ಶನಿವಾರ, ಮೇ 29, 2021

ವಿಶ್ವ ಋತುಚಕ್ರ ನೈರ್ಮಲ್ಯ ದಿನ (World Menstrual Hygiene Day) ಮೇ-28

ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ


ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ

ಮುಟ್ಟಿನ ನೈರ್ಮಲ್ಯ ದಿನ ಪ್ರಾತಿನಿಧಿಕ

    
World Menstrual Hygiene Day 2021: 2014ರಲ್ಲಿ ಶುರುವಾದ ಈ ಮುಟ್ಟು ನೈರ್ಮಲ್ಯ ದಿನಾಚರಣೆಗೆ ಸಿದ್ಧತೆ 2012ರಿಂದಲೇ ನಡೆದಿತ್ತು. 2013ರಲ್ಲಿ ಈ ವಾಶ್​ ಯುನೈಟೆಡ್ ಎನ್​ಜಿಒ 28ದಿನಗಳ ಸೋಷಿಯಲ್​ ಮೀಡಿಯಾ ಅಭಿಯಾನವನ್ನೂ ನಡೆಸಲಿ

ನಾಳೆ ಮೇ 28, ವಿಶ್ವ ಋತುಚಕ್ರ ನೈರ್ಮಲ್ಯ ದಿನ (Menstrual Hygiene Day). ತಿಂಗಳ ಮುಟ್ಟಿನಲ್ಲಿ ಸ್ವಚ್ಛತೆ ಬಹುಮುಖ್ಯ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಋತುಸ್ರಾವ ಮಹಿಳೆಯರಿಗೆ ಒಂದು ಸಹಜ ಪ್ರಕ್ರಿಯೆ. ಸ್ತ್ರೀತನದ ಪ್ರತೀಕ. ಆದರೆ ಈ ಮೂರ್ನಾಲ್ಕು ದಿನಗಳ ಕಾಲ ದೇಹದ ಸ್ವಚ್ಛತೆಯ ಕಡೆಗೆ ಗಮನಕೊಡಬೇಕು. ಈ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜರ್ಮನ್​ ಮೂಲದ ಎನ್​​ಜಿಒ ವಾಶ್​ ಯುನೈಟೆಡ್​ 2014ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನಾಚರಣೆಯನ್ನು ಶುರು ಮಾಡಿತು.

ಮುಟ್ಟಿನ ನೈರ್ಮಲ್ಯ ದಿನವನ್ನು (Menstrual Hygiene Day) ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಮುಟ್ಟು ಎಂದರೆ ಇಂದಿಗೂ ಒಂದಷ್ಟು ಮೂಢ ನಂಬಿಕೆಗಳು ಇವೆ. ಮುಟ್ಟಿನ ಜತೆಗೆ ಒಂದಷ್ಟು ನಿಷೇಧಗಳು ತಳುಕು ಹಾಕಿಕೊಂಡಿವೆ. ಆ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದೇ ಪರಮ ಉದ್ದೇಶ ಎನ್ನುತ್ತದೆ ಈ ಜರ್ಮನ್​ ಮೂಲದ ಎನ್​ಜಿಒ.

