ಭಾನುವಾರ, ಆಗಸ್ಟ್ 27, 2017

ಮಾಧ್ಯಮಿಕ & ಉನ್ನತ ಶಿಕ್ಷಣ ರದ್ದಾಗದ ಮೂಲ ನಿಧಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ

2007ರ ವಿತ್ತ ಕಾಯಿದೆಯ ವಿಭಾಗ 136ರಡಿ ವಿಧಿಸುತ್ತಿರುವ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ ಮೊತ್ತದಿಂದ ಏಕೈಕ, ರದ್ದಾಗದ ಮೂಲನಿಧಿ ಸೃಷ್ಟಿಗೆ ಸಚಿವ ಸಂಪುಟದ ಸಮ್ಮತಿ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿ,"ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ಅನ್ನು ಸೃಷ್ಟಿಸಲು ಸಮ್ಮತಿ ನೀಡಲಾಗಿದೆ. ಇದಕ್ಕೆ "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ'ಯಿಂದ ಸಂಗ್ರಹವಾಗುವ ಎಲ್ಲ ಮೊತ್ತವನ್ನು ಜಮಾ ಮಾಡಲು ನಿರ್ಧರಿಸಲಾಗಿದೆ. 

ಎಂಯುಎಸ್ಕೆ ಅಡಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಶೈಕ್ಷಣಿಕ ಕ್ಷೇತ್ರದ ನಾನಾ ಯೋಜನೆಗಳಿಗೆ ಬಳಸಬಹುದಾಗಿದ್ದು, ದೇಶದೆಲ್ಲೆಡೆಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. 

ಈ ನಿಧಿಗೆ ಸಂಬಂಧಪಟ್ಟಂತೆ, ಕೇಂದ್ರ ಸಂಪುಟವುವ ಕೆಳಗೆ ಉಲ್ಲೇಖಿಸಿದವಕ್ಕೆ ಸಮ್ಮತಿ ನೀಡಿದೆ. 

1) ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಈ ನಿಧಿಯ ನಿರ್ವಹಣೆ ಮತ್ತು ಮೇಲುಸ್ತುವಾರಿಯನ್ನು ವಹಿಸಲಿದೆ 

2) ತೆರಿಗೆಯಿಂದ ಕೂಡಿಬರುವ ಮೊತ್ತವನ್ನು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಬಳಸಲಾಗುತ್ತದೆ. ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ, ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

3) ಯಾವುದೇ ಆರ್ಥಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಾಲಿ ಯೋಜನೆಗಳ ವೆಚ್ಚವನ್ನು ಪ್ರಾರಂಭದಲ್ಲಿ ಒಟ್ಟು ಆಯವ್ಯಯ ಬೆಂಬಲ(ಜಿಬಿಎಸ್) ದಿಂದ ಭರಿಸಲಾಗುತ್ತದೆ ಮತ್ತು ಜಿಬಿಎಸ್ ಖಾಲಿಯಾದ ಬಳಿಕವಷ್ಟೇ ಎಂಯುಎಸ್ಕೆಯಿಂದ ವೆಚ್ಚವನ್ನು ನೀಡಲಾಗುತ್ತದೆ. 

4) ಎಂಯುಎಸ್ಕೆಯನ್ನು ಭಾರತದ ಸಾರ್ವಜನಿಕ ಖಾತೆಯ ಬಡ್ಡಿರಹಿತ ವಿಭಾಗದ ಕಾಯ್ದಿಟ್ಟ ನಿಧಿ ಎಂದು ನಿರ್ವಹಿಸಲಾಗುತ್ತದೆ. ಇದರಿಂದ ಆಗುವ ಉಪಯೋಗವೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಸಂಪನ್ಮೂಲ ದೊರೆಯಲಿದೆ. ಜತೆಗೆ, ಆರ್ಥಿಕ ವರ್ಷದ ಅಂತ್ಯದಲ್ಲಿ ಖರ್ಚಾಗದೆ ಉಳಿದ ಹಣ ಬಳಕೆಯಾಗದೆ ವಾಪಸಾಗುವುದು ನಿಲ್ಲಲಿದೆ. 

ವಿಶೇಷತೆಗಳು: 

1. ಉದ್ದೇಶಿತ ರದ್ದಾಗದೆ ಇರುವ ಮೂಲನಿಧಿಗೆ ಜಮೆಯಾಗುವ ಮೊತ್ತವು ಮಾಧ್ಯಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ವಿಸ್ತರಣೆಗೆ ಲಭ್ಯವಾಗಲಿದೆ. 

