ಮಂಗಳವಾರ, ಮಾರ್ಚ್ 21, 2017

ಮಲೆಗಳಲ್ಲಿ ಮದುಮಗಳು ಕಾದಂಬರಿಯ ವಿಮರ್ಶೆ

ಪ್ರಸಿದ್ಧ ರಂಗಕರ್ಮಿ ಪಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಮೈಸೂರಿನ `ರಂಗಾಯಣ’ವು (ಏಪ್ರಿಲ್23-ಮೇ21, 2010) `ಮದುಮಗಳು’ ಕಾದಂಬರಿಯನ್ನು ಆಧರಿಸಿ ರಂಗಪ್ರಯೋಗವನ್ನು ಮಾಡಿತು. ಇದು ಕನ್ನಡ ರಂಗ ಇತಿಹಾಸದಲ್ಲಿ ಒಂದು ಮುಖ್ಯ ಘಟನೆಯಾಯಿತು. ಅಲ್ಲಿಯ ತನಕ `ಮದುಮಗಳು’ ಕಾದಂಬರಿ ಓದಿದವರು ತಮ್ಮ ಕಲ್ಪನೆಯ ನಾಯಿಗುತ್ತಿ, ಚಿನ್ನಮ್ಮ, ದೇವಯ್ಯ, ಪೀಂಚಲುವನ್ನು ಕಲ್ಪಿಸಿಕೊಂಡಿದ್ದರು. ಆದರೆ ನಾಟಕ ಆ ಕಲ್ಪನೆಗಳನ್ನು ಭಗ್ನಗೊಳಿಸಿ ಪಾತ್ರಗಳ ಮೂರ್ತ ರೂಪವನ್ನು ಕೊಟ್ಟಿತು. `ಮದುಮಗಳು’ ಕಾದಂಬರಿಯ ಬಗ್ಗೆ ಹಲವು ಅಧ್ಯಯನಗಳು, ವಿಮರ್ಶೆಗಳು, ಟಿಪ್ಪಣಿಗಳು ಬಂದಿವೆ. ಈ ಅಧ್ಯಯನಗಳನ್ನು ಆಧರಿಸಿ ಮಾಡಿದ ಟಿಪ್ಪಣಿ ರೂಪದ ಬರಹವಿದು. ಈ ಬರಹಕ್ಕೆ ನಾಟಕದ ಎರಡು ಸಂಗತಿಗಳು ರೂಪಕಗಳಂತೆ ಕಾಣುತ್ತಿವೆ.

ಒಂದು: ನಾಟಕ ಮುಗಿದಾದ ನಂತರ ಇದರಲ್ಲಿ ಪಾತ್ರ ಮಾಡಿದ ನಟ ನಟಿಯರು ತಮ್ಮ ಪಾತ್ರದ ಅನುಭವಗಳನ್ನು, ಜತೆಗೆ ತಮ್ಮ ಬದುಕಿನ ಕತೆಯನ್ನೂ ರಂಗಾಯಣದಲ್ಲಿ ಹೇಳಿಕೊಂಡಿದ್ದರು. ಈ ಕತೆಗಳನ್ನು ಕೇಳುತ್ತಿದ್ದರೆ ಅವರ ಬದುಕಿನ ಕತೆಯೇ ಅವರವರ ಪಾತ್ರಗಳಿಗೆ ಜೀವತುಂಬಲು ಸ್ಫೂರ್ತಿಯಾಯಿತೇನೋ ಎನ್ನುವಂತಿದೆ. ಈಗ ಆ ಪಾತ್ರಗಳೆಲ್ಲಾ ತಮ್ಮ ನಿಜ ಬದುಕಿಗೆ ತೆರೆದುಕೊಂಡಿವೆ; ಸದ್ಯದ ಎಲ್ಲಾ ವೈರುಧ್ಯಗಳೊಂದಿಗೆ ಈ ಪಾತ್ರಗಳು ಮುಖಾಮುಖಿಯಾಗುತ್ತಿವೆ. ಇದು ಕಾದಂಬರಿಯೊಂದು ವರ್ತಮಾನದಲ್ಲಿ ಜೀವಂತವಾಗಿರುವುದರ ರೂಪಕವೆನ್ನಿಸಿತು.

ಎರಡು: ಈ ನಾಟಕವನ್ನು ಅರ್ಜಿನಜೋಗಿಗಳು, ಕಾಡಸಿದ್ದರು ಹಾಗೂ ಹೆಳವರು ನಿರೂಪಿಸುತ್ತಾರೆ. ಅವರೆಲ್ಲ ತಮ್ಮ ಕತೆ ಹೇಳುವ ಕಾಯಕವನ್ನೇ ತ್ಯಜಿಸುವ ಹಂತದಲ್ಲಿರುವಾಗ, ಅವರನ್ನು ಕೈಹಿಡಿದು ಮತ್ತೆ ರಂಗಮಂಚಕ್ಕೆ ತಂದಿದ್ದು ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’. ಇದರ ಹಿಂದೆ ಸೃಜನಶೀಲ ಕೃತಿಯೊಂದು ಮೌಖಿಕ ಜಗತ್ತಿನ ಮೂಲಕ ಮರುಹುಟ್ಟು ಪಡೆಯುವ ಸೂಚನೆಯಿದೆ. ಇದು ಜಾನಪದ ಜಗತ್ತು ಎದುರಿಸುವ ಬಿಕ್ಕಟ್ಟೊಂದನ್ನು ಬಿಡಿಸುವ ಧ್ವ್ವನಿ ಕೂಡ. ಯಾವ ಕುವೆಂಪು ತಮ್ಮ ಜೀವಿತಾವದಿಯಲ್ಲಿ ಜಾನಪದವನ್ನು ಮೌಢ್ಯ ಎಂದು ಆಕಡೆಗೆ ಹೆಚ್ಚು ಒಲವು ತೋರಲಿಲ್ಲವೋ, ಅದೇ ಜಾನಪದದ ಕಣ್ಣೋಟದಿಂದ ಮದುಮಗಳನ್ನು ನಿರೂಪಿಸಿದ್ದು ಹೆಚ್ಚು ಅರ್ಥಪೂರ್ಣ. ಇದು ಕಾದಂಬರಿಯೊಂದು ಲೇಖಕನ ನಂಬಿಕೆಯ ಲೋಕವನ್ನೂ ಮೀರಿ, ವಿಮರ್ಶಕರ ಲೆಕ್ಕಾಚಾರಗಳನ್ನು ಮತ್ತೆ ತಾಳೆ ನೋಡುವಂತೆ ಮಾಡಿ, ಮತ್ತೊಂದಕ್ಕೆ ಮರುಜೀವ ನೀಡಬಲ್ಲ ಅಗಾಧ ಚೈತನ್ಯದ ರೂಪಕದಂತೆ ಕಂಡಿತು. ಬಹುಶಃ ಈ ಎರಡೂ ರೂಪಕಗಳು ಮದುಮಗಳು ಕಾದಂಬರಿಯ ಅದ್ಯಯನಗಳ ಸಮೀಕ್ಷೆಗೆ ತೋರು ಬೆರಳಾಗಿವೆ.

2

ಕುವೆಂಪು ಎಲ್ಲಾ ಕಾಲದಲ್ಲೂ ಹೊಸ ಅರ್ಥಗಳಲ್ಲಿ ಎದುರಾಗುವ ಬಹುಮುಖ್ಯ ಲೇಖಕರಲ್ಲಿ ಒಬ್ಬರು. ಇವರ ಬಗೆಗೆ ಕನ್ನಡದ ಮನಸ್ಸು ತೋರಿದ ಪ್ರತಿಕ್ರಿಯೆಗಳು ಅಚ್ಚರಿ ಹುಟ್ಟಿಸುವಂತಹವು ಮತ್ತು ವೈರುಧ್ಯಗಳನ್ನು ಸೃಷ್ಟಿಸಿದಂತಹವು. ಅವರ ಬರಹಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಮುಖ್ಯವಾಗಿ ಎರಡು ಅಂಶಗಳು ಕಾಣಿಸುತ್ತವೆ. ಒಂದು: ಕುವೆಂಪು ಪ್ರಜ್ಞೆಯನ್ನು ವಿಸ್ತರಿಸುವ ಮತ್ತು ಮಿತಿಗೊಳಿಸುವ ಆಯಾಮ. ಎರಡು: ಸಾಮಾನ್ಯ ಓದುಗರಿಗೆ ಕುವೆಂಪು ಅವರನ್ನು ಭಿನ್ನವಾಗಿ ಅರ್ಥೈಸುವ ಮತ್ತು ತಮ್ಮ ಅರ್ಥಗಳ ಚೌಕಟ್ಟಿನಲ್ಲಿ ಕುವೆಂಪು ಅವರನ್ನು ಕಟ್ಟಿಹಾಕುವ ಆಯಾಮ. ಹಾಗಾಗಿ ಅವರ ಸಾಹಿತ್ಯದ ಅನುಸಂಧಾನ ಬಹುಮುಖಿಯಾದುದು. `ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು. ಅಂತೆಯೇ ಕನ್ನಡದ ಕಾದಂಬರಿ ಪ್ರಕಾರದ ಸಾಂಪ್ರದಾಯಿಕ ಕಟ್ಟುಗಳನ್ನು ಮುರಿದದ್ದು. ತುಂಬಾ ಸಂಕೀರ್ಣವಾದ ಈ ಕಾದಂಬರಿ ತನ್ನ ಬಗ್ಗೆ ಬರಬಹುದಾದ ವಿಮರ್ಶೆಗೂ ತಾನೇ ಸವಾಲಾಗಿ ನಿಂತದ್ದು.

