ಭಾನುವಾರ, ಜನವರಿ 10, 2021

ಕನ್ನಡ ಭಾಷೆಯ ಇತಿಹಾಸ

ಭಾಷೆಯ ಇತಿಹಾಸ

ಕರ್ನಾಟಕದ ಬಹುಸಂಖ್ಯಾಕರ ಭಾಷೆಯು ಆಗಿರುವುದಲ್ಲದೆ, ಅದನ್ನು ಆಡುವ ಸಾಕಷ್ಟು ಸಂಖ್ಯೆಯ ಜನರು ಕರ್ನಾಟಕದ ನೆರೆಹೊರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿದ್ದಾರೆ. ಆ ಭಾಷೆಯನ್ನಾಡುವ ಒಟ್ಟು 21.7 ಮಿಲಿಯನ್ ಜನಸಂಖ್ಯೆಯಲ್ಲಿ ಶೇಕಡ ಎಂಬತ್ತಾರರಷ್ಟು ಜನ ಕರ್ನಾಟಕದಲ್ಲಿದ್ದಾರೆ. ಕನ್ನಡವನ್ನು ದಕ್ಷಿಣ ಮತ್ತು ಪೂರ್ವಗಳಲ್ಲಿ ಮೂರು ಸಾಹಿತ್ಯ ಸಂಪನ್ನ ದ್ರಾವಿಡ ಭಾಷೆಗಳೂ (ಮಲಯಾಳ, ತಮಿಳು, ತೆಲುಗು) ಪಶ್ಚಿಮದಲ್ಲಿ ಅದೇ ದ್ರಾವಿಡ ವಂಶದ ನಿಗ್ರ್ರಾಂಥಿಕ ಭಾಷೆಗಳಾದ ಕೊಡಗು, ತುಳುಗಳೂ, ಉತ್ತರದಲ್ಲಿ ಇಂಡೋ ಆರ್ಯನ್ ವಂಶದ ಮರಾಠಿ ಭಾಷೆಯೂ ಸುತ್ತುವರೆದಿದೆ. ಇದರಿಂದಾಗಿ, ಕನ್ನಡವು ಆರ್ಯನ್ ಅಂಶಗಳ ತೀವ್ರ ಪ್ರಭಾವಕ್ಕೆ ಒಳಗಾಗಿದ್ದರೂ, ಅದರ ಜೊತೆ ಜೊತೆಗೇ ಶಬ್ದಭಂಡಾರ, ಸಾಹಿತ್ಯಪ್ರಕಾರ ಇವೇ ಮುಂತಾದೆಡೆಗಳಲ್ಲಿ ತನ್ನ `ದ್ರಾವಿಡತನ'ವನ್ನು ಉಳಿಸಿಕೊಳ್ಳುವಂತಾಗಿದೆ.
`ಕನ್ನಡ' ಮತ್ತು `ಕರ್ಣಾಟಕ'ಗಳನ್ನು ಕೆಲವೊಮ್ಮೆ ಸಮಾನಾರ್ಥಕಗಳಾಗಿ ಭಾವಿಸಿರುವುದುಂಟು. ಅವೆರಡೂ ಭಾಷೆಯನ್ನೂ ದೇಶವನ್ನೂ ಸೂಚಿಸುವಂತೆ ಬಳಕೆಯಾಗಿರುವುದು ನಿಜ. ಕನ್ನಡ ನಾಡು/ ಕರ್ನಾಟ ದೇಶ, ಕನ್ನಡ ನುಡಿ/ ಕರ್ನಾಟ ಭಾಷೆ. ಆದರೂ ಅಧಿಕೃತವಾಗಿ ಮತ್ತು ವಾಸ್ತವ ಬಳಕೆಯಲ್ಲಿ `ಕನ್ನಡ'ವು ಭಾಷೆಯನ್ನೂ `ಕರ್ನಾಟಕ' ದೇಶವನ್ನೂ ಸೂಚಿಸುತ್ತದೆ.‍.
`ಕನ್ನಡ', `ಕರ್ನಾಟಕ' ಮಾತುಗಳಿಗೆ ಬಹುಪ್ರಾಚೀನವಾದ ಇತಿಹಾಸವಿದೆ. ಕ್ರಿ.ಪೂ. 3-4ನೇ ಶತಮಾನಗಳಿಗಿಂತ ಹಿಂದಿನ ಮಹಾಭಾರತದಲ್ಲಿ ಒಂದು ರಾಜ್ಯದ ಅಥವಾ ಪ್ರಾಂತದ ಹೆಸರಾಗಿ ಕರ್ನಾಟಕ ಪದವು ಬಳಕೆಯಾಗಿದೆ. (ಆ ಪದಕ್ಕೆ ಎತ್ತರದ ಪ್ರದೇಶ ಎಂಬರ್ಥದ `ಉನ್ನತ್ಯಕ' ಎಂಬ ಪಾಠಾಂತರವೂ ಉಂಟು) ಶಾಸನಗಳಲ್ಲಿ `ಕರ್ನಾಟಕ' ಪದದ ಪ್ರಯೋಗದ ಪ್ರಾಚೀನತೆಯು ಪಶ್ಚಿಮಗಂಗ ದೊರೆ ಭೂವಿಕ್ರಮನ ಬೇಡಪುರ ತಾಮ್ರಶಾಸನಗಳಷ್ಟು (7ನೇ ಶ.) ಹಿಂದಕ್ಕೆ ಹೋಗುತ್ತದೆ.
