ಶುಕ್ರವಾರ, ಮಾರ್ಚ್ 31, 2017

ಕರ್ನಾಟಕದ ಪ್ರಚಲಿತ ವಿದ್ಯಮಾನ


೧) ಕರ್ನಾಟಕದ ಐ4 ನೀತಿ

ಕರ್ನಾಟಕದಾದ್ಯಂತ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲಿ ಹೊಸ ಐಟಿ ಮತ್ತು ಇತರೆ ಜ್ಞಾನಾಧಾರಿತ ವಲಯಗಳು ತಮ್ಮ ಕಾರ್ಯಕ್ಷೇತ್ರವನ್ನು ಸ್ಥಾಫಿಸಲು ಪ್ರೋತ್ಸಾಹಗಳನ್ನು ನೀಡಲು ಹೊಸ ಮಾಹಿತಿ ತಂತ್ರಜ್ಞಾನ ಐ4 ನೀತಿಯನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಟಿ/ಐಟಿಇಎಸ್/ಸ್ಟಾರ್ಟ್ ಅಪ್ಸ್/ ಇತರೆ ಜ್ಞಾನಾಧಾರಿತ ಉದ್ದಿಮೆಗಳ ಪ್ರಸ್ತಾವನೆಗಳನ್ನು ಅಂಗೀಕರಿಸುವ ಏಕ ಗವಾಕ್ಷಿ ಸಂಸ್ಥೆಯಾಗಿರುತ್ತದೆ.

ಐ4 ನೀತಿಯ ಪ್ರಮುಖ ಅಂಶಗಳು

• ಉದ್ಯೋಗ ಆಧಾರಿತ ಪ್ರೋತ್ಸಾಹಕವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಹೊರಭಾಗದಲ್ಲಿ ಭೂ ಮಂಜೂರಾತಿ ಮಾಡುವುದು.

• ಐಟಿ, ಐಟಿಇಎಸ್, ಅನಿಮೇಷನ್/ಜ್ಞಾನಾಧಾರಿತ ಉದ್ದಿಮೆಗಳಿಗೆ ರಿಯಾಯಿತಿ ದರದಲ್ಲಿ ಭೂ ಮಂಜೂರಾತಿ.

• ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರಭಾಗದಲ್ಲಿ ಹೂಡಿಕೆಗಾಗಿ ಉದ್ಯೋಗ ಸೃಷ್ಟಿ.

• ಅಭಿವೃದ್ಧಿಯನ್ನು 2 ಮತ್ತು 3ನೇ ದರ್ಜೆ ನಗರಗಳಿಗೆ ವಿಸ್ತರಿಸಲು ಆದ್ಯತೆ ನೀಡುವುದು.

• ನೇರ ಅಂತಿಮ ಬಳಕೆದಾರರಿಗೆ ಮಾತ್ರ ಪ್ರೋತ್ಸಾಹ ದೊರಕಿಸುವುದು.

• ಪ್ರತಿ 1000 ಉದ್ಯೋಗ ಸೃಷ್ಟಿಗೆ 1 ಎಕರೆ ದರದಲ್ಲಿ ಭೂಮಿಯನ್ನು ಮಂಜೂರು ಮಾಡುವುದು.

• ಸ್ಥಳವನ್ನು ಆಧರಿಸಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಇಂಟರ್ನೆಟ್‍ನೊಂದಿಗೆ ಪ್ಲಗ್ ಮತ್ತು ಪ್ಲೇ ಸ್ಥಳಕ್ಕಾಗಿ ರಿಯಾಯಿತಿ ದರದಲ್ಲಿ ಭೂಮಿಯನ್ನು ಒದಗಿಸಲಾಗುವುದು.

• ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಐಟಿ/ಐಟಿಇಎಸ್/ ಸ್ಟಾರ್ಟ್ ಅಪ್ಸ್/ಇತರೆ ಜ್ಞಾನಾಧಾರಿತ ಉದ್ದಿಮೆಗಳು ಸಾರ್ವಜನಿಕ ಸೇವಾ ಉದ್ಯಮಗಳಿಗೆ ಸರಿಸಮವಾಗಿ ಪರಿಗಣಿಸಲಾಗುವುದು.

• 5 ವರ್ಷಗಳವರೆಗೆ ಐಟಿ / ಐಟಿಇಎಸ್/ ಸ್ಟಾರ್ಟ್ ಅಪ್ಸ್/ ಇತರೆ ಜ್ಞಾನಾಧಾರಿತ ಉದ್ದಿಮೆಗಳಿಗೆ 1964ರ ಕರ್ನಾಟಕ ಕೈಗಾರಿಕ ಉದ್ಯೋಗ (ನಿಲುವು ಆದೇಶಗಳು) ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.

• ಐಟಿ/ಐಟಿಇಎಸ್/ಸ್ಟಾರ್ಟ್ ಅಪ್ಸ್/ ಅನಿಮೇಷನ್ / ಬಿಪಿಓ/ಇತರೆ ಜ್ಞಾನಾಧಾರಿತ ಉದ್ದಿಮೆಗಳನ್ನು ಸಾರ್ವಜನಿಕ ಸೇವಾ ಉದ್ಯಮಗಳಿಗೆ ಸರಸಮವಾಗಿ ಪರಿಗಣಿಸುವುದು.

• 2ನೇ ಮತ್ತು 3ನೇ ದರ್ಜೆ ನಗರಗಳಲ್ಲಿ ಹೊಸ ಉದ್ಯೋಗವನ್ನು ಸೃಷ್ಟಿಸುವ ಎಲ್ಲಾ ಉದ್ದಿಮೆಗಳಿಗೆ ಎರಡು ವರ್ಷಗಳವರೆಗೆ ಭವಿಷ್ಯ ನಿಧಿ/ನೌಕರರ ರಾಜ್ಯ ವಿಮಾ ಮೊತ್ತವನ್ನು ಪ್ರತಿ ಉದ್ಯೋಗಿಗೆ ಪ್ರತಿ ಮಾಸಿಕವಾಗಿ ರೂ. 2000ದಂತೆ ಮರುಪಾವತಿ ಮಾಡಲಾಗುವುದು.

• ಐಟಿ/ಐಟಿಇಎಸ್/ಇಎಂಎಸ್‍ಡಿ ಟೆಲಿಕಾಂ ಮುಂತಾದವುಗಳಲ್ಲಿ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

೨) ಸಬಲ

ಭಾರತ ಸರ್ಕಾರವು ರಾಜೀವ್‍ಗಾಂಧಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಅಥವಾ ಸಬಲ ಎಂಬ ಹೊಸ ಯೋಜನೆಯನ್ನು ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸುತ್ತಿದೆ.

ಇದು ಶೇ. 100ರಷ್ಟು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು, ಇದರ ಉದ್ದೇಶವು 11-18 ವರ್ಷದ ಪ್ರಾಯಪೂರ್ವ ಬಾಲಕಿಯರನ್ನು ಸಬಲರನ್ನಾಗಿ ಮಾಡುವುದು.

