ಸೋಮವಾರ, ಏಪ್ರಿಲ್ 3, 2017

ಅಪ್ಪಿತಪ್ಪಿಯೂ ಇವರನ್ನು ಅವಮಾನಿಸಬೇಡಿ

ಅಪ್ಪಿತಪ್ಪಿಯೂ ಇವರನ್ನು ಅವಮಾನಿಸಬೇಡಿ

ಹಿರಿಯರನ್ನು ಸದಾ ಗೌರವಿಸಬೇಕು. ಹಿರಿಯರಿಗೆ ಅವಮಾನ ಮಾಡಿದ್ರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈತಪ್ಪಿ ಹೋಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ. ಯಾರಿಗೆ ಅವಮಾನ ಮಾಡಿದ್ರೆ ಏನೆಲ್ಲ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.

ತಾಯಿಗೆ ದೇವರ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾಯಿಯನ್ನು ಗೌರವಿಸಬೇಕು. ಭಕ್ತಿಯಿಂದ ನೋಡಿಕೊಳ್ಳಬೇಕು. ಎಂದೂ ಆಕೆಯನ್ನು ಅವಮಾನಿಸಬಾರದು. ಅಮ್ಮನ ಸೇವೆ ಮಾಡುವವರಿಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಅದೇ ತಾಯಿಯನ್ನು ಅವಮಾನ ಮಾಡುವ ವ್ಯಕ್ತಿ ಮೇಲೆ ದೇವರು ಮುನಿಸಿಕೊಂಡು ಸದಾ ದುಃಖ ನೀಡ್ತಾನೆ. ಎಷ್ಟು ಪೂಜೆ-ಪುನಸ್ಕಾರ ಮಾಡಿದ್ರೂ ಫಲ ಸಿಗೋದಿಲ್ಲ.

ತಾಯಿಯ ಹಾಗೆ ತಂದೆಯನ್ನು ಗೌರವಿಸಬೇಕು. ತಂದೆ-ತಾಯಿಗೆ ಗೌರವ ನೀಡದವರನ್ನು ಪಶುವಿಗೆ ಹೋಲಿಸಲಾಗುತ್ತದೆ.
ಅವರು ಎಂದೂ ಜೀವನದಲ್ಲಿ ಪ್ರಗತಿ ಕಾಣುವುದಿಲ್ಲ.

ಗುರುವಿನಿಂದ ನಮಗೆ ಶಿಕ್ಷೆ ಹಾಗೂ ಜ್ಞಾನ ಲಭಿಸುತ್ತದೆ. ವಿದ್ಯೆ ನೀಡಿದ ಗುರು ದೇವರಿಗೆ ಸಮಾನ. ಗುರುವಿಗೆ ಎಂದೂ ಅವಮಾನ ಮಾಡಬಾರದು. ಗುರುವಿಗೆ ಅಗೌರವ ತೋರುವ ಹಾಗೆ ಅವರು ಹೇಳಿಕೊಟ್ಟ ಶಿಕ್ಷಣಕ್ಕೆ ಅವಮಾನ ಮಾಡಿದ್ರೆ ಜೀವನದಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ. ಗುರುವಿಗೆ ಅವಮಾನ ಮಾಡಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ಇದಕ್ಕೆ ಪ್ರಾಯಶ್ಚಿತವಿಲ್ಲ.

ಪಂಡಿತ ಅಥವಾ ಜ್ಞಾನಿಯನ್ನು ದೇವರಿಗೆ ಹೋಲಿಸಲಾಗುತ್ತದೆ. ಜ್ಞಾನಿ ಎಲ್ಲ ಕಷ್ಟಗಳಿಗೂ ಒಂದು ಪರಿಹಾರ ಕಂಡುಕೊಳ್ಳುತ್ತಾನೆ. ಇಂತಹ ವ್ಯಕ್ತಿಗಳನ್ನು ಅವಮಾನ ಮಾಡುವುದು ಪಾಪದ ಕೆಲಸ. ಇಂತವರನ್ನು ಅವಮಾನ ಮಾಡಿದ ವ್ಯಕ್ತಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಹಾಗಾಗಿ ಜ್ಞಾನಿಗಳು, ಪಂಡಿತರನ್ನು ಸದಾ ಗೌರವಿಸಬೇಕು.

ನೀಲಿ ಕ್ರಾಂತಿ ಸಾಧಿಸಲು ಕೇಂದ್ರ ಸರ್ಕಾರದ "ಮಿಷನ್ ಫಿಂಗರ್ಲಿಂಗ್" ಜಾರಿ

*ನೀಲಿ ಕ್ರಾಂತಿ ಸಾಧಿಸಲು ಕೇಂದ್ರ ಸರ್ಕಾರದ “ಮಿಷನ್ ಫಿಂಗರ್ಲಿಂಗ್” ಜಾರಿ*

ದೇಶದಲ್ಲಿ ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಕೇಂದ್ರ ಕೃಷಿ ಸಚಿವಾಲಯ “ಮಿಷನ್ ಫಿಂಗರ್ಲಿಂಗ್ (Mission Fingerling)” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ 52000 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ 2014-15ನೇ ಸಾಲಿನಲ್ಲಿ 10.79 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟಿರುವ ಮೀನು ಉತ್ಪಾದನೆಯನ್ನು 2020-21ನೇ ಅವಧಿಗೆ 15 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಿಸುವುದಾಗಿದೆ.

*ಪ್ರಮುಖಾಂಶಗಳು:*

ಮೀನು ಉತ್ಪಾದನೆಗೆ ಹೇರಳ ಅವಕಾಶವಿರುವ 20 ರಾಜ್ಯಗಳನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗುರುತಿಸಿದ್ದು, ಮೀನು ಮರಿಗಳ ಉತ್ಪಾದನೆ ಹಾಗೂ ಮೀನು ಉತ್ಪಾದನೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು.
ಮೀನು ಮರಿಗಳು, ಶ್ರಿಂಪ್ ಮತ್ತು ಕ್ರಾಬ್ ಗಳ ಉತ್ಪಾದನೆಗೆ ಹೊಂಡಗಳ ನಿರ್ಮಾಣಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು.
ಇದರಿಂದ ಪ್ರತಿ ವರ್ಷ 20 ಲಕ್ಷ ಟನ್ ಮೀನು ಉತ್ಪಾದನೆ ಹಾಗೂ ಸುಮಾರು 4 ಮಿಲಿಯನ್ ಕುಟುಂಬಗಳಿಗೆ ಅನುಕೂಲವಾಗಲಿದೆ.
*ನೀಲಿ ಕ್ರಾಂತಿ:*

ದೇಶದಲ್ಲಿ ಲಭ್ಯವಿರುವ ಅಪಾರ ಮೀನುಗಾರಿಕೆ ಸಂಪನ್ಮೂಲವನ್ನು ಗುರುತಿಸಿ ಸಮಗ್ರವಾಗಿ ಬಳಸಿಕೊಳ್ಳುವ ಸಲುವಾಗಿ ನೀಲಿ ಕ್ರಾಂತಿಯನ್ನು ಆರಂಭಿಸಲಾಗಿದೆ. ಜೊತೆಗೆ ಮೀನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಅಭಿವೃದ್ದಿಪಡಿಸುವುದು ನೀಲಿ ಕ್ರಾಂತ್ರಿಯ ಗುರಿ.

