ಶುಕ್ರವಾರ, ಏಪ್ರಿಲ್ 7, 2017

ಕರ್ನಾಟಕ ರಾಜ್ಯದಲ್ಲಿ ಸವಿರುಚಿ ಕ್ಯಾಂಟೀನ್

ರಾಜ್ಯದಲ್ಲಿ ಸವಿರುಚಿ ಕ್ಯಾಂಟೀನ್‌

ಕರ್ನಾಟಕವನ್ನು 'ಹಸಿವು ಮುಕ್ತ' ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಬಡಕುಟುಂಬಗಳಿಗೆ ಉಚಿತ ಅಕ್ಕಿ, ಗೋದಿ ಹಾಗೂ ರಿಯಾಯಿತಿ ದರದಲ್ಲಿ ಸಕ್ಕರೆ, ಉಪ್ಪು ಹಾಗೂ ತಾಳೆ ನೀಡುವ 'ಅನ್ನಭಾಗ್ಯ' ಯೋಜನೆ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿನ 'ಅಮ್ಮಾ ಕ್ಯಾಂಟೀನ್‌' ಮಾದರಿಯಲ್ಲಿ ರಾಜ್ಯದ ಜನತೆಗೆ 'ಸವಿರುಚಿ ಕ್ಯಾಂಟೀನ್‌' ಹಾಗೂ ಬೆಂಗಳೂರಿನ ನಾಗರಿಕರಿಗೆ 'ನಮ್ಮ ಕ್ಯಾಂಟಿನ್‌' ಭಾಗ್ಯ ಕರುಣಿಸಿದ್ದಾರೆ.

'ಸವಿರುಚಿ' ಹೆಸರಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಲು ಉದ್ದೇಶಿಸಿರುವ ಸರ್ಕಾರ ಅವುಗಳನ್ನು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ನಡೆಸಲು ತೀರ್ಮಾನಿಸಿದೆ. ಈ ಸವಿರುಚಿ ಕ್ಯಾಂಟೀನ್‌ಗಳಲ್ಲಿ ಆಹಾರ ಪದಾರ್ಥಗಳು ಕಡಿಮೆ ಬೆಲೆಯಲ್ಲಿ ಸಿಗಲಿವೆ.
ಅದೇ ರೀತಿ ಹಸಿವುಮುಕ್ತ ಬೆಂಗಳೂರಿಗಾಗಿ ಸರ್ಕಾರ ನಗರದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಊಟ ಮತ್ತು ಉಪಹಾರ ನೀಡಲು 'ನಮ್ಮ ಕ್ಯಾಂಟೀನ್‌' ಯೋಜನೆ ಘೋಷಿಸಿದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‌ಗಳಲ್ಲಿ ಜನಸಾಮಾನ್ಯರಿಗೆ ನಮ್ಮ ಕ್ಯಾಂಟೀನ್‌ ಮೂಲಕ ಕಡಿಮೆ ದರದಲ್ಲಿ ಆಹಾರ ಪದಾರ್ಥಗಳು ದೊರೆಯಲಿದ್ದು, ಬೆಳಗಿನ ಉಪಹಾರಕ್ಕೆ 5 ರೂ., ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಲಾ 10 ರೂ. ನಿಗದಿಪಡಿಸಲಾಗುತ್ತದೆ. ಅದಕ್ಕಾಗಿ 100 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗ ಉಚಿತ ಅಕ್ಕಿ ತೆಗೆದುಕೊಂಡು ಜನರು ಸೋಮಾರಿಗಳಾಗುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಪಡಿತರ ಕಾಳಸಂತೆಗೆ ಮಾರಾಟ ಆಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಇದರ ಜೊತೆಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾಗ ಜಯಲಲಿತಾ ಜಾರಿಗೆ ತಂದಿರುವ 'ಅಮ್ಮಾ ಕ್ಯಾಂಟೀನ್‌' ಮಾದರಿಯಲ್ಲಿ ರಾಜ್ಯದಲ್ಲೂ ಬಡ-ಮಧ್ಯಮ ಹಾಗೂ ಶ್ರಮಿಕ ವರ್ಗಕ್ಕೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಊಟ, ತಿಂಡಿ ಸಿಗುವಂತೆ ಕ್ಯಾಂಟೀನ್‌ ಪ್ರಾರಂಭಿಸಬೇಕು ಎಂಬ ಬೇಡಿಕೆಗಳು ಬಂದಿದ್ದವು.

ತಮಿಳುನಾಡಿನಲ್ಲಿ ಜಯಲಲಿತಾ ಅವರ 'ಅಮ್ಮಾ ಕ್ಯಾಂಟೀನ್‌' ಮಾದರಿಯಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ "ಅಪ್ಪ ಕ್ಯಾಂಟೀನ್‌' ಬರಲಿ ಎಂಬ ಹಾಸ್ಯಮಯ ಒತ್ತಾಯವನ್ನೂ ಕೆಲವರು ಇಟ್ಟಿದ್ದರು. ಅಂತಿಮವಾಗಿ ರಾಜ್ಯದ ಜನತೆಗೆ 'ಸವಿರುಚಿ' ಹಾಗೂ ಬೆಂಗಳೂರಿನ ನಾಗರಿಕರಿಗೆ 'ನಮ್ಮ ಕ್ಯಾಂಟೀನ್‌' ನೀಡುವ ಮೂಲಕ ಸಿದ್ದರಾಮಯ್ಯ  ಕ್ಯಾಂಟೀನ್‌ ಭಾಗ್ಯದ ಬೇಡಿಕೆಯನ್ನು ಈಡೇರಿಸಿದ್ದಾರೆ.

ದೇವದಾಸಿ ಮುಕ್ತರಿಗೆ 25 ಸಾವಿರ ರೂ.
ದೇವದಾಸಿ ಪದ್ಧತಿಯಿಂದ ಹೊರಬಂದವರಿಗೆ, ಲೈಂಗಿಕ ಕಾರ್ಯಕರ್ತರು ಮತ್ತು ಲಿಂಗ ಅಲ್ಪಸಂಖ್ಯಾತರಿಗೆ ನೀಡಲಾಗುವ 20 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಪರಿಷ್ಕರಿಸಿ ತಲಾ 25 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ 25 ಸಾವಿರ ರೂ. ಸಾಲವನ್ನು ನೀಡಲಾಗುವುದು. ಧನಶ್ರೀ ಯೋಜನೆಯಡಿ ಇದೇ ಮಾದರಿಯನ್ನು ಮುಂದುವರಿಸಲಾಗುವುದು.