20 ನೇ ಶತಮಾನದಲ್ಲಿ ಘಟಿಸಿದ ಪ್ರಮುಖ ಪಲ್ಲಟಗಳನ್ನು `ಮದುಮಗಳು’ ಒಳಗೊಂಡಿದೆ. ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೊದಲ ದಿನಗಳ ಅನುಭವ, ಹಿಂದುಳಿದ ವರ್ಗಗಳ ಆಳದಲ್ಲಿ ರೂಪುಗೊಳ್ಳುತ್ತಿರುವ ಎಚ್ಚರದ ಸೂಕ್ಷ್ಮಗಳು, ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿರುವ ಜನಸಮುದಾಯದ ಆಲೋಚನ ಪಲ್ಲಟ- ಇಂತಹ ಹಲವು ಬಗೆಯ ಪ್ರೇರಣೆಗಳು ಕುವೆಂಪು ಇವರ ಬರಹವನ್ನು ಪ್ರಭಾವಿಸಿವೆ. `ಮದುಮಗಳು’ ಬಗ್ಗೆ ಬಂದ ವಿಮರ್ಶೆ ಆ ಕಾಲಘಟ್ಟದ ಪ್ರಭಾವ ಪ್ರೇರಣೆಯ ಬಗೆಗೂ ಮತ್ತು ಒಟ್ಟು ಕನ್ನಡ ಪ್ರಜ್ಞೆಯು ರೂಪಾಂತರಕ್ಕೆ ಒಳಗಾಗುತ್ತಿರುವುದರ ಸಂಘರ್ಷದ ಬಗ್ಗೆಯೂ ಪ್ರತಿಕ್ರಿಯೆ ವ್ಯಕ್ತಪಡಿಸಿದಂತಿದೆ. ಹಾಗಾಗಿ ಕುವೆಂಪು ಅವರನ್ನು ಶೂದ್ರ ಪ್ರಜ್ಞೆಯ ಅಸ್ಮಿತೆಯನ್ನಾಗಿ ಕಟ್ಟಿಕೊಳ್ಳುವ ಸಮರ್ಥನೀಯ ನೆಲೆಗಳು ಇರುವಂತೆ, ಬ್ರಾಹ್ಮಣ ಪ್ರಜ್ಞೆಯ ನಿರಾಕರಣೆಯ ನೆಲೆಗಳೂ ಇವೆ. ಹಾಗೆಯೇ ಈ ವೈರುಧ್ಯಗಳನ್ನು ಮೀರಿದ ಸಂಗತಿಗಳೂ ಇಲ್ಲದಿಲ್ಲ.

ಕುವೆಂಪು ಅವರ ಒಟ್ಟು ಸಾಹಿತ್ಯದ ಬಗ್ಗೆ ಬಂದ ವಿಮರ್ಶೆಯಲ್ಲಿ ಅಭಿಮಾನದ ನೆಲೆ ಗಾಢವಾಗಿದೆ. ಇದನ್ನು ಹೆಚ್ಚಾಗಿ ಅವರ ಬಗ್ಗೆ ಬಂದ ಅಭಿನಂದನ ಗ್ರಂಥಗಳಲ್ಲಿ ಕಾಣಬಹುದು. ಇದರ ಸೆಳಕುಗಳು ಮದುಮಗಳು ಕಾದಂಬರಿಯ ವಿಮರ್ಶೆಯಲ್ಲೂ ಬೆರೆತಿವೆ. ಇದಕ್ಕೆ ಪ್ರೇರಣೆ ಕೇವಲ ಸಾಹಿತ್ಯಿಕ ಕಾರಣ ಮಾತ್ರವಲ್ಲದೆ, ಸಾಹಿತ್ಯೇತರ ಕಾರಣಗಳೂ ಇವೆ. ಅದರಲ್ಲಿ ಮುಖ್ಯವಾದುದು, ಮದುಮಗಳು ಕಾದಂಬರಿ ಬರುವ ಹೊತ್ತಿಗಾಗಲೇ ಕುವೆಂಪು ಅವರನ್ನು ಶೂದ್ರ ಪ್ರಜ್ಞೆಯ ರೂಪಕ ಎಂಬಂತೆ ದಲಿತ ಮತ್ತು ಕೆಳವರ್ಗದ ಚಿಂತಕರು ಒಪ್ಪಿಕೊಂಡಿದ್ದರು. ಹಾಗಾಗಿ ಈ ನೆಲೆ ಅವರ ಒಟ್ಟೂ ಸಾಹಿತ್ಯದ ನೋಟಕ್ರಮವನ್ನು ಪ್ರಭಾವಿಸಿತು. ಅದು ಇನ್ನೂ ಮುಂದುವರೆದು ಒಕ್ಕಲಿಗರ ಸಾಂಸ್ಕೃತಿಕ ಅನನ್ಯತೆಯಾಗಿಯೂ ರೂಪಾಂತರ ಪಡೆಯಿತು. ಈ ಅಂಶಗಳು ಕುವೆಂಪು ಅವರ ಬಗೆಗಿನ ಚಿಂತನೆಯ ಆಳದಲ್ಲಿ ಬ್ರಾಹ್ಮಣ್ಯದ ವಿರೋಧಿ ನಿಲುವು ನೆಲೆಗೊಳ್ಳುವಂತೆ ಮಾಡಿದವು. ಇದರ ವ್ಯತಿರಿಕ್ತ ಪರಿಣಾಮ ಕುವೆಂಪು ಅವರ ಸಾಹಿತ್ಯದ ಬಗ್ಗೆ ಬರೆದ ಬ್ರಾಹ್ಮಣರ ವಿಮರ್ಶೆ ಯಲ್ಲಿಯೂ ಕಾಣಿಸಿಕೊಂಡಿತು.

3

ಮದುಮಗಳು ಕಾದಂಬರಿ ಪ್ರಕಟಣೆಗೂ ಮುಂಚೆ ಕನ್ನಡದ ಕಾದಂಬರಿ ಚೌಕಟ್ಟುಗಳ ಬಗ್ಗೆ ಕೆಲವು ಸಿದ್ದ ಗ್ರಹಿಕೆಗಳಿದ್ದವು. ಅಂತೆಯೇ ಕಾದಂಬರಿ ಕುರಿತ ವಿಮರ್ಶಾ ಪರಿಭಾಷೆಯೂ ಆತನಕದ ಕನ್ನಡದ ಕಾದಂಬರಿಗಳನ್ನು ಆಧರಿಸಿ ರೂಪುಗೊಂಡಿತ್ತು. ಇದೇ ಗ್ರಹಿಕೆ ಮತ್ತು ಪರಿಭಾಷೆಗಳಲ್ಲಿ `ಮದುಮಗಳು’ ಕಾದಂಬರಿಯನ್ನು ವ್ಯಾಖ್ಯಾನಿಸುವ ಪ್ರಯತ್ನವೂ ನಡೆಯಿತು. ಇದನ್ನು ಮುಖ್ಯವಾಗಿ ನವ್ಯದ ವಿಮರ್ಶೆಯಲ್ಲಿ ಕಾಣಬಹುದು. ಈ ಕಾದಂಬರಿಗೆ ಶಿಲ್ಪದ ಕೊರತೆ ಇದೆ (ಎಂ.ಜಿ. ಕೃಷ್ಣಮೂರ್ತಿ), ಕೇಂದ್ರ ಪ್ರಜ್ಞೆ ಇಲ್ಲ, ವಿವರಗಳಲ್ಲಿ ಸೊಕ್ಕುತ್ತದೆ (ಯು.ಆರ್. ಅನಂತಮೂರ್ತಿ) ಮುಂತಾದ ವ್ಯಾಖ್ಯಾನಗಳು ಬಂದವುಗಳು. ಆ ನಂತರದಲ್ಲಿ ಈ ನೋಟಕ್ರಮ ಬದಲಾಗಿದೆ. ಸುಜನಾ ಅವರು `ಮಲೆಗಳಲ್ಲಿ ಮದುಮಗಳು’ ಮತ್ತು `ಶ್ರೀ ರಾಮಾಯಣ ದರ್ಶನಂ’ ಇವೆರಡೂ ಒಂದೇ ಪ್ರಜ್ಞೆಯ ಎರಡು ಭಿನ್ನ ಪಾತಳಿಗಳಾಗಿದ್ದು ಒಂದು `ತಾರಸ್ಥಾಯಿ’ ಮತ್ತೊಂದು `ಮಂದ್ರಸ್ಥಾಯಿ’ ಎನ್ನುತ್ತಾರೆ. ಇದನ್ನು ಕೆ.ವಿ ನಾರಾಯಣ ಅವರು ಇದೊಂದು ಮುಖ್ಯ ನಿಲುವು ಎಂದು ಹೇಳುತ್ತಾರೆ. (ತೊಂಡುಮೇವು-1, ಪು.223). ಇದು `ಮದುಮಗಳು’ ಕಾದಂಬರಿಯನ್ನು ಬೇರೆಯ ದಿಕ್ಕಿನಲ್ಲಿ ನೋಡಿದುದರ ಫಲ.

`ಮದುಮಗಳು’ ಕಾದಂಬರಿ ತನ್ನೊಡಲೊಳಗೇ ಕಾದಂಬರಿಯ ಹೊಸ ಆಯಾಮಗಳನ್ನು ಒಳಗೊಂಡಿತ್ತು. ಅಂದರೆ ಆತನಕದ ಕನ್ನಡದ ಕಾದಂಬರಿಯ ಚೌಕಟ್ಟುಗಳಲ್ಲಿ ಇಟ್ಟರೆ ಅದು ಹೊರಗೆ ಉಳಿದುಬಿಡುತ್ತಿತ್ತು. ಹಾಗಾಗಿ ಈ ಕಾದಂಬರಿಯೊಳಗಿನ ಭಿತ್ತಿಯನ್ನು ಆಧರಿಸಿ ವಿಶ್ಲೇಷಣೆ ಮಾಡುವ ಒತ್ತಡವನ್ನು ಸ್ವತಃ ಕಾದಂಬರಿಯೇ ಸೃಷ್ಟಿಸಿತು. ಇದು ಸೃಜನಶೀಲ ಕೃತಿಯೊಂದರ ಬಹುದೊಡ್ಡ ಯಶಸ್ಸು. ಈ ನೆಲೆಯಲ್ಲಿ ಕಾದಂಬರಿಯನ್ನು ನೋಡುವ ಕ್ರಮ ತೊಂಬತ್ತರ ದಶಕದಿಂದೀಚೆಗೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಪ್ರತಿಸಂಸ್ಕೃತಿ ನೆಲೆಯ ವಿಮರ್ಶೆಯಲ್ಲಿ ಕುವೆಂಪು ಅವರನ್ನು ಮಹತ್ವದ ಲೇಖಕ ಎಂದು ಒಪ್ಪಿಕೊಂಡೂ, ಕೆಲವು ಸಂಗತಿಗಳಲ್ಲಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವ ಗುಣ ಬಂದಿದೆ. `ಇಲ್ಲಿ ಯಾರೂ ಅಮುಖ್ಯರಲ್ಲ’ ಎನ್ನುವ ಕುವೆಂಪು ಅವರೇ ತಮ್ಮ ಕಾದಂಬರಿಯಲ್ಲಿ ಯಾರನ್ನೆಲ್ಲಾ ಅಮುಖ್ಯರನ್ನಾಗಿ ಚಿತ್ರಿಸಿದ್ದಾರೆ ಎಂಬ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.