ಭಾನುವಾರ, ಏಪ್ರಿಲ್ 2, 2017

EVM: ತಿರುಚುವಿಕೆಗೆ ಕೇಜ್ರೀ, ಕೈ ನಾಯಕರ ಆಗ್ರಹ

EVM ತಿರುಚುವಿಕೆ: ಮತ್ತೆ ಮತ ಪತ್ರ ಬಳಕೆಗೆ ಕೇಜ್ರಿ, ಕೈ ನಾಯಕರ ಆಗ್ರಹ

ಹೊಸದಿಲ್ಲಿ : ಈಚಿನ ಪಂಚರಾಜ್ಯ ಚುನಾವಣೆಗಳಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳಿಗೆ ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕರನ್ನು ಒಳಗೊಂಡ ನಿಯೋಗವೊಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝಾಯಿದಿ ಅವರನ್ನು ಭೇಟಿಯಾಗಿ ತಿರುಚುವಿಕೆಯಿಂದ ಮಕ್ತವಾಗಿರುವ ಚುನಾವಣೆಗಳನ್ನು ಆಗ್ರಹಿಸಿದ್ದಾರೆ.

"ಆರಂಭದಿಂದಲೇ ನಾನು ವಿದುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ನಂಬುತ್ತಿರಲಿಲ್ಲ. ಇಡಿಯ ಜಗತ್ತೇ ಚುನಾವಣೆಗೆ ಮತ ಪತ್ರಗಳನ್ನು ಬಳಸುತ್ತಿರುವಾಗ ನಾವು ಕೂಡ ಮತಪತ್ರಗಳನ್ನು ಬಳಸುವುದಕ್ಕೆ ಏನು ತೊಂದರೆ' ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಇದಕ್ಕೆ ಮೊದಲು ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಿ ವಿವಿಪಿಟಿ ಯಂತ್ರಗಳ ಮೂಲಕ ಕೊಡಲಾಗಿರುವ ಮತದಾನದ ಚೀಟಿಗಳನ್ನು ಚುನಾವಣಾ ಫಲಿತಾಂಶಗಳೊಂದಿಗೆ ತಾಳೆ ಹಾಕಲು ಆಗ್ರಹಿಸಿತು.

ಸಭೆಯ ಬಳಿಕ ಆಪ್ ನಾಯಕ ರಾಘವ ಛಡ್ಡಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷವು ಬೂತ್ ಮಟ್ಟದ ಮತದಾನದ ನಮೂನೆಯ ಬಗ್ಗೆ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯು ಇವಿಎಂ ತಿರುಚುವಿಕೆ ನಡೆದಿರುವುದನ್ನು ತೋರಿಸಿದೆ ಎಂದು ಹೇಳಿದರು. 

ಇತಿಹಾಸದ ಪುಟ ಸೇರಿದ "ಸ್ಟೇಟ್ ಬ್ಯಾಂಕ್ ಆಪ್ ಮೈಸೂರು"

ಇತಿಹಾಸದ ಪುಟ ಸೇರಿದ ನಮ್ಮ "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು"!
ಬೆಂಗಳೂರು: ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯದ ಕನ್ನಡಿಗರ ಹೆಮ್ಮೆಯ ಮತ್ತು ಕನ್ನಡಿಗರನ್ನು ಗುರುತಿಸುವ ಮೈಸೂರು ಬ್ಯಾಂಕ್‌ ಎಂದೇ ಮನೆ ಮಾತಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  ಇತಿಹಾಸದ ಪುಟ ಸೇರಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಅಧಿಕೃತವಾಗಿ ವಿಲೀನವಾಗಿದೆ.

ಸುಮಾರು 3 ದಶಕಗಳ ಹಗ್ಗಜಗ್ಗಾಟದ ನಂತರ ಸಾರ್ವಜನಿಕ ಸ್ವಾಮ್ಯದ ದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ನಲ್ಲಿ (ಎಸ್‌ಬಿಐ), ಅದರ ಐದು ಸಹವರ್ತಿ ಬ್ಯಾಂಕ್‌ ಗಳು ಶನಿವಾರ ವಿಲೀನಗೊಳ್ಳಲಿವೆ.  ಇದರಿಂದಾಗಿ ಬ್ಯಾಂಕ್‌ ಗಳ ಕೇಂದ್ರೀಕರಣ ನೀತಿಯಿಂದಾಗಿ ಐದು ಐತಿಹಾಸಿಕ ಬ್ಯಾಂಕ್‌ ಗಳು ಎಸ್ ಬಿಐನಲ್ಲಿ ವಿಲೀನಗೊಳ್ಳುವಂತೆ ಮಾಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ತಿರುವಾಂಕೂರು, ಸ್ಟೇಟ್‌  ಬ್ಯಾಂಕ್‌ ಆಫ್‌ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಟಿಯಾಲಾ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಹಾಗೂ ಜೈಪುರಗಳು ಈ ದಿನ ಎಸ್‌ಬಿಐನಲ್ಲಿ ಲೀನವಾಗಲಿವೆ.

ಈ ಸಹವರ್ತಿ ಬ್ಯಾಂಕ್‌ಗಳಿಗೆ ಶುಕ್ರವಾರ ಕೊನೆಯ ಕೆಲಸದ ದಿವಸವಾಗಿತ್ತು ಈಗ ಎಸ್‌ ಬಿಐನಲ್ಲಿ 2,07,000 ಉದ್ಯೋಗಿಗಳಿದ್ದು, ಈಗ ಸಹವರ್ತಿ ಬ್ಯಾಂಕ್‌ ಗಳ ವಿಲೀನದಿಂದ ಆ ಬ್ಯಾಂಕ್‌ಗಳ 70 ಸಾವಿರ ಉದ್ಯೋಗಿಗಳು  ಸೇರ್ಪಡೆಯಾಗಲಿದ್ದಾರೆ. ಇದರಿಂದಾಗಿ ಒಟ್ಟು ಉದ್ಯೋಗಿಗಳ ಸಂಖ್ಯೆ 2,77,000 ಆಗಲಿದೆ. ಖಾಸಗಿ ಬ್ಯಾಂಕ್‌ ಗಳಿಗೆ ಪೈಪೋಟಿ ಒಡ್ಡುವ ಕಾರಣಕ್ಕೆ ಸರ್ಕಾರವು ಎಲ್ಲ ಸಹವರ್ತಿ ಬ್ಯಾಂಕ್‌ಗಳನ್ನು ಎಸ್‌ ಬಿಐನಲ್ಲಿ, ತೀವ್ರ ವಿರೋಧದ  ನಡುವೆಯೂ ವಿಲೀನಗೊಳಿಸಿದೆ. ಎಸ್‌ ಬಿಎಂ 1913ರಲ್ಲಿ, ಎಸ್‌ಬಿಟಿ 1945, ಎಸ್‌ಬಿಬಿಜೆ 1944, ಎಸ್‌ಬಿಪಿ 1917, ಎಸ್‌ಬಿಎಚ್‌ 1941ರಲ್ಲಿ ಸ್ಥಾಪನೆಯಾಗಿದ್ದವು.

