ಗುರುವಾರ, ಏಪ್ರಿಲ್ 6, 2017

ಬಿಎಸ್-||| ನಿಷೇದದಿಂದ ವಾಣಿಜ್ಯ ವಾಹ‌ನ ಉತ್ಪಾದನೆ

ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್

ಮುಂಬೈ: ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧ ಆದೇಶದ ನಂತರ ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ.  ಸಂಶೋಧನಾ ಸಂಸ್ಥೆ ಕ್ರಿಸಿಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಿಯಾಯಿತಿ ದರದಲ್ಲಿ ಈಗಾಗಲೇ ವಾಹನಗಳನ್ನು ಮಾರಟ ಮಾಡಿರುವುದರಿಂದ 1,200 ಕೋಟಿ ನಷ್ಟವಾಗಿದೆ. ಇನ್ನು ಮಾರಾಟವಾಗದೇ ಉಳಿದಿರುವ ವಾಹನಗಳಿಂದ  1,300 ಕೋಟಿ ರೂಪಾಯಿ ನಷ್ಟ ಉಂತಾಗಲಿದ್ದು, ಒಟ್ಟು 2,500 ಕೋಟಿ ರೂ ನಷ್ಟವಾಗಲಿದೆ ಎಂದು ಕ್ರಿಸಿಲ್ ಅಂದಾಜಿಸಿದ್ದು ವಾಹನ ತಯಾರಿಕಾ ಸಂಸ್ಥೆಗಳ ಒಟ್ಟಾರೆ ಲಾಭದಲ್ಲಿ ಶೇ.2.5 ರಷ್ಟು ನಷ್ಟವಾಗಲಿದೆ.  ಮಾರಾಟವಾಗದೇ ಉಳಿದ ವಾಹನಗಳನ್ನು ಡೀಲರ್ ಗಳಿಂದ ವಾಪಸ್ ತಂದು ನಂತರ ಅದಕ್ಕೊಂದು ವ್ಯವಸ್ಥೆ ಮಾಡಬೇಕಿರುವುದರಿಂದ  2017-18 ನೇ ಸಾಲಿನ ಆರ್ಥಿಕ ವರ್ಶದ ಮೇಲೆಯೂ ಬಿಎಸ್-III ನಿಷೇಧ ಹಾಗೂ ರಿಯಾಯಿತಿ ದರದಲ್ಲಿ ವಾಹನಗಳ ಮಾರಾಟ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.
ಈಗಷ್ಟೇ ಮುಕ್ತಾಯಗೊಂಡಿರುವ 2016-17 ಆರ್ಥಿಕ ವರ್ಷಕ್ಕೆ ಬಿಎಸ್-III ನಿಷೇಧದಿಂದ ಇಬಿಐಟಿಡಿಎ ಮಾರ್ಜಿನ್ 100 ಬಿಪಿಎಸ್ ಕಡಿಮೆಯಾಗಲಿದೆ ಎಂದು ಕ್ರಿಸಿಲ್ ಹೇಳಿದೆ. 

ರೋಹಿಂಗ್ಯಾ (ಬರ್ಮಾ ಮೂಲದ ಮುಸ್ಲಿಂರು) ಗಡಿಪಾರಿಗೆ ಚಿಂತನೆ

ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರದ ಚಿಂತನೆ

ನವದೆಹಲಿ, ಏಪ್ರಿಲ್ 3: ಕಾನೂನು ಬಾಹಿರವಾಗಿ ಭಾರತದೊಳಕ್ಕೆ ನುಸುಳಿ, ಇಲ್ಲೇ ನೆಲೆಸಿರುವ ಮಿಯಾಮ್ನಾರ್ (ಬರ್ಮಾ) ಮೂಲದ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರದೂಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈವರೆಗೆ, ಅವರು ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಬಗ್ಗೆ ಮಾಹಿತಿ ಇಲ್ಲವಾದರೂ, ನಿರಾಶ್ರಿತರಂತೆ ಆಗಮಿಸಿರುವ ಅವರನ್ನು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಸಂಘಟನೆಗಳು, ವ್ಯಕ್ತಿಗಳು ಹಣದ ಆಮಿಷ ನೀಡಿ ಉಪಯೋಗಿಸಿಕೊಳ್ಳುವ ಸಾಧ್ಯತೆಗಳಿವೆ.

ಹಾಗಾದಲ್ಲಿ, ಈ ನಿರಾಶ್ರಿತರ ಗುಂಪುಗಳು ಸಂಘಟಿತ ಸ್ವರೂಪ ಪಡೆದುಕೊಂಡು ಭವಿಷ್ಯದಲ್ಲಿ ದೇಶಕ್ಕೆ ಮಾರಕವಾಗಬಹುದು ಎಂಬ ಬಗ್ಗೆ ಅನುಮಾನಗಳಿರುವುದರಿಂದ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ, ಭಾರತದಲ್ಲಿ ಬೀಡುಬಿಟ್ಟಿರುವ ಈ ನಿರಾಶ್ರಿತರು ಮೂಲತಃ ಬರ್ಮಾದ ರೋಹಿಂಗ್ಯಾ ಪ್ರಾಂತ್ಯದವರು. ಭಾರತ ಹಾಗೂ ಮಿಯಾಮ್ನಾರ್- ಬಾಂಗ್ಲಾ ದೇಶ ಗಡಿಗಳ ಮೂಲಕ ಅಕ್ರಮವಾಗಿ ನುಸುಳಿಕೊಂಡು ಭಾರತದೊಳಗ್ಗೆ ಇವರು ಬಂದು ನೆಲೆಸಿದ್ದಾರೆ ಹಾಗೂ ನೆಲೆಸುತ್ತಲೇ ಇದ್ದಾರೆ.

ಈ ಮೊದಲು ಇವರನ್ನು ನಿರಾಶ್ರಿತರೆಂದು ಪರಿಗಣಿಸಿದ್ದ ಕೇಂದ್ರ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ, ಮಾನವ ಕಳ್ಳಸಾಗಣೆಗೆ ನೆರವಾಗುತ್ತಿರುವ ಬಗ್ಗೆ ಆರೋಪಗಳಿವೆ.

ಭಾರತದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲು ಸದಾ ಹಪಹಪಿಸುವ ಭಯೋತ್ಪಾದಕರು ಇಂಥ ನಿರಾಶ್ರಿತರಿಗೆ ಹಣ ಇನ್ನಿತರ ಸೌಲಭ್ಯಗಳ ಆಸೆ ತೋರಿಸಿ ಅವರನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲು ಆರಂಭಿಸಿದ್ದಾರೆಂದೂ ಹೇಳಲಾಗುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಂಡಿದೆ.

ಗಾಯಕನಾಗಿ ಹೊಸ ಇನಿಂಗ್ಸ್ ಪ್ರಾಂಭಿಸಿದ ಸಚಿನ್

ಗಾಯಕನಾಗಿ ಹೊಸ ಇನಿಂಗ್ಸ್‌ ಪ್ರಾರಂಭಿಸಿದ ಸಚಿನ್‌

ಮುಂಬೈ:  ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇನ್ನು ಮುಂದೆ ಗಾಯಕರೂ ಹೌದು. ತಮ್ಮ ಆಕರ್ಷಕ ಬ್ಯಾಟಿಂಗ್‌ ಮತ್ತು ದಾಖಲೆಗಳ ಮೂಲಕ  ಜನಪ್ರಿಯರಾದ ತೆಂಡೂಲ್ಕರ್‌, ಇದೇ ಮೊದಲ ಬಾರಿಗೆ ಹಾಡಿಗೆ ದನಿಯಾಗಿದ್ದಾರೆ.

ದೇಶದ ಮಹಾನ್ ಕ್ರಿಕೆಟ್‌ ತಾರೆಯರಿಗೆ ಅರ್ಪಿಸುವ ಸಲುವಾಗಿ ಸಿದ್ಧಪಡಿಸಿರುವ ಗೀತೆಯನ್ನು ತೆಂಡೂಲ್ಕರ್‌ ಹಾಡಿದ್ದಾರೆ. ಅವರ ಜತೆ ಗಾಯಕ ಸೋನು ನಿಗಂ ಕೂಡ ದನಿಗೂಡಿಸಿದ್ದಾರೆ.

‘ಸಚಿನ್ಸ್‌ ಕ್ರಿಕೆಟ್‌ವಾಲಿ ಬೀಟ್‌’ ಎಂಬ ಶೀರ್ಷಿಕೆಯ ಹಾಡಿಗೆ ಶಮೀರ್‌ ಟಂಡನ್‌  ಸ್ವರ ಸಂಯೋಜಿಸಿದ್ದಾರೆ. ಈ ಹಾಡನ್ನು ತೆಂಡೂಲ್ಕರ್‌ ಇತ್ತೀಚೆಗೆ ಆರಂಭಿಸಿದ ‘100 ಎಂಬಿ’ ಡಿಜಿಟಲ್‌ ವೇದಿಕೆಯ ಪ್ರಚಾರದ ಭಾಗವಾಗಿ ಸಿದ್ಧಪಡಿಸಲಾಗಿದೆ.

‘ಇದೇ ಮೊದಲ ಬಾರಿಗೆ  ನಾನು ಹಾಡುವುದನ್ನು ಜನ ನೋಡಲಿದ್ದಾರೆ. ನಾನು ಹಾಡುವುದನ್ನು ಅನಂದಿಸಿದಂತೆ ನನ್ನ ಎಲ್ಲ ಅಭಿಮಾನಿಗಳು ಕೇಳುವುದನ್ನೂ ಆನಂದಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ತೆಂಡೂಲ್ಕರ್‌ ಹೇಳಿದ್ದಾರೆ.

2011ರ ವಿಶ್ವಕಪ್‌ ಗೆದ್ದ ಆರನೇ ವಾರ್ಷಿಕೋತ್ಸವದ ದಿನವಾದ ಭಾನುವಾರ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಎಲ್ಲ ಆರು ವಿಶ್ವಕಪ್‌ಗಳಲ್ಲಿ ತಮ್ಮೊಂದಿಗೆ ಆಡಿದ ಪ್ರತಿ ಆಟಗಾರ ಹೆಸರನ್ನೂ ತೆಂಡೂಲ್ಕರ್‌ ಉಲ್ಲೇಖಿಸಿದರು.

ಬೆಂಗಳೂರಿನ "IISC" ಗೆ ಮೊದಲ ಸ್ಥಾನ

ಶಿಕ್ಷಣ ಸಂಸ್ಥೆಗಳ ರಾಂಕಿಂಗ್: ಐಐಎಸ್‌ಸಿಗೆ ಮೊದಲ ಸ್ಥಾನ

ಹೊಸದಿಲ್ಲಿ: ಕಳೆದ ತಿಂಗಳು "ಟೈಮ್ಸ್‌ ಹೈಯರ್‌ ಎಜುಕೇಶನ್‌' ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸೋಮವಾರ ಪ್ರಕಟಿಸಿದ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ರಾಂಕಿಂಗ್ನ ಎಲ್ಲ ವಿಭಾಗಗಳಲ್ಲಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ.

ನ್ಯಾಶನಲ್ಸ್‌ ಇನ್‌ಸ್ಟಿಟ್ಯೂಷನ್ಸ್‌ ರಾಂಕಿಂಗ್ ಫ್ರೆàಮ್‌ವರ್ಕ್‌ (ಎನ್‌ಐಆರ್‌ಎಫ್) ಸಿದ್ಧ ಪಡಿಸಿರುವ ಈ ರಾಂಕಿಂಗ್ ಪಟ್ಟಿಯಲ್ಲಿ ಏಳು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಕೂಡ ಟಾಪ್‌ 10ರಲ್ಲೇ ಸ್ಥಾನ ಪಡೆದುಕೊಂಡಿವೆ. ಟಾಪ್‌ 10ರ ಕಡೆಯ ಎರಡು ಸ್ಥಾನಗಳಲ್ಲಿ ಬನಾರಸ್‌ ಹಿಂದೂ ವಿವಿ (ಬಿಎಚ್‌ಯು) ಮತ್ತು ಜವಾಹರಲಾಲ್‌ ನೆಹರೂ ವಿವಿ (ಜೆಎನ್‌ಯು) ಇವೆ.

ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಈ ಕುರಿತು ಮಾಹಿತಿ ನೀಡಿದರು.
ಕಳೆದ ವರ್ಷ ಈ ಸಮಯದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌ ಮತ್ತು ಎಂಜಿನಿಯರಿಂಗ್‌ ಹಾಗೂ ಸಮಗ್ರ ರಾಂಕಿಂಗ್ ಬಿಡುಗಡೆಗೊಳಿಸಲಾಗಿತ್ತು. ಸಮಗ್ರ ಮತ್ತು ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ ಅಗ್ರಸ್ಥಾನ ಗಳಿಸಿ, ಈಗಲೂ ಆ ಸ್ಥಾನ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಉಗ್ರ ಅಫ‌jಲ್‌ ಗುರು ಪರ ಕಾರ್ಯಕ್ರಮದಿಂದ ವಿಶ್ವಾದ್ಯಂತ ಸುದ್ದಿಯಾಗಿದ್ದ ದಿಲ್ಲಿಯ ಜವಾಹರ್‌ಲಾಲ್‌ ನೆಹರೂ ವಿವಿ ಕಳೆದ ಬಾರಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಉತ್ತಮ ವಿವಿಗಳ ಪಟ್ಟಿಯಲ್ಲಿ 2ನೇ ಸ್ಥಾನಗಳಿಸಿದೆ.

ಉತ್ತಮ ರಾಂಕಿಂಗ್ಗೆ ಹೆಚ್ಚು ನಿಧಿ: ಉತ್ತಮ ರಾಂಕಿಂಗ್ಗೆ ಹೆಚ್ಚಿನ ಅನುದಾನ ಮತ್ತು ಸ್ವಾಯತ್ತತೆ ಸಿಗಲಿದೆ. ಇದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ ಮಾತು. ಪಟ್ಟಿ ಬಿಡುಗಡೆಗೊಳಿಸಿದ ಅನಂತರ ಮಾತನಾಡಿದ ಅವರು, ವಿವಿಗಳು ಮತ್ತು ಕಾಲೇಜುಗಳ ನಡುವೆ ಉತ್ತಮ ಸ್ಪರ್ಧೆ ಏರ್ಪಡಲಿ ಎಂಬ ಉದ್ದೇಶದಿಂದ ಈ ರಾಂಕಿಂಗ್ ಪ್ರಕಟಿಸಲಾಗಿದೆ. ಹೆಚ್ಚಿನ ಶ್ರೇಣಿ ಪಡೆದ ಸಂಸ್ಥೆಗಳಿಗೆ ಸರಕಾರದ ಹೆಚ್ಚುವರಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದ್ದಾರೆ.

ಐಐಎಸ್‌ಸಿ ವಿಶೇಷತೆ: ಬೆಂಗಳೂರಿನಲ್ಲಿರುವ ದೇಶದ ಪ್ರತಿಷ್ಠಿತ ಹಾಗೂ 108 ವರ್ಷಗಳ ಇತಿಹಾಸವುಳ್ಳ ಶಿಕ್ಷಣ ಸಂಸ್ಥೆ ಐಐಎಸ್‌ಸಿ. ವೈಜ್ಞಾನಿಕ ಸಂಶೋಧನೆ ಮತ್ತು ಉನ್ನತ ಶಿಕ್ಷಣ ನೀಡುವ ಮುಕ್ತ ವಿಶ್ವವಿದ್ಯಾಲಯ ಇದಾಗಿದೆ. ಮೈಸೂರು ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್‌ ಮತ್ತು ಜೆಮ್‌ಶೇಟ್‌ಜೀ ಟಾಟಾ ಅವರ ಸಹಕಾರದಿಂದ 1909ರಲ್ಲಿ ಆರಂಭವಾಯಿತು. ಈಗಲೂ ಇದನ್ನು "ಟಾಟಾ ಇನ್‌ಸ್ಟಿಟ್ಯೂಟ್‌' ಎಂದು ಕರೆಯಲಾಗುತ್ತದೆ. ವಿಶ್ವದ ಅಗ್ರಸ್ಥಾನದಲ್ಲಿರುವ ವಿಶ್ವವಿದ್ಯಾಲಯ ಗಳಲ್ಲಿ ಇದೂ ಒಂದು. ಐಐಎಸ್‌ಸಿಯಲ್ಲಿ 3,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ರಾಜ್ಯದ ಎರಡು ಕಡೆಗಳಲ್ಲಿ ಕ್ಯಾಂಪಸ್‌ ಇದ್ದು, ಪ್ರಧಾನ ಕ್ಯಾಂಪಸ್‌ ಬೆಂಗ ಳೂರು ನಗರದ ಉತ್ತರ ಭಾಗದಲ್ಲಿದೆ. ಇನ್ನೊಂದು ಕ್ಯಾಂಪಸ್‌ ಚಳ್ಳಕೆರೆಯಲ್ಲಿದೆ. ಐಐಎಸ್‌ಸಿ ವಿಶ್ವದ ಟಾಪ್‌ 10 ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ವಿಶ್ವವಿದ್ಯಾಲಯ.

ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸಿರುವ ಸಂಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಸ್ವಾಯತ್ತೆ, ಹೆಚ್ಚಿನ ಧನ ಸಹಾಯ ಮತ್ತು ಇತರ ನೆರವನ್ನು ನೀಡಲಾಗುತ್ತದೆ. ಈ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸಲಾಗುತ್ತದೆ.
-ಪ್ರಕಾಶ್‌ ಜಾವಡೇಕರ್‌,
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

ಬೆಂಗಳೂರು 3 ನೇ ಅತೀ ಅಗ್ಗದ ನಗರಿ

ಬೆಂಗ್ಳೂರು 3ನೇ ಅತಿ ಅಗ್ಗದ ನಗರಿ!

