ಶುಕ್ರವಾರ, ಅಕ್ಟೋಬರ್ 26, 2018

"ಹುಚ್ಚು ಮನಸ್ಸಿನ ಹತ್ತು ಮುಖಗಳು" ವಿಮರ್ಶೆ

ಇದು ಶಿವರಾಮ ಕಾರಂತರ ಆತ್ಮ ಚರಿತ್ರೆ. ಈ ಪುಸ್ತಕದಲ್ಲಿ ಅವರು ತಮ್ಮ ಜೀವನದ ಬಹು ಮುಖ್ಯ ಘಟ್ಟಗಳನ್ನು, ಮೆಲುಕು ಹಾಕಿ, ತಾವು ಸಾಗಿ ಬಂದ ಹಾದಿಯನ್ನು ವಿಶ್ಲೇಸಿಸುತ್ತ, ತಮ್ಮ ಬದುಕು ಹಾಗೂ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು ಅನಾವರಣಗೊಳಿಸುತ್ತ ಹೊಗುತ್ತಾರೆ. ಶಿವರಾಮ ಕಾರಂತರ ಜೀವನ ಚರಿತ್ರೆ ತಿಳಿದುಕೊಳ್ಳಲು ಆಸಕ್ತಿ ಇರುವವರಿಗೆ ಅವರದೇ ಬರವಣಿಗೆ ಇರುವ ಈ ಪುಸ್ತಕ ಉತ್ತಮ ಆಯ್ಕೆ. ಅವರ ಕಾದಂಬರಿಗಳಲ್ಲಿ ಕಂಡು ಬರುವ ಜೀವನ ಸ್ಪೂರ್ತಿ, ಈ ಪುಸ್ತಕದ ಉದ್ದಕ್ಕೂ ಕಾಣಬಹುದು.

