ಗುರುವಾರ, ಮಾರ್ಚ್ 30, 2017

ಧ್ವನಿ ಮತದ ಮೂಲಕ 4 ಜಿ,ಎಸ್,ಟಿ ಮಸೂದೆಗೆ ಅನುಮೋದನೆ

ಲೋಕಸಭೆ: ಧ್ವನಿ ಮತದ ಮೂಲಕ 4 ಜಿಎಸ್ ಟಿ ಮಸೂದೆಗಳಿಗೆ ಅನುಮೋದನೆ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ್ದ ಜಿಎಸ್ ಟಿಗೆ ಸಂಬಂಧಿಸಿದ 4 ಪ್ರಮುಖ ಮಸೂದೆಗಳನ್ನು ಬುಧವಾರ ಲೋಕಸಭೆಯಲ್ಲಿ ಆಂಗೀಕರಿಸಲಾಗಿದೆ.

ಸತತ 9 ಗಂಟೆಗಳ ಕಾಲ ಸುಧೀರ್ಘ ಚರ್ಚೆಯ ಬಳಿಕ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಸಿ.ಜಿ.ಎಸ್.ಟಿ) ಮಸೂದೆ 2017, ಏಕೀಕೃತ ಸರಕು ಮತ್ತು ಸೇವಾ ತೆರಿಗೆ ಮಸೂದೆ-2017, ಕೇಂದ್ರಾಡಳಿತ ಪ್ರದೇಶ ಸರಕು  ಮತ್ತು ಸೇವಾ ತೆರಿಗೆ ಮಸೂದೆ-2017, ಜಿಎಸ್ ಟಿ ಮಸೂದೆ (ರಾಜ್ಯಗಳಿಗೆ ಪರಿಹಾರ ನೀಡುವ ಮಸೂದೆ)-2017 ಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಸದಸ್ಯರ ಧ್ವನಿಮತದ ಮೂಲಕ ಒಂದರ ಹಿಂದೆ ಒಂದು  ಮಸೂದೆಯಂತೆ ಒಟ್ಟು 4 ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಕೇಂದ್ರ ಮತ್ತು ಏಕೀಕೃತ ಜಿಎಸ್ ಟಿ ಮಸೂದೆಯು ದೇಶವ್ಯಾಪಿ ಏಕರೂಪದ ದಂಡ ಮತ್ತು ತೆರಿಗೆ ಸಂಗ್ರಹಿಸುವ ಕಾನೂನಾಗಿದ್ದು, ಜಿಎಸ್ ಟಿ ಪರಿಹಾರ ಮಸೂದೆಯೂ ಜಿಎಸ್ ಟಿ ಜಾರಿ  ಬಳಿಕ ರಾಜ್ಯ ಸರ್ಕಾರಗಳಿಗಾಗುವ  ನಷ್ಟವನ್ನು ಭರಿಸುವ ಮತ್ತು ಪರಿಹಾರ ನೀಡುವ ಮಸೂದೆಯಾಗಿದೆ.
ಇದು ಕೇಂದ್ರಾಡಳಿತ ಪ್ರದೇಶಕ್ಕೂ ಅನ್ವಯವಾಗಲಿದೆ ಎಂದು ಜೇಟ್ಲಿ ಸದನಕ್ಕೆ ಸ್ಪಷ್ಟಪಡಿಸಿದರು.

ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಚಿವ ಸಂಪುಟದ ಅನುಮೋದನೆ ಪಡೆದು ಮಾರ್ಚ್ 27 ರಂದು ಲೋಕಸಭೆಯಲ್ಲಿ ಈ ನಾಲ್ಕು ಜಿಎಸ್ ಟಿ ಮಸೂದೆಗಳನ್ನು ಮಂಡಿಸಿದ್ದರು.  ಜಿಎಸ್ ಟಿ ಜಾರಿಯ (ಜುಲೈ.1 ರಿಂದ) ಒಳಗಾಗಿ ಈ  ಮಸೂದೆಗಳನ್ನು ರಾಜ್ಯದ ವಿಧಾನಸಭೆಗಳಲ್ಲೂ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ. ಜಿಎಸ್ ಟಿ ಜಾರಿಯಿಂದ ಆರ್ಥಿಕ ಬೆಳವಣಿಗೆ ಶೇ.0.5 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