ಶುಕ್ರವಾರ, ಮಾರ್ಚ್ 24, 2017

ದೇವನೂರು ಮಹಾದೇವರ ಕುಸುಮಬಾಲೆಯ ಸಾರಾಂಶ

‘ಕುಸುಮಬಾಲೆ’

ದೇವನೂರು ಮಹಾದೇವ ಅವರ ಕುಸುಮ ಬಾಲೆ ಪ್ರಕಟಗೊಂಡಿದ್ದು 1984 ರಲ್ಲಿ ಆ ವೇಳೆಗೆ ದಲಿತ – ಬಂಡಾಯ ಚಳುವಳಿಗಳು ತನ್ನ ಉನ್ನತಿಯನ್ನು ಹಾಗೆಯೇ ಕ್ವಚಿತ್ತಾಗಿ ಮುಖಹೀನತೆಯನ್ನು ಅನುಭವಿಸಿದ್ದವು. ಈ ಕಾದಂಬರಿಯನ್ನು ಓದುವಾಗ ನಾವು ಯಾವುದೇ ಒಂದು ಸಿದ್ಧಾಂತವನ್ನಾಗಲೀ ಅದರ ಪ್ರಣಾಳಿಕೆಯನ್ನಾಗಲೀ ಹಿನ್ನೆಲೆಯಾಗಿಟ್ಟುಕೊಂಡು ಪ್ರವೇಶ ಮಾಡಿದರೆ ಅದರಿಂದ ಆಗುವ ‘ಪ್ರಯೋಜನ’ , ‘ಅರ್ಥಗಳು’ ದಕ್ಕುವುದು ಕಡಿಮೆ. ಒಂದು ಜೀವಂತ ಕೃತಿ, ಸಿದ್ಧಾಂತಗಳ ಭಾರದಿಂದ ತಪ್ಪಿಸಿಕೊಂಡಾಗ ಮಾತ್ರ ಬಹುಕಾಲ ಬಾಳಬಹುದು. ಆ ಬಗೆಯ ಕಾದಂಬರಿ ಕಾವ್ಯಗಳಲ್ಲಿ ಕುಸುಮಬಾಲೆಯೂ ಒಂದು. ಕಥನ-ಕಾವ್ಯ ಎರಡನ್ನೂ ಅಧ್ವೈತಗೊಳಿಸಿಕೊಂಡ ಕೃತಿ ಇದು. ಹಾಗೆ ನೋಡಿದರೆ ದೇವನೂರು ಮಹಾದೇವರ ಎಲ್ಲಾ ಬರೆಹಗಳೂ ಕಡತಂದ ಸಿದ್ಧಾಂತಗಳ ಭಾರದಿಂದ ತಪ್ಪಿಸಿಕೊಂಡು ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡಿವೆ. ಅವರ ಒಟ್ಟು ಬರಹಲೋಕವು ಮಾನವೀಯ ಸಂಬಂಧಗಳ ಹುಡುಕಾಟವನ್ನೇ ಗರ್ಭೀಕರಿಸಿಕೊಂಡಿದೆ.

ಇದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವ ಭಾಷೆ/ ಶೈಲಿ ಗಳು ಸಾಕಷ್ಟು ಕೆಲಸ ಮಾಡಿವೆ. ಗಧ್ಯಕ್ಕೆ ಅವರು ಕೊಡುವ ರೂಪಕ ಶಕ್ತಿಯೊಳಗೆ ಒಂದು ಜನಾಂಗದ ಸಾಂಸ್ಕೃತಿಕ ಅಸ್ಮಿತೆ ಅಡಗಿದೆ. ಆ ಸಮುದಾಯವನ್ನು ಎದುರುಗೊಳ್ಳುವ ಇತರ ಸಮುದಾಯಗಳ ಪರಿವರ್ತನೆಗೆ ಹಾತೊರೆಯುತ್ತದೆ. ಕಾದಂಬರಿಯ ಪ್ರಾರಂಭದಲ್ಲಿ ಅಲ್ಲಮನ ವಚನವನ್ನು ದೇವನೂರು ಉಧ್ಧರಿಸುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ ಎನ್ನಬಹುದು. ಒಂದು ಮಾನವ ಸಂಬಂಧಗಳ ದೃಷ್ಟಿಯಿಂದ ಎರಡು ಅಲ್ಲಮ ಮೂಲತ ಒಬ್ಬ ಬೆಡಗಿನ ವಚನಕಾರ. ಆತನ ಶೈಲಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಕುಸುಮಬಾಲೆಯ ದೇಶೀ ಭಾಷೆಯ ಗರ್ಭದಲ್ಲಿ ಒಂದು ಬೆಡಗು ಆಡಗಿದೆ. ಆ ದೇಶೀ ಭಾಷೆಯನ್ನು ಸೇರಿಸಿಕೊಂಡ ಬೆಡಗಿನಿಂದಾಗಿ ಸಂವಹನ ತೊಡಕು ಎಂದು ಅನ್ನಿಸಬಹುದು. ಆದರೆ ಇದು ದೇವನೂರು ಅವರ ವಿಶಿಷ್ಟತೆ.

ಈ ಕಾದಂಬರಿ ಪ್ರಪಂಚವು ಎರಡು ಮುಖ್ಯವಾದ ದಿಕ್ಕುಗಳನ್ನು ಒಳಗೊಂಡಿದೆ ಎನ್ನಬಹುದು. ಮುಗ್ಧಲೋಕವೊಂದು ಅನಾವರಣಗೊಂಡಿರುವುದು. ಇಲ್ಲಿ ಮುಗ್ಧ ಎಂಬುದು ದಡ್ಡತನ ಎಂದು ಸ್ವೀಕರಿಸಬಾರದು, ಅದೊಂದು ಬದುಕಿನ ಯಾನ ಮತ್ತು ಇರುವು. ಈ ಲೋಕದಲ್ಲಿ ಅಕ್ಕಮಹಾದೇವಮ್ಮ,  ಕುಸುಮಬಾಲೆ, ಈಕೆಯ ತಮ್ಮ ಪರ್ಸಾದ, ತೂರಮ್ಮ, ಈರಿ, ತನ್ನ ಬದುಕಿನಲ್ಲಿ ಬೀಡಿಗೆ ಹೆಚ್ಚು ಮಹತ್ವ ಕೊಡುವ ಚೆನ್ನನ ಅಪ್ಪ, ಮೇಲುವರ್ಗದವರಿಂದ ಒಡೆತ ತಿನ್ನುವ ಗಾರ್ ಸಿದ್ದಮಾವ , ಹೆಂಗಸರ ಮುಟ್ಟಿನ ಬಟ್ಟೆಗಳನ್ನು ಮಾರುವ ಅನಣಸ ಇವರೆಲ್ಲಾ ಇದ್ದಾರೆ. ಈ ಮುಗ್ಢ ಲೋಕದ ಆಚೆ ಬರುವ ಅಂದರೆ ದಲಿತರನ್ನು ಉಧ್ಧಾರ ಮಾಡಬೇಕೆಂದು ಬರುವ ಗುಂಪು. ಬಹುಶ ದೇವನೂರರ ಶಕ್ತಿ ಅಡಗಿರುವುದು ಮುಗ್ಧ ಲೋಕವನ್ನು ಬಿಚ್ಚಿಡುವುದರಲ್ಲಿ, ಹಾಗೂ ಅದನ್ನು ಕಟ್ಟುವ ರೀತಿಯಲ್ಲಿ. ಇವರ ಬಹುಪಾಲು ಬರಹಗಳಲ್ಲಿ ನಾವು ಕಂಡುಕೊಳ್ಳಬೇಕಾಗಿದ್ದು ದೇಹ ಸಂಬಂಧಗಳ ಸಂಕರಗಳಿಗಿಂತ ಮಾನಸಿಕ ಸಂಬಂಧಗಳ ಸಂಕರಗಳಿಗೆ ಹೆಚ್ಚು ಹಾತೊರೆಯುವುದು. ಹಾಗೆ ನೋಡಿದರೆ ಮೇಲುಜಾತಿಯ ಕುಸುಮ ಮತ್ತು ಹೊಲೆಯರ ಚೆನ್ನರ ದೇಹಗಳು ಒಂದಾದರೂ ಅದು ಯಶಸ್ಸು ಕಂಡಿಲ್ಲ.

ಚನ್ನನ ಗುರುಗಳಾದ ಮಧ್ವಾಚಾರ್ಯರು ಸಾವಿತ್ರಿಯ ದೇಹ ಸಂಕರವನ್ನು ನಿರಾಕರಿಸುತ್ತಾರೆ. ಹಿಂದೂ ಧರ್ಮದ ಸ್ವರೂಪಿಣಿ ಭಗವತಿಯು ಮೊದಮೊದಲು ಅಮಾಸನನ್ನು ಹೊಲೆಯ ಎಂದು ಕರೆದರೂ ಕನಸಲ್ಲಿ ಆತನನ್ನು ಅಪ್ಪಿಕೊಂಡು ಸುಖಿಸುತ್ತಾಳೆ. ಆಂದರೆ ಇಲ್ಲಿ ಒಂದು ತಲೆಮಾರು ಆ ಬಗೆಯ ಸಂಬಂಧಗಳನ್ನು ನಿರಾಕರಿಸಿದರೆ ಮತ್ತೊಂದು ತಲೆಮಾರು ಅಪ್ರಜ್ಞಾಪೂರ್ವಕವಾಗಿಯೇ ಒಪ್ಪಿಕೊಳ್ಳುತ್ತದೆ. ದೇವನೂರರ ಮತ್ತೆ ಸಮಾನತೆಯ ಕನಸು ಯಾವುದು? ಎಂಬ ಪ್ರಶ್ನೆ ಕೇಳಿಕೊಂಡರೆ ಮುಂದುವರೆದ ಸಮುದಾಯಗಳು ದಲಿತ ಜನಾಂಗವನ್ನು ಮಾನಸಿಕವಾಗಿ ಒಪ್ಪಿಕೊಳ್ಳಬೇಕಾಗಿದೆ ಎಂಬುದು. ಮತ್ತೊಂದು ಮುಗ್ಧ ಮನಸ್ಸುಗಳ ಕೊಲೆ ಇವರ ಬರೆಹಗಳಲ್ಲಿ ಗಟ್ಟಿಯಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಹುದೊಡ್ಡ ಉದಾಹರಣೆ ಕುಸುಮಮಾಲೆಯದು. ಚೆನ್ನನ ಸಂಬಂಧದಿಂದ ವಂಚಿತಳಾದ ಈಕೆ ಬದುಕಿದ್ದರೂ ಜೀವಂತ ಶವವಾಗುತ್ತಾಳೆ.

