ಬುಧವಾರ, ಸೆಪ್ಟೆಂಬರ್ 4, 2019

ಅಕ್ಷರಗಳಿಗೆ ಅಳಿವಿಲ್ಲ- ಆಳುವವರಿಗೆ ಅದು ತಿಳಿದಿಲ್ಲ

ಅಕ್ಷರಗಳಿಗೆ ಅಳಿವಿಲ್ಲ- ಆಳುವವರಿಗೆ ಅದು ತಿಳಿದಿಲ್ಲ

ಸಮಾಜವಾದವನ್ನು ಜಾರಿಗೆ ತಂದ ದೇಶ ಸೋವಿಯತ್ ರಷ್ಯಾ ಬೋರಿಸ್ ಪಾಸ್ತರ್ನಾಕನ ಡಾ.ಝಿವಾಗೋ ಕಾದಂಬರಿಯನ್ನು ನಿಷೇಧಿಸಿತ್ತು.

ಡಿ, ಉಮಾಪತಿ


ಎಲ್ಲಿ ಪುಸ್ತಕಗಳನ್ನು ಸುಡಲಾಗುತ್ತದೆಯೋ, ಅಲ್ಲಿ ಕಟ್ಟಕಡೆಯಲ್ಲಿ ಮನುಷ್ಯರನ್ನು ಸುಡಲಾಗುತ್ತದೆ- ಹೆನ್ರಿಕ್ ಹೈನ್ (1821), ಜರ್ಮನ್ ಕವಿ


ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಇಲ್ಲವೇ ನಿಷೇಧಿಸುವುದು, ಅವುಗಳನ್ನು ಇಟ್ಟುಕೊಂಡ ವ್ಯಕ್ತಿಗಳನ್ನು ಜೈಲಿಗೆ ತಳ್ಳುವುದು ಅಭದ್ರತೆಯ ಭಾವನೆಯಿಂದ ಬಳಲುವ ಪ್ರಭುತ್ವಗಳ ಹೆಗ್ಗುರುತು. ಪುಸ್ತಕಗಳಿಗೆ ಭಯಪಟ್ಟು ಅವುಗಳನ್ನು ಸುಟ್ಟಿರುವ ಪ್ರಕರಣಗಳಿಗೆ ಇತಿಹಾಸದ ಪುಟಗಳಲ್ಲಿ ಬರ ಇಲ್ಲ.


ಓದುಗರ ಕಪಾಟಿನಲ್ಲಿರುವ ಪುಸ್ತಕಗಳು ಕೂಡ ಆಳುವವರ ನೆಮ್ಮದಿ ಕದಡುತ್ತಿರುವುದು ವಿಚಿತ್ರ ವಿದ್ಯಮಾನ. ನಿನ್ನ ಕಪಾಟಿನಲ್ಲಿ ಪುಸ್ತಕ ಯಾಕಿತ್ತು ಎಂದು ನ್ಯಾಯಾಲಯಗಳು ಕೂಡ ಕೇಳಲಾರಂಭಿಸಿವೆ.


ಮಾನವ ಹಕ್ಕುಗಳ ಹೋರಾಟಗಾರರ ಮೇಲಿನ ಆಪಾದನೆಗಳ ವಿಚಾರಣೆ ನಡೆಸಿರುವ ಮುಂಬಯಿ ಹೈಕೋರ್ಟು ಮೊನ್ನೆ ಸ್ಪಷ್ಟೀಕರಣವೊಂದನ್ನು ನೀಡಿತು- ನಾವು ಕೇಳಿದ್ದು ಲಿಯೋ ಟಾಲ್‍ಸ್ಟಾಯ್ ಅವರ ‘ವಾರ್ ಅಂಡ್ ಪೀಸ್’ ಕೃತಿ ಕುರಿತು ಅಲ್ಲ. ‘ವಾರ್ ಅಂಡ್ ಪೀಸ್ ಇನ್ ಜಂಗಲ್ ಮಹಲ್’ ಎಂಬ ಮತ್ತೊಂದು ಪುಸ್ತಕದ ಕುರಿತು ಎಂದಿತು.


ಈಗಾಗಲೆ ವರದಿಯಾಗಿರುವಂತೆ ಜಂಗಲ್‍ಮಹಲ್‍ನಲ್ಲಿ ಶಾಂತಿ ಪ್ರಯತ್ನಗಳು ವಿಫಲವಾಗಿರುವ ಕುರಿತು ಹಲವು ಲೇಖನಗಳ ಸಂಗ್ರಹ ಈ ಪುಸ್ತಕ. ಆಳುವವರು ಅಳುಕಬೇಕಾದ ಪುಸ್ತಕವೇನೂ ಅಲ್ಲ. ಸರ್ಕಾರಗಳು ಅದನ್ನು ನಿಷೇಧಿಸಿಯೂ ಇಲ್ಲ. ಆದರೂ ಯಾಕೆ ಅಂಜಿಕೆ?