ಕರ್ನಾಟಕದ ಹೆಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

1913ರ  ಅಕ್ಟೋಬರ್ 2ರಂದು,  ಬೆಂಗಳೂರಿನ ಅವೆನ್ಯೂ ರಸ್ತೆಯ ಸಣ್ಣ ಕಟ್ಟಡವೊಂದರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬ್ಯಾಂಕ್‌ ಕಾಲಾನುಕ್ರಮದಲ್ಲಿ  ಬೃಹತ್ ಮರವಾಗಿ ಬೆಳೆದಿತ್ತು. ಸರ್‌. ಎಂ. ವಿಶ್ವೇಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ  ರಚಿತವಾದ ಬ್ಯಾಂಕಿಂಗ್‌ ಸಮಿತಿಯ ಶಿಫಾರಸಿನ ಮೇರೆಗೆ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ 1913ರ ಅಕ್ಟೋಬರ್‌ 2ರಂದು ದಿ ಬ್ಯಾಂಕ್‌ ಆಫ್‌ ಮೈಸೂರು ಲಿ., ಸ್ಥಾಪಿಸಲಾಯಿತು. ಪ್ರಪ್ರಥಮ 20 ಲಕ್ಷ ರು. ಬಂಡವಾಳ ನಿಧಿಯನ್ನು  ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹೂಡಿದರು. ಬಳಿಕ ದಿ ಬ್ಯಾಂಕ್‌ ಆಫ್‌ ಮೈಸೂರು ಲಿ., ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ ಬಿಎಂ) ಎಂದು ನಾಮಕರಣಗೊಂಡು103 ವರ್ಷಗಳನ್ನು ಪೂರೈಸಿತು.

ಸರ್‌.ಎಂ.ವಿ  ಮತ್ತು ಮೈಸೂರು ಅರಸರ ಮಾರ್ಗ ದರ್ಶನದಲ್ಲಿ ಸ್ಥಾಪಿಸಿದ ಮೈಸೂರು ಬ್ಯಾಂಕ್‌ಗೆ 103 ವರ್ಷಗಳ ಇತಿಹಾಸವಿದೆ. 1960ರಲ್ಲಿ ಎಸ್‌ಬಿಎಂ ಅನ್ನು ಸಹವರ್ತಿ ಬ್ಯಾಂಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ  ತೆಗೆದುಕೊಂಡಿತು.  ಆಗ ಎಸ್‌ಬಿಎಂನ ಶೇ.75 ರಷ್ಟು ಷೇರುಗಳನ್ನು ಎಸ್‌ಬಿಐ ಹಿಡಿದುಕೊಂಡಿತ್ತು. ಉಳಿದ ಶೇ.25 ರಷ್ಟು ಮಾತ್ರ ಸಾರ್ವಜನಿಕರಲ್ಲಿತ್ತು. ಹಾಗಾಗಿ ಒಟ್ಟಾರೆ ಎಲ್ಲ ಸಹವರ್ತಿ ಬ್ಯಾಂಕಿನ ನಿಯಂತ್ರಣ ಎಸ್ ಬಿಐ  ಕೈಲಿತ್ತು. ಅಂದಿನಿಂದಲೇ ಎಲ್ಲ ಸಹವರ್ತಿ ಬ್ಯಾಂಕುಗಳು ಎಸ್‌ ಬಿಐನಲ್ಲಿ ವಿಲೀನವಾಗುತ್ತವೆ ಎಂದು ಹೇಳಿಕೊಂಡು ಬರುತ್ತಲೇ ಇದ್ದವು.

ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಎಲ್ಲ ಎಸ್‌ ಬಿಐ ಸಹವರ್ತಿ ಬ್ಯಾಂಕ್‌ ಗಳು ಮತ್ತು ಮಹಿಳಾ ಬ್ಯಾಂಕ್‌ ಗಳು ಏಪ್ರಿಲ್‌ 1, 2017ರಿಂದ ಎಸ್‌ಬಿಐನಲ್ಲಿ ವಿಲೀನವಾಗಲಿವೆ ಎಂದು ನಿರ್ಧರಿಸಲಾಯಿತು. ಆ  ದಿಸೆಯಲ್ಲಿ ಫೆಬ್ರವರಿಯಲ್ಲಿ ಆದೇಶ ಬಂತು. ಅದೇ ರೀತಿ ಸಂಸತ್ತಿ ಸದನಗಳಲ್ಲಿ ಕೂಡ ಇದಕ್ಕೆ ಅನುಮೋದನೆ ಪಡೆಯಲಾಗಿತ್ತು.

ಆಧಾರ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡ ಸರಕಾರ

ಆಧಾರ ದತ್ತಾಂಶ ಸೋರಿಕೆಯನ್ನು ಒಪ್ಪಿಕೊಂಡ ಸರಕಾರ

ಚೆನ್ನೈ,ಮಾ.31: ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆಗಳು, ಇತರ ಸೂಕ್ಷ್ಮ ಮಾಹಿತಿಗಳು ಅದರೊಂದಿಗೆ ಜೋಡಣೆಗೊಂಡಿದ್ದರೆ ನಿಮ್ಮ ದತ್ತಾಂಶಗಳು ಸೋರಿಕೆಯಾಗುವ ಸಾಧ್ಯತೆಗಳಿವೆ.

ಆಧಾರ್ ಮಾಹಿತಿಗಳು ಸೋರಿಕೆಯಾಗುತ್ತಿವೆ ಎನ್ನುವುದನ್ನು ಮೋದಿ ಸರಕಾರವು ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿದೆ.

ಆಧಾರ ಮಾಹಿತಿಗಳ ಸೂಕ್ಷತೆಯ ಕುರಿತು ಎಲ್ಲ ಎಚ್ಚರಿಕೆಗಳು ಮತ್ತು ಟೀಕೆಗಳನ್ನು ತೀರ ಇತ್ತೀಚಿನವರೆಗೂ ಕಡೆಗಣಿಸುತ್ತಲೇ ಬಂದಿದ್ದ ಸರಕಾರವು ಹಲವಾರು ಸೇವೆಗಳಿಗೆ ಆಧಾರ ಅಳವಡಿಕೆಗೆ ಒತ್ತು ನೀಡುತ್ತಲೇ ಇತ್ತು.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬರೆದಿರುವ ಪತ್ರವೊಂದು ಪ್ರಮುಖ ಆಂಗ್ಲ ದೈನಿಕಕ್ಕೆ ಲಭ್ಯವಾಗಿದ್ದು, ಸರಕಾರವು ತುಂಬ ಎಚ್ಚರಿಕೆಯಿಂದ ಕಾಯುತ್ತಿರುವ ಆಧಾರ ದತ್ತಾಂಶಗಳು ಸೋರಿಕೆಯಾಗಿರುವುದನ್ನು ಈ ಪತ್ರವು ದೃಢಪಡಿಸಿದೆ.

ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿರುವ ವಿಜ್ಞಾನಿ ಅರ್ಚನಾ ದುರೇಜಾ ಅವರು ಮಾ.25ರಂದು ಬರೆದಿರುವ ಈ ಪತ್ರದಲ್ಲಿ ದತ್ತಾಂಶ ಸೋರಿಕೆಯು ಗಂಭೀರ ಮತ್ತು ದಂಡನೀಯ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿಗಳೊಂದಿಗೆ ಆಧಾರ್ ಸಂಖ್ಯೆಯಂತಹ ಮಾಹಿತಿಯನ್ನು ಬಹಿರಂಗಗೊಳಿಸುವದು ಆಧಾರ್ ಕಾಯ್ದೆ, 2016ರ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇದಕ್ಕಾಗಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಇಂತಹ ತಪ್ಪೆಸಗುವವರು ಸಂತ್ರಸ್ತ ವ್ಯಕ್ತಿಗಳಿಗೆ ಪರಿಹಾರದ ರೂಪದಲ್ಲಿ ನಷ್ಟಗಳನ್ನು ಪಾವತಿಸಲು ಬಾಧ್ಯರಾಗಿರುತ್ತರೆ ಎಂದು ಹೇಳಿರುವ ದುರೇಜಾ, ಇಂತಹ ಯಾವುದೇ ವಿಷಯವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸಚಿವಾಲಯಗಳು ಮತ್ತು ರಾಜ್ಯಗಳಿಗೆ ಪತ್ರದ ಮೂಲಕ ನಿರ್ದೇಶ ನಿಡಿದ್ದಾರೆ.

ವ್ಯಂಗ್ಯವೆಂದರೆ ಇದೇ ಸಚಿವಾಲಯವು ಮಾ.5ರಂದು ಹೇಳಿಕೆಯೊಂದನು ಹೊರಡಿಸಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ)ದ ಬಳಿಯಿರುವ ವ್ಯಕ್ತಿಗಳ ಖಾಸಗಿ ಮಾಹಿತಿಗಳು ಸಂಪೂರ್ಣ ಸುರಕ್ಷಿತ ಮತ್ತು ಸುಭದ್ರವಾಗಿವೆ ಎಂದು ಭರವಸೆ ನೀಡಿತ್ತು. ಆಧಾರ್ ಮಾಹಿತಿ ಸೋರಿಕೆ, ಬಯೊಮೆಟ್ರಿಕ್ಸ್‌ನ ದುರುಪಯೋಗ, ಖಾಸಗಿತನದ ಉಲ್ಲಂಘನೆ ಮತ್ತು ಸಮಾನಾಂತರ ದತ್ತಾಂಶ ಸಂಚಯ ಸೃಷ್ಟಿಯನ್ನು ಆರೋಪಿಸಿದ್ದ ‘‘ಕೆಲವು ಮಾಧ್ಯಮ ವರದಿಗಳಲ್ಲಿನ ಸುಳ್ಳುಮಾಹಿತಿಗಳ ’’ಕುರಿತಂತೆ ಸ್ಪಷ್ಟನೆಯನ್ನು ನೀಡಿದ್ದ ಯುಐಡಿಎಐ, ಎಲ್ಲ ವರದಿಗಳನ್ನು ತಾನು ಪರಿಶೀಲಿಸಿದ್ದೇನೆ ಮತ್ತು ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಒತ್ತಿ ಹೇಳಿತ್ತು.

ಇಂತಹ ದತ್ತಾಂಶ ಸೋರಿಕೆ ಸಂದರ್ಭದಲ್ಲಿ ಅದನ್ನು ನಿರ್ವಹಿಸಲು ಸರಕಾರದ ಸನ್ನದ್ಧತೆಗೆ ಸಂಬಂಧಿಸಿದಂತೆ ಮಾಜಿ ವಿತ್ತಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಬುಧವಾರ ಸಂಸತ್ತಿನಲ್ಲಿ ಪ್ರಶ್ನೆಗಳನ್ನೆತ್ತಿದ್ದರು.

ಬ್ಯಾಂಕ್ ಮತ್ತು ಇತರ ವಹಿವಾಟುಗಳು ಆಧಾರ್‌ನೊಂದಿಗೆ ಜೋಡಣೆಗೊಂಡ ನಂತರ ವ್ಯಕ್ತಿಗಳ ಖಾಸಗಿತನವನ್ನು ರಕ್ಷಿಸುವ ಬಗ್ಗೆ ನಿಮ್ಮ ಸಿದ್ಧತೆಗಳೇನು ಎಂದು ಅವರು ಸರಕಾರವನ್ನು ಪ್ರಶ್ನಿಸಿದ್ದರು.
ಇತ್ತೀಚಿಗಷ್ಟೇ ಕ್ರಿಕೆಟಿಗ ಎಂ.ಎಸ್.ಧೋನಿಯವರ ಪತ್ನಿ ಸಾಕ್ಷಿ ತನ್ನ ಪತಿಯ ಆಧಾರ ಮಾಹಿತಿಗಳು ಬಹಿರಂಗಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದರು.
ಧೋನಿಯವರ ಆಧಾರ್ ಸಂಖ್ಯೆಯನ್ನು ಸೃಷ್ಟಿಸಿದ್ದ ಏಜನ್ಸಿಯನ್ನು 10 ವರ್ಷಗಳ ಅವಧಿಗೆ ಕಪ್ಪುಪಟಿಗೆ ಸೇರಿಸಿರುವುದಾಗಿ ಹೇಳಿದ್ದ ಸರಕಾರವು, ಇದೊಂದು ಬಿಡಿ ಘಟನೆಯಷ್ಟೇ ಎಂದು ಸಮಜಾಯಿಷಿ ನೀಡಿತ್ತು. ಆದರೆ ದುರೇಜಾರ ಪತ್ರವು ಸೋರಿಕೆ ವ್ಯಾಪಕವಾಗಿರಬಹುದು ಎನ್ನುವುದನ್ನು ಸ್ಪಷ್ಟಪಡಿಸಿದೆ.

