ಭಾನುವಾರ, ಏಪ್ರಿಲ್ 9, 2017

ಸುಷ್ಮಾ ಸ್ವರಾಜ್ ಗೆ ರಾಷ್ಟ್ರಪತಿ ಪಟ್ಟ...?

ಸುಷ್ಮಾ ಸ್ವರಾಜ್‍ಗೆ ರಾಷ್ಟ್ರಪತಿ ಪಟ್ಟ..?

ನವದೆಹಲಿ, ಏ.7-ತಮ್ಮ ಕಾರ್ಯವೈಖರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ನಂಬರ್ ಒನ್ ಸಚಿವೆ ಎಂದು ಮನ್ನಣೆ ಪಡೆದಿರುವ ಸುಷ್ಮಾ ಸ್ವರಾಜ್ ಅವರಿಗೆ ರಾಷ್ಟ್ರಪತಿ ಹುದ್ದೆ ಲಭಿಸುವ ಸಾಧ್ಯತೆ ಇಂದು ಎಂದು ಉನ್ನತ ಮೂಲಗಳು ಹೇಳಿವೆ. ನೂತನ ರಾಷ್ಟ್ರಪತಿಯಾಗುವವರ ಪಟ್ಟಿಯಲ್ಲೂ ವಿದೇಶಾಂಗ ವ್ಯವಹಾರಗಳ ಸಚಿವರು ಮುಂದಿದ್ದಾರೆ. ಮಹಿಳೆಯೊಬ್ಬರಿಗೆ ರಾಷ್ಟ್ರಪತಿ ಸ್ಥಾನ ನೀಡಬೇಕೆಂಬ ತೀರ್ಮಾನವಾದರೆ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಥಮ ಆದ್ಯತೆಯ ಅಭ್ಯರ್ಥಿ ಸುಷ್ಮಾ ಎಂದೂ ಹೇಳಲಾಗುತ್ತಿದೆ.

ಇನ್ನೊಂದು ಮೂಲದ ಪ್ರಕಾರ ಸುಷ್ಮಾಗೆ ತಮಿಳುನಾಡು ರಾಜ್ಯಪಾಲರ ಹುದ್ದೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬೆಳವಣಿಗೆಗೆ ಕಾರಣವೂ ಇದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಳಿಕ ಮೋದಿ ತಮ್ಮ ಸಂಪುಟಕ್ಕೆ ಸರ್ಜರಿ ಮಾಡಲು ಹೊರಟಿದ್ದಾರೆ.
ಅನಾರೋಗ್ಯದಿಂದಾಗಿ (ಮೂತ್ರಪಿಂಡ ವೈಫಲ್ಯದಿಂದ ಚೇತರಿಸಿಕೊಳ್ಳುತ್ತಿರುವ) ಸುಷ್ಮಾ ಅವರಿಗೆ ವಿದೇಶಾಂಗ ವ್ಯವಹಾರದಂಥ ಮಹತ್ವದ ಹುದ್ದೆಯಲ್ಲಿ ಮುಂದುವರಿಯಲು ಕಷ್ಟವಾಗಬಹುದು ಎಂಬ ಮಾತುಗಳಿವೆ. ಹೀಗಾಗಿ ಅವರನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರ ಹುದ್ದೆಗೆ ನಿಯೋಜಿಸುವ ಲೆಕ್ಕಾಚಾರ ಮೋದಿಯವರದ್ದು.

