ಗುರುವಾರ, ಮಾರ್ಚ್ 30, 2017

ನರೇಗಾ ಉದ್ಯೋಗ ಕಾರ್ಡ್ ನಕಲಿ

87 ಲಕ್ಷ ನಕಲಿ ನರೇಗಾ ಉದ್ಯೋಗ ಕಾರ್ಡ್‌ ರದ್ದು

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹಣದ ದುರ್ಬಳಕೆ ತಡೆಯಲು  87 ಲಕ್ಷ ಉದ್ಯೋಗ ಕಾರ್ಡ್‌ಗಳನ್ನು  ತೆಗೆದು ಹಾಕಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ರಾಮ್ ಕೃಪಾಲ್ ಯಾದವ್ ತಿಳಿಸಿದ್ದಾರೆ.
  ಉದ್ಯೋಗ ಖಾತರಿ ಯೋಜನೆಯ ಲಾಭವು ನಿಜವಾದ ಫಲಾನುಭವಿಗೆ ತಲುಪುತ್ತಿದೆಯೇ ಎಂಬ ಬಗ್ಗೆ ತಪಾಸಣೆ ನಡೆಸಿದಾಗ 87 ಲಕ್ಷ ಉದ್ಯೋಗ ಕಾರ್ಡ್‌ಗಳು ನಕಲಿ ಫಲಾನುಭವಿಗಳ ಹೆಸರಿನಲ್ಲಿ ಇರುವುದು ಕಂಡುಬಂದಿದೆ.  ಸತ್ತವರ ಹೆಸರಿನಲ್ಲೂ ಕಾರ್ಡ್‌ಗಳನ್ನು  ಮಾಡಿ ಹಣ ಲಪಟಾಯಿಸಲಾಗುತ್ತಿತ್ತು ಎಂದು ಸಚಿವರು ತಿಳಿಸಿದರು.   12.49 ಕೋಟಿ ಉದ್ಯೋಗ ಕಾರ್ಡ್‌ಗಳ ಪೈಕಿ ಶೇಕಡ 63ರಷ್ಟು ಕಾರ್ಡ್‌ಗಳ ತಪಾಸಣೆ ಮಾಡಲಾಗಿದೆ. ನೋಂದಾಯಿತ ಕಾರ್ಮಿಕರಿಗೆ ಕನಿಷ್ಠ ನೂರು ದಿನ ಉದ್ಯೋಗ ಒದಗಿಸುವ ಈ ಮಹಾತ್ವಾಕಾಂಕ್ಷಿ ಯೋಜನೆ ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ಕಾರ್ಮಿಕರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ ಎಂದರು.
  ಹಳ್ಳಿಗಳಲ್ಲಿ ಕೃಷಿ ಕೆಲಸ ಇಲ್ಲದ ಸಂದರ್ಭದಲ್ಲಿ ಉದ್ಯೋಗ ಒದಗಿಸಿ ಸಂಪಾದನೆಗೆ ಅವಕಾಶ ಮಾಡಿಕೊಡುವುದು ಯೋಜನೆಯ ಮುಖ್ಯ ಉದ್ದೇಶ. ಬರಪೀಡಿತ ಪ್ರದೇಶಗಳಲ್ಲಿ ಕನಿಷ್ಠ 150 ದಿನ ಉದ್ಯೋಗ ಒದಗಿಸಲಾಗುತ್ತಿದೆ. ಜಲ ಸಂರಕ್ಷಣೆ, ಭೂ ಅಭಿವೃದ್ಧಿ, ಅಣೆಕಟ್ಟೆ ಮತ್ತು ನೀರಾವರಿ ಕಾಲುವೆಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣಕ್ಕೆ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