`ಮದುಮಗಳು’ ಕಾದಂಬರಿಯನ್ನು ವಿಮರ್ಶಾ ಮಾನದಂಡವಿಲ್ಲದೆ, ಸಮುದಾಯದ ಬದುಕಿನ ನೆಲೆಯಲ್ಲಿ ನೋಡಿದ ನೋಟಕ್ರಮಗಳು ಹೆಚ್ಚು ಉಪಯುಕ್ತವಾಗಿವೆ. ಹಾಗೆಯೇ ಕಾದಂಬರಿಯನ್ನು ಹೊಸದಾಗಿ ನೋಡಬಹುದಾದ ನೋಟಗಳನ್ನೂ ನೀಡಿವೆ. ಇದರಲ್ಲಿ ಮುಖ್ಯವಾದ ಬರಹವೆಂದರೆ ಬಿ. ಕೃಷ್ಣಪ್ಪ ಅವರ ಲೇಖನ. ಕುವೆಂಪು ಚಿತ್ರಿಸಿದ ದಲಿತ ಲೋಕದ ಮೂಲಕ ಕೆಲವು ಆಕ್ಷೇಪಾರ್ಹವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಂತೆಯೇ ಸಾಬರ ಚಿತ್ರಣ, ಕ್ರೈಸ್ತರ ಚಿತ್ರಣ, ಮಹಿಳಾ ಚಿತ್ರಣ ಮುಂತಾದ ಸಮುದಾಯಗಳ ನೆಲೆಯಲ್ಲಿ ಕಾದಂಬರಿಯನ್ನು ನೋಡಲಾಗಿದೆ. ಹಾಗೆ ನೋಡಿದರೆ ಮಹಿಳಾ ನೆಲೆಯಲ್ಲಿ `ಮದುಮಗಳು’ ಕಾದಂಬರಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದು ಕಡಿಮೆ. ಹಾಗೆಯೇ ಪರಿಸರವಾದಿ ದೃಷ್ಟಿಯಿಂದಲೂ ಕಾದಂಬರಿಯನ್ನು ನೋಡಲಾಗಿದೆ. ಚಂದ್ರಶೇಖರ್ ನಂಗಲಿ, ಬಿ. ಪುಟ್ಟಸ್ವಾಮಿ ಮುಂತಾದವರ ಬರಹದಲ್ಲಿ ಈ ನೆಲೆಯನ್ನು ಕಾಣಬಹುದಾಗಿದೆ. ಈ ಬಗೆಯ ಅಧ್ಯಯನಗಳಲ್ಲಿ ಜೀವ ವೈವಿಧ್ಯದ ಅಖಂಡತೆಯನ್ನು ತುಂಡು ತುಂಡಾಗಿಸಿರುವುದು ಮಿತಿಯಾಗಿದೆ. ಕೆ.ಸಿ. ಶಿವಾರೆಡ್ಡಿಯವರು `ಆಧುನಿಕ ಜಗತ್ತಿನ ಪರಿಸರವಾದಿಗಳು ಮಂಡಿಸುತ್ತಿರುವ `ಜೀವ ಸಮಾನತಾ ಧೋರಣೆ’ಯ ಪರಿಸರವಾದ, `ಮದುಮಗಳು’ ಕಾದಂಬರಿಯ ಮುಖ್ಯ ಭಿತ್ತಿಯಾಗಿರುವುದು ಇದರ ಅನನ್ಯತೆಯಾಗಿದೆ’ ಎನ್ನುತ್ತಾರೆ. ಇದು `ಮದುಮಗಳು’ ಕಾದಂಬರಿಯನ್ನು ಹೊಸ ಅನನ್ಯತೆಯ ನೆಲೆಯಲ್ಲಿ ನಿರೂಪಿಸುತ್ತಿರುವ ಅಧ್ಯಯನಗಳಿಗೆ ಸಾಕ್ಷಿಯಂತಿದೆ. ಹೀಗೆ ಈ ಕಾದಂಬರಿಯು ಬೇರೆ ಬೇರೆ ನೆಲೆಗಳಲ್ಲಿ ಶೋಧನೆಗೆ ಸವಾಲಾಗಿದೆ.

4

ಕುವೆಂಪು ಅವರನ್ನು ಕಾವ್ಯ, ಮಹಾಕಾವ್ಯ, ನಾಟಕದ ಮೂಲಕ ಪರೀಕ್ಷೆ ಮಾಡಿದಷ್ಟು, ಕಾದಂಬರಿಗಳ ಮುಖೇನ ಕನ್ನಡದ ಪ್ರಜ್ಞೆಯ ಭಾಗವಾಗಿ ಹೆಚ್ಚು ಪರೀಕ್ಷಿಶಿದಂತಿಲ್ಲ. ಮುಖ್ಯವಾಗಿ ಕನ್ನಡದ ಸೃಜನಶೀಲ ಸಾಹಿತ್ಯ ಸೃಷ್ಟಿಯ ಹಿಂದೆ `ಮದುಮಗಳು’ ಕಾದಂಬರಿಯ ಪ್ರಭಾವ ಅಗಾಧವಾಗಿದ್ದಂತಿದೆ. ದೇವನೂರ ಮಹಾದೇವ, ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ ಮುಂತಾದ ಅನೇಕರು ಪ್ರಾಸಂಗಿಕವಾಗಿ ತಮ್ಮ ಮಾತುಗಳಲ್ಲಿ `ಮದುಮಗಳು’ ಕಾದಂಬರಿಯ ಪ್ರಭಾವವನ್ನು ಹೇಳಿಕೊಂಡಿದ್ದಾರೆ. ದೇವನೂರು ಮಹಾದೇವ ಅವರು ಕುಸುಮಬಾಲೆ ಕುರಿತಂತೆ ಬಂದ ವಿಮರ್ಶೆಗಳಲ್ಲಿ ಕುಸುಮಬಾಲೆ, ಮದುಮಗಳ ಮೊಮ್ಮಗಳು ಎಂದ ವಿಮರ್ಶೆ ನನಗೆ ಹೆಚ್ಚು ಇಷ್ಟವಾಗಿದೆ ಎಂದದ್ದು ಇದನ್ನು ತೋರಿಸುತ್ತದೆ. ಆದರೆ ಈ ಬಗೆಯ ಮಾತುಗಳು ಹೆಚ್ಚು ದಾಖಲಾದಂತಿಲ್ಲ. ಈ ನೆಲೆಯಲ್ಲಿ ಕಾದಂಬರಿಯ ಪ್ರಭಾವ ಮತ್ತು ಅದು ಹುಟ್ಟಿಸಿದ ಸೃಜನಶೀಲ ಮಾದರಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ.

ಕೆಲವು ಕ್ಷೇತ್ರಗಳಿಗೆ ಮತ್ತೆ ಮತ್ತೆ ಭೇಟಿ ನೀಡುವಂತೆ `ಮದುಮಗಳು’ ಕಾದಂಬರಿಯನ್ನು ಮತ್ತೆ ಮತ್ತೆ ಓದುವ, ಆ ಕೃತಿಯನ್ನು ಒಳಗು ಮಾಡಿಕೊಳ್ಳುವ ವಿಧಾನವೊಂದು ಕನ್ನಡದಲ್ಲಿದೆ. ಈ ಬಗೆಯ ಬೇರೆ ಬೇರೆ ಓದುಗಳಲ್ಲಿ `ಮದುಮಗಳು’ ಕಾಣಿಸಿದ ಹಲವು ಬಗೆಯ ದರ್ಶನಗಳು ಹೆಚ್ಚು ದಾಖಲಾದಂತಿಲ್ಲ. ಅಥವಾ ಒಂದು ಕಾಲದಲ್ಲಿ ದಾಖಲಾದ `ಮದುಮಗಳು’ ಬಗೆಗಿನ ವಿಮರ್ಶೆಯ ನಿಲುವುಗಳು, ಕಾಲಾನಂತರದಲ್ಲಿ ಅದೇ ಲೇಖಕರಲ್ಲಿ ಬದಲಾದಂತಿದೆ. ಅಂತಹ ಸ್ಪಷ್ಟ ದಾಖಲಾತಿಗಳೂ ಹೆಚ್ಚು ಆಗಿಲ್ಲ. ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗ ಪ್ರಕಟಿಸಿರುವ ಮತ್ತು ಪ್ರೊ.ರಹಮತ್ ತರೀಕೆರೆ ಅವರು ಸಂಪಾದಿಸಿರುವ `ಮಲೆಗಳಲ್ಲಿ ಮದುಮಗಳು: ಸಾಂಸ್ಕೃತಿಕ ಮುಖಾಮುಖಿ’ ಕೃತಿ ಮದುಮಗಳು ಕುರಿತ ಬಹುಮುಖಿ ಚಿಂತನೆಯನ್ನು ನಡೆಸಿದೆ. ಮೊದಲಿಗೆ ಉಲ್ಲೇಖಿಸಿದ ಹಾಗೆ `ಮದುಮಗಳು’ ಮತ್ತೆ ಮೌಖಿಕ ಪರಂಪರೆಯಲ್ಲಿ ಪ್ರವೇಶ ಪಡೆದರೆ, ಜನಸಾಮಾನ್ಯರಲ್ಲಿ ಹೊಸ ಹೊಸ ಅರ್ಥಗಳಲ್ಲಿ ಪುನರ್ಸೃಷ್ಟಿಯಾಗುವ ಸಾಧ್ಯತೆ ಇದೆ. ಈಗ ಮದುಮಗಳು ನಾಟಕ ಬೆಂಗಳೂರಿನಲ್ಲಿಯೂ ನಡೆಯುತ್ತಿದೆ. ಅದು ಜನಮಾನಸದಲ್ಲಿ ನುಗ್ಗಿ ಹೊಸ ಜಾನಪದವನ್ನು ಸೃಷ್ಟಿಸಲಿ.

ಕೃಪೆ:- ಅರುಣ್ ಜೋಳದ ಕೂಡ್ಲಿಗಿ

ಕರ್ಣನ ಪಾತ್ರ ಪರಿಚಯ

💐💐💐💐💐🏹
ಕರ್ಣನ ಬಗ್ಗೆ ಈ 14 ವಿಷಯ ಕೇಳಿದ್ಮೇಲೆ ಏನೇ ಕಷ್ಟ ಬಂದ್ರೂ ಧೈರ್ಯವಾಗಿ ಎದುರಿಸ್ತೀರಿ
ಅರ್ಜುನನಿಗಿಂತ ಶೂರ ಕರ್ಣ, ಆದರೆ ಏನೆಲ್ಲ ಸಹಿಸ್ಕೊಂಡ ನೋಡಿ.

ನಿಮ್ ಬದುಕಲ್ಲಿ ಏನೂ ನಿಮ್ಗೆ ಬೇಕಾದ ಹಾಗೆ ಆಗ್ತಿಲ್ಲ, ನಿಮ್ ಯೋಗ್ಯತೆಗೆ ಸರಿಯಾಗಿ ಬೆಲೆ ಸಿಗ್ತಿಲ್ಲ, ಎಲ್ಲಾ ಕಷ್ಟ ನನಗ್ಯಾಕೆ ಬಂತು ಅಂತೆಲ್ಲಾ ನಿಮ್ಗೆ ಅನ್ನಿಸ್ಬಹುದು. ಆದ್ರೆ ಬೇರೇಯೋರ್ಗೆ ಹೋಲಿಸ್ಕೊಂಡ್ರೆ ನಿಮ್ ಕಷ್ಟ ಅಂಥದ್ದೇನಲ್ಲ, ನಿಭಾಯಿಸಿಕೊಂಡು ಹೋಗ್ಬೋದು ಅನ್ನೊ ಧೈರ್ಯ ಬರತ್ತೆ. ಹಾಗೊಂದು ಮಹಾಭಾರತದಲ್ಲಿ ಬರೋ ಕರ್ಣನ ಕಥೆ. ಏನೆಲ್ಲಾ ಕಷ್ಟ ಬಂದ್ರೂ ಅದನ್ನೆಲ್ಲ ನುಂಗಿ ನಾಲ್ಕು ಜನ ಗೌರವಿಸೋ ಹಾಗೆ ಕರ್ಣ ಬದುಕಿದ ರೀತಿನ ಅರ್ಥ ಮಾಡ್ಕೊಬೋದು.

1. ತಾಯಿ ಕುಂತೀನೇ ಕರ್ಣನ್ನ ಹೊಳೆನೀರಲ್ಲಿ ಬಿಟ್ಟು ಹೊಟೋಗ್ತಾಳೆ

ಕುಂತಿಗೆ ದೂರ್ವಾಸ ಮುನಿ ಒಂದು ವರ ಕೊಟ್ಟಿರ್ತಾರೆ - ಅವ್ಳು ಒಂದು ಮಂತ್ರ ಹೇಳಿದ್ರೆ ಅವ್ಳಿಗೆ ಯಾವ ದೇವ್ರು ಬೇಕೋ ಆ ದೇವ್ರು ಪ್ರತ್ಯಕ್ಷ ಆಗಿ ಅವ್ರಿಂದ ಅವ್ಳು ಒಂದು ಮಗು ಪಡೀಬೋದು ಅಂತ. ಈ ಮಂತ್ರ ಕೆಲಸ ಮಾಡುತ್ತಾ ಇಲ್ವಾ ನೋಡೋಣ ಅಂತ ಕುಂತಿ ಟ್ರೈ ಮಾಡಿದಾಗ ಸೂರ್ಯ ಪ್ರತ್ಯಕ್ಷ ಆಗಿ ಕರ್ಣನ್ನ ಹುಟ್ಟಿಸ್ತಾನೆ.

ಆದ್ರೆ ಆಗ ಕುಂತಿಗೆ ಮದುವೆ ಆಗಿರ್ಲಿಲ್ಲ. ಹಾಗಾಗಿ ಅವ್ಳಿಗೆ ಭಯ ಆಗಿ ಕರ್ಣನನ್ನ ಒಂದು ಬುಟ್ಟೀಲಿ ಹಾಕಿ ಹೊಳೇಲಿ ಬಿಡ್ತಾಳೆ.

2. ಕರ್ಣನಿಗೆ ಅವನು ಕ್ಷತ್ರಿಯ ಅಲ್ಲ ಅನ್ನೋ ಕಾರಣಕ್ಕೆ ಯಾರೂ ಬಿಲ್ವಿದ್ಯೆ ಕಲಿಸೋಕೆ ಒಪ್ಪೊಲ್ಲ

ಕರ್ಣ ಬೆಳ್ದಿದ್ದು ರಥ ಓಡಿಸುವ ಸಾರಥಿಯ ಮನೆಯಲ್ಲಿ. ಇವರು ಕ್ಷತ್ರಿಯರಿಗಿಂತ ಕೀಳು ಅನ್ನೋ ಮನೋಭಾವ ಇತ್ತು. ಹಾಗಾಗಿ ದ್ರೋಣ ಕೂಡ ಕರ್ಣನಿಗೆ ಬಿಲ್ವಿದ್ಯೆ ಕಲಿಸೋಕೆ ಒಪ್ಪೊಲ್ಲ.

3. ಬ್ರಾಹ್ಮಣ ಅಂತ ಸುಳ್ಳು ಹೇಳಿ ಪರಶುರಾಮನಿಂದ ಬಿಲ್ವಿದ್ಯೆ ಕಲೀತಾನೆ ಕರ್ಣ

ಪರಶುರಾಮ ಕ್ಷತ್ರಿಯದ್ವೇಷಿ. ಕರ್ಣ ಬ್ರಾಹ್ಮಣ ಅಂತ ಸುಳ್ಳು ಹೇಳಿ ಅವನಿಂದ ಬಿಲ್ವಿದ್ಯೆ ಕಲೀತಾನೆ.

4. ಕರ್ಣ ಸುಳ್ಳು ಹೇಳಿದ್ದು ಗೊತ್ತಾಗಿ ಪರಶುರಾಮ ಶಾಪ ಕೊಡ್ತಾನೆ

ಒಮ್ಮೆ ಪರಶುರಾಮ ಕರ್ಣನ ಮಡಿಲಲ್ಲಿ ಮಲ್ಗಿದ್ದಾಗ, ಒಂದು ದುಂಬಿ ಬಂದು ಕರ್ಣನ ತೊಡೆಗೆ ಕಚ್ಚಿ, ಕೊರ್ದು ಗಾಯ ಮಾಡುತ್ತೆ. ಪರಶುರಾಮನ ನಿದ್ದೆ ಕೆಡಿಸ್ಬಾರ್ದು ಅಂತ ಕರ್ಣ ಅದನ್ನ ಸಹಿಸ್ಕೋತಾನೆ. ಆದರೆ ನಿದ್ದೆಯಿಂದ ಎದ್ದ ಪರಶುರಾಮ ಕರ್ಣನ ತೊಡೆಯ ಗಾಯ ನೋಡಿ ಬ್ರಾಹ್ಮಣ ಇಷ್ಟು ನೋವು ಸಹಿಸ್ಕೊಳ್ಳೋದು ಸಾಧ್ಯ ಇಲ್ಲ ಅಂತ ಕರ್ಣನಿಗೆ ಸತ್ಯ ಏನು ಅಂತ ಕೇಳ್ದಾಗ, ಕರ್ಣ ಅವ್ನು ಬ್ರಾಹ್ಮಣ ಅಲ್ಲ ಅಂತ ಹೇಳ್ಬೇಕಾಗುತ್ತೆ. ಪರಶುರಾಮ ಆಗ ಕರ್ಣನಿಗೆ ತುಂಬಾ ಅವಶ್ಯಕತೆ ಇರೋ ಸಮಯದಲ್ಲೇ ಅವನು ಕಲಿತ ದಿವ್ಯಾಸ್ತ್ರಗಳ ಮಂತ್ರ ಎಲ್ಲ ಮರ್ತು ಹೋಗೋ ಹಾಗೆ ಶಾಪ ಕೊಡ್ತಾನೆ.

5. ಅರ್ಜುನ ದುರ್ಯೋಧನ ಎಲ್ರನ್ನೂ ಬಿಲ್ವಿದ್ಯೇಲಿ ಮೀರಿಸಿದ್ದಕ್ಕೆ ದ್ರೋಣ ಕರ್ಣನ್ನ ಆಚೆ ತಳ್ಳಿ ಕಳ್ಳ ಅಂತಾನೆ

ಭೀಷ್ಮ ಏನ್ ಮಾಡ್ತಾನೆ... ಪಾಂಡವ ಮತ್ತು ಕೌರವರ ವಿದ್ಯಾಭ್ಯಾಸ ಮುಗಿದ್ ಮೇಲೆ ಅವ್ರಿಗೆ ಗೊತ್ತಿರೋದನ್ನೆಲ್ಲ ತೋರ್ಸೋಕೆ ಅಂತ ಒಂದು ಸಮಾರಂಭ ಏರ್ಪಡಿಸ್ತಾರೆ. ಹೇಗೋ ಅಲ್ಲಿಗೆ ಕರ್ಣ ಬರ್ತಾನೆ. ಪಾಂಡವ, ಕೌರವರಿಗೆಲ್ಲ ನಾಚಿಕೆ ಆಗೋ ಹಾಗೆ ಬಿಲ್ವಿದ್ಯೆ ಪ್ರದರ್ಶನ ಮಾಡ್ತಾನೆ. ಆಗ ದ್ರೋಣ ಕರ್ಣನನ್ನ ಆ ಸಮಾರಂಭದಿಂದ ಹೊರಗೆ ಹಾಕ್ತಾನೆ, ಅಷ್ಟೇ ಅಲ್ಲ ಕರ್ಣ ಕ್ಷತ್ರಿಯರ ವಿದ್ಯೆ ಕದ್ದ ಅನ್ನೋ ಆಪಾದನೆ ಕೂಡ ಮಾಡ್ತಾನೆ.