ಇದೇ ವೇಳೆ ಸುಷ್ಮಾ ಅವರ ಜಾಗಕ್ಕೆ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಬರಲಿದ್ದಾರೆ. ಓಂ ಮಾಥುರ್ ರಾಜಸ್ತಾನದ ನೂತನ ಸಿಎಂ ಆಗಲಿದ್ದಾರೆ. ಈ ಬೆಳವಣಿಗೆಯಾದಲ್ಲಿ, ಗೋವಾ ಮುಖ್ಯಮಂತ್ರಿ ಹುದ್ದೆಗಾಗಿ ಸಂಪುಟದ ಒಬ್ಬ ಪ್ರಮುಖ ಸಚಿವರನ್ನು (ಮನೋಹರ್ ಪರಿಕರ್) ಕಳೆದಕೊಂಡ ಮೋದಿ ಮಂತ್ರಿಮಂಡಲದ ಇನ್ನೊಂದು ಮಹತ್ವದ ಹುದ್ದೆಗೆ ಪಕ್ಷದ ಪ್ರಭಾವಿ ನಾಯಕಿಯೊಬ್ಬರು ಮುಖ್ಯಮಂತ್ರಿ ಪದವಿ ಬಿಟ್ಟು ಸಚಿವರಾಗಲಿದ್ದಾರೆ. ಹೀಗಾಗಿ ವಸುಂಧರಾ ಅವರನ್ನು ಕೇಂದ್ರ ರಾಜಕಾರಣಕ್ಕೆ ವರ್ಗಾವಣೆ ಮಾಡಿ ಪಕ್ಷದಲ್ಲಿ ಎರಡನೇ ತಲೆಮಾರಿನ ನಾಯಕತ್ವ ರೂಪಿಸುವುದು ನರೇಂದ್ರ ಮೋದಿಯವರ ಗುರಿಯಾಗಿದೆ.

ರಾಷ್ಟ್ರಪತಿ ಹುದ್ದೆಗೆ ಸುಷ್ಮಾರನ್ನು ಕೂರಿಸಲು ಸಾಧ್ಯವಾಗದಿದ್ದರೆ ಅವರನ್ನು ತಮಿಳುನಾಡು ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಮಹಾರಾಷ್ಟ್ರದ ರಾಜ್ಯಪಾಲ್ಯರಾಗಿರುವ ಸಿ. ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರೂ ಆಗಿದ್ದಾರೆ. ಹೀಗಾಗಿ ಸುಷ್ಮಾ ಅವರನ್ನು ತಮಿಳುನಾಡು ಗೌರ್ನರ್ ಆಗಿ ನೇಮಕ ಮಾಡುವ ಸಾಧ್ಯತೆಯೂ ಇನ್ನೊಂದು ಪರ್ಯಾಯ ಹಾದಿಯಾಗಿದೆ.  ಗೋವಾ ಮುಖ್ಯಮಂತ್ರಿಯಾಗಲು ರಕ್ಷಣಾ ಸಚಿವರ ಹುದ್ದೆಗೆ ಮನೋಹರ್ ರಾಜೀನಾಮೆ ನೀಡಿದ ಬಳಿಕ ಅದರ ಹೆಚ್ಚುವರಿ ಹೊಣೆಗಾರಿಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮೇಲಿದೆ. ಈ ಎರಡೂ ಹುದ್ದೆಗಳನ್ನು ನಿರ್ವಹಿಸುವುದು ಜೇಟ್ಲಿ ಅವರಿಗೆ ತ್ರಾಸದಾಯಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಗೆ ಜೈಟ್ಲಿ ಅವರನ್ನು ಸೀಮಿತಗೊಳಿಸಿ, ಕೇಂದ್ರ ವಿದ್ಯುತ್ ಖಾತೆ ಮಂತ್ರಿ ಪಿಯೂಷ್ ಗೋಯೆಲ್‍ಗೆ ಮುಂಬಡ್ತಿ ನೀಡಿ ವಿತ್ತ ಖಾತೆ ವಹಿಸುವ ಸಾಧ್ಯತೆಯಿದೆ. ಇದೇ ವೇಳೆ ಕೆಲವು ಮಹತ್ವದ ಬದಲಾವಣೆಗಳಿಗೂ ಮೋದಿ ಕೈಹಾಕಲಿದ್ದಾರೆ ಎಂದು ಹೇಳಲಾಗಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಹುದ್ದೆಯನ್ನು ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರಿಗೆ ಸಂಪುಟದಲ್ಲಿ ಬಡ್ತಿ ನೀಡಲು ಮೋದಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ 76 ವರ್ಷವಾಗಿರುವ ಪಕ್ಷದ ಹಿರಿಯ ನಾಯಕ ಕಲ್‍ರಾಜ್ ಮಿಶ್ರಾ ಅವರು ಸಂಪುಟದಿಂದ ನಿರ್ಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