ನಿಷ್ಪತ್ತಿ
`ಕರ್ನಾಟಕ', `ಕನ್ನಡ' ಪದಗಳ ನಿಷ್ಪತ್ತಿಯ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಬಹುವಿದ್ವಾಂಸರು `ಕರ್ನಾಟಕ'ವು ದೇಶ್ಯಪದವಾದ `ಕನ್ನಡ'ದ (ಅಥವಾ `ಕನ್ನಡ' ಪದದ ಪ್ರಾಚೀನ ರೂಪವೊಂದರ) ಸಂಸ್ಕೃತೀಕರಣವಾಗಿದೆಯೆಂದು ಭಾವಿಸುತ್ತಾರೆ. `ಕರ್ನಾಟ(ಕ)ವು' ಕರ್ + ನಾಟ್ + ಅ + ಕ(ಗ)ವು (ಕಪ್ಪುಮಣ್ಣಿನ ಪ್ರದೇಶ) ಎಂದೂ, ಕರು + ನಾಡು (ಎತ್ತರದ ಪ್ರದೇಶ) ಎಂದೂ ಭಾವಿಸಲಾಗಿದೆ. ದ್ರಾವಿಡ ಭಾಷೆಗಳಲ್ಲಿ ಕನ್ನಡವು ದಕ್ಷಿಣ ದ್ರಾವಿಡವೆಂದು ಕರೆಯುವ ಉಪವರ್ಗಕ್ಕೆ ಸೇರಿದೆ. ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಪದಾದಿಯು ಚ್-/ಸ್-ವ್ಯಂಜನವು ಲೋಪವಾಗುವ ಸಾಧ್ಯತೆಯಿದ್ದು, ಆ ಲಕ್ಷಣವು ತಮಿಳು, ಮಲಯಾಳಗಳಂತೆ ಕನ್ನಡದಲ್ಲೂ ಕಾಣಿಸಿಕೊಂಡಿದೆ. ಕನ್ನಡವು ತನ್ನ ಹಲವು ಶತಮಾನಗಳ ಇತಿಹಾಸದ ಅವಧಿಯಲ್ಲಿ ಹಲವು ಮಾರ್ಪಾಟುಗಳನ್ನು ಹೊಂದಿದೆಯಾದರೂ, ಎಲ್ಲ ದ್ರಾವಿಡ ಭಾಷೆಗಳಿಗೂ ಪಿತೃಸ್ಥಾನದಲ್ಲಿರುವ ಮೂಲದ್ರಾವಿಡದ ಹಲವಾರು ಲಕ್ಷಣಗಳನ್ನು ಉಳಿಸಿಕೊಂಡು ಬಂದಿದೆ. ಆ ಕೆಲವು ಲಕ್ಷಣಗಳು ಉಳಿದ ಭಾಷೆಗಳಲ್ಲಿ ಮರೆಯಾಗಿ ಹೋಗಿರಲೂಬಹುದು. ತಾಲವ್ಯೀಕರಣವನ್ನು ಒಂದು ಉದಾಹರಣೆಯಾಗಿ ನೋಡಬಹುದು. ಸಾಹಿತ್ಯಸಂಪನ್ನ ಭಾಷೆಗಳಾದ ತಮಿಳು, ಮಲಯಾಳ, ತೆಲುಗುಗಳಲ್ಲಿ `ಕ್-' ವ್ಯಂಜನವು `ಚ್-' ಆಗುವ ತಾಲವ್ಯೀಕರಣ ಕ್ರಿಯೆಯು ಕೆಲವು ನಿರ್ದಿಷ್ಟ ಪರಿಸರಗಳಲ್ಲಿ ನಡೆಯುತ್ತದೆ. ಆದರೆ ಕನ್ನಡವು ಎಲ್ಲ ಕಡೆಗೂ `ಕ್-' ವ್ಯಂಜನವನ್ನು ಮಾರ್ಪಡಿಸದೆ ಉಳಿಸಿಕೊಳ್ಳುವುದರಿಂದ, ಮೂಲದ್ರಾವಿಡದ ಕ್ - ವ್ಯಂಜನದ ಪುನಾರಚನೆಯ ಸಂದರ್ಭದಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತದೆ. ಜೊತೆ ಜೊತೆಗೆ, `ಪ್' ವ್ಯಂಜನವು, `ಹ್' ಆಗುವಂತಹ ವಿಶಿಷ್ಟ ಸ್ವ ವ್ಯತ್ಯಾಸಗಳನ್ನೂ ಹೊಂದಿದೆ. ಈ `ಪ್' > `ಹ್' ಸ್ವನ ವ್ಯತ್ಯಾಸವು ಹಳಗನ್ನಡವು ನಡುಗನ್ನಡವಾಗಿ ಬಳಿಕ ಹೊಸಗನ್ನಡವಾಗಿ ವಿಕಾಸ ಹೊಂದುವಲ್ಲಿ ಮುಖ್ಯ ನಿಮಿತ್ತವಾಯಿತೆಂಬುದನ್ನು ಸ್ಮರಿಸಬಹುದು.
ಹಳಗನ್ನಡ
ಕನ್ನಡವು ಎಂದು ತನ್ನ ಪಿತೃಭಾಷೆಯಿಂದ ಕವಲೊಡೆದು ತನ್ನ ಸ್ವತಂತ್ರ ಬದುಕನ್ನು ಆರಂಭಿಸಿತೆಂಬುದನ್ನು ಸುಲಭವಾಗಿ ನಿರ್ಣಯಿಸಲಾಗುವುದಿಲ್ಲ. ಅದು ಬಹುಶಃ ಕ್ರಿ.ಪೂ. 4ನೇ ಶತಮಾನದಲ್ಲೇ ಅಥವಾ ಅದಕ್ಕೆ ಹಿಂದೋ ಮೂಲಭಾಷೆಯಿಂದ ಬೇರ್ಪಟ್ಟು ಸ್ವತಂತ್ರಭಾಷೆಯಾಗಿರಬಹುದು. ಕನ್ನಡ ಭಾಷೆಯ ಪ್ರಾಚೀನತೆಯ ಬಗ್ಗೆ ಮಾತ್ರ ನಾವು ಗಟ್ಟಿ ನೆಲದ ಮೇಲೆ ನಿಂತು ಮಾತನಾಡಬಹುದು. ಡಿ.ಎಲ್. ನರಸಿಂಹಾಚಾರ್ಯರ ಪ್ರಕಾರ, ಕಾಲನಿರ್ಣಯ ಸಾಧ್ಯವಿರುವ ಪ್ರಪ್ರಾಚೀನ ಕನ್ನಡ ಪದವೆಂದರೆ ಕ್ರಿ.ಪೂ. 3ನೇ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಬರುವ `ಇಸಿಲ' ಎಂಬ ಸ್ಥಳನಾಮದ ಹೆಸರು. `ಇಸಿಲ'ವು ನಿಶ್ಚಿತವಾಗಿಯೂ ಕನ್ನಡ ಪದ ಮತ್ತು ಅದು ಬಾಣಪ್ರಯೋಗ ಮಾಡು ಎಂಬರ್ಥದ `ಎಯ್' ಅಥವಾ `ಎಸು' ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. `ಇಸಿಲ ' ಬಾಣ ಬಿಡುವ ಜಾಗ ಅಥವಾ ಕೋಟೆಯಿಂದ ಆವೃತವಾಗಿದ್ದ ಒಂದು ಪಟ್ಟಣವಿರಬೇಕು. ಗೋವಿಂದ ಪೈಯವರು ಹಾಲನ `ಗಾಥಾಸಪ್ತಶತಿ' ಯಲ್ಲಿ (ಕ್ರಿ.