ಕೊಲೆಯೆಂಬುದು ಇವರಿಗೆ ರಕ್ತಪಾತವಲ್ಲ ಬದಲಾಗಿ ಮಾನಸಿಕ ನೆಮ್ಮದಿಯ ನಾಶವೆಂದು ಹೇಳಬಹುದು. ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ ಕಥೆಯಲ್ಲಿ ಎಲ್ಲಿಯೂ ಕೊಲೆಯಾಗದಿದ್ದರೂ ರಂಗಪ್ಪನಿಗೆ ತನ್ನ ವೈಯಕ್ತಿಕ ಬದುಕಿನಲ್ಲಿ ಮಾನಸಿಕವಾಗಿ ಕೊಲೆಯಾಗುತ್ತದೆ. ರಂಗಪ್ಪನ ಮಗನನ್ನು ಮೇಲು ವರ್ಗದವರು ನೀನು ರಾಜ ಅಲ್ಲ ಗೀಜ ಎಂದು ಕರೆದಾಗ ಅವನ ಮನಸ್ಸಿನಲ್ಲಿ ಆಗುವ ಕೊಲೆ, ಒಡಲಾಳದಲ್ಲಿ ಪೋಲಿಸರು ಹುಂಜನನ್ನು ಎತ್ತಿಕೊಂಡಾಗ ಸಾಕವ್ವಳ ಮನದಲ್ಲಿ ಆಗುವ ಕೊಲೆ ಲಚುಮಿಯ ಗಂಡ ಬೀರನ ಮನಸ್ಸಲ್ಲಿ ನಡೆಯುವ ಕೊಲೆಯ ಸ್ವರೂಪಗಳನ್ನು ಬಹಳ ಗಂಭೀರವಾಗಿ ಗಮನಿಸಬೇಕಾಗುತ್ತದೆ.

ದೇವನೂರರ ಕೊಲೆಯ ಪರಿಕಲ್ಪನೆಯನ್ನು ತರುವ ಬಗೆ ಭಿನ್ನವಾದುದು. ಅವರು ಕಟ್ಟುವ ಭಾಷಿಕ ರೂಪದಲ್ಲೇ ಇದು ಅಂತರ್ಗತವಾಗುತ್ತದೆ. ಜತೆಗೆ ಜಮೀನ್ದಾರಿ ಪದ್ದತಿಯನ್ನು ತರುವಾಗ ಕೂಡ ಇದು ವಾಸ್ತವ. ಅವರು ಬಳಸುವ ಭಾಷೆಯ ಅಥವಾ ಗದ್ಯದ ರೂಪಕ ಶಕ್ತಿಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹೋದರೆ ಅದರ ಸಾಂಸ್ಕೃತಿಕ ಪದರುಗಳ ಅರ್ಥಛಾಯೆಯು  ನಮಗೆ ಲಭ್ಯವಾಗುವುದಿಲ್ಲ. ಗಾರ್ ನಿನ್ ಮಾವನ ಪ್ರಸಂಗವು ಇದಕ್ಕೆ ಬಹು ದೊಡ್ಡ ನಿದರ್ಶನ. ಗಾರಸಿದ್ದನ ಮಾತುಗಳ ಗರ್ಭದಲ್ಲೇ ಜಮೀನ್ದಾರಿ ಪದ್ದತಿಯ ತೀವ್ರ ವಿರೋಧವಿದೆ. ವ್ಯಂಗ್ಯದಿಂದ ನಾವು ಜಾರಿಕೊಳ್ಳುವಂತಿಲ್ಲ. ಹಾಗೆ ನೋಡಿದರೆ ‘ಮಾರಿಕೊಂಡವರು’ ಕಥೆಯಲ್ಲಿ ಗೋಚರಿಸುವ ಜಮೀನ್ದಾರಿ ಪಧ್ಧತಿಗೂ ಕುಸುಮಬಾಲೆಯಲ್ಲಿ ಇರುವ ಜಮೀನ್ದಾರಿ ಪದ್ಧತಿಗೂ ಸಾಕಷ್ಟು ಅಂತರಗಳೂ ಇವೆ. ‘ಅಲ್ಲಿ ಕಿಟ್ಟಪ್ಪ ಕೊಟ್ಟಿರುವರಗ್ಗು ಲಚಮೀನ ಕವಿಚಿಕೊಂಡಿದೆ’ ಎಂಬ ಮಾತಿನ ವ್ಯಂಗ್ಯವೂ ಇದನ್ನೇ ಹೇಳುತ್ತದೆ.

ಗಾರ್ ಸಿದ್ದನನ್ನು ಹೊಡೆದಾಗ ದಲಿತ ಸಂಘದ ನಾಗರಾಜು ನೀವು ಪೋಲಿಸರಿಗೆ ಕಂಪ್ಲೇಂಟ್ ಕೊಡಬೇಕಾಗಿತ್ತು ಎಂದಷ್ಟೇ ಹೇಳುತ್ತಾನೆ. ಮುಂದೆ ಕಾದಂಬರಿಯಲ್ಲಿ ದಲಿತ ಸಮುದಾಯಗಳ ಸಂಘಟನೆಗಳು ಎಚ್ಚೆತ್ತು ಕೊಂಡಿರುವುದನ್ನು ಹಾಗು ಅವುಗಳ ಮಿತಿಯೂ ಅನಾವರಣಗೊಂಡಿದೆ. ಕಾದಂಬರಿಯ ಕೊನೆಯ ಭಾಗ ತೀರಾ ವರ್ತಮಾನಕ್ಕೆ ತಿರುಗುತ್ತದೆ. ಕೆಲವು ಪುಟಗಳಲ್ಲಿ ಕೆ. ರಾಮಯ್ಯ, ಕೆ.ಛ ಸಿದ್ದಯ್ಯ, ಸಿದ್ದಲಿಂಗಯ್ಯ, ಕೃಷ್ಣಪ್ಪನವರು ಸೇರಿದಂತೆ ದೇವನೂರು ಮಹಾದೇವರ ಹೆಸರು ಪ್ರಸ್ತಾಪವಾಗುತ್ತದೆ. ಇವರ ಬೌಧ್ಧಿಕತೆಗೂ ಕುರಿಯುನ ಒಳಗೆ ಇರುವ ಜೋತಮ್ಮನಿಗೂ ನಡೆಯುವ ಮುಖಾಮುಖಿಗೆ ಸಾಂಸ್ಕೃತಿಕವಾಗಿ ಸಾಕಷ್ಟು ಮಹತ್ವವಿದೆ. ಕುರಿಯುಯು (ಜೋತಮ್ಮ) ಹೊಲೆಯರನ್ನು ಕುರಿತು ಹಳೆಯ ಕಥೆಯೊಂದನ್ನ ಹೇಳಿದರೂ ಆ ಮಾತುಗಳಲ್ಲಿ ಸಮಕಾಲೀನ ದಲಿತ ಸಂಘಗಳ ವಿಮರ್ಶೆ ಇದೆ. ಈ ಪ್ರಸಂಗ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಈ ಮೆರವಣಿಗೆಯ ಬಗ್ಗೆ ದೇವನೂರರಿಗೆ ಗುಮಾನಿಯೂ ಇದ್ದಂತೆ ಕಾಣುತ್ತದೆ. ಈ ನಡುವೆ ಚನ್ನನ ಕೊಲೆಯ ಸುದ್ದಿ ಅರಿವಾಗದೋಪಾದಿ0ುಲ್ಲಿ ನಡೆದು ಹೋಗುತ್ತದೆ. ಕೊಲೆಯ ಸುದ್ದಿ ನಮಗೆ ಮೊದಲು ಲಭ್ಯವಾಗುವುದು 146 ರ ಪುಟದಲ್ಲಿ ಮತ್ತೆ 162 ನೇ ಪುಟದಲ್ಲಿ ಸಾಬರು ಚನ್ನೆನು ಬೊಂಬಾಯಿಯಲ್ಲಿ ಇದ್ದಾನೆ ಎಂದು ಹೇಳುತ್ತಾರೆ. ಆದರೆ ಭಾಷೆಯಲ್ಲಿ ಆಡಗಿರುವ ಸೂಕ್ಷ್ಮವನ್ನು ಅರ್ಥ ಮಾಡಿಕೊಂಡರೆ ಅವನ ಕೊಲೆ ಆಗಿದೆ. ಆ ಮಾತುಗಳು ಹೀಗಿವೆ. ‘ನಮ್ಮ ಕ್ರಿಯಾ ಒಂದು ಸುದ್ದ ಇದ್ರ ಒಂದಲ್ಲಾ ಒಂಜಿನ ಅವ್ನ ಬತ್ತನಕನಾ. ಸಾಸ್ತ್ರ ಹೇಳವ್ನಾ ರೂಪ್ದಲಿ ಬರಬೌದು….. ದಾಸಯ್ಯನ ರೂಪ್ದಲಿ ಬರಬೌದು ಯಾವ ರೂಪದಲ್ಲಾರೂ ಆಗ್ಲಿ ಕನಾ ಯಾವತಾರೂ ಒಂಜಿನಾರು ಬಂದನಾ ?ಬರ್ದೆ ಸಂಬಂಜ ಅನ್ನೋದಿದು ದೊಡ್ಡದುಕನಾ . . .| ಎಂಬ ಮಾತಿನೊಂದಿಗೆ ಕಾದಂಬರಿಯೂ ಮುಕ್ತಾಯಗೊಳ್ಳುತ್ತದೆ.

