ಗುರುವಾರ, ಮಾರ್ಚ್ 30, 2017

ರುಮಾಹ್:- ಜಗತ್ತಿನ ಅತಿ ದೊಡ್ಡ ಒಂಟೆ ಉತ್ಸವ

ರುಮಾಹ್: ಜಗತ್ತಿನ ಅತಿ ದೊಡ್ಡ ಒಂಟೆ ಉತ್ಸವಕ್ಕೆ ಚಾಲನೆ

ರಿಯಾದ್, ಮಾ. 20: ಸೌದಿ ಅರೇಬಿಯದ ದೊರೆ ಸಲ್ಮಾನ್ ಅವರ ಆಶ್ರಯದಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಒಂಟೆ ಉತ್ಸವ ರಿಯಾದ್‌ನಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ರುಮಾಹ್‌ನಲ್ಲಿ ರವಿವಾರ ಆರಂಭಗೊಂಡಿದೆ.

28 ದಿನಗಳ ‘ದೊರೆ ಅಬ್ದುಲಝೀಝ್ ಒಂಟೆ ಉತ್ಸವ’ದಲ್ಲಿ ಒಂಟೆಗಳ ಸೌಂದರ್ಯ ಸ್ಪರ್ಧೆ ನಡೆಯಲಿದೆ ಹಾಗೂ 114 ಮಿಲಿಯ ಸೌದಿ ರಿಯಾಲ್ (ಸುಮಾರು 200 ಕೋಟಿ ರೂಪಾಯಿ)ನಷ್ಟು ಅಗಾಧ ಮೊತ್ತದ ಬಹುಮಾನವಿದೆ.

1999ರಲ್ಲಿ ಸ್ಥಳೀಯ ಬೆಡೊಯುನ್ ಜನರ ಗುಂಪೊಂದು ಆರಂಭಿಸಿದ ಈ ಸ್ಪರ್ಧೆಗೆ ಸೌದಿ ರಾಜ ಕುಟುಂಬದ ಬೆಂಬಲ ಲಭಿಸಿತು. ಅದರ ಬೆಳೆಯುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಅದು ಪರಂಪರೆ ಉತ್ಸವವಾಗಿ ಮಾರ್ಪಟ್ಟಿತು ಹಾಗೂ ಜಿಸಿಸಿ ದೇಶಗಳ ಜನರನ್ನು ಆಕರ್ಷಿಸಿತು.

ಸೌದಿ ಅರೇಬಿಯದ ಜೀವನ ಶೈಲಿ ಮತ್ತು ಸಂಸ್ಕೃತಿ ಹಾಗೂ ಬೆಡೊಯುನ್ ಸಂಪ್ರದಾಯಗಳನ್ನು ಆಚರಿಸುವ ಹಬ್ಬವು ಇಂದು 3 ಲಕ್ಷಕ್ಕೂ ಅಧಿಕ ಒಂಟೆಗಳು ಮತ್ತು ಅವುಗಳ ಮಾಲೀಕರನ್ನು ಆಕರ್ಷಿಸುತ್ತಿದೆ.

‘‘ಈ ಹಬ್ಬವು ಇತಿಹಾಸ, ಪರಂಪರೆ ಮತ್ತು ಮನರಂಜನೆಗಳ ವಿಷಯದಲ್ಲಿ ಸೌದಿಗಳು ಮತ್ತು ವಿದೇಶೀಯರಿಗೆ ಅತ್ಯುತ್ತಮ ದೇಣಿಗೆಗಳನ್ನು ನೀಡುತ್ತದೆ’’ ಎಂದು ದೊರೆ ಅಬ್ದುಲಝೀಝ್ ಒಂಟೆ ಉತ್ಸವ ಸಮಿತಿಯ ವಕ್ತಾರ ಡಾ. ತಲಾಲ್ ಬಿನ್ ಖಾಲಿದ್ ಅಲ್-ತಾರಿಫಿ ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