ವರ್ಷದೊಳಗೆ ಮೀಟರ್ ಜೋಡಿಸಿಕೊಳ್ಳುವಂತೆ ಒತ್ತಾಯ ಮಾಡಲು ಅವರಿಂದ ಮೊದಲ ೬ ತಿಂಗಳು, ತಿಂಗಳಿಗೆ ೪೫ ರೂಪಾಯಿಗಳಂತೆ, ನಂತರದ ಮೂರು ತಿಂಗಳು ೯೦ ರೂಪಾಯಿಗಳಂತೆ, ಕೊನೆಯ ಮೂರು ತಿಂಗಳು, ೧೩೫ ರೂಪಾಯಿಗಳಂತೆ ವಸೂಲಿ ಮಾಡಿ, ವರ್ಷದ ಕೊನೆಗೆ ಮೀಟರ್ ಇನ್ನೂ ಜೋಡಿಸಿಲ್ಲವಾದರೆ ನೀರನ್ನು ನಿಲ್ಲಿಸಬೇಕು. ಮೀಟರ್ ಜೋಡಿಸಿಕೊಂಡಿದ್ದರೆ ಒದಿಗಿಸದ ನೀರಿನ ಪ್ರಮಾಣವನ್ನು ಮೀಟರಿನಿಂದ ಓದಿ, ಅದಕ್ಕೆ ಒಂದು ಸಾವಿರ ಲೀಟರಿಗೆ ಹಂತ ಹಂತದಲ್ಲಿ ನಿರ್ಧರಿಸಿದ ದರಗಳನ್ನು ಹಚ್ಚಿ ಕರ ವಸೂಲಿ ಮಾಡಬೇಕು. ಈ ದರಗಳ ಪ್ರಕಾರ ೪೫ ರೂಪಾಯಿಗಳಿಗೆ ೨೮,೦೦೦ ಲೀಟರ್ ನೀರು ಒದಗಿಸಬೇಕಾಗುತ್ತದೆ. ಆದರೆ ಸಾಧಾರಣವಾಗಿ ಒಂದು ಕುಟುಂಬವು ೧೦,೦೦೦ ಲೀಟರಿನಷ್ಟು ನೀರನ್ನು ಉಪಯೋಗಿಸಬಹುದು. ಅಲ್ಲದೆ ನಗರಪಾಲಿಕೆಯು ಸರಾಸರಿ ೧೦-೧೫ ಸಾವಿರ ಲೀಟರಿಗಿಂತ ಹೆಚ್ಚು ಸರಬರಾಜು ಮಾಡುವುದು ಈಗಿನ ಪರಿಸ್ಥಿತಿಯಲ್ಲಿ ಅಸಾಧ್ಯ.