ಅತ್ತ ಕುಸುಮಾಳ ಸ್ಥಿತಿಯೂ ಹಾಗೆ ಆಗಿದೆ ನಾಗರಬೆತ್ತದ ಪ್ರಸಂಗದಲ್ಲಿ ಎಲ್ಲಾ ಮಂತ್ರವಾದಿಗಳು ಕುಸುಮಾಳನ್ನು ಮಾನಸಿಕವಾಗಿ ಹಿಂಸೆಗೆ ಗುರುಪಡಿಸುತ್ತಾರೆ. ಅವಳಿಗೆ ಅಗತ್ಯವಾಗಿದ್ದ ಮನೆ ಯಾವ ಬಗೆಯದು ? ಎಂಬ ಪ್ರಶ್ನೆ ಸಹಜವಾಗಿಯೇ ಉಧ್ಬವವಾಗುತ್ತದೆ. ಬಹುಶ ಮಹಾದೇವರು ಎಲ್ಲಾ ಬರೆಹಗಳಲ್ಲಿ ಒಂದು ವಿಶಿಷ್ಟ ಸ್ತ್ರೀ ಸಂವೇದನೆ ಅಡಗಿದೆ, ಅವರು ಧೈರ್ಯವಂತರೂ ಕೂಡಾ. ಈ ಕಾದಂಬರಿಯಲ್ಲಿ ಅಕ್ಕಮಹಾದೇವಮ್ಮ ಗಂಡು ಜಾತಿಗೆ ಎದುರಾಗಿ ಹೋಟೆಲನ್ನು ಇಟ್ಟು ಬದುಕು ಸಾಗಿಸುತ್ತಾಳೆ. ಸಾಕವ್ವ ಎಂಬ ಹೆಸರಿನಲ್ಲೇ ಬದುಕಿನ ದೊಡ್ಡ ರೂಪಕ ಅಡಗಿದೆ. ಅಲ್ಲಮ್ಮನ ವಚನದಂತೆ ಕಾದಂಬರಿಯಲ್ಲಿ ಸಂಬಂಧಗಳ ಲೋಕ ಅಡಗಿದೆ.

ಅಧಿಕಾರ ದಾಹ ತಣಿದರೆ ‘ಗುಣಮುಖ’

ಮಂದ ಬೆಳಕಿನಲ್ಲಿ ಹೆಣಗಳ ರಾಶಿ. ಶವಪರೀಕ್ಷೆ ನಂತರ ನೀಟಾಗಿ ಅವನ್ನು ಕಟ್ಟಿಟ್ಟು ಸಾಲು ಸಾಲಾಗಿ ರಾಶಿ ಹಾಕಲಾಗಿದೆ. ಅಲ್ಲಿ ಆ ದಿಬ್ಬದಲ್ಲಿ, ಇಲ್ಲಿ ಕೆಳಗೆ ಎಲ್ಲೆಲ್ಲೂ ಹೆಣಗಳೇ. ಬದುಕುಳಿದವರನ್ನು ಗಾಲಿ ಕುರ್ಚಿಯಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸಾಗಿಸಲಾಗುತ್ತಿದೆ. ಗೂಬೆ ಕೂಗುತ್ತಿಲ್ಲ. ಆದರೆ ಅವು ಆಳವಾದ ನೋವಿನ ವಿಷಾದವನ್ನು ಹೊರಹೊಮ್ಮಿಸುತ್ತಿವೆಯೇನೋ ಎನ್ನುವ ಭ್ರಮೆ ಉಂಟು ಮಾಡುವ ತಣ್ಣನೆಯ ಹಿನ್ನೆಲೆಯ ಸಂಗೀತ.

ಕ್ರೌರ್ಯವೇ ಮಡುಗಟ್ಟಿದ ಇಂತಹ ದೃಶ್ಯದಿಂದ ‘ಗುಣಮುಖ’ ನಾಟಕ ತೆರೆದುಕೊಳ್ಳುತ್ತದೆ. ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರದ ವಿದ್ಯಾರ್ಥಿಗಳು ಕಲಾಗ್ರಾಮದಲ್ಲಿ ಸಾದರಪಡಿಸಿದ ನಾಟಕ ಇದು. ನಿರ್ದೇಶಕ ಸಿ.ಬಸವಲಿಂಗಯ್ಯ, ಪರಿಕರ ಮತ್ತು ವಸ್ತ್ರಾಲಂಕಾರ ಪ್ರಮೋದ ಶಿಗ್ಗಾಂವ್‌, ರಂಗವಿನ್ಯಾಸ ಶಶಿಧರ ಅಡಪ. ಇನ್ನು ನಾಟಕ ಪಿ.ಲಂಕೇಶರ ‘ಗುಣಮುಖ’. ಇದಂತೂ ಅವರ ಮಾಸ್ಟರ್‌ಪೀಸ್‌.

ಪರ್ಷಿಯಾ ದೇಶದ ನಾದಿರ್‌ಶಾ, ದೆಹಲಿಯ ಸುಲ್ತಾನರನ್ನು ಸೋಲಿಸಿ ಕೆಲಕಾಲ ಆಳ್ವಿಕೆ ನಡೆಸಿದ ಕತೆ ಇದು. ಕ್ರೌರ್ಯ, ಅಟ್ಟಹಾಸ ಮೇರೆ ಮೀರಿದಷ್ಟು ಆಕ್ರಮಣಕಾರ ನಾದಿರ್‌ಶಾನ ಕಾಯಿಲೆ ಹೆಚ್ಚಾಗುತ್ತದೆ. ಗುಣಪಡಿಸಲಾಗದ ಕಾಯಿಲೆಯಿಂದ ಅವನು ನರಳುತ್ತಾನೆ. ಅವನನ್ನು ಸಹಜ ಸ್ಥಿತಿಗೆ ತಂದು, ಅಟ್ಟಹಾಸಕ್ಕೆ ಕಡಿವಾಣ ಹಾಕುವ ಮೂಲಕ ಹಕೀಮ ಅಲಾವಿಖಾನ್ ಅವನನ್ನು ಗುಣಪಡಿಸುತ್ತಾನೆ.

ಎರಡು ತಾಸಿನ ಈ ನಾಟಕಕ್ಕೆ ಮೂರು ದೃಶ್ಯಗಳಿವೆ. ಒಂದೊಂದು ದೃಶ್ಯವೂ ಅರ್ಧಗಂಟೆಗೂ ಅಧಿಕ. ದೆಹಲಿ ದೊರೆಗಳ ಕಾರ್ಯವೈಖರಿಯೇ ಇಲ್ಲಿದೆ, ವಿವರ ಸಮೃದ್ಧಿ ಇದೆ.

ಲಂಕೇಶರ ಸಶಕ್ತ ಸಂಭಾಷಣೆಗಳು ಅದನ್ನೆಲ್ಲ ಕಟ್ಟಿಕೊಡುತ್ತವೆ. ಸಂಭಾಷಣೆ ಬೇಕು ನಿಜ, ಅದು ನಾಟಕದ ಆತ್ಮವೂ ಹೌದು. ಆದರೆ ಸಂಭಾಷಣೆ ಕೇಳಲಷ್ಟೆ ಪ್ರೇಕ್ಷಕ ನಾಟಕಕ್ಕೆ ಬರುವುದಿಲ್ಲ. ಸಂಭಾಷಣೆಯನ್ನೂ ದೃಶ್ಯಗಳಲ್ಲೇ ವೀಕ್ಷಿಸಲು ಬರುತ್ತಾನೆ. ನಾಟಕಕ್ಕೊಬ್ಬ ನಿರ್ದೇಶಕ ಈ ಕಾರಣಕ್ಕೆ ಬೇಕಾಗುತ್ತಾನೆ. ಬಸವಲಿಂಗಯ್ಯ ಅದನ್ನಿಲ್ಲಿ ಸಮರ್ಥವಾಗಿ ಮಾಡಿದ್ದಾರೆ. ನಾದಿರ್‌ಶಾ ಪಾತ್ರವನ್ನು ಇಲ್ಲಿ ಮೂವರು ಮಾಡಿದ್ದಾರೆ.

ಒಂದು ಪಾತ್ರ ಅವನ ಆಕ್ರಮಣಕಾರಿ ಪ್ರವೃತ್ತಿಯನ್ನು ಮಾತುಗಳಿಂದ ಹೊರಗೆಡಹಲು, ಮತ್ತೊಂದು ಪಾತ್ರ ಅವನ ಕಾಯಿಲೆಯ ಸ್ವರೂಪವನ್ನು ಬಿಂಬಿಸಲು, ಇನ್ನೊಂದು ಅವನ ಬಾಹ್ಯರೂಪವನ್ನು ಕಾಣಿಸಲು.