ಪುಸ್ತಕಗಳನ್ನು ಭೌತಿಕವಾಗಿ ಸುಡದಿದ್ದರೂ ಅವುಗಳ ಓದುಗರನ್ನು ಭಯಪಡಿಸುವ ಬಗೆಯನ್ನು ಆಧುನಿಕ ಪ್ರಭುತ್ವ ಚೆನ್ನಾಗಿ ಬಲ್ಲದು. ತಾನು ಭಯಪಡುವ ವಿಚಾರಗಳು ಚಿಂತನೆಗಳು ಜನಸಮುದಾಯಗಳ ನಡುವೆ ಹರಿದಾಡಕೂಡದು. ಯಥಾಸ್ಥಿತಿಯನ್ನು ಪ್ರಶ್ನಿಸುವ ಬೀಜ ಮಣ್ಣಿಗೆ ಬೀಳಕೂಡದು, ಮೊಳಕೆ ಒಡೆಯಬಾರದು ಎಂಬುದು ಸರ್ಕಾರಗಳ ಪರಮಗುರಿ.


ಪುಸ್ತಕಗಳು ಮತ್ತು ಚಿಂತನೆಗಳು ಆಳುವವರನ್ನು ಬಲಿಷ್ಠರನ್ನು ಸರ್ವಶಕ್ತರನ್ನು ಹೆದರಿಸಿರುವಷ್ಟು ದುರ್ಬಲರನ್ನು ಹೆದರಿಸಿಲ್ಲ. ಯಾಕೆಂದರೆ ಏನೂ ಇಲ್ಲದ ದುರ್ಬಲರು ಕಳೆದುಕೊಳ್ಳುವುದೊಂದೂ ಇಲ್ಲ.


ದೌರ್ಜನ್ಯ ಎಸಗುವವರು ಖುದ್ದು ತಾವು ಬಲಿಪಶು ಎಂದು ಹೇಳಿಕೊಳ್ಳುವುದು, ಅನ್ಯಾಯ ಮಾಡುವವರು ಖುದ್ದು ತಾವು ಅನ್ಯಾಯಕ್ಕೆ ಈಡಾದವರು ಎಂದು ಹೇಳಿಕೊಳ್ಳುವುದು ಇಂದು ನಿನ್ನೆಯ ಮಾತಲ್ಲ. ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿದೆ. ಅಧಿಕಾರದಲ್ಲಿದ್ದ ಸರ್ವಶಕ್ತರು ಈ ಮಾತನ್ನು ಹೇಳಿ ಅಶಕ್ತರ ಬೇಟೆಯಾಡಿದ್ದಾರೆ. ಅಡಾಲ್ಫ್ ಹಿಟ್ಲರ್ ಮತ್ತು ನಾಜಿಗಳು ತಮ್ಮನ್ನು ಯಹೂದಿಗಳಿಂದ ಅನ್ಯಾಯಕ್ಕೆ ಒಳಗಾದ ಬಲಿಪಶುಗಳು ಎಂದೇ ಬಿಂಬಿಸಿಕೊಂಡರು.


ಚೀನಾದಲ್ಲಿ ಮಾವೋ ಅಧಿಕಾರ ಹಿಡಿದು ಸಾಂಸ್ಕೃತಿಕ ಕ್ರಾಂತಿಯನ್ನು ಮುನ್ನಡೆಸಿದಾಗ ಬಂಡವಾಳಶಾಹಿ ಮತ್ತಿತರೆ ಸಂಗತಿಗಳನ್ನು ಸಾರುವ ಪುಸ್ತಕಗಳನ್ನು ನಾಶ ಮಾಡಿಸಿದ. ತಮಿಳು ಇತಿಹಾಸ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಜಾಫ್ನಾ ಸಾರ್ವಜನಿಕ ಗ್ರಂಥಾಲಯದಿಂದ ಹೊರತಂದು ಬೆಂಕಿ ಇಟ್ಟವರು ಶ್ರೀಲಂಕಾದ ಬೌದ್ಧರು. ತಮಿಳರು ಅಲ್ಪಸಂಖ್ಯಾತರಾಗಿದ್ದರೂ, ಅವರ ಪುಸ್ತಕಗಳಿಗೆ ಯಾವ ರಿಯಾಯತಿಯೂ ಸಿಗಲಿಲ್ಲ.