ಶ. 1ನೇ ಶ.) ಬರುವ `ಅತ್ತ' (ನೋಡಿ - ಅತ್ತೆ), (ನೋಡಿ - ಹೊಟ್ಟಿ) `ತುಪ್ಪ' ಇದೇ ಮುಂತಾದ ಕನ್ನಡ ಪದಗಳನ್ನು ಗುರುತಿಸಿದ್ದಾರೆ. ಇವೆಲ್ಲವೂ ಕನ್ನಡ ಭಾಷೆಯ ಬಿಡಿ ಬಿಡಿ ಪದಗಳು. ಆದರೆ ಕನ್ನಡದ ಒಂದು ಅಧಿಕೃತ ಸಮಗ್ರ ಪಾಠವು ನಮಗೆ ಮೊದಲು ದೊರಕುವುದು ಸು. ಕ್ರಿ.ಶ. 450ರ ಹಲ್ಮಿಡಿ ಶಾಸನದಲ್ಲಿ. ಆ ಶಾಸನವು ಪಶುಪತಿ ಮತ್ತು ನಾಗ ಎಂಬ ಇಬ್ಷರು ಅಧಿಕಾರಿಗಳು ವಿಜ ಅರಸ ಎಂಬ ಯುದ್ಧವೀರನಿಗೂ, ಆ ವೀರನು ಮತ್ತೆ ಕೆಲವು ಬ್ರಾಹ್ಮಣರಿಗೂ ದತ್ತಿಗಳನ್ನು ಬಿಟ್ಟುಕೊಟ್ಟ ದಾನಗಳನ್ನು ದಾಖಲಿಸುತ್ತದೆ. ಶಾಸನಭಾಷೆಯನ್ನು ಪೂರ್ವದ ಹಳಗನ್ನಡವೆಂದು ಹೆಸರಿಸಲಾಗಿದೆ. ಆದರೆ ಓದುಗರಿಗೆ ಆಶ್ಚರ್ಯವನ್ನುಂಟುಮಾಡುವ ಸಂಗತಿಯೆಂದರೆ ಆ ಹೊತ್ತಿಗಾಗಲೇ ಕನ್ನಡದ ಶಬ್ದಭಂಡಾರ, ಪದರಚನೆ ಮತ್ತು ವಾಕ್ಯರಚನೆಗಳ ಮೇಲೆ ಆಗಿದ್ದ ಸಂಸ್ಕೃತದ ತುಂಬುಪ್ರಭಾವ. `ಪೆತ್ತಜಯನ್' ಎಂಬ ಕಸಿ ಕ್ರಿಯಾಸಮಾಸದಲ್ಲಿ `ಪೆತ್ತ' ಎಂಬ ಕನ್ನಡ ಕ್ರಿಯಾರೂಪದ ಜೊತೆ `ಜಯ' ಎಂಬ ಸಂಸ್ಕೃತ ಪದವು ಸೇರಿಕೊಂಡಿದೆ. ಅದಲ್ಲದೆ, ದ್ರಾವಿಡ ವಾಕ್ಯರಚನೆಗೆ ಹೊರತಾದ ಒಂದು ಕರ್ಮಣಿ ಪ್ರಯೋಗವು ಆಡುಮಾತಾಗಿದ್ದ ಕನ್ನಡವು ರೂಢಗೊಳ್ಳುವ ಮೊದಲೇ ಪಡೆದಿದ್ದ ಸಂಸ್ಕೃತದ ಪ್ರಭಾವಕ್ಕೆ ಒಂದು ಒಳ್ಳೆಯ ನಿದರ್ಶನವಾಗಿದೆ. ಕನ್ನಡ ಭಾಷೆಯ ಒಂದು ಪ್ರಪ್ರಾಚೀನ ಮಾದರಿಯಾಗಿ ಹಲ್ಮಿಡಿ ಶಾಸನದ ಪ್ರಾಮುಖ್ಯವನ್ನು ಎತ್ತಿ ಹೇಳಿದರೆ ಸಾಲದು; ಅದಕ್ಕೆ ಇನ್ನೂ ಹೆಚ್ಚಿನ ಮಹತ್ವವಿದೆ. ಕರ್ನಾಟಕವನ್ನು ಆಳಿದ ಮೊತ್ತ ಮೊದಲ ಕನ್ನಡ ದೊರೆಗಳೆಂದು ಇತಿಹಾಸಕಾರರು ಭಾವಿಸಿರುವ ಕದಂಬರು ಹಾಕಿಸಿರುವ ಆ ಶಾಸನವು ಕ್ರಿ.ಶ. ಐದನೆಯ ಶತಮಾನದಲ್ಲಿ ಕನ್ನಡವು ಪಡೆದುಕೊಳ್ಳುತ್ತಿದ್ದ ಪ್ರಾಮುಖ್ಯವನ್ನೂ ಎತ್ತಿಹೇಳುತ್ತದೆ. ಕದಂಬರಿಗಿಂತ ಮೊದಲು ಕರ್ನಾಟಕವನ್ನು ಆಳುತ್ತಿದ್ದವರ ಅಧಿಕೃತ ಭಾಷೆ ಪ್ರಾಕೃತವಾಗಿತ್ತು. ಕನ್ನಡಿಗರಾಗಿದ್ದ ಕದಂಬರು ಸ್ವತಂತ್ರರಾಜ್ಯವನ್ನು ಸ್ಥಾಪಿಸಿ ಕನ್ನಡವನ್ನು ಆಡಳಿತ ಇತ್ಯಾದಿಗಳಿಗಾಗಿ ಬಳಸಲು ಆರಂಭಿಸಿದ್ದು ಬಹು ಮುಖ್ಯ ಸಂಗತಿ. ಆಡುಭಾಷೆಯಾಗಿದ್ದ ಕನ್ನಡವು ಅವರ ಕಾಲದಲ್ಲಿ ಆಸ್ಥಾನದ ಭಾಷೆಯೂ ಆಯಿತು. ಏಕೆಂದರೆ ಹಲ್ಮಿಡಿ ಶಾಸನದಿಂದ ಆರಂಭಗೊಂಡಂತೆ ದಾನದತ್ತಿಗಳ ವಿಷಯವನ್ನು ಹೇಳುವ ರಾಜಾಜ್ಞೆಗಳ ಘೋಷಣೆಯ ಕನ್ನಡ ಶಾಸನಗಳ ಒಂದು ನಿರಂತರ ಪ್ರವಾಹವೇ ಮುಂದೆ ಹರಿಯಿತು. ಆಡಳಿತ ವಲಯಗಳಲ್ಲಿ ಕನ್ನಡವು ನೆಲೆಗೊಂಡಂತೆ ಅದರ ಅಭಿವ್ಯಕ್ತಿ ಸಾಮರ್ಥ್ಯವೂ ವೃದ್ಧಿಯಾಯಿತು. ಮುಂದೆ, ಚಕ್ರವರ್ತಿಗಳಾದ ಬಾದಾಮಿ ಚಾಲುಕ್ಯರ ಕಾಲದಲ್ಲಿ ಬಹುಶಃ ಕನ್ನಡವು ಪ್ರಪ್ರಥಮವಾಗಿ ಕಲಾತ್ಮಕ ಉದ್ದೇಶಗಳಿಗಾಗಿ ಬಳಕೆಯಾಯಿತು. ಇತಿಹಾಸಕಾರರು ಒಮ್ಮತದಿಂದ ಅಭಿಪ್ರಾಯಪಟ್ಟಿರುವಂತೆ, ಬಾದಾಮಿ ಚಾಲುಕ್ಯರ ಕಾಲದಲ್ಲಿ - ಆರು ಏಳನೆಯ ಶತಮಾನಗಳಲ್ಲಿ `ಕರ್ನಾಟಕ ಸಂಸ್ಕೃತಿ'ಯು ರೂಪುಗೊಂಡಿತು. ಈ ಚಾಲುಕ್ಯರ ರಾಜಾಶ್ರಯದಲ್ಲಿ ಮೊತ್ತಮೊದಲ ಸಾಹಿತ್ಯಕೃತಿಗಳು ರಚನೆಗೊಂಡಿರಬೇಕು. ಸಾಹಿತ್ಯಕ ಮೌಲ್ಯದ ಮೊದಲ ಕನ್ನಡ ಶಾಸನಗಳು ಏಳನೆಯ ಶತಮಾನದಿಂದ ಲಭ್ಯವಾಗುತ್ತವೆ. ಇದು ಕನ್ನಡದಲ್ಲಿ ಸಾಹಿತ್ಯ ಕೃಷಿ ಆರಂಭವಾಗಿದ್ದುದರ ಸ್ಪಷ್ಟ ಪ್ರಬಲಸೂಚನೆ. ಏಕೆಂದರೆ, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಶಾಸನಗಳ ಭಾಷೆಯು ಸಾಹಿತ್ಯಕೃತಿಗಳ ಭಾಷೆ ಶೈಲಿಗಳಿಂದ ರೂಪಿತಗೊಂಡಿದೆ. ಚಾಲುಕ್ಯರ ರಾಜಧಾನಿಯಾದ ಬಾದಾಮಿಯ ಸುತ್ತಮುತ್ತಣ ಪ್ರದೇಶದಲ್ಲಿನ ಕನ್ನಡವು ಶಿಷ್ಟ ಮತ್ತು ರಾಜಾಸ್ಥಾನದ ಭಾಷೆಯಾಗಿ ಪರಿಣಮಿಸಿ, ಆ ಉಪಭಾಷೆಯೇ ಕಾವ್ಯಭಾಷೆಯೂ ಆಗಿ ಪರಿಣಮಿಸಿತು. ಇದು ಎಷ್ಟರ ಮಟ್ಟಿಗೆ ಕನ್ನಡದಲ್ಲಿ ನೆಲೆಯೂರಿತೆಂದರೆ, ಚಾಲುಕ್ಯರ ಕಾಲವಾದ ಮೇಲೆ ಬಂದ ರಾಷ್ಟ್ರಕೂಟರ ಕಾಲದ ಶ್ರೀವಿಜಯನ `ಕವಿರಾಜಮಾರ್ಗ'ದಲ್ಲಿ (ಸು. 850). ತಿರುಳ್ಗನ್ನಡದ ನಾಡು ಎಂಬುದಾಗಿ ಗುರುತಿಸುವಾಗ ಬಾದಾಮಿ, ಪಟ್ಟದಕಲ್ಲು, ಕೊಪ್ಪಳ, ಒಕ್ಕುಂದಗಳ ಮಧ್ಯದ ಪ್ರದೇಶವನ್ನು ಹೆಸರಿಸಲಾಗಿದೆ. ಹತ್ತನೇ ಶತಮಾನದ ಪಂಪ ರನ್ನರೂ ಕೂಡ ಪುಲಿಗೆರೆಯ (ಈಗಿನ ಲಕ್ಷ್ಮೀಶ್ವರದ) ಸುತ್ತಮುತ್ತಣದ ಕನ್ನಡವಷ್ಟೇ ತಮ್ಮ ಕಾವ್ಯಭಾಷೆಯಾಗಿ ಆರಿಸಿಕೊಂಡಿರುವುದನ್ನು ಸ್ಮರಿಸಿದ್ದಾರೆ. ಕನ್ನಡದ ಮೊತ್ತಮೊದಲ ಲಭ್ಯಕೃತಿ `ಕವಿರಾಜಮಾರ್ಗ'ವು ಒಂದು ಅಂಲಕಾರ ಶಾಸ್ತ್ರ ಸಂಬಂಧಿ ಕೃತಿಯಾಗಿದ್ದು `ಹಳಗನ್ನಡ' ದಲ್ಲಿ ರಚಿತವಾಗಿದೆ. ಸು. ಕ್ರಿ. ಶ. 450ರಿಂದ ಸು.800ರ ವರೆಗಿನ ಶಾಸನಭಾಷೆಯನ್ನು `ಪೂರ್ವದ ಹಳಗನ್ನಡ' ವೆಂದು ಕರೆಯುವುದು ರೂಢಿ. ಪೂರ್ವದ ಹಳಗನ್ನಡ ರೂಪಗಳು ಹಳೆಯ ತಮಿಳಿಗೆ ಸಮೀಪವಾಗಿವೆ. ಪೂರ್ವದ ಹಳಗನ್ನಡವೇ ಬದಲಾವಣೆ ಹೊಂದಿ ಹಳಗನ್ನಡವಾಯಿತು. ಪೂರ್ವದ ಹಳಗನ್ನಡಕ್ಕೂ ಹಳಗನ್ನಡಕ್ಕೂ ಹಲವು ಸ್ವನಾತ್ಮಕ ಮತ್ತು ಆಕೃತಿಮಾತ್ಮಕ ಅಂಶಗಳಲ್ಲಿ ವ್ಯತ್ಯಾಸದೆ. ಒಂದು ಉದಾಹರಣೆ ಕೊಡುವುದಾದರೆ, ಘೋಷ ಮೂರ್ಧನ್ಯ ಘರ್ಷ ವ್ಯಂಜನವು (ಇದು ದ್ರಾವಿಡ ಭಾಷೆಗಳಿಗೇ ವಿಶಿಷ್ಟವಾದ ಸ್ವನ) ಪೂರ್ವದ ಹಳಗನ್ನಡದಲ್ಲಿ ಬಳಕೆಯಲ್ಲಿದ್ದುದು, ಹಳಗನ್ನಡ ಕಾಲದ ಹೊತ್ತಿಗೆ ಒಡೆದು ``ಳ್'' ಮತ್ತು ``ರ್'' ಎಂಬ ಸ್ವನಿಮಗಳಲ್ಲಿ ವಿಲೀನ ಹೊಂದುವ ಪ್ರವೃತ್ತಿಯನ್ನು ತೋರುತ್ತದೆ. ಒಂಬತ್ತು ಹತ್ತನೆಯ ಶತಮಾನಗಳಲ್ಲಿ ಕನ್ನಡಕ್ಕೆ ಪ್ರಾಕೃತ, ಸಂಸ್ಕೃತಗಳಿಂದ ಬಹುಸಂಖ್ಯೆಯ ಸ್ವೀಕರಣಗಳು ಹರಿದುಬಂದು ಸೇರಿದವು.
ನಡುಗನ್ನಡ
ಒಂಬತ್ತನೇ ಶತಮಾನದ ಆದಿ ಅಥವಾ ಹತ್ತನೇ ಶತಮಾನದ ಆರಂಭದ ಹೊತ್ತಿಗೆ ಹಳಗನ್ನಡವು ನಡುಗನ್ನಡವಾಗಿ ಬದಲಾವಣೆ ಹೊಂದುವ ಕಾರ್ಯವು ನಡೆದಿತ್ತು. ಹನ್ನೊಂದನೆಯ ಶತಮಾನದಲ್ಲಿ ಆ ಕಾರ್ಯವು ಹೆಚ್ಚು ಕಡಮೆ ಮುಕ್ತಾಯಕ್ಕೆ ಬಂದಿತು. ಈ ಸಂದರ್ಭದಲ್ಲಿ ನಡೆದ ಎರಡು ಸ್ವನಾತ್ಮಕ ವ್ಯತ್ಯಾಸಗಳೆಂದರೇ (1) `ಪ್' ವ್ಯಂಜನವು `ಹ್' ಆಯಿತು. (2) ವ್ಯಂಜನಾಂತ ಪದಗಳೂ ಪ್ರತ್ಯಯಗಳೂ ಸ್ವರಾಂತಗಳಾದುವು. (ಉದಾ : ಪಲ್ >> ಹಲ್ಲು, ಪಾಲ್ >> >>ಹಾಲು). ನಡುಗನ್ನಡವು ಹಳಗನ್ನಡ ಮತ್ತು ಹೊಸಗನ್ನಡಗಳ ಮಧ್ಯದ ಸಂಕ್ರಮಣ ಸ್ಥಿತಿಯೆಂದು ಭಾಷಾವಿಜ್ಞಾನಿಗಳು ಭಾವಿಸುತ್ತಾರೆ. ಹೊಸಗನ್ನಡಕ್ಕೂ ನಡುಗನ್ನಡಕ್ಕೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆಧುನಿಕ ವಿದ್ಯಾವಂತರು ಹೆಚ್ಚು ಶ್ರಮವಿಲ್ಲದೆ ನಡುಗನ್ನಡ ಕೃತಿಗಳನ್ನು (12-19 ಶತಮಾನ) ಅರ್ಥಮಾಡಿಕೊಳ್ಳಬಲ್ಲರು; ಆದರೆ ಅವರು ಹಳಗನ್ನಡ ಕೃತಿಗಳನ್ನು (9-10 ಶತಮಾನ) ಅರ್ಥ ಮಾಡಿಕೊಳ್ಳಲು ಹೆಚ್ಚಿನ ಪರಿಶ್ರಮ ಅಗತ್ಯ.