ನವದೆಹಲಿ: ವಿಶ್ವದ ಅತಿ ಅಗ್ಗದ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ 3ನೇ ಸ್ಥಾನ! ಆರ್ಥಿಕ ಗುಪ್ತಚರ ಘಟಕ (ಯುಐಯು) ಈ ಪಟ್ಟಿ ತಯಾರಿಸಿದ್ದು, ಚೆನ್ನೈಗೆ 6ನೇ ಸ್ಥಾನ, ಮುಂಬೈ 7 ಮತ್ತು ನವದೆಹಲಿಗೆ 10ನೇ ಸ್ಥಾನ ಲಭ್ಯವಾಗಿದೆ. ನಗರವಾಸಿಗಳ ಜೀವನಶೈಲಿ, ವಾಸಯೋಗ್ಯ ಸ್ಥಳ, ಜೀವನ ನಿರ್ವಹಣೆ ವೆಚ್ಚ ಮುಂತಾದ ಸಂಗತಿಗಳನ್ನು ಮಾನದಂಡವಾಗಿರಿಸಿಕೊಂಡು ಈ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯನ್ನೂ ಯುಐಯು ತಯಾರಿಸಿದ್ದು, ನಂ.1 ಸ್ಥಾನ ಸಿಂಗಾ ಪುರದ ಪಾಲಾಗಿದೆ. 4ನೇ ಸ್ಥಾನದಲ್ಲಿ ಟೊಕಿಯೊ, ಒಸಾಕಾ 5, ಸಿಯೋಲ್‌ 6ನೇ ಸ್ಥಾನದಲ್ಲಿದ್ದು, ಕಳೆದವರ್ಷ ಲಕ್ಷುರಿ ಸಿಟಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಲಾಸ್‌ಏಂಜಲೀಸ್‌ ಈ ಬಾರಿ 11ನೇ ಸ್ಥಾನಕ್ಕೆ ಕುಸಿದಿದೆ.

ಆನಂದಭರಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 122ನೇ ಸ್ಥಾನ!

ಲಂಡನ್‌: ವಿಶ್ವದ ಸಂತೋಷಭರಿತ ದೇಶಗಳ ಪಟ್ಟಿಯಲ್ಲಿ ಭಾರತ 3 ಸ್ಥಾನ ಕುಸಿತ ಕಂಡಿದ್ದು, 122ನೇ ಸ್ಥಾನ ಅಲಂಕರಿಸಿದೆ. ಅಚ್ಚರಿಯೆಂದರೆ, ನೆರೆಯ ರಾಷ್ಟ್ರ ಪಾಕಿಸ್ತಾನ 80ನೇ ಸ್ಥಾನ, ಇರಾಕ್‌ 117ನೇ ಸ್ಥಾನದಲ್ಲಿದ್ದು, ಭಾರತವನ್ನು ಹಿಂದಿಕ್ಕಿವೆ!
ಜಿಡಿಪಿ, ಭ್ರಷ್ಟಾಚಾರ, ಅಭಿವೃದ್ಧಿ ಮುಂತಾದ ಸಂಗತಿ ಆಧರಿಸಿ ತಯಾರಿಸುವ ಹ್ಯಾಪಿನೆಸ್‌ ಪಟ್ಟಿ ಇದಾಗಿದ್ದು, ಕಳೆದವರ್ಷ ಭಾರತ 118ನೇ ಸ್ಥಾನದಲ್ಲಿತ್ತು. ಡೆನ್ಮಾರ್ಕ್‌ ಅನ್ನು 3ನೇ ಸ್ಥಾನಕ್ಕೆ ತಳ್ಳಿ, ನಾರ್ವೆ ವಿಶ್ವದ "ಅತ್ಯಂತ ಆನಂದಭರಿತ ರಾಷ್ಟ್ರ' ಎಂಬ ಹಿರಿಮೆಗೆ ಪಾತ್ರವಾಗಿದೆ. 79ನೇ ಸ್ಥಾನದಲ್ಲಿ ಚೀನಾ, ನೇಪಾಳ 99, ಶ್ರೀಲಂಕಾ 120ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿವೆ.

ಸಿಂಧುಗೆ ಒಲಿದ "ಇಂಡಿಯಾ ಒಪನ್ ಸೂಪರ್ ಸೀರೀಜ್"

ದೇಶ ಹೆಮ್ಮೆ ಪಡುವ ಸಾಧನೆ ಮಾಡಿದ ಸಿಂಧು: ಅಮಿತಾಭ್ ಬಚ್ಚನ್, ಶಾರುಕ್‌ ಪ್ರಶಂಸೆ

ಮುಂಬೈ:  ‘ಇಂಡಿಯಾ ಓಪನ್ ಸೂಪರ್ ಸರಣಿ’ಯ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.ಸಿಂಧು ಅವರನ್ನು  ಬಾಲಿವುಡ್‌ ನಟರಾದ ಅಮಿತಾಭ್ ಬಚ್ಚನ್ ಹಾಗೂ ಶಾರುಕ್‌ಖಾನ್‌ ಅಭಿನಂದಿಸಿದ್ದಾರೆ.

ಸಿರಿಪೋರ್ಟ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 21–19, 21–16ರ ನೇರ ಗೇಮ್‌ಗಳಿಂದ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಅವರ ವಿರುದ್ಧ ಜಯಿಸಿ, ಸರಣಿಯ ಕಿರೀಟ ಮುಡಿಗೇರಿಸಿಕೊಂಡು ಸಾಧನೆ ತೋರಿದ್ದಾರೆ.