ಗಂಭೀರವಾದ ಸಂಭಾಷಣೆ ಆಲಿಸುತ್ತ ಮುವತ್ತರಿಂದ ನಲವತ್ತು ನಿಮಿಷ ಮೈ ಬಿಗಿಹಿಡಿದು ಕುಳಿತುಕೊಳ್ಳುವುದು ಯಾರಿಗಾದರೂ ಕಷ್ಟವೇ. ಅಲ್ಲಲ್ಲಿ ‘ರಿಲೀಫ್’ (ಬಿಡುಗಡೆ) ಬೇಕು. ನಮಾಜು, ಸುಲ್ತಾನರ ಮೋಜು ಮಸ್ತಿ ಮುಂತಾದ ತುಣುಕುಗಳು ಅಲ್ಲಲ್ಲಿ ಪ್ರೇಕ್ಷಕನ ಬಿಗು ಮೌನಕ್ಕೆ ಬಿಡುಗಡೆ ನೀಡುತ್ತವೆ.

ದೆಹಲಿ ದೊರೆಗಳ ಕ್ರೌರ್ಯ, ಅಟ್ಟಹಾಸ, ಕನಸು, ಸೋಲು, ವಿಷಾದ -ಎಲ್ಲವನ್ನೂ ಸೂಚಿಸಲು ಹಿಂದೂಸ್ತಾನಿ ಸಂಗೀತದ ವಾದ್ಯಗಳು ಮತ್ತು ಆಲಾಪವೇ ಹೆಚ್ಚು ಸೂಕ್ತವೇನೋ ಎನ್ನುವಷ್ಟು ಪರಿಣಾಮಕಾರಿಯಾಗಿ ಮುದ್ರಿತ ಸಂಗೀತವನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ.

ತಬಲಾ ವಾದನವಂತೂ ಸನ್ನಿವೇಶಗಳ ಪರಿಣಾಮ ಹೆಚ್ಚಿಸಿದೆ. ಕ್ರೌರ್ಯ, ವಿಷಾದಕ್ಕೂ ತಬಲಾವೇ ಸಾಥ್! ಕುಳಿತರೆ ಪುಟಿಯುವ ಸೋಫಾ ಮಾದರಿಯ ಹಾಸಿಗೆ, ದಿವಾನರುಗಳ ಮನೆಯ ವಿನ್ಯಾಸ, ನಾದಿರ್‌ಶಾನ ಚಿಕಿತ್ಸೆಗೆ ಇಟ್ಟಿರುವ ತಾಮ್ರದ ಪಾತ್ರೆಗಳು, ಪ್ರೇಕ್ಷಕರು ಆಘ್ರಾಣಿಸುವಂತೆ ದೃಶ್ಯಗಳಲ್ಲಿ ಚೆಲ್ಲುವ ಲೋಬಾನ– ಹೀಗೆ ನಾಟಕದ ಪ್ರತಿಯೊಂದು ಪರಿಕರ, ರಂಗವಿನ್ಯಾಸ ನಾಟಕದ ಪರಿಣಾಮ ಹೆಚ್ಚಿಸಿದೆ. ಪರಿಕರ ಮತ್ತು ವಸ್ತ್ರಾಲಂಕಾರ ಮಾಡಿದ ಪ್ರಮೋದ ಶಿಗ್ಗಾಂವ್‌, ರಂಗವಿನ್ಯಾಸ ಮಾಡಿದ ಶಶಿಧರ ಅಡಪ ಅಭಿನಂದನಾರ್ಹರು.

ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಶಾಖೆಯಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಅಭ್ಯರ್ಥಿಗಳಿಗೂ ಅವಕಾಶ ಇರುವುದರಿಂದ ತೆಲುಗು, ತಮಿಳು ವಿದ್ಯಾರ್ಥಿಗಳೂ ಇಲ್ಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅವರೆಲ್ಲ ಕನ್ನಡ ಕಲಿತಿದ್ದಾರೆ. ಅಂತೆಯೇ ತೆಲಂಗಾಣಗನ್ನಡ, ಆಂಧ್ರಗನ್ನಡ, ತಮಿಳುಗನ್ನಡದ ಸೊಗಸೂ ಇತ್ತು. ಈ ವಿದ್ಯಾರ್ಥಿಗಳು ಕರಾಟೆ, ಯೋಗ, ಕಳರಿಪಯಟ್ಟು, ಕತ್ತಿವರಸೆ ಮುಂತಾದವನ್ನೆಲ್ಲ ಕಲಿಯುತ್ತಿದ್ದಾರೆ.

ಪಾತ್ರಗಳ ಪ್ರವೇಶ ಮತ್ತು ನಿರ್ಗಮನಕ್ಕೆ ನಿರ್ದೇಶಕರು ಆ ಎಲ್ಲ ವಿದ್ಯೆಗಳನ್ನು ಪಾತ್ರಧಾರಿಗಳಿಂದ ಬಳಸಿಕೊಂಡರು. ಕನ್ನಡ ಭಾಷೆಯನ್ನು ನಿರರ್ಗಳವಾಗಿ ಆಡಲಾಗದ ಕೆಲವರು ಕಸರತ್ತಿನ ಮೂಲಕ ತಮ್ಮ ಅಸ್ತಿತ್ವ ಸಾಬೀತು ಮಾಡಿದರು. ಅರ್ಧಗಂಟೆ ಕಾಲ ಹಗ್ಗದ ಮೇಲೆ ನೇತಾಡುವ ಸಾಹಸವೂ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿತು.

ನಿರ್ದೇಶಕರು ಹಾಕಿದ ಗೆರೆಯನ್ನು ದಾಟದ ಪಾತ್ರಗಳು, ಕರಾರುವಕ್ಕಾದ ಚಲನೆಗಳು, ಮಂದ ಬೆಳಕು -ಇವೆಲ್ಲ ಒಂದು ಕ್ಷಣ ಮಣಿಪುರದ ಹೆಸರಾಂತ ನಿರ್ದೇಶಕ ರಥನ್‍ಥಿಯಾಂ ಅವರನ್ನು ನೆನಪಿಸಿದವು. ಅಲ್ಲ, ಇವರು ತಮ್ಮದೇ ಸ್ವಂತಿಕೆ ಹೊಂದಿದ ಕನ್ನಡದ ನಿರ್ದೇಶಕರು.

ಲಂಕೇಶರ ನಾಟಕಗಳ ಪೈಕಿ ಹೆಚ್ಚು ಪ್ರದರ್ಶನ ಕಂಡಿರುವುದರಲ್ಲಿ ‘ಗುಣಮುಖ’ವೂ ಒಂದು. ಹಲವು ನಿರ್ದೇಶಕರು ಇದನ್ನು ತಮ್ಮದೇ ರೀತಿಯಲ್ಲಿ ಕಂಡಿರಿಸಿದ್ದಾರೆ. ತಮ್ಮ ತಮ್ಮ ಶಕ್ತ್ಯಾನುಸಾರ ಹಾಗೂ ತಮ್ಮ ಬಂಡವಾಳದ ಮಿತಿಯಲ್ಲಿ ಮಾಡಿದ್ದಾರೆ.

ನಿರ್ದೇಶಕರ ಪರಿಶ್ರಮ ಅಷ್ಟಾಗಿ ಇರದ ಪ್ರದರ್ಶನಗಳಲ್ಲೂ ಸಂಭಾಷಣೆಯೇ ಪ್ರೇಕ್ಷಕರ ಮನ ಗೆದ್ದದ್ದೂ ಇದೆ. ಹಿಂದಿನ ಹಲವು ನಿರ್ದೇಶಕರಿಗಿಂತ ತುಸು ಭಿನ್ನವಾಗಿ ಬಸವಲಿಂಗಯ್ಯ ಇಲ್ಲಿ ರಂಗದ ಮೇಲೆ ತಂದಿದ್ದಾರೆ. ಶಕ್ತಿಶಾಲಿಯಾದ ಯುವಕರು ಹಾಗೂ ರಾಷ್ಟ್ರೀಯ ನಾಟಕ ಶಾಲೆಯಿಂದ ತಮಗೆ ದೊರೆತ ಅಗತ್ಯ ಸಂಪನ್ಮೂಲವೂ ಅವರ ನೆರವಿಗೆ ಬಂದಿದೆ. 