ಮಹಿಳೆಯರು ಮುಟ್ಟಾದ ದಿನಗಳಲ್ಲಿ ತಮ್ಮ ಜನನಾಂಗ ಸೇರಿ ಇಡೀ ದೇಹದ ನೈರ್ಮಲ್ಯ ಕಾಪಾಡಿಕೊಳ್ಳುವುದು ತುಂಬ ಮುಖ್ಯವಾದರೂ ಅದು ಎಲ್ಲ ಸ್ತ್ರೀಯರಿಗೂ ಸಾಧ್ಯವಾಗುವುದಿಲ್ಲ. ಅದೆಷ್ಟೋ ಮಂದಿಗೆ ಮನೆಯಿರುವುದಿಲ್ಲ. ಇದ್ದರೂ ಸಹ ಶೌಚಗೃಹ, ಸ್ವಚ್ಛ ನೀರು ಲಭ್ಯ ಇರುವುದಿಲ್ಲ. ಇನ್ನು ಮುಟ್ಟಿನ ಬಗ್ಗೆ ಮಾತಾಡಲೂ ಮುಜುಗರ ಪಡುವ ಪರಿಸ್ಥಿತಿ ಈಗಲೂ ಇದೆ. ಸ್ಯಾನಿಟರಿ ಪ್ಯಾಡ್​ಗಳನ್ನು ಕೊಳ್ಳಲು ಅನೇಕರಿಗೆ ಹಣ ಇರುವುದಿಲ್ಲ. ಇನ್ನು ಕಾಟನ್​ ಬಟ್ಟೆ ಹಾಕಿದರೂ ಅದನ್ನು ಶುದ್ಧವಾಗಿ ತೊಳೆಯಲು, ಬಿಸಿಲಿಲ್ಲಿ ಒಣಗಿಸಲು ಸಾಧ್ಯವಾಗುವುದಿಲ್ಲ. ಇಂದಿಗೂ ಸಹ ಮಹಿಳೆಯರು ಆ ದಿನಗಳಲ್ಲಿ ಬಳಸುವ ಕಾಟನ್ ಬಟ್ಟೆಯನ್ನು ಹೊರಗೆ ಬಿಸಿಲಲ್ಲಿ ಒಣಗಿಸಲು ನಾಚಿಕೆ ಪಟ್ಟುಕೊಳ್ಳುತ್ತಾರೆ. ಆದರೆ ಈ ಎಲ್ಲ ಮುಜುಗರದಿಂದ ಮಹಿಳೆಯರು ಹೊರಗೆ ಬರಬೇಕು. ಇದು ನೈಸರ್ಗಿಕ ಕ್ರಿಯೆ ಎಂಬುದನ್ನು ಪ್ರತಿ ಮಹಿಳೆ-ಪುರುಷ ಸಮಾಜ ಅರ್ಥ ಮಾಡಿಕೊಳ್ಳಬೇಕು. ಋತುಸ್ರಾವದ ದಿನಗಳಲ್ಲಿ ಆಗುವ ದೈಹಿಕ ಆರೋಗ್ಯದ ಏರುಪೇರು, ಮಾನಸಿಕ ಸ್ಥಿತಿಯ ಏರುಪೇರನ್ನು ಸಂಭಾಳಿಸುವುದು ತೀರ ಸುಲಭದ ಮಾತಲ್ಲ. ಆದರೆ ನೆನಪಿರಲಿ ಮುಟ್ಟಿನ ದಿನಗಳ ಅನೈರ್ಮಲ್ಯ ಅದೆಷ್ಟೋ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮುಜುಗರ ಬೇಡ..ಆ ದಿನಗಳಲ್ಲಿ ಮಹಿಳೆಯರು ತಮ್ಮ ಅವಶ್ಯಕತೆಯನ್ನು ನಾಚಿಕೆ ಬಿಟ್ಟು ಹೇಳಿಕೊಳ್ಳಬೇಕು. ಮಹಿಳೆಯರ ಋತುಸ್ರಾವದ ದಿನಗಳ ಜಾಗೃತಿ.. ಅಗತ್ಯ ಇರುವವರಿಗೆ ಸಹಕಾರ ನೀಡಲು ಅದೆಷ್ಟೋ ಎನ್​ಜಿಒಗಳು ಪ್ರಾರಂಭವಾಗಿವೆ. ಕಡಿಮೆ ಬೆಲೆಯಲ್ಲಿ ಮರುಬಳಕೆ ಮಾಡಬಹುದಾದಂಥ ಸ್ಯಾನಿಟರಿ ಪ್ಯಾಡ್​, ಕಪ್​​ಗಳನ್ನು ತಯಾರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.
ಸೋಷಿಯಲ್ ಮೀಡಿಯಾದಲ್ಲೂ ಅಭಿಯಾನ
2014ರಲ್ಲಿ ಶುರುವಾದ ಈ ಮುಟ್ಟು ನೈರ್ಮಲ್ಯ ದಿನಾಚರಣೆಗೆ ಸಿದ್ಧತೆ 2012ರಿಂದಲೇ ನಡೆದಿತ್ತು. 2013ರಲ್ಲಿ ಈ ವಾಶ್​ ಯುನೈಟೆಡ್ ಎನ್​ಜಿಒ 28ದಿನಗಳ ಸೋಷಿಯಲ್​ ಮೀಡಿಯಾ ಅಭಿಯಾನವನ್ನೂ ನಡೆಸಿತ್ತು. “May #MENSTRAVAGANZA” ಎಂಬ ಹ್ಯಾಷ್​ಟ್ಯಾಗ್​​ನಡಿ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಹಲವು ಟ್ವೀಟ್​​ಗಳು ವೈರಲ್​ ಆಗಿದ್ದವು. ಅದಾದ ಬಳಿಕ 2014ರ ಮೇ 28ರಂದು ಮೊದಲ ಬಾರಿಗೆ ಮುಟ್ಟು ನೈರ್ಮಲ್ಯ ದಿನ ವಿಶ್ವದಾದ್ಯಂತ ಆಚರಣೆಯಾಯಿತು. ಅಂದು ಹಲವು ರ್ಯಾಲಿಗಳು, ಪ್ರದರ್ಶನಗಳು ನಡೆದವು. ಜಾಗೃತಿ ಮೂಡಿಸುವ ಪೋಸ್ಟರ್​ಗಳನ್ನು ಹಿಡಿದು ಮೆರವಣಿಗೆ ಸಾಗಲಾಯಿತು. ಅಲ್ಲಿಂದೀಚೆ ಪ್ರತಿವರ್ಷವೂ ಈ ಆಚರಣೆ ಜಾರಿಯಲ್ಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳು, ಪ್ರಮುಖ ಮಾಧ್ಯಮಗಳು ಇನ್ನಷ್ಟು ಒತ್ತುಕೊಡಬೇಕು. ದುರ್ಬಲ ವರ್ಗದ ಮಹಿಳೆಯರಿಗೆ ಸಹಾಯ ಮಾಡಲು ಹೆಚ್ಚೆಚ್ಚು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂಬುದು ಈ ವಾಶ್​ ಯುನೈಟೆಡ್​​ನ ಆಶಯ.

