ಮಂಗಳವಾರ, ಜನವರಿ 19, 2021

IND v/s AUS || ಸರಣಿ ಗೆದ್ದ ಟೀಂ ಇಂಡಿಯಾಕ್ಕೆ 5 ₹ ಕೋಟಿ ಬೋನಸ್ ಘೋಷಿಸಲಾಯ್ತು

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯನ್ನು 2-1ರಿಂದ ಗೆದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡ ಅಜಿಂಕ್ಯ ರಹಾನೆ ನೇತೃತ್ವದ ತಂಡಕ್ಕೆ ಬಿಸಿಸಿಐ ಮಂಗಳವಾರ ₹5 ಕೋಟಿ ಬೋನಸ್‌ ಘೋಷಣೆ ಮಾಡಿದೆ.

ಆಸ್ಟ್ರೇಲಿಯಾ ನೀಡಿದ್ದ 328 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಅದನ್ನು ಯಶಸ್ವಿಯಾಗಿ ಪೂರೈಸಿತು. ಈ ಮೂಲಕ ಬ್ರಿಸ್ಬೆನ್‌ನ ಗಾಬಾದಲ್ಲಿನ ಆಸ್ಟ್ರೇಲಿಯಾದ 32 ವರ್ಷಗಳ ಅಜೇಯ ಓಟವನ್ನು ಅಂತ್ಯಗಾಣಿಸಿತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾಕ್ಕೆ ಬಿಸಿಸಿಐ ಬೋನಸ್‌ ಪ್ರಕಟಿಸಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಕೇವಲ ನಿಮಿಷಗಳ ಅಂತರದಲ್ಲಿ ಬೋನಸ್‌ ಕುರಿತು ಟ್ವೀಟ್ ಮಾಡಿದ್ದಾರೆ.

'ಆಸ್ಟ್ರೇಲಿಯಾಕ್ಕೆ ಹೋಗಿ ಈ ರೀತಿಯಾಗಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಗಮನಾರ್ಹ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ತಂಡಕ್ಕೆ ಬಿಸಿಸಿಐ ₹5 ಕೋಟಿ ಬೋನಸ್ ಘೋಷಿಸುತ್ತಿದೆ. ಈ ಗೆಲುವಿನ ಮೌಲ್ಯ ಯಾವುದೇ ಸಂಖ್ಯೆಯನ್ನು ಮೀರಿದ್ದು. ಟೂರಿಂಗ್ ಪಾರ್ಟಿಯ ಪ್ರತಿಯೊಬ್ಬ ಸದಸ್ಯರಿಗೂ ಶುಭವಾಗಲಿ,' ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.

'ಬಿಸಿಸಿಐ ₹5 ಕೋಟಿಯನ್ನು ತಂಡದ ಬೋನಸ್ ಆಗಿ ಘೋಷಿಸಿದೆ. ಇದು ಭಾರತ ಕ್ರಿಕೆಟ್‌ಗೆ ವಿಶೇಷ ಕ್ಷಣಗಳು. ಇದು ತಂಡದ ಕೌಶಲದ ಅತ್ಯುತ್ತಮ ಪ್ರದರ್ಶನ' ಎಂದು ಜೈ ಶಾ ಟ್ವೀಟ್‌ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