ಗುರುವಾರ, ಮಾರ್ಚ್ 30, 2017

ಪತಂಗಗಳು ಬೆಳಕಿನತ್ತ ಆಕರ್ಷಿತವಾಗುವುದೇಕೆ..?

ಪತಂಗಗಳು ಬೆಳಕಿನತ್ತ ಆಕರ್ಷಿತವಾಗುವುದೇಕೆ...?

ಪತಂಗಗಳು ಹಾರಾಟದಲ್ಲಿ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಚಂದ್ರನನ್ನು ಬಳಸಿಕೊಳ್ಳುವುದರಿಂದ ಅವು ಬೆಳಕಿನತ್ತ ಆಕರ್ಷಿತಗೊಳ್ಳುತ್ತವೆ. ಕೃತಕ ಬೆಳಕು ಇದ್ದಾಗ ಗೊಂದಲಕ್ಕೊಳಗಾಗುವ ಪತಂಗಗಳು ಅದನ್ನು ಚಂದ್ರನೆಂದು ತಪ್ಪಾಗಿ ಗ್ರಹಿಸುತ್ತವೆ.

ಪತಂಗಗಳಿಗೆ ಚಂದ್ರನು ಆಪ್ಟಿಕಲ್ ಇನ್ಫಿನಿಟಿ ಅಥವಾ ದೃಷ್ಟಿಸಂಬಂಧಿ ಅನಂತದಲ್ಲಿ ಗೋಚರಿಸುತ್ತಾನೆ. ಅಂದರೆ ಪತಂಗದ ಕಣ್ಣುಗಳಿಂದ ನೋಡಿದರೆ ಬೆಳಕಿನ ಕಿರಣಗಳು ಭೂಮಿಗೆ ಸಮಾನಾಂತರವಾಗಿ ಕಾಣುತ್ತವೆ. ಹೀಗಾಗಿ ಪತಂಗಗಳು,ವಿಶೇಷವಾಗಿ ತಮ್ಮ ರೇಖಾತ್ಮಕ ಹಾರಾಟಕ್ಕೆ ಚಂದ್ರನನ್ನು ಮಾರ್ಗದರ್ಶಿ ಸಾಧನವಾಗಿ ಬಳಸಿಕೊಳ್ಳುತ್ತವೆ.

ಆಪ್ಟಿಕಲ್ ಇನ್ಫಿನಿಟಿಯು ಸ್ಥಳಕ್ಕೆ ಸಂಬಂಧಿಸಿದಂತೆ ತನ್ನ ತಾಣವನ್ನು ನಿರಂತರವಾಗಿ ಹೊಂದಿಸಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ. ಇತರ ಗೋಚರ ಹೆಗ್ಗುರುತುಗಳು ಕಂಡು ಬಾರದಿರಬಹುದಾದ ರಾತ್ರಿಯ ಅಂಧಕಾರವನ್ನು ಪರಿಗಣಿಸಿದಾಗ ಇದು ತುಂಬ ಮಹತ್ವದ್ದಾಗುತ್ತದೆ.

ಕೃತಕ ಬೆಳಕು ಚಂದ್ರನಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಬಹುದು ಮತ್ತು ಪತಂಗಗಳು ಅದನ್ನೇ ಚಂದ್ರನೆಂದು ತಪ್ಪಾಗಿ ಭಾವಿಸುತ್ತವೆ. ಹೀಗಾಗಿ ಅವು ಕೃತಕ ಬೆಳಕಿನ ದಿಕ್ಕಿನಲ್ಲಿ ಮುಂದುವರಿಯುತ್ತವೆ. ಅವು ಕೃತಕ ಬೆಳಕಿನ ಸಮೀಪ ಹಾರುವಾಗ ಆಪ್ಟಿಕಲ್ ಇನ್ಫಿನಿಟಿಯನ್ನು ಕಳೆದುಕೊಳ್ಳುತ್ತವೆ ಮತ್ತು ದಿಕ್ಕು ತಪ್ಪಿದಂತಾಗುತ್ತವೆ.

ತನ್ನನ್ನೇ ತಾನು ಮರುಹೊಂದಿಸಿಕೊಳ್ಳುವ ಪ್ರಯತ್ನದಲ್ಲಿ ಪತಂಗವು ನಿರಂತರವಾಗಿ ಕೃತಕ ಬೆಳಕಿನ ಸುತ್ತ ಗಿರಕಿ ಹೊಡೆಯಬಹುದು. ಆದರೆ ಬೆಳಕಿನ ಮೂಲವು ಆಪ್ಟಿಕಲ್ ಇನ್ಫಿನಿಟಿ ಅಲ್ಲವಾದ್ದರಿಂದ ತನ್ನನ್ನು ತಾನು ಮರುಹೊಂದಿಸಿಕೊಳ್ಳುವ ಪತಂಗದ ಪ್ರಯತ್ನ ವಿಫಲಗೊಳ್ಳುತ್ತದೆ ಮತ್ತು ಅಂತಿಮವಾಗಿ ಅದು ಕೃತಕ ಬೆಳಕನ್ನು ಸೂಸುವ ದೀಪದ ಮೇಲೆ ಬಿದ್ದು ಸುಟ್ಟುಹೋಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