ಪುಸ್ತಕಗಳು ಮತ್ತು ಗ್ರಂಥಾಲಯಗಳನ್ನು ಸಾವಿರಾರು ವರ್ಷಗಳಿಂದ ಉದ್ದೇಶಪೂರ್ವಕವಾಗಿಯೂ, ಸಮರಗಳ ಭಾಗವಾಗಿಯೂ ಸುಡಲಾಗಿದೆ. ಚೀನಾದ ಚಕ್ರವರ್ತಿ ಕಿನ್ ಶಿ ಹ್ವಾಂಗ್ ವಿಶೇಷವಾಗಿ ಕಾವ್ಯ, ತತ್ವಶಾಸ್ತ್ರ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ರಾಶಿರಾಶಿ ಪುಸ್ತಕಗಳನ್ನು ಸುಡಿಸಿದ. ವಿದ್ವಾಂಸರನ್ನು ಜೀವಂತ ಹೂತು ಹಾಕಿಸಿದ. ಚೀನಾದ ಇತಿಹಾಸ ತನ್ನಿಂದಲೇ ಆರಂಭ ಆಗಲಿ ಎಂದು ಆತ ಬಯಸಿದ್ದನಂತೆ! ತನ್ನ ಆಳ್ವಿಕೆಯನ್ನು ತನಗಿಂತ ಮೊದಲು ಆಳಿದ ಯಾವ ಚಕ್ರವರ್ತಿಗಳ ಜೊತೆ ತುಲನೆ ಮಾಡದಂತೆ ಪುಸ್ತಕ ನಾಶಕ್ಕೆ ಕೈಹಾಕಿದ.


1258ರಲ್ಲಿ ಮಂಗೋಲರು ಬಾಗ್ದಾದ್ ಮೇಲೆ ದಾಳಿ ನಡೆಸಿದಾಗ ಟೈಗ್ರಿಸ್ ನದಿಯ ನೀರು ಅವರು ನಾಶ ಮಾಡಿದ ಪುಸ್ತಕಗಳ ಅಕ್ಷರಗಳ ಮಸಿಯಿಂದ ಕಪ್ಪಾಗಿ ಹೋಯಿತಂತೆ.


ಅಲ್ ಕೈದಾ ಉಗ್ರಗಾಮಿಗಳು 2012ರಲ್ಲಿ ಮಾಲಿ ಮತ್ತು ಟಿಂಬಕ್ಟೂ ಮೇಲೆ ದಾಳಿ ನಡೆಸಿದಾಗ ಅಮೂಲ್ಯ ಹಸ್ತಪ್ರತಿಗಳನ್ನು, ಪುಸ್ತಕಗಳನ್ನು ಸುಟ್ಟರು. ಆದಾಗ್ಯೂ ಅವರಿಂದ ಮೂರೂವರೆ ಲಕ್ಷದಷ್ಟು ಮಧ್ಯಕಾಲೀನ ಯುಗದ ಹಸ್ತಪ್ರತಿಗಳನ್ನು ಜನಸಾಮಾನ್ಯರ ನೆರವಿನಿಂದ ಉಳಿಸಲಾಯಿತು.


ಭಾರತದ ಪ್ರಾಚೀನ ವಿಶ್ವವಿದ್ಯಾಲಯ ನಳಂದದ ಮೇಲೆ ಮೂರು ದಾಳಿಗಳು ಜರುಗಿದ್ದವು. ಐದನೆಯ ಶತಮಾನದಲ್ಲಿ ಮಿಹಿರಕುಲನ ನೇತೃತ್ವದಲ್ಲಿ ಹೂಣರ ಮತ್ತು ಏಳನೆಯ ಶತಮಾನದಲ್ಲಿ ಗೌಡರ ದಾಳಿಗೆ ಈಡಾಯಿತು. ಮೊದಲ ದಾಳಿಯ ನಂತರ ಸ್ಕಂದಗುಪ್ತನ ಉತ್ತರಾಧಿಕಾರಿಗಳು ಮತ್ತು ಎರಡನೆಯ ದಾಳಿಯ ನಂತರ ಬೌದ್ಧ ದೊರೆ ಹರ್ಷವರ್ಧನ ಈ ವಿಶ್ವವಿದ್ಯಾಲಯವನ್ನು ಮರಳಿ ಕಟ್ಟಿದರು. ಮೂರನೆಯ ದಾಳಿಯಲ್ಲಿ ಹನ್ನೆರಡನೆಯ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿ ದಾಳಿ ಮಾಡಿ ಮೂರು ತಿಂಗಳ ಕಾಲ 90 ಲಕ್ಷ ಪುಸ್ತಕಗಳನ್ನು ಸುಡಿಸಿದ ಮತ್ತು ಬೌದ್ಧ ಸನ್ಯಾಸಿಗಳು- ವಿದ್ವಾಂಸರನ್ನು ಕೊಲ್ಲಿಸಿದ ಎನ್ನಲಾಗಿದೆ.