ಅವರ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವುದು, ವಿವಿಧ ಕೌಶಲ್ಯಗಳು ಅಂದರೆ ಗೃಹ ಕೌಶಲ್ಯ, ಜೀವನಕೌಶಲ್ಯ, ವೃತ್ತಿ ತರಬೇತಿ ನೀಡಲಾಗುತ್ತಿದೆ.

2015-16ನೇ ಸಾಲಿನಲ್ಲಿ ರಊ. 57.88 ಲಕ್ಷಗಲ ಅನುದಾನವನ್ನು ಕೇಂದ್ರ ಸರ್ಕಾರವು ಒದಗಿಸಿದ್ದು, ಅದಕ್ಕೆ 50% ಪಾಲು ರಾಜ್ಯ ಸರ್ಕಾರವು ನೀಡಬೇಕಾಗಿರುವುದರಿಂದ ಜಿಲ್ಲೆಗಳಿಗೆ ಅನುದಾನ ಮರುಹಂಚಿಕೆಗೊಳಿಸಲಾಗಿರುವುದಿಲ್ಲ.

೩) ಇಂಧನ ಕ್ಷೇತ್ರದಲ್ಲಿ ಸಹಕಾರ: ಭಾರತಕ್ಕೆ ನೈಸರ್ಗಿಕ ಅನಿಲ ರಫ್ತು

ಭಾರತಕ್ಕೆ ನೈಸರ್ಗಿಕ ಅನಿಲ ರಫ್ತು ಮಾಡುವ ಪ್ರಸ್ತಾವಕ್ಕೆ ಸರ್ಕಾರ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ–ಅಮೆರಿಕ ನಡುವಣ ದ್ವಿಪಕ್ಷೀಯ ಸಹಕಾರದಲ್ಲಿ ಇಂಧನ ಕ್ಷೇತ್ರ ಮಹತ್ವದ್ದಾಗಲಿದೆ ಎಂದೂ ಅವರು ಹೇಳಿದ್ದಾರೆ. ಮುಂದಿನ ವರ್ಷದ ಆರಂಭದ ವೇಳೆಗೆ ನೈಸರ್ಗಿಕ ಅನಿಲ ರಫ್ತು ಆರಂಭಗೊಳ್ಳುವ ನಿರೀಕ್ಷೆ ಇದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ನಿರ್ಧಾರಗಳನ್ನು ತೆಗೆದುಹಾಕುವ ಕಾರ್ಯಾಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸಹಿ ಹಾಕಲು ಮುಂದಾಗಿರುವ ಸಂದರ್ಭದಲ್ಲೇ ಈ ಹೇಳಿಕೆ ನೀಡಲಾಗಿದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಪ್ಯಾರಿಸ್‌ ಒಪ್ಪಂದದಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳ ಬಗ್ಗೆ ಟ್ರಂಪ್ ಆಡಳಿತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತ ಸೇರಿ ಹಲವು ರಾಷ್ಟ್ರಗಳ ಜತೆಗಿನ ಸಹಕಾರದ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾತುಕತೆ ನಡೆಸಿದ್ದ ಪ್ರಧಾನ್:

ಅಮೆರಿಕದಿಂದ ನೈಸರ್ಗಿಕ ಅನಿಲ ಆಮದು ಮಾಡುವ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಇಂಧನ ಸಚಿವ ರಿಕ್ ಪೆರ್ರಿ ಜತೆ ಚರ್ಚಿಸಿದ್ದರು.

ಇಂಧನ ಕ್ಷೇತ್ರದಲ್ಲಿ ಭಾರತ–ಅಮೆರಿಕ ನಡುವಣ ಸಹಕಾರ, ನೈಸರ್ಗಿಕ ಅನಿಲ, ತೈಲ ಬಾವಿ ಉದ್ಯಮದಲ್ಲಿ ಭಾರತದ ಹೂಡಿಕೆ ಮತ್ತಿತರ ವಿಷಯಗಳ ಬಗ್ಗೆಯೂ ಸಚಿವರು ಮಾತುಕತೆ ನಡೆಸಿದ್ದರು.

ಭಾರತದ ಕಂಪೆನಿಗಳಿಂದಲೇ ಎಚ್‌1ಬಿ ವೀಸಾ ಹೆಚ್ಚು ಬಳಕೆ

ಎಚ್‌1ಬಿ ವೀಸಾ ಅಡಿ ಉದ್ಯೋಗಿಗಳನ್ನು ನೇಮಿಸುವ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಅಮೆರಿಕದ ವಲಸೆ ವ್ಯವಸ್ಥೆಯಲ್ಲಿನ ಲೋಪದೊಂದಿಗೆ ಆಟವಾಡಿವೆ ಎಂದು ಅಮೆರಿಕ ಹಿರಿಯ ಸಂಸದ ಡರೆಲ್‌ ಇಸಾ ಆರೋಪಿಸಿದ್ದಾರೆ.

‘ಎಚ್‌1ಬಿ ವೀಸಾ ಯೋಜನೆಯ ಶೇ 75ರಷ್ಟು ಭಾಗವನ್ನು ಭಾರತೀಯರ ಮಾಲೀಕತ್ವದ ಮತ್ತು ಭಾರತೀಯ ಉದ್ಯೋಗಿಗಳೇ ಇರುವ ಕಂಪೆನಿಗಳು ಬಳಸಿಕೊಳ್ಳುತ್ತಿವೆ’ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಮಾಡುತ್ತಿರುವವರ ಕನಿಷ್ಠ ವೇತನವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮಸೂದೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

೪) ಮನೆ ಬಾಡಿಗೆಗೂ ಜಿಎಸ್‌ಟಿ

ಭೂಮಿ ಗುತ್ತಿಗೆ ಕೊಡುವುದು, ಕಟ್ಟಡಗಳನ್ನು ಬಾಡಿಗೆಗೆ ನೀಡುವುದು   ಮತ್ತು ನಿರ್ಮಾಣ ಹಂತದಲ್ಲಿ ಇರುವ ಮನೆ ಖರೀದಿಗೆ ಪಾವತಿಸುವ ಕಂತುಗಳ ಮೇಲೆ  ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಗೊಳ್ಳಲಿದೆ.

ಲೋಕಸಭೆಯ ಅನುಮೋದನೆಗಾಗಿ  ಮಾರ್ಚ್ ೨೮ರಂದು  ಮಂಡಿಸಿರುವ ಜಿಎಸ್‌ಟಿ ಪೂರಕ ಮಸೂದೆಗಳಲ್ಲಿ ಈ ವಿವರಗಳು ಅಡಕವಾಗಿವೆ.

ಮಸೂದೆಯಲ್ಲಿರುವ ಅಂಶಗಳೇನು?

