ಶನಿವಾರ, ಮೇ 29, 2021

ಭಾರತ ರತ್ನ ಸಿ,ಎನ್,ಆರ್,ರಾವ್ ರವರಿಗೆ ಅಂತರಾಷ್ಟ್ರೀಯ "ಇನಿ" ಪ್ರಶಸ್ತಿ

ಬೆಂಗಳೂರು: ನವೀಕರಿಸಬಹುದಾದ ಇಂಧನ ಮೂಲ ಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರ ದಲ್ಲಿ ಮಹತ್ವದ ಸಂಶೋಧನೆಗಾಗಿ ಖ್ಯಾತ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಅಂತರರಾಷ್ಟ್ರೀಯ ‘ಇನಿ’ ( Eni) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿ ಇಂಧನ ಕೇಂದ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋ ಧನೆಯ ನೋಬೆಲ್‌ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ.

ಪ್ರೊ.ರಾವ್‌ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂಲವಾಗಿ ಹೊರಹೊಮ್ಮಿದೆ. ಜಲಜನಕದ ಶೇಖರಣೆ, ದ್ಯುತಿರಸಾಯನ ವಿಜ್ಞಾನ ಮತ್ತು ವಿದ್ಯುದ್ರಸಾಯನ ಕ್ರಿಯೆಯಿಂದಲೂ ಜಲಜನಕ ಉತ್ಪಾದನೆ, ಸೌರಶಕ್ತಿಯಿಂದ ಜಲಜನಕ ಉತ್ಪಾದನೆ ಇವರ ಪ್ರಮುಖ ಸಾಧನೆಗಳಾಗಿವೆ.

ವಿಶೇಷವಾಗಿ ಲೋಹದ ಆಕ್ಸೈಡ್‌, ಕಾರ್ಬನ್‌ ನ್ಯಾನೊ ಟ್ಯೂಬ್‌ಗಳು, ಗ್ರಾಫೇನ್, ಬೊರಾನ್–ನೈಟ್ರೋಜನ್‌–ಕಾರ್ಬನ್‌ ಹೈಬ್ರಿಡ್‌ ವಸ್ತುಗಳು, ಮಾಲಿಬ್ಡಿನಮ್ ಸಲ್ಫೈಡ್‌ ಇವುಗಳನ್ನು ಇಂಧನ ಕ್ಷೇತ್ರದಲ್ಲಿ ಅನ್ವಯಗೊಳಿಸಿದ್ದು ಮಾತ್ರವಲ್ಲದೆ, ಹಸಿರು ಜಲಜನಕ ಉತ್ಪಾದನೆಗೆ ಇವರು ಕೊಡುಗೆ ನೀಡಿದ್ದಾರೆ. ಪ್ರಶಸ್ತಿಯ ಆಯ್ಕೆಗೆ ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ ಎಂದು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.

‘ಈ ಪ್ರಶಸ್ತಿ ಪಡೆದ ಏಷ್ಯಾದ ಮತ್ತು ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆಗೆ ರಾವ್‌ ಪಾತ್ರರಾಗಿದ್ದಾರೆ. ವಿಶೇಷವಾಗಿ ಮುದ್ರಿತ ಚಿನ್ನದ ಪದಕ ಮತ್ತು ನಗದು ಒಳಗೊಂಡ ಈ ಪ್ರಶಸ್ತಿಯನ್ನು ಇಟಲಿಯ ಅಧ್ಯಕ್ಷ ಸರ್ಗಿಯೊ ಮಾಟ್ಟರೆಲ್ಲಾ ಅಕ್ಟೋಬರ್‌ 14 ರಂದು ಪ್ರೊ.ರಾವ್ ಅವರಿಗೆ ಪ್ರದಾನ ಮಾಡಲಿದ್ದಾರೆ’ ಎಂದು ಜವಾಹರ್ ಲಾಲ್ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