ಬುದ್ಧಿಮಾಂದ್ಯ ಮಕ್ಕಳಿಗೆ ಯೋಗ ಕ್ಷೇಮ ಕೇಂದ್ರ ಆಟಿಸಂ, ಸೆರಬ್ರಲ್‌ ಪಾಲ್ಸಿ, ಬುದ್ಧಿಮಾಂದ್ಯತೆ ಮತ್ತು ಬಹುವಿಧದ ವೈಕಲ್ಯ ಹೊಂದಿರುವ ಮಕ್ಕಳಿಗಾಗಿ 4 ವಿಭಾಗಗಳಲ್ಲಿ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ.  ಇದರ ಜತೆಗೆ ಶಿಶು ಕೇಂದ್ರಿತ ಯೋಜನೆಯಡಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಶ್ರವಣ ದೋಷವುಳ್ಳ ಮತ್ತು ಅಂಧರ ಮತ್ತು ಬುದ್ಧಿಮಾಂದ್ಯ ವಿಶೇಷ ಶಾಲೆಗಳ ಪ್ರತಿ ಮಗುವಿಗೆ ನೀಡುವ ಮಾಸಿಕ ಅನುದಾನವನ್ನು 1200 ರೂ.ಗೆ ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ

ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ : ಸುಷ್ಮಾ ಸ್ವರಾಜ್ ವಿಶ್ವಾಸ

ಹೊಸದಿಲ್ಲಿ, ಎ.6: ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ನೂತನ ಸದಸ್ಯರು ‘ವಿಟೋ’ ಸೇರಿದಂತೆ ಎಲ್ಲಾ ಅಧಿಕಾರವನ್ನೂ ಹೊಂದಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸುಷ್ಮಾ, ಭದ್ರತಾ ಮಂಡಳಿಯ ಸದಸ್ಯತ್ವ ಪಡೆಯಲು ಭಾರತಕ್ಕೆ ಎಲ್ಲಾ ಅರ್ಹತೆಗಳಿವೆ . ನಾಲ್ಕು ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಭಾರತಕ್ಕೆ ಬೆಂಬಲ ಸೂಚಿಸಿದೆ. ಐದನೇ ರಾಷ್ಟ್ರವಾದ ಚೀನಾ ಕೂಡಾ ‘ಬಹಿರಂಗವಾಗಿ ವಿರೋಧಿಸಿಲ್ಲ’ ಎಂದರು.

     ಇವತ್ತಲ್ಲ ನಾಳೆ ಭಾರತವು ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲಿದೆ ಎಂಬ ವಿಶ್ವಾಸವಿದೆ.
ವಿಟೋ ಅಧಿಕಾರ ಸೇರಿದಂತೆ ಹೊಸ ಮತ್ತು ಹಳೆಯ ಸದಸ್ಯರು ಏಕರೀತಿಯ ಅಧಿಕಾರ ಹೊಂದಲಿದ್ದಾರೆ ಎಂಬ ವಿಶ್ವಾಸವಿದೆ. ಕಾಯಂ ಸದಸ್ಯರಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಎಂಬ ತಾರತಮ್ಯ ಇರಲಾರದು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಭದ್ರತಾ ಮಂಡಳಿಯ ವಿಸ್ತರಣೆ ಜೊತೆಗೆ ಅದರ ಸುಧಾರಣೆಯೂ ಆಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದವರು ಹೇಳಿದರು.
Dailyhunt

ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ ಆರ್,ಬಿ,ಐ

ರೆಪೊ ದರದ ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ; ರಿವರ್ಸ್ ರೆಪೊ ದರ ಶೇಕಡಾ 0.25 ಹೆಚ್ಚಳ

ನವದೆಹಲಿ: ಮಾರುಕಟ್ಟೆ ಮತ್ತು ಆರ್ಥಿಕ ತಜ್ಞರು ನಿರೀಕ್ಷಿಸಿದಂತೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಶೇಕಡಾ 6.25ರ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಆದರೆ ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಿಂದ ಶೇಕಡಾ 6ಕ್ಕೆ ಹೆಚ್ಚಿಸಿದೆ.

2017-18ನೇ ಸಾಲಿನ ಮೊದಲ ದ್ವಿ ಮಾಸಿಕ ವಿಮರ್ಶೆ ಸಭೆಯಲ್ಲಿ ಈ ಪ್ರಕಟಣೆಯನ್ನು ಆರ್ ಬಿಐ ಹೊರಡಿಸಿದೆ. ಕಳೆದ ಫೆಬ್ರವರಿ 8ರಂದು ನಡೆದ ಯೋಜನಾ ವಿಮರ್ಶಾ ಸಭೆಯಲ್ಲಿ  ಆರ್ ಬಿಐ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡದೆ ಶೇಕಡಾ 6.25ರಷ್ಟು ಕಾಯ್ದುಕೊಂಡಿತ್ತು. ದೇಶದ ಆರ್ಥಿಕತೆ ಮೇಲೆ ಹಣದುಬ್ಬರ ಮತ್ತು ನೋಟುಗಳ ಅಮಾನ್ಯತೆಯ ಪರಿಣಾಮವನ್ನು ಸ್ಪಷ್ಟವಾಗಿ ತಿಳಿದುಕೊಂಡ ನಂತರ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ವ್ಯತ್ಯಾಸ ಮಾಡುವುದಾಗಿ ಪ್ರಕಟಿಸಿತ್ತು.

ಆರ್ ಬಿಐ ಮುಖ್ಯಸ್ಥ ಊರ್ಜಿತ್ ಪಟೇಲ್ ನೇತೃತ್ವದ 6 ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿ ರೆಪೊ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ.

ಇಂದು ಬೆಳಗಿನ ಷೇರು ವಹಿವಾಟು ಆರಂಭಕ್ಕೆ ಸಂವೇದಿ ಸೂಚ್ಯಂಕ 122 ಅಂಕಗಳಷ್ಟು ಕುಸಿದಿತ್ತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ಕೂಡ 38.25 ಅಂಕಗಳಷ್ಟು ಇಳಿಕೆ ಕಂಡುಬಂದಿತ್ತು.

ರೆಪೊ ದರ: ವಾಣಿಜ್ಯ ಬ್ಯಾಂಕ್ ಗಳಲ್ಲಿ ಹಣಕ್ಕೆ ಕೊರತೆಯುಂಟಾದರೆ ಆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಹಣ ನೀಡಿ ಅದಕ್ಕೆ ವಿಧಿಸುವ ಬಡ್ಡಿದರ ರೆಪೊ ದರವಾಗಿದೆ. ಹಣದುಬ್ಬರವನ್ನು ಹತೋಟಿಯಲ್ಲಿಡಲು ಹಣಕಾಸಿನ ಅಧಿಕಾರಿಗಳು ಇದನ್ನು ಬಳಸುತ್ತಾರೆ.

ಹಣದುಬ್ಬರ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುತ್ತದೆ. ಬ್ಯಾಂಕುಗಳಿಗೆ ಆರ್ ಬಿಐನಿಂದ ತೆಗೆದುಕೊಂಡ ಹಣಕ್ಕೆ ಬಡ್ಡಿ ಕೊಡಲು ತೊಂದರೆಯಾಗುತ್ತದೆ. ಇದರಿಂದ ಹಣ ಪೂರೈಕೆ ಕುಂಠಿತವಾಗಿ ಹಣದುಬ್ಬರವನ್ನು ನಿಯಂತ್ರಿಸುತ್ತದೆ.

ಹಣದುಬ್ಬರದ ಒತ್ತಡ ಇಳಿತದ ಸಂದರ್ಭದಲ್ಲಿ ವಿರುದ್ಧವಾದ ಸ್ಥಾನವನ್ನು ಕೇಂದ್ರೀಯ ಬ್ಯಾಂಕ್ (ಆರ್ ಬಿಐ) ತೆಗೆದುಕೊಳ್ಳುತ್ತದೆ. ದ್ರವ್ಯತೆ ಹೊಂದಾಣಿಕೆ ಸೌಲಭ್ಯವನ್ನು ರೆಪೊ ಮತ್ತು ರಿವರ್ಸ್ ರೆಪೊ ದರ ರಚಿಸುತ್ತದೆ.