2016ರ ರಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು 21–19, 21–16 ಸೆಟ್‌ಗಳ ಅಂತರದಲ್ಲಿ ಪಿ.ವಿ. ಸಿಂಧು ಸೋಲು ಕಂಡಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ಅಮಿತಾಭ್ ಬಚ್ಚನ್ ‘ಇಂಡಿಯಾ ಓಪನ್ ಸೂಪರ್ ಸರಣಿ’ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.
ಸಿಂಧು ಅವರಿಗೆ ದೊಡ್ಡ ಅಭಿನಂದನೆ. ರಿಯೊ ಒಲಂಪಿಕ್ಸ್ ಸೋಲಿನ ಕಹಿಯನ್ನು ಸಿಹಿಯಾಗಿ ತೀರಿಸಿಕೊಂಡಿದ್ದೀರಿ’ ಎಂದಿದ್ದಾರೆ.

‘ದೇಶ ಹೆಮ್ಮ ಪಡುವಂತೆ ಪಿ.ವಿ. ಸಿಂಧು ಉತ್ತಮ ಆಟವಾಡಿದ್ದಾರೆ’ ಎಂದು ಶಾರುಕ್‌ ಖಾನ್‌ ಟ್ವೀಟ್‌ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಬಿ,ಪಿ,ಕನುಂಗೊ ಆರ್,ಬಿ,ಐ ನೂತನ ಡೆಪ್ಯುಟಿ ಗೌರ್ನರ್

ಬಿ.ಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿ ಬಿಪಿ ಕನುಂಗೊ ಆರ್ ಬಿಐ ನ ನೂತನ ಡೆಪ್ಯುಟಿ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮೂರು ವರ್ಷ ಅಧಿಕಾರದಲ್ಲಿರಲಿದ್ದು, ಕರೆನ್ಸಿ ಮ್ಯಾನೇಜ್ ಮೆಂಟ್, ಸಾಲ ನಿರ್ವಹಣೆ, ಪಾವತಿ ಮತ್ತು ಠರಾವಣೆ ವ್ಯವಹಾರಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಮಾ.11 ರಂದು ಬಿಪಿ ಕನುಂಗೊ ಅವರ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆರ್ ಬಿ ಐ ನಲ್ಲಿ ನಾಲ್ವರು ಡೆಪ್ಯುಟಿ ಗೌರ್ನರ್ ಗಳಿರಲಿದ್ದು ಆರ್ ಗಾಂಧಿ ಅವರ ಸ್ಥಾನಕ್ಕೆ  ಕನುಂಗೊ ಅವರನ್ನು ನೇಮಕ ಮಾಡಲಾಗಿದೆ.

1982 ರಿಂದ ಆರ್ ಬಿಐ ನಲ್ಲಿ ಕಾರ್ಯನಿರ್ವಹಿಸಿರುವ ಕನುಂಗೊ ವಿದೇಶಿ ವಿನಿಮಯ ನಿರ್ವಹಣೆ ಸೇರಿದಂತೆ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣ

ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣ: ಸಾಧ್ವಿ ಪ್ರಗ್ಯಾ , ಇಂದ್ರೇಶ್ ಕುಮಾರ್ ದೋಷಮುಕ್ತಗೊಳಿಸಿದ ಎನ್‌ಐಎ

ಹೊಸದಿಲ್ಲಿ, ಎ.3: ಅಜ್ಮೇರ್ ದರ್ಗಾದಲ್ಲಿ 2007ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕುರ್ , ಹಿರಿಯ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಸೇರಿದಂತೆ ನಾಲ್ವರನ್ನು ದೋಷಮುಕ್ತಗೊಳಿಸಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ವರದಿ ನೀಡಿದೆ.

ಸಾಧ್ವಿ ಪ್ರಗ್ಯಾ ಠಾಕುರ್ ಸಿಂಗ್, ಹಿರಿಯ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ , ಪ್ರಿನ್ಸ್ ಮತ್ತು ರಾಜೇಂದ್ರ ಅವರನ್ನು ದೋಷಮುಕ್ತಗೊಳಿಸಿ ಎನ್‌ಐಎ ವರದಿ ನೀಡಿದ್ದು ಈ ವರದಿಯನ್ನು ಸ್ವೀಕರಿಸುವ ಬಗ್ಗೆ ಎಪ್ರಿಲ್ 17ರಂದು ನ್ಯಾಯಾಲಯ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.

     ಈ ನಾಲ್ವರ ವಿರುದ್ಧದ ಆರೋಪವನ್ನು ಪುಷ್ಠೀಕರಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎಂದು ಭಯೋತ್ಪಾದಕ ನಿಗ್ರಹ ಏಜೆನ್ಸಿ ತಿಳಿಸಿದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಜೈಪುರದಲ್ಲಿರುವ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಈ ವರದಿಯನ್ನು ಸ್ವೀಕರಿಸುವ ಬಗ್ಗೆ ನ್ಯಾಯಾಲಯ ಎಪ್ರಿಲ್ 17ರಂದು ನಿರ್ಧರಿಸಲಿದೆ ಎಂದು ಸರಕಾರಿ ಅಭಿಯೋಜಕ ಅಶ್ವಿನಿ ಶರ್ಮ ತಿಳಿಸಿದ್ದಾರೆ.

ಇತರ ಮೂವರು ಆರೋಪಿಗಳಾದ ಸಂದೀಪ್ ಡಾಂಗೆ, ಸುರೇಶ್ ನಾಯರ್ ಮತ್ತು ರಾಮಚಂದ್ರ ಕಲ್‌ಸಂಗ್ರ ಅವರು ಇನ್ನೂ ತಲೆತಪ್ಪಿಸಿಕೊಂಡಿದ್ದಾರೆ.

ಈ ಮೂವರ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಿಸಿ, ಮೂವರು ಆರೋಪಿಗಳನ್ನು ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ದಾಖಲಿಸಿ ಎನ್‌ಐಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಮೂರನ್ನು ಬಂಧಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಸಮಾಧಾನ ಸೂಚಿಸಿದ ನ್ಯಾಯಾಲಯ, ಈ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಎನ್‌ಐಎ ಡಿಜಿಪಿಗೆ ಸೂಚಿಸಿದೆ.