ಆದರೆ ತಾರಕಕ್ಕೆ ಮುಟ್ಟಿದ್ದ ಬೌದ್ಧ- ಬ್ರಾಹ್ಮಣರ ನಡುವಿನ ಸಂಘರ್ಷದಿಂದಲೇ ನಳಂದದ ಮಹಾನ್ ಗ್ರಂಥಾಲಯ ‘ರತ್ನೋದಧಿ’ಗೆ ಬೆಂಕಿ ಬಿದ್ದು ನಾಶಕ್ಕೆ ಕಾರಣ ಆಯಿತು ಎಂಬ ವ್ಯಾಖ್ಯಾನವನ್ನು ಇತಿಹಾಸದ ವಿದ್ವಾಂಸರಾದ ಆರ್.ಕೆ.ಮುಖರ್ಜಿ, ಸುಕುಮಾರ ದತ್ತ, ಬುದ್ಧ ಪ್ರಕಾಶ್, ಎಸ್.ಸಿ.ವಿದ್ಯಾಭೂಷಣರಷ್ಟೇ ಅಲ್ಲದೆ ಟಿಬೆಟನ್ ಬೌದ್ಧ ಇತಿಹಾಸಕಾರರು ಎತ್ತಿ ಹಿಡಿದಿದ್ದಾರೆ.


ಸಮಾಜವಾದವನ್ನು ಜಾರಿಗೆ ತಂದ ದೇಶ ಸೋವಿಯತ್ ರಷ್ಯಾ ಬೋರಿಸ್ ಪಾಸ್ತರ್ನಾಕನ ಡಾ.ಝಿವಾಗೋ ಕಾದಂಬರಿಯನ್ನು ನಿಷೇಧಿಸಿತ್ತು. ಡಾ.ಝಿವಾಗೋಗೆ ಬಂದ ನೊಬೆಲ್ ಪ್ರಶಸ್ತಿಯನ್ನು ನಿರಾಕರಿಸುವಂತೆ ಒತ್ತಡ ಹೇರಿತು. ದೇಶ ತೊರೆಯುವ ಇಲ್ಲವೇ ನೊಬೆಲ್ ತಿರಸ್ಕರಿಸುವ ಎರಡು ಆಯ್ಕೆಗಳ ಪೈಕಿ ಒಂದನ್ನು ಆರಿಸಿಕೊಳ್ಳುವ ಸಂಕಟಕ್ಕೆ ಸಿಕ್ಕಿದ್ದ ಪಾಸ್ತರ್ನಾಕ್. ಎರಡೇ ವರ್ಷಗಳಲ್ಲಿ ಪಾಸ್ತರ್ನಾಕ್ ಮರಣಾನಂತರ ಡಾ.ಝಿವಾಗೋ ಕಾದಂಬರಿಯನ್ನು ಓದಿದ ನಂತರ ಈ ಪುಸ್ತಕವನ್ನು ನಾವು ನಿಷೇಧಿಸಬಾರದಿತ್ತು ಎನ್ನುತ್ತಾರೆ ನಿಕಿಟಾ ಕ್ರುಶ್ಚೇವ್!
ಅಲೆಕ್ಸಾಂಡರ್ ಸೋಲ್ಝೆನಿಟ್ಸಿನ್, ನಬಕೋವ್, ಎಚ್.ಜಿ.ವೆಲ್ಸ್, ಜಾರ್ಜ್ ಆರ್ವೆಲ್ ಮುಂತಾದ ಇತರೆ ಒಂಬತ್ತು ಪ್ರಮುಖ ಲೇಖಕರ ಕೃತಿಗಳನ್ನು ರಷ್ಯಾ ನಿಷೇಧಿಸಿರುತ್ತದೆ. ಟಿಯಾನನ್ಮನ್ ಸ್ಕ್ವೇರ್ ಜನತಾಂತ್ರಿಕ ಕ್ರಾಂತಿಯನ್ನು ತುಳಿದ ಆಧುನಿಕ ಚೀನಾ ಮತ್ತು ಭಾರತ ಕೂಡ ಕೃತಿಗಳ ನಿಷೇಧದಲ್ಲಿ ಹಿಂದೆ ಬಿದ್ದಿಲ್ಲ.