ರಿವರ್ಸ್ ರೆಪೊ ದರ: ದೇಶದ ವಾಣಿಜ್ಯ ಬ್ಯಾಂಕುಗಳಿಂದ ರಿಸರ್ವ್ ಬ್ಯಾಂಕ್ ಪಡೆಯುವ ಹಣವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ. ಹಣದ ಪೂರೈಕೆಯನ್ನು ದೇಶದಲ್ಲಿ ಹತೋಟಿಯಲ್ಲಿಡಲು ಬಳಸುವ ಹಣಕಾಸು ನೀತಿ ಇದಾಗಿದೆ.

2017-18 ರಲ್ಲಿ ಭಾರತದ ಆರ್ಥಿಕ ಪ್ರಗತಿ 7.4 ಹೆಚ್ಚಳ


2017-18ರಲ್ಲಿ ಭಾರತದ ಆರ್ಥಿಕ ಪ್ರಗತಿ ಶೇಕಡಾ 7.4ಕ್ಕೆ ಹೆಚ್ಚಳ: ಎಡಿಬಿ

ನವದೆಹಲಿ: ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಅಭಿವೃದ್ಧಿ ದರ ಶೇಕಡಾ 7.4ರಷ್ಟು ಅಭಿವೃದ್ಧಿ ಹೊಂದಲಿದ್ದು ನಂತರದ ವರ್ಷ ಶೇಕಡಾ 7.6ಕ್ಕೆ ಏರಿಕೆಯಾಗಿ ಚೀನಾಕ್ಕಿಂತ ಮುಂದೆ ಸಾಗಲಿದೆ ಎಂದು ಏಷ್ಯನ್ ಅಭಿವೃದ್ಧಿ ಬ್ಯಾಂಕ್(ಎಡಿಬಿ) ತಿಳಿಸಿದೆ.

ಅಧಿಕ ಮೌಲ್ಯದ ಬ್ಯಾಂಕು ನೋಟುಗಳ ಚಲಾವಣೆ ಹಿಂತೆಗೆತದ ಪರಿಣಾಮ  ಸ್ವಲ್ಪ ಸಮಯ ವ್ಯಾಪಾರ ವಹಿವಾಟಿಗೆ ಅನನುಕೂಲವಾದರೂ ಕೂಡ ಇದರಿಂದ ಸಾಕಷ್ಟು ಆರ್ಥಿಕ ಸುಧಾರಣೆಯಾಗಿದೆ. ವ್ಯಾಪಾರ ವಿಶ್ವಾಸ ಮತ್ತು ಹೂಡಿಕೆ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಿದೆ ಎಂದು ಎಡಿಬಿ ಪ್ರಮುಖ ಆರ್ಥಿಕ ಪ್ರಕಟಣೆಯಲ್ಲಿ ತಿಳಿಸಿದೆ.

2016-17ರಲ್ಲಿ ಭಾರತದಲ್ಲಿ ಶೇಕಡಾ 7.1ರಷ್ಟು ಪ್ರಗತಿಯಾಗಿದ್ದು, ಅಧಿಕ ಮೌಲ್ಯದ ನೋಟುಗಳ ರದ್ಧತಿಯಿಂದ ದೇಶದ ಆರ್ಥಿಕತೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದೇ ಹಲವರು ಭಾವಿಸಿದ್ದರು.
ಅದಕ್ಕೆ ವ್ಯತಿರಿಕ್ತವಾಗಿ 2017-18ರಲ್ಲಿ ಶೇಕಡಾ 7.4ಕ್ಕೆ ಏರಿಕೆಯಾಗಿದೆ. 2018-19ರಲ್ಲಿ ಅದು ಶೇಕಡಾ 7.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.

ಚೀನಾ ದೇಶದ  ಆರ್ಥಿಕ ಪ್ರಗತಿ ಶೇಕಡಾ 6.5ರಷ್ಟು 2017 ರಲ್ಲಿ ಕಾಣುವ ನಿರೀಕ್ಷೆಯಿದ್ದರೆ 2018ರಲ್ಲಿ ಅದಕ್ಕಿಂತ ಕಡಿಮೆ 6.2ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. 2016ರಲ್ಲಿ ಚೀನಾ ದೇಶದ ಆರ್ಥಿಕ ಪ್ರಗತಿ ಶೇಕಡಾ 6.7ರಷ್ಟಾಗಿತ್ತು.

ಸರಕು ಮತ್ತು ಸೇವಾ ತೆರಿಗೆ ಜುಲೈಯಲ್ಲಿ ಆರಂಭವಾಗಲಿದ್ದು ನಂತರದ ಆರ್ಥಿಕ ಪ್ರಗತಿ ಹೇಗಿರುತ್ತದೆ ಎಂಬ ಕುತೂಹಲ ಆರ್ಥಿಕ ತಜ್ಞರಿಗಿದೆ.

ಕತರ್ ನಲ್ಲಿ ಹಾರುವ ಕಣ್ಣಿನ ಆಸ್ಪತ್ರೆ

ಕತರ್‌ನಲ್ಲಿ ಹಾರುವ ಕಣ್ಣಿನ ಆಸ್ಪತ್ರೆ

ದೋಹ,ಎ. 6: ಹಾರುವ ಕಣ್ಣಿನ ಆಸ್ಪತ್ರೆ ಎಂದು ಕರೆಯಲಾಗುವ ಆರ್ಬಿಸ್ ಪ್ಲೈಯಿಂಗ್‌ಐ ಹಾಸ್ಪಿಟಲ್ ಕತರ್‌ಗೆ ಬಂದಿಳಿದಿದೆ. ಕತರ್ ಅಭಿವೃಧ್ಧಿ ನಿಧಿಯ ಸಹಾಯದೊಂದಿಗೆ ಕತರ್ ಚ್ಯಾರಿಟಿ ನಡೆಸುವ ಕತರ್ ಕ್ರಿಯೇಟಿಂಗ್ ವಿಷನ್ ಎನ್ನುವ ಕಣ್ಣಿಗೆ ಸಂಬಂಧಿಸಿದ ಯೋಜನೆಯ ಅಂಗವಾಗಿ ಹಾರುವ ಕಣ್ಣಿನ ಆಸ್ಪತ್ರೆ ಕತರ್‌ಗೆ ಬಂದಿಳಿದಿದೆ.

  2016ರಲ್ಲಿ ಜೂನ್‌ನಲ್ಲಿಟೆಕ್ಸಾಸ್‌ನಲ್ಲಿ ಜಗತ್ತಿನ ಪ್ರಮುಖ ಎನ್‌ಜಿಒ ಆದ ಆರ್ಬಿಸ್ ವಿಮಾನದಲ್ಲಿ ಕಣ್ಣಾಸ್ಪತ್ರೆಯ ಹಾರಾಟಕ್ಕೆ ಚಾಲನೆ ನೀಡಿತ್ತು. ವಿವಿಧ ದೇಶಗಳಿಗೆ ಹೋಗಿ ಕಣ್ಣಿನ ರೋಗಿಗಳಿಗೆ ಚಿಕಿತ್ಸೆ ಕೊಡುವ ಉದ್ದೇಶದಿಂದ ವಿಮಾನದಲ್ಲಿ ಕಣ್ಣಾಸ್ಪತ್ರೆಯನ್ನು ಅದು ತೆರೆದಿತ್ತು. ಈ ವರೆಗೆ ಅದು ವಿವಿಧ ದೇಶಗಳಲ್ಲಿ ಹಾರಾಟನಡೆಸಿದೆ. ಅಲ್ಲಿನ ಕಣ್ಣಿನ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಕತರ್ ಕ್ರಿಯೇಟಿಂಗ್ ವಿಷನ್ ಎನ್ನುವ ಯೋಜನೆಯ ಅಂಗವಾಗಿ ಹಾರುವ ಕಣ್ಣಾಸ್ಪತ್ರೆ ಕತರ್‌ಗೆ ಬಂದಿಳಿದೆ.
ನೋಡಲು ಈ ಆಸ್ಪತ್ರೆ ವಿಮಾನ ಇತರ ಸಾಮಾನ್ಯ ವಿಮಾಗಳಂತೆ ಇದೆ. ಒಳಭಾಗದಲ್ಲಿ ಅತ್ಯಾಧುನಿಕ ಆಪರೇಷನ್ ಥಿಯೇಟರ್ ಇದೆ. 46 ಸೀಟುಗಳನ್ನು ಹೊಂದಿದೆ. ಪ್ರೀಪೋಸ್ಟ್ ಆಪರೇಷನ್ ಸ್ಪೇಸ್ ಮತ್ತು ಲೇಸರ್ ಸ್ಯೂಟ್ ಇತ್ಯಾದಿಗಳನ್ನು ಈವಿಮಾನದಲ್ಲಿ ಸಜ್ಜೀಕರಿಸಲಾಗಿದೆ. ಕತರ್ ಕ್ರಿಯೇಟಿಂಗ್ ವಿಷನ್ ಯೋಜನೆಯು

