ಗುರುವಾರ, ಮಾರ್ಚ್ 30, 2017

ಮಸೂದೆ ವಾಪಸ್: ಟ್ಂಪ್ ಗೆ ಮುಖಭಂಗ

ಮಸೂದೆ ವಾಪಸ್‌: ಟ್ರಂಪ್‌ಗೆ ಮುಖಭಂಗ

ವಾಷಿಂಗ್ಟನ್‌: ‘ಒಬಾಮಕೇರ್‌’ ಆರೋಗ್ಯ ನೀತಿ ರದ್ದುಗೊಳಿಸಿ ಪರ್ಯಾಯ ನೀತಿ ಜಾರಿಗೊಳಿಸುವುದಕ್ಕೆ ಸಂಬಂಧಿಸಿ ಅಮೆರಿಕದ ಕಾಂಗ್ರೆಸ್‌ನಲ್ಲಿ ಮಂಡಿಸಿದ್ದ ಮಸೂದೆಯನ್ನು ವಾಪಸ್‌ ಪಡೆಯಲಾಗಿದೆ.
  ಮಸೂದೆ ಜಾರಿಗೊಳಿಸಲು ಅಗತ್ಯದ ಮತಗಳನ್ನು ಕಲೆಹಾಕಲು ವಿಫಲವಾಗಿರುವ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ.  ಮಸೂದೆ ಅಂಗೀಕಾರಗೊಳ್ಳಲು ಅಮೆರಿಕ ಕಾಂಗ್ರೆಸ್‌ನ ಕೆಳಮನೆಯಲ್ಲಿ (ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌) ಶುಕ್ರವಾರ ಮತದಾನ ನಡೆಯಬೇಕಿತ್ತು.
  ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ 435 ಸದಸ್ಯರಿದ್ದಾರೆ. ರಿಪಬ್ಲಿಕನ್‌ ಪಕ್ಷಕ್ಕೆ ಸರಳ ಬಹುಮತವಿದ್ದು, 235 ಸದಸ್ಯರನ್ನು ಹೊಂದಿದೆ. ಆದರೆ ಈ ಮಸೂದೆಗೆ ರಿಪಬ್ಲಿಕನ್‌ ಪಕ್ಷದಲ್ಲೇ ವಿರೋಧವಿದೆ.
  ಮತದಾನ ನಡೆದರೆ ಸೋಲು ಖಚಿತವಾದ್ದರಿಂದ  ಸ್ಪೀಕರ್‌ ಪೌಲ್‌ ರ್ಯಾನ್ ಅವರು ಮಸೂದೆಯನ್ನು ವಾಪಸ್‌ ಪಡೆಯುವ ನಿರ್ಧಾರ ತೆಗೆದುಕೊಂಡರು.
ಮಸೂದೆ ಜಾರಿಗೆ ಬೆಂಬಲ ಗಿಟ್ಟಿಸಲು ಟ್ರಂಪ್‌ ಅವರ ಪರವಾಗಿ ಸ್ಪೀಕರ್‌ ರ್ಯಾನ್ ಕೊನೆಯವರೆಗೂ ಕಸರತ್ತು ನಡೆಸಿದ್ದರು. ಮಸೂದೆ ಪರ ಮತ ಹಾಕುವಂತೆ ಅಮೆರಿಕ ಅಧ್ಯಕ್ಷರು ಗುರುವಾರ ರಿಪಬ್ಲಿಕನ್‌ ಪಕ್ಷದ ಸದಸ್ಯರಿಗೆ ಕಟ್ಟಪ್ಪಣೆ ವಿಧಿಸಿದ್ದರು.   ಆದರೂ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನಲ್ಲಿ ಹೊಸ ಮಸೂದೆ ಅಂಗೀಕಾರವಾಗದೇ ಇರುವುದು ಟ್ರಂಪ್ ಆಡಳಿತಕ್ಕೆ ಉಂಟಾದ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.   ಪಕ್ಷಾಂತರ ತಡೆ ಕಾಯ್ದೆ ಇಲ್ಲ: ಭಾರತದಲ್ಲಿರುವಂತೆ ಅಮೆರಿಕದ ಕಾಂಗ್ರೆಸ್‌ನಲ್ಲಿ ಪಕ್ಷಾಂತರ ತಡೆ ಕಾಯ್ದೆ ಇಲ್ಲ. ಇದರಿಂದ ಅಮೆರಿಕದ ಜನಪ್ರತಿನಿಧಿಗಳು ತಮ್ಮ ಇಚ್ಛೆಯಂತೆ ಮಸೂದೆಯ ಪರ ಅಥವಾ ವಿರೋಧವಾಗಿ ಮತ ಚಲಾಯಿಸಬಹುದು. ಪಕ್ಷದ ನಾಯಕತ್ವದ  ಆದೇಶದಂತೆ ಮತ ಹಾಕಬೇಕೆಂದಿಲ್ಲ.
  ಡೆಮಾಕ್ರೆಟಿಕ್‌ ಪಕ್ಷದ ಸಂಭ್ರಮ: ಮಸೂದೆ ವಾಪಸ್‌ ಪಡೆದ ಕ್ರಮಕ್ಕೆ ಡೆಮಾಕ್ರೆಟಿಕ್‌ ಪಕ್ಷದ ಜನಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಮಸೂದೆ ವಿರೋಧಿಸುವಂತೆ ಅಮೆರಿಕದ ಮೂಲೆ ಮೂಲೆಯಲ್ಲಿರುವ ಜನರು ತಮ್ಮ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ. ಅವರ ಪ್ರಯತ್ನಕ್ಕೆ ಗೆಲುವು ದೊರೆತಿದೆ’ ಎಂದು ಹಿಲರಿ ಕ್ಲಿಂಟನ್‌ ಪ್ರತಿಕ್ರಿಯಿಸಿದ್ದಾರೆ.   ನಿರಾಸೆ ವ್ಯಕ್ತಪಡಿಸಿದ ಟ್ರಂಪ್‌
ಮಸೂದೆಯನ್ನು ವಾಪಸ್‌ ಪಡೆದದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಚ್ಚರಿ ಹಾಗೂ ನಿರಾಸೆ ವ್ಯಕ್ತಪಡಿಸಿದ್ದಾರೆ.
ಒಬಾಮಕೇರ್‌ ನೀತಿ ದೊಡ್ಡ ದುರಂತವಾಗಿದೆ. ಮುಂದಿನ ದಿನಗಳಲ್ಲಿ ನಿಮಗೆ ಸಂಕಷ್ಟ ಎದುರಾಗಲಿದೆ ಎಂದು ಅವರು ಅಮೆರಿಕದ ಜನರಿಗೆ ಎಚ್ಚರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