ಕೇಂದ್ರ ಸರ್ಕಾರದ (ಸಿ–ಜಿಎಸ್‌ಟಿ) ಅನ್ವಯ, ಭೂಮಿಯ ಬಾಡಿಗೆ, ಗೇಣಿ, ಉಪಭೋಗ, ಭೂ ಸ್ವಾಧೀನ ಅನುಮತಿಯು ಸೇವಾ  ಪೂರೈಕೆಯಾಗಲಿದೆ.

ಜತೆಗೆ, ವಾಣಿಜ್ಯ, ಕೈಗಾರಿಕೆ ಅಥವಾ ವಸತಿ ಸಂಕೀರ್ಣವನ್ನು  ಭಾಗಶಃ ಇಲ್ಲವೆ ಪೂರ್ಣ ಪ್ರಮಾಣದಲ್ಲಿ ಬಾಡಿಗೆ ನೀಡುವುದು ಕೂಡ  ಹೊಸ ತೆರಿಗೆ ವ್ಯವಸ್ಥೆಯಡಿ ಸೇವೆಯ ಪೂರೈಕೆಯಾಗಿರಲಿದೆ.

ನಿರ್ಮಾಣ ಹಂತದಲ್ಲಿ ಇರುವ ಕಟ್ಟಡ ಹೊರತುಪಡಿಸಿ ಭೂಮಿ, ಕಟ್ಟಡ ಮಾರಾಟವು ಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆ  ಎಂದು ಪರಿಗಣಿಸುವುದಿಲ್ಲ.ಹೀಗಾಗಿ ಇಂತಹ ವಹಿವಾಟಿಗೆ ಜಿಎಸ್‌ಟಿ ಅನ್ವಯವಾಗಲಾರದು.

ಭೂಮಿ ಮತ್ತು ಕಟ್ಟಡ ಮಾರಾಟ ವಹಿವಾಟು  ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿರುವ ಜಿಎಸ್‌ಟಿ   ವ್ಯಾಪ್ತಿಯಿಂದ ಹೊರಗೆ ಇರಲಿದೆ.   ಇಂತಹ ವಹಿವಾಟಿನ ಮೇಲೆ ಮುದ್ರಾಂಕ ಶುಲ್ಕ ವಿಧಿಸುವ ಸದ್ಯದ ವ್ಯವಸ್ಥೆ ಮುಂದುವರೆಯಲಿದೆ.

ಈ ಮೊದಲಿನ ಕರಡು ಮಸೂದೆಗಳಲ್ಲಿ ಇದ್ದ ಸರಕು ಮತ್ತು ಸೇವೆಗಳ ವ್ಯಾಖ್ಯಾನಕ್ಕೆ, ಈಗ ಮಂಡಿಸಿರುವ ಪೂರಕ ಮಸೂದೆಗಳು ಸ್ಪಷ್ಟನೆ ನೀಡಿವೆ.‘ಸದ್ಯಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಬಾಡಿಗೆ ಮೇಲೆ ಸೇವಾ ತೆರಿಗೆ ವಿಧಿಸಲಾಗುತ್ತಿದೆ.

ಜಿಎಸ್‌ಟಿಯನ್ನು ವ್ಯಾಜ್ಯ ಮುಕ್ತಗೊಳಿಸಲು ಸರ್ಕಾರ ಸರ್ವ ಪ್ರಯತ್ನ ಮಾಡಬೇಕು’  ಎಂದು ತೆರಿಗೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ, ಕೇಂದ್ರೀಯ ಅಬಕಾರಿ, ಸೇವಾ ತೆರಿಗೆ  ರಾಜ್ಯಗಳ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) , ತಯಾರಿಕಾ ಸರಕುಗಳ ಮೇಲಿನ ಪರೋಕ್ಷ ತೆರಿಗೆಗಳು ರದ್ದಾಗಲಿವೆ. ಆದರೆ, ವಿದ್ಯುತ್‌ ತೆರಿಗೆ ರದ್ದುಪಡಿಸಲು ಅವಕಾಶ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಈ ತೆರಿಗೆ ವಿಧಿಸಬಹುದಾಗಿದೆ. ದೆಹಲಿ ರಾಜ್ಯ ಸರ್ಕಾರವು ಮನೆ, ಅಪಾರ್ಟ್‌ಮೆಂಟ್‌ಗಳ ಮೇಲೆ ವಿದ್ಯುತ್‌ ತೆರಿಗೆ ವಿಧಿಸಲು ವಿನಾಯ್ತಿ ನೀಡಿದೆ.  ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ.

೫) ಕರ್ನಾಟಕದಲ್ಲಿ ದೇಶೀಯ ಪ್ರವಾಸಿಗರಿಗೆ ‘ಸುವರ್ಣ ರಥ’ದಲ್ಲಿ ವಿಶೇಷ ಪ್ಯಾಕೇಜ್

ಕರ್ನಾಟಕದ ಅತ್ಯಂತ ದುಬಾರಿ ರೈಲು ಗೋಲ್ಡನ್ ಚಾರಿಯಟ್(ಸುವರ್ಣ ರಥ)ನ ಪ್ರವಾಸ ದರದಲ್ಲಿ ಕಡಿತ ಮಾಡಿ  ಜನತೆಯ ಕೈಗೆಟಕುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ವಾರಾಂತ್ಯದಲ್ಲಿ ದೇಶೀಯ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಸೇವೆ ಒದಗಿಸಲಿದೆ.

ಈ ನಡೆಗೆ ಕಾರಣವೇನು?

ವಾರಾಂತ್ಯದಲ್ಲಿ ಎರಡು ರಾತ್ರಿ ಮತ್ತು ಒಂದು ಹಗಲಿಗೆ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಪ್ರತಿ ವ್ಯಕ್ತಿಗೆ 30,000 ರೂಪಾಯಿ ದರ ವಿಧಿಸುತ್ತದೆ.

ದುಬಾರಿ ದರದಿಂದಾಗಿ ಸುವರ್ಣ ರಥದಲ್ಲಿ ಪ್ರವಾಸ ಮಾಡುವವರ ಸಂಖ್ಯೆ ಕಡಿಮೆ. ಹೀಗಾಗಿ ರೈಲ್ವೆ ಇಲಾಖೆಗೆ ಆಗುತ್ತಿರುವ ನಷ್ಟವನ್ನು ಮನಗಂಡಿರುವ ಪ್ರವಾಸೋದ್ಯಮ ಇಲಾಖೆ ಈ ಬಾರಿ ಬೇಸಿಗೆ ರಜೆಯಲ್ಲಿ ವಾರಾಂತ್ಯದ ದರವನ್ನು ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಯೋಜನೆಯಲ್ಲಿದೆ.

ಪರ್ಯಾಯ ವಾರಗಳಲ್ಲಿ ಎರಡು ಮಾರ್ಗಗಳಿಗೆ ಈ ದರ ಅನ್ವಯವಾಗುತ್ತದೆ.