ಹೊಸಗನ್ನಡ
ಕನ್ನಡವು 19ನೆಯ ಶತಮಾನದಲ್ಲಿ ಇಂಗ್ಲಿಷ್ ಜೊತೆ, ಆ ಮೂಲಕ ಆಧುನಿಕ ನಾಗರಿಕತೆಯ ಜೊತೆ ಸಂಪರ್ಕವನ್ನು ಪಡೆದಂದಿನಿಂದ ಹೊಸಗನ್ನಡದ ಆರಂಭ. ಈಗ ಇರುವ ಆಡುನುಡಿ ಕನ್ನಡದಲ್ಲಿ ನಾಲ್ಕು ಮುಖ್ಯ ಉಪಭಾಷಾ ಪ್ರದೇಶಗಳಿವೆ; ಆ ಒಂದೊಂದು ಉಪಭಾಷೆಯ ಒಳಗೂ ಉಪ-ಉಪಭಾಷಾ ಪ್ರದೇಶಗಳಿವೆ. ಮಂಗಳೂರು ಕನ್ನಡ ಅಥವಾ ಕಡಲತೀರದ ಕನ್ನಡ - ಇದು ವಿಶೇಷವಾಗಿ ತುಳುವಿನಿಂದ, ಸ್ವಲ್ಪಮಟ್ಟಿಗೆ ಮಲಯಾಳದಿಂದ ಪ್ರಭಾವಿತವಾಗಿವೆ; ಬೆಂಗಳೂರಿನ ಅಥವಾ ದಕ್ಷಿಣ ಭಾಗದ ಕನ್ನಡ ಉಪಭಾಷೆಗಳಲ್ಲೆಲ್ಲ ಇದು ಅತ್ಯಂತ ಮುಖ್ಯವಾದುದು; ಅದಕ್ಕೆ ಕಾರಣ ಇದು ರಾಜಧಾನಿಯ ಭಾಷೆಯಾಗಿರುವುದು. ಇದನ್ನೇ ವೃತ್ತಪತ್ರಿಕೆಗಳಲ್ಲಿ, ಆಕಾಶವಾಣಿ ದೂರದರ್ಶನಗಳಲ್ಲಿ ಬಳಸುವುದು. ಬೆಂಗಳೂರು ಕನ್ನಡದಲ್ಲಿ ಇಂಗ್ಲಿಷ್ ಪದಗಳ ಬಳಕೆ ಹೆಚ್ಚು. ಧಾರವಾಡದ ಅಥವಾ ಉತ್ತರದ ಕನ್ನಡ - ಇದರ ಮೇಲೆ ವಿಶೇಷವಾಗಿ ಮರಾಠಿ ಭಾಷೆಯ ಪ್ರಭಾವವಿದೆ; ಗುಲ್ಬರ್ಗದ ಕನ್ನಡ ಇದರ ಮೇಲೆ ವಿಶೇಷವಾಗಿ ಉರ್ದು ಪ್ರಭಾವವಿದೆ; ಈ ನಾಲ್ಕು ಭಾಷಿಕ ಪ್ರಭೇದಗಳಲ್ಲಿ ಬೆಂಗಳೂರು ಕನ್ನಡವು ಒಂದು ರೀತಿ ಎಲ್ಲ ಕಡೆ ಸಲ್ಲುವ ಭಾಷೆಯಾದರೂ ಆಯಾ ಪ್ರದೇಶಗಳ ಸಾಹಿತಿಗಳು ತಮ್ಮ ಕೃತಿಗಳಲ್ಲಿ - ಅದರಲ್ಲೂ ಸೃಜನಾತ್ಮಕ ಬರಹಗಳಲ್ಲಿ ತಮ್ಮ ಪ್ರದೇಶದ ಆಡುನುಡಿಯನ್ನು ಬಳಸಲು ಬಯಸುತ್ತಾರೆ. ಮತ್ತು ಪ್ರಾದೇಶಿಕ ಭಾಷೆಯ ಬಳಕೆಯು ಒಂದು ಸಾಹಿತ್ಯ ಕೃತಿಯನ್ನು ಅರ್ಥಮಾಡಿಕೊಳ್ಳಲು ಅಡ್ಡಿಯಾಗಿಲ್ಲ. ಇಷ್ಟಾದರೂ ಉಳಿದ ಭಾಷಾ ಪ್ರಭೇದಗಳ ಮೇಲೆ ಬೆಂಗಳೂರು ಕನ್ನಡದ ಪ್ರಭಾವವು ಅಪರಿಮಿತವಾಗಿದೆ. ಉಪಭಾಷಿಕ ವ್ಯತ್ಯಾಸಗಳು ದಿನದಿಂದ ದಿನಕ್ಕೆ ಕಡಿಮೆಯಾಗುವಲ್ಲಿ ಪ್ರಭಾವಶಾಲಿ ಪ್ರಸಾರಮಾಧ್ಯಮಗಳ ಪಾತ್ರವು ಮುಖ್ಯವಾದುವೇ ಆಗಿದೆ. ಮತ್ತು ಜನಕ್ಕೆ ಅರಿವಿಲ್ಲದೆಯೇ ಒಂದು ಸಮಾನ ಶಿಷ್ಟಭಾಷೆಯು ರೂಪುಗೊಳ್ಳುತ್ತಿದೆ.
ಲಿಪಿ
ಕನ್ನಡ ಲಿಪಿಗೂ ತೆಲುಗು ಲಿಪಿಗೂ ಅಂತಹ ಹೆಚ್ಚು ವ್ಯತ್ಯಾಸಗಳೇ ಇಲ್ಲ; ಹಾಗೆ ನೋಡಿದರೆ ವಿಜಯನಗರ ಕಾಲದವರೆಗೆ (16ನೇ ಶ.) ಅವೆರಡೂ ಒಂದೇ ಆಗಿದ್ದವು. ಕನ್ನಡ ಲಿಪಿಯು ಅಶೋಕನ ಬ್ರಾಹ್ಮೀಲಿಪಿಯ (ಕ್ರಿ.ಪೂ.3ನೇ ಶ.) ದಕ್ಷಿಣ ಪ್ರಭೇದದಿಂದ ಹುಟ್ಟಿ ಬಂದಿದೆ. ಬ್ರಾಹ್ಮೀಲಿಪಿಯ ಚಿಹ್ನೆಗಳು ಹೆಚ್ಚು ರೇಖಾತ್ಮಕವಾಗಿದ್ದು, ದಕ್ಷಿಣದಲ್ಲಿ ಬರೆಯಲು ತಾಳವೃಕ್ಷದ ಎಲೆಗಳನ್ನು ಬಳಸುತ್ತಿದ್ದುದು ಕಾರಣವಾಗಿ ಹೆಚ್ಚು ಹೆಚ್ಚು ಗುಂಡಗಾಗುತ್ತ ಬಂದುದೇ ಕನ್ನಡ - ತೆಲುಗು ಲಿಪಿಯು ತನ್ನ ರೂಪವನ್ನು ಪಡೆದುಕೊಳ್ಳಲು ಕಾರಣ. ಈಗಿನ ಲಿಪಿಯು ಕಲ್ಯಾಣ ಚಾಲುಕ್ಯರ ಮತ್ತು ಹೊಯ್ಸಳರ ಕಾಲದಲ್ಲಿ (11-12ನೇ ಶ.) ರೂಪುಗೊಂಡಿತು. ಅಂದಿನಿಂದ ಇಂದಿನವರೆಗೆ ಲಿಪಿಯು ಸಣ್ಣ ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿದೆ. 19ನೇ ಶತಮಾನದಲ್ಲಿ ಮುದ್ರಣ ಯಂತ್ರದಿಂದಾಗಿ ಕನ್ನಡ ಲಿಪಿಯ ಚಿಹ್ನೆಗಳಲ್ಲಿ ಹಲವು ವ್ಯತ್ಯಾಸಗಳು ಕಾಣಿಸಿಕೊಂಡವು.