6. ದ್ರೌಪದಿ ಸ್ವಯಂವರದಲ್ಲಿ ಅರ್ಜುನನಿಗಿಂತ ಮೊದಲು ಮೀನಿನ ಕಣ್ಣಿಗೆ ಗುರಿ ಇಟ್ಟೋನು ಕರ್ಣ, ಆದರೆ ದ್ರೌಪದಿ ಅವ್ನಿಗೆ ಅವಮಾನ ಮಾಡ್ತಾಳೆ

ಸಭೆಯ ಮುಂದೆ ಸೂತಪುತ್ರನನ್ನ ಮದುವೆ ಆಗೊಲ್ಲ ಅಂತ ದ್ರೌಪದಿ ಹೇಳ್ತಾಳೆ. ಕರ್ಣ ಏನೂ ಹೇಳದೆ ಅಲ್ಲಿಂದ ಹೊರಟು ಹೋಗ್ತಾನೆ.

7. ಒಂದು ಸಣ್ಣ ಮಗುವಿಗೆ ಉಪಕಾರ ಮಾಡಿದ್ದಕ್ಕೆ ಭೂತಾಯಿ ಕರ್ಣಂಗೆ ಶಾಪ ಕೊಡ್ತಾಳೆ

ಒಮ್ಮೆ ಒಬ್ಳು ಸಣ್ಣ ಮಗು ತುಪ್ಪ ತೆಗೊಂಡು ಹೋಗ್ತಿದ್ದಾಗ ಚೆಲ್ಲಿ ಬಿಡ್ತಾಳೆ. ಅವ್ಳ ಅಮ್ಮ ಬಯ್ತಾಳೆ ಅಂತ ತುಂಬ ಭಯ ಬಿದ್ದಿದ್ದ ಅವ್ಳನ್ನ ನೋಡಿ ಕರ್ಣ ಅವ್ನಿಗೆ ಗೊತ್ತಿದ್ದ ಮಂತ್ರದಿಂದ ಭೂಮಿಗೆ ಬಿದ್ದಿದ್ದ ತುಪ್ಪವನ್ನ ಮತ್ತೆ ಹೊರಗೆ ತೆಗೀತಾನೆ. ಆದರೆ ಇದರಿಂದ ಭೂತಾಯಿಗೆ ತುಂಬಾ ನೋವಾಗುತ್ತೆ, ಅದಕ್ಕೆ ಅವ್ಳು ಕರ್ಣನಿಗೆ ಶಾಪ ಕೊಡ್ತಾಳೆ - ಅವ್ನು ತುಂಬಾ ಕಷ್ಟದಲ್ಲಿದ್ದಾಗ ಅವ್ನ ಕೈ ಬಿಡ್ತಾಳೆ ಅನ್ನೋದೇ ಶಾಪ. ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಈ ಶಾಪದಿಂದಾಗಿಯೇ ಕರ್ಣ ರಥದ ಚಕ್ರ ಮಣ್ಣಲ್ಲಿ ಹೂತು ಹೋಗೋದು.

8. ಅಕಸ್ಮಾತಾಗಿ ಕರ್ಣ ಒಂದು ಹಸು ಕೊಂದಿದ್ದಕ್ಕೆ ಒಬ್ಬ ಬ್ರಾಹ್ಮಣ ಶಾಪ ಕೊಡ್ತಾನೆ

ಒಬ್ಬ ಬ್ರಾಹ್ಮಣನ ಹಸುವನ್ನ ಗೊತ್ತಿಲ್ದೆ ಕೊಂದಿದ್ದಕ್ಕೆ ಅವ್ನು ಕರ್ಣನಿಗೆ ಒಂದು ಶಾಪ ಕೊಡ್ತಾನೆ ---- ತುಂಬಾ ಕಷ್ಟದಲ್ಲಿದ್ದಾಗ ಒಂದು ಬಾಣ ಚುಚ್ಚಿ ಕರ್ಣನ ಸಾವಾಗುತ್ತೆ ಅನ್ನೋದು ಶಾಪ.

ಈ ಶಾಪದಿಂದಾನೇ ರಥದ ಚಕ್ರ ಹೊರಗೆ ತೆಗಿಯೋಕೆ ಪ್ರಯತ್ನ ಮಾಡ್ತಿದ್ದಾಗ ಅರ್ಜುನ ಬಿಟ್ಟ ಬಾಣದಿಂದ ಕರ್ಣ ಸಾಯೋದು.

9. ಕರ್ಣ ಕ್ಷತ್ರಿಯ ಅಲ್ಲ, ಅವನು ನಮ್ಮ ಸೈನ್ಯದಲ್ಲಿದ್ದರೆ ನಾನು ಯುದ್ಧ ಮಾಡಲ್ಲ ಅಂತ ಭೀಷ್ಮ ಹೇಳ್ತಾನೆ

ಇದರಿಂದಾಗಿ ಭೀಷ್ಮ ಯುದ್ದದಲ್ಲಿ ಗಾಯವಾಗಿ ಬೀಳೋವರ್ಗೂ ಕರ್ಣ ಯುದ್ಧ ಮಾಡೋಕೆ ಆಗೊಲ್ಲ.

10. ಮೋಸ ಅಂತ ಗೊತ್ತಿದ್ದರೂ ತನ್ನನ್ನ ಯಾವಾಗ್ಲೂ ಕಾಪಾಡೋ ಕವಚ-ಕುಂಡಲಗಳ್ನ ಇಂದ್ರನಿಗೆ ದಾನ ಮಾಡ್ತಾನೆ

ಸೂರ್ಯ ಕರ್ಣನ ತಂದೆ. ಕರ್ಣಂಗೆ ಹುಟ್ಟೊವಾಗ್ಲೇ ಕವಚ ಮತ್ತು ಕುಂಡಲ ಕೊಟ್ಟಿರ್ತಾನೆ. ಅದು ಇರೋವರ್ಗೂ ಕರ್ಣನಿಗೆ ಸಾವಿಲ್ಲ.

ಆದರೆ ಅರ್ಜುನನ ತಂದೆ ಇಂದ್ರ ಮೋಸದಿಂದ ಇದನ್ನ ದಾನ ಪಡೀತಾನೆ. ಕರ್ಣನ ಕವಚ ಅವನ ದೇಹದ ಭಾಗ, ಅದನ್ನ ತೆಗಿಯೋದಂದ್ರೆ ದೇಹದಿಂದ ಮಾಂಸ ತೆಗೆದ ಹಾಗೆ. ಆದ್ರೂ ಕರ್ಣ ಅದನ್ನ ತೆಗೆದು ಕೊಡ್ತಾನೆ.

11. ಪಾಂಡವರನ್ನ ಕೊಲ್ಲೋದಿಲ್ಲ ಅಂತ ಕುಂತಿಗೆ ಮಾತು ಕೊಡ್ತಾನೆ

ಕುರುಕ್ಷೇತ್ರ ಯುದ್ಧ ಮುಗೀತಾ ಬರ್ತಿದ್ದಾಗೊಮ್ಮೆ ಕರ್ಣನಿಂದಾಗಿ ಪಾಂಡವರು ಸೋಲೋ ಹಾಗಿದ್ದಾಗ, ಕುಂತಿ ಕರ್ಣ ಇದ್ದಲ್ಲಿಗೆ ಹೋಗಿ ಪಾಂಡವ್ರನ್ನ ಕೊಲ್ಲೋದಿಲ್ಲ ಅಂತ ಮಾತು ಕೊಡೋ ಹಾಗೆ ಮಾಡ್ತಾಳೆ.
ಕರ್ಣನಿಗೆ ಕುಂತಿ ಅವ್ನ ತಾಯಿ ಅಂತ ಗೊತ್ತಿರುತ್ತೆ. ಆದ್ರೂ ತಾನು ಸತ್ರೂ ಪಾಂಡವರನ್ನ ಕೊಲ್ಲೋದಿಲ್ಲ ಅಂತ ಮಾತು ಕೊಡ್ತಾನೆ.

12. ಅರ್ಜುನನ್ ರಥದ್ ಚಕ್ರ ಸಿಕಾಕೊಂಡಿದ್ದಾಗ ಕರ್ಣ ಅವನ ಮೇಲೆ ಕೈ ಮಾಡಲ್ಲ

ಕರ್ಣ - ಅರ್ಜುನ ಯುದ್ಧ ಮಾಡ್ತಿದ್ದ ದಿನ ಇಂದ್ರ ಅರ್ಜುನನನ್ನ ಕಾಪಾಡೋಕೆ ಅಂತ ಜೋರು ಗಾಳಿ-ಮಳೆ ಬರೋ ಹಾಗೆ ಮಾಡಿರ್ತಾನೆ. ಇದ್ರಿಂದ ಮೊದ್ಲು ಅರ್ಜುನನ ರಥದ ಚಕ್ರ ನೆಲದಲ್ಲಿ ಹೂತು ಹೋಗುತ್ತೆ. ಕರ್ಣ ಅರ್ಜುನನ ಮೇಲೆ ದಾಳಿ ಮಾಡೋ ಅವಕಾಶ ಇದ್ರೂ ಕೂಡ ಯುದ್ಧ ನಿಲ್ಲಿಸ್ತಾನೆ. ಚಕ್ರ ಹೊರಗೆ ತೆಗೆದಾದ ಮೇಲೆನೇ ಅವ್ನು ಯುದ್ಧ ಮುಂದುವರಿಸೋದು. ಯುದ್ದದ ನಿಯಮಗಳಿಗೆ ಅವ್ನು ಕೊಡೋ ಬೆಲೆ ಇದು.

13. ಆದರೆ ಕರ್ಣನ ರಥದ್ ಚಕ್ರ ಸಿಕಾಕೊಂಡಿದ್ದಾಗ ಅರ್ಜುನ ಅವ್ನನ್ನ ಸಾಯಿಸಿ ಬಿಡ್ತಾನೆ!

