ಗುರುವಾರ, ಮಾರ್ಚ್ 30, 2017

ಇಂಡಿಯನ್ ವೆಲ್ಸ್ ಟೆನಿಸ್ :ಫೆಡರರ್ ಗೆ 5 ನೇ ಕೀರಿಟ

ಇಂಡಿಯನ್‌ ವೆಲ್ಸ್‌ ಟೆನಿಸ್‌: ಫೆಡರರ್‌ಗೆ 5ನೇ ಕಿರೀಟ

ಇಂಡಿಯನ್‌ ವೆಲ್ಸ್‌ (ಕ್ಯಾಲಿಫೋರ್ನಿಯಾ): ಸ್ವಿಟ್ಸರ್‌ಲ್ಯಾಂಡಿನ ಟೆನಿಸ್‌ ತಾರೆ ರೋಜರ್‌ ಫೆಡರರ್‌ 2017ನೇ ಸಾಲಿನ "ಇಂಡಿಯನ್‌ ವೆಲ್ಸ್‌ ಎಟಿಪಿ ಟೆನಿಸ್‌' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರವಿವಾರ ರಾತ್ರಿಯ ಪ್ರಶಸ್ತಿ ಕಾಳಗಳದಲ್ಲಿ ಅವರು ತಮ್ಮದೇ ದೇಶದ ಸ್ಟಾನಿಸ್ಲಾಸ್‌ ವಾವ್ರಿಂಕ ವಿರುದ್ಧ 6-4, 7-5 ಅಂತರದ ಜಯ ಸಾಧಿಸಿದರು.

ಫೆಡರರ್‌ ಇಂಡಿಯನ್‌ ವೆಲ್ಸ್‌ ಪ್ರಶಸ್ತಿ ಗೆಲ್ಲುತ್ತಿರುವುದು ಇದು 5ನೇ ಸಲ. ಇದರೊಂದಿಗೆ ನೊವಾಕ್‌ ಜೊಕೋವಿಕ್‌ ಅವರ ಸರ್ವಾಧಿಕ ಗೆಲುವಿನ ದಾಖಲೆಯನ್ನು ಅವರು ಸರಿದೂಗಿಸಿದರು. ಇದಕ್ಕೂ ಮುನ್ನ ಫೆಡರರ್‌ 2004, 2005, 2006 ಹಾಗೂ 2012ರಲ್ಲಿ ಚಾಂಪಿಯನ್‌ ಆಗಿ ಮೂಡಿಬಂದಿದ್ದರು.ಇನ್ನೊಂದೆಡೆ ವಾವ್ರಿಂಕ ಅವರಿಗೆ ಇದು ಮೊದಲ ಇಂಡಿಯನ್‌ ವೆಲ್ಸ್‌ ಫೈನಲ್‌.
ಫೆಡರರ್‌ ವಿರುದ್ಧ ಆಡಿದ 23 ಪಂದ್ಯಗಳಲ್ಲಿ ಅನುಭವಿಸಿದ 20ನೇ ಸೋಲು.

35ರ ಹರೆಯದ ರೋಜರ್‌ ಫೆಡರರ್‌ ಎಟಿಪಿ ಪ್ರಶಸ್ತಿ ಗೆದ್ದ ಅತೀ ಹಿರಿಯ ಟೆನಿಸಿಗನೆಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಹಿಂದಿನ ದಾಖಲೆ ಅಮೆರಿಕದ ಆ್ಯಂಡ್ರೆ ಅಗಾಸ್ಸಿ ಹೆಸರಲ್ಲಿತ್ತು. ಅವರು 34ರ ಹರೆಯದಲ್ಲಿ ಸಿನ್ಸಿನಾಟಿ ಟೆನಿಸ್‌ ಪ್ರಶಸ್ತಿ ಜಯಿಸಿದ್ದರು (2004).

"ಕಳೆದ ವರ್ಷ ನಾನು ಒಂದೂ ಪ್ರಶಸ್ತಿ ಜಯಿಸಿರಲಿಲ್ಲ. ಈ ವರ್ಷ ಭರ್ಜರಿ ಎನ್ನುವಂಥ ಆರಂಭವನ್ನೇ ಕಂಡುಕೊಂಡಿದ್ದೇನೆ. ಆಸ್ಟ್ರೇಲಿಯನ್‌ ಓಪನ್‌ ಬಳಿಕ ಈಗ ಇಂಡಿಯನ್‌ ವೆಲ್ಸ್‌ ಸರದಿ. ಇದೊಂದು ಖುಷಿಯ ಅನುಭವ...' ಎಂದು ಫೆಡರರ್‌ ಪ್ರತಿಕ್ರಿಯಿಸಿದ್ದಾರೆ.

ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನದಲ್ಲಿರುವ ಫೆಡರರ್‌, ವಿಂಬಲ್ಡನ್‌ ಮುಗಿಯುವುದರೊಳಗೆ ಎಂಟಕ್ಕೇರುವ ಗುರಿ ಹಾಕಿಕೊಂಡಿದ್ದಾರೆ.

"ಪಂದ್ಯ ಅತ್ಯಂತ ನಿಕಟವಾಗಿತ್ತು. ಇದೊಂದು ಕಠಿನ ಸೋಲು. ಆದರೆ ನಾನು ಸೋತದ್ದು ಫೈನಲ್‌ನಲ್ಲಿ ಎಂಬುದು ಸಮಾಧಾನಕರ ಸಂಗತಿ...' ಎಂದಿದ್ದಾರೆ ಸ್ಟಾನಿಸ್ಲಾಸ್‌ ವಾವ್ರಿಂಕ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