  ಭಾರತ,ಬಾಂಗ್ಲಾದೇಶದ 4,73,000 ರಷ್ಟು ಮಕ್ಕಳ ನೇತ್ರರೋಗಕ್ಕೆ ಉತ್ತಮ ಚಿಕಿತ್ಸೆಯನ್ನು ಕೊಡಿಸುವ ನಿಟ್ಟಿನಲ್ಲಿ ಕತರ್ ಚ್ಯಾರಿಟಿಯ ಅಧೀನದ ಮಹಾನ್ ಯೋಜನೆಯಾಗಿದೆ. 2015ರಲ್ಲಿ ಚ್ಯಾರಿಟಿ ಮತ್ತು ಆರ್ಬಿಸ್ ಸೇರಿ ಬಾಂಗ್ಲಾದೇಶದಲ್ಲಿ ಅಂಧ ಮಕ್ಕಳ ಚಿಕಿತ್ಸೆಗಾಗಿ ಎರಡು ಮಿಲಿಯನ್ ರಿಯಾಲ್ ವ್ಯಯಿಸಿದೆಎಂದು ಸಂಘಟಕರು ತಿಳಿಸಿದ್ದಾರೆ.

ಗುರುವಾರ, ಏಪ್ರಿಲ್ 6, 2017

ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು

೧) *ಇತ್ತೀಚಿನ ಬೆಳವಣಿಗೆಯಲ್ಲಿ ಕನ್ನಡದ ಮೊದಲ ಶಾಸನ ಎಂದು ಪರಿಗಣಿಸಲಾದ "ತಾಳಗುಂದದ" ಶಾಸನದ ಅವಧಿ ಯಾವುದು?*

ಕ್ರಿ. ಶ.
ಅ)೩೭೦- ೪೫೦
ಆ)೩೬೦ -೪೩೦
ಇ)೩೬೫- ೪೨೫
ಈ)೪೫೦- ೫೦೦

ಅ✅✅

೨) *ನೌಕಾಪಡೆಯ ಯಾವ ವಿಭಾಗ ಡಿಸೆಂಬರ್ ನಲ್ಲಿ ೫೦ ವರ್ಷ ಪೂರೈಸಿತು?*

ಅ)ಶಸ್ತ್ರ ವಿಭಾಗ
ಆ)ಜಲಾಂತರ್ಗಾಮಿ ವಿಭಾಗ
ಇ)ಯುದ್ಧ ವಿಭಾಗ
ಈ)ಯಾವುದೂ ಅಲ್ಲ

ಆ✅✅
*ಅರ್ಧ ಶತಮಾನದ ಸಂಭ್ರಮ*
ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ಈ ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967ರ ಡಿಸೆಂಬರ್‌ 8ರಂದು ನೌಕಾಪಡೆಗೆ ಐಎನ್‌ಎಸ್‌ ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ.

೩) *೨೦೧೭ ನ್ನು ವಿಶ್ವಸಂಸ್ಥೆ ಸುಸ್ಥಿರ ಪ್ರವಾಸೋದ್ಯಮ ವರ್ಷ ಎಂದು ಅಳವಡಿಸಿಕೊಂಡಿದೆ. ಇದರ ಅವಧಿ_______*

ಅ)ಜನವರಿಯಿಂದ ಡಿಸೆಂಬರ್
ಆ)ಜನವರಿ ೪ ರಿಂದ ಒಂದು ವರ್ಷ
ಇ)ಡಿಸೆಂಬರ್ ೪ ರಿಂದ ಒಂದು ವರ್ಷ
ಈ) ಜನವರಿ ೧ ರಿಂದ ಒಂದು ವರ್ಷ

ಇ✅✅

೪) *ಶಸ್ತ್ರಾಸ್ತ್ರಗಳ ಖರೀದಿಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗದರೆ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?*(ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ)

ಅ)ಅಮೆರಿಕ
ಆ)ಪಾಕಿಸ್ತಾನ
ಇ)ಇರಾನ್
ಈ)ಸೌದಿ ಅರೇಬಿಯಾ

ಈ✅✅

೫) *ಹಸಿರುಮನೆ ಪರಿಣಾಮ ಕುರಿತು ಅಧ್ಯಯನ ನಡೆಸಲು ಮೂರು ದೇಶಗಳು ಉಪಗ್ರಹ ಕಳಿಸಿವೆ. ಯಾವುದು ಗುಂಪಿಗೆ ಸೇರುವುದಿಲ್ಲ?*

ಅ)ಅಮೆರಿಕ
ಆ)ರಷ್ಯಾ
ಇ)ಚೀನ
ಈ)ಜಪಾನ್

ಆ✅✅ ಇನ್ನೂ ಕಳಿಸಿಲ್ಲ

೬) *ಬೋಳವಾರ ಮಹಮ್ಮದ್ ಕುಂಞ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ?*

ಅ)ಪಾಪು ಗಾಂಧಿ
ಆ) ಸ್ವಾತಂತ್ರ್ಯ ದ ಓಟ
ಇ)ಸ್ವಾತಂತ್ರ್ಯ ದ ಹೋರಾಟ
ಇ)ತಟ್ಟು ಚಪ್ಪಾಳೆ ಪುಟ್ಟ ಮಗು

ಆ✅✅

೭) *೨೦೧೬ರ ಮೂರ್ತಿದೇವಿ ಪ್ರಶಸ್ತಿ ಜ್ಞಪಡೆದವರು_______*

ಅ)ವೀರೇಂದ್ರ ಕುಮಾರ್
ಆ)ಪದ್ಮಾ ಸಚ್ ದೇವ್
ಇ)ತಿರುಮಲೇಶ್
ಈ)ಸುನೀತಾ ಜೈನ್

ಅ✅✅
ಮಲಯಾಳಂ ಲೇಖಕ. ಐಮಾವಥ ಭೂಮಿಯಿಲ್ ಕೃತಿಗೆ.

