ಶುಕ್ರವಾರ, ಮಾರ್ಚ್ 31, 2017

ಕರ್ನಾಟಕ ಫೋಲಿಸ್ ಆಡಳಿತ ಸುಧಾರಣೆ

ಠಾಣೆಗಳಲ್ಲಿ ನಾಳೆಯಿಂದ ಹೊಸ ಗಸ್ತು ವ್ಯವಸ್ಥೆ ಜಾರಿ
31 Mar, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಜನ ಸ್ನೇಹಿಯಾದ ಹೊಸ ಗಸ್ತುವ್ಯವಸ್ಥೆ ಜಾರಿಗೊಳಿಸಿ ಪೊಲೀಸ್‌ ಮಹಾನಿರ್ದೇಶಕರು  ಆದೇಶ ಹೊರಡಿಸಿದ್ದಾರೆ.

ಹೊಸ ವ್ಯವಸ್ಥೆ ಏಪ್ರಿಲ್‌ 1ರಿಂದ  ರಾಜ್ಯದಾದ್ಯಂತ ಜಾರಿಗೆ ಬರಲಿದೆ. ಇದರಲ್ಲಿ ನಾಗರಿಕರನ್ನು  ಸದಸ್ಯರಾಗಿ ಸೇರಿಸಿಕೊಳ್ಳಲು ಅವಕಾಶವಿದೆ.

‘ಪೊಲೀಸರು ಜನಸ್ನೇಹಿಯಾಗಬೇಕು ಮತ್ತು ಪೊಲೀಸ್‌ ವ್ಯವಸ್ಥೆ ಸಮುದಾಯದ  ಜೊತೆ ಮುನ್ನಡೆಯಬೇಕು ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿ ಪೊಲೀಸ್‌ ಠಾಣೆಯಲ್ಲಿರುವ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್‌ಕಾನ್‌ಸ್ಟೆಬಲ್‌ಗಳ  ಒಟ್ಟು ಸಂಖ್ಯೆಗೆ ಸರಿಸಮಾನವಾಗಿ ಪೊಲೀಸ್‌ ಠಾಣೆ ವ್ಯಾಪ್ತಿ ವಿಂಗಡಿಸಿ, ಪ್ರತಿ ಪ್ರದೇಶವನ್ನು ಗಸ್ತು (ಬೀಟ್‌) ಎಂದು ಪರಿಗಣಿಸಲಾಗುತ್ತದೆ.

ಆಯಾ ಠಾಣೆಯ ಪ್ರತಿ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ನಿಗದಿಪಡಿಸಿದ ಗಸ್ತಿನ ಸಂಪೂರ್ಣ ಹೊಣೆಗಾರಿಕೆ ನೀಡಲಾಗುತ್ತದೆ.

ಗಸ್ತಿನಲ್ಲಿ ಬರುವ ಗ್ರಾಮಗಳು ಮತ್ತು ಪ್ರದೇಶಗಳಲ್ಲಿ ಎಲ್ಲ ಧರ್ಮ, ಜಾತಿ, ವಯೋಮಾನಕ್ಕೆ  ಸೇರಿದ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಸ್ತ್ರೀ ಅಥವಾ ಪುರುಷರನ್ನು ‘ನಾಗರಿಕ ಸದಸ್ಯ’ರನ್ನಾಗಿ ನೇಮಕ ಮಾಡಿಕೊಳ್ಳಬಹುದು. ಗಸ್ತು ಸಿಬ್ಬಂದಿ ಈ ಸದಸ್ಯರೊಂದಿಗೆ ನಿರಂತರ  ಸಂಪರ್ಕದಲ್ಲಿದ್ದು, ಸಂಬಂಧಿಸಿದ ಗಸ್ತು ಪ್ರದೇಶಗಳ ಆಗುಹೋಗುಗಳ ಬಗ್ಗೆ  ಮಾಹಿತಿ ಪಡೆಯಬಹುದು.

ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಮೂಡಿಸುವ ಮತ್ತು ಪೊಲೀಸರ ಸಬಲೀಕರಣಕ್ಕೆ ಹೊಸ ವ್ಯವಸ್ಥೆ ಕಾರಣವಾಗಲಿದೆ ಎಂದು ಆದೇಶ ತಿಳಿಸಿದೆ.

**

ಗಸ್ತು ಪ್ರದೇಶವೇ ಸಣ್ಣ  ಘಟಕ

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಗಸ್ತು (ಬೀಟ್‌) ಪ್ರದೇಶವೇ ಅತ್ಯಂತ ಸಣ್ಣ  ಘಟಕವಾಗಲಿದೆ.ಆಯಾ ಗಸ್ತಿನ ಕಾನ್‌ಸ್ಟೆಬಲ್‌ ಅಥವಾ  ಹೆಡ್‌ ಕಾನ್‌ಸ್ಟೆಬಲ್‌ಗಳು ಗಸ್ತಿನ  ಪೊಲೀಸ್‌ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಾರೆ.

ಪ್ರತಿ ಠಾಣೆಯಲ್ಲಿ ಲಭ್ಯವಿರುವ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಸಂಖ್ಯೆಗೆ ಅನುಗುಣವಾಗಿ ಗಸ್ತು(ಬೀಟ್‌) ಸಂಖ್ಯೆಗಳನ್ನು ನಿಗದಿಪಡಿಸಲಾಗು ವುದು. ಪ್ರತಿ ಗಸ್ತಿಗೆ ಒಬ್ಬ ಹೆಡ್‌ ಕಾನ್‌ ಸ್ಟೆಬಲ್‌  ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌  ನಿಗಪಡಿಸಲಾಗುವುದು.

ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ಬೀಟ್‌ ಕಾರ್ಯದೊಂದಿಗೆ, ದೂರು ಅರ್ಜಿಗಳ ವಿಚಾರಣೆ, ಗುಪ್ತ ಮಾಹಿತಿ ಸಂಗ್ರಹ, ಬರಹಗಾರರ ಕೆಲಸ, ನ್ಯಾಯಾಲಯದ ಕಾರ್ಯ, ಅಪರಾಧ ತನಿಖೆಯನ್ನು ನಿರ್ವಹಿಸಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