ಭಾನುವಾರ, ಆಗಸ್ಟ್ 27, 2017

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ

ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗಾಗಿ ಭಾರತ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಆಗಿರುವ ಎಂ.ಓ.ಯು.ಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ವಿವಿಧ ಬ್ರಿಕ್ಸ್ ರಾಷ್ಟ್ರಗಳ ನಡುವೆ ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ (ಬ್ರಿಕ್ಸ್ –ಎ.ಆರ್.ಪಿ.) ಸ್ಥಾಪನೆಗಾಗಿ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಗೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಹಿನ್ನೆಲೆ:

2015ರ ಜುಲೈ 9ರಂದು ರಷ್ಯಾದ ಉಫಾದಲ್ಲಿ ನಡೆದ 7ನೇ ಬ್ರಿಕ್ಸ್ ಶೃಂಗಸಭೆಯ ವೇಳೆ, ಪ್ರಧಾನಮಂತ್ರಿ ಶ್ರೀ ಮೋದಿ ಅವರು ಇಡೀ ವಿಶ್ವಕ್ಕೇ ಕೊಡುಗೆಯಾಗಬಲ್ಲ ಬ್ರಿಕ್ಸ್ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯ ಪ್ರಸ್ತಾಪ ಮಾಡಿದ್ದರು. ಈ ಕೇಂದ್ರವು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಆಹಾರ ಭದ್ರತೆ ಒದಗಿಸಲು ಕೃಷಿಯಲ್ಲಿ ವ್ಯೂಹಾತ್ಮಕ ಸಹಕಾರವನ್ನು ಒದಗಿಸುವ ಮೂಲಕ ಸುಸ್ಥಿರ ಕೃಷಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡುವುದನ್ನು ಉತ್ತೇಜಿಸುತ್ತದೆ. 

ಬ್ರಿಕ್ಸ್ ರಾಷ್ಟ್ರಗಳಲ್ಲಿ ಸಣ್ಣ ಹಿಡುವಳಿದಾರರ ಕೃಷಿಗೆ ತಂತ್ರಜ್ಞಾನವೂ ಸೇರಿದಂತೆ ಕೃಷಿ ಸಂಶೋಧನಾ ನೀತಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವಿನ್ಯತೆ ಮತ್ತು ಸಾಮರ್ಥ್ಯವರ್ಧನೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಕೃಷಿ ಸಂಶೋಧನಾ ವೇದಿಕೆ ಸ್ಥಾಪನೆಗೆ ಎಂ.ಓ.ಯು.ಗೆ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ಸಚಿವರುಗಳು ಗೋವಾದಲ್ಲಿ 2016ರ ಅಕ್ಟೋಬರ್ 16ರಂದು ನಡೆದಿದ್ದ 8ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಅಂಕಿತ ಹಾಕಿದ್ದರು.

ಬ್ರಿಕ್ಸ್ –ಎ.ಆರ್.ಪಿ. ವಿಶ್ವದ ಹಸಿವು, ಅಪೌಷ್ಟಿಕತೆ, ಬಡತನ ಮತ್ತು ಅಸಮಾನತೆ ಅದರಲ್ಲೂ ರೈತರು ಮತ್ತು ರೈತೇತರರ ಆದಾಯದ ನಡುವಿನ ಅಸಮಾನತೆ ಮತ್ತು ಕೃಷಿ ವ್ಯಾಪಾರವನ್ನು ಹೆಚ್ಚಿಸುವ, ಜೈವಿಕ –ಸುರಕ್ಷತೆ ಮತ್ತು ಹವಾಮಾನ ತಾಳಿಕೊಳ್ಳುವ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ವಿಜ್ಞಾನದ ನೇತೃತ್ವದ ಕೃಷಿ ಆಧಾರಿತ ಸುಸ್ಥಿರ ಅಭಿವೃದ್ಧಿಗೆ ನೈಸರ್ಗಿಕ ಜಾಗತಿಕ ವೇದಿಕೆಯಾಗಿದೆ.
 

******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