ಭಾರತಕ್ಕೂ ವಾಟರ್ ವ್ಹೀಲ್ : ಬಂದಿದೆ ನೋಡಿ ನೀರಿನ ಬಂಡಿ

ಭಾರತಕ್ಕೂ ವಾಟರ್‌ ವ್ಹೀಲ್: ಬಂದಿದೆ ನೋಡಿ ನೀರಿನ ಬಂಡಿ

ಮುಂಬೈ: ನೀರು ತುಂಬಿದ ಕೊಡಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವುದಕ್ಕೆ ಬದಲಾಗಿ, ಬಂಡಿಯಂತೆ ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗುವಂತಹ ಕ್ಯಾನ್‌ಗಳನ್ನು ವೆಲ್ಲೊ ವಾಟರ್‌ ಎಂಬ ಜಾಗತಿಕ ಸ್ವಯಂಸೇವಾ ಸಂಸ್ಥೆ ಭಾರತಕ್ಕೆ ಪರಿಚಯಿಸಿದೆ.

ಭಾರತದ್ದೇ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಈಗಾಗಲೇ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ ಹಲವು ಹಳ್ಳಿಗಳಲ್ಲಿ ಈ ನೀರಿನ ಬಂಡಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಭಾರತದಲ್ಲಿ ಈ ಕ್ಯಾನ್‌ ತಯಾರಿಕೆಗೆ ನೀಲ್‌ಕಮಲ್ ಕಂಪೆನಿ ಜತೆ ವೆಲ್ಲೊ ಒಪ್ಪಂದ ಮಾಡಿಕೊಂಡಿದೆ.

‘ಇಲ್ಲಿ ತಯಾರಾದ ಇಂತಹ ಒಂದು ಕ್ಯಾನ್‌ಗೆ ₹2,500 ಬೆಲೆ ನಿಗದಿ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ಖರೀದಿಸಿದರೆ ₹ 1,900ಕ್ಕೆ ಒಂದು ಕ್ಯಾನ್ ಅನ್ನು ಒದಗಿಸಬಹುದು. ಆದರೆ, ಇದನ್ನು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಮೂಲಕ ಈ ಕ್ಯಾನ್‌ಗಳನ್ನು ವಿತರಿಸಲು ವೆಲ್ಲೊ ಯೋಜನೆ ರೂಪಿಸಿದೆ’ ಎಂದು ನೀಲ್‌ಕಮಲ್ ಹೇಳಿದೆ.

**

ಅನುಕೂಲಗಳು

* ಹೆಚ್ಚು ಶ್ರಮವಿಲ್ಲದೆ, ಹೆಚ್ಚು ನೀರನ್ನು ಸಾಗಿಸಬಹುದು

* ತಲೆ ಮೇಲೆ ಕೊಡ/ಬಿಂದಿಗೆ ಹೊತ್ತು ನಡೆಯುವುದು ತಪ್ಪುತ್ತದೆ. ಕೊಡ ಹೊತ್ತು ಸಾಗುತ್ತಿದ್ದುರಿಂದ ಬರುತ್ತಿದ್ದ ತಲೆ ನೋವು, ಬೆನ್ನು ನೋವು ಬರುವುದು ತಪ್ಪುತ್ತದೆ.

* ಸಣ್ಣ ಮಕ್ಕಳೂ ಸುಲಭವಾಗಿ ನೀರು ಸಾಗಿಸಬಹುದು

*

‘ನಮ್ಮ ಸಂಸ್ಥೆಯ ಸಂಸ್ಥಾಪಕಿ ಸಿಂಥಿಯಾ ಕೋನಿಂಗ್ ಅವರು ಲ್ಯಾಟಿನ್ ಅಮೆರಿಕದ ದೇಶಗಳ ಕುಗ್ರಾಮಗಳಲ್ಲಿ ಸಂಶೋಧನೆಗಾಗಿ ನೆಲೆಸಿದ್ದಾಗ, ಪ್ರತಿ ದಿನ ನೀರನ್ನು ಹೊತ್ತು ತರಬೇಕಿತ್ತು. ಆ ಕುಗ್ರಾಮಗಳ ಮಹಿಳೆಯರ ದಿನನಿತ್ಯದ ಕೆಲಸವಾಗಿದ್ದ ಇದನ್ನು, ಸುಲಭವಾಗಿಸುವ ನಿಟ್ಟಿನಲ್ಲಿ ‘ವಾಟರ್‌ ವ್ಹೀಲ್’ ಅರ್ಥಾತ್ ನೀರಿನ ಬಂಡಿಯ ಬಗ್ಗೆ ಯೋಚಿಸಿದರು. ನಂತರ ಸಂಸ್ಥೆಯ  ತಂತ್ರಜ್ಞರು, ವಿವಿಧ ಪ್ಲಾಸ್ಟಿಕ್‌ ಕಂಪೆನಿಗಳ ಸಹಯೋಗದಲ್ಲಿ ಈ ಬಂಡಿಯನ್ನು ಅಭಿವೃದ್ಧಿಪಡಿಸಿದರು’ ಎಂದು ವೆಲ್ಲೊ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.

ದಕ್ಷಿಣ ಕೋರಿಯಾದ ಮೊದಲ ಅಧ್ಯಕ್ಷೆ "ಪಾರ್ಕ್ ಜಿಯುನ್" ಈಗ ಕೈದಿ

ಮೊದಲ ಅಧ್ಯಕ್ಷೆ, ಈಗ ಕೈದಿ

ಸೋಲ್‌: ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪಾರ್ಕ್‌ ಜಿಯುನ್‌ ಹೈ, ಈಗ ಕೈದಿ ಸಂಖ್ಯೆ ಸಂಖ್ಯೆ 503.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪಾರ್ಕ್‌, ನ್ಯಾಯಾಲಯದ ವಿಚಾರಣೆ ನಂತರ ಕಾರಾಗೃಹದಲ್ಲಿ ತಮ್ಮ ಮೊದಲ ರಾತ್ರಿಯನ್ನು ಏಕಾಂಗಿಯಾಗಿ ಕಳೆದರು.

ಪಾರ್ಕ್‌ ಅವರ ಭಾವಚಿತ್ರವನ್ನು ತೆಗೆದುಕೊಂಡ ನಂತರ ಅವರಿಗೆ ಕೈದಿಗಳಿಗೆ ನೀಡುವಂತಹ ಪ್ರಸಾಧನ ಸಾಮಾಗ್ರಿ, ತಟ್ಟೆ ಹಾಗೂ ಹಾಸಿಗೆ ಇರುವ ಕಿಟ್‌ ನೀಡಲಾಯಿತು.

ಜೈಲಿನ ಪ್ರಕ್ರಿಯೆ ಮುಗಿದ ನಂತರ ಪಾರ್ಕ್‌ ಅವರಿಗೆ 10.6 ಚದರ ಮೀಟರ್‌ ಇರುವ ಪ್ರತ್ಯೇಕ ಜೈಲಿನ ಕೊಠಡಿಯನ್ನು ನೀಡಲಾಗಿದ್ದು, ಇದು ಜೈಲಿನ ಇತರೆ ಕೊಠಡಿಗಳಿಗಿಂತ ದೊಡ್ಡದಾಗಿದೆ.

