ಶುಕ್ರವಾರ, ಏಪ್ರಿಲ್ 7, 2017

ಕರ್ನಾಟಕ ರಾಜ್ಯದಲ್ಲಿ ಸವಿರುಚಿ ಕ್ಯಾಂಟೀನ್

ರಾಜ್ಯದಲ್ಲಿ ಸವಿರುಚಿ ಕ್ಯಾಂಟೀನ್‌

ಕರ್ನಾಟಕವನ್ನು 'ಹಸಿವು ಮುಕ್ತ' ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಬಡಕುಟುಂಬಗಳಿಗೆ ಉಚಿತ ಅಕ್ಕಿ, ಗೋದಿ ಹಾಗೂ ರಿಯಾಯಿತಿ ದರದಲ್ಲಿ ಸಕ್ಕರೆ, ಉಪ್ಪು ಹಾಗೂ ತಾಳೆ ನೀಡುವ 'ಅನ್ನಭಾಗ್ಯ' ಯೋಜನೆ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿನ 'ಅಮ್ಮಾ ಕ್ಯಾಂಟೀನ್‌' ಮಾದರಿಯಲ್ಲಿ ರಾಜ್ಯದ ಜನತೆಗೆ 'ಸವಿರುಚಿ ಕ್ಯಾಂಟೀನ್‌' ಹಾಗೂ ಬೆಂಗಳೂರಿನ ನಾಗರಿಕರಿಗೆ 'ನಮ್ಮ ಕ್ಯಾಂಟಿನ್‌' ಭಾಗ್ಯ ಕರುಣಿಸಿದ್ದಾರೆ.

'ಸವಿರುಚಿ' ಹೆಸರಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಲು ಉದ್ದೇಶಿಸಿರುವ ಸರ್ಕಾರ ಅವುಗಳನ್ನು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ನಡೆಸಲು ತೀರ್ಮಾನಿಸಿದೆ. ಈ ಸವಿರುಚಿ ಕ್ಯಾಂಟೀನ್‌ಗಳಲ್ಲಿ ಆಹಾರ ಪದಾರ್ಥಗಳು ಕಡಿಮೆ ಬೆಲೆಯಲ್ಲಿ ಸಿಗಲಿವೆ.
ಅದೇ ರೀತಿ ಹಸಿವುಮುಕ್ತ ಬೆಂಗಳೂರಿಗಾಗಿ ಸರ್ಕಾರ ನಗರದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಊಟ ಮತ್ತು ಉಪಹಾರ ನೀಡಲು 'ನಮ್ಮ ಕ್ಯಾಂಟೀನ್‌' ಯೋಜನೆ ಘೋಷಿಸಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‌ಗಳಲ್ಲಿ ಜನಸಾಮಾನ್ಯರಿಗೆ ನಮ್ಮ ಕ್ಯಾಂಟೀನ್‌ ಮೂಲಕ ಕಡಿಮೆ ದರದಲ್ಲಿ ಆಹಾರ ಪದಾರ್ಥಗಳು ದೊರೆಯಲಿದ್ದು, ಬೆಳಗಿನ ಉಪಹಾರಕ್ಕೆ 5 ರೂ., ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಲಾ 10 ರೂ. ನಿಗದಿಪಡಿಸಲಾಗುತ್ತದೆ. ಅದಕ್ಕಾಗಿ 100 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗ ಉಚಿತ ಅಕ್ಕಿ ತೆಗೆದುಕೊಂಡು ಜನರು ಸೋಮಾರಿಗಳಾಗುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಪಡಿತರ ಕಾಳಸಂತೆಗೆ ಮಾರಾಟ ಆಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಇದರ ಜೊತೆಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾಗ ಜಯಲಲಿತಾ ಜಾರಿಗೆ ತಂದಿರುವ 'ಅಮ್ಮಾ ಕ್ಯಾಂಟೀನ್‌' ಮಾದರಿಯಲ್ಲಿ ರಾಜ್ಯದಲ್ಲೂ ಬಡ-ಮಧ್ಯಮ ಹಾಗೂ ಶ್ರಮಿಕ ವರ್ಗಕ್ಕೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಊಟ, ತಿಂಡಿ ಸಿಗುವಂತೆ ಕ್ಯಾಂಟೀನ್‌ ಪ್ರಾರಂಭಿಸಬೇಕು ಎಂಬ ಬೇಡಿಕೆಗಳು ಬಂದಿದ್ದವು.

ತಮಿಳುನಾಡಿನಲ್ಲಿ ಜಯಲಲಿತಾ ಅವರ 'ಅಮ್ಮಾ ಕ್ಯಾಂಟೀನ್‌' ಮಾದರಿಯಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ "ಅಪ್ಪ ಕ್ಯಾಂಟೀನ್‌' ಬರಲಿ ಎಂಬ ಹಾಸ್ಯಮಯ ಒತ್ತಾಯವನ್ನೂ ಕೆಲವರು ಇಟ್ಟಿದ್ದರು. ಅಂತಿಮವಾಗಿ ರಾಜ್ಯದ ಜನತೆಗೆ 'ಸವಿರುಚಿ' ಹಾಗೂ ಬೆಂಗಳೂರಿನ ನಾಗರಿಕರಿಗೆ 'ನಮ್ಮ ಕ್ಯಾಂಟೀನ್‌' ನೀಡುವ ಮೂಲಕ ಸಿದ್ದರಾಮಯ್ಯ  ಕ್ಯಾಂಟೀನ್‌ ಭಾಗ್ಯದ ಬೇಡಿಕೆಯನ್ನು ಈಡೇರಿಸಿದ್ದಾರೆ.

ದೇವದಾಸಿ ಮುಕ್ತರಿಗೆ 25 ಸಾವಿರ ರೂ.
ದೇವದಾಸಿ ಪದ್ಧತಿಯಿಂದ ಹೊರಬಂದವರಿಗೆ, ಲೈಂಗಿಕ ಕಾರ್ಯಕರ್ತರು ಮತ್ತು ಲಿಂಗ ಅಲ್ಪಸಂಖ್ಯಾತರಿಗೆ ನೀಡಲಾಗುವ 20 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಪರಿಷ್ಕರಿಸಿ ತಲಾ 25 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ 25 ಸಾವಿರ ರೂ. ಸಾಲವನ್ನು ನೀಡಲಾಗುವುದು. ಧನಶ್ರೀ ಯೋಜನೆಯಡಿ ಇದೇ ಮಾದರಿಯನ್ನು ಮುಂದುವರಿಸಲಾಗುವುದು.

ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ ಕ್ಷೇಮ ಕೇಂದ್ರ ಆಟಿಸಂ, ಸೆರಬ್ರಲ್‌ ಪಾಲ್ಸಿ, ಬುದ್ಧಿಮಾಂದ್ಯತೆ ಮತ್ತು ಬಹುವಿಧದ ವೈಕಲ್ಯ ಹೊಂದಿರುವ ಮಕ್ಕಳಿಗಾಗಿ 4 ವಿಭಾಗಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ.  ಇದರ ಜತೆಗೆ ಶಿಶು ಕೇಂದ್ರಿತ ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಶ್ರವಣ ದೋಷವುಳ್ಳ ಮತ್ತು ಅಂಧರ ಮತ್ತು ಬುದ್ಧಿಮಾಂದ್ಯ ವಿಶೇಷ ಶಾಲೆಗಳ ಪ್ರತಿ ಮಗುವಿಗೆ ನೀಡುವ ಮಾಸಿಕ ಅನುದಾನವನ್ನು 1200 ರೂ.ಗೆ ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