ಸರಕಾರದ ಈ ಆದೇಶವನ್ನು ಪಾಲಿಕೆಯು ಕಾನೂನಿನಲ್ಲಿ ವಿಧಿಸಿದ ಕ್ರಮಗಳನ್ನು ಅನುಸರಿಸದೇ ಹಾಗೆಯೇ ಜಾರಿಗೆ ತಂದಿತು. ಕಾನೂನಿನ ೧೪೬ನೇ ಕಲಂ ಪ್ರಕಾರ ಇಂತಹ ಸರಕಾರದ ಆದೇಶಗಳನ್ನು ಪಾಲಿಕೆಯು ಜಾರಿಗೆ ತರುವುದಕ್ಕೆ ಮುಂಚೆ ಸಾರ್ವಜನಿಕರಿಗಾಗಿ ಪ್ರಕಟಿಸಿ, ಅವರ ಆಕ್ಷೇಪಣೆಗಳಿಗೆ ಒಂದು ತಿಂಗಳ ಅವಕಾಶ ಕೊಟ್ಟು, ಬಂದ ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ, ಚರ್ಚಿಸಿ ಕೊನೆಯ ನಿರ್ಣಯ ತೆಗೆದುಕೊಂಡು, ಅದನ್ನು ಮತ್ತೆ ಪ್ರಕಟಿಸಿ, ಪ್ರಕಟಣೆಯ ಒಂದು ತಿಂಗಳ ನಂತರವೇ ಜಾರಿಗೆ ತರಬಹುದಿತ್ತು. ಇಲ್ಲಿ ಕಾನೂನಿನ ನೇರ ಉಲ್ಲಂಘನೆಯಾಯಿತು. ಪ್ರಜಾಪ್ರಭುತ್ವ ತತ್ವವನ್ನೇ ತಿರಸ್ಕರಿಸಲಾಯಿತು. ಇಷ್ಟೇ ಅಲ್ಲ. ಬರೀ ಆಡಳಿತದ ಹಿತದ ಕಡೆ ನೋಡಿದರೆ ಸಹಿತ ಇದರಿಂದ ಆಡಳಿತದ, ಸರಕಾರದ ಉದ್ದೇಶಗಳಿಗೇ ಹಾನಿಯುಂಟಾಯಿತು. ಪಾಲಿಕೆಯು ಈ ಆದೇಶವನ್ನು ಜಾರಿಗೆ ತಂದಾಗ ಮೀಟರ್ ಇದ್ದವರಿಗೂ ಈ ೪೫ ರೂಪಾಯಿಗಳ ಕರವನ್ನು ವಿಧಿಸಿ ವಸೂಲಿ ಮಾಡಿತು. ಇದರಿಂದ ಮೀಟರ್ ಇಲ್ಲದವರಿಗೆ ಮೀಟರ್ ಹಚ್ಚುವುದರಲ್ಲಿ ಏನೂ ಲಾಭ ಕಾಣದೆ ಅವರನ್ನು ಮೀಟರ್ ಹಚ್ಚಲು ಒತ್ತಾಯ ಪಡಿಸುವ ಸರಕಾರದ ಉದ್ದೇಶ ನೆರವೇರಲಿಲ್ಲ. ಇದರಿಂದ ಇನ್ನೊಂದು ಹಾನಿಯೂ ಸಂಭವಿಸಿದೆ. ಕಡಿಮೆ ನೀರು ಬಳಸಿದರೂ ೪೫ ರೂಪಾಯಿಗಳನ್ನು ಕೊಡಲೇ ಬೇಕೆಂದಾಗ ಜನರಿಗೆ ನೀರಿನ ಮಿತವ್ಯಯದ ಬದಲಿ ಅಪವ್ಯಯ ಮಾಡಲು ಸೂಚಿಸಿದ ಹಾಗಾಯಿತು.

ಈ ತಪ್ಪು ಪದ್ಧತಿ ಇನ್ನೂ ಜಾರಿಯಲ್ಲಿದೆ. ಇತರ ನಗರ ಪಾಲಿಕೆಗಳಲ್ಲೂ ಇರಬಹುದು. ಇದರಿಂದ ಒಂದು ಪಾಠ ಕಲಿಯಬಹುದು. ಪಾಲಿಕೆಯ ಸದಸ್ಯರಿಗೂ, ಆಡಳಿತ ಅಧಿಕಾರಿ-ಸಿಬ್ಬಂದಿ ವರ್ಗದವರಿಗೂ ಕಾನೂನಿನ ಮತ್ತು ಆಡಳಿತ ಹಿತದ ಬಗ್ಗೆ ಸರಿಯಾದ ಶಿಕ್ಷಣ ದೊರೆಯಬೇಕು. ಕಾನೂನನ್ನು ಗೌರವಿಸುವುದನ್ನು ಅವರು ಸೇವೆಗೆ ಸೇರುವಾಗಲೇ ಕಲಿತಿರಬೇಕು.

ಪುಸ್ತಕ: ಮಹಾನಗರ ಪಾಲಿಕೆಯ ಅರ್ಥವ್ಯವಸ್ಥೆ
ಲೇಖಕರು: ಪಂಚಪ್ಪ
ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