ಸೋಮವಾರ, ಜೂನ್ 26, 2017

ಕಾಂಗ್ರೆಸ್ ನೀತಿ ಹಾಡಿ ಹೊಗಳಿದ ನೀತಿ ಆಯೋಗ

ಕಾಂಗ್ರೆಸ್ ನೀತಿ ಹಾಡಿ ಹೊಗಳಿದ ನೀತಿ ಆಯೋಗ !

ಹೊಸದಿಲ್ಲಿ, ಜೂ.25: ಕೇಂದ್ರದ ಆಡಳಿತಾರೂಢ ಬಿಜೆಪಿಯ ಗುರಿ, ಕಾಂಗ್ರೆಸ್ ಮುಕ್ತ ಭಾರತ. ಆದರೆ ದೇಶದ ಅತ್ಯುನ್ನತ ಚಿಂತಕರ ಕೂಟ ಎನಿಸಿಕೊಂಡಿರುವ ನೀತಿ ಆಯೋಗದ ಅಭಿಪ್ರಾಯ ಮಾತ್ರ ಇದಕ್ಕೆ ತದ್ವಿರುದ್ಧ.

ನೀತಿ ಆಯೋಗ ಸಿದ್ಧಪಡಿಸಿದ ಸರ್ಕಾರಿ ವರದಿಯಲ್ಲಿ 1991ರಲ್ಲಿ ಪಿ.ವಿ.ನರಸಿಂಹರಾವ್ ಸರಕಾರ ಕೈಗೊಂಡ ಆರ್ಥಿಕ ಸುಧಾರಣೆಗಳನ್ನು ಹಾಡಿ ಹೊಗಳಲಾಗಿದೆ. ಇಷ್ಟು ಸಾಲದೆಂಬಂತೆ ಮನಮೋಹನ್ ಸಿಂಗ್ ಸರಕಾರ ಜಾರಿಗೆ ತಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಡಾ ದೇಶದ ಅಭಿವೃದ್ಧಿ ಸೂಚ್ಯಂಕ ಸುಧಾರಿಸಲು ಗಣನೀಯ ಕೊಡುಗೆ ನೀಡಿದೆ ಎಂದು ಬಣ್ಣಿಸಿದೆ.

ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ಸಾಧನೆಯ ನಿಟ್ಟಿನಲ್ಲಿ ಅವಲೋಕಿಸುವ ಸ್ವಯಂಪ್ರೇರಿತ ರಾಷ್ಟ್ರೀಯ ಪರಿಶೀಲನಾ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಈ ವರದಿ ಮುಂದಿನ ತಿಂಗಳು ನ್ಯೂಯಾರ್ಕ್ನಲ್ಲಿ ನಡೆಯುವ ವಿಶ್ವಸಂಸ್ಥೆಯ ಅತ್ಯುನ್ನತ ರಾಜಕೀಯ ವೇದಿಕೆಯಲ್ಲಿ ಎಸ್ಡಿಜಿ ಚರ್ಚೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಭಾರತ ಈ ಪರಿಶೀಲನಾ ವರದಿ ಸಿದ್ಧಪಡಿಸಿದೆ.

"ಭಾರತದ ಕ್ಷಿಪ್ರ ಪ್ರಗತಿಗೆ 1991ರಲ್ಲಿ ಆರಂಭಿಸಿದ ಆರ್ಥಿಕ ಸುಧಾರಣೆಗಳು ಕಾರಣ. ಇದು ಬಡತನ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸುಧಾರಣೋತ್ತರ ಭಾರತದಲ್ಲಿ ರಾಷ್ಟ್ರಮಟ್ಟ ಹಾಗೂ ರಾಜ್ಯಗಳಲ್ಲಿ ಕೂಡಾ ಎಲ್ಲ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಗುಂಪುಗಳಲ್ಲಿಕೂಡಾ ಬಡತನ ಕಡಿಮೆಯಾಗಿದೆ. 1993-94ರಿಂದ 2003-04ರವರೆಗೆ ಶೇಕಡ 6.2ರಷ್ಟು ಹಾಗೂ 2004-05ರಿಂದ 2011-12ವರೆಗೆ ಶೇಕಡ 8.3 ಹೀಗೆ ಸುಸ್ಥಿರ ಪ್ರಗತಿ, ಲಾಭದಾಯಕ ಉದ್ಯೋಗ ಸೃಷ್ಟಿಗೆ ಮತ್ತು ವೇತನ ಹೆಚ್ಚಳಕ್ಕೆ ಕಾರಣವಾಗಿದೆ" ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಸಿದ್ಧಪಡಿಸಿದ ಈ ವರದಿಯಲ್ಲಿ ಬಣ್ಣಿಸಲಾಗಿದೆ.

ಪ್ರಸ್ತುತ ಸರಕಾರದ ಪ್ರಧಾನಮಂತ್ರಿ ಜನಧನ್ ಯೋಜನೆ, ಕ್ಲೀನ್ ಇಂಡಿಯಾ ಮತ್ತಿತರ ಯೋಜನೆಗಳನ್ನು ಕೂಡಾ ವರದಿಯಲ್ಲಿ ಶ್ಲಾಘಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