ಭಾನುವಾರ, ಏಪ್ರಿಲ್ 30, 2017

ಅಮೆರಿಕವನ್ನು ಧಿಕ್ಕರಿಸಿ ಉ.ಕೊರಿಯ ಕ್ಷಿಪಣಿ ಪ್ರಯೋಗ

ಅಮೆರಿಕವನ್ನು ಧಿಕ್ಕರಿಸಿ ಉ. ಕೊರಿಯ ಕ್ಷಿಪಣಿ ಪ್ರಯೋಗ

ಸಿಯೋಲ್, ಎ. 29: ಉತ್ತರ ಕೊರಿಯ ಶನಿವಾರ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೊಂದರ ಪರೀಕ್ಷಾ ಹಾರಾಟ ನಡೆಸಿದೆಯಾದರೂ, ಅದು ವಿಫಲಗೊಂಡಿದೆ ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕ ಹೇಳಿವೆ.

ಇದು ಈ ತಿಂಗಳೊಂದರಲ್ಲೇ ಉತ್ತರ ಕೊರಿಯ ನಡೆಸಿದ ಮೂರನೆ ವಿಫಲ ಕ್ಷಿಪಣಿ ಪ್ರಾಯೋಗಿಕ ಹಾರಾಟವಾಗಿದೆ. ಆದರೆ, ಸಮೀಪದ ಸಮುದ್ರದಲ್ಲೇ ಅಮೆರಿಕದ ವಿಮಾನವಾಹಕ ಯುದ್ಧ ನೌಕೆಗಳು ಯುದ್ಧಾಭ್ಯಾಸ ನಡೆಸುತ್ತಿರುವ ಸಮಯದಲ್ಲೇ ನಡೆಸಲಾದ ಪ್ರಾಯೋಗಿಕ ಪರೀಕ್ಷೆಯನ್ನು, ಅಮೆರಿಕಕ್ಕೆ ಉತ್ತರ ಕೊರಿಯದ ನೀಡಿದ ಸ್ಪಷ್ಟ ಧಿಕ್ಕಾರದ ಸಂದೇಶ ಎಂಬುದಾಗಿ ಪರಿಗಣಿಸಲಾಗಿದೆ.

ಉತ್ತರ ಕೊರಿಯವು ತನ್ನ ಪ್ರಕ್ಷೇಪಕ ಕ್ಷಿಪಣಿಗಳಲ್ಲಿ ಪರಮಾಣು ಶಸ್ತ್ರಗಳನ್ನು ಅಳವಡಿಸುವ ಸಾಧ್ಯತೆಯಿರುವುದರಿಂದ, ಆ ದೇಶ ನಡೆಸುವ ಕ್ಷಿಪಣಿ ಪರೀಕ್ಷೆಗಳನ್ನು ವಿಶ್ವಸಂಸ್ಥೆ ನಿಷೇಧಿಸಿದೆ.
ಉತ್ತರ ಕೊರಿಯದ ಪರಮಾಣು ಬೆದರಿಕೆಯನ್ನು ಉಗ್ರ ನಿಲುವಿನ ಮೂಲಕ ಎದುರಿಸುವ ಬದಲು, ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕವಾಗಿ ಎದುರಿಸಲು ಅಮೆರಿಕ ಮನಸ್ಸು ಮಾಡಿದ ಬೆನ್ನಿಗೇ ನೂತನ ಪರೀಕ್ಷೆ ನಡೆದಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಉತ್ತರ ಕೊರಿಯ ಇಂದು ಕ್ಷಿಪಣಿಯೊಂದನ್ನು ಪರೀಕ್ಷೆ ನಡೆಸುವ ಮೂಲಕ ಚೀನಾ ಹಾಗೂ ಅದರ ಅತ್ಯಂತ ಗೌರವಾನ್ವಿತ ಅಧ್ಯಕ್ಷರ ದ ಆಶಯಗಳಿಗೆ ಚ್ಯುತಿ ತಂದಿದೆ. ಅದು ಸರಿಯಲ್ಲ!’’ ಎಂದು ಟ್ವೀಟ್ ಮಾಡಿದ್ದಾರೆ.

ಅಟ್ಲಾಂಟಕ್ಕೆ ನೀಡಿದ ಒಂದು ದಿನದ ಭೇಟಿಯ ಬಳಿಕ ಶ್ವೇತಭವನಕ್ಕೆ ಮರಳಿದ ಅವರು, ಕ್ಷಿಪಣಿ ಹಾರಾಟಕ್ಕೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

ಉತ್ತರ ಕೊರಿಯದ ಕ್ಷಿಪಣಿ ಹಾರಾಟದ ಹೊತ್ತುಗಾರಿಕೆ ಮಹತ್ವ ಪಡೆದುಕೊಂಡಿದೆ. ಕೇವಲ ಗಂಟೆಗಳ ಮೊದಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ಯಾಂಗ್‌ಯಾಂಗ್‌ನ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಬಗ್ಗೆ ಸಚಿವ ಮಟ್ಟದ ಸಭೆ ನಡೆದಿತ್ತು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಅಧ್ಯಕ್ಷತೆ ವಹಿಸಿದ ಸಭೆಯನ್ನು ಉತ್ತರ ಕೊರಿಯ ಅಧಿಕಾರಿಗಳು ಬಹಿಷ್ಕರಿಸಿದ್ದರು.

71 ಕಿ.ಮೀ. ಎತ್ತರ ತಲುಪಿದ ಬಳಿಕ ಪತನಗೊಂಡಿತು

ಕ್ಷಿಪಣಿಯು ಹಲವು ನಿಮಿಷಗಳ ಕಾಲ ಹಾರಿತು ಹಾಗೂ 71 ಕಿಲೋಮೀಟರ್‌ನಷ್ಟು ಗರಿಷ್ಟ ಎತ್ತರವನ್ನು ತಲುಪಿ ಪತನಗೊಂಡಿತು ಎಂದು ದಕ್ಷಿಣ ಕೊರಿಯದ ಸೇನಾ ಮುಖ್ಯಸ್ಥ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆದರೆ, ಕ್ಷಿಪಣಿ ಎಷ್ಟು ದೂರ ಹಾರಿತು ಎಂಬ ಕುರಿತ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ, ಅದು ಮಧ್ಯಮ ವ್ಯಾಪ್ತಿಯ ಕೆಎನ್-17 ಪ್ರಕ್ಷೇಪಕ ಕ್ಷಿಪಣಿಯಾಗಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