ಜೈಲಿನ ಅಧಿಕಾರಿಗಳು ಅವರ ಕೊಠಡಿ ತೋರಿಸುತ್ತಿದ್ದಂತೆಯೇ ಪಾರ್ಕ್‌ ಅವರು ಬಿಕ್ಕಿಬಿಕ್ಕಿ ಅತ್ತರು ಎಂದು ಮೂಲಗಳು ತಿಳಿಸಿವೆ

ಎಂಟು ಒಪ್ಪಂದಕ್ಕೆ ಭಾರತ - ಮಲೇಷ್ಯಾ ಸಹಿ

ಎಂಟು ಒಪ್ಪಂದಕ್ಕೆ ಭಾರತ - ಮಲೇಷ್ಯಾ ಸಹಿ

ನವದೆಹಲಿ: ಭಾರತದಲ್ಲಿನ ಮದರಸಾಗಳ ಆಧುನೀಕರಣಕ್ಕೆ ನೆರವು ನೀಡಲು ಮಲೇಷ್ಯಾ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮಲೇಷ್ಯಾ ಪ್ರಧಾನಿ ಮೊಹಮ್ಮದ್ ನಜೀಬ್ ರಜಾಕ್ ಅವರ ಮಧ್ಯೆ ನಡೆದ ಮಾತುಕತೆ ವೇಳೆ ಎರಡೂ ದೇಶಗಳು ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿವೆ.

ಮಲೇಷ್ಯಾದಲ್ಲಿ ಮದರಸಾಗಳನ್ನು ಸರ್ಕಾರದ ವತಿಯಿಂದ ಹೇಗೆ ನಿರ್ವಹಿಸಲಾಗುತ್ತಿದೆ ಎಂಬ ವಿವರಗಳು ಇರುವ ಪುಸ್ತಕವನ್ನು ರಜಾಕ್ ಅವರು ಮೋದಿ ಅವರಿಗೆ ನೀಡಿದರು.

‘ಮುಸ್ಲಿಂ ಯುವಕರು ಉಗ್ರವಾದ ಮತ್ತು ಧಾರ್ಮಿಕ ಮೂಲಭೂತವಾದ ಕಡೆ ವಾಲುವುದನ್ನು ತಡೆಯುವ ಸಲುವಾಗಿ ಮದರಸಾಗಳ ಪಠ್ಯಕ್ರಮಗಳಲ್ಲಿ  ಬದಲಾವಣೆ ತರಲು ಸರ್ಕಾರ ಉದ್ದೇಶಿಸಿದೆ’ ಎಂದು ಮೂಲಗಳು  ಶುಕ್ರವಾರ ಹೇಳಿದ್ದವು.

ಇದರ ಜತೆಯಲ್ಲೇ ಎರಡೂ ರಾಷ್ಟ್ರಗಳು ಇನ್ನೂ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ.
‘ತಮಿಳು ಚಿತ್ರಗಳ ಅಭಿಮಾನಿ’ : ಮಲೇಷ್ಯಾ ಪ್ರಧಾನಿ ಮೊಹಮ್ಮದ್‌ ನಜೀದ್ ರಜಾಕ್‌ ಅವರು, ತಾವು ತಮಿಳು ಚಿತ್ರಗಳ ಅಭಿಮಾನಿ ಎಂದು ಘೋಷಿಸಿಕೊಂಡಿದ್ದಾರೆ.

‘ಚೆನ್ನೈಗೆ ಭೇಟಿ ನೀಡಿದ ನಂತರ ನಾನು ತಮಿಳು ಚಿತ್ರಗಳ ಹೊಸ ಅಭಿಮಾನಿ’ ಎಂದು ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಆರು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿರುವ ರಜಾಕ್‌ ಅವರ ಗುರುವಾರ ಚೆನ್ನೈಗೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಅವರು ಪತ್ನಿಯೊಂದಿಗೆ ಖ್ಯಾತ ನಟ ರಜನೀಕಾಂತ್‌ ಅವರನ್ನು ಭೇಟಿ ಮಾಡಿದ್ದರು.

ಜಂಟಿ ಘೋಷಣೆ

‘ಭಯೋತ್ಪಾದನೆ ವಿರುದ್ಧದ ಹೋರಾಟ ಎಂಬುದು ಕೇವಲ ಉಗ್ರರ ಹತ್ಯೆ, ಉಗ್ರ ಸಂಘಟನೆಗಳು ಮತ್ತು ಜಾಲವನ್ನು ನಿರ್ಮೂಲನೆ ಮಾಡುವುದಕ್ಕೆ ಸೀಮಿತವಲ್ಲ. ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರಗಳನ್ನು ಗುರುತಿಸಿ, ಅವುಗಳನ್ನು ಹೊಣೆಗಾರರನ್ನಾಗಿ ಮಾಡುವುದೂ ಈ ಹೋರಾಟದ ಪ್ರಮುಖ ಭಾಗ’ ಎಂದು ಮೋದಿ ಮತ್ತು ರಜಾಕ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಒಪ್ಪಂದಗಳು
* ರಕ್ಷಣೆ ಮತ್ತು ಭದ್ರತಾ ಸಹಕಾರ
* ವಾಯುಯಾನ ಸೇವಾ ಸಹಕಾರ
* ಎರಡೂ ದೇಶಗಳಲ್ಲಿನ ಶಿಕ್ಷಣಕ್ಕೆ ಪರಸ್ಪರರಲ್ಲಿ ಮಾನ್ಯತೆ
* ಕ್ರೀಡೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಹಕಾರ
* ತಾಳೆ ಎಣ್ಣೆ ಕ್ಷೇತ್ರದಲ್ಲಿ ಸಹಕಾರ
* ಕೃಷಿ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದಿಸುವ ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್ ಆಂಧ್ರಪ್ರದೇಶದಲ್ಲಿ  ಸ್ಥಾಪನೆ
* ಭಾರತಕ್ಕೆ ರಫ್ತು ಮಾಡುವ ಉದ್ದೇಶದಿಂದ ಮಲೇಷ್ಯಾದಲ್ಲಿ ಯೂರಿಯಾ ಮತ್ತು ಅಮೋನಿಯಾ ಉತ್ಪಾದನಾ ಘಟಕ ಸ್ಥಾಪನೆ

ಇ-ಫೈಲಿಂಗ್ ಚಾಲನೆ

ಇ-ಫೈಲಿಂಗ್‌ ಗೆ ಚಾಲನೆ

ನವದೆಹಲಿ : 2017–18ರ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐ.ಟಿ ರಿಟರ್ನ್ಸ್‌) ಎರಡು ಇ–ಫೈಲಿಂಗ್‌ ಸೌಲಭ್ಯಕ್ಕೆ ಆದಾಯ ತೆರಿಗೆ ಇಲಾಖೆಯು ಶನಿವಾರ ಚಾಲನೆ ನೀಡಿದೆ.
ಅಂತರ್ಜಾಲ ತಾಣ https://incometaxindiaefiling. gov.in )  ಐಟಿಆರ್‌–1 (ಸಹಜ್‌) ಮತ್ತು ಐಟಿಆರ್‌–4 (ಸುಗಮ್‌) ಅರ್ಜಿ ನಮೂನೆಗಳು ಲಭ್ಯ ಇರಲಿವೆ.

