ಭಾನುವಾರ, ಏಪ್ರಿಲ್ 2, 2017

ಛತ್ತಿಸಗಢ ರಾಜ್ಯವು ಗೋಹತ್ಯೆ ನಿಷೇದಿಸಿದ ಪ್ರಥಮ ರಾಜ್ಯವಾಗಿದೆ.

ಗೋಹತ್ಯೆ ಮಾಡಿದರೆ ಗಲ್ಲುಶಿಕ್ಷೆ: ರಮಣ್ ಸಿಂಗ್

ರಾಯ್‌ಪುರ, ಎ.1: ರಾಜ್ಯದಲ್ಲಿ ಯಾವುದೇ ವ್ಯಕ್ತಿ ಗೋಹತ್ಯೆ ಮಾಡಿರುವುದು ತಿಳಿದುಬಂದರೆ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.

  ಗುಜರಾತ್‌ನ ಬಿಜೆಪಿ ಸರಕಾರ ಗೋವಧೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಕಾನೂನನ್ನು ತಿದ್ದುಪಡಿ ಮಾಡಿದ ಮರುದಿನ ಛತ್ತೀಸ್‌ಗಢ ಸರಕಾರದ ಆದೇಶ ಹೊರಬಿದ್ದಿದೆ. ಉತ್ತರಪ್ರದೇಶ ಸರಕಾರ ಕೂಡಾ ಹಸುಗಳ ಅಕ್ರಮ ಸಾಗಾಟ ಮತ್ತು ಅಕ್ರಮ ಕಸಾಯಿಖಾನೆಯನ್ನು ನಿಷೇಧಿಸಿದೆ.

ಗೋ ಹತ್ಯೆ ವಿರೋಧಿಸಿ ಕಾನೂನಿನಲ್ಲಿ ಯಾವುದಾದರೂ ತಿದ್ದುಪಡಿ ಮಾಡುವ ಇರಾದೆಯಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಮಣ್ ಸಿಂಗ್, ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಈ ರೀತಿಯ ಘಟನೆ (ಗೋಹತ್ಯೆ) ನಡೆದಿಲ್ಲ.
ಯಾರು ಈ ರೀತಿ ಮಾಡುತ್ತಾರೋ ಅವರನ್ನು ಗಲ್ಲಿಗೇರಿಸಲಾಗುವುದು ಎಂದುತ್ತರಿಸಿದರು. ಗೋಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶ ಯಾವುದೇ ರಾಜ್ಯ ಸರಕಾರದ ಕಾನೂನಿನಲ್ಲಿ ಇಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು.

   ಛತ್ತೀಸ್‌ಗಢದ ‘ಪಶು ಕ್ರೂರತಾ ಅಧಿನಿಯಮ’ದಡಿ ಗೋ ಹತ್ಯೆ ಮತ್ತು ಮಾಂಸ ಸಾಗಾಟ ನಿಷೇಧಿಸಲಾಗಿದೆ. ತಪ್ಪಿತಸ್ತರಿಗೆ ಏಳು ವರ್ಷ ಜೈಲುಶಿಕ್ಷೆ ಮತ್ತು 50,000 ರೂ.

ದಂಡ ಅಥವಾ ಎರಡನ್ನೂ ವಿಧಿಸಬಹುದು. ಛತ್ತೀಸ್‌ಗಢವು ಗೋಹತ್ಯೆ ನಿಷೇಧಿಸಿದ ಪ್ರಥಮ ರಾಜ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿರುವ ಕಸಾಯಿಖಾನೆಗಳಲ್ಲಿ ಆಡುಗಳನ್ನು ಮಾತ್ರ ವಧಿಸಲು ಅವಕಾಶವಿದೆ. ಜಾನುವಾರುಗಳು ಅಥವಾ ಹಂದಿಯನ್ನು ವಧಿಸುವಂತಿಲ್ಲ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