೮) *ಡಿ.ಎಸ್. ಸಿ ಪ್ರಶಸ್ತಿಯನ್ನು ಪಡೆದವರು______*

ಅ)ಸಲ್ಮಾನ್ ರಶ್ದಿ
ಆ)ಚೇತನ್ ಭಗತ್
ಇ)ಅರುಂಧತಿ ರಾಯ್
ಈ)ದೆಬೊರಾ ಸ್ಮಿತ್

ಇ✅✅
ದಕ್ಷಿಣ ಏಷ್ಯನ್ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ. ಸ್ಲೀಪಿಂಗ್ ಆನ್ ಜ್ಯುಪಿಟರ್ ಕೃತಿಗೆ.

೯) *ನವದೆಹಲಿಯಲ್ಲಿ ನಡೆದ ೧ ನೇ ಬ್ರಿಕ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರ______*

ಅ)ರೂಮ್
ಆ)ತಿಥಿ
ಇ)ಬಾಹುಬಲಿ
ಈ)ಪಿಕು

ಆ✅✅

೧೦) *ಜೈಲುಗಳಲ್ಲಿ ಇರುವವರನ್ನು ಸುಶಿಕ್ಷಿತರನ್ನಾಗಿಸುವ ಶಿಕ್ಷಣ ಯೋಜನೆಯಾದ ಜೈಲು ಜ್ಯೋತಿ ಯೋಜನೆಯನ್ನು ಯಾವ ರಾಜ್ಯ ಜಾರಿಗೆ ತಂದಿತು?*

ಅ) ಉತ್ತರ ಪ್ರದೇಶಳೂ
ಆ)ಗುಜರಾತ್
ಇ)ಕೇರಳ
ಈ)ಬಿಹಾರ

ಇ✅✅

೧೧) " *ಹೃದಯ ಸಂವಾದ ಭಾಜ: ಸಹೃದಯಾ" ಹೇಳಿಕೆಯ ಅಲಂಕಾರ ಗ್ರಂಥ ಯಾವುದು?*

ಅ)ಕಾವ್ಯಾದರ್ಶಿ
ಆ)ಧ್ವನ್ಯಾಲೋಕ
ಇ)ನಾಟ್ಯಶಾಸ್ತ್ರ
ಈ)ಧ್ವನ್ಯಾಲೋಕ ಲೋಚನ

ಆ✅✅

೧೨) *"ಮಹೋನ್ನತಿ" ತತ್ವ ಪ್ರತಿಪಾದಕ_____*

ಅ)ಮ್ಯಾಥ್ಯೂ ಆರ್ನಾಲ್ಡ್
ಆ)ಟಿ.ಎಸ್. ಎಲಿಯಟ್
ಇ)ಎ.ಸಿ.ಬ್ರಾಡ್ಲೆ
ಈ)ಲಾಂಜಿನಸ್

ಈ✅✅

೧೩) *"ರಸವು ಅನುಕಾರ್ಯ ಮತ್ತು ಅನುಕರ್ತರಲ್ಲಿದೆ " ಎಂದವರು______*

ಅ)ವಾಮನ
ಆ)ಭರತ
ಇ)ಆನಂದವರ್ಧನ
ಈ)ಭಟ್ಟಲೊಲ್ಲಟ

ಈ✅✅

೧೪) *"ಗದ್ಯಾಶ್ರಮ ಗುರುತು ಪ್ರತೀತಿಯಂ ಕೆಯ್ ಕೊಂಡರ್ " ವಾಕ್ಯ __ ಪುಸ್ತಕದಲ್ಲಿ ಬರುತ್ತದೆ.*

ಅ)ಶಬ್ದಮಣಿದರ್ಪಣ
ಆ)ಕಾವ್ಯಾವಲೋಕನ
ಇ)ಪಂಪಭಾರತ
ಈ)ಕವಿರಾಜಮಾರ್ಗ

ಈ✅✅

೧೫) *ಕ್ಷಾತ್ರಯುಗ ,ಮತಪ್ರಚಾರಯುಗ , ಸಾರ್ವಜನಿಕ ಯುಗ - ಎಂದು ಸಾಹಿತ್ಯ ಚರಿತ್ರೆಯನ್ನು ವಿಂಗಡಣೆ ಮಾಡಿದವರು______*

ಅ)ಆರ್. ನರಸಿಂಹಾಚಾರ್
ಆ)ಡಿ.ನರಸಿಂಹಾಚಾರ್
ಇ)ಕಿಟೆಲ್
ಈ)ಕನ್ನಡವಕ್ಕಿ

ಈ✅✅

೧೬) *"ಸಕಲ ಲಕ್ಷಣವು ವಸ್ತುಕತೆ ವರ್ಣಕಕಿಂತು ವಿಕಳವಾದರೂ ದೋಷವಿಲ್ಲ" - ಎಂದವರು_____*

ಅ)ಭರತ
ಆ)ಕೇಶಿರಾಜ
ಇ)ನಾಗವರ್ಮ
ಈ)ರಾಘವಾಂಕ

ಈ✅✅

೭) *"ಜ್ವಾಲಾಮುಖಿಯ ಮೇಲೆ " ಕಾದಂಬರಿಯ ಪ್ರಕಾರ-_______*

ಅ)ನವ್ಯ
ಆ)ನವೋದಯ
ಇ)ಪ್ರಗತಿಶೀಲ
ಈ)‌ಬಂಡಾಯ

ಇ✅✅

೧೮) *ಭಾಷೆಯ ಉಗಮಕ್ಕೆ ಅನುರಣನವಾದವೇ ಕಾರಣವೆಂದವನು-_____*

ಅ)ಎಂ.ಮರಿಯಪ್ಪ ಭಟ್ಟ
ಆ)ಕೆ.ಕೆಂಪೇಗೌಡ
ಇ)ವಿಲಿಯಂ ಬ್ರೈಟ್
ಈ)ಮ್ಯಾಕ್ಸ್ ಮುಲ್ಲರ್

ಈ✅✅

೧೯) *"ಪಳಗನ್ನಡಂ ಪೊಲಗೆಡಸಿ ನುಡಿವರ್" __ ಕೃತಿಯಲ್ಲಿ ಕಂಡುಬರುತ್ತದೆ.*

ಅ)ಶಬ್ದಮಣಿದರ್ಪಣ
ಆ)ಪಂಪಭಾರತ
ಇ)ಕಾವ್ಯಾವಲೋಕನ
ಈ)ಅಭಿಧಾನ ವಸ್ತುಕೋಶ

ಅ✅✅

೨೦) *ಕನ್ನಡದಲ್ಲಿ ಮೊದಲು ದರ್ಶನ ವಿಮರ್ಶೆಯನ್ನು ಬರೆದವರು ಯಾರು?*

ಅ)ಎಚ್. ತಿಪ್ಪೇರುದ್ರಸ್ವಾಮಿ
ಆ)ಕುವೆಂಪು
ಇ)ದ.ರಾ.ಬೇಂದ್ರೆ
ಈ)ತೀ.ನಂ.ಶ್ರೀ

ಅ✅✅

೨೧) *"ಕಟ್ಟಿಯುಮೆನೋ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗದೇ" - ಈ ವಾಕ್ಯದ ಅಂತರಾರ್ಥ _*

ಅ)ಹೂಹಾರದ ಸುವಾಸನೆ
ಆ)ಸಹೃದಯನ ಅಗತ್ಯತೆ
ಇ)ಹೂ ಮುಡಿವ ಹೆಣ್ಣು ಮಕ್ಕಳ ಅಗತ್ಯ
ಈ) ಯಾವುದೂ ಅಲ್ಲ

ಆ✅✅
ಅಂದರೆ ಕವಿ ಈ ವಾಕ್ಯದಲ್ಲಿ ಕವಿ ಎಷ್ಟು ಒಳ್ಳೆಯ ಸಾಹಿತ್ಯ ರಚನೆ ಮಾಡಿದರೂ ಸಹ ಅದನ್ನು ಓದಿ ಆಸ್ವಾದಿಸುವವರು (ಸಹೃದಯ) ಇಲ್ಲದಿದ್ದರೆ ಆ ಸಾಹಿತ್ಯ ವ್ಯರ್ಥ ಎಂಬರ್ಥದಲ್ಲಿ ಹೂವಿನ ಮಾಲೆಗೆ ಹೋಲಿಸಿ ತಿಳಿಸಿದ್ದಾರೆ. ಅನಂತನಾಥಪುರಾಣದಲ್ಲಿ.