ಹಿಟ್ಲರನ ಕಾಲದ ನಾಜಿ ಜರ್ಮನಿಯು 1930ರ ದಶಕದಲ್ಲಿ ಪುಸ್ತಕಗಳನ್ನು ಸಾರ್ವಜನಿಕವಾಗಿ ಸುಟ್ಟು ಸಂಭ್ರಮಿಸಿತ್ತು. ನಾಜೀವಾದವನ್ನು ವಿರೋಧಿಸುವ ಎಲ್ಲ ಪುಸ್ತಕಗಳೂ ಅಗ್ನಿಗೆ ಆಹುತಿಯಾದವು. ಯಹೂದಿಗಳು, ಕಮ್ಯೂನಿಸ್ಟರು, ಸಮಾಜವಾದಿಗಳು ಉದಾರವಾದಿಗಳು, ಅರಾಜಕವಾದಿಗಳು ಬರೆದ ಹೊತ್ತಿಗೆಗಳನ್ನು ಹಾದಿಬೀದಿಗಳಲ್ಲಿ, ಬರ್ಲಿನ್ನಿನ ವಿಖ್ಯಾತ ಚೌಕಗಳಲ್ಲಿ ಗುಡ್ಡೆ ಹಾಕಿ ಬೆಂಕಿ ಇಡಲಾಯಿತು. ಹೀಗೆ ಸುಡಲಾದ ಮೊದಲ ಪುಸ್ತಕಗಳು ಕಾರ್ಲ್‍ಮಾಕ್ರ್ಸ್ ಬರೆದವುಗಳಾಗಿದ್ದವು.


ಎಲ್ಲ ಸರ್ವಾಧಿಕಾರಿ ಮತ್ತು ತೀವ್ರ ರಾಷ್ಟ್ರವಾದಿ ಆಳ್ವಿಕೆಗಳು ಇತಿಹಾಸ ಮತ್ತು ಸಂಸ್ಕೃತಿಯನ್ನು ಒಟ್ಟೊಟ್ಟಿಗೆ ಮುಟ್ಟುಗೋಲು ಹಾಕಿಕೊಳ್ಳುತ್ತವೆ. ವಿಚಾರಗಳ ಮುಕ್ತ ಹರಿವನ್ನು ಅಪಾಯಕಾರಿ ಎಂದು ಪರಿಗಣಿಸುತ್ತವೆ. ಅರಿವಿನ ಮೇಲೆ ನಿಯಂತ್ರಣ ಸಾಧಿಸಲು ಹೊರಡುತ್ತವೆ. ಹಿಟ್ಲರನ ಜರ್ಮನಿಯೂ ಈ ಮಾತಿಗೆ ಹೊರತಾಗಿರಲಿಲ್ಲ.
1933ರಲ್ಲಿ ಅಧಿಕಾರಕ್ಕೆ ಬಂದ ನಾಜಿ ಪಕ್ಷ ಅಡಾಲ್ಫ್ ಹಿಟ್ಲರನ ನೇತೃತ್ವದಲ್ಲಿ ಸರ್ವಾಧಿಕಾರಿ ಸರ್ಕಾರ ಸ್ಥಾಪಿಸಿತು. ಜರ್ಮನ್ ಜನಾಂಗವೇ ಶ್ರೇಷ್ಠ ಆರ್ಯ ಜನಾಂಗ ಎಂಬ ತತ್ವದ ಆಧಾರದ ಮೇಲೆ ಜರ್ಮನಿಯನ್ನು ಮರುಸಂಘಟಿಸುವುದು ಮತ್ತು ಮರುಶಸ್ತ್ರೀಕರಣಗೊಳಿಸುವುದು ನಾಜಿಗಳ ಉದ್ದೇಶವಾಗಿತ್ತು. ಎಲ್ಲ ಭಿನ್ನಮತವನ್ನು ಹತ್ತಿಕ್ಕಲಾಯಿತು. ಸರ್ಕಾರವನ್ನು ಟೀಕಿಸುವುದು ಅಪರಾಧ ಎಂದು ಪರಿಗಣಿಸಲಾಯಿತು. ಪ್ರಚಾರಕ್ಕಾಗಿ ಹೊಸ ಮಂತ್ರಾಲಯ ತೆರೆದು ಗೊಬೆಲ್ಸ್‍ನನ್ನು ಮಂತ್ರಿಯಾಗಿ ನೇಮಿಸಲಾಯಿತು. ಕಲೆ, ಸಾಹಿತ್ಯ, ಚಲನಚಿತ್ರ, ಸಂಗೀತ ಇತ್ಯಾದಿ ಮನರಂಜನೆ ಹಾಗೂ ಸುದ್ದಿಯ ಎಲ್ಲ ರೂಪಗಳನ್ನು ನಾಜಿ ವಿಚಾರಕ್ಕೆ ಅನುಗುಣವಾಗಿ ನಿರ್ಮಿಸಲು ಮುಂದಾಯಿತು.


