ಗುರುವಾರ, ಮಾರ್ಚ್ 30, 2017

ಯುಎಇಯಲ್ಲಿ 10 ಭಾರಯೀಯರನ್ನು ರಕ್ಷಿಸಿದ NRI ಉದ್ಯಮಿ

ಯುಎಇಯಲ್ಲಿ 10 ಭಾರತೀಯರನ್ನು ಮರಣದಂಡನೆಯಿಂದ ಪಾರು ಮಾಡಿದ ಎನ್ನಾರೈ ಉದ್ಯಮಿ ಎಸ್‌ಪಿಎಸ್ ಒಬೆರಾಯ್

ದುಬೈ,ಮಾ.29: ದುಬೈನಲ್ಲಿ ಉದ್ಯಮಿಯಾಗಿರುವ ಅನಿವಾಸಿ ಭಾರತೀಯ ಎಸ್‌ಪಿಎಸ್ ಒಬೆರಾಯ್ ಅವರ ಮಟ್ಟಿಗೆ ಪರೋಪಕಾರವೇ ಜೀವನವಿಧಾನವಾಗಿದೆ. ಅವರ ಈ ಉದಾತ್ತ ಗುಣವನ್ನು ಗುರುತಿಸಿದ ಆಕ್ಸ್‌ಫರ್ಡ್ ವಿವಿಯು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸುವ ಮೂಲಕ ತನ್ನನ್ನೇ ಗೌರವಿಸಿಕೊಂಡಿದೆ. ಮೂಲತಃ ಪಂಜಾಬ್‌ನವರಾಗಿರುವ 59ರ ಹರೆಯದ ಒಬೆರಾಯ್ ಯುಎಇಯಲ್ಲಿ ಪಾಕಿಸ್ತಾನಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದಕ್ಕಾಗಿ ಮರಣ ದಂಡನೆಗೆ ಗುರಿಯಾಗಿದ್ದ ತನ್ನ ತವರು ರಾಜ್ಯದ 10 ಜನರ ಪ್ರಾಣವುಳಿಸಲು ‘ರಕ್ತ ನಿಧಿ’ಯನ್ನು ಪಾವತಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಅಂದ ಹಾಗೆ ಒಬೆರಾಯ್ ಪ್ರತಿವರ್ಷ ದಾನಧರ್ಮಗಳಿಗಾಗಿಯೇ ವಿನಿಯೋಗಿಸುವ ಮೊತ್ತ ಬರೋಬ್ಬರಿ 36 ಕೋ.ರೂ.ಗಳು. ಪಂಜಾಬಿಗಳು ಮಾತ್ರವಲ್ಲ, ವಿಶೇಷವಾಗಿ ಮಧ್ಯ ಪ್ರಾಚ್ಯ ಅಥವಾ ಪಶ್ಚಿಮ ಏಷ್ಯಾದಲ್ಲಿ ತನ್ನ ನೆರವು ಕೋರಿ ಬರುವ ಯಾರಿಗೇ ಆದರೂ ಆಪದ್ಬಾಂಧವರಾಗಿ ಹೆಸರು ಮಾಡಿದ್ದಾರೆ.

ಕಳೆದ ವಾರ ಯುಎಇಯ ನ್ಯಾಯಾಲಯವೊಂದರಲ್ಲಿ 60 ಲ.ರೂ.(2 ಲ.ದಿರ್ಹಮ್ಸ್)ಗಳನ್ನು ಒಬೆರಾಯ್ ಠೇವಣಿಯಿರಿಸಿದ್ದಾರೆ. ಕೊಲೆಯಾಗಿರುವ ಪಾಕಿಸ್ತಾನಿ ವ್ಯಕ್ತಿಯ ತಂದೆ ಕ್ಷಮಾದಾನ ನೀಡಲು ಒಪ್ಪಿಕೊಂಡಿರುವುದರಿಂದ ಮರಣ ದಂಡನೆಗೆ ಗುರಿಯಾಗಿ ಅಲ್ಲಿಯ ಜೈಲಿನಲ್ಲಿ ಕೊಳೆಯುತ್ತಿರುವ ಪಂಜಾಬಿನ 10 ಯುವಕರು ಶೀಘ್ರವೇ ಬಿಡುಗಡೆಗೊಳ್ಳಲಿದ್ದಾರೆ. ಒಬೆರಾಯ್ ಈವರೆಗೆ ಇಂತಹ 88 ಜನರಿಗೆ ಜೀವದಾನ ಮಾಡಿದ್ದಾರೆ.