೨೨) *ದಂಡಿಯ ಕೃತಿಗಳಲ್ಲಿ ತಪ್ಪಾದುದು ಯಾವುದು?*

ಅ)ಕಾವ್ಯಾದರ್ಶ
ಆ)ದಶಕುಮಾರ ಚರಿತೆ
ಇ)ಕಾವ್ಯಾಲಂಕಾರ
ಈ)ಅವಂತೀ ಸುಂದರೀ

ಇ✅✅ ಭಾಮಹ ಬರೆದಿದ್ದಾನೆ. ದಂಡಿಯ ಇನ್ನೊಂದು ಕೃತಿ - ತ್ರಯೋದಂಡಿ ಪ್ರಬಂಧಾ: .

೨೩) *"ಕವಿಗಳನ್ನು ಆದರಿಸಿ , ಪೂಜಿಸಿ , ಉಡುಗೊರೆ ನೀಡಿ .ಆದರೆ ರಾಜ್ಯದಿಂದ ಹೊರಗೆ ಕಳುಹಿಸಿ"- ಎಂದವರು_____*

ಅ)ಕಾರ್ಲ್ ಮಾರ್ಕ್ಸ್
ಆ)ಪ್ಲೇಟೊ
ಇ)ಅರಿಸ್ಟಾಟಲ್‌
ಈ)ಸಾಕ್ರಟೀಸ್

ಆ✅✅
ಆದರ್ಶ ಪ್ರಜಾರಾಜ್ಯದಲ್ಲಿ ಕವಿಯನ್ನು ಹೊರದೂಡಬೆಕೆಂದ. ಜನ ಕವಿಗಳ ಕೃತಿಗಳನ್ನು ಓದುವುದರಲ್ಲಿ ಸಮಯ ವ್ಯರ್ಥ ಮಾಡುತ್ತಾರೆಂದು ಈ ಮಾತನ್ನು ಹೇಳಿದ.

೨೪) *ಹ್ಯಾಮ್ಲೆಟ್ ನಾಟಕವನ್ನು "ಈಡಿಪಸ್ ಕಾಂಪ್ಲೆಕ್ಸ್" ನೆಲೆಯಲ್ಲಿ ವಿಮರ್ಶಿಸಿದ ವಿಮರ್ಶಕ_____*

ಅ)ಸಿಗ್ಮಂಡ್ ಫ್ರಾಯ್ಡ್‌
ಆ)ಐ.ಎ.ರಿಚರ್ಡ್
ಇ)ಸಿ.ಜಿ.ಯೂಂಗ್
ಈ)ಅರ್ನೆಸ್ಟ್ ಜೋನ್ಸ್

ಈ✅✅
ಈಡಿಪಸ್ ಕಾಂಪ್ಲೆಕ್ಸ್ ಎಂಬುದು ಒಂದು ಮನ:ಶಾಸ್ತ್ರೀಯ ವಿಮರ್ಶೆಯ  ವಿಧಾನವಾಗಿದೆ.

೨೫) *ಸೋಫೋಕ್ಲೀಸನ ಏಜಾಕ್ಸ್ ನಾಟಕವನ್ನು ಹಲವರು ಕನ್ನಡೀಕರಿಸಿದ್ದಾರೆ. ಅದರಲ್ಲಿ ತಪ್ಪಾದುದು ಯಾವುದು?*

ಅ)ಬಿ.ಎಂ.ಶ್ರೀ- ಅಶ್ವತ್ಥಾಮನ್
ಆ) ಎಚ್.ಎಂ.ಚೆನ್ನಯ್ಯ - ಆಯಾಸ್
ಇ)ಕುವೆಂಪು- ಬಿರುಗಾಳಿ
ಈ)ಸುಜನಾ- ಏಜಾಕ್ಸ್

ಇ✅✅
ಇದನ್ನು ಕುವೆಂಪು ಅವರು ಶೇಕ್ಸ್‌ಪಿಯರ್ ನ ಹ್ಯಾಮ್ಲೆಟ್ ಪ್ರಭಾವದಿಂದ ರಚಿಸಿದರು.

ಗಲ್ಫ್ ಕಂಫನಿಗೆ ಇದ್ದಕ್ಕಿದ್ದಂತೆ CEO ಆದ ಧೋನಿ

ಗಲ್ಫ್ ಕಂಪನಿಗೆ ಇದ್ದಕ್ಕಿದ್ದಂತೆ CEO ಆದ ಧೋನಿ!

ಮುಂಬೈ, ಏಪ್ರಿಲ್ 4: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಮವಾರ ಇದ್ದಕ್ಕಿದ್ದಂತೆ ಗಲ್ಫ್ ಆಯಿಲ್ ಇಂಡಿಯಾ ಕಂಪನಿಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡರು.

ಇದೇನು, ಧೋನಿ ಹೀಗೆ ಏಕಾಏಕಿ ತಮ್ಮ ವೃತ್ತಿಜೀವನ ಬದಲಿಸಿದರೇ ಅಥವಾ ಈ ವೃತ್ತಿ ಜೀವನ ಆಯ್ಕೆಗಾಗಿಯೇ ತಮ್ಮ ಕ್ರಿಕೆಟ್ ಬದುಕು ತೊರೆದರೇ ಎಂಬ ಗುಮಾನಿ ಎಲ್ಲರಲ್ಲಿ ಮೂಡುವುದು ಸಹಜ.

ಆದರೆ, ವಿಚಾರ ಅದಲ್ಲ. ತಮ್ಮ ಕಂಪನಿಯ ಉದ್ಯೋಗಿಗಳಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದಾಗಿಯೇ ಧೋನಿಯವರನ್ನು ತನ್ನ ಕಚೇರಿಗೆ ಕರೆಯಿಸಿಕೊಂಡಿದ್ದ ಕಂಪನಿಯ ಆಡಳಿತ ಮಂಡಳಿ, ಒಂದು ದಿನದ ಮಟ್ಟಿಗೆ ಅವರನ್ನು ಸಿಇಒ ಸ್ಥಾನಕ್ಕೆ ನೇಮಕ ಮಾಡಿತ್ತು.

ಧೋನಿ ಹೀಗೆ ಬರುತ್ತಾರೆಂದು ಕಂಪನಿಯ ನೌಕರರಿಗೆ ಗೊತ್ತೇ ಇರಲಿಲ್ಲವಂತೆ. ಇದ್ದಕ್ಕಿದ್ದಂತೆ, ಸೋಮವಾರ ಬೆಳಗ್ಗೆ ನೀಲಿ ಸೂಟ್ ಧರಿಸಿ ಮುಂಬೈನ ಅಂಧೇರಿಯಲ್ಲಿನ ಕಂಪನಿಗೆ ಆಗಮಿಸಿದ ಧೋನಿಯನ್ನು ಕಂಡ ಕೂಡಲೇ ಇಡೀ ಕಚೇರಿಯ ಸಿಬ್ಬಂದಿ ಅಚ್ಚರಿಗೊಂಡರಂತೆ.
ಅಷ್ಟೇ ಅಲ್ಲ, ಧೋನಿ ನಮ್ಮ ಕಂಪನಿ ಹೊಸ ಸಿಇಒ ಎಂಬ ವಿಚಾರ ತಿಳಿದ ಮೇಲಂತೂ ಮತ್ತಷ್ಟು ಥ್ರಿಲ್ ಆದರಂತೆ.