ಕಾರಂತರು ಬರೆಯುತ್ತಾರೆ “ಬದುಕಿನ ದೀರ್ಘ ಅವಧಿಯನ್ನು ಕುರಿತು ಎಷ್ಟೋ ಬಾರಿ ನಾನು ಯೋಚಿಸಲೇ ಬೇಕಾಗುತ್ತದೆ. ಅದನ್ನು ಯೋಚಿಸದೇ ಹೋಗಿದ್ದರೆ ನನ್ನ ಲೇಖನಿಗೆ ಯಾವ ಕೆಲಸವೂ ಇರುತ್ತಿರಲಿಲ್ಲ. ಬದುಕಿನ ಬಗ್ಗೆ ಆಳವಾಗಿ ಯೋಚಿಸಲು ಕಲಿತವನು ನಾನು. ನನ್ನ ಬಗ್ಗೆಯೂ, ನಾನು ಬದುಕಿನ ಕ್ಷಮೆ ಯಾಚಿಸಲು ಇಷ್ಟಪಡುವುದಿಲ್ಲ. ಆದರೆ ನನ್ನ ಎಳೆತನದಿಂದ ಇಂದಿನ ತನಕ, ನನ್ನ ಕಣ್ಮುಂದೆಯೇ ಹಾದುಹೋಗುತ್ತಿದ್ದ ಭಾರತೀಯ ಜನಜೀವನದ ಚಿತ್ರಪಟವನ್ನು ನಿರೀಕ್ಷಿಸಿದಾಗ ದೊರೆತ ಒಂದು ಸಂತೋಷಕ್ಕೆ ಪ್ರತಿಯಾಗಿ ಹತ್ತು ದುಃಖಗಳು ಕಾಣಿಸಿವೆ. ನಮ್ಮ ಪುರಾತನ ಶ್ರದ್ಧೆ ಮತ್ತು ಸೃಷ್ಟಿಗಳನ್ನು ಕುರಿತು ಅತೀವ ಆದರ ನನಗಿದೆ. ಆದರೆ, ಆ ಆದರ, ಕೃತಜ್ಞತೆ, ಹೆಮ್ಮೆ, ವರ್ತಮಾನ ಕಾಲದ ಜನರ ಸ್ವಾರ್ಥಕ್ಕೆ, ಅಪಮೌಲ್ಯಗಳಿಗೆ, ಕುತ್ಸಿತ ಜೀವನಕ್ಕೆ ಏನೇನೂ ಸಮಾಧಾನ ಕೊಡಲಾರದು. ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನ ಬದುಕನ್ನು ನಡೆಸಿದ ಸೂತ್ರ. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ, ತಾವು ನಲಿದು, ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದೀತು? ನಾವೇ ಅಲ್ಲಿಗೆ ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ? ಆ ಪ್ರಶ್ನೆಗೆ ಉತ್ತರವಾಗಿ ಅವರವರ ಕರ್ಮ ಅವರವರಿಗೆ ಎಂದರೆ ಸಾಕೇನು? ಜೀವನ ಪ್ರವಾಹದ ಕರ್ಮಕಾಂಡ ವ್ಯಕ್ತಿಗೆ ಬದ್ಧವಾದ, ವ್ಯಕ್ತಿಯಿಂದ ಪ್ರಭಾವಿತವಾಗುವ ಸಾಮೂಹಿಕ ಕರ್ಮಕಾಂಡ. ಆ ಸಮೂಹದ ಒಳಿತು ಕೆಡಕುಗಳ ಪಾಲು ಮತ್ತು ಹೊಣೆ ಪ್ರತಿ ವ್ಯಕ್ತಿಯ ಪಾಲಿಗೆ ಇದ್ದೇ ಇದೆ.”
ಕಾರಂತರ ಇಡೀ ಜೀವ ಹಾಗು ಜೀವನದ ಆಶಯವನ್ನು ಮೇಲಿನ ಮಾತುಗಳು ಸ್ಪಷ್ಟಪಡಿಸುತ್ತವೆ. ಕನ್ನಡದ ಕೆಲವೇ ಕೆಲವು ಮಹತ್ತರ ಆತ್ಮಚರಿತ್ರೆಗಳಲ್ಲಿ ಒಂದು ಕಾರಂತರ ಹುಚ್ಚುಮನಸ್ಸಿನ ಹತ್ತುಮುಖಗಳು.

ಶಿವರಾಮ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಆತ್ಮಕಥೆಯ ಸ್ಪೂರ್ತಿದಾಯಕ ಸಾಲುಗಳು

“ಬಾಳನ್ನು ಮರೆತ ಕನಸುಗಳಾಗಲಿ, ಅನುಭವದ ಬೆನ್ನೆಲುಬಿಲ್ಲದ ಕಲ್ಪನೆಗಳಾಗಲಿ ತಾಳಿ, ಬಾಳಲಾರವು.”

“ಮನುಷ್ಯ ಬೆಳೆಯುವುದು ಯಾವ, ಯಾರ ಆಶೀರ್ವಾದದಿಂದಲೂ ಅಲ್ಲ, ಸ್ವಪ್ರಯತ್ನದಿಂದ; ಯಾವ ಹರಕೆಯಿಂದಲೂ ಅಲ್ಲ; ತನ್ನ ನಡೆನುಡಿಗಳಿಂದ”

“ತನ್ನ ಮನೆಯಲ್ಲಿಯೇ ಚೆಲುವನ್ನು ಗುರುತಿಸಲಾರದವ ಲೋಕದ ಸೌಂದರ್ಯ ಮೆಚ್ಚಲು ಸಮರ್ಥನಾಗುವುದು ಕಷ್ಟವೇ ಸರಿ.”

“ವಾದ ಮಾಡುವ ಮನಸ್ಸಿಗೆ ‘ವಾದಿಸುವುದೇ’ ಮುಖ್ಯವಾಗಬಾರದು. ತರ್ಕದಲ್ಲಿ ಗೆಲ್ಲಬೇಕಾದುದು ಮುಖ್ಯವಲ್ಲ. ತರ್ಕದಿಂದ ಸತ್ಯಾಂಶ ತಿಳಿಯಬೇಕಾದುದು ಮುಖ್ಯ.”