ಈ ಯುವಕರನ್ನು ಸ್ವದೇಶಕ್ಕೆ ವಾಪಸ್ ಕರೆತರಲಿರುವ ಒಬೆರಾಯ್ ಅವರಿಗೆ ಪಂಜಾಬ್‌ನಲ್ಲಿರುವ ತನ್ನ ಸಮಾಜ ಸೇವಾ ಸಂಸ್ಥೆ ‘ಸರ್ಬತ್ ದಾ ಭಲಾ ಟ್ರಸ್ಟ್’ನ ಜಿಲ್ಲಾ ಕಚೇರಿಗಳಲ್ಲಿ ಉದ್ಯೋಗಗಳನ್ನು ನೀಡುವ ನಿರೀಕ್ಷೆಯಿದೆ.

ದುಬೈನಲ್ಲಿ ನಿರ್ಮಾಣ ಉದ್ಯಮವನ್ನು ಹೊಂದಿರುವ ಒಬೆರಾಯ್ 1992ರಲ್ಲಿ ಭಾರತದಿಂದ ಅಲ್ಲಿಗೆ ತೆರಳಿದ್ದರು.
ಅಗತ್ಯವುಳ್ಳವರಿಗೆ ಪಿಂಚಣಿಗಳನ್ನು ಮತ್ತು ಉದ್ಯೋಗಗಳನ್ನು ಪಡೆಯಲು ನೆರವಾಗಲು ಪಂಜಾಬ್‌ನಲ್ಲಿ ಹಲವರು ಕಚೇರಿಗಳನ್ನು ಹೊಂದಿರುವ ಒಬೆರಾಯ್ ಅವರ ಸೇವಾ ಚಟುವಟಿಕೆಗಳು ಈಗ ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಿಗೂ ವಿಸ್ತರಿಸುತ್ತಿದೆ. ಅಲ್ಲಿ ಡಯಾಲಿಸಿಸ್ ಘಟಕಗಳನ್ನು ಮತ್ತು ಶಿಶುವಿಹಾರಗಳನ್ನು ಆರಂಭಿಸಲು ಅವರು ಯೋಜನೆಯನ್ನು ರೂಪಿಸುತ್ತಿದ್ದಾರೆ. ಅಲ್ಲದೆ ಜೈಲಿನಲ್ಲಿರುವ ಕೈದಿಗಳಿಗೆ ಕಂಪ್ಯೂಟರ್ ಗಳನ್ನೂ ಕೊಡುಗೆಯಾಗಿ ನೀಡಲಿದ್ದಾರೆ.

  ಹರ್‌ನಾಮ್ ಬ್ರಾಂಡ್‌ನ ಆಹಾರ ಉತ್ಪನ್ನಗಳ ತಯಾರಕರಾಗಿರುವ ಒಬೆರಾಯ್ ಚತುರ ಉದ್ಯಮಿ ಎಂದೇ ಗುರುತಿಸಿಕೊಂಡಿದ್ದಾರೆ. ದುಬೈನಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ನೆರವಾಗಲು ನೀರು ತುಂಬಿದ ಪ್ರದೇಶಗಳಿಂದ,ಅಷ್ಟೇ ಏಕೆ,ಸಮುದ್ರದ ಭಾಗಗಳಿಂದಲೂ ನೀರನ್ನು ತೆರವುಗೊಳಿಸುವ ಉದ್ಯಮವೂ ಅವರ ಕೈಯಲ್ಲಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡವೆಂಂಬ ಹೆಗ್ಗಳಿಕೆ ಹೊಂದಿರುವ ಬುರ್ಜ್ ಖಲೀಫಾದ ನಿರ್ಮಾಣ ಕಾಮಗಾರಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ನನ್ನ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿದೆ. ನಾನು ದಾನಧರ್ಮ ಮಾಡಿದಷ್ಟೂ ಉದ್ಯಮದಲ್ಲಿ ನನ್ನ ಲಾಭವೂ ಹೆಚ್ಚುತ್ತಿದೆ ಎನ್ನುತ್ತಾರೆ ಒಬೆರಾಯ್.
ಪಂಜಾಬ್‌ನ ಗ್ರಾಮವೊಂದರಲ್ಲಿ ಜನರ ಕಡು ಬಡತನದ ಜೀವನ ನೋಡಿದ ಬಳಿಕ ತನ್ನಲ್ಲಿ ಪರೋಪಕಾರ ಬುದ್ಧಿ ಹುಟ್ಟಿಕೊಂಡಿತ್ತು ಎನ್ನುವ ಅವರು, ಬಹಳಷ್ಟು ಜನರ ಬಳಿ ಆಹಾರ, ಔಷಧಿ ಅಥವಾ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವಿಲ್ಲ. ತಾನು ಮಾಡುತ್ತಿರುವುದು ಅಂತಹವರ ಕಿಂಚಿತ್ ಸೇವೆ ಅಷ್ಟೇ ಎಂದು ವಿನಮ್ರರಾಗಿ ನುಡಿಯುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