ಹಾಗೆ, ಎಲ್ಲರಿಗೂ ಅಚ್ಚರಿ ನೀಡಿದ ಧೋನಿ, ಕಂಪನಿಯ ವ್ಯವಸ್ಥಾಪಕರು ಮತ್ತಿತರನ್ನು ಪರಿಚಯ ಮಾಡಿಕೊಂಡ ನಂತರ, ಕೆಲವಾರು ಸಭೆಗಳನ್ನು ನಡೆಸಿದ್ದಾರೆ. ಆಡಳಿತಾತ್ಮಕವಾಗಿ ಕೆಲವು ಚಿಕ್ಕಪುಟ್ಟ ನಿರ್ಧಾರಗಳನ್ನೂ ಕೈಗೊಂಡಿದ್ದಾರೆಂದು ಅವರ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಅರುಣ್ ಪಾಂಡೆ ತಿಳಿಸಿದ್ದಾರೆ.

ಚಿರನಿದ್ರೆಗೆ ಜಾರಿದ ಗಾನಕೋಗಿಲೆ ಕಿಶೋರಿ ಅಮೋನ್ಕರ್

ಚಿರನಿದ್ರೆಗೆ ಜಾರಿದ ಗಾನಕೋಗಿಲೆ ಕಿಶೋರಿ ಅಮೋನ್ಕರ್

ಮುಂಬೈ, ಏಪ್ರಿಲ್ 4: ಅದು ಹಿಂದೂಸ್ತಾನಿ ಸಂಗೀತ ಕ್ಷೇತ್ರ ಒಂದು ಕ್ಷಣ ಸ್ತಬ್ಧಗೊಂಡ ದಿನ. ರಾಗರಸದಿಂದ ಮಾಂತ್ರಿಕ ಪ್ರಪಂಚವನ್ನೇ ಸೃಷ್ಟಿಸುತ್ತಿದ್ದ ಗಾನಕೋಗಿಲೆ ಮೌನವಾದ ದಿನ.

ಹೌದು, ಹಿಂದೂಸ್ತಾನಿ ಸಂಗೀತದ ದಂತಕತೆ ಎಂದೇ ಖ್ಯಾತರಾಗಿದ್ದ ಪದ್ಮವಿಭೂಷಣ ಕಿಶೋರಿ ಅಮೋನ್ಕರ್(84) ಸೋಮವಾರದಂದು (ಏಪ್ರಿಲ್ 3) ಮುಂಬೈಯ ಸ್ವಗೃಹದಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ನಿಧನ ಸಂಗೀತ ಕ್ಷೇತ್ರದಲ್ಲಿ ನೀರವತೆ ಸೃಷ್ಟಿಸಿದೆ.

1932, ಏಪ್ರಿಲ್ 10 ರಂದು ಮುಂಬೈಯಲ್ಲಿ ಜನಿಸಿದ ಕಿಶೋರಿ ಅವರು ಹಿಂದೂಸ್ತಾನಿ ಸಂಗೀತ ಪ್ರಕಾರದಲ್ಲಿ ಮಹೋನ್ನತ ಸಾಧನೆ ಮಾಡಿದ್ದಲ್ಲದೆ, ಬೇರೆ ಬೇರೆ ಸಂಗೀತ ಪ್ರಕಾರಗಳಿಗೆ ವೇದಿಕೆ ನೀಡುವುದಕ್ಕಾಗಿ ಜೈಪುರ ಘರಾನಾ ಎಂಬ ಪರಿಕಲ್ಪನೆಯನ್ನೂ ಪರಿಚಯಿಸಿದರು.

ಸಂಗೀತದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ, ಕಲೆಗೆ ಸದಾ ಹೊಸತನ ಬೇಕು ಎಂದ ಅವರು ಕೆಲವರ ಟೀಕೆಗೂ ಗುರಿಯಾದದ್ದಿದೆ.
ಆದರೂ ಸಂಗೀತದ ಬೇರೆ ಬೇರೆ ಪ್ರಕಾರಗಳ ಪ್ರಯೋಗದಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿದ್ದ ಕಿಶೋರಿ ಅವರು ತಮ್ಮ ಶಿಷ್ಯರಿಗಾಗಲಿ, ಅಭಿಮಾನಿಗಳಿಗಾಗಲಿ, ಹೊಸತನವನ್ನು ಆವಿಷ್ಕರಿಸುವ ಪಾಠವನ್ನೇ ಹೇಳುತ್ತಿದ್ದರು.

ರಾಗ್ ಕೇದಾರ್, ರಾಗ್ ಭೂಪ್ ಎಲ್ಲವೂ ಆಕೆಯ ಸ್ವರದ ಅಲೆಯಲ್ಲಿ ಮೋಡಿಯನ್ನೇ ಮಾಡುತ್ತಿದ್ದವು. ಆಕೆಯ ಸ್ವರದೊಂದಿಗೆ ಬೆರೆವ ರಾಗ ಸಂಗೀತ ಸುಧೆಯನ್ನೇ ಹರಿಸುತ್ತಿತ್ತು. 84ರ ಇಳಿವಯಸ್ಸಿನಲ್ಲೂ ಆಕೆ ವೇದಿಕೆಯ ಮೇಲೆ ಬಂದರೆ, ವೇದಿಕೆಗೇ ಯೌವನ ಬಂತೇನೋ ಅನ್ನಿಸುತ್ತಿತ್ತು. ಆ ಧ್ವನಿಯಲ್ಲಾಗಲಿ, ಅವರ ನಡೆ-ನುಡಿಯಲ್ಲಾಗಲಿ ವಯೋಸಹಜ ದಣಿವಿನ ಕುರುಹೂ ಕಾಣುತ್ತಿರಲಿಲ್ಲ.

ಅವರ ಸಂಗೀತ ಸೇವೆಯನ್ನು ಪರಿಗಣಿಸಿದ ಭಾರತ ಸರ್ಕಾರ, ಪದ್ಮಭೂಷಣ (1987) ಮತ್ತು ಪದ್ಮವಿಭೂಷಣ(2002) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಇನ್ನೊಂದು ವಾರದಲ್ಲಿ (ಏಪ್ರಿಲ್ 10) ತಮ್ಮ 85 ವರ್ಷದ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಲಿದ್ದ ಕಿಶೋರಿ ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಇಬ್ಬರು ಮಕ್ಕಳು ಮತ್ತು ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

ಬಿಎಸ್-||| ನಿಷೇದದಿಂದ ವಾಣಿಜ್ಯ ವಾಹ‌ನ ಉತ್ಪಾದನೆ

ಬಿಎಸ್-III ನಿಷೇಧದಿಂದ ವಾಣಿಜ್ಯ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ: ಕ್ರಿಸಿಲ್