ಅರ್ಜುನ ಯುದ್ದದ ನಿಯಮಗಳಿಗೆ ಯಾವ್ದೇ ಬೆಲೆ ಕೊಡೊಲ್ಲ. ಕರ್ಣನ ರಥದ ಚಕ್ರ ನೆಲದಲ್ಲಿ ಹೂತು ಹೋಗುತ್ತೆ. ಆ ದಿನ ಕರ್ಣನ ಮೇಲಿದ್ದ ಎಲ್ಲ ಶಾಪಗಳೂ ಕೆಲಸ ಮಾಡುತ್ತೆ. ಭೂತಾಯಿ ಅವನ ಕೈ ಬಿಡ್ತಾಳೆ, ಕಷ್ಟದಲ್ಲಿದ್ದವನಿಗೆ ಅವನ ದಿವ್ಯಾಸ್ತ್ರಗಳ ಮಂತ್ರ ಎಲ್ಲ ಮರ್ತು ಹೋಗುತ್ತೆ. ಅರ್ಜುನ ಬಿಟ್ಟ ಬಾಣ ಅವ್ನನ್ನ ಕೊಲ್ಲುತ್ತೆ.

14. ಕೊನೆ ಗಳಿಗೆಯಲ್ಲೂ ಕರ್ಣ ಒಂದು ದಾನ ಮಾಡ್ತಾನೆ

ನೆಲದಲ್ಲಿ ಬಿದ್ದಿದ್ದ ಕರ್ಣನ ಹತ್ರ ಕೃಷ್ಣ ಬ್ರಾಹ್ಮಣನ ರೂಪದಲ್ಲಿ ಹೋಗಿ ಭಿಕ್ಷೆ ಕೇಳ್ತಾನೆ. ಕರ್ಣನಿಗೆ ಎರಡು ಚಿನ್ನದ ಹಲ್ಲಿರುತ್ತೆ, ಅವ್ನು ಅದನ್ನೇ ದಾನ ಕೊಡ್ತಾನೆ. ಆದ್ರೆ ಅದರಲ್ಲಿ ಎಂಜಿಲಿದೆ ಅಂತ ಕೃಷ್ಣ ಸಿಟ್ಟಾಗ್ತಾನೆ. ಕರ್ಣ ಭೂಮಿಗೆ ಬಾಣ ಬಿಟ್ಟು, ನೀರುಕ್ಕಿಸಿ ಅದರಲ್ಲಿ ಚಿನ್ನದ ಹಲ್ಲನ್ನ ತೊಳ್ದು ಕೊಡ್ತಾನೆ. ಇದರಿಂದ ಖುಷಿಯಾದ ಕೃಷ್ಣ ವಿಶ್ವರೂಪದರ್ಶನ ಕೊಡ್ತಾನೆ. ಕರ್ಣನನ್ನೂ ಸೇರಿಸಿ ಮೂರೇ ಮೂರು ಜನ ಕೃಷ್ಣನ ವಿಶ್ವರೂಪವನ್ನ ನೋಡಿರೋದು.

ಕರ್ಣಂದು ದುರಂತ ಕಥೆ. ಅವ್ನಿಗೆ ಹೋದಲ್ಲೆಲ್ಲ ಎಲ್ರೂ ಅವಮಾನ ಮಾದಿದ್ರು. ಆದರೆ ಅವ್ನು ಯಾವತ್ತೂ ಸೋತವನ ಹಾಗೆ ಕೂರ್ಲಿಲ್ಲ. ಬದಲಿಗೆ ಅವ್ನಿಂದ ಆಗೋ ಅಷ್ಟೂ ಕೊಡ್ತಾ ಹೋದ. ಅದಕ್ಕೇ ಅವ್ನನ್ನ 'ದಾನ ಶೂರ' ಅಂತ ಇವತ್ತಿಗೂ ಜನ ನೆನೆಸ್ಕೊಳ್ಳೋದು.

ಜೀವನ ಅಂದಮೇಲೆ ಕಷ್ಟ ಇದ್ದೇ‌ ಇರುತ್ತೆ. ಅದನ್ನ ಧೈರ್ಯವಾಗಿ ಎದುರಿಸೋದೇ ನಮ್ಮ ಕೆಲಸ. ಹಾಗಂತ ನಮ್ಮ ಆದರ್ಶಗಳು, ನಮ್ಮ ಮನುಷ್ಯತ್ವ... ಇದನ್ನೆಲ್ಲ ಬಿಡಲೂ ಬಾರದು. ಇದನ್ನೆಲ್ಲ ಬದುಕಿ ತೋರಿಸಿದ ಕರ್ಣ ಎಲ್ಲರಿಗೂ ಒಂದು ಪ್ರೇರಣೆ ಅಲ್ವಾ?
🙏🏻🙏🏻🙏🏻🙏🏻🙏🏻🙏🏻🌹

"ಚೋಮನ ದುಡಿ" ಕಥೆಯ ಸಾರಾಂಶ

* ಕಥೆಯ ಸಾರಾಂಶ:*

*ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ. ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ. ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ.
ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು. ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ. ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆಸುತ್ತಿದ್ದ.
ಚೋಮ ಬಹಳ ವರ್ಷಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡಲು ಹೋಗಿರುತ್ತಾನೆ. ಆಗ ಆತ ಮಾಡಿದ್ದ ೪-೫.ರೂ ಸಲ ಈಗ ೨೦.ರೂ ಆಗಿದೆ ಎಂದು ಅದಕ್ಕಾಗಿ ಅವನನ್ನು ಅರಸುತ್ತಾ ತೋಟದ ದೊರೆಗಳು ಕಳುಹಿಸಿ ಕೊಟ್ಟಿದ್ದ ಮನ್ವೇಲ ಸಾಹೇಬ ಬರುತ್ತಾನೆ. ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಎಷ್ಟೇ ಬೆವರು ಸುರಿಸಿದರೂ ಅವರ ಕೈಗೆ ಹಣ ಬರುವುದು ಆಣೆಗಳ ರೂಪದಲ್ಲಿ ಮಾತ್ರ. ಅದಕ್ಕಾಗಿ ಅವರು ಮಾಡುವ ಸಾಲ ಎಂದಿಗೂ ತೀರುವಂತಿಲ್ಲ.
ಹೀಗಿರುವಾಗ ವಿಧಿ ಇಲ್ಲದೆ ತನ್ನ ಇಬ್ಬರು ಮಕ್ಕಳಾದ ಚನಿಯ ಮತ್ತು ಗುರುವನನ್ನು ತೋಟದ ಕೆಲಸಕ್ಕೆಂದು ಕಳುಹಿಸಿಕೊಡಲು ನಿರ್ಣಯಿಸುತ್ತಾನೆ. ಅವರು ಅಲ್ಲಿಗೆ ಹೋಗಲು ಬಹಳಷ್ಟು ತೊಂದರೆಗಳ್ನ್ನು ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ

* ಅನುಭವಿಸಬೇಕಾಗುತ್ತದೆ. ಅಲ್ಲಿಗೆ ಹೋಗಿಯೂ ಸಹ ಅವರು ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುತ್ತಾರೆ. ಇತ್ತ ಚೋಮ ಮತ್ತು ಇತರರಿಗೂ ಅವರನ್ನು ಬಿಟ್ಟು ಇರುವ ಮನಸ್ಸಿಲ್ಲ. ಅಲ್ಲಿಗೆ ಹೋದ ಅವರು ತಮ್ಮ ಸಹ ಆಳುಗಳ ಜೊತೆ ಸೇರಿ ಅವರ ಅಪ್ಪನಂತೆಯೆ ಹೆಂಡ ಕುಡಿಯುವುದನ್ನೂ ಕಲಿಯುತ್ತಾರೆ. ಹೆಂಡಕ್ಕೆ ದಾಸರಾಗಿ ಅವರು ದುಡಿಯುವ ಹಣವನ್ನು ಅದಕ್ಕಾಗಿ ಸುರಿಯಲು ಪ್ರಾರಂಭಿಸುವರು. ಹೀಗಾಗಿ ಅಪ್ಪನ ಸಾಲ ತೀರಿಸಲು ಹೋಗಿ ಇನ್ನೂ ಹೆಚ್ಚಿನ ಸಲ ಮಾಡುವಂತಾಯಿತು. ಇದೆಲ್ಲ ಸಾಲದಂತೆ ಗುರುವ ಅಲ್ಲಿ ಮಾರಿ ಎಂಬ ಹುಡುಗಿಯನ್ನು ಇಷ್ಟ ಪಡುತ್ತಾನೆ. ಆ ಹುಡುಗಿ ಇಗರ್ಜಿಯವಳು. ಆದರೆ ಇತ್ತ ಚೋಮ ತನ್ನ ಮಕ್ಕಳು ತನ್ನ ಸಾಲ ತೀರಿಸಲು ಹೋಗಿದ್ದಾರೆ, ಅವರನ್ನು ಒಂದು ಮನೆಯವರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುತ್ತಾನೆ.
ಕಾಫಿ ತೋಟದಲ್ಲಿ ನಡೆಯುತ್ತಿರುವ ವಿಷಯವನ್ನು ತಿಳಿಯದ ಚೋಮ ಧನಿಗಳ ಬಳಿ ಕೆಲಸಕ್ಕೆ ಹೋಗುವಾಗ ತನಗೊಂದು ಸಣ್ಣ ಭೂಮಿಯನ್ನು ಕೊಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಧಣಿಗಳು ಒಪ್ಪಿದರೂ, ಧಣಿಗಳ ವಯಸ್ಸಾದ ತಾಯಿ ಅದಕ್ಕೆ ಒಪ್ಪುವುದಿಲ್ಲ. ಅವರಿಗೆ ಕೊಡುವ ಮನಸ್ಸಿದ್ದರೂ ಅವರ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟ ಪಡದೆ ಚೋಮನಿಗೆ ಭೂಮಿ ಕೊಡಲು ನಿರಾಕರಿಸಿ ಬಿಡುತ್ತಾನೆ. ಅವರ ಪ್ರಕಾರ ಕೆಳ ವರ್ಗದ ಜನರು ವ್ಯವಸಾಯ ಮಾಡುವಂತಿಲ್ಲ. ಅದು ಹಿಂದಿನಿಂದಲೂ ಬಂದಿರುವ ಆಚಾರವಂತೆ. ಕೀಳು ವರ್ಗದವರು ವ್ಯವಸಾಯ ಮಾಡಿದರೆ ಮೇಲ್ವರ್ಗದವರಿಗೆ ಅವಮಾನವಲ್ಲವೇ? ಎಂಬುದು ಆಕೆಯ ವಾದವಾಗಿತ್ತು. ಹೀಗಾಗಿ ಸಂಕಪ್ಪಯ್ಯನವರಿಗೆ ಇಷ್ಟವಿದ್ದರೂ ತಾಯಿಯ ಮಾತು ಮೀರುವಂತಿರಲ್ಲಿಲ್ಲ. ಇದನ್ನೆಲ್ಲಾ ಕೇಳಿದ ಚೋಮನ ಮನಸ್ಸ್ಸು ನೋವಿನಿಂದ ತುಂಬಿತ್ತು. ಆ ದಿನವೆಲ್ಲಾ ತನ್ನ ಧಣಿಯ ಹೊಲವನ್ನು ಎತ್ತುಗಳನ್ನು ಹೊಡೆಯುತ್ತಾ ಸಮ ಮಾಡುತ್ತಾನೆ.*

