ಗುರುವಾರ, ಮಾರ್ಚ್ 30, 2017

ಐದನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್

ಐದನೇ ಪ್ರಶಸ್ತಿಗೆ ಮುತ್ತಿಕ್ಕಿದ ಫೆಡರರ್‌

ಇಂಡಿಯಾನ ವೆಲ್ಸ್‌ (ರಾಯಿಟರ್ಸ್‌/ ಎಎಫ್‌ಪಿ): ಕುತೂಹಲ ಕೆರಳಿಸಿದ್ದ ಫೈನಲ್‌ ಹೋರಾಟದಲ್ಲಿ ತಮ್ಮ ಆತ್ಮೀಯ ಸ್ನೇಹಿತ ಸ್ಟಾನಿಸ್ಲಾಸ್‌ ವಾವ್ರಿಂಕ ಅವರ ಸವಾಲು ಮೀರಿ ನಿಂತ ರೋಜರ್‌ ಫೆಡರರ್‌ ಅವರು ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸ್ವಿಟ್ಜರ್‌ಲೆಂಡ್‌ನ ಫೆಡರರ್‌ 6–4, 7–5ರ ನೇರ ಸೆಟ್‌ಗಳಿಂದ ಜಯಭೇರಿ ಮೊಳಗಿ ಸಿದರು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಪ್ರಶಸ್ತಿ ಗೆದ್ದು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದರು. ನೊವಾಕ್‌ ಈ ಮೊದಲು ಟೂರ್ನಿಯಲ್ಲಿ ಐದು ಟ್ರೋಫಿ ಎತ್ತಿಹಿಡಿದ ಹೆಗ್ಗಳಿಕೆ ಹೊಂದಿದ್ದರು.

35 ವರ್ಷದ ರೋಜರ್‌ ಅವರು ಎಟಿಪಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ ಎಂಬ ಹಿರಿಮೆಯನ್ನೂ ತಮ್ಮದಾಗಿಸಿಕೊಂಡರು.
ಈ ಸಾಧನೆ ಮೊದಲು ಆ್ಯಂಡ್ರೆ ಅಗಾಸ್ಸಿ ಅವರ ಹೆಸರಿನಲ್ಲಿತ್ತು. ಅಗಾಸ್ಸಿ ಅವರು 2004ರಲ್ಲಿ ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು. ಆಗ ಅವರಿಗೆ 34 ವರ್ಷ ವಯಸ್ಸಾಗಿತ್ತು.

ಗಾಯದ ಕಾರಣ ಆರು ತಿಂಗಳು  ಅಂಗಳದಿಂದ ದೂರ ಉಳಿದಿದ್ದ ಫೆಡರರ್‌ ಇದರಿಂದ ಚೇತರಿಸಿಕೊಂಡ ಬಳಿಕ ಈ ವರ್ಷದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್‌ನಲ್ಲಿ  ಪ್ರಶಸ್ತಿ ಗೆದ್ದಿದ್ದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನ ಹೊಂದಿದ್ದ ರೋಜರ್‌ ಈ ಟೂರ್ನಿಯಲ್ಲೂ ಅಮೋಘ ಸಾಮರ್ಥ್ಯ ತೋರಿದರು.

ಸೆಮಿಫೈನಲ್‌ನಲ್ಲಿ  ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರ ಸದ್ದಡಗಿಸಿ ವಿಶ್ವಾಸದಿಂದ ಪುಟಿಯುತ್ತಿದ್ದ ಅವರು ಫೈನಲ್‌ ಹೋರಾಟದಲ್ಲೂ ಆಕ್ರಮಣಕಾರಿ ಆಟದ ಮೂಲಕ ಅಭಿಮಾನಿಗಳ ಮನಗೆದ್ದರು. ಸ್ವಿಟ್ಜರ್‌ಲೆಂಡ್‌ನವರೇ ಆದ ವಾವ್ರಿಂಕ ವಿರುದ್ಧ 19–3ರ ಗೆಲುವಿನ ದಾಖಲೆ ಹೊಂದಿದ್ದ ರೋಜರ್‌ ಆರಂಭಿಕ ಸೆಟ್‌ನಲ್ಲಿ ಶರವೇಗದ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿ ಸುವ ಪ್ರಯತ್ನ ನಡೆಸಿದರು. ಆದರೆ ವಾವ್ರಿಂಕ ಇದಕ್ಕೆ ಬಗ್ಗಲಿಲ್ಲ. ಹೀಗಾಗಿ ಮೊದಲ ಎಂಟು ಗೇಮ್‌ಗಳಲ್ಲಿ ಸಮಬಲದ ಹೋರಾಟ ಕಂಡು ಬಂತು. ಒಂಬತ್ತನೇ ಗೇಮ್‌ನಲ್ಲಿ ತಮ್ಮ ಸರ್ವ್‌ ಉಳಿಸಿಕೊಂಡ ಫೆಡರರ್‌ ಮರು ಗೇಮ್‌ನಲ್ಲಿ ಸ್ನೇಹಿತನ ಸರ್ವ್‌ ಮುರಿದು ಸೆಟ್‌ ತಮ್ಮದಾಗಿಸಿಕೊಂಡರು.

ವೆಸ್ನಿನಾಗೆ ಟ್ರೋಫಿ
ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಪ್ರಶಸ್ತಿ ಜಯಿಸಿ ದ್ದಾರೆ. ಫೈನಲ್‌ ಹೋರಾಟದಲ್ಲಿ ವೆಸ್ನಿ ನಾ 6–7, 7–5, 6–4ರಲ್ಲಿ ತಮ್ಮದೇ ದೇಶದ ಸ್ವೆಟ್ಲಾನ ಕುಜ್ನೆತ್ಸೋವಾ ಅವರ ನ್ನು ಮಣಿಸಿದರು.

ಆರನೇ ಸ್ಥಾನಕ್ಕೇರಿದ ರೋಜರ್‌
ಇಲ್ಲಿ ಪ್ರಶಸ್ತಿ ಗೆದ್ದಿರುವ ಫೆಡರರ್‌ ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ಈ ಟೂರ್ನಿಗೂ ಮುನ್ನ ಅವರು 10ನೇ ಸ್ಥಾನದಲ್ಲಿದ್ದರು. ಇಲ್ಲಿ ರನ್ನರ್‌ ಅಪ್‌ ಆದ ವಾವ್ರಿಂಕ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬ್ರಿಟನ್‌ನ ಆ್ಯಂಡಿ ಮರ್ರೆ ಅಗ್ರಸ್ಥಾನ ದಲ್ಲಿದ್ದು, ಸರ್ಬಿಯಾದ ನೊವಾಕ್‌ ಜೊಕೊವಿಚ್‌ ನಂತರದ ಸ್ಥಾನ ಹೊಂದಿ ದ್ದಾರೆ.

ಸ್ಪೇನ್‌ನ ರಫೆಲ್‌ ನಡಾಲ್‌ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅಗ್ರಪಟ್ಟ ಅಲಂಕರಿಸಿದ್ದಾರೆ. ಅವರು ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಅವರನ್ನು ಹಿಂದಿಕ್ಕಿದ್ದಾರೆ. ಕೆರ್ಬರ್‌ ಖಾತೆಯಲ್ಲಿ 7, 515 ಪಾಯಿಂಟ್ಸ್‌ ಇದ್ದರೆ, ಸೆರೆನಾ 7, 130 ಅಂಕ ಹೊಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