ಸಾಮಾನ್ಯ ಜ್ಞಾನ (ಪ್ರಥಮಗಳು)

ಶೇಂಗಾ ಹೆಚ್ಚು ಬೆಳೆಯುವ ರಾಜ್ಯ ಯಾವುದು?
ಮಧ್ಯಪ್ರದೇಶ ✔✔
ಸೋಯಾಬಿನ್ಸ್ ಅತಿ ಹೆಚ್ಚು ಬೆಳೆಯುವ ರಾಜ್ಯ?
ಮಧ್ರಪ್ರದೇಶ✔✔
ತೊಗರಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಮಹಾರಾಷ್ಟ್ರ✔✔
ರಬ್ಬರ್ ಅತಿ ಹೆಚ್ಚು ಬೆಳೆಯುವ ರಾಜ್ಯ?
ಕೇರಳ✔
ಕಿತ್ತಳೆ ಅತಿ ಹೆಚ್ಚು ಬೆಳೆಯುವ ರಾಜ್ಯ?
ಕೇರಳಾ, ಮೇಘಾಲಯ, ಮಧ್ಯಪ್ರದೇಶ ✔
ಅಡಿಕೆ ಅತಿ ಹೆಚ್ಚು ಬೆಳೆಯುವ ರಾಜ್ಯ?
ಕರ್ನಾಟಕ ✔✔
ಟೊಮೆಟೋ ಅತಿ ಹೆಚ್ಚು ಬೆಳೆಯುವ ರಾಜ್ಯ? ??
ಆಂದ್ರಪ್ರದೇಶ, ಕರ್ನಾಟಕ, ಓಡಿಸ್ಸಾ✔✔
ದ್ರಾಕ್ಷಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಮಹಾರಾಷ್ಟ್ರ, ಕರ್ನಾಟಕ, ಅಸ್ಸಾಂ ✔✔
ಈರುಳ್ಳಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಬಿಹಾರ✔✔
ಶುಂಠಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಅಸ್ಸಾಂ ✔✔
ಕಲ್ಲಿದ್ದಲು ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಜಾರ್ಖಂಡ್✔✔
ಉಪ್ಪು ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಗುಜರಾತ್ ✔
ತಾಮ್ರ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಆಂಧ್ರಪ್ರದೇಶ✔✔
@KannadaGk
ಕಬ್ಬಿಣ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಓಡಿಸ್ಸಾ✔✔
ಚಿನ್ನ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಕರ್ನಾಟಕ ✔✔
ಎರ್ ಇಂಡಿಯಾ ಸ್ಥಾಪನೆ ಮಾಡಿದವರು ಯಾರು?
ಜೆ.ಅರ್.ಡಿ ಟಾಟಾ. 1932, ದೆಹಲಿ✔✔
ಕೆಂದ್ರಲೋಕ ಸೇವಾ ಅಯೋಗ ಸ್ಥಾಪನೆ ಅದ ವರ್ಷ?
1926 ✔✔
ING vysya bank ಯಾವ ಬ್ಯಾಂಕಿನೊಂದಿಗೆ
ವಿಲೀನವಾಗಿದೆ?
ಕೋಟಕ್ ಮಹಿಂದ್ರ ಬ್ಯಾಂಕ್✔
ಸ್ಯಾಂಸಾಂಗ್ ಯಾವ ದೇಶದ ಕಂಪನಿ?
ದ.ಕೋರಿಯಾ✔
ನೋಕಿಯಾ ಯಾವ ದೇಶದ ಕಂಪನಿ???
ಫಿನ್ ಲ್ಯಾಂಡ್ ✔✔
ಮೊಟೊರೋಲ ಯಾವ ದೇಶದ ಕಂಪನಿ???
ಯು.ಎಸ್.ಎ✔✔✔
ಸೋನಿ ಯಾವ ದೇಶದ ಕಂಪನಿ??
ಜಪಾನ್ ✔✔
ಹೆಚ್.ಟಿ.ಸಿ ಯಾವ ದೇಶದ ಕಂಪನಿ?
ತೈವಾನ್ ✔✔✔
APPLE ಯಾವ ದೇಶದ ಕಂಪನಿ?
ಯು.ಎಸ್.ಎ✔✔
@KannadaGk
2011 ರ ಪ್ರಕಾರ ಭಾರತ ಗ್ರಾಮೀಣ ಜನರ ಶೇ. ವಾರು
ಎಷ್ಟು?
ಗ್ರಾಮಿಣ 68.8%
ನಗರ 31.2% ✔✔✔
2011 ರ ಪ್ರಕಾರ ಅತಿ ಹೆಚ್ಚು ತಲಾದಾಯ
ಹೊಂದಿರುವ ರಾಜ್ಯ
ಗೋವಾ✔✔ 2,00,514/-
ಅತಿ ಹೆಚ್ಚು ಜನಸಂಖ್ಯೆಯ ಬೆಳವಣಿಗೆ
ಹೊಂದಿರುವ ರಾಜ್ಯ?
ಮೇಘಲಾಯ ✔✔ 12.41%
ಅತಿ ಹೆಚ್ಚು ಬಡತನ ಹೊಂದಿರುವ ದೇಶ ಯಾವುದು?
ನೈಜಿರ್✔✔✔
2013-14 ರ ಪ್ರಕಾರ ಭಾರತದ ಸಾರ್ವಜನಿಕ ಸಾಲ ಎಷ್ಟಿದೆ?
44 ಲಕ್ಷದ 86 ಸಾವಿರದ 172 ಕೋಟಿ ರೂ/- ✔✔
ಭಾರತದಲ್ಲಿ ಪ್ರಸ್ತುತ ಎಷ್ಟು ಜಿಲ್ಲೆಗಳು ಇವೆ? ??
676✔✔
ಭಾರತದಲ್ಲಿ ಪ್ರಸ್ತುತ ಎಷ್ಟು ಹಳ್ಳಿಗಳು ಇವೆ? ??
6,38,596✔✔