ಛತ್ತಿಸಗಢ ರಾಜ್ಯವು ಗೋಹತ್ಯೆ ನಿಷೇದಿಸಿದ ಪ್ರಥಮ ರಾಜ್ಯವಾಗಿದೆ.

ಗೋಹತ್ಯೆ ಮಾಡಿದರೆ ಗಲ್ಲುಶಿಕ್ಷೆ: ರಮಣ್ ಸಿಂಗ್

ರಾಯ್‌ಪುರ, ಎ.1: ರಾಜ್ಯದಲ್ಲಿ ಯಾವುದೇ ವ್ಯಕ್ತಿ ಗೋಹತ್ಯೆ ಮಾಡಿರುವುದು ತಿಳಿದುಬಂದರೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.

  ಗುಜರಾತ್‌ನ ಬಿಜೆಪಿ ಸರಕಾರ ಗೋವಧೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಕಾನೂನನ್ನು ತಿದ್ದುಪಡಿ ಮಾಡಿದ ಮರುದಿನ ಛತ್ತೀಸ್‌ಗಢ ಸರಕಾರದ ಆದೇಶ ಹೊರಬಿದ್ದಿದೆ. ಉತ್ತರಪ್ರದೇಶ ಸರಕಾರ ಕೂಡಾ ಹಸುಗಳ ಅಕ್ರಮ ಸಾಗಾಟ ಮತ್ತು ಅಕ್ರಮ ಕಸಾಯಿಖಾನೆಯನ್ನು ನಿಷೇಧಿಸಿದೆ.

ಗೋ ಹತ್ಯೆ ವಿರೋಧಿಸಿ ಕಾನೂನಿನಲ್ಲಿ ಯಾವುದಾದರೂ ತಿದ್ದುಪಡಿ ಮಾಡುವ ಇರಾದೆಯಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮಣ್ ಸಿಂಗ್, ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಈ ರೀತಿಯ ಘಟನೆ (ಗೋಹತ್ಯೆ) ನಡೆದಿಲ್ಲ.
ಯಾರು ಈ ರೀತಿ ಮಾಡುತ್ತಾರೋ ಅವರನ್ನು ಗಲ್ಲಿಗೇರಿಸಲಾಗುವುದು ಎಂದುತ್ತರಿಸಿದರು. ಗೋಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶ ಯಾವುದೇ ರಾಜ್ಯ ಸರಕಾರದ ಕಾನೂನಿನಲ್ಲಿ ಇಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.

   ಛತ್ತೀಸ್‌ಗಢದ ‘ಪಶು ಕ್ರೂರತಾ ಅಧಿನಿಯಮ’ದಡಿ ಗೋ ಹತ್ಯೆ ಮತ್ತು ಮಾಂಸ ಸಾಗಾಟ ನಿಷೇಧಿಸಲಾಗಿದೆ. ತಪ್ಪಿತಸ್ತರಿಗೆ ಏಳು ವರ್ಷ ಜೈಲುಶಿಕ್ಷೆ ಮತ್ತು 50,000 ರೂ.

ದಂಡ ಅಥವಾ ಎರಡನ್ನೂ ವಿಧಿಸಬಹುದು. ಛತ್ತೀಸ್‌ಗಢವು ಗೋಹತ್ಯೆ ನಿಷೇಧಿಸಿದ ಪ್ರಥಮ ರಾಜ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿರುವ ಕಸಾಯಿಖಾನೆಗಳಲ್ಲಿ ಆಡುಗಳನ್ನು ಮಾತ್ರ ವಧಿಸಲು ಅವಕಾಶವಿದೆ. ಜಾನುವಾರುಗಳು ಅಥವಾ ಹಂದಿಯನ್ನು ವಧಿಸುವಂತಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಮದ್ಯಪ್ರದೇಶದಲ್ಲಿ ವಿದ್ಯುನ್ಮಾನ ಮತಯಂತ್ರ ಪರೀಕ್ಷೆ

ಮಧ್ಯಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಸಂದರ್ಭ ಎಲ್ಲ ಮತಗಳನ್ನೂ ಬಿಜೆಪಿಗೆ ದಾಖಲಿಸಿದ ಇವಿಎಂ

ಭೋಪಾಲ,ಎ.1: ಮಧ್ಯಪ್ರದೇಶದಲ್ಲಿ ಶನಿವಾರ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ವೊಂದು ಮತಗಳನ್ನು ನಿರ್ದಿಷ್ಟ ಪಕ್ಷಕ್ಕೇ ನೀಡಿದೆ ಎಂದು ವರದಿಯಾಗಿದ್ದು, ಇದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಅಂತಿಮ ಸುತ್ತಿನ ಮತದಾನದಲ್ಲಿ ಇವಿಎಂಗಳಲ್ಲಿ ಕೈವಾಡದಿಂದಾಗಿ ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿದ್ದವು ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಹೊಸಬಲವನ್ನು ನೀಡಿದೆ.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಮುನ್ನ ರಾಜ್ಯ ಚುನಾವಣಾಧಿಕಾರಿಗಳು ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆಯ ವೀಡಿಯೊವನ್ನು ವೀಕ್ಷಿಸಿದ ಬಳಿಕ ಚುನಾವಣಾ ಆಯೋಗವು ಭಿಂಡಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿದೆ.

ಇವಿಎಂಗಳಲ್ಲಿ ಅಳವಡಿಸಲಾಗುವ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್(ವಿವಿಪಿಎಟಿ) ಅಥವಾ ಮುದ್ರಿತ ರಸೀದಿ ವ್ಯವಸ್ಥೆಯ ಮೂಲಕ ಮತದಾರ ತಾನು ಒತ್ತಿದ ಮತ ತಾನು ಆಯ್ಕೆ ಮಾಡಿದ್ದ ಪಕ್ಷಕ್ಕೇ ಬಿದ್ದಿದೆ ಎನ್ನುವುದನ್ನು ಹೇಗೆ ಖಚಿತ ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದ ಮುಖ್ಯ ಚುನಾವಣಾಧಿಕಾರಿ ಶಾಲಿನಾ ಸಿಂಗ್ ಅವರು, ಎರಡೂ ಸಂದರ್ಭಗಳಲ್ಲಿ ಮತಗಳು ಬಿಜೆಪಿ ಪರವಾಗಿಯೇ ದಾಖಲಾಗಿದ್ದವು ಎನ್ನುವುದನ್ನು ತಿರಸ್ಕರಿಸಿದರು.
ಆದರೆ ಇದು ಇವಿಎಂಗಳ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳನ್ನೆತ್ತುತ್ತಿರುವ ವಿರೋಧ ಪಕ್ಷಗಳಿಗೆ ತೃಪ್ತಿಯನ್ನು ನೀಡಿಲ್ಲ.

