ಭಾನುವಾರ, ಏಪ್ರಿಲ್ 30, 2017

ಕೆಂಪು ದೀಪ ನಿಷೇಧದ ಸಂಸ್ಕೃತಿ

ವಿಐಪಿ ಸಂಸ್ಕೃತಿಯ ಮನೋಸ್ಥಿತಿಯ ಅಂತ್ಯ ಕೆಂಪುದೀಪ ನಿಷೇಧದ ಉದ್ದೇಶ:ಪ್ರಧಾನಿ

ಹೊಸದಿಲ್ಲಿ,ಎ.30: ಕೆಲವು ಜನರ ಮನಸ್ಸಿನಲ್ಲಿರುವ ವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕುವುದು ವಾಹನಗಳ ಮೇಲೆ ಕೆಂಪುದೀಪಗಳನ್ನು ನಿಷೇಧಿಸಿರುವ ನಿರ್ಧಾರದ ಹಿಂದಿನ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮಾಸಿಕ ‘ಮನ್ ಕಿ ಬಾತ್ ’ರೇಡಿಯೊ ಕಾರ್ಯಕ್ರಮದಲ್ಲಿ ಹೇಳಿದರು. ವಿಐಪಿಯ ಬದಲು ‘ಇಪಿಐ ಅಥವಾ ಎವ್ವೆರಿ ಪರ್ಸನ್ ಈಸ್ ಇಂಪಾರ್ಟಂಟ್ (ಪ್ರತಿಯೊಬ್ಬನೂ ಮುಖ್ಯ ವ್ಯಕ್ತಿ)’ ಎಂಬ ಪರಿಕಲ್ಪನೆ ಮೂಡಬೇಕಿದೆ ಎಂದರು. ಕೆಂಪುದೀಪ ನಿಷೇಧ ಮೇ 1ರಿಂದ ಜಾರಿಗೆ ಬರಲಿದೆ.

ದೇಶದಲ್ಲಿಯ ಎಲ್ಲ 125 ಕೋಟಿ ಜನರೂ ಸಮಾನ ವೌಲ್ಯ ಮತ್ತು ಮಹತ್ವವನ್ನು ಹೊಂದಿದ್ದಾರೆ ಎಂದು ಒತ್ತಿ ಹೇಳಿದ ಅವರು, ಜನರಿಗೆ ವಿಐಪಿ ಸಂಸ್ಕೃತಿಯ ಬಗ್ಗೆ ಇಷ್ಟೊಂದು ತಾತ್ಸಾರವಿದೆ ಎನ್ನುವುದು ಕೆಂಪುದೀಪ ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಮುನ್ನ ತನಗೆ ಗೊತ್ತಿರಲಿಲ್ಲ ಎಂದರು.

ಕೆಂಪುದೀಪವು ವಿಐಪಿ ಸಂಸ್ಕೃತಿಯ ಸಂಕೇತವಾಗಿದೆ ಮತ್ತು ಅದನ್ನು ಬಳಸುವವರ ಮನಸ್ಸಿನಲ್ಲಿ ತಾವು ಇತರರಿಗಿಂತ ಶ್ರೇಷ್ಠರು ಎನ್ನುವ ಮಿಥ್ಯೆ ಬೇರೂರಿಬಿಟ್ಟಿದೆ ಎಂದ ಅವರು, ಕೆಂಪುದೀಪ ಈಗ ಕಣ್ಮರೆಯಾಗುತ್ತಿದ್ದರೂ ಇದರಿಂದಾಗಿ ಕೆಲವರ ಮನಸ್ಸಿನಲ್ಲಿ ಬೇರೂರಿರುವ ವಿಐಪಿ ಸಂಸ್ಕೃತಿಯೂ ತೊಲಗಿದೆ ಎಂದು ಹೇಳುವಂತಿಲ್ಲ ಎಂದರು.

ಕೆಂಪುದೀಪ ನಿಷೇಧವು ಆಡಳಿತಾತ್ಮಕ ನಿರ್ಧಾರವಾಗಿದೆ ಎಂದ ಮೋದಿ, ಆದರೆ ಮನಸ್ಸುಗಳಲ್ಲಿ ಬೇರೂರಿರುವ ವಿಐಪಿ ಸಂಸ್ಕೃತಿಯನ್ನೂ ನಿರ್ಮೂಲಿಸುವ ಪ್ರಯತ್ನಗಳೂ ನಡೆಯಬೇಕಿವೆ ಎಂದರು. ನಾವೆಲ್ಲರೂ ಒಂದಾಗಿ ಪ್ರಯತ್ನಿಸಿದರೆ ಇದು ಅಸಾಧ್ಯವೇನಲ್ಲ ಎಂದು ಅವರು ನುಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