★ ಅಂಡಮಾನ್ ಮತ್ತು ನಿಕೋಬಾರ್
ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ
ಹೆಸರೇನು ?
— ಟೆನ್ ಡಿಗ್ರಿ ಕಾಲುವೆ.
★ ವಿಕಿ ಲೀಕ್ಸ್ (wiki leaks) ನ ಪ್ರಧಾನ
ಸಂಪಾದಕರ ಹೆಸರೇನು ?
— ಜೂಲಿಯನ್ ಅಸಾಂಜೆ.
★ ಮಾಳ್ವ ಪ್ರಸ್ಥಭೂಮಿಯಲ್ಲಿ ಉಗಮಗೊಳ್ಳುವ
ಗಂಗಾನದಿಯ ಎರಡು ಉಪನದಿಗಳು ಯಾವುವು ?
— ಚಂಪಲ್ ಮತ್ತು ಚೆತ್ವಾ.
★ ಕರ್ನಾಟಕದಲ್ಲಿ ಅಣು ವಿದ್ಯುತ್ ಸ್ಥಾವರಗಳು ಎಷ್ಟಿವೆ ?
— ಒಂದು.
★ ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು
ಹಿಂದೂ ಮಹಾಸಾಗರದಲ್ಲಿದೆ ?
— ಶೇ.20 ರಷ್ಟು.
★ 'ಏಳು ಕಣಿವೆಗಳು' ಎಂಬ ಗ್ರಂಥವು ಯಾವ ಧರ್ಮದ
ಗ್ರಂಥ ?
— ಬಹಾಯಿಯವರು.
★ ಹವಾಮಾನ ಒತ್ತಡವು ಭೂಮಿಯ ಮೇಲಿನ ಗಾಳಿಯ
ಒತ್ತಡವನ್ನು ಅವಲಂಬಿಸಿರುತ್ತದೆ. ಹಾಗಾದರೆ ನಿರ್ದಿಷ್ಟ
ಸಮುದ್ರ ಮಟ್ಟದ ಒತ್ತಡವೆಷ್ಟು ?
— 1 ಎಟಿಯಂ.
★ ಮಹಾತ್ಮಾ ಗಾಂಧಿಯವರ ಬರವಣಿಗೆಗಳ ಮುದ್ರಣ ಹಕ್ಕು
ಇವರಲ್ಲಿದೆ.
— ನವಜೀವನ ನಿಕ್ಷೇಪ.
★ ಒಂದು ಚದರ ಕಿ.ಮೀ ಗೆ ಎಷ್ಟು ಹೆಕ್ಟೇರ್
ಆಗುತ್ತದೆ ?
—100 ಹೆಕ್ಟೇರ್.
★ 'ಕದಳಿಗರ್ಭಶಾಮಂ' ಎಂದು ತನ್ನ ಬಗ್ಗೆ
ಹೇಳಿಕೊಂಡ ಕವಿ ಯಾರು ?
— ಪಂಪ.
★ ಯಾವುದರ ಉತ್ತತ್ತಿಯಿಂದ ಎಲೆಗಳ ಬಣ್ಣ ಹಸಿರು
ಆಗುವುದಕ್ಕೆ ಕಾರಣ ?
— ಕ್ಲೋರೋಫಿಲ್.
★ ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ
ಬಾರಿಗೆ ಪರಿಚಯಿಸಿದವರು ಯಾರು ?
— ಟಿಪ್ಪು ಸುಲ್ತಾನ.
★ ಸ್ಟಾಕ್ ಮಾರುಕಟ್ಟೆಯ ಸಂಧರ್ಭದಲ್ಲಿ IPO ಏನನ್ನು
ಸೂಚಿಸುತ್ತದೆ ?
— Initial Public Offering.
★ ಯಾವ ಏಷ್ಯಾದ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ
ಭಾಷೆಗಳಾಗಿವೆ?
— ಚೈನೀಸ್ ಮತ್ತು ಅರೆಬಿಕ್.
★ 'ಐ, ಔ' ಗಳಿಗೆ ವ್ಯಾಕರಣದಲ್ಲಿ ಏನೆಂದು
ಕರೆಯುತ್ತಾರೆ ?
— ಸಂಧ್ಯಕ್ಷರಗಳು.
★ ಅಂತರ್ರಾಷ್ಟ್ರೀಯ ಡೆಡ್ ಲೈನ್ (Deadline)
ಯಾವ ಸ್ಥಳದಲ್ಲಿದೆ ?
— ಪೆಸಿಫಿಕ್ ಸಾಗರ.
★ ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ
ಯಾವುದು ?
— ಭೂಮಿ.
★ "RDX"( ಆರ್ ಡಿ ಎಕ್ಸ್) ನ ರಾಸಾಯನಿಕ ನಾಮವೇನು ?
— ಸೈಕ್ಲೋಟ್ರೈಮೆತಿಲೀನ್ ಟ್ರೈನೈಟ್ರಮೀನ್.
★ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ
ಅಧಿನಿಯಮ (NREGA) ವನ್ನು ಮೊತ್ತ
ಮೊದಲಿಗೆ ಜಾರಿಗೆ ತಂದ ಸಮ್ಮಿಶ್ರ ಸರ್ಕಾರ
ಯಾವುದು ?
— ಯುನೈಟೆಡ್ ಪ್ರೊಗ್ರೆಸೀವ್ ಮೈತ್ರಿಕೂಟ
(UPA) - 2004 -2009.
★ ಅಪಾಯದ ಅಂಚಿನಲ್ಲಿರುವ ಏಷ್ಯಾದ
ಸಿಂಹಗಳನ್ನು ಹೊಂದಿರುವ ಭಾರತದ ಏಕೈಕ
ಅಭಯಾರಣ್ಯ ಎಲ್ಲಿದೆ ?
— ಗುಜರಾತ್.
★ ಮೊಸರಿಗೆ ಹುಳಿ ರುಚಿಯನ್ನು
ತಂದುಕೊಡುವುದಕ್ಕೆ ಕಾರಣವಾದ ಜೀವಾಣು
ಯಾವುದು ?
— Lactobacillus bulagaricus.
★ 2011ರ ಹುಲಿಗಳ ಸಂಖ್ಯಾಗಣತಿಯ ಪ್ರಕಾರ ಹುಲಿಗಳ
ಸಂಖ್ಯೆ ಅತ್ಯಂತ ಹೆಚ್ಚಾಗಿರುವ ರಾಜ್ಯ ಯಾವುದು ?
— ಕರ್ನಾಟಕ.
★ ಇತ್ತೀಚೆಗೆ ಕೇಂದ್ರ ಮಾಹಿತಿ ಆಯುಕ್ತರಾಗಿ
ನೇಮಕಗೊಂಡರವರು :
— ಸುಷ್ಮಾ ಸಿಂಗ್.
★ C.N ರಾಮಚಂದ್ರನ್ ಅವರ ಯಾವ ಕೃತಿಗೆ 2013 ನೇ
ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
— ಆಖ್ಯಾನ - ವ್ಯಾಖ್ಯಾನ.
★ ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು
ಯಾವುದು ?
— ಸಿಲಿಕಾನ್ ಕಾರ್ಬೈಡ್.
★ ಇತ್ತೀಚೆಗೆ ವಿವಾದಕ್ಕೊಳಪಟ್ಟ 'The
Hindus An Alternative History' ಪುಸ್ತಕದ ಲೇಖಕಿ :
— ವೆಂಡಿ ಡೋನ್ ಗಿರ್.
★ ನ್ಯಾನೊ (NANO) ವಿಜ್ಞಾನದಲ್ಲಿ ಎಂಟೆಕ್
(M TECH) ಆರಂಭಿಸಿದ ಕರ್ನಾಟಕದ ಮೊದಲ
ವಿಶ್ವವಿದ್ಯಾಲಯ ಯಾವುದು ?
— ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.
★ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ
ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
— ಒರಿಯಾ (ಓರಿಸ್ಸಾ)
★ ಒಂದು ಮೆಗಾಬೈಟ್ (Megabyte) ಕೆಳಗಿನ ಯಾವುದಕ್ಕೆ
ಸಮ ?
— 1024 ಬೈಟ್ ಗಳು (Bytes).
★ ಕರ್ನಾಟಕದಲ್ಲಿ ವಾರ್ಡ್ ಸಭೆಯು ಕನಿಷ್ಠ ಎಷ್ಟು
ತಿಂಗಳಿಗೊಮ್ಮೆ ಕರೆಯಲಾಗುತ್ತದೆ ?
— 6 ತಿಂಗಳು.
★ ಇತ್ತೀಚೆಗೆ 9ನೇ WTO ಶೃಂಗಸಭೆ ನಡೆದದ್ದು
ಎಲ್ಲಿ ?
— ಇಂಡೋನೇಷ್ಯಾ.
★ 'ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡು'
ಎಂಬ ನುಡಿಗಟ್ಟಿನ ಅರ್ಥ ?
— ಸ್ಪಷ್ಟವಾಗಿ ನೋಡು.
★ ವಿಶ್ವದಲ್ಲೇ ಮೊದಲ ಬಾರಿಗೆ ಅಂಧರ
ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು ?
— ಭಾರತ.
★ Email Address ಗಳು ಮತ್ತು ದೂರವಾಣಿ
ಸಂಖ್ಯೆಗಳನ್ನು Microsoft Outlook ಎಲ್ಲಿ
ಸಂಗ್ರಹಿಸುತ್ತದೆ ?
— ಕಾಂಟ್ರ್ಯಾಕ್ಟ್ ಫೋಲ್ಡರ್.
★ ಇತ್ತೀಚೆಗೆ 3ನೇ ಬಾರಿ ಜರ್ಮನಿಯ ಚಾನ್ಸಲರ್ ಅಗಿ
ಆಯ್ಕೆಗೊಂಡವರು :
— ಏಂಜೆಲಾ ಮಾರ್ಕೆಲ್.
★ ಯಾವುದನ್ನು 'ಪ್ರಾಚೀನ ಭಾರತದಹೆಟೆರೋಡಾಕ್ಸ್
(Heterodox) ಚಿಂತನೆ' ಎಂದು ಉದಾಹರಿಸಬಹುದು ?
— ಲೋಕಾಯುತ.
★ ಮಾನವ ಸಂತತಿಗಳ ಅನುವಂಶಿಕ ಗುಣಗಳನ್ನು
ಉತ್ತಮಪಡಿಸುವ ವಿಜ್ಞಾನವನ್ನು ಹೀಗೆ
ಕರೆಯುತ್ತಾರೆ..
— ಯೂಜೆನಿಕ್ಸ್.
★ ಸಲೀಂ ಅಲಿ ಪಕ್ಷಿಧಾಮವು ಯಾವ
ರಾಜ್ಯದಲ್ಲಿದೆ ?
— ಕೇರಳ.
★ 'ಅರ್ಕೈವ್'(ಪತ್ರಗಾರ)(Archive) ಅಂದರೆ ?
— ಕಂಪ್ಯೂಟರಿನ ಹಳೆಯ ಕಡತಗಳ ಉಗ್ರಾಣ.
★ ಪೊಲೀಸರು ಬಳಸುವ
ಆಲ್ಕೋಮೀಟರ್ ನ ಕಾರ್ಯವೇನು ?
— ಉಸಿರಾಟ ವಿಶ್ಲೇಷಣಕ್ಕೆ.
★ ಸತತ 3ನೇ ಬಾರಿ ಮಹಿಳಾ ವಿಶ್ವಕಪ್ ಕಬಡ್ಡಿ
ಪಂದ್ಯವನ್ನು ಗೆದ್ದ ದೇಶ :
— ಭಾರತ. (ನ್ಯೂಜಿಲೆಂಡ್ ದೇಶದ ವಿರುದ್ದ)
★ ದೇಶದ ಮೊದಲ ISI (Indian Statistical
Institute) ಮೆಡಿಕಲ್ ಹಬ್ ಲೋಕಾರ್ಪಣೆ ಮಾಡಿದವರು :
— ಸೊನಿಯಾ ಗಾಂಧಿ.
★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-
ಚೀನಾ ಸಮರದ ಕುರಿತ ರಹಸ್ಯ ಮಾಹಿತಿ
ಹೊಂದಿದ ವರದಿ :
— ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ.
★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-
ಚೀನಾ ಸಮರದ ಕುರಿತ ರಹಸ್ಯ ಮಾಹಿತಿಯ
ವರದಿಯಾದ 'ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ' ಯನ್ನು
ಬಹಿರಂಗ ಪಡಿಸಿದವರು :
— ಆಸ್ಟ್ರೇಲಿಯಾ ಮೂಲದ ಪತ್ರಕರ್ತ ನೆವಿಲ್ ಮ್ಯಾಕ್ಸ್ ವೆಲ್.
★ 'ಸೇವಾಗ್ರಾಮ' ಎಂಬುದು ಯಾರೊಂದಿಗೆ
ಸಂಭಂದಿಸಿದೆ?
— ಮಹಾತ್ಮಾ ಗಾಂಧಿ..