ಮುಂಬೈ: ಏಪ್ರಿಲ್ 1 ರಿಂದ ಬಿಎಸ್ 3 ವಾಹನಗಳ ನೋಂದಣಿ ಮತ್ತು ಮಾರಾಟವನ್ನು ನಿಷೇಧ ಆದೇಶದ ನಂತರ ಭಾರಿ ರಿಯಾಯಿತಿ ದರದಲ್ಲಿ ಬಿಎಸ್ 3 ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಉತ್ಪಾದನಾ ಸಂಸ್ಥೆಗಳಿಗೆ 2500 ಕೋಟಿ ರೂ ನಷ್ಟ ಉಂಟಾಗಲಿದೆ ಎಂದು ವರದಿಯೊಂದು ಹೇಳಿದೆ.  ಸಂಶೋಧನಾ ಸಂಸ್ಥೆ ಕ್ರಿಸಿಲ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಿಯಾಯಿತಿ ದರದಲ್ಲಿ ಈಗಾಗಲೇ ವಾಹನಗಳನ್ನು ಮಾರಟ ಮಾಡಿರುವುದರಿಂದ 1,200 ಕೋಟಿ ನಷ್ಟವಾಗಿದೆ. ಇನ್ನು ಮಾರಾಟವಾಗದೇ ಉಳಿದಿರುವ ವಾಹನಗಳಿಂದ  1,300 ಕೋಟಿ ರೂಪಾಯಿ ನಷ್ಟ ಉಂತಾಗಲಿದ್ದು, ಒಟ್ಟು 2,500 ಕೋಟಿ ರೂ ನಷ್ಟವಾಗಲಿದೆ ಎಂದು ಕ್ರಿಸಿಲ್ ಅಂದಾಜಿಸಿದ್ದು ವಾಹನ ತಯಾರಿಕಾ ಸಂಸ್ಥೆಗಳ ಒಟ್ಟಾರೆ ಲಾಭದಲ್ಲಿ ಶೇ.2.5 ರಷ್ಟು ನಷ್ಟವಾಗಲಿದೆ.  ಮಾರಾಟವಾಗದೇ ಉಳಿದ ವಾಹನಗಳನ್ನು ಡೀಲರ್ ಗಳಿಂದ ವಾಪಸ್ ತಂದು ನಂತರ ಅದಕ್ಕೊಂದು ವ್ಯವಸ್ಥೆ ಮಾಡಬೇಕಿರುವುದರಿಂದ  2017-18 ನೇ ಸಾಲಿನ ಆರ್ಥಿಕ ವರ್ಶದ ಮೇಲೆಯೂ ಬಿಎಸ್-III ನಿಷೇಧ ಹಾಗೂ ರಿಯಾಯಿತಿ ದರದಲ್ಲಿ ವಾಹನಗಳ ಮಾರಾಟ ಪರಿಣಾಮ ಬೀರಲಿದೆ ಎಂದು ಕ್ರಿಸಿಲ್ ವಿಶ್ಲೇಷಿಸಿದೆ.
ಈಗಷ್ಟೇ ಮುಕ್ತಾಯಗೊಂಡಿರುವ 2016-17 ಆರ್ಥಿಕ ವರ್ಷಕ್ಕೆ ಬಿಎಸ್-III ನಿಷೇಧದಿಂದ ಇಬಿಐಟಿಡಿಎ ಮಾರ್ಜಿನ್ 100 ಬಿಪಿಎಸ್ ಕಡಿಮೆಯಾಗಲಿದೆ ಎಂದು ಕ್ರಿಸಿಲ್ ಹೇಳಿದೆ. 

ರೋಹಿಂಗ್ಯಾ (ಬರ್ಮಾ ಮೂಲದ ಮುಸ್ಲಿಂರು) ಗಡಿಪಾರಿಗೆ ಚಿಂತನೆ

ರೋಹಿಂಗ್ಯಾ ಮುಸ್ಲಿಮರ ಗಡೀಪಾರಿಗೆ ಕೇಂದ್ರದ ಚಿಂತನೆ

ನವದೆಹಲಿ, ಏಪ್ರಿಲ್ 3: ಕಾನೂನು ಬಾಹಿರವಾಗಿ ಭಾರತದೊಳಕ್ಕೆ ನುಸುಳಿ, ಇಲ್ಲೇ ನೆಲೆಸಿರುವ ಮಿಯಾಮ್ನಾರ್ (ಬರ್ಮಾ) ಮೂಲದ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರದೂಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈವರೆಗೆ, ಅವರು ಯಾವುದೇ ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಬಗ್ಗೆ ಮಾಹಿತಿ ಇಲ್ಲವಾದರೂ, ನಿರಾಶ್ರಿತರಂತೆ ಆಗಮಿಸಿರುವ ಅವರನ್ನು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಸಂಘಟನೆಗಳು, ವ್ಯಕ್ತಿಗಳು ಹಣದ ಆಮಿಷ ನೀಡಿ ಉಪಯೋಗಿಸಿಕೊಳ್ಳುವ ಸಾಧ್ಯತೆಗಳಿವೆ.

ಹಾಗಾದಲ್ಲಿ, ಈ ನಿರಾಶ್ರಿತರ ಗುಂಪುಗಳು ಸಂಘಟಿತ ಸ್ವರೂಪ ಪಡೆದುಕೊಂಡು ಭವಿಷ್ಯದಲ್ಲಿ ದೇಶಕ್ಕೆ ಮಾರಕವಾಗಬಹುದು ಎಂಬ ಬಗ್ಗೆ ಅನುಮಾನಗಳಿರುವುದರಿಂದ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸಿದೆ.

ಮೂಲಗಳ ಪ್ರಕಾರ, ಭಾರತದಲ್ಲಿ ಬೀಡುಬಿಟ್ಟಿರುವ ಈ ನಿರಾಶ್ರಿತರು ಮೂಲತಃ ಬರ್ಮಾದ ರೋಹಿಂಗ್ಯಾ ಪ್ರಾಂತ್ಯದವರು. ಭಾರತ ಹಾಗೂ ಮಿಯಾಮ್ನಾರ್- ಬಾಂಗ್ಲಾ ದೇಶ ಗಡಿಗಳ ಮೂಲಕ ಅಕ್ರಮವಾಗಿ ನುಸುಳಿಕೊಂಡು ಭಾರತದೊಳಗ್ಗೆ ಇವರು ಬಂದು ನೆಲೆಸಿದ್ದಾರೆ ಹಾಗೂ ನೆಲೆಸುತ್ತಲೇ ಇದ್ದಾರೆ.

ಈ ಮೊದಲು ಇವರನ್ನು ನಿರಾಶ್ರಿತರೆಂದು ಪರಿಗಣಿಸಿದ್ದ ಕೇಂದ್ರ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ, ಮಾನವ ಕಳ್ಳಸಾಗಣೆಗೆ ನೆರವಾಗುತ್ತಿರುವ ಬಗ್ಗೆ ಆರೋಪಗಳಿವೆ.

ಭಾರತದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲು ಸದಾ ಹಪಹಪಿಸುವ ಭಯೋತ್ಪಾದಕರು ಇಂಥ ನಿರಾಶ್ರಿತರಿಗೆ ಹಣ ಇನ್ನಿತರ ಸೌಲಭ್ಯಗಳ ಆಸೆ ತೋರಿಸಿ ಅವರನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲು ಆರಂಭಿಸಿದ್ದಾರೆಂದೂ ಹೇಳಲಾಗುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಈ ಬಗ್ಗೆ ಎಚ್ಚೆತ್ತುಕೊಂಡಿದೆ.