2. ಮಾಧ್ಯಮಿಕ ಶಿಕ್ಷಣ: ಪ್ರಸ್ತುತ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ತೆರಿಗೆಯಿಂದ ಬರುವ ಮೊತ್ತವನ್ನು ಮಾಧ್ಯಮಿಕ ಶಿಕ್ಷಣದ ಚಾಲ್ತಿಯಲ್ಲಿರುವ ಯೋಜನೆಗಳಾದ- 

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ ಯೋಜನೆ ಮ ತ್ತು ಇತರ ರಾಷ್ಟ್ರೀಯ ಕಾರ್ಯಕ್ರಮಗಳಾದ ರಾಷ್ಟ್ರೀಯ ಜೀವನಾಧಾರ ಮತ್ತು ಮೆರಿಟ್ ಶಿಷ್ಯವೇತನ ಮತ್ತು ಹೆಣ್ಣು ಮಕ್ಕಳಿಗೆ ಮಾಧ್ಯಮಿಕ ಶಿಕ್ಷಣಕ್ಕೆ ನೆರವು ನೀಡುವ ರಾಷ್ಟ್ರೀಯ ಯೋಜನೆ. 

3. ಉನ್ನತ ಶಿಕ್ಷಣ: ತೆರಿಗೆ ಮೊತ್ತವನ್ನು ಚಾಲನೆಯಲ್ಲಿರುವ ಬಡ್ಡಿ ರಿಯಾಯಿತಿ ಯೋಜನೆಗಳು, ಖಾತ್ರಿ ನಿಧಿಗಳಿಗೆ ವಂತಿಗೆ, ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳಿಗೆ ಶಿಷ್ಯವೇತನ ನೀಡಲು, ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನಕ್ಕೆ, ಶಿಷ್ಯವೇತನ(ವಿದ್ಯಾಲಯಗಳಿಗೆ ವಿಭಾಗ ಅನುದಾನ) ಮತ್ತು ಶಿಕ್ಷಕರು ಹಾಗೂ ತರಬೇತಿಯ ರಾಷ್ಟ್ರೀಯ ಆಂದೋಲನಕ್ಕೆ ನೀಡಲಾಗುವುದು. 

ಆದರೆ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಭವಿಷ್ಯದಲ್ಲಿನ ಯಾವುದೇ ಕಾರ್ಯಕ್ರಮ/ಯೋಜನೆಗೆ ಅಗತ್ಯವನ್ನು ಆಧರಿಸಿ ಮತ್ತು ನಿಗದಿಗೊಳಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ಈ ಅನುದಾನವನ್ನು ನೀಡಬಹುದಾಗಿದೆ. 

ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ತೆರಿಗೆಯನ್ನು ವಿಧಿಸುವ ಉದ್ದೇಶವೇನೆಂದರೆ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾದ ಸಂಪನ್ಮೂಲವನ್ನು ಕ್ರೊಡೀಕರಿಸುವುದಾಗಿದೆ . 

ಪ್ರಸ್ತುತ ಪ್ರಾರಂಭಿಕ ಶಿಕ್ಷಾ ಕೋಶ್(ಪಿಎಸ್ಕೆ)ದಡಿ ಇರುವ ವ್ಯವಸ್ಥೆಯನ್ನೇ ಆಧರಿಸಿ, ಈ ನಿಧಿಯನ್ನು ನಿರ್ವಹಿಸಲಾಗುತ್ತದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬಿಸಿಯೂಟ ಯೋಜನೆ (ಎಂಡಿಎಂ)ಮತ್ತು ಸರ್ವ ಶಿಕ್ಷಾ ಅಭಿಯಾನ(ಎಸ್ಎಸ್ಎ)ಕ್ಕೆ ಈ ತೆರಿಗೆಯನ್ನೇ ಬಳಸಲಾಗುತ್ತಿದೆ. 

ಹಿನ್ನೆಲೆ:

