ಸೋಮವಾರ, ಏಪ್ರಿಲ್ 10, 2017

ಈಜಿಪ್ಟ್ ನ ಎರಡು ಚರ್ಚಗಳಲ್ಲಿ ಸ್ಫೋಟ

ಈಜಿಪ್ಟ್‌ನ ಎರಡು ಚರ್ಚ್‌ಗಳಲ್ಲಿ ಸ್ಫೋಟ: 45 ಸಾವು

ಕೈರೊ: ಈಜಿಪ್ಟ್‌ನ ಟಂಟಾ ಮತ್ತು ಅಲೆಕ್ಸಾಂಡ್ರಿಯಾ ಪಟ್ಟಣದ ಚರ್ಚ್‌ಗಳಲ್ಲಿ ಐಎಸ್‌ ಉಗ್ರರು ಭಾನುವಾರ ನಡೆಸಿದ  ಬಾಂಬ್‌ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟು, 119ಕ್ಕೂ  ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
  ‘ಕೈರೊದಿಂದ 120 ಕಿ.ಮೀ. ದೂರದಲ್ಲಿರುವ ಟಂಟಾ ಪಟ್ಟಣದ ಮಾರ್‌ ಗರ್ಜೆಸ್‌ ಚರ್ಚ್‌ನ ಒಳಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, 27ಮಂದಿ ಮೃತಪಟ್ಟು 78 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಇದಾದ ಒಂದು ಗಂಟೆಯ ಬಳಿಕ  ಅಲೆಕ್ಸಾಂಡ್ರಿಯಾದ ಮಾನ್‌ಶಿಯಾ ಜಿಲ್ಲೆಯ ಸೇಂಟ್‌ ಮಾರ್ಕ್ಸ್‌ ಚರ್ಚ್‌ ಬಳಿ ಇನ್ನೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.   ‘ಆತ್ಮಾಹುತಿ ದಾಳಿಕೋರನೊಬ್ಬ ಸೇಂಟ್‌ ಮಾರ್ಕ್ಸ್‌  ಚರ್ಚ್‌ನ ಒಳಗೆ ನುಗ್ಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು  ತಡೆದಾಗ ಬಾಂಬ್‌ ಸ್ಫೋಟಿಸಿಕೊಂಡಿದ್ದಾನೆ’ ಎಂದು ಪೋಲಿಸರು ತಿಳಿಸಿದ್ದಾರೆ.   ಪಾಮ್‌ ಸಂಡೆ (ಗರಿಗಳ ಭಾನುವಾರ)  ಆಚರಣೆ ಅಂಗವಾಗಿ ಪ್ರಾರ್ಥನೆ ಸಲ್ಲಿಸಲು ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ  ಚರ್ಚ್‌ಗಳಿಗೆ ಬಂದಿದ್ದರು. ಅಲೆಕ್ಸಾಂಡ್ರಿಯಾದ ಪೋಪ್‌ ಎರಡನೇ ಟವಾಡ್ರೋಸ್‌  ನೇತೃತ್ವದಲ್ಲಿ ಪಾಮ್‌ ಸಂಡೆ ಮೆರವಣಿಗೆ ನಡೆಯುವ ಕೆಲವೇ ಸಮಯದ ಮೊದಲು ಎರಡನೇ ಸ್ಫೋಟ ನಡೆದಿದೆ.   ಬಾಂಬ್‌ ಸ್ಫೋಟದಲ್ಲಿ ಟಂಟಾ ನ್ಯಾಯಾಲಯದ ಮುಖ್ಯಸ್ಥ ಸಾಮ್ಯುವೆಲ್ ಜಾರ್ಜ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಾರ್‌ ಗರ್ಜೆಸ್‌ ಚರ್ಚ್‌ನಲ್ಲಿ ಪ್ರಾರ್ಥನೆ ವೇಳೆ ವ್ಯಕ್ತಿಯೊಬ್ಬ  ಒಳಭಾಗಕ್ಕೆ ಸ್ಫೋಟಕ  ಕೊಂಡೊಯ್ದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು  ಹೇಳಿದ್ದಾರೆ.
  ಏ. 28,29 ರಂದು ಪೋಪ್‌ ಫ್ರಾನ್ಸಿಸ್‌ ಅವರ ಈಜಿಪ್ಟ್‌ ಭೇಟಿ ನಿಗದಿಯಾಗಿದ್ದು,  ಇದಕ್ಕೂ ಮೊದಲು ಈ ದಾಳಿ ನಡೆದಿದೆ. ‘ಟಂಟಾ ಪಟ್ಟಣದ ಮಸೀದಿಯೊಂದರ ಬಳಿ ಇಟ್ಟಿದ್ದ ಎರಡು ಸ್ಫೋಟಕಗಳನ್ನು ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