ಈ ವರ್ಷದ ಥೀಮ್ ಏನು?
ಇನ್ನು ಪ್ರತಿವರ್ಷವೂ ಮುಟ್ಟು ನೈರ್ಮಲ್ಯ ದಿನವನ್ನು ಒಂದೊಂದು ಥೀಮ್​ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷ, ಮುಟ್ಟಿನ ದಿನಗಳ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಹೂಡಿಕೆ ಮತ್ತು ಕ್ರಮಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂಬ ಥೀಮ್​​ನೊಂದಿಗೆ ಆಚರಿಸಲಾಗುತ್ತಿದೆ. ಋತುಸ್ರಾವದ ದಿನಗಳ ಆರೋಗ್ಯ, ಸ್ವಚ್ಛತೆ ಮಹಿಳೆಯರ ಪಾಲಿಗೆ ಆದ್ಯತೆ ಆಗಬೇಕು ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಪ್ರತಿ ಮಹಿಳೆಗೂ ಆ ದಿನಗಳಲ್ಲಿ ಅಗತ್ಯವಾದ ವಸ್ತುಗಳು, ಆರೋಗ್ಯ ಸೌಕರ್ಯಗಳು ಸಿಗುವಂತಾಗಬೇಕು. ಸರ್ಕಾರ, ಸಂಘ-ಸಂಸ್ಥೆಗಳು, ಉಳ್ಳವರು ಈ ನಿಟ್ಟಿನಲ್ಲಿ ಮುಂದಾಗಬೇಕು ಎಂಬುದು ಪ್ರಸಕ್ತ ವರ್ಷದ ಥೀಮ್​ನ ಆಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