“ನಮಗೆ ಅದು ಬೇಕು; ಇದು ಬೇಕು ಎಂದು ಅನ್ಯರನ್ನು ನಿರೀಕ್ಷಿಸಿದರೆ ಫಲವಿಲ್ಲ. ‘ಬೇಕೆಂದು ತೋರಿದರೆ ನಿನಗೆ ತಿಳಿದದ್ದನ್ನು ನೀನು ಮಾಡು’.”

“ನಾವು ಜೀವನದ ಮೌಲ್ಯಗಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಅದನ್ನು ಪರರಿಂದ ಬಯಸುತ್ತೇವೆ. ನಮಗೆ ಮಾತ್ರ ಅದು ಗಂಭೀರ ವಿಚಾರವಲ್ಲ.”

“ಮಕ್ಕಳಿಗೆ ನಾವು ಕಲಿಸುವ ಪ್ರೇಮಕ್ಕಿಂತಲೂ ಅವರು ನಮಗೆ ಕೊಡುವ ಆನಂದ ಹೆಚ್ಚು ಎಂಬುದನ್ನೂ ತಿಳಿದಿದ್ದೇನೆ. ತಾಳ್ಮೆಯನ್ನು ಕಲಿಸುವ ವಿಷಯದಲ್ಲಿ ಮಕ್ಕಳನ್ನು ಬಿಟ್ಟರೆ ಅನ್ಯ ಗುರುಗಳಿಲ್ಲ. ನನ್ನಂತಹ ನಿತ್ಯ ತಾಳ್ಮೆಗೇಡಿಗೆ ಆ ಪಾಠ ತೀರ ಅವಶ್ಯ.”

“ಮುಂದಿನ ಜನಾಂಗಕ್ಕೆ ಜಾತಿ, ಮತಗಳ ಬಗ್ಗೆ ಇನ್ನೂ, ಇನ್ನೂ ಗೊಡ್ಡು ಕಲ್ಪನೆಗಳನ್ನೇ ತುಂಬಿಸುತ್ತ ಹೋಗಬಾರದು. ಅದರಿಂದ ಈಗ ನಮ್ಮ ದೇಶಕ್ಕೆ ಆಗಿರುವ ಹಾನಿ ಸಾಕು. ನಮ್ಮ ಮಕ್ಕಳನ್ನು ವೈಚಾರಿಕ ನೆಲೆಯಲ್ಲಿ ಬೆಳೆಯಿಸಬೇಕಾದುದು ನಮ್ಮ ಕರ್ತವ್ಯ.”

“ಇಂದಿರುವವ ನಾಳೆ ಇಲ್ಲವಾಗುತ್ತಾನೆ ಎಂಬ ಮಾತು ತೀರ ನಿಜ. ಆದರೆ, ಇರುವಷ್ಟು ದಿನ ಒಳ್ಳೆಯ ರೀತಿಯಲ್ಲಿ ಇದ್ದು, ನಂತರ ತನ್ನ ಸುತ್ತಣ ಜನತೆಯ ನೆನಪಿನಲ್ಲಿ ಉಳಿದು, “ಎಂಥ ಹಿರಿಯ ಬದುಕು!” ಅನಿಸುವ ಬಾಳ್ವೆ ಎಷ್ಟು ಜನರ ಪಾಲಿಗಿದ್ದೀತು?”