ಜರ್ಮನ್ ರಾಷ್ಟ್ರೀಯತೆಗೆ ಹೊರಗಿನವಾಗಿದ್ದ ಪುಸ್ತಕಗಳನ್ನು ಸುಡುವ ಕೆಲಸವನ್ನು ಜರ್ಮನ್ ವಿದ್ಯಾರ್ಥಿ ಸಂಘಟನೆ ವಹಿಸಿಕೊಂಡಿತ್ತು. ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್, ಲೇಖಕರಾದ ಬರ್ಟೋಲ್ಟ್ ಬ್ರೆಕ್ಟ್, ಕಾಫ್ಕಾ, ಹರ್ಮನ್ ಹೆಸ್, ಸಿಗ್ಮಂಡ್ ಫ್ರಾಯ್ಡ್, ಎಚ್.ಜಿ.ವೆಲ್ಸ್, ರೋಮನ್ ರೋಲ್ಯಾಂಡ್, ವಾಲ್ಟರ್ ಬೆಂಜಮಿನ್, ಫ್ರೆಡ್ರಿಕ್ ಎಂಜೆಲ್ಸ್, ಸ್ಟೀಫನ್ ಜ್ವೆಗ್, ಆಂದ್ರೆ ಜೀದ್, ವಿಕ್ಟರ್ ಹ್ಯೂಗೋ, ಸ್ಕಾಟ್ ಫಿಟ್ಜರಾಲ್ಡ್, ಜೋಸೆಫ್ ಕೋನ್ರಾಡ್, ಜೇಮ್ಸ್ ಜಾಯ್ಸ್, ಡಿ.ಎಚ್.ಲಾರೆನ್ಸ್, ಅರ್ನೆಸ್ಟ್ ಹೆಮಿಂಗ್ವೇ, ಅಪ್ಟನ್ ಸಿಂಕ್ಲೇರ್, ಜಾಕ್ ಲಂಡನ್, ಹೆಲೆನ್ ಕೆಲರ್, ಆಲ್ಡಸ್ ಹಕ್ಲೀ, ದೊಸ್ತೊಯೆವ್ಸ್ಕೀ, ಮ್ಯಾಕ್ಸಿಂ ಗಾರ್ಕಿ, ಲೆನಿನ್, ಮಾಯಕೋವಾಸ್ಕಿ, ನಬಕೋವ್, ಲಿಯೋ ಟಾಲ್‍ಸ್ಟಾಯ್, ಟ್ರಾಟ್ಸ್ಕೀ, ಜೇಮ್ಸ್ ಜಾಯ್ಸ್, ಆಸ್ಕರ್ ವೈಲ್ಡ್ ಮುಂತಾದವರು ಮಾತ್ರವಲ್ಲದೆ ಲೆಕ್ಕವಿಲ್ಲದಷ್ಟು ಜರ್ಮನ್ ಬರೆಹಗಾರರ ಪುಸ್ತಕಗಳು ನಾಜೀವಾದಕ್ಕೆ ತುತ್ತಾದವು. ಶುದ್ಧ ಜರ್ಮನ್ ರಾಷ್ಟ್ರೀಯತೆಗೆ ಈ ಪುಸ್ತಕಗಳು ಮತ್ತು ಅವುಗಳು ಪ್ರತಿಪಾದಿಸುವ ಚಿಂತನೆಗಳು ಅಪಾಯಕಾರಿ ಎಂದು ಬಗೆಯಲಾಗಿತ್ತು.


