ಒಂಬತ್ತನೇ ಬಾರಿ ಕಿರೀಟ: ಆಸ್ಟ್ರೇಲಿಯಾ ಓಪನ್ ಗೆ ಜಾಕೊವಿಚ್ 'ರಾಜ'
ಮೆಲ್ಬರ್ನ್: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್ ಜೊಕೊವಿಚ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಸರ್ಬಿಯಾದ ಈ ತಾರಾ ಆಟಗಾರ 7-5, 6-2, 6-2ರಿಂದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಅವರನ್ನು ಮಣಿಸಿ ಒಂಬತ್ತನೇ ಬಾರಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ತಮ್ಮದೇ ದಾಖಲೆಯನ್ನು ಸುಧಾರಿಸಿಕೊಂಡರು.
ರಾಡ್ ಲೇವರ್ ಅರೆನಾದಲ್ಲಿ, ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್, ಒಟ್ಟು 18 ಗ್ರ್ಯಾನ್‌ಸ್ಲಾಮ್‌ಗಳ (ಒಂಬತ್ತು ಆಸ್ಟ್ರೇಲಿಯಾ ಓಪನ್, ಐದು ವಿಂಬಲ್ಡನ್, ಮೂರು ಬಾರಿ ಅಮೆರಿಕ ಓಪನ್, ಒಮ್ಮೆ ಫ್ರೆಂಚ್ ಓಪನ್) ಒಡೆಯರಾದರು. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಫೆಲ್ ನಡಾಲ್ ತಲಾ 20 ಬಾರಿ ಕಿರೀಟ ಧರಿಸಿದ್ದಾರೆ.
ಜೊಕೊವಿಚ್ ಸತತ ಮೂರನೇ ವರ್ಷ ಇಲ್ಲಿ ಚಾಂಪಿಯನ್ ಆದರು.
ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಜೊಕೊವಿಚ್ ತಮ್ಮ ಎಂದಿನ ಭರ್ಜರಿ ಸರ್ವ್, ರಿಟರ್ನ್‌ಗಳ ಮೂಲಕ ವಿಜೃಂಭಿಸಿದರು. ಬೇಸ್‌ಲೈನ್ ಹೊಡೆತಗಳಲ್ಲೂ ಅವರ ಪಾರಮ್ಯವಿತ್ತು. ಮೊದಲ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದ ಡ್ಯಾನಿಲ್, ಬಳಿಕ ದಣಿದಂತೆ ಕಂಡುಬಂದರು. ಕೊನೆಯ ಎರಡು ಸೆಟ್‌ಗಳನ್ನು ಅವರು ಸುಲಭವಾಗಿ ಕೈಚೆಲ್ಲಿದರು.
33 ವರ್ಷದ ಜೊಕೊವಿಚ್, ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ಸ್ ಹಾಗೂ ಫೈನಲ್ಸ್ ಪಂದ್ಯಗಳಲ್ಲಿ 18 ಬಾರಿ ಸೋಲು ಅನುಭವಿಸಿಲ್ಲ. ಕಳೆದ 10 ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಚ್ ಅವರಿದ ಒಲಿದ ಆರನೇ ಪ್ರಶಸ್ತಿ ಇದು. ಈ ಗೆಲುವಿನೊಂದಿಗೆ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮಾರ್ಚ್ 8ರವರೆಗೆ ಅಗ್ರಸ್ಥಾನದಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿದ್ದು, 311 ವಾರಗಳ ಕಾಲ ಈ ಸ್ಥಾನದಲ್ಲಿದ್ದು, ರೋಜರ್ ಫೆಡರರ್ ಅವರ ದಾಖಲೆಯನ್ನು ಅಳಿಸಿಹಾಕಲಿದ್ದಾರೆ.
ಮೆಡ್ವೆಡೆವ್ ಎರಡನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಫೈನಲ್ ಪ್ರವೇಶಿಸಿದ್ದರು. 2019ರ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು ನಡಾಲ್ ಅವರಿಗೆ ಮಣಿದಿದ್ದರು. ಈ ಪಂದ್ಯದಲ್ಲಿ ಸೋಲುವುದರೊಂದಿಗೆ ರಷ್ಯಾದ 25 ವರ್ಷದ ಆಟಗಾರನ 20 ಪಂದ್ಯಗಳ ಸತತ ಗೆಲುವಿನ ಸರಪಳಿಯೂ ತುಂಡರಿಸಿತು.
ಎರಡನೇ ಸೆಟ್‌ನಲ್ಲಿ ಸೋತ ಬಳಿಕ ಪಂದ್ಯ ಕೈಜಾರುತ್ತಿರುವುದನ್ನು ಅರಿತ ಮೆಡ್ವೆಡೆವ್ ಹತಾಶಗೊಂಡರು. ನೀಲಿ ಅಂಗಣದಲ್ಲಿ ತಮ್ಮ ಬಿಳಿ ಬಣ್ಣದ ರ‍್ಯಾಕೆಟ್ ಎಸೆದು, ಮುರಿದು ಹಾಕಿದರು.
ಇದೇ ಕ್ರೀಡಾಂಗಣದಲ್ಲಿ ಜೊಕೊವಿಚ್, ಸೆಮಿಫೈನಲ್ ಅಥವಾ ಫೈನಲ್ ಪಂದ್ಯಗಳಲ್ಲಿ ಗ್ರ್ಯಾನ್‌ಸ್ಲಾಮ್ ಚಾಂಪಿಯನ್‌ಗಳಾದ ಫೆಡರರ್, ನಡಾಲ್, ಆ್ಯಂಡಿ ಮರ್ರೆ, ಸ್ಟ್ಯಾನ್ ವಾವ್ರಿಂಕಾ, ಡೊಮಿನಿಕ್ ಥೀಮ್ ಅವರನ್ನು ಸೋಲಿಸಿದ ಶ್ರೇಯ ಹೊಂದಿದ್ದಾರೆ.