“ಬದುಕು ಕ್ಷುದ್ರವಾಗುವುದೂ, ಹಿರಿದಾಗುವುದೂ, ನಮ್ಮ ಸಂಪತ್ತಿನಿಂದಲ್ಲ, ಸ್ಥಾನಮಾನದಿಂದಲ್ಲ, ಪರಾಕ್ರಮದಿಂದಲ್ಲ, ನಮ್ಮ ಸಂಪರ್ಕಕ್ಕೆ ದೊರಕಿದ ಯಾರೇ ಇರಲಿ, ಅವರನ್ನು ಕುರಿತ ಸವಿ ನೆನಪನ್ನು ಪರರಲ್ಲಿ ಬಿತ್ತಿಹೋದ ವ್ಯಕ್ತಿಗಳಿಂದ!”

“ನಾವು ಅನ್ನುವ ಉಪದೇಶಕ್ಕೂ, ನಮ್ಮದೇ ಜೀವನಕ್ಕೂ ಯಾವ ಸಂಬಂಧವೂ ಇಲ್ಲದೆ ಹೋದರೆ, ಆಗ ನಮ್ಮ ಮಾತಿಗೆ ಬೆಲೆ ಬಾರದು. ಹೃದಯದಿಂದ ಹೊರಡುವ ಮಾತು ಮಾತ್ರವೇ ಹೃದಯವನ್ನು ಹೊಗ್ಗಬಹುದಂತೆ.”

“ನಮ್ಮಲ್ಲೆಲ್ಲ ಹೆಣ್ಣು ತರುವುದೇ ಪದ್ಧತಿ. ಎಮ್ಮೆ, ದನ, ನಾಯಿ, ಕರುಗಳನ್ನು ತರುವ ಹಾಗೆ. ಅದೊಂದು ಸಂಪ್ರದಾಯ. ನನಗೆ ಸಂಪ್ರದಾಯದ ಮದುವೆ ಬೇಕಿರಲಿಲ್ಲ. ತಿಳಿದು ಮದುವೆಯಾಗಬೇಕು. ಗಂಡಿಗೆ ಹೆಣ್ಣಿನ ಪರಿಚಯವಾಗಬೇಕು. ಮೊದಲಿಗೆ ಇಬ್ಬರೂ ಸ್ನೇಹಕ್ಕೆ ಒಲಿಯಬೇಕು. ಇದು ಕಷ್ಟದ ದಾರಿ. ಜನರು ತಿಳಿದಷ್ಟು ಸುಲಭವಲ್ಲ.”

“ನಮ್ಮ ಜನಕ್ಕೆ, ಭಕ್ತಿಯು ವೈಯಕ್ತಿಕ ಭಾವವಾಗಿರದೆ, ಪ್ರದರ್ಶನದ ಒಡವೆಯಾಗಿ ಕಾಣಿಸುವುದರಿಂದಲೋ ಏನೋ, ಹೆಚ್ಚಿನ ಗುಡಿಗಳು ಸಂತೆಗಳಾಗಿವೆ. ಮನಸ್ಸಿಗೆ ಮುಖ್ಯ ಬೇಕಾಗಿರುವ ಶಾಂತಿಯನ್ನು ಅಂಥ ಸ್ಥಳಗಳಲ್ಲಿ ತಂದುಕೊಳ್ಳುವುದಾದರೂ ಹೇಗೆ? ನಿಸರ್ಗದ ನದಿ, ಕಡಲು, ಬೆಟ್ಟ, ಬಾನುಗಳಲ್ಲಿ ದೊರೆಯುವಷ್ಟು ಶಾಂತಿಯನ್ನು ನಾನು ಗುಡಿಗಳಲ್ಲಿ ಕಂಡಿಲ್ಲ.”

“ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ‘ಮತ’ ಮಾತ್ರ.”