* ಇಷ್ಟು ಹೊತ್ತಿಗಾಗಲೆ ಗುರುವ ಮಾರಿಯ ಪ್ರೇಮಲೋಕದಲ್ಲಿ ತೇಲಿಯಾಡುತಿದ್ದ. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ಹುಡುಗರಿಬ್ಬರೂ ವಾಪಸ್ ಊರಿಗೆ ತೆರಳ ಬೇಕಿತ್ತು. ಆದರೆ ಗುರುವ ಮಾರಿಯವರ ಕುಟುಂಬದೊಂದಿಗೆ ಪರಾರಿಯಾದ ಕಾರಣ, ಚನಿಯನು ಮಾತ್ರ ಊರಿಗೆ ಹೊರಟು ಬಂದ. ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿದ್ದರೆ ಚೋಮನ ಮನಸ್ಸಿನಲ್ಲಿ ಕಾರ್ಕತ್ತಲೇ ಮೂಡಿತ್ತು. ಅವರ್ಯಾರಿಗೂ ಜಾತ್ರೆಯ ಸಂತಸವಿರಲಿಲ್ಲ. ಇದ್ದ ಕಷ್ಟಗಳು ಸಾಲದೆಂಬಂತೆ, ಚನಿಯನು ಆ ಬೆಟ್ಟ ಪ್ರದೇಶದಲ್ಲಿದ್ದೂ, ಅನಾರೋಗ್ಯಕ್ಕೆ ಒಳಗಾಗ ಬೇಕಾಯಿತು. ಬೆಳ್ಳಿಯು ಎಷ್ಟೇ ಪ್ರಯತ್ನಿಸಿದರೂ ಅವಳಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೂ ಚನಿಯನು ಅನಾರೋಗ್ಯದ ಕಾರಣದಿಂದಾಗಿ ಸಾಯುವ ಪರಿಸ್ಥಿತಿ ಬಂತು. ಒಂದೇ ಸಮನೆ ದುಃಖದ ಮಹಾಪೂರವನ್ನೇ ಚೋಮನ ಕುಟುಂಬ ಅನುಭವಿಸಬೇಕಾಯಿತು. ಒಂದೇ ಕಾಲದಲ್ಲಿ ಎರಡೂ ಮಕ್ಕಳನ್ನು ಕಳೆದುಕೊಂಡ ಚೋಮನು ದುಡಿಯನ್ನು ಬಾರಿಸುವುದನ್ನಲ್ಲದೆ ಬೇರೆ ಏನನ್ನೂ ಮಾಡಲು ಸಾಧ್ಯವಾಗಲ್ಲಿಲ್ಲ. ಹೀಗಿರುವಾಗಲೇ ಧನಿಗಳು ಚೋಮನನ್ನು ಮಳೆಗಾಲ ಬಂದಿದೆ ನನಗೆ ನಿನ್ನ ಎತ್ತುಗಳನ್ನು ಮಾರಿಬಿಡು ಎಂದರು. ಇದರಿಂದ ಮತ್ತಷ್ಟು ಸಿಟ್ಟಿಗೇರಿದ ಚೋಮ ಚೆನ್ನಾಗಿ ಹೆಂಡವನ್ನು ಕುಡಿದು ತಾನು ದುಡಿ ಬಾರಿಸುತ್ತಾ ತನ್ನ ಸಣ್ಣದಾದ ಎರಡೂ ಮಕ್ಕಳನ್ನೂ ಅದರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಹೊಡೆದು ಬಡೆಯತ್ತಾನೆ. ಆಗ ಬೆಳ್ಳಿ ಅವರನ್ನು ರಕ್ಷಿಸುತ್ತಾಳೆ. ಚೋಮನ ಸಿಟ್ಟು ಇನ್ನೂ ಕಡಿಮೆ ಆಗುವುದಿಲ್ಲ. ಕೊನೆಗೆ ತನಗೆ ಆ ಎತ್ತುಗಳಿಂದ ವ್ಯವಸಾಯ ಮಾಡಲು ಸಾಧ್ಯವಿಲ್ಲವೆಂದು, ಅದು ಪರರಿಗೂ ದೊರಕಬಾರದೆಂದು ಆ ಎತ್ತುಗಳ ಕಾಲು ಮುರಿಯುತ್ತಾನೆ. ನಂತರ ಬೆಳ್ಳಿ ಧಣಿಗಳ ಬಳಿ ಮಾತನಾಡಿ ಅಪ್ಪನಿಗೆ ಬುದ್ಧಿ ಕಲಿಸುವಂತೆ ನಿರ್ಣಯಿಸುತ್ತಾಳೆ.*

* ಹಾಗೆಂದು ಯೋಚಿಸಿ ಮನೆಗೆ ತೆರಳಿದ ಬೆಳ್ಳಿಗೆ ಆಶ್ಚರ್ಯವೆಂದರೆ ಅವರ ಮನೆಗೆ ನೆಂಟರು ಬಂದಿದ್ದರು. ಅವಳು ಹಲವು ದಿನಗಳಿಂದ ಕೂಡಿಟ್ಟಿದ್ದ ಗೆಣಸು ಅಕ್ಕಿ ಎಲ್ಲವೂ ಖಾಲಿಯಾಗ ತೊಡಗಿತು. ಚೋಮನು ಎಲ್ಲವನ್ನೂ ಮರೆತು ಅವರೊಂದಿಗೆ ಸಂತಸದಿಂದ ಕಾಲಕಳೆಯತ್ತಾನೆ. ಅವರೊಂದಿಗೆ ಬೇಟೆಗೆ ಹೋಗಿ ಮೊಲಗಳನ್ನು ತಂದು ತಿಂದು,ಕುಡಿದು ಕುಪ್ಪಳಿಸುತ್ತಾರೆ. ಯಾರದೋ ಮನೆಯಲ್ಲಿ ಎಮ್ಮೆ ಸತ್ತರೆ ಅದನ್ನೂ ತಿಂದು, ಮನೆಯ ಮುಂದೆ ಬೆಂಕಿಯನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಕೆಲವು ದಿನಗಳ ನಂತರ ಅವರೂ ಹೊರಟರು. ಆದರೆ ಈಗ ಚೋಮನ ಎದುರಿನಲ್ಲಿದ್ದ ಮತ್ತೊಂದು ಸವಾಲೆಂದರೆ ಮತ್ತೆ ಮನ್ವೇಲನು ಬಂದಾಗ ಅವನೊಂದಿಗೆ ಯಾರನ್ನಾದರು ಕರೆದುಕೊಂಡು ಹೋಗುತ್ತಾನೆ. ಆದರೆ ಹೋಗಲಿಕ್ಕೆ ಯಾರಿದ್ದಾರೆ? ಎಂಬುದು. ಕೊನೆಗೆ ಮುದಿ ತಂದೆಯನ್ನು ಕಷ್ಟಗಳ ಪಾಲು ಮಾಡಲು ಇಷ್ಟವಿಲ್ಲದೆ ಕೊನೆಗೆ ಬೆಳ್ಳಿಯೇ ಮನ್ವೇಲನ ಕೂಡ ಹೊರಡುವಂತೆ ನಿಶ್ಚಯವಾಯಿತು. ಇಷ್ಟವಿಲ್ಲದ ಮನಸ್ಸು ಹಾಗೂ ಮನ್ವೇಲನ ಒತ್ತಡದಿಂದಾಗಿ ಚೋಮನೂ ಅವಳನ್ನು ಕಣ್ಣೀರಿನಿಂದ ಬೀಳ್ಕೊಡಬೇಕಾಗಿ ಬಂತು.
ಕೊನೆಗೆ ಬೆಳ್ಳಿಯ ತೋಟದ ಯಾತ್ರೆ ಸಾಗಿತು. ಅವಳಿಗೂ ಆ ಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂತು. ಅವಳೊಂದಿಗೆ ನೀಲನೂ ಹೊರಟಿದ್ದ. ಅಲ್ಲಿ ಅವರಿಗೆ ಉಳಿಯಲು ವ್ಯವಸ್ಥೆ ಆಯಿತು. ನೀಲನು ಅನಾರೋಗ್ಯಕ್ಕೆ ಒಳಗಾದ ಕಾರಣ ಅವಳಿಗೆ ಬರುತ್ತಿದ್ದ ಹಣವನ್ನು ಅವನ ಔಷಧಿಯನ್ನು ಖರೀದಿಸಲು ಸಾಲುತಿತ್ತೇ ಹೊರೆತು ಸಾಲ ತೀರಿಸಲು ಆಗುತ್ತಿರಲಿಲ್ಲ. ಹೀಗಾಗಿ ಮನ್ವೇಲನ ಒತ್ತಡದ ಮೇರೆಗೆ ಅವನ ಮನೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಳು. ಆದರೆ ಅಲ್ಲಿ ನಡೆದದ್ದೆ ಬೇರೆಯದ್ದೊಂದು ವಿಷಯ. ಹೆಂಡತಿ ಮನೆಯಲ್ಲಿಲ್ಲದ ಕಾರಣ ಅವನಲ್ಲಿನ ಕಾಮ ಪ್ರೇರಣೆ ಹಾಗೂ ಕಾಯದ ದೌರ್ಬಲ್ಯ ಅವಳನ್ನು ಆತನ ಕಾಮದ ದಾಸಿಯನ್ನಾಗಿ ಮಾಡಿತು.*

*ಅವರಿಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಯಲಾರಂಭವಾಯಿತು. ಅವಳ ಮೇಲೆ ದೊರೆಗಳಿಗೂ ಆಸೆಯಾಯಿತು. ಕೊನೆಗೆ ಮನ್ವೇಲನು ಅವಳನ್ನು ಅವನ ಬಳಿಯೂ ಕಳುಹಿಸಿ ಕೊಟ್ಟನು. ಹಣದ ಆಸೆ ಅವಳನ್ನು ಈ ರೀತಿಯ ಕೆಲಸವನ್ನೂ ಮಾಡದೆ ಬಿಡಲಿಲ್ಲ. ಕೊನೆಗೆ ಮನ್ವೇಲನು ಅವಳನ್ನು ಅಲ್ಲಿಂದ ಪಾರು ಮಾಡುವನು. ಅವಳು ವಾಪಸ್ಸ್ಸು ಮನೆಗೆ ತೆರಳಿದ ಕಾರಣ ಚೋಮನಿಗೆ ಹಿಡಿಸಲಾರದಷ್ಟು ಸಂತೋಷ. ನನ್ನ ಗಂಡು ಮಕ್ಕಳು ಮಾಡಲಾರದ ಕೆಲಸ ತನ್ನ ಮಗಳು ಮಾಡಿದ್ದಾಳೆಂದು ಅವನ ಸಂಭ್ರಮ. ಆದರೆ ಪಾಪ ಚೋಮನಿಗೆ ತನ್ನ ಮಗಳು ಆತನ ಸಾಲ ತೀರಿಸಿದ ಬಗೆ ತಿಳಿಯದು. ಮತ್ತೆ ಊರಿನ ಜಾತ್ರೆ ಬಂದೇ ಬಂತು. ಬೆಳ್ಳಿ ತನಗೆ ಮನ್ವೇಲನು ಕೊಟ್ಟಿರುವ ಸೀರೆ ಉಟ್ಟು ಜಾತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ಮನ್ವೇಲನೂ ಬಂದಿರುವುದನ್ನು ಕಂಡು ಭಯದಿಂದ ಮನೆಗೆ ತೆರಳಿದಳು. ಅತ್ತ ಚೋಮ ತನ್ನ ಮಗಳಿಗೆ ತಕ್ಕ ವರನನ್ನು ಹುಡುಕುತ್ತಿದ್ದನು. ನಂತರ ಆ ಸಂತಸದಲ್ಲಿಯೇ ಗೆಳೆಯರೊಡನೆ ಕುಣಿದು ಹರ್ಷಿಸುತ್ತಿದ್ದ.
ಮರುದಿನ ತನ್ನ ಮಕ್ಕಳಿಗೆ ಸ್ನಾನ ಮಾಡಿಸಲೆಂದು ಕೆರೆಯ ಬಳಿ ಹೋದಾಗ ಅಲ್ಲಿ ನೀಲ ನೀರಿನಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಚೋಮ ಆ ಸಮಯದಲ್ಲಿ ಅಲ್ಲಿ ಇರುವುದಿಲ್ಲ. ಕಾಳ ಇನ್ನೂ ಚಿಕ್ಕವ, ಆದರೆ ಅಲ್ಲಿಯ ದಡೆಯ ಮೇಲಿನ ಜನರು ಅವನನ್ನು ಕಾಪಾಡಬಹುದಾಗಿತ್ತು. ಆದರೆ ಅವರು ಮೇಲ್ವರ್ಗದವರು ಹಾಗು ನೀಲ ಕೆಳ ವರ್ಗದವನು ಎಂಬ ಒಂದೇ ಒಂದು ಕಾರಣ ಅವರನ್ನು ನೀಲನನ್ನು ಮೂಟ್ಟಬಾರದೆಂದು ಕಟ್ಟು ಹಾಕಿತ್ತು. ಇಲ್ಲದಿದ್ದಲ್ಲಿ ನೀಲ ಉಳಿಯುತ್ತಿದ್ದ. ಹೀಗೆ ಚೋಮನಿಗೆ ಒಂದರ ನಂತರ ಮತ್ತೊಂದು ಹೃದಯ ಹಿಂಡುವ ಕಷ್ಟಗಳು ಕಾದಿರುತ್ತಿದ್ದವು. ಮರುದಿನ ಮನ್ವೇಲನು ಅವರ ಮನೆಗೆ ಬರುತ್ತಾನೆ. ಆತ ಅವರ ಕ್ಷೇಮ ಸಮಾಚಾರ ತಿಳಿದು ಗುರುವನ ಬಗ್ಗೆ ತಿಳಿಸುತ್ತಾನೆ. ಜೀವನದಲ್ಲಿ ಎಲ್ಲವನ್ನು ಕಳೆದು ಕೊಂಡು ಸಾಧಿಸುವುದಾದರೂ ಏನು? ಹೋಗಿ ನಿನ್ನ ಮಗನನ್ನು ವಾಪಸ್ಸು ಕರೆತಾ ಎಂದು ಆತನಿಗೆ ಮನ್ವೇಲನು ಸಲಹೆ ನೀಡುತ್ತಾನೆ. ಅದರಿಂದಾಗಿ ತಾನೂ ಮತ ಪರಿವರ್ತಿಸಿ ಕೊಳ್ಳುವುದಾಗಿ ನಿರ್ಧರಿಸುತ್ತಾನೆ. ನಾಳೆ ಬೆಳಿಗ್ಗೆ ತನ್ನ ಮಗನ ಬಳಿ ಹೋಗುವುದಾಗಿ ಅವನನ್ನು ಕರೆತರುವುದಾಗಿ ಚರ್ಚಿಸಿರುತ್ತಾರೆ.*

* ಬೆಳಗ್ಗೆ ನಿರ್ಧಿಸಿದಂತೆಯೇ ಚೋಮನು ಗುರುವನ ಬಳಿ ಹೋದಾಗ ಅವರ ಮನೆಗೆ ಮನ್ವೇಲನು ಬರುತ್ತಾನೆ. ಮನೆಯಲ್ಲಿ ಬೆಳ್ಳಿಯು ಒಬ್ಬಳೇ ಇರುವ ಕಾರಣ ಅವರ ಹಿಂದಿನ ಕಾಮ ಪ್ರೇರಣೆ ಅವರನ್ನು ಮತ್ತೆ ಸಲುಗೆಯಿಂದ ಮಾತನಾಡಲು ಆಸ್ಪದ ನೀಡುತ್ತದೆ. ಇತ್ತ ಚೋಮನು ಹೋಗುವ ದಾರಿಯಲ್ಲಿ ತನ್ನ ಮನೆ ದೇವರನ್ನು ಕಂಡು ಯಾಕೋ ಮತ ಪರಿವರ್ತನೆ ತಪ್ಪು ಎಂದನಿಸಿ ಮನೆಗೆ ಬಂದು ನೋಡಿದರೆ ಚಾಪೆಯ ಮೇಲೆ ಅವರಿಬ್ಬರೂ. ಚೋಮನಿಗೆ ಆಗ ಎಲ್ಲವೂ ಅರ್ಥವಾಯಿತು. ತನ್ನ ಮಗಳು ಆತನ ಸಾಲ ತೀರಿಸಿದ ಬಗೆ! ಆಗಿನ ಚೋಮನ ಆವೇಶ ಅಷ್ಟಿಷ್ಟಲ್ಲ. ಅಸಹಾಯಕತೆಯಿಂದ ಹುಚ್ಚನಂತೆ ವರ್ತಿಸುತ್ತಾನೆ. ಅವರನ್ನು ಹೊರಗೆ ಹಾಕಿ ತನಗೆ ಮಕ್ಕಳೇ ಇಲ್ಲ ಎಂದು ಉಣ್ಣದೆ, ತಿನ್ನದೆ ದುಡಿಯನ್ನು ಕೈಗೆ ತೆಗೆದುಕೊಂಡು ಅದನ್ನು ಬಾರಿಸುತ್ತಾ ಮೂಲೆಯಲ್ಲಿ ಕೂರುವನು. ಅತ್ತ ಅವನು ವ್ಯವಸಾಯಗಾರನೂ ಆಗಲಿಲ್ಲ. ಇತ್ತ ತನ್ನ ಎಲ್ಲಾ ಮಕ್ಕಳನ್ನೂ ಕಳೆದು ಕೊಂಡ ದುಃಖದಲ್ಲಿ ದುಡಿಯನ್ನು ಬಾರಿಸುತ್ತಲೇ ಸಾವಿಗೆ ಶರಣಾಗುತ್ತಾನೆ.

*ಮುಕ್ತಾಯ:
ಹೀಗೆ ಈ ಒಟ್ಟು ಕಥೆಯಲ್ಲಿ ಚೋಮ, ಅವನ ಕನಸು, ಕುಟುಂಬ, ಅವನು ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಮೇಲ್ವರ್ಗದವರ ಕಾರಣದಿಂದ ಎದುರಿಸಬೇಕಾದಂತ ಕಷ್ಟಗಳನ್ನು ಕುರಿತು ನಮಗೆ ತಿಳಿಸುತ್ತದೆ. ತನ್ನ ಒಂದೇ ಒಂದು ಆಸೆಯೂ ತೀರಿಸಿಕೊಳ್ಳಲು ಚೋಮನ ಕೈಲಿ ಸಾಧ್ಯವಾಗುವುದಿಲ್ಲ. ಸಂಕಪ್ಪಯ್ಯ,ಅವರ ತಾಯಿ, ದಡದ ಮೇಲಿದ್ದ ಮೇಲ್ವರ್ಗದವರು, ಮನ್ವೇಲ, ಆತನ ಮಕ್ಕಳನ್ನು ಒಳಗೊಂಡು ಹೀಗೆ ಎಲ್ಲರೂ ಚೋಮನ ಜೀವನದಲ್ಲಿ ಕತ್ತಲೆಯನ್ನು ಉಳಿಸಿದ ಬಗೆಯನ್ನು ಕಾರಂತರು ಬರೆದಿರುವ ಈ ಕಾದಂಬರಿಯಲ್ಲಿ ನಾವು ಕಾಣಬಹುದಾಗಿದೆ.*