ಅಜ್ಮೇರ್ ದರ್ಗಾದಲ್ಲಿ 2007ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟು 17 ಮಂದಿ ಗಾಯಗೊಂಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ವಿಶೇಷ ಎನ್‌ಐಎ ನ್ಯಾಯಾಲಯ, ಹಿಂದೂ ಬಲಪಂಥೀಯ ಸಂಘಟನೆಯ ಕಾರ್ಯಕರ್ತರಾದ ಸುನಿಲ್ ಜೋಷಿ, ದೇವೇಂದ್ರ ಗುಪ್ತ ಮತ್ತು ಭವೇಶ್ ಭಾಯ್ ಪಟೇಲ್ ಅವರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇಂದಿರಾ ಬ್ಯಾನರ್ಜಿ ಮುಖ್ಯ ನ್ಯಾಯಮೂರ್ತಿ

ಇಂದಿರಾ ಬ್ಯಾನರ್ಜಿ ಮುಖ್ಯ ನ್ಯಾಯಮೂರ್ತಿ

ಚೆನ್ನೈ: ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ (59) ಅವರು ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಸಿ.ಎಚ್‌. ವಿದ್ಯಾಸಾಗರ್ ರಾವ್ ಅವರು ಇಂದಿರಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.

ಇಂದಿರಾ ಅವರು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ಅವರು ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕವಾಗಿದ್ದರು. ಆ ಸ್ಥಾನಕ್ಕೆ ಇಂದಿರಾ ಅವರನ್ನು ನೇಮಿಸಲಾಗಿದೆ.

ಎಲೆಕ್ಟ್ರಾನಿಕ್ ಮತಯಂತ್ರ ಬೇಡವೇ ಬೇಡ

ಎಲೆಕ್ಟ್ರಾನಿಕ್‌ ಮತಯಂತ್ರ ಬೇಡವೇ ಬೇಡ

ನವದೆಹಲಿ: ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಮಾರ್ಪಡಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ ರಾಜ್ಯಸಭೆಯಲ್ಲಿ ಗದ್ದಲ ನಡೆಸಿದವು. ಮುಂದೆ ನಡೆಯುವ ಚುನಾವಣೆಗಳಲ್ಲಿ ಮತಯಂತ್ರಗಳನ್ನು ಬಳಸಲೇಬಾರದು ಎಂದು ಒತ್ತಾಯಿಸಿದವು. ಪರಿಣಾಮವಾಗಿ ಅಲ್ಪಕಾಲ ಸದನವನ್ನು ಮುಂದೂಡಬೇಕಾಯಿತು.

‘ಸರ್ಕಾರ ವಂಚಕ’ ಎಂದು ಘೋಷಣೆ ಕೂಗುತ್ತಾ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಮುಂದೆ ಜಮಾಯಿಸಿದರು. ಉಪಸಭಾಪತಿ ಪಿ.ಜೆ. ಕುರಿಯನ್‌ ಅವರು ಸದನವನ್ನು ಏಳು ನಿಮಿಷ ಮುಂದೂಡಿದರು.

ವಿರೋಧ ಪಕ್ಷಗಳ ಆರೋಪವನ್ನು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್‌ ನಖ್ವಿ ಅವರು ಅಷ್ಟೇ ಬಲವಾಗಿ ವಿರೋಧಿಸಿದರು. ಮತಯಂತ್ರಗಳ ಬಗ್ಗೆ ಯಾರಿಗಾದರೂ ಅನುಮಾನ ಇದ್ದರೆ ಆ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಬೇಕು.
ಈ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಬಾರದು ಎಂದರು.

ಕೆಲವು ರಾಜಕೀಯ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟೀಕರಣ ನೀಡಿದೆ ಎಂದೂ ಅವರು ತಿಳಿಸಿದರು.
ಸರ್ಕಾರವನ್ನು ‘ವಂಚಕ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕರೆದದ್ದು ಗದ್ದಲಕ್ಕೆ ಕಾರಣವಾಯಿತು. ಜನರು ಹಾಗೂ ಪ್ರಜಾಪ್ರಭುತ್ವವನ್ನು ಮಾಯಾವತಿ ಅವರು ಅವಮಾನಿಸಿದ್ದಾರೆ ಎಂದು ನಖ್ವಿ ಹೇಳಿದರು.

ಮಾಯಾವತಿ ಅವರ ಹೇಳಿಕೆ ಬಿಜೆಪಿಯನ್ನು ಕುರಿತೇ ಹೊರತು ಜನರ ಬಗ್ಗೆ ಅಲ್ಲ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದವು. 2004 ಮತ್ತು 2009ರಲ್ಲಿ ಬಿಹಾರ ಮತ್ತು ದೆಹಲಿ ಹಾಗೂ ಈ ಬಾರಿ ಪಂಜಾಬ್‌ನಲ್ಲಿ ನಡೆದ ಚುನಾವಣೆಗಳಲ್ಲಿಯೂ ಇವೇ ಮತಯಂತ್ರಗಳನ್ನು ಬಳಸಲಾಗಿತ್ತು. ಅಲ್ಲೆಲ್ಲ ಬಿಜೆಪಿ ಸೋತಿದೆ. ಆಗ ಕಾಂಗ್ರೆಸ್‌ ಯಾವುದೇ ವಿರೋಧ ಮಾಡಿಲ್ಲ ಎಂದು ನಖ್ವಿ ಹೇಳಿದರು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್‌ ಅವರು ಅದಕ್ಕೆ ತಿರುಗೇಟು ನೀಡಿ, ಆಗ ಆಡಳಿತದಲ್ಲಿದ್ದ ಕಾಂಗ್ರೆಸ್‌ ಮತಯಂತ್ರಕ್ಕೆ ಕನ್ನ ಹಾಕಿಲ್ಲ ಎಂದರು. ಆದರೆ ಈಗ ಅಂತಹ ಪ್ರವೃತ್ತಿ ಆರಂಭವಾಗಿದೆ ಎಂದು ಆರೋಪಿಸಿದರು.