ಮತದಾರ ಮತದಾನದ ಗುಂಡಿಯನ್ನು ಅದುಮಿದಾಗ ಆತ ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾನೋ ಆ ಪಕ್ಷದ ಚುನಾವಣಾ ಚಿಹ್ನೆ ಮುದ್ರಿತಗೊಂಡಿರುವ ರಸೀದಿಯನ್ನು ವಿವಿಪಿಎಟಿ ಪ್ರದರ್ಶಿಸುತ್ತದೆ. ಪೆಟ್ಟಿಗೆಯೊಂದರಲ್ಲಿ ಅದು ಬೀಳುವ ಮುನ್ನ ಚಿಹ್ನೆಯನ್ನು ಖಚಿತ ಪಡಿಸಿಕೊಳ್ಳಲು ಏಳು ಸೆಕಂಡ್‌ಗಳ ಕಾಲಾವಕಾಶ ಮತದಾರನಿಗಿರುತ್ತದೆ.

ವರದಿಯ ಬೆನ್ನಲ್ಲೇ ದಿಲ್ಲಿಯಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿದ ಕಾಂಗ್ರೆಸ್ ಮತ್ತು ಆಪ್‌ನ ಹಿರಿಯ ನಾಯಕರು ಇವಿಎಂಗಳ ಕುರಿತ ತಮ್ಮ ಕಳವಳಗಳನ್ನು ಪುನರುಚ್ಚರಿಸಿದರು. ಇವಿಎಂನ ತಟಸ್ಥತೆಯ ಕುರಿತ ಪ್ರಶ್ನೆಗಳನ್ನು ಆಯೋಗವು ಈ ಹಿಂದೆ ತಳ್ಳಿಹಾಕಿತ್ತು.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಇವಿಎಂಗಳಲ್ಲಿ ಕೈವಾಡ ನಡೆದಿರುವ ಬಗ್ಗೆ ಬಿಎಸ್‌ಪಿ ನಾಯಕಿ ಮಾಯಾವತಿ ಮೊದಲು ಶಂಕೆ ವ್ಯಕ್ತಪಡಿಸಿದ್ದರು. ಆಪ್,ಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಸಹ ಇದಕ್ಕೆ ಧ್ವನಿಗೂಡಿಸಿದ್ದವು.

ಇವಿಎಂಗಳ ಕುರಿತು ಎತ್ತಲಾಗಿರುವ ಶಂಕೆಗಳ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಜೊತೆ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದ ಸಿಂದಿಯಾ, ಈ ಬಗ್ಗೆ ತಾನು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆಯೋಗವು ಭರವಸೆ ನೀಡಿದೆ ಎಂದು ತಿಳಿಸಿದರು.
ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲೇಬಾರದು ಎಂದು ಸಿಂಗ್ ಹೇಳಿದರು.

ಶನಿವಾರ, ಏಪ್ರಿಲ್ 1, 2017

ಚಂಡಮಾರುತಕ್ಕೆ ನಾಮಕರಣ ಹೇಗೆ ?

*💐 ಕನ್ನಡ ಸಾಮಾನ್ಯ ಜ್ಞಾನ 💐*

🌕 ಚಂಡಮಾರುತಕ್ಕೆ ನಾಮಕರಣ ಹೇಗೆ ?
ಚಂಡಮಾರುತದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಏಳುವ ಚಂಡಮಾರುತದ ಕುರಿತು ಗೊಂದಲ ನಿವಾರಣೆಗಾಗಿ  ಅಧಿಕೃತವಾಗಿ ಹೆಸರಿಡುವ ಪ್ರಕ್ರಿಯೆ ನಡೆಯುತ್ತಿದೆ.

ಪ್ರಸ್ತುತ ಚಂಡುಮಾರುತಕ್ಕೆ ‘ವಾರ್ದಾ’ ಹೆಸರು ನೀಡಿರುವುದು ಪಾಕಿಸ್ತಾನ. ವಾರ್ದಾ ಎಂದರೆ ಕೆಂಪು ಗುಲಾಬಿ ಎನ್ನುವ ಅರ್ಥವಿದೆ.

ಹಿಂದೂ ಮಹಾ ಸಾಗರದಿಂದ ಸುತ್ತುವರಿದಿರುವ ರಾಷ್ಟ್ರಗಳು ಅಪ್ಪಳಿಸುವ ಚಂಡಮಾರುತಕ್ಕೆ 2004ರಿಂದ ಹೆಸರಿಡುತ್ತಿವೆ. ವಿಶ್ವ ಪವನಶಾಸ್ತ್ರ ಸಂಸ್ಥೆ(WMO) ಚಂಡಮಾರುತಗಳಿಗೆ ಹೆಸರಿಡುವ ಕ್ರಮವನ್ನು ಜಾರಿಗೆ ತಂದಿದೆ.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಥೈಲ್ಯಾಂಡ್, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಒಮಾನ್ ಸರತಿಯಂತೆ ಹೆಸರು ಸೂಚಿಸುತ್ತವೆ. ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಂಡ ನಾಡಾ ಚಂಡಮಾರುತಕ್ಕೆ ಒಮಾನ್ ದೇಶ ಹೆಸರು ನೀಡಿತ್ತು.

ಈ ಮೇಲಿನ ಎಂಟು ರಾಷ್ಟ್ರಗಳು ಚಂಡಮಾರುತಗಳಿಗೆ ಹೆಸರಿಡಲು ಈಗಾಗಲೇ 64 ಹೆಸರಿನ ಪಟ್ಟಿ ಸಿದ್ಧಪಡಿಸಿವೆ. ಪ್ರತಿ ರಾಷ್ಟ್ರ ಎಂಟು ಹೆಸರು ಸೂಚಿಸುವ ಅವಕಾಶ ಪಡೆದುಕೊಂಡಿವೆ.

*ಕೆಲವು ಚಂಡಮಾರುಗಳ ಹೆಸರು:*

ನಿಲೋಫರ್‌– ಪಾಕಿಸ್ತಾನ
ಪ್ರಿಯಾ– ಶ್ರೀಲಂಕಾ
ಕೋಮೆನ್‌–ಥೈಲ್ಯಾಂಡ್‌
ಚಪಲಾ– ಬಾಂಗ್ಲಾದೇಶ
ಮೇಘ್‌– ಭಾರತ
ರೋನು–ಮಾಲ್ಡೀವ್ಸ್‌
ನಾಡಾ–ಓಮನ್‌
ಹುಡ್‌ಹುಡ್‌–ಓಮನ್‌