ಮ್ಯಾಗ್ನಸ್ ಹರ್ಷ್‍ಫೆಲ್ಡ್ ಲೈಂಗಿಕ ಸಂಶೋಧನಾ ಸಂಸ್ಥೆಯ ಮೇಲೆ ದಾಳಿ ನಡೆಸಿದ ವಿದ್ಯಾರ್ಥಿಗಳು 20 ಸಾವಿರ ಪುಸ್ತಕಗಳನ್ನು ಹೊರಗೆಳೆದು ಬೆಂಕಿ ಇಟ್ಟರು. ಲೈಂಗಿಕ ಶಿಕ್ಷಣ ನೀಡುವ ಪುಸ್ತಕಗಳನ್ನು ನಾಶಪಡಿಸಲಾಯಿತು. ಪುಸ್ತಕದ ಅಂಗಡಿಗಳು, ಗ್ರಂಥಾಲಯಗಳು, ಪ್ರಕಾಶಕರ ಉಗ್ರಾಣಗಳ ಮೇಲೆ ದಾಳಿಗಳು ನಡೆದು ‘Un German’ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಯಿತು. ‘Un German’ ಲೇಖಕರ ಕಪ್ಪುಪಟ್ಟಿಗಳನ್ನು ತಯಾರಿಸಲಾಯಿತು.


ವಿಶ್ವವಿದ್ಯಾಲಯಗಳಿದ್ದ ಟೌನುಗಳಲ್ಲಿ ರಾಷ್ಟ್ರವಾದಿ ವಿದ್ಯಾರ್ಥಿಗಳು ಪಂಜಿನ ಮೆರವಣಿಗೆಯಲ್ಲಿ ತೆರಳಿ ‘ಜರ್ಮನ್ ಅಲ್ಲದ’ ಭಾವನೆಗಳು ಆಲೋಚನೆಗಳು ಚಿಂತನೆಗಳನ್ನು ಪ್ರತಿಭಟಿಸಿದರು. ಪುಸ್ತಕ ದಹನದ ಮುನ್ನ ನಡೆದ ಸಭೆಗಳಲ್ಲಿ ನಾಜಿ ಅಧಿಕಾರಿಗಳು, ನಾಜೀವಾದ ಬೆಂಬಲಿಸುವ ಪ್ರೊಫೆಸರುಗಳು, ವಿದ್ಯಾರ್ಥಿ ನಾಯಕರು ಭಾಷಣ ಮಾಡಿದರು. ಸಂಗೀತ, ಹಾಡುಗಳು, ಘೋಷಣೆಗಳ ನಡುವೆ ಉರಿವ ಜ್ವಾಲೆಗಳಿಗೆ ವಿರೂಪಗೊಳಿಸಿದ ಪುಸ್ತಕಗಳನ್ನು ಗಾಳಿಯಲ್ಲಿ ಚಿಮ್ಮಿ ಬೆಂಕಿಗೆ ಎಸೆದು ಸಂಭ್ರಮಿಸಿದರು. ಈ ಸಭೆಗಳನ್ನು ‘ಅಗ್ನಿ ಪ್ರತಿಜ್ಞೆಗಳು’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇಂತಹ ಒಂದು ಸಂದರ್ಭದಲ್ಲಿ ಬರ್ಲಿನ್‍ನಲ್ಲಿ ಜೋಸೆಫ್ ಗೊಬೆಲ್ಸ್‍ನ ಬೆಂಕಿ ಕಾರುವ ಭಾಷಣ ಕೇಳಲು 40 ಸಾವಿರ ಮಂದಿ ನೆರೆದಿದ್ದರು. 25 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಉರಿದು ಬೂದಿಯಾದವು. 34 ವಿಶ್ವವಿದ್ಯಾಲಯ ಟೌನುಗಳಲ್ಲಿ ಜರುಗಿದ ಪುಸ್ತಕದಹನ ಸಂಭ್ರಮಗಳ ನೇರ ಪ್ರಸಾರವನ್ನು ಜರ್ಮನ್ ರೇಡಿಯೋ ಮಾಡಿತ್ತು.


ಈ ಪುಸ್ತಕ ದಹನ ಕಾಂಡಗಳು ನಾಜೀ ಅಸಹಿಷ್ಣುತೆ ಮತ್ತು ಸೆನ್ಸಾರ್‍ಶಿಪ್‍ಗೆ ಹಿಡಿದ ಕನ್ನಡಿಗಳಾಗಿದ್ದವು. ಜರ್ಮನಿಯ ಕಲೆ ಮತ್ತು ಸಂಸ್ಕೃತಿಯನ್ನು ಎಳೆ ತಂದು ನಾಜೀವಾದಿ ಚಿಂತನೆಯ ನೊಗಕ್ಕೆ ಹೂಡುವುದು ನಿಜ ಉದ್ದೇಶವಾಗಿತ್ತು. ಇದು ಜರ್ಮನ್ ಭಾಷೆ ಮತ್ತು ಸಾಹಿತ್ಯದ ‘ಶುದ್ಧೀಕರಣ ಯಜ್ಞ’ವಾಗಿತ್ತು. ಮಧ್ಯಮವರ್ಗಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ತೀವ್ರ ರಾಷ್ಟ್ರವಾದ ಮತ್ತು ಯಹೂದಿ ದ್ವೇಷ ಮುಗಿಲು ಮುಟ್ಟಿತ್ತು. ಎಲ್ಲ ವಿಶ್ವವಿದ್ಯಾಲಯಗಳು ಜರ್ಮನ್ ರಾಷ್ಟ್ರೀಯತೆಯ ಕೇಂದ್ರಗಳಾಗಬೇಕು ಎಂಬುದು ಆಳುವವರ ಆಗ್ರಹವಾಗಿತ್ತು.