ಮುಂದೆ ನಡೆಯಲಿರುವ ಚುನಾವಣೆ ಗಳು ಮತ್ತು ಉಪ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಿಗೆ ಮತಪತ್ರಗಳನ್ನೇ ಬಳಸಬೇಕು ಎಂದು ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌, ಎಸ್‌ಪಿಯ ರಾಮ್‌ಗೋಪಾಲ್ ಯಾದವ್‌ ಆಗ್ರಹಿಸಿದರು.

ಮಧ್ಯಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದ ಮತಯಂತ್ರ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಯಾವ ಗುಂಡಿ ಒತ್ತಿದರೂ ಮತ ಬಿಜೆಪಿಗೇ ಚಲಾವಣೆಯಾದ ಪ್ರಸಂಗವನ್ನು ವಿರೋಧ ಪಕ್ಷಗಳ ಸದಸ್ಯರು ಉಲ್ಲೇಖಿಸಿದರು.

ಮುಕ್ತ ಮತ್ತು ನ್ಯಾಯಬದ್ಧ ಚುನಾವಣೆಯೇ ಭಾರತೀಯ ಪ್ರಜಾಪ್ರಭುತ್ವದ ತಳಹದಿ. ಆದರೆ ಇದೇ ಮೊದಲ ಬಾರಿ ಚುನಾವಣೆ ಬಗ್ಗೆ ಪ್ರಶ್ನೆಗಳು  ಮೂಡಿವೆ ಎಂದು ಆಜಾದ್‌ ಹೇಳಿದರು.

ಇವಿಎಂ ಸರಿಯಿಲ್ಲ ಎಂದವರ ಬಗ್ಗೆ ನಾಯ್ಡು ವ್ಯಂಗ್ಯ: ಎಲೆಕ್ಟ್ರಾನಿಕ್‌ ಮತ ಯಂತ್ರಗಳು (ಇವಿಎಂ) ಸರಿಯಿಲ್ಲ ಎನ್ನುತ್ತಿರುವ ರಾಜಕೀಯ ಎದುರಾಳಿಗಳ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು, ‘ಹೀಗೆ ಹೇಳುವವರ ಪಾಲಿಗೆ ಇವಿಎಂಗಳು ಎವೆರಿ ವೋಟ್‌ ಮೋದಿ (ಪ್ರತಿ ಮತವೂ ಮೋದಿಗೆ) ಎಂಬಂತಾಗಿವೆ’ ಎಂದರು. ಅಭಿವೃದ್ಧಿ ಪರ ಇರುವ ಜನರ ಮನಸ್ಸಿನಲ್ಲಿ ಒಂದು ಬದಲಾವಣೆ ಕಂಡುಬಂತು. ಅಭಿವೃದ್ಧಿಪರ ಕೆಲಸಗಳನ್ನು ಬಿಜೆಪಿ ಮಾಡಬಲ್ಲದು ಎಂದರು.

ಗಾಯಕ್‌ವಾಡ್‌ಗೆ ನಿಷೇಧ: ನಿಲುವಳಿ ನೋಟಿಸ್‌
ಸಂಸದ ರವೀಂದ್ರ ಗಾಯಕ್‌ವಾಡ್‌ ಮೇಲೆ ದೇಶದ ವಿಮಾನ ಯಾನ ಸಂಸ್ಥೆಗಳು ಹೇರಿರುವ ನಿಷೇಧದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಶಿವಸೇನಾ ಸಜ್ಜಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ನಿಲುವಳಿ ಸೂಚನೆ ಮಂಡಿಸಲು ನೋಟಿಸ್‌ ನೀಡಲಾಗಿದೆ.

ಏರ್‌ ಇಂಡಿಯಾ ವ್ಯವಸ್ಥಾಪಕರೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ಗಾಯಕ್‌ವಾಡ್‌ ಮೇಲೆ ದೇಶದ ಎಲ್ಲ ಪ್ರಮುಖ ವಿಮಾನ ಯಾನ ಸಂಸ್ಥೆಗಳು ನಿಷೇಧ ಹೇರಿವೆ.

ಹಲ್ಲೆ ಬಗ್ಗೆ ಗಾಯಕ್‌ವಾಡ್‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ವಿಮಾನ ಪ್ರಯಾಣ ನಿಷೇಧ ಹಿಂದೆಗೆಯಲು ನಾಗರಿಕ ವಾಯುಯಾನ ಸಚಿವಾಲಯ ಮುಂದಾಗಿಲ್ಲ ಎಂಬುದು ಶಿವಸೇನಾದ ಅತೃಪ್ತಿ. ಹಾಗಾಗಿ ಸೇನಾದ ಸಂಸದೀಯ ಪಕ್ಷ ಬುಧವಾರ ಹಲವು ಬಾರಿ ಸಭೆ ಸೇರಿ ಚರ್ಚೆ ನಡೆದಿದೆ.

ಲೋಕಸಭೆ ಕಲಾಪದಲ್ಲಿ ಭಾಗವಹಿಸಲು ಗುರುವಾರ ದೆಹಲಿಗೆ ತೆರಳುವುದಕ್ಕಾಗಿ ಗಾಯಕ್‌ವಾಡ್‌ ಅವರಿಗೆ ಸೇನಾ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಎಂದು ತಿಳಿದು ಬಂದಿದೆ.

‘ಸದನದ ಹಕ್ಕನ್ನು ರಕ್ಷಿಸುವುದು ಸ್ಪೀಕರ್‌ ಕರ್ತವ್ಯ. ಆದರೆ ನಮ್ಮ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಸಮಸ್ಯೆ ಪರಿಹಾರ ಆಗದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ. ಸರ್ಕಾರದ ಭಾಗವಾಗಿರುವ ನಾವು ಪ್ರತಿಭಟನೆ ನಡೆಸಲು ಬಯಸುವುದಿಲ್ಲ’ ಎಂದು ಸೇನಾ ಸಂಸದ ಆನಂದರಾವ್‌ ಅಡ್ಸುಲ್‌ ಹೇಳಿದ್ದಾರೆ.

