ಸೋಮವಾರ, ಏಪ್ರಿಲ್ 10, 2017

ಭಾರತಕ್ಕೆ ಬಾಂಗ್ಲಾವನ್ನು ಮಾರಿದ ಹಸೀನಾ

ಅಧಿಕಾರಕ್ಕೆ ಅಂಟಿಕೊಳ್ಳುವ ಆಸೆಯಿಂದ ಬಾಂಗ್ಲಾವನ್ನು ಭಾರತಕ್ಕೆ ಮಾರುತ್ತಿರುವ ಹಸೀನಾ : ಖಾಲಿದಾ ಝಿಯಾ ಆರೋಪ

ಢಾಕಾ, ಎ.9: ಜೀವಮಾನವಿಡೀ ಅಧಿಕಾರದಲ್ಲಿ ಉಳಿಯಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾವನ್ನು ಭಾರತಕ್ಕೆ ಮಾರುತ್ತಿದ್ದಾರೆ ಎಂದು ಬಾಂಗ್ಲಾದ ವಿಪಕ್ಷ ನಾಯಕಿ ಖಾಲಿದಾ ಝಿಯಾ ಆರೋಪಿಸಿದ್ದಾರೆ.

ಹಸೀನಾ ಜೀವಮಾನವಿಡೀ ಅಧಿಕಾರದಲ್ಲಿರಬೇಕೆಂದು ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಹಲವು ಕೃತ್ಯಗಳನ್ನು ನಡೆಸಿದ್ದಾರೆ. ದೇಶಕ್ಕೆ ಯಾವುದನ್ನೂ ಉಳಿಸದೆ ಎಲ್ಲವನ್ನೂ ಮಾರಿಬಿಟ್ಟಿದ್ದಾರೆ . ಆದರೆ ದೇಶ ಮಾರಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಜಾಗತಿಕ ಇತಿಹಾಸ ತಿಳಿಸುತ್ತದೆ ಎಂದು ಖಾಲಿದಾ ಹೇಳಿದರು.

ಭಾರತ ಮತ್ತು ಬಾಂಗ್ಲಾ ದೇಶಗಳು 22 ಒಪ್ಪಂದಕ್ಕೆ ಸಹಿ ಹಾಕಿದ ಕೆಲ ಗಂಟೆಗಳ ಬಳಿಕ ಬಾಂಗ್ಲಾದ ಸಂಸತ್ ಭವನದ ಮುಂಭಾಗದ ಪಕ್ಷದ ಸಭೆಯೊಂದರಲ್ಲಿ ಮಾಜಿ ಪ್ರಧಾನಿ, ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಅಧ್ಯಕ್ಷೆ ಖಾಲಿದಾ ಮಾತನಾಡಿದರು.

ಭಾರತದೊಂದಿಗೆ ರಕ್ಷಣಾ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕುವುದು ಬಾಂಗ್ಲಾಕ್ಕೆ ಮತ್ತು ದೇಶದ ಜನತೆಗೆ ಎಸಗಿರುವ ದ್ರೋಹವಾಗಿದೆ . ಈ ಬೆಳವಣಿಗೆಯಿಂದ ಕೆ ನೀಬಾಂಗ್ಲಾದ ಭದ್ರತಾ ರಹಸ್ಯವನ್ನು ಭಾರತಕ್ಕೆ ಬಿಟ್ಟುಕೊಟ್ಟಂತಾಗುತ್ತದೆ ಎಂದು ಶನಿವಾರ ಬಿಎನ್‌ಪಿಯ ವಕ್ತಾರ ರುಹುಲ್ ಕಬೀರ್ ರಿಝ್ವಿ ಹೇಳಿಡಿದ್ದರು. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದ ಭದ್ರತೆ ಮತ್ತು ಅಸ್ತಿತ್ವವನ್ನು ಪಣಕ್ಕೆ ಇಟ್ಟಂತಾಗಿದೆ ಎಂದವರು ಹೇಳಿದ್ದರು.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಆಡಳಿತ ಪಕ್ಷವಾದ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಮತ್ತು ರಸ್ತೆ ಸಾರಿಗೆ ಸಚಿವ ಒಬೈದುಲ್ ಖಾದರ್, ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೆ ಬಿಎನ್‌ಪಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಇದು ತಂತ್ರಜ್ಞಾನದ ಯುಗ.

ಇಲ್ಲಿ ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

2014ರ ಮಹಾಚುನಾವಣೆಯನ್ನು ಬಹಿಷ್ಕರಿಸಿದ್ದ ಬಿಎನ್‌ಪಿ, ಆ ಬಳಿಕ ದೇಶದ ರಾಜಕೀಯ ರಂಗದಲ್ಲಿ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಲು ಹೆಣಗಾಡುತ್ತಿದೆ. ಇದೀಗ ಭಾರತ-ಬಾಂಗ್ಲಾ ಒಪ್ಪಂದದ ವಿಷಯವನ್ನು ವಿವಾದವನ್ನಾಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು , ಈ ಮೂಲಕ ಪಕ್ಷದ ಕಾರ್ಯಕರ್ತರ ಮತ್ತು ಬೆಂಬಲಿಗರ ಮನೋಬಲ ಹೆಚ್ಚಿಸಲು ಬಯಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ವಿಷಯದಲ್ಲಿ ಬಿಎನ್‌ಪಿ ದ್ವಿಮುಖ ಧೋರಣೆ ತಳೆಯುತ್ತಿದೆ ಎಂದು ಇತ್ತೀಚೆಗೆ ಆರೋಪಿಸಿದ್ದ ಪ್ರಧಾನಿ ಶೇಖ್ ಹಸೀನಾ, ಭಾರತಕ್ಕೆ ಗ್ಯಾಸ್ ಮಾರಾಟ ಮಾಡುವ ಆಶ್ವಾಸನೆ ನೀಡಿ 2001ರಲ್ಲಿ ಖಾಲಿದಾ ಝಿಯಾ ಅಧಿಕಾರಕ್ಕೆ ಬಂದಿದ್ದರು. ಬಾಂಗ್ಲಾದೇಶದ ಹಿತಾಸಕ್ತಿಯನ್ನು ಕಡೆಗಣಿಸಿದ ಇಂತವರ ಬಾಯಲ್ಲಿ ಭಾರತ ವಿರೋಧಿ ಪದಗಳು ಶೋಭಿಸುವುದಿಲ್ಲ ಎಂದು ಟೀಕಿಸಿದ್ದರು.

ತನ್ನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರುತ್ತಿರುವ ಝಿಯಾರಿಗೆ ನ್ಯಾಯಾಲಯದಲ್ಲಿ ಹಾಜರಾಗಲೂ ಧೈರ್ಯ ಇಲ್ಲ ಎಂದು ಹಸೀನಾ ಟೀಕಿಸಿದ್ದರು. ಚಾರಿಟೇಬಲ್ ಟ್ರಸ್ಟ್‌ನ ಹೆಸರಲ್ಲಿ ಝಿಯಾ 4 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

71 ವರ್ಷದ ಝಿಯಾ ಮತ್ತು 69 ವರ್ಷದ ಹಸೀನಾರ ಮಧ್ಯೆ ತೀವ್ರ ರಾಜಕೀಯ ವೈಷಮ್ಯವಿದ್ದು ‘ಕಾದಾಡುವ ಬೇಗಂಗಳು’ ಎಂದೇ ಇವರು ಹೆಸರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