1) 10ನೇ ಯೋಜನೆಯಲ್ಲಿ ಎಲ್ಲ ಕೇಂದ್ರ ತೆರಿಗೆಗಳ ಮೇಲೆ 1.4.2004ರಿಂದ ಅನ್ವಯವಾಗುವಂತೆ ಶೇ.2 ರಷ್ಟು ಶಿಕ್ಷಣ ತೆರಿಗೆಯನ್ನು ವಿಧಿಸಲಾಯಿತು. ಮೂಲ ಶಿಕ್ಷಣ/ಪ್ರಾಥಮಿಕ ಶಿಕ್ಷಣಕ್ಕೆ ಹಾಲಿ ಇದ್ದ ಆಯವ್ಯಯ ಸಂಪನ್ಮೂಲದ ಜತೆಗೆ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸುವುದು ಇದರ ಉದ್ದೇಶವಾಗಿತ್ತು. ಇದೇ ರೀತಿ ಮಾಧ್ಯಮಿಕ ಶಿಕ್ಷಣಕ್ಕೆ ಪ್ರವೇಶವನ್ನು ಸಾರ್ವತ್ರೀಕರಿ ಸಬೇಕು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಅನ್ನಿಸಿತು. ಆದ್ದರಿಂದ, 2007ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವರು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೇ. 1 ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಪ್ರಸ್ತಾವವನ್ನು ಮಂಡಿಸಿದರು. 

2) 2007ರ ವಿತ್ತ ಕಾಯಿದೆಯಡಿ ಶೇ. 1ರಷ್ಟು "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ತೆರಿಗೆ"ಯನ್ನು ವಿಧಿಸಲು ನಿರ್ಧರಿಸಿ, "ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಹಣಕಾಸು ನೀಡುವ ಸರ್ಕಾರದ ವಾಗ್ದಾನವನ್ನು ಈಡೇರಿಸಲು' ನಿರ್ಧರಿಸಲಾಯಿತು(ಕಾಯಿದೆಯ 136ನೇ ವಿಭಾಗ). 

3) ಜುಲೈ 2010ರಲ್ಲಿ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಾರ್ವಜನಿಕ ಖಾತೆಯಲ್ಲಿ ಏಕೈಕ, ರದ್ದಾಗದೆ ಇರುವ ಮೂಲನಿಧಿಯಾದ "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)'ನ್ನು ಸೃಷ್ಟಿಸುವ ಕುರಿತ ಸಂಪುಟದ ಕರಡು ಟಿಪ್ಪಣಿಯನ್ನು ಹಂಚಿತು. ಸಂಬಂಧಪಟ್ಟ ಮಂತ್ರಾಲಯಗಳಾದ ಯೋಜನಾ ಆಯೋಗ, ಈಶಾನ್ಯ ಪ್ರಾಂತ್ಯಗಳ ಮಂತ್ರಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ವಿತ್ತ ಮಂತ್ರಾಲಯದ ಅಭಿಪ್ರಾಯವನ್ನು ಕೇಳಲಾಯಿತು. ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಯೋಜನೆಗಳಿಗೆ ಆಯವ್ಯಯದಲ್ಲಿ ನೀಡುತ್ತಿರುವ ಮೊತ್ತವು ಶೇ. 1 ರಂತೆ ಸಂಗ್ರಹಿಸುವ ತೆರಿಗೆಗಿಂತ ಹೆಚ್ಚು ಇದೆ ಎಂಬ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ಪ್ರಸ್ತಾವವನ್ನು ಒಪ್ಪಲಿಲ್ಲ. 

ಆದ್ದರಿಂದ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣದ ಕಾರ್ಯಕ್ರಮಗಳಿಗೆ ಆ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ತೆರಿಗೆಯನ್ನು ಸಂಪೂರ್ಣವಾಗಿ ನೀಡಲಾಗಿದೆ ಎಂದು ಪರಿಗಣಿಸಲಾಯಿತು. ಹೀಗಾಗಿ, ಹಿಂದಿನ ಅವಧಿಯ ಶೇ.1 ರಷ್ಟು ತೆರಿಗೆಯ ಮೊತ್ತವನ್ನು ಈಗ ನೀಡಲು ಲಭ್ಯವಿಲ್ಲ. 

4) ಹೀಗಾಗಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಮಂತ್ರಾಲಯವು "ಮಾಧ್ಯಮಿಕ್ ಮತ್ತು ಉಚ್ಛತರ್ ಶಿಕ್ಷಾ ಕೋಶ್(ಎಂಯುಎಸ್ಕೆ)' ಸೃಷ್ಟಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯ ಅಂಗೀಕಾರವನ್ನು ಫೆಬ್ರವರಿ 11, 2016ರಲ್ಲಿ ಕೋರಿತು. ಎಂಯುಎಸ್ಕೆಯ ಸೃಷ್ಟಿಗೆ ಸಂಬಂಧಿಸಿದಂತೆ ಕರಡು ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಿ ಸಂಪುಟದ ಒಪ್ಪಿಗೆಯನ್ನು ಪಡೆಯಬೇಕೆಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಜೂನ್ 20,2016ರಂದು ಸಮ್ಮತಿ ನೀಡಿತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