ಸ್ವರವ್ಯವಸ್ಥೆ
ಸಾಂಪ್ರದಾಯಿಕ ಆಧುನಿಕ ಕನ್ನಡ ಲಿಪಿಯಲ್ಲಿ ಐವತ್ತು `ಅಕ್ಷರ'ಗಳಿವೆ. ಇವುಗಳಲ್ಲಿ ಹದಿನಾರು ಸ್ವರಗಳು. ಮೂವತ್ತನಾಲ್ಕು ವ್ಯಂಜನಗಳನ್ನು ಮತ್ತೆ `ವರ್ಗೀಯ' ಎಂದು (25), `ಅವರ್ಗೀಯ' (9) ಎಂದು ವರ್ಗೀಕರಿಸಿದೆ. ಸ್ವರಗಳಲ್ಲಿ `ಮಾನಸ್ವರ' ಎಂದು ಭಾಷಾವಿಜ್ಞಾನಿಗಳು ಕರೆಯುವ ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಔ ಗಳೂ, ಐ ಔ ಎಂಬ ಎರಡು ಸಂಧ್ಯಕ್ಷರಗಳೂ ಋ ಋೂ ಎಂಬ ಎರಡು ಅರೆಸ್ವರಗಳೂ ಸೇರಿವೆ. ಇನ್ನೆರಡು ವಾಸ್ತವವಾಗಿ ಸ್ವರಗಳಲ್ಲ, ವ್ಯಂಜನಗಳು, ಸೊನ್ನೆ ಆಕಾರದ `ಬಿಂದು'ವನ್ನು ವರ್ಗೀಯ ವ್ಯಂಜನದ ಹಿಂದಿನ ಅನುನಾಸಿಕವನ್ನು ಸೂಚಿಸಲಿಕ್ಕೆ ಬಳಸುತ್ತಾರೆ. ವಿಸರ್ಗವು ವಾಸ್ತವವಾಗಿ ಕಾಕಲ್ಯ ಘರ್ಷ ವ್ಯಂಜನ. ವರ್ಗೀಯ ವ್ಯಂಜನಗಳಲ್ಲಿ ಇಪ್ಪತ್ತು ಸ್ಪರ್ಶಗಳೂ ಐದು ಅನುನಾಸಿಕಗಳೂ ಸೇರಿದ್ದು, ಅವನ್ನು ಐದೈದರ ಐದು ವರ್ಗಗಳಾಗಿ ಗುಂಪುಗೂಡಿಸಿವೆ - ಕಂಠ್ಯಗಳು, ತಾಲವ್ಯಗಳು, ಮೂರ್ಧನ್ಯಗಳು, ದಂತ್ಯಗಳು ಮತ್ತು ಉಭಯೋಷ್ಠ್ಯ ಇವೇ ಆ ಐದು ವರ್ಗಗಳು. ಉಳಿದ ವ್ಯಂಜನಗಳನ್ನು ವರ್ಗವಾಗಿ ಸೇರಿಸಲು ಸಾಧ್ಯವಿಲ್ಲವಾದ್ದರಿಂದ ಅವನ್ನು ಅವರ್ಗೀಯವೆಂದು ಕರೆದಿವೆ. ಅವು ಭಿನ್ನ ಭಿನ್ನ ಸ್ಥಾನಗಳಲ್ಲಿ ಹುಟ್ಟತಕ್ಕವು; ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ ಇವೇ ಅವರ್ಗೀಯಗಳು. ಮೂಲದ್ರಾವಿಡದಲ್ಲಿ ಅಘೋಷ ಮತ್ತು ಘೋಷ ಸ್ಪರ್ಶ ವ್ಯಂಜನಗಳು ಉಪಸ್ವನಗಳಾಗಿದ್ದು, ಅವು ಒಂದು ಇನ್ನೊಂದು ಹೊರತುಪಡಿಸಿದ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದುವೆಂದು ಈಗ ಬಹುಮಟ್ಟಿಗೆ ಒಪ್ಪಿತವಾಗಿರುವ ಸಂಗತಿ. ಈ ಲಕ್ಷಣವು ತಕ್ಕಮಟ್ಟಿಗೆ ಇಂದಿಗೂ ತಮಿಳಿನಲ್ಲಿ ಕಾಣಿಸುತ್ತದೆ. ಮೂಲ ದ್ರಾವಿಡದಲ್ಲಿ ಮಹಾಪ್ರಾಣಗಳು ಇರಲಿಲ್ಲ. ಆದರೆ ಕನ್ನಡದ ಕೆಲವು ಐತಿಹಾಸಿಕ ಕಾರಣಗಳಿಂದಾಗಿ, ಹಿಂದಿನಿಂದಲೂ ಅಘೋಷ ಮತ್ತು ಘೋಷ ಸ್ಪರ್ಶಗಳನ್ನು ಸ್ವನಿಮಗಳಾಗಿ ಬಳಸುತ್ತ ಬಂದಿದೆ; ಅಂತೆಯೇ ಅಲ್ಪ ಪ್ರಾಣ ಮಹಾಪ್ರಾಣಗಳನ್ನೂ ಸ್ವನಿಮಗಳಾಗಿ ಬಳಸುತ್ತ ಬಂದಿದೆ. ಆಧುನಿಕ ಕನ್ನಡದಲ್ಲಿ (ಬಹುಶಃ ಹಿಂದೆಯೂ ಹಾಗೆಯೇ) ಅಲ್ಪಪ್ರಾಣ ಮಹಾಪ್ರಾಣಗಳಿಗೆ ಉಚ್ಚಾರದಲ್ಲಿ ವ್ಯತ್ಯಾಸವನ್ನು ಮಾಡುವುದು ವಿದ್ಯೆಯ ನಾಗರಿಕತೆಯ ಸಾಮಾಜಿಕ ಅಂತಸ್ತಿನ ಲಕ್ಷಣಗಳಲ್ಲಿ ಒಂದು. (ಉದಾ: `ದನ', `ಧನ'). ಇಂಗ್ಲಿಷಿನ ಪ್ರಭಾವದಿಂದಾಗಿ, ಆಧುನಿಕ ಕನ್ನಡವು coffee, fine ಇವೇ ಮೊದಲಾದ ಪದಗಳಲ್ಲಿರುವ ದಂತ್ಯೋಷ್ಠ್ಯ ಅಘೋಷ ಘರ್ಷ ವ್ಯಂಜನವಾದ f' ಸ್ವನವನ್ನು ಸ್ವೀಕರಿಸಿ ತನ್ನದನ್ನಾಗಿ ಮಾಡಿಕೊಂಡಿದೆ. ಅದರ ಫಲವಾಗಿ, ಹಿಂದಿನ `ಫ್' ಜಾಗದಲೆಲ್ಲ `f ಬಳಕೆಯಾಗುತ್ತಿದೆ. `ಕಫ' ವನ್ನು (`kafa')ಎಂಬುದಾಗಿ `ಫಲವನ್ನು (`fala') ಎಂಬುದಾಗಿ ಉಚ್ಚರಿಸುವುದು ರೂಢಿಯಾಗುತ್ತಿದೆ. ವ್ಯಂಜನವು ಕ್ರಮೇಣ `ಫ್' ವ್ಯಂಜನವನ್ನು