ಇತ್ತ ಪುಸ್ತಕಗಳನ್ನು ರಾಶಿರಾಶಿಯಾಗಿ ಅಗ್ನಿಗೆ ಆಹುತಿ ಕೊಡಲಾಯಿತು. ಅತ್ತ ಜರ್ಮನ್ ಅಕ್ರಮಿತ ನೆದಲ್ರ್ಯೆಂಡ್ಸ್‍ನಲ್ಲಿ ನಾಜಿಗಳ ಬಂಧನ ತಪ್ಪಿಸಿಕೊಳ್ಳಲು 25 ತಿಂಗಳ ಕಾಲ ಅಡಗಿದ್ದ ಕುಟುಂಬದ ಅನ್‍ಫ್ರ್ಯಾಂಕ್ ಎಂಬ ಹದಿಮೂರು ವರ್ಷದ ಬಾಲಕಿಯ ದಿನಚರಿಯಲ್ಲಿ ಯುದ್ಧಕಾಲದ ದಮನದ ಅನುಭವಗಳು ಅಕ್ಷರಗಳಾಗಿ ಅರಳಿ ಅಜರಾಮರ ಆದವು. ಅಡಗಿದ್ದ ಕುಟುಂಬವನ್ನು ಜರ್ಮನ್ ಪೊಲೀಸರು ಹಿಡಿದು ಕಾನ್ಸಂಟ್ರೇಷನ್ ಕ್ಯಾಂಪುಗಳಿಗೆ ತಳ್ಳುತ್ತಾರೆ. ಆನ್‍ಫ್ರ್ಯಾಂಕ್ ಅಲ್ಲಿ ಹದಿನೈದನೆಯ ವಯಸ್ಸಿನಲ್ಲಿ ಜ್ವರದಿಂದ ಸಾಯುತ್ತಾಳೆ. ಎರಡನೆಯ ವಿಶ್ವಯುದ್ಧ ನಾಜಿಗಳನ್ನು ಕೊನೆಗಾಣಿಸುತ್ತದೆ. ಆನ್ ಬರೆದ ಹಸ್ತಪ್ರತಿ ಪುಸ್ತಕವಾಯಿತು. ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಎಪ್ಪತ್ತಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಯಾಗಿ ಕೋಟ್ಯಂತರ ಪ್ರತಿಗಳ ರೂಪ ತಳೆದು ಈಗಲೂ ಜನಮನಗಳನ್ನು ಹೊಕ್ಕಿತು. ಅಲ್ಲಿ ಹುದುಗಿದ್ದ ಮಾನವೀಯತೆಯ ಬೀಜಗಳನ್ನು ಅಂಕುರಿತಗೊಳಿಸಿತು. ಈಗಲೂ ಈ ಹೊತ್ತಿಗೆಯ ಪ್ರತಿಗಳು ಮಾರಾಟ ಆಗುತ್ತಿವೆ. ಹೊಸ ಹೊಸ ಅನುವಾದಗಳು ಹೊರಬರುತ್ತಲೇ ಇವೆ.


ಪುಸ್ತ್ತಕ ಸುಟ್ಟವರ ಮೇಲೆ ಇತಿಹಾಸ ಸೇಡು ತೀರಿಸಿಕೊಳ್ಳದೆ ಇದ್ದೀತೇ? ಅಕ್ಷರಗಳಿಗೆ ಅಳಿವಿಲ್ಲ- ಆಳುವವರಿಗೆ ಅದು ತಿಳಿಯುವುದೇ ಇಲ್ಲ. ಅಕ್ಷರ ಎಂಬುದರ ಅರ್ಥವೇ ನಾಶಗೊಳಿಸಲು ಬಾರದ ಅವಿನಾಶಿ ಎಂದು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