ಸಾಮಾನ್ಯ ಕನ್ನಡ ಪ್ರಶ್ನೆಗಳು

ಸಾಮಾನ್ಯ ಕನ್ನಡ  ಪ್ರಶ್ನೆಗಳು
👌ಕನ್ನಡದ ಪ್ರಸಿದ್ಧ ಕಾದಂಬರಿಗಳು
*ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು
*ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್
*ಪರ್ವ - ಎಸ್.ಎಲ್.ಭೈರಪ್ಪ
*ಕಾಡು-ಶ್ರೀ ಕೃಷ್ಣ ಆಲನಹಳ್ಳಿ

👌 ಕನ್ನಡದ ಪ್ರಸಿದ್ಧ ನಾಟಕಗಳು
*ಬೆರಳ್ ಕೊರಳ್ -ಕುವೆಂಪು
*ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್
*ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್
*ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್
*ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)
*ಅಶ್ವಥಾಮನ್- ಬಿ.ಎಂ.ಶ್ರೀ
*ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ
*ಬಾಳು ಬೆಳಗಿತು-ಅ. ನ. ಕೃ
*ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ
*ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್
*ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕಂಬಾರ
*ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್
*ಮೂಕನ ಮಕ್ಕಳು -ವೈದೇಹಿ (ಜಾನಕಿ)

👌ಸಾಂಗತ್ಯ ಕೃತಿಗಳು
*ಭರತೇಶ ವೈಭವ -ರತ್ನಾಕರವರ್ಣಿ
*ಸೊಬಗಿನ ಸೋನೆ- ದೇವರಾಜ
*ಹದಿಬದೆಯ ಧರ್ಮ - ಸಂಚಿ ಹೊನ್ನಮ್ಮ

👌ಅಲಂಕಾರಿಕ ಗ್ರಂಥಗಳು
*ನಾಟ್ಯಶಾಸ್ತ್ರ -ಭಾರತ
*ಕಾವ್ಯದರ್ಶಿ - ದಂಡಿ
*ಕಾವ್ಯ ಪ್ರಕಾಶ -ಮಮ್ಮಟ
*ಕವಿರಾಜ ಮಾರ್ಗ -ಶ್ರೀ ವಿಜಯ
*ಕಾವ್ಯವಲೋಕನ-ನಾಗವರ್ಮ 2

👌ಚಂಪೂ ಕಾವ್ಯಗಳು
*ಶಾಂತಿ ಪುರಾಣ -ಪೊನ್ನ
*ಧರ್ಮಾಮೃತ-ನಯಸೆನ
*ಗಿರಿಜಾ ಕಲ್ಯಾಣ- ಹರಿಹರ
*ಯಶೋಧರ ಚರಿತೆ -ಜನ್ನ
*ಕಬ್ಬಿಗರ ಕಾವ -ಆಂಡಯ್ಯ

👌 ಛಂದಸ್ಸು ಕೃತಿಗಳು
*ಛಂದೋಬುದಿ-1ನೇ ನಾಗವರ್ಮ
*ಛಂದೋನುಶಾಸನಂ-ಜಯಕೀರ್ತಿ
ಮಾನಸಸೋಲ್ಲಾಸ-2ನೇ ಸೋಮೇಶ್ವರ
ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ

👌ಕನ್ನಡದ ಬಿರುದಾಂಕಿತರು
*ದಾನ ಚಿಂತಾಮಣಿ -ಅತ್ತಿಮಬ್ಬೆ
*ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ
*ಕನ್ನಡದ ಕೋಗಿಲೆ -ಪಿ.ಕಳಿಂಗರಾವ್
*ಕನ್ನಡದ ವರ್ಡ್ಸವರ್ತ್ -ಕುವೆಂಪು
*ಕಾದಂಬರಿ ಸಾರ್ವಭೌಮ-ಅ. ನ.ಕೃ
*ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ
*ಕನ್ನಡದ ದಾಸಯ್ಯ -ಶಾಂತಕವಿ
*ಕಾದಂಬರಿ ಪಿತಾಮಹ -ಗಳಗನಾಥ
ಸಂತ ಕವಿ -ಪು.ತೀ. ನರಸಿಂಹಾಚಾರ್ಯ
*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್
*ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್
*ರಸ ಋಷಿ -ಕುವೆಂಪು
*ದಲಿತ ಕವಿ -ಸಿದ್ದಲಿಂಗಯ್ಯ
*ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ
*ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು

👌ಆತ್ಮ ಕಥೆಗಳು
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ
*ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್
*ನಡೆದು ಬಂದ ದಾರಿ -ಬೇಂದ್ರೆ
*ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ
*ನೆನಪಿನ ದೋಣಿಯಲಿ -ಕುವೆಂಪು
*ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ
*ಪಿ.ಲಂಕೇಶ್-ಹುಳಿ ಮಾವಿನ ಮರ
*ಗುಬ್ಬಿ ವೀರಣ್ಣ -ಕಲೆಯೋ ಕಾಯಕ
*ಕಡಿದಾಳ್ ಮಂಜಪ್ಪ -ನನಸಾಗದ ಕನಸು

👌ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು
*ಕುವೆಂಪು -ಶ್ರೀ ರಾಮಾಯಣ ದರ್ಶನಂ (1955)
*ದ.ರಾ.ಬೇಂದ್ರೆ -ಅರಳು ಮರಳು (1958)
*ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)
*ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ
*ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)

ಗುರುವಾರ, ಮಾರ್ಚ್ 23, 2017

ಭಾರತಿಪುರ ಒಂದು ವಿಮರ್ಶೆ

ಯು.ಆರ್. ಅನಂತಮೂರ್ತಿಯವರ ಭಾರತೀಪುರ

 February 11th, 2013  editor

[ ಮೊದಲು ಓದುಗನಾಗು ]

 

ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ.

ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ ನಾಯಕನ ಬಗ್ಗೆ ಅಸೂಯೆ ಭಾವ ಹೊಂದಿದ್ದು ಅವನ್ನೊಬ್ಬಗೆನೆ ವ್ಯಾಸಂಗ ಮಾಡುತ್ತಿರುತ್ತಾನೆ. ಈ ಮೂವರಲ್ಲಿಯೂ ಸ್ನೇಹವು ಗಾಢವಾಗಿರುತ್ತದೆ.

ಉನ್ನತ ಶಿಕ್ಷಣದ ನಂತರ ‘ಭಾರತೀಪುರಕ್ಕೆ’ ಮರಳಿ ಬಂದಂತಹ ಜಗನ್ನಾಥನಿಗೆ ‘ಭಾರತೀಪುರ’, ಮೌಡ್ಯತೆಯ ಆಗರವಾಗಿ ಕಾಣುತ್ತದೆ. ಶೂದ್ರರ ದೇವ ಭೂತರಾಯ, ಭೂತರಾಯನ ಒಡೆಯ ಮಂಜುನಾಥಸ್ವಾಮಿ ಹೀಗೆ ಮೇಲ್ವರ್ಗದ ಜನಾಂಗ ಶೂದ್ರರನ್ನು ತಮ್ಮ ನಿಯಂತ್ರಣಕ್ಕೆ ಅನಿವಾರ್ಯವಾಗಿ ಒಳಪಡಿಸಿರುತ್ತಾರೆ. ಭಾರತೀಪುರದಲ್ಲಿ ಮಲ ಹೋರುವ ಹೊಲೆಯರಿರದಿದ್ದರೆ ಈ ಪುರವೆಲ್ಲಾ ಕೊಳೆತು ನಾರುತ್ತಿತ್ತೇನೋ ಎನಿಸುತ್ತದೆ. ಹೊಲೆಯರಿಂದಲೇ ಶುದ್ಧವಾಗುವ ಊರು, ಅವರು ಮಂಜುನಾಥ ಸ್ವಾಮಿ ದೇವಾಲಯವನ್ನು ಪ್ರವೇಶಿಸಿದರೆ ಅಪವಿತ್ರವಾಗುವುದಾದರೂ ಹೇಗೆ? ಎಂದು ಯೋಚಿಸುತ್ತಾನೆ. ಬಂಡಾಯದ ಬಗ್ಗೆ ಮಾತನಾಡಿ ಮೆಚ್ಚಿಗೆ ಗಿಟ್ಟಿಸಿದ ಜಗನ್ನಾಥನಿಗೆ ಈ ಭಾರತೀಪುರದಲ್ಲಿ ಸುಧಾರಣೆ ತುರ್ತು ಅಗತ್ಯವಾಗಿ ಕಾಣುತ್ತದೆ.

ಇಡೀ ಕಥೆಯಲ್ಲಿ ಜಗನ್ನಾಥನ ಧ್ಯೇಯ ಒಂದೇ ಹೇಗಾದರೂ ಸಮಾನತೆಯನ್ನು ಸಾಧಿಸಬೇಕು. ಅದಕ್ಕಾಗಿ ಮೊದಲು ಹೊರೆಯರನ್ನು ದೇವಾಲಯಕ್ಕೆ ನುಗ್ಗಿಸಬೇಕು ಎಂಬುದು. ಆದರೆ ತನ್ನ ಮುಖವನ್ನು ತಲೆ ಎತ್ತಿ ನೋಡಲು ಹೆದರುವ ಹೊಲೆಯರು ಈ ಕಾರ್ಯಕ್ಕೆ ಸಿದ್ಧರಾಗುವರೇ? ಎಂದು ಸಂದೇಹಿಸಿ, ಮೊದಲು ಇವರಿಗೆ ಅಕ್ಷರ ಜ್ಞಾನವನ್ನು ನೀಡಬೇಕೆಂದು ತನ್ನನ ಮನೆಯಂಗಳದಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸುತ್ತಾನೆ. ಮಂಜುನಾಥ ಸ್ವಾಮಿಯಜಾತ್ರೆಯ ದಿನದಂದು ಹೊಲೆಯರನ್ನು ದೇವಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿ ಪತ್ರಿಕೆಯಲ್ಲಿಯೂ ಪ್ರಕವಣೆ ನೀಡುತ್ತಾನೆ. ಇದಕ್ಕೆ ಊರಿನವರಿಂದ ಹಾಗೂ ಹೊರಗಿನ ಜನರಿಂದಲೂ ಸಾಕಷ್ಟು ವಿರೋಧ-ಅವಿರೋಧ ಪ್ರತಿಕ್ರಿಯೆಗಳು ಬರುತ್ತದೆ. ನಾಯಕನಿಗೆ ಹೊರಗಿನಿಂದ ಬೆಂಬಲವನ್ನು ನೀಡಬಂದ ವ್ಯಕ್ತಿಗಳು ತಮ್ಮ ಕುಸಿಯುತ್ತಿರುವ ‘ಹಿರೋಯಿಸಮ್’ ನನ್ನು ಎತ್ತಿ ಹಿಡಿಯುವ ಸಲುವಾಗಿ ಜಗನ್ನಾಥನ ಕ್ರಾಂತಿಕಾರ್ಯವನ್ನು ಬಳಸಿಕೊಳ್ಳುವ ಸಂದರ್ಭಗಳು ಮತ್ತು ಆ ಸಂದರ್ಭಗಳಲ್ಲಿನ ನಾಯಕನ ನಿಲುವು ಓದುಗರ ಮನದಲ್ಲಿ ನಿಲ್ಲುತ್ತದೆ.