ತಳ್ಳಿ ಅದರ ಜಾಗವನ್ನು ಪೂರ್ತಿ ಆಕ್ರಮಿಸುವ ಸೂಚನೆಗಳಿವೆ. ಹಾಗೆಯೇ, ತಾಲವ್ಯ `ಶ್', ಮೂರ್ಧನ್ಯ `ಷ್' ದಂತ್ಯ `ಸ್' ಇವುಗಳಿಗೆ ಉಚ್ಚಾರ ಬೇಧವನ್ನು ಶಿಷ್ಟ ಭಾಷೆಯಲ್ಲಿ ವ್ಯಕ್ತಪಡಿಸಲಾಗುವುದು; ಈ ಉಚ್ಚಾರ ಭೇದವು ನಾಗರಿಕತೆಯ ಕುರುಹೂ ಹೌದು. ಕನ್ನಡ ಲಿಪಿಯಲ್ಲಿರುವ ಚಿಹ್ನೆಗಳು ಶಿಷ್ಟ ಕನ್ನಡವನ್ನು ಬರೆಯುಲು ಸಾಕು. ಕನ್ನಡ ಲಿಪಿ ವ್ಯವಸ್ಥೆಯು ಸ್ವನಾತ್ಮಕವಾಗಿದೆ - ಎಂದರೆ ಒಂದು ಚಿಹ್ನೆಯು ಒಂದು ನಿರ್ದಿಷ್ಟ ಸ್ವನಕ್ಕೆ ಸಂಕೇತ. ಎಂದರೆ ಯಾವುದೇ ಬರಹವನ್ನು ಓದಲು ಸ್ಪೆಲಿಂಗ್ ತಿಳಿದಿರಬೇಕಿಲ್ಲ. ಇಂಗ್ಲಿಷಿನಲ್ಲಿರುವ ಸ್ಪೆಲಿಂಗ್ ಸಮಸ್ಯೆ ಕನ್ನಡಕ್ಕಿಲ್ಲ. ಆದರೆ ಕನ್ನಡ ಲಿಪಿಯು ಪರಿಪೂರ್ಣ ಸ್ವನಾತ್ಮಕವೆಂದು ಇದರಿಂದ ಅರ್ಥವಾಗುವುದಿಲ್ಲ. ಏಕೆಂದರೆ ಕನ್ನಡದಲ್ಲಿ ವಿರಳವಾಗಿ ಒಂದೇ ಚಿಹ್ನೆಯನ್ನು ಎರಡು ಪ್ರತ್ಯೇಕ ಸ್ವರಗಳನ್ನು ನಿರ್ದೇಶಿಸಲು ಬಳಸುವ ಉದಾಹರಣೆಯಿದೆ. ಉದಾಹರಣೆಗೆ `ತಂದೆ' ಎಂಬ ಬರಹದ ರೂಪವು ಸಂದರ್ಭಾನುಸಾರ ಎರಡು ಭಿನ್ನ ಉಚ್ಚಾರಗಳನ್ನು ಹೇಳಬಹುದು. `ತಂದೆ' (= ಪಿತೃ), `ತಂದೆ' (= ನಾನು ತೆಗೆದುಕೊಂಡು ಬಂದೆ) ಎಂಬರ್ಥದ ಎರಡೂ ಉಚ್ಚಾರದಲ್ಲಿ ಬೇರೆ ಬೇರೆ; ಅರ್ಥ ಬೇರೆ ಬೇರೆ. ಆ ಎರಡೂ ಭಿನ್ನ ಪದಗಳ ಮೊದಲ ಭಿನ್ನ ಸ್ವರಗಳನ್ನು ಬರಹದಲ್ಲಿ ಒಂದೇ ಚಿಹ್ನೆಯ ಮೂಲಕ ತೋರಿಸಲಾಗುತ್ತದೆ.
ವ್ಯಾಕರಣ
ಕನ್ನಡದಲ್ಲಿ ಲಿಂಗ ಮತ್ತು ವಚನಗಳು ಒಂದೇ ಬಗೆಯ ಪ್ರತ್ಯಯದಿಂದ ಸೂಚಿತವಾಗುತ್ತದೆ. ಬುದ್ಧಿ ಇದೆಯೇ ಇಲ್ಲವೇ ಎಂಬುದರ ಮೇಲೆ ಲಿಂಗವು ನಿರ್ಣೀತವಾಗುತ್ತದೆ. ಆಲೋಚಿಸುವ ಶಕ್ತಿಯುಳ್ಳದೆಲ್ಲ ಮಹತ್ ವರ್ಗಕ್ಕೂ ಉಳಿದುವೆಲ್ಲ ಅಮಹತ್ ವರ್ಗಕ್ಕೂ ಸೇರ್ಪಡೆಯಾಗುತ್ತದೆ. ಮಹತ್ ವರ್ಗದಲ್ಲಿ ಮಾತ್ರ ಏಕವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಭೇದಗಳುಂಟು. ಬಹುವಚನದಲ್ಲಿ ಭೇದವಿಲ್ಲ. ಅಮಹತ್ ಬಹುತೇಕ ಎಲ್ಲವೂ ನಪುಂಸಕಲಿಂಗ. ಇದರಿಂದ ಕೆಲವೊಮ್ಮೆ ಸಂಸ್ಕೃತ ಸ್ವೀಕರಣಗಳ ಲಿಂಗದ ವಿಷಯದಲ್ಲಿ ಗೊಂದಲವೇರ್ಪಡುವ ಸಾಧ್ಯತೆಗಳೂ ಇವೆ. ಉದಾಹರಣೆಗೆ, ಸಂಸ್ಕೃತದಲ್ಲಿ `ಸೂರ್ಯ' ಪದವು ಪುಲ್ಲಿಂಗ; ಆದರೆ ಆ ಪದವು ಕನ್ನಡಕ್ಕೆ ಸ್ವೀಕೃತವಾಗಿ ಬಂದಾಗ, ಅದನ್ನು ಪುಲ್ಲಿಂಗದಲ್ಲೂ ಬಳಸಬಹುದು. ನಪುಂಸಕದಲ್ಲೂ ಬಳಸಬಹುದು. ಪುಲ್ಲಿಂಗದಲ್ಲಿ ಏಕೆಂದರೆ ಅದು ಮೂಲತಃ ಸಂಸ್ಕೃತ ಪದ; ನಪುಂಸಕ ಲಿಂಗದಲ್ಲಿ ಏಕೆಂದರೆ ಅದನ್ನು ಸ್ವೀಕರಿಸುವ ಕನ್ನಡ ವ್ಯಾಕರಣದ ಪ್ರಕಾರ ಅದು ಅಮಹತ್ ಪದ, ಆದ್ದರಿಂದ ನಪುಂಸಕಲಿಂಗ. ಸೂರ್ಯ ಅರ್ಥದ `ಹೊತ್ತು' ಎಂಬ ದೇಶ್ಯ ಪದ ಕನ್ನಡದಲ್ಲಿ ನಿಯತವಾಗಿ ನಪುಂಸಕ. ಕನ್ನಡದಲ್ಲಿ ಪ್ರಥಮಾ ವಿಭಕ್ತಿ ಇಲ್ಲ; ಲಿಂಗ/ವಚನ ಸೂಚಕ ಪ್ರತ್ಯಯ ಸಮೇತವಾದ ಪ್ರಕೃತಿರೂಪವೇ ಪ್ರಥಮಾ ವಿಭಕ್ತಿಯಲ್ಲಿ ಬಳಕೆಯಾಗುತ್ತದೆ. ಆ ಭಾಷೆಯಲ್ಲಿ ಸ್ಪಷ್ಟವಾಗಿ ದ್ವಿತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿಗಳಲ್ಲದೆ ಸಹವಿಭಕ್ತಿಗೂ (Sociative case) ಸ್ಪಷ್ಟ ಪ್ರತ್ಯಯಗಳಿವೆ. ತೃತೀಯೆಯನ್ನು ಪಂಚಮಿ ವಿಭಕ್ತಿ ಪ್ರತ್ಯಯದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಲಿಂಗ, ವಚನ ಯಾವುದೇ ಆಗಿದ್ದರೂ ಎಲ್ಲಕ್ಕೂ ಒಂದೇ ಬಗೆಯ ವಿಭಕ್ತಿ ಪ್ರತ್ಯಯಗಳ ಸೇರ್ಪಡೆಯಾಗುತ್ತವೆ. ವಿಭಕ್ತಿ ಪ್ರತ್ಯಯಗಳನ್ನು ಲಿಂಗ ಅಥವಾ ವಚನ ಸೂಚಕ ಪ್ರತ್ಯಯಗಳ ಮೇಲೆ ಹತ್ತಿಸಲಾಗುತ್ತದೆ. ಕರ್ತೃಪದಕ್ಕನುಗುಣವಾದ ಲಿಂಗ ವಚನಗಳನ್ನು ಕ್ರಿಯಾಪದವು ಪಡೆದಿರುತ್ತದೆ. ಧಾತು ಕಾಲಸೂಚಕ ಲಿಂಗ/ವಚನ ಸೂಚಕ ಇದು ಕ್ರಿಯಾಪದದ ರಚನೆ. ಕಾಲ ಇರುವುದು ಎರಡೇ ಭೂತ ಮತ್ತು ಭೂತೇತರ. ವರ್ತಮಾನ ಮತ್ತು ಭವಿಷ್ಯಗಳನ್ನು ಹೇಳಲು ಬಳಕೆಯಾಗುವ ರೂಪ ಒಂದೇ. ಎಲ್ಲ ವಾಕ್ಯರಚನಾತ್ಮಕ ಸಂಬಂಧಗಳನ್ನು ಪ್ರತ್ಯಯಗಳ ಮೂಲಕ ವ್ಯಕ್ತಮಾಡುವುದರಿಂದ, ಇಂಗ್ಲಿಷಿನಲ್ಲಿ ಇರುವ ಪದಾನುಕ್ರಮಣಿಕೆ (Word order) ಕನ್ನಡದಲ್ಲಿಲ್ಲ. ಕನ್ನಡದಲ್ಲಿ ``ರಾಮ ರಾವಣನನ್ನು ಕೊಲ್ಲುತ್ತಾನೆ'' ಎಂಬ ವಾಕ್ಯದಲ್ಲಿನ ಪದಗಳನ್ನು ಯಾವ ಕ್ರಮದಲ್ಲಿ ಬೇಕಾದರೂ ಬರೆಯಬಹುದು. ಸಾಧಾರಣ ಕ್ರಮವೆಂದರೆ ಕರ್ತೃಪದ + ಕರ್ಮಪದ + ಕ್ರಿಯಾಪದ. ಆಡುಮಾತಿನಲ್ಲಿ ಕರ್ತೃ, ಕರ್ಮಪದಗಳು ಸ್ಥಾನಗಳನ್ನು ಬದಲಾಯಿಸಿಕೊಳ್ಳಬಹುದು.
ಶಬ್ದಕೋಶ
ಕನ್ನಡದ ಮೂಲಭೂತ ಶಬ್ದಕೋಶ ದೇಶೀಯ ಅಥವಾ ದ್ರಾವಿಡವೇ ಆಗಿದೆ. ಜೊತೆಗೆ, ಅದು ಇಂಡೋ ಆರ್ಯನ್ನಿಂದದ, ವಿಶೇಷವಾಗಿ ಸಂಸ್ಕೃತದಿಂದ ಬಹುಸಂಖ್ಯೆಯ ಶಬ್ದಗಳನ್ನು ಸ್ವೀಕರಿಸಿದೆ. ಸರಳವಲ್ಲದ ಒಂದು ಕನ್ನಡ ವಾಕ್ಯವನ್ನು ಸಂಸ್ಕೃತದ ಸಹಾಯವಿಲ್ಲದೆ ಬರೆಯಲು ಸಾಧ್ಯವಿಲ್ಲವೆಂಬಷ್ಟು ಮಟ್ಟಿಗೆ ಸ್ವೀಕರಣ ನಡೆದಿದೆ. ಪ್ರಾಚೀನ ವ್ಯಾಕರಣಕಾರರು ಮಾರ್ಪಾಟಿಲ್ಲದೆ ಅಥವಾ ಕನ್ನಡಕ್ಕೆ ಹೊಂದಿಕೊಳ್ಳುವಂತಹ ಮಾರ್ಪಾಟಿನೊಡನೆ ಯಾವುದೇ ಸಂಸ್ಕೃತ ಪದವನ್ನೂ ಸ್ವೀಕರಿಸಲು ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಆದರೆ, ಸಾಹಿತ್ಯ ರಚನೆಗಳಲ್ಲಿ ಸಂಸ್ಕೃತದ ವಿಪರೀತ ಬಳಕೆ ಕಂಡಾಗಲೆಲ್ಲ, ಆ ಪ್ರವೃತ್ತಿಯ ವಿರುದ್ಧವಾಗಿಯೂ ಹಿಂದೆ ಧ್ವನಿಯನ್ನೂ ಎತ್ತಲಾಗಿದೆ. ಸಂಸ್ಕೃತದಂತೆಯೇ ಪ್ರಾಕೃತ, ಮರಾಠಿ, ಹಿಂದೂಸ್ತಾನಿ, ಅರೇಬಿಕ್, ಪೋರ್ಚುಗೀಸ್ ಇವೇ ಮೊದಲಾದ ಭಾಷೆಗಳಿಂದಲೂ ಆಧುನಿಕ ಕಾಲದಲ್ಲಿ ವಿಶೇಷವಾಗಿ ಇಂಗ್ಲಿಷಿನಿಂದಲೂ ಕನ್ನಡವು ಬಹುಸಂಖ್ಯೆಯಲ್ಲಿ ಪದಗಳನ್ನು ಸ್ವೀಕರಿಸಿದೆ. ಕನ್ನಡವು `ಆಧುನೀಕೃತ'ಗೊಳ್ಳಲು ಇಂಗ್ಲಿಷ್ ಬಹುಮಟ್ಟಿಗೆ ಕಾರಣ. ತಾಂತ್ರಿಕ ಅಥವಾ ವೈಜ್ಞಾನಿಕ ಬರಹಗಳಲ್ಲಿ ಇಂಗ್ಲಿಷ್ ಪದಗಳನ್ನು ಇಲ್ಲವೇ ಅನುವಾದಿಸಿ, ಕೆಲವೊಮ್ಮೆ ಅಲ್ಪಮಾರ್ಪಾಟಿನೊಂದಿಗೆ ಸ್ವೀಕರಿಸಲಾಗುತ್ತಿದೆ. ಅನುವಾದ ಮಾಡಿಕೊಳ್ಳುವ ಸಂದರ್ಭದಲ್ಲಿ ಆಗ ಸಂಸ್ಕೃತವು ಅಂತಹ ಪದಗಳನ್ನು ಒದಗಿಸುವ ಒಂದು ದೊಡ್ಡ ಆಕರವಾಗಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