ಗಾಯಕ್‌ವಾಡ್‌ ಎದುರಿಸಿದಂತಹ ಸಮಸ್ಯೆಯನ್ನು ಇತರ ಸಂಸದರೂ ಎದುರಿಸಿದ್ದಾರೆ. ಖಾಸಗಿ ವಿಮಾನ ಯಾನ ಸಂಸ್ಥೆಗಳು ದೌರ್ಜನ್ಯ ನಡೆಸಲು ಯತ್ನಿಸುತ್ತಿವೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಅಡ್ಸುಲ್‌ ಹೇಳಿದ್ದಾರೆ.

₹2,000 ನೋಟು ರದ್ದು ಇಲ್ಲ
ಹೊಸ  ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ. ‘ನಾವು ನಕಲಿ ನೋಟುಗಳನ್ನು ಜಪ್ತಿ ಮಾಡುತ್ತಿದ್ದೇವೆ. ₹2,000ದ ನೋಟು ರದ್ದಾಗಲಿದೆ ಎಂಬ ವದಂತಿಗಳು ಹೊರಗೆ ಇವೆ. ಆದರೆ ವದಂತಿ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ’ ಎಂದು  ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಗಿಲ್ಗಿಟ್ ಸಮಸ್ಯೆ :ಭಾರತ ಕಿಡಿ

ಪಾಕ್‌ ಕ್ರಮಕ್ಕೆ ಭಾರತ ಕಿಡಿ

ನವದೆಹಲಿ (ಐಎಎನ್‌ಎಸ್): ಗಿಲ್ಗಿಟ್ ಮತ್ತು ಬಾಲ್ಟಿಸ್ತಾನವನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸಲು ಮುಂದಾಗಿರುವ ಪಾಕಿಸ್ತಾನದ ಕ್ರಮವನ್ನು  ಕೇಂದ್ರ ಸರ್ಕಾರ ಪ್ರಬಲವಾಗಿ ಖಂಡಿಸಿದೆ.

ಜತೆಗೆ, ‘ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರ ಒಳಗೊಂಡಂತೆ, ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಬಿಜು ಜನತಾ ದಳ ಸಂಸದ ಭ್ರತೃಹರಿ ಮಹತಾಬ್ ಅವರು ಶೂನ್ಯವೇಳೆಯಲ್ಲಿ, ‘ಈ ಪ್ರದೇಶಗಳನ್ನು ತನ್ನ ಐದನೇ ಪ್ರಾಂತ್ಯಗಳೆಂದು ಘೋಷಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ’ ಎಂದು ವಿಷಯವನ್ನು ಪ್ರಸ್ತಾಪಿಸಿದರು.

ನಂತರ, ‘ಈ ಪ್ರದೇಶಗಳು ಭಾರತದ ಭಾಗ ಎಂದು ನಮ್ಮ ಸಂವಿಧಾನ ಗುರುತಿಸಿದೆ. ಆದರೆ, ದೇಶ ವಿಭಜನೆ ವೇಳೆ ಈ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೈನಿಕರಿಗೆ ಬ್ರಿಟಿಷ್ ಅಧಿಕಾರಿಗಳು ಅವಕಾಶ ನೀಡಿದ್ದರು.
ಬ್ರಿಟನ್‌ ಸಂಸತ್ತು ಈ ಬಗ್ಗೆ ಬಹಳ ಹಿಂದೆಯೇ ನಿರ್ಣಯ ಮಂಡಿಸಿದೆ. ಅದರಲ್ಲಿ, ‘ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ ಭಾರತದ ಭಾಗಗಳು. ಆದರೆ ಪಾಕಿಸ್ತಾನ ಇವನ್ನು 1947ರಿಂದಲೂ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ’ ಎಂದು ವಿವರಿಸಲಾಗಿದೆ. ಅದನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸುವ ಪಾಕಿಸ್ತಾನದ ನಡೆ ಏಕಪಕ್ಷೀಯವಾದುದು. ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ‘ಪಾಕಿಸ್ತಾನ ಮಾಡಿದ್ದು ಮಾತ್ರ ನಿಮಗೆ ಕಾಣುತ್ತಿದೆ. ಅದಕ್ಕೆ ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ ಎಂಬುದು ನಿಮಗೆ ಕಾಣುವುದಿಲ್ಲ. ಪಾಕಿಸ್ತಾನದ ನಡೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಖಂಡಿಸಲಾಗಿದೆ. ಈ ಪ್ರದೇಶಗಳು ಭಾರತದ ಭಾಗಗಳು ಎಂಬುದರಲ್ಲಿ ಅನುಮಾನವೇ ಬೇಡ’ ಎಂದು ಅವರ ಉತ್ತರಿಸಿದರು.

‘ಜನಾಂಗೀಯ ದಾಳಿ ಎನ್ನಲಾಗದು’

‘ಗ್ರೇಟರ್‌ ನೋಯ್ಡಾದಲ್ಲಿ ಆಫ್ರಿಕಾ ದೇಶಗಳ ಪ್ರಜೆಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಅದನ್ನು  ಈಗಲೇ, ಜನಾಂಗೀಯ ದಾಳಿ ಎಂದು  ಕರೆಯಲು ಸಾಧ್ಯವಿಲ್ಲ’ ಎಂದು ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಹೇಳಿದ್ದಾರೆ.

‘ಆಫ್ರಿಕಾ ದೇಶಗಳ ನಿಯೋಗದ ಮುಖ್ಯಸ್ಥರು ಇದನ್ನು ಜನಾಂಗೀಯ ದಾಳಿ  ಮತ್ತು ಭಾರತ ಸರ್ಕಾರ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ದುರದೃಷ್ಟದ ಹೇಳಿಕೆ. ಆಫ್ರಿಕಾದ ನಿಯೋಗದ ಹೇಳಿಕೆಯಿಂದ ಭಾರತಕ್ಕೆ ನೋವಾಗಿದೆ ಎಂಬುದನ್ನು, ಈಗಾಗಲೇ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಅವರು ಹೇಳಿದರು.
‘ದಾಳಿಗಳು ಪೂರ್ವಯೋಜಿತವಾಗಿರುತ್ತವೆ’ ಎಂದರು.