ಈ ನಡುವೆ ಜಗನ್ನಾಥನ ಗೆಳತಿ, ‘ಮನದನ್ನೇ’ಯಾಗಿದ್ದ ‘ಮಾರ್ಗರೇಟ್’, ಇಂಗ್ಲೆಂಡಿನಲ್ಲಿ ಉಳಿದಿದ್ದ ಗೆಳೆಯ (ಸದಾ ಕಾಲ ಜಗನ್ನಾಥನ ಬಗೆಗೆ ಅಸೂಯೆ ಪಡುವವ) ನೊಂದಿಗೆ ತನಗೆ ಏರ್ಪಟ್ಟು ಹೊಸ ಸಂಬಂಧವನ್ನು ತಿಳಿಸಿದಾಗ, ಜಗನ್ನಾಥ ಕುಗ್ಗಿ ಹೋಗುತ್ತಾನೆ. ಸಾವರಿಸಿಕೊಂಡು ತಾನು ಮತ್ತೆ ಮಾರ್ಗರೇಟನ್ನು ಪಡೆಯುತ್ತೇನೆಂಬ ಆಶಯವನ್ನು ದೃಢವಾಗಿಸಿಕೊಂಡು ತನ್ನ ಧ್ಯೇಯೆದೆಡೆಗೆ ಹೆಚ್ಚು ಜಾಗೃತನಾಗಿ ಕಾರ್ಯನಿರ್ವಹಿಸುತ್ತಾನೆ. ಜಗನ್ನಾಥ ಮಾರ್ಗರೇಟನ್ನು ಕಳೆದುಕೊಂಡ ನೋವನ್ನು ಓದುಗರು ಕೂಡ ಅನುಭವಿಸುವಂತೆ ಕಾದಂಬರಿಕಾರರು ಚಿತ್ರಿಸಿದ್ದಾರೆ.

ಅನೇಕ ವಿಘ್ನಗಳ ನಡುವೆಯೂ ಜಗನ್ನಾಥನ ದೃಢಸಂಕಲ್ಪ ನಡೆದೇ ತೀರುತ್ತದೆ. ಹೊಲೆಯರು ಜಾತ್ರೆಯ ದಿನದಂದು ದೇವಾಲಯವನ್ನು ಪ್ರವೇಶಿಸುತ್ತಾರೆ. ಇದು ಪತ್ರಿಕೆಗಳಲ್ಲಿಯೂ ಸುದ್ಧಿಯಾಗುತ್ತದೆ. ಮುಂದಿನ ಹಂತವೆಂಬಂತೆ ಶೋಷಿತ ವರ್ಗದವರೊಂದಿಗೆ ರೈತರನ್ನು ಸೇರಿಸಿ ಕ್ರಾಂತಿ ಮಾಡುವ ಯೋಚನೆಯನ್ನು ನಾಯಕ ಹಾಕುತ್ತಿರುವಾಗ, ಅತ್ತ ಕಡೆ ದೇವಾಲಯದಲ್ಲಿ ಶುದ್ಧ ಮಾಡಿ ಮತ್ತೆ ಶ್ರೀ ಮಂಜುನಾಥ ಸ್ವಾಮಿಯ ಪ್ರತಿಷ್ಠಾಪನೆಯ ಕಾರ್ಯ ಸಿದ್ಧತೆ ನಡೆದಿರುತ್ತದೆ. ಏನೇ ಕ್ರಾಂತಿ ಕಾರ್ಯಗಳಾದರೂ ಬದಲಾಗದ ಸಮಾಜ ಇಲ್ಲಿನ ಕಥಾ ವಸ್ತು.

ಕಾದಂಬರಿಯಲ್ಲಿನ ಭಾಷಾ ಶೈಲಿ ತುಂಬಾ ಇಷ್ಠವಾಗುತ್ತದೆ. ಸರಳವಾಗಿ ಭಾವನೆಗಳ ಕಲ್ಪನೆ ಮೂಡಿಸುವ ಕಾರ್ಯ ನಡಿದಿದೆ ಪ್ರತೀ ಸನ್ನೀವೇಶದಲ್ಲೂ ವ್ಯಕ್ತಿಯ ಆಂತರಿಕ ಆಲೋಚನೆಗಳು ಖಿನ್ನತೆ, ಆಸೆಗಳನ್ನು ಹಾಗೂ ಬಾಹ್ಯ ನಡೆಗಳ ಚಿತ್ರಣವನ್ನು ಒಟ್ಟೊಟ್ಟಿಗೆ ನಮಗೆ ಕಟ್ಟಿಕೊಡುತ್ತಾರೆ. ಈ ವಿಶೇಷತೆ ನನಗೆ ತುಂಬಾ ಇಷ್ಟವಾಯಿತು. ಸರಳ ಮಾತುಗಳಿಂದ ವ್ಯಕ್ತಿಯ ವಿವಿಧ ಬಲ-ದೌರ್ಬಲ್ಯಗಳನ್ನು ಪಾತ್ರಗಳ ಮುಖೇನ ನಮಗೆ ದರ್ಶಿಸುತ್ತಾರೆ. ಇದರ ಮೂಲಕ ನಮ್ಮನ್ನು ‘ಅಂತರಾವಲೋಕನ’ಕ್ಕೆ ತೊಡಗುವಂತೆ ಮಾಡಿದ್ದಾರೆ.

ಮತ್ತೊಂದು ಸಂಗತಿಯೆಂದರೆ, ಈ ಕಾದಂಬರಿಯಲ್ಲಿ ಗಂಡು-ಹೆಣ್ಣಿನ ಸಂಬಂಧವು ಪ್ರೇಮಮಯವಾಗಿರದೆ ಕಾಮಮಯವಾಗಿರುವುದು ಮನಸ್ಸಿಗೆ ಏಕೋ ಸಂಕಟವಾಗುತ್ತದೆ. ಈ ಸಂಬಂಧದಲ್ಲಿ ನೈತಿಕತೆಯ ಕೊರತೆ ಎದ್ದು ಕಾಣುತ್ತದೆ. ಉದಾಹರಿಸುವುದಾದರೆ, ಮನೆಯ ಆಳು ಕಾವೇರಿ, ಜೋಯಿಸರ ಸೊಸೆ ನಾಗಮಣಿಯರನ್ನು ಮೋಹಿಸುವ ಜಗನ್ನಾಥ, ತನ್ನ ಪ್ರೇಯಸಿ ಮಾರ್ಗರೇಟನ್ನೂ ಬಯಸುತ್ತಾನೆ. ಆಕೆ ಇನ್ನೊಬ್ಬನಲ್ಲಿ ಆಸಕ್ತಳಾದಾಗ ನೋಯುತ್ತಾನೆ, ಕುಗ್ಗುತ್ತಾನೆ. ಹಾಗಾದರೆ ಈತ ಯಾರಿಗೆ ಪ್ರಾಮಾಣಿಕನಾಗಿದ್ದಾನೆ? ಎಂಬುದು ಪ್ರಶ್ನೆ ಕಥಾ ನಾಯಕ ಜಗನ್ನಾಥ ತನ್ನೇಲ್ಲಾ ಭಾವನೆಗಳನ್ನು ಸದಾಕಾಲ ಮನಸ್ಸಿನಲ್ಲಿಯೇ ‘ಮಾರ್ಗರೇಟಿ’ಗೆ ಕಾಗದವನ್ನು ಬರೆಯುತ್ತಿರುತ್ತಾನೆ. ಇದರಿಂದ ಮಾನಸಿಕವಾಗಿ ಆಕೆ ಯಾವಾಗಲೂ ಅವನೊಂದಿಗೆ ಇರುತ್ತಿದ್ದಳು. ಇಂತಹ ಗೆಳತಿ ತನಗೆ ದ್ರೋಹ ಮಾಡಿದಳೆಂದು ತಿಳಿದು ಸಹ ಅವಳನ್ನು ಮತ್ತೆ ತಾನು ಜೀವನದಲ್ಲಿ ಪಡೆಯುತ್ತೇನೆಂಬ ಜಗನ್ನಾಥನ ಆಶಯ ಮತ್ತು ನಿರೀಕ್ಷೆಗಳನ್ನು ಇಲ್ಲಿ ಪ್ರೀತಿಯೇ ಆಗಿರಬಹುದೆಂದು ತಿಳಿದು ಸಮಾಧಾನಗೊಳ್ಳುತ್ತೇನೆ.

ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ಸಾಮಾಜಿಕ ಕಾದಂಬರಿ. ಸಮಾಜದಲ್ಲಿನ ಮೌಡ್ಯತೆ, ಅಸಮಾನತೆ, ದಬ್ಬಾಳಿಕೆ, ಕುತಂತ್ರ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲಿದೆ.

ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವಂತಹ, ಕಿತ್ತು ಹಾಕುವಂತಹ ಯೋಚನೆಗಳನ್ನು ನಮ್ಮಲ್ಲಿಯೂ ಹುಟ್ಟು ಹಾಕುತ್ತದೆ.

ನನ್ನ ದೃಷ್ಟಿಕೋನ, ವಿಶ್ಲೇಷಣೆಯಲ್ಲೇನಾದರೂ ದೋಷವಿದ್ದರೆ, ಎಚ್ಚರಿಸಿ ಸಹಕರಿಸಿರಿ.

-ದಿವ್ಯ ಆಂಜನಪ್ಪ