ಸೋಮವಾರ, ಡಿಸೆಂಬರ್ 24, 2018

ವಿಶ್ವ ಮಾತೃ ಭಾಷೆ ದಿವಸ

ಫೆಬ್ರವರಿ ೨೧ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿವಸವಾಗಿ ಆಚರಿಸಲಾಗುತ್ತಿದೆ. ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆಯನ್ನು ಮಾಡಲಾಗುತ್ತಿದೆ. ೧೯೯೯ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು[೧]. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು ೨೦೦೮ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು[೨][೩]. ೨೦೦೦ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ. ೧೯೫೨ನೆಯ ಇಸವಿಯಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ವಿದ್ಯಾರ್ಥಿಗಳು ಸತ್ತದಿನದ ನೆನಪಿಗೆ ಈ ಆಚರಣೆಯನ್ನು ಮಾಡಲಾಗುತ್ತಿದೆ.


ವಿಶ್ವ ಮಾತೃ ಭಾಷೆ ದಿವಸದ ಹಿನ್ನೆಲೆ

೧೯೪೭ ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡಾಗ ಅಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ಎರಡು ಭೂ ಪ್ರದೇಶಗಳು ರಚನೆಯಾದುವು. ಪೂರ್ವ ಪಾಕಿಸ್ತಾನವೆಂದರೆ ಇಂದಿನ ಬಾಂಗ್ಲಾದೇಶ, ಪಶ್ಚಿಮ ಪಾಕಿಸ್ತಾನವೆಂದರೆ ಈಗಿರುವ ಪಾಕಿಸ್ತಾನ. ಪೂರ್ವ ಪಾಕಿಸ್ತಾನದ ಮಾತೃಭಾಷೆ ಬಂಗಾಳಿಯಾಗಿತ್ತು. ಪಶ್ಚಿಮ ಪಾಕಿಸ್ತಾನದ ಮಾತೃಭಾಷೆ ಉರ್ದು ಆಗಿತ್ತು. ೧೯೪೮ ರಲ್ಲಿ ಪಶ್ಚಿಮ ಪಾಕಿಸ್ತಾನ ಮಾತೃಭಾಷೆ ಉರ್ದುವನ್ನು' ರಾಷ್ಟ್ರಭಾಷೆ'ಯೆಂದು ಘೋಷಿಸಿತು.


ಇದರಿಂದ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷೆಯನ್ನು ಮಾತಾನಾಡುತ್ತಿದ್ದವರು ತುಂಬ ಅಸಮಾಧಾನಗೊಂಡರು. ಉರ್ದುವನ್ನು ರಾಷ್ಟ್ರಭಾಷೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡತೊಡಗಿದರು. ಆಗ ಪಾಕ್ ಇವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು. ಪಾಕ್ ಸರ್ಕಾರದ ನಿಷೇಧವನ್ನು ಮೀರಿ ೨೧-೦೨-೧೯೫೨ ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡತೊಡಗಿದರು.


ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ, ಪಾಕ್ ಸರ್ಕಾರದ ಆದೇಶದಂತೆ ಪೋಲಿಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗ ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಅಸುನೀಗಿದರು. ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಆ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೊವು "ವಿಶ್ವ ಮಾತೃ ಭಾಷೆ ದಿವಸ"ವನ್ನಾಗಿ ಆಚರಿಸುವಂತೆ ಘೋಷಿಸಿತು.


ಅನಂತರದ ಘಟನೆಗಳು

ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳ ನಿರಂತರ ಹೋರಾಟದ ಫಲವಾಗಿ ಪಾಕಿಸ್ತಾನ ೨೯-೦೨-೧೯೫೬ ರಲ್ಲಿ ಬಂಗಾಳಿಭಾಷೆಯನ್ನು ಅಧಿಕೃತಭಾಷೆಯಾಗಿ ಘೋಷಿಸಿತು. ಬಾಂಗ್ಲಾದೇಶದಲ್ಲಿ ಫೆಬ್ರವರಿ ೨೧ ರಂದು 'ಶಹೀದ್ ಡೇ' (ಹುತಾತ್ಮರ ಸ್ಮಾರಕಕ್ಕೆ)ಗೆ ಹೂಗುಚ್ಛವನ್ನಿಟ್ಟು ಗೌರವಿಸಲಾಗುತ್ತದೆ. ವಿಶ್ವದ ಅನೇಕ ಕಡೆ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ.


ಇಂಗ್ಲಿಷ್ ಪ್ರಭಾವ

ಜಾಗತೀಕರಣ ನೇರ ಪ್ರಭಾವ ಸ್ಥಳೀಯ ಭಾಷೆಗಳ ಮೇಲೆ ಆಗುತ್ತಿದೆ. ಇಂಗ್ಲಿಷ್ ಭಾಷೆಯ ಪ್ರಭಾವ ಎರಡು ರೀತಿಯಲ್ಲಿ ಆಗುತ್ತಿದೆ.


ವಿಜ್ಞಾನ/ತಂತ್ರಜ್ಞಾನ ಜ್ಞಾನಭಂಡಾರವು ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ಶೇಖರವಾಗಿದೆ. ಹೊಸ ಸಂಶೋಧನಾ ಪ್ರಬಂಧಗಳು ಇಂಗ್ಲಿಷ್ ಭಾಷೆಯಲ್ಲೇ ಪ್ರಕಟವಾಗುತ್ತಿವೆ. ಹೀಗಾಗಿ ಔದ್ಯೋಗಿಕ ಶಿಕ್ಷಣ ಬಹುಮಟ್ಟಿಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿದೆ. ಉದ್ಯೋಗಕ್ಕಾಗಿ ಇಂಗ್ಲಿಷ್ ಜ್ಞಾನ ಬೇಕೆಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಹೀಗಾಗಿ ಜನ ಇಂಗ್ಲಿಷ್ ಕಲಿಯಲು ಉತ್ಸುಕರಾಗಿದ್ದಾರೆ.


ಇಂಗ್ಲಿಷ್ ಭಾಷೆಯಿಂದ ನೇರವಾಗಿ ಅನುವಾದ ಮಾಡುವಾಗಲೂ ಸ್ಥಳೀಯ ಭಾಷೆಗಳಿಗೆ ಪೆಟ್ಟು ಬೀಳುತ್ತಿದೆ. ಸ್ಥಳೀಯ ಭಾಷೆಯಲ್ಲಿ ಸಹಜವಾಗಿ ಹೇಳಬಹುದಾದ್ದನ್ನು ಇಂಗ್ಲಿಷ್ ಪದಶಃ ಭಾಷಾಂತರದ ಮೂಲಕ ಕೃತಕವಾಗಿ ಹೇಳುವ ಪರಿಪಾಠ ಪ್ರಾರಂಭವಾಗಿದೆ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