“ಸೋತವನಿಗೆ ತಿರುತಿರುಗಿ ಕೆಲಸ ಮಾಡಲು ಅವಕಾಶವಿದೆ, ಗೆದ್ದವನಿಗೆ ಆ ಕೆಲಸ ಮುಗಿದಂತೆಯೇ. ಎಲ್ಲಿಯ ತನಕ ನಾವು ಕೆಲಸದಲ್ಲಿ ಆಸಕ್ತಿಯನ್ನು ವಹಿಸುತ್ತೇವೋ, ಅದರ ಅವಶ್ಯಕತೆಯನ್ನೂ, ಚೆಲುವನ್ನೂ ಮನಗಾಣುತ್ತೇವೋ, ಅಲ್ಲಿಯ ತನಕ ಕೆಲಸವೇ ಆನಂದ. ಸೋಲು ತಂದು ಕೊಡುವ ವಸ್ತು ಪ್ರಪಂಚದ ಅರಿವೆಂಬುದು ಕೂಡ ಒಂದು ಆನಂದವೇ. ವ್ಯಕ್ತಿಯು ಎಚ್ಚರವುಳ್ಳವನಾದರೆ, ಸೋಲು ದೊರಕಿಸಿಕೊಡುವ ಅನುಭವಗಳೂ ವ್ಯರ್ಥವಾಗವು. ಮುಂದಿನ ಬದುಕಿಗೆ ಅವು ಸಹಾಯ.”

“ನಾವೆಲ್ಲರೂ ಸಂಸಾರ ಸಾಗರದಲ್ಲಿ ನೀರ ಮೇಲಣ ಗುಳ್ಳೆಗಳೇ. ಆ ಗುಳ್ಳೆಗಳಿಗೆ ತಾವು ಏಕೆ ಹಾಗೆ ತೇಲುತ್ತಿದ್ದೇವೆ ಎಂಬುದು ಹೇಗೆ ತಿಳಿಯದೋ, ಹಾಗೆ ನಾವೂ ತೇಲುವವರು; ಒಂದು ದಿನ ಕಾಣಿಸಿ, ಮತ್ತೊಂದು ದಿನ ಇಲ್ಲದಾಗುವವರು. ನಮ್ಮ ವಿಶಾಲ ಭಾರತದ ಇತಿಹಾಸದಲ್ಲಿ ಈಚಿನ ಒಂದೆರೆಡು ಸಾವಿರ ವರ್ಷಗಳಲ್ಲಿ, ತಮ್ಮ ಅಚ್ಚನ್ನು ಊರಿ ಹೋದವರ ಸಂಖ್ಯೆ ಎಷ್ಟಿದ್ದೀತು? ಅಂಥ ಕೆಲವರ ಹೆಸರನ್ನು ಚರಿತ್ರೆಯಲ್ಲಿ ಓದಿದ್ದೇವಾದರೂ, ಅವರ ಪ್ರಭಾವ ನಮ್ಮ ಮೇಲೆ ಎಷ್ಟು ಅಲ್ಪ ಎಂಬುದನ್ನು ನೆನೆಯುವಾಗ, ತಂತಮ್ಮ ವ್ಯಕ್ತಿತ್ವಕ್ಕಾಗಿ ಯಾರೂ ಬೀಗಿ, ನಲಿದಾಡುವ ಕಾರಣವಿಲ್ಲ! ನಮ್ಮ ವ್ಯಕ್ತಿಗತ ಬದುಕು ಎಷ್ಟೇ ಸುಂದರವಾಗಿ ಇಲ್ಲವೆ ಸಾರ್ಥಕವಾಗಿ ನಮಗೆ ಕಾಣಿಸಿದರೂ, ನೀರ ಮೇಲಣ ಗುಳ್ಳೆಗಳು ನಾವು. ತೀರ ಸನಿಯದವರಿಗೆ, ಸಮಕಾಲೀನರಿಗೆ ಗಣ್ಯರೆನಿಸಬಹುದು. ಆ ನಾವು ಅನ್ಯರಿಗೆ ಅಗಣ್ಯರೆನಿಸಬಹುದು.”

ಧನ್ಯವಾದಗಳೊಂದಿಗೆ,

ವಿಮರ್ಶೆಯ ಕೃಪೆ:- ಕಾರಂತರ "ಹುಚ್ಚು ಮನಸ್ಸಿನ ಹತ್ತು ಮುಖಗಳು"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