ಬೆಂಗಳೂರಿನಿಂದ ಮೈಸೂರಿಗೆ ಶ್ರೀರಂಗಪಟ್ಟಣ ಮೂಲಕ ಮತ್ತು ಇನ್ನೊಂದು ಹಂಪಿಯನ್ನು ಒಳಗೊಂಡಿರುತ್ತದೆ.

ಮಾರ್ಚ್ ೨೯ರಂದು  ವಿಧಾನ ಪರಿಷತ್ತಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಪ್ರವಾಸದಲ್ಲಿ ಈ ದರದಲ್ಲಿ ಆಹಾರ ಮತ್ತು ವಸತಿ ಕೂಡ ಒಳಗೊಳ್ಳುತ್ತದೆ.

ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲು ಪ್ರವಾಸೋದ್ಯಮ ಇಲಾಖೆ ಜನತೆಗೆ ಈ ಅನುಕೂಲ ಮಾಡಿಕೊಡುತ್ತಿದೆ ಎಂದರು.

ನಮ್ಮ ಇಲಾಖೆಗೆ ಈ ಬಗ್ಗೆ ಜನರಿಂದ ಮಾಹಿತಿ ಕೇಳಿ ಕರೆಗಳು ಬರುತ್ತಿದ್ದು ಇದು ಯಶಸ್ವಿಯಾದರೆ ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್.

ದಕ್ಷಿಣದ ಹೆಮ್ಮೆ ಎಂಬ ಪ್ರವಾಸ ಏಳು ರಾತ್ರಿಗಳದ್ದಾಗಿದ್ದು, ಪ್ರತಿ ವ್ಯಕ್ತಿಗೆ ಸುಮಾರು 1.8 ಲಕ್ಷ ಖರ್ಚಾಗುತ್ತದೆ. ಅದು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸಂಚರಿಸಲಿದೆ. ಈ ಸಂದರ್ಭದಲ್ಲಿ ಹೆಚ್ಚು ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.ಕಳೆದ ಮೂರು ವರ್ಷಗಳಲ್ಲಿ ಸ್ವರ್ಣ ರಥದಲ್ಲಿ ವರ್ಷಕ್ಕೆ 10 ಟ್ರಿಪ್ ಮಾತ್ರ ಆಗಿದ್ದು ಇದರಿಂದ ಇಲಾಖೆಗೆ ಭಾರೀ ನಷ್ಟವುಂಟಾಗಿದೆ. ಕಳೆದ ವರ್ಷ ಶೇಕಡಾ 70ರಷ್ಟು ಸೀಟುಗಳು ಭರ್ತಿಯಾಗಿದ್ದವು. ಆದರೆ ಆದಾಯದಲ್ಲಿ ಭಾರೀ ಕುಸಿತ ಕಂಡುಬಂದಿದೆ.ವರ್ಷಕ್ಕೆ ಕನಿಷ್ಠ 26 ಟ್ರಿಪ್ ಗಳು ಆಗಬೇಕೆನ್ನುವುದು ಇಲಾಖೆಯ ಗುರಿಯಾಗಿದೆ ಎಂದು ಪುಷ್ಕರ್ ಹೇಳುತ್ತಾರೆ.

ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆ ಮಧ್ಯೆ ಆದಾಯ ಹಂಚಿಕೆ ಮಾದರಿಯನ್ನು ಅನುಸರಿಸಿದರೆ ನಷ್ಟವನ್ನು ತಪ್ಪಿಸಬಹುದು. ಇದಕ್ಕಾಗಿ ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಪ್ರಚಲಿತ ಸಾಮಾನ್ಯ ಜ್ಞಾನ

*💐 ಕನ್ನಡ ಸಾಮಾನ್ಯ ಜ್ಞಾನ 💐*

1) ವಿಶ್ವಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ರವರ 125 ನೇ ಜನ್ಮದಿನೋತ್ಸವವನ್ನು ಯಾವ ದಿನ ಆಚರಿಸಿತು?
* ಏಪ್ರಿಲ್ 13,2015 ರಂದು.

2) ವಿಶ್ವದ ಮೊದಲ ಬಿಳಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ (ರೇವಾ ಜಿಲ್ಲೆಯ ಮುಕುಂದ್ ಪುರ).

3) 2016 ರ ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಯಾರಿಗೆ ದೊರೆತಿದೆ?
* ಐಶ್ವರ್ಯ ರೈ ಬಚ್ಚನ್.

4) "ವಿಶ್ವ ಗ್ರಾಹಕರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 15.

5) 2016 ರ ಹುಡ್ಕೋ ಪ್ರಶಸ್ತಿ ಯಾವ ಸಂಸ್ಥೆಗೆ ಲಭಿಸಿದೆ?
* ಬಿಎಂಟಿಸಿ.

6) "ಬಿಹಾರ್ ಟು ತಿಹಾರ್" ಪುಸ್ತಕದ ಕರ್ತೃ ಯಾರು?
* ಕನ್ಹಯಕುಮಾರ್.

7) "ನಾಗರಿಕ ಸೇವಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 21.

8) "ಚಾಯ ಪೇ ಚರ್ಚಾ" ಗೆ ಸಂಬಂಧಿಸಿದವರು ಯಾರು?
* ನರೇಂದ್ರ ಮೋದಿ.

9) "ಚನೇ ಪೇ ಚರ್ಚಾ" ಯಾರಿಗೆ ಸಂಬಂಧಿಸಿದೆ?
* ರಾಹುಲ್ ಗಾಂಧಿ.

10) 2016 ರ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪಡೆದವರು ಯಾರು?
* ಎಸ್.ಚಿನ್ನಸ್ವಾಮಿ (ದಲಿತ ಚಿಂತಕ).

11) ರಾಜಸ್ಥಾನದ ಮಧ್ಯ ಮುಕ್ತ ಗ್ರಾಮ ಯಾವುದು?
* ರಾಜ್ಯಮಂದ್ ಜಿಲ್ಲೆಯ ಕಚ್ಚಾಬಾಲಿ.

12) ಪುದುಚೆರಿಯ ಲೆಫ್ಟಿನಂಟ್ ಗವರ್ನರ್ ಆಗಿ ಇತ್ತೀಚೆಗೆ ಆಯ್ಕೆಯಾದವರು ಯಾರು?
* ಕಿರಣ್ ಬೇಡಿ.

13) ರಾಜ್ಯ ಮಟ್ಟದ "ಬ್ರಾಡ್ ಬ್ಯಾಂಡ್" ಯೋಜನೆ ಆರಂಭಿಸಿದ ರಾಜ್ಯ ಯಾವುದು?
* ಆಂಧ್ರಪ್ರದೇಶ.

14) ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಎಲ್ಲಿ ನಡೆಯಿತು?
* ಜಪಾನಿನ ಹಿರೋಷಿಮಾದಲ್ಲಿ.

15) ದೇಶದ ಪ್ರಥಮ ಅಂಗವಿಕಲರ ಈಜುಕೊಳ ನಿರ್ಮಿಸಲು ಮುಂದಾಗಿರುವ ಕರ್ನಾಟಕದ ಜಿಲ್ಲೆ ಯಾವುದು?
* ಬೆಳಗಾವಿ.

16) ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಸಿಪಿಎಲ್ ಅನ್ನು ವಿವರಿಸಿ?
* ಕೆರಿಬಿಯನ್ ಪ್ರೀಮಿಯರ್ ಲೀಗ್.

17) 2017 ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಎಷ್ಟು ತಲುಪುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ?
* ಶೇ.7.7.

18) ಸರ್ಕಾರಿ ಜಾಹೀರಾತುಗಳ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿ ಯಾವುದು?
* ಬಿ.ಬಿ.ಟಂಡನ್ ಸಮಿತಿ.

19) ರಫೆಲ್ ನಡಾಲ್ ಯಾವ ದೇಶದವರು?
* ಸ್ಪೇನ್.

20) ಭಾರತದಲ್ಲಿ ಅತಿಹೆಚ್ಟು ಎಫ್ ಡಿ ಐ ಹೂಡಿಕೆ ಮಾಡಿದ ದೇಶ ಯಾವುದು?
* ಮಾರಿಷಸ್ (2-ಸಿಂಗಾಪುರ್, 3-ನೆದರ್ ಲ್ಯಾಂಡ್).

21) ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದಕ ಕಂಪನಿ "ಲಾವಾ ಕಂಪನಿಯ" ಬ್ರಾಂಡ್ ರಾಯಭಾರಿಯಾಗಿ ನೇಮಕವಾದವರು ಯಾರು?
* ಮಹೇಂದ್ರಸಿಂಗ್ ಧೋನಿ.

22) "ಕನೆಕ್ಟ್ ಕಾರ್ಗೋ 2016" ಪ್ರಶಸ್ತಿ ಪಡೆದ ಸಂಸ್ಥೆ ಯಾವುದು?
* ಕೆ.ಎಸ್.ಆರ್.ಟಿ.ಸಿ.

23) "ನಾಸ್ಕಾಂ" ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕವಾದವರು ಯಾರು?
* ಸಿ.ಪಿ.ಗುರ್ನಾನಿ.

24) ವಿಶ್ವ ಚಾಂಪಿಯನ್ ಷಿಪ್ ನಲ್ಲಿ 5 ಬಾರಿ ಚಿನ್ನ ಗೆದ್ದಿರುವ ಭಾರತದ ಬಾಕ್ಸರ್ ಯಾರು?
* ಎಂ.ಸಿ.ಮೇರಿಕೋಮ್.

25) 'ಪೂರಂ ಉತ್ಸವ" ನಡೆಯುವ ತ್ರಿಶೂಲ್ ಎಂಬ ಸ್ಥಳ ಯಾವ ರಾಜ್ಯದಲ್ಲಿದೆ?
* ಕೇರಳ.

26) ಇತ್ತೀಚೆಗೆ ಹೃದಯನಾಥ ಪ್ರಶಸ್ತಿ ಪಡೆದ ವಿಶ್ವ ಚೆಸ್ ಚಾಂಪಿಯನ್ ಯಾರು?
* ವಿಶ್ವನಾಥನ್ ಆನಂದ್.

27) ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ನೂತನ ಮುಖ್ಯಸ್ಥೆಯಾಗಿ ನೇಮಕವಾದವರು ಯಾರು?
* ಸುಷ್ಮಿತಾ ಪಾಂಡೆ.

28) "ಆಂಟಿಬಯೋಟಿಕ್ಸ್ ಆಫ್ ದ ಮೇನು" ಇದು ಯಾವ ದಿನದ ಧ್ಯೇಯ ವಾಕ್ಯ?
* ಗ್ರಾಹಕರ ದಿನ (ಮಾರ್ಚ್ 15, 2016).

29) "ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶಯಾನ ದಿನ"ವನ್ನಾಗಿ ಯಾವಾಗ ಆಚರಿಸುತ್ತಾರೆ?
* ಏಪ್ರಿಲ್ 22.

30) "ಸಿಟಿಗೊಲ್ಡ್ ಕಾರ್ಪ್" ಯಾವ ದೇಶದ ಗಣಿ ಕಂಪನಿ?
* ಆಸ್ಟ್ರೇಲಿಯಾ.

31) ಜೀಕಾ ವೈರೆಸ್ ಜೈವಿಕ ಲಕ್ಷಣವನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದ ಭಾರತದ ಮಹಿಳೆ ಯಾರು?
* ದೇವಿಕಾ ಸಿರೋಹಿ.

32) ಇತ್ತೀಚೆಗೆ "ಗ್ಲೋಬಲ್ ಮಿಸ್ ಇಂಡಿಯಾ-2016" ಎಲ್ಲಿ ನಡೆಯಿತು?
* ಗೋವಾ.

33) ತ್ರಿಪುರದ ರಾಜಧಾನಿ ಯಾವುದು?
ರವಿಕುಮಾರ.ಬಿ.ಸಾಸಲಮರಿ.
* ಅಗರ್ತಲ.

34) ಇಸ್ರೋದ ಪ್ರಸ್ತುತ ಅಧ್ಯಕ್ಷರು ಯಾರು?
* ಎ.ಎಸ್.ಕಿರಣ್ ಕುಮಾರ್.

35) ವಿಶ್ವದ ಅತ್ಯಂತ ತೆಳ್ಳಗಿನ ಲ್ಯಾಪ್ ಟ್ಯಾಪ್ ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
* ಹೆಚ್.ಪಿ. (10.4 ಎಂ.ಎಂ.ಗಾತ್ರ).

36) ಇತ್ತೀಚೆಗೆ ಯಾರ ಸಮಾಧಿಯ ಗೋಪುರದ ಸಂರಕ್ಷಣೆಗೆ ಚಿನ್ನದ ಕವಚವನ್ನು ಅಳವಡಿಸಲಾಗಿದೆ?
* ಹುಮಾಯುನ್.

ಕರ್ನಾಟಕ ಫೋಲಿಸ್ ಆಡಳಿತ ಸುಧಾರಣೆ

ಠಾಣೆಗಳಲ್ಲಿ ನಾಳೆಯಿಂದ ಹೊಸ ಗಸ್ತು ವ್ಯವಸ್ಥೆ ಜಾರಿ
31 Mar, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಜನ ಸ್ನೇಹಿಯಾದ ಹೊಸ ಗಸ್ತುವ್ಯವಸ್ಥೆ ಜಾರಿಗೊಳಿಸಿ ಪೊಲೀಸ್‌ ಮಹಾನಿರ್ದೇಶಕರು  ಆದೇಶ ಹೊರಡಿಸಿದ್ದಾರೆ.

ಹೊಸ ವ್ಯವಸ್ಥೆ ಏಪ್ರಿಲ್‌ 1ರಿಂದ  ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಇದರಲ್ಲಿ ನಾಗರಿಕರನ್ನು  ಸದಸ್ಯರಾಗಿ ಸೇರಿಸಿಕೊಳ್ಳಲು ಅವಕಾಶವಿದೆ.

‘ಪೊಲೀಸರು ಜನಸ್ನೇಹಿಯಾಗಬೇಕು ಮತ್ತು ಪೊಲೀಸ್‌ ವ್ಯವಸ್ಥೆ ಸಮುದಾಯದ  ಜೊತೆ ಮುನ್ನಡೆಯಬೇಕು ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿ ಪೊಲೀಸ್‌ ಠಾಣೆಯಲ್ಲಿರುವ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್‌ಕಾನ್‌ಸ್ಟೆಬಲ್‌ಗಳ  ಒಟ್ಟು ಸಂಖ್ಯೆಗೆ ಸರಿಸಮಾನವಾಗಿ ಪೊಲೀಸ್‌ ಠಾಣೆ ವ್ಯಾಪ್ತಿ ವಿಂಗಡಿಸಿ, ಪ್ರತಿ ಪ್ರದೇಶವನ್ನು ಗಸ್ತು (ಬೀಟ್‌) ಎಂದು ಪರಿಗಣಿಸಲಾಗುತ್ತದೆ.

ಆಯಾ ಠಾಣೆಯ ಪ್ರತಿ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ನಿಗದಿಪಡಿಸಿದ ಗಸ್ತಿನ ಸಂಪೂರ್ಣ ಹೊಣೆಗಾರಿಕೆ ನೀಡಲಾಗುತ್ತದೆ.

ಗಸ್ತಿನಲ್ಲಿ ಬರುವ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ಎಲ್ಲ ಧರ್ಮ, ಜಾತಿ, ವಯೋಮಾನಕ್ಕೆ  ಸೇರಿದ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಸ್ತ್ರೀ ಅಥವಾ ಪುರುಷರನ್ನು ‘ನಾಗರಿಕ ಸದಸ್ಯ’ರನ್ನಾಗಿ ನೇಮಕ ಮಾಡಿಕೊಳ್ಳಬಹುದು. ಗಸ್ತು ಸಿಬ್ಬಂದಿ ಈ ಸದಸ್ಯರೊಂದಿಗೆ ನಿರಂತರ  ಸಂಪರ್ಕದಲ್ಲಿದ್ದು, ಸಂಬಂಧಿಸಿದ ಗಸ್ತು ಪ್ರದೇಶಗಳ ಆಗುಹೋಗುಗಳ ಬಗ್ಗೆ  ಮಾಹಿತಿ ಪಡೆಯಬಹುದು.

ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಮೂಡಿಸುವ ಮತ್ತು ಪೊಲೀಸರ ಸಬಲೀಕರಣಕ್ಕೆ ಹೊಸ ವ್ಯವಸ್ಥೆ ಕಾರಣವಾಗಲಿದೆ ಎಂದು ಆದೇಶ ತಿಳಿಸಿದೆ.

**

ಗಸ್ತು ಪ್ರದೇಶವೇ ಸಣ್ಣ  ಘಟಕ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಗಸ್ತು (ಬೀಟ್‌) ಪ್ರದೇಶವೇ ಅತ್ಯಂತ ಸಣ್ಣ  ಘಟಕವಾಗಲಿದೆ.ಆಯಾ ಗಸ್ತಿನ ಕಾನ್‌ಸ್ಟೆಬಲ್‌ ಅಥವಾ  ಹೆಡ್‌ ಕಾನ್‌ಸ್ಟೆಬಲ್‌ಗಳು ಗಸ್ತಿನ  ಪೊಲೀಸ್‌ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಾರೆ.

ಪ್ರತಿ ಠಾಣೆಯಲ್ಲಿ ಲಭ್ಯವಿರುವ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಸಂಖ್ಯೆಗೆ ಅನುಗುಣವಾಗಿ ಗಸ್ತು(ಬೀಟ್‌) ಸಂಖ್ಯೆಗಳನ್ನು ನಿಗದಿಪಡಿಸಲಾಗು ವುದು. ಪ್ರತಿ ಗಸ್ತಿಗೆ ಒಬ್ಬ ಹೆಡ್‌ ಕಾನ್‌ ಸ್ಟೆಬಲ್‌  ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌  ನಿಗಪಡಿಸಲಾಗುವುದು.

ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಬೀಟ್‌ ಕಾರ್ಯದೊಂದಿಗೆ, ದೂರು ಅರ್ಜಿಗಳ ವಿಚಾರಣೆ, ಗುಪ್ತ ಮಾಹಿತಿ ಸಂಗ್ರಹ, ಬರಹಗಾರರ ಕೆಲಸ, ನ್ಯಾಯಾಲಯದ ಕಾರ್ಯ, ಅಪರಾಧ ತನಿಖೆಯನ್ನು ನಿರ್ವಹಿಸಬೇಕು.

72 ವರ್ಷಗಳಲ್ಲೆ ಅಧಿಕ ಉಷ್ಣಾಂಶ - ದೇಹಲಿ

ನವದೆಹಲಿ: ಬೇಸಿಗೆ ಮುಕ್ತಾಯಕ್ಕೆ ಎರಡು ತಿಂಗಳು ಬಾಕಿ ಇರುವಾಗಲೇ ದೇಶದ ಬಹುಭಾಗದ ಜನರು ಸೂರ್ಯನ ಪ್ರಖರತೆಗೆ ತತ್ತರಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರಿಂದ ನೀರಿಗಾಗಿ ತತ್ವಾರ ಉಂಟಾಗಿದ್ದರೆ, ಮತ್ತೊಂದೆಡೆ ಉತ್ತರ ಪ್ರದೇಶ, ಮಧ್ಯಪ್ರದೇಶ ಸಹಿತ ಸುಮಾರು ಒಂಭತ್ತು ರಾಜ್ಯಗಳು ಕಾದ ಕೆಂಡದಂತಾಗಿವೆ. ಮುಂದಿನ ಎರಡು ತಿಂಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ವಾಡಿಕೆಗಿಂತ 9 ಡಿಗ್ರಿ ಹೆಚ್ಚು!: ಪ್ರಸಕ್ತ ವರ್ಷದ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದೆ ಎಂಬ ಹವಾಮಾನ ವರದಿ ನಿರಾಸೆ ಮೂಡಿಸಿರುವ ಬೆನ್ನಲ್ಲೇ, ದೇಶಾದ್ಯಂತ ಏರಿಕೆಯಾಗುತ್ತಿರುವ ತಾಪಮಾನ ಜನರನ್ನು ಕಂಗೆಡಿಸಿದೆ. ಪ್ರತಿವರ್ಷ ಮಾರ್ಚ್ ತಿಂಗಳ ಕೊನೆಗೆ ಇರುತ್ತಿದ್ದ ತಾಪಮಾನ ಹಾಗೂ ಈಗಿನ ತಾಪಮಾನಕ್ಕೆ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ವಾಡಿಕೆ ತಾಪಮಾನಕ್ಕಿಂತ 5ರಿಂದ 9 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚು ಉಷ್ಣಾಂಶ ದಾಖಲಾಗುತ್ತಿದೆ. ರಾಜಸ್ಥಾನದ ಬಮೇರ್​ನಲ್ಲಿ 43.4, ವಾರ್ಧಾ, ನಾಗಪುರ, ಚಂದ್ರಾಪುರದಲ್ಲಿ 43, ಹರಿಯಾಣದ ನರ್ನೌಲ್​ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

72 ವರ್ಷಗಳಲ್ಲೇ ಗರಿಷ್ಠ

ದೇಶದ ರಾಜಧಾನಿ ದೆಹಲಿಯಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ದಾಖಲಾಗುವ ಮೂಲಕ 72 ವರ್ಷಗಳಲ್ಲೇ ಮಾರ್ಚ್ ತಾಪಮಾನ ದಾಖಲೆ ಬರೆದಿದೆ. 1945ರ ಮಾರ್ಚ್​ನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ವಾಡಿಕೆಗಿಂತ 6 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ದೇಶದ ಮಧ್ಯ ಹಾಗೂ ಪೂರ್ವ ಪ್ರದೇಶಗಳಲ್ಲಿ ಬಿಸಿಗಾಳಿ ಬೀಸುವ ಲಕ್ಷಣಗಳು ಕಂಡು ಬರುತ್ತಿವೆ. ಗುಜರಾತ್, ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.

ರಾಜ್ಯದ ಒಳನಾಡಿನಲ್ಲೂ 40 ಡಿಗ್ರಿ ಸೆಲ್ಸಿಯಸ್

ಬೆಂಗಳೂರು: ರಾಜ್ಯದ ಕರಾವಳಿ ಹೊರತುಪಡಿಸಿ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಹೆಚ್ಚಳದ ಕಾರಣ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಏ. 4ರವರೆಗೆ ಗುಡುಗು ಸಹಿತ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ.

ಬಳ್ಳಾರಿಯಲ್ಲಿ 42 ಡಿಗ್ರಿ: ಗುರುವಾರ ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆ. ಗೆ ಏರಿಕೆಯಾಗಿ ಮಾರ್ಚ್ ತಿಂಗಳ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲಾಗುವ ಮುನ್ಸೂಚನೆ ಕೊಟ್ಟಿದೆ. 1996 ಮಾ. 30ರಂದು ಗರಿಷ್ಠ ತಾಪಮಾನ 43 ಡಿಗ್ರಿ ಸೆ. ದಾಖಲಾಗಿತ್ತು. ವಿಜಯಪುರದಲ್ಲಿ 40 ಹಾಗೂ ಕಲಬುರ್ಗಿ ಗರಿಷ್ಠ ತಾಪಮಾನ 41.1 ಡಿಗ್ರಿ ಸೆ. ದಾಖಲಾಗಿದೆ. ಗುರುವಾರ ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 1.6 ರಿಂದ 3 ಡಿಗ್ರಿ ಸೆ. ಹೆಚ್ಚು ದಾಖಲಾಗಿದೆ.

ಬೆ.8ರಿಂದಲೇ ಕಚೇರಿ

ಬಿಸಿಲಿನ ತೀವ್ರತೆ ಅಧಿಕವಾಗಿರುವ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿ ಬದಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ, ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕಚೇರಿಗಳು ಮುಂದಿನ ಎರಡು ತಿಂಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯನಿರ್ವಹಿಸಲಿವೆ. ಏ. 1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ.

ಹಣಕಾಸು ಮಸೂದೆಗೆ ಸಮ್ಮತಿ

ಹಣಕಾಸು ಮಸೂದೆಗೆ ಸಮ್ಮತಿ
31 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ರಾಜ್ಯಸಭೆ ಸೂಚಿಸಿದ ಐದು ತಿದ್ದುಪಡಿಗಳನ್ನು ತಿರಸ್ಕರಿಸಿರುವ ಲೋಕಸಭೆ, ಮೂಲ ರೂಪದಲ್ಲೇ ‘ಹಣಕಾಸು ಮಸೂದೆ–2017’ ಅನ್ನು ಗುರುವಾರ ಅಂಗೀಕರಿಸಿದೆ.

ಮಸೂದೆಗೆ ಸಮ್ಮತಿ ದೊರಕುವುದರೊಂದಿಗೆ 2017–18ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿ ಪ್ರಕ್ರಿಯೆಗಳು ಪೂರ್ಣಗೊಂಡಂತಾಗಿದೆ.

ಹಣಕಾಸು ವರ್ಷ (ಏಪ್ರಿಲ್‌ 1) ಆರಂಭಗೊಳ್ಳುವುದಕ್ಕಿಂತಲೂ ಮೊದಲು ಬಜೆಟ್‌ ಅಂಗೀಕಾರಗೊಂಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಏಪ್ರಿಲ್‌ 1ರಿಂದ ಮಸೂದೆ ಅನುಷ್ಠಾನಕ್ಕೆ ಬರಲಿದ್ದು, ಅದಕ್ಕೂ ಮೊದಲು ಸರ್ಕಾರ ರಾಷ್ಟ್ರಪತಿ ಅನುಮತಿ ಪಡೆಯಬೇಕಾಗಿದೆ.

ಮಸೂದೆಗೆ ಐದು ತಿದ್ದುಪಡಿಗಳನ್ನು ತರಲು ರಾಜ್ಯಸಭೆ ಬುಧವಾರ ಸಲಹೆ ನೀಡಿತ್ತು. ಮೂರು ತಿದ್ದುಪಡಿಗಳನ್ನು ಕಾಂಗ್ರೆಸ್‌ ಸೂಚಿಸಿದ್ದರೆ, ಇನ್ನೆರಡನ್ನು ಸಿಪಿಎಂ ಮಂಡಿಸಿತ್ತು.

ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಆದೇಶ ಹೊರಡಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡಲಾಗಿದೆ. ಹಿಂದೆ ಆಯುಕ್ತರಿಗೆ ಮಾತ್ರ ಈ ಅಧಿಕಾರ ಇತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ಕಿರಿಯ ಅಧಿಕಾರಿಗಳಿಗೆ ಅಂತಹ ಅಧಿಕಾರ ಇರಬಾರದು ಎಂದು ತಿದ್ದುಪಡಿಗೆ ಸೂಚಿಸಿತ್ತು.

**

ರಾಜ್ಯಸಭೆ ಸೂಚಿಸಿದ ತಿದ್ದುಪಡಿಗಳು...

* ಶೋಧ ಕಾರ್ಯಾಚರಣೆ  ನಡೆಸಲು ಆದೇಶ ಹೊರಡಿಸುವ ಅಧಿಕಾರವನ್ನು ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಿಗೆ ನೀಡುವ ನಿಯಮ ರದ್ದು ಮಾಡಬೇಕು

* ದಾಳಿ ಅಥವಾ ಶೋಧ ಕಾರ್ಯ ಯಾಕೆ ನಡೆಸಲಾಗುತ್ತಿದೆ ಎಂಬ ಕಾರಣವನ್ನು ದಾಳಿಗೊಳಗಾದ ವ್ಯಕ್ತಿ ಅಥವಾ ಮೇಲ್ಮನವಿ ಪ್ರಾಧಿಕಾರಕ್ಕೆ ಬಹಿರಂಗಪಡಿಸದಿರುವ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ನೀಡುವುದಕ್ಕಾಗಿ ಐಟಿ ಕಾಯ್ದೆಗೆ ತಿದ್ದುಪಡಿ ತರುವ 3 ನಿಯಮಗಳು ಬೇಡ

* ಕಂಪೆನಿಗಳು ನಡೆಸುವ ಸೇವಾ ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಇನ್ನಷ್ಟು ಬಲಪಡಿಸುವ ಪ್ರಸ್ತಾವನೆ ಅನಗತ್ಯ

* ಉದ್ಯಮ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ನಿಗದಿಪಡಿಸಿರುವ ಮಿತಿತೆಗೆದುಹಾಕುವ ನಿಯಮ ಸರಿಯಲ್ಲ

ತ್ರಿವಳಿ ತಲಾಖ್ ಸಂವಿಧಾನ ಪೀಠಕ್ಕೆ

ತ್ರಿವಳಿ ತಲಾಖ್ ಸಂವಿಧಾನ ಪೀಠಕ್ಕೆ
31 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿ ಇರುವ ತ್ರಿವಳಿ ತಲಾಖ್, ನಿಖಾ ಹಲಾಲಾ ಮತ್ತು ಬಹುಪತ್ನಿತ್ವದ ಕಾನೂನು ಸಿಂಧುತ್ವವನ್ನು ಪರಿಶೀಲಿಸುವ ವಿಚಾರವನ್ನು ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವಹಿಸಿದೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡಲು ಅವಕಾಶವಿದೆ.

ಅದೇ ರೀತಿ ಮುಸ್ಲಿಂ ಮಹಿಳೆಯು ವಿಚ್ಛೇದಿತ ಪುರುಷನ ಜತೆ ಮರು ವಿವಾಹ ಮಾಡಿಕೊಳ್ಳಲು ನಿಬಂಧನೆ ಇದೆ. ಈ ಪದ್ಧತಿಯನ್ನು ಅನೇಕ ಮುಸ್ಲಿಂ ಮಹಿಳೆಯರು ಪ್ರಶ್ನಿಸಿದ್ದು, ಕೇಂದ್ರ ಸರ್ಕಾರ ಸಹ ಮಹಿಳೆಯರನ್ನು ಬೆಂಬಲಿಸಿದೆ. ನ್ಯಾಯಾಲಯಕ್ಕೆ ಬೇಸಿಗೆ ರಜವಿದ್ದರೂ ಸಾಂವಿಧಾನಿಕ ಪೀಠವು ಮೇ 11ರಂದು ಪ್ರಥಮ ವಿಚಾರ ಣೆಯನ್ನು ನಡೆಸಲಿದೆ. ಬೇಸಿಗೆ ರಜೆಯಲ್ಲಿ ವಾದ ಮಂಡಿಸಲು ವೈಯಕ್ತಿಕ ಕಾರಣಗಳಿಗಾಗಿ ಸಾಧ್ಯವಾಗುವುದಿಲ್ಲ ಎಂಬ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತಿತರರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್‌ ಅವರಿದ್ದ ಪೀಠವು ತಿರಸ್ಕರಿಸಿತು.

‘ಬೇಸಿಗೆ ರಜೆಯಲ್ಲಿ ನ್ಯಾಯಾಲಯ ಕಲಾಪ ನಡೆಸುವುದಕ್ಕೆ ನಿರ್ಬಂಧವೇನೂ ಇಲ್ಲ. ಇಂತಹ ಸಂದರ್ಭಗಳಲ್ಲಿ ನಾವೂ ರಜೆ ಅನುಭವಿಸುವ ಅವಕಾಶದಿಂದ ವಂಚಿತರಾಗುತ್ತೇವೆ’ ಎಂದು ನ್ಯಾಯಪೀಠವು ಹೇಳಿತು.

ಕಿಮ್ ಜಾಂಗ್ ನಮ್ ಮೃತದೇಹ ಹಸ್ತಾಂತರಕ್ಕೆ ಒಪ್ಪಿಗೆ

ಕಿಮ್ ಜಾಂಗ್‌ ನಮ್ ಮೃತದೇಹ ಹಸ್ತಾಂತರಕ್ಕೆ ಒಪ್ಪಿಗೆ

ಕ್ವಾಲಾಲಂಪುರ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹತ್ಯೆಯಾದ ಕಿಮ್ ಜಾಂಗ್‌ ನಮ್ ಅವರ ಮೃತದೇಹವನ್ನು ಉತ್ತರ ಕೊರಿಯಾಕ್ಕೆ ಹಸ್ತಾಂತರಿಸಲು ಮಲೇಷ್ಯಾ ಒಪ್ಪಿಕೊಂಡಿದೆ.

‘ಕಿಮ್ ಜಾಂಗ್‌ ನಮ್ ಅವರ ಕುಟುಂಬ ಸದಸ್ಯರು ಮೃತದೇಹವನ್ನು ಹಸ್ತಾಂತರಿಸುವಂತೆ ಪತ್ರ ಬರೆದಿದ್ದರು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ತನಿಖಾಧಿಕಾರಿ ಮೃತದೇಹ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದಾರೆ’ ಎಂದು ಮಲೇಷ್ಯಾದ ಪ್ರಧಾನಿ ನಜೀಬ್‌ ರಜಾಕ್‌ ಅವರು ತಿಳಿಸಿದರು.

‘ದೇಶ ತೊರೆಯದಂತೆ ನಿರ್ಬಂಧಕ್ಕೆ ಒಳಗಾಗಿದ್ದ ಮಲೇಷ್ಯಾದ ಒಂಬತ್ತು ಪ್ರಜೆಗಳನ್ನು ಬಿಡುಗಡೆ ಮಾಡಲು ಉತ್ತರ ಕೊರಿಯಾ ಒಪ್ಪಿಕೊಂಡಿದೆ. ಮಲೇಷ್ಯಾದಲ್ಲಿರುವ ಉತ್ತರ ಕೊರಿಯಾ ಪ್ರಜೆಗಳಿಗೂ ಸ್ವದೇಶಕ್ಕೆ  ತೆರಳಲು ಅವಕಾಶ ನೀಡಲಾಗುವುದು’ ಎಂದು ಅವರು ಹೇಳಿದರು.