ಮಂಗಳವಾರ, ಸೆಪ್ಟೆಂಬರ್ 17, 2019

ತೃತೀಯ ಲಿಂಗಿಗಳ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಕಮ್ಯೂನಿಸ್ಟರು; ಇತರೆ ರಾಜ್ಯಗಳಿಗೆ ಮಾದರಿಯಾದ ಕೇರಳ

ತೃತೀಯ ಲಿಂಗಿಗಳ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಕಮ್ಯೂನಿಸ್ಟರು; ಇತರೆ ರಾಜ್ಯಗಳಿಗೆ ಮಾದರಿಯಾದ ಕೇರಳ

ತೃತೀಯ ಲಿಂಗಿಗಳು ಕಾಲೇಜಿಗೆ ಹೋಗುವುದಿರಲಿ ಶಾಲೆಯ ಮೆಟ್ಟಿಲುಗಳನ್ನೇ ಹತ್ತುವುದು ಅಸಾಧ್ಯವಾಗಿರುವ ಇಂದಿನ ದಿನಗಳಲ್ಲಿ 23 ವರ್ಷ ತೃತೀಯ ಲಿಂಗಿ ದಯಾ ಗಾಯಾತ್ರಿ ಕೇರಳ ರಾಜ್ಯದ ಐತಿಹಾಸಿಕ ಮಹಾರಾಜ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಂಘಟನೆಯ ನಾಯಕಿ ಎಂದರೆ ನೀವು ನಂಬಲೇಬೇಕು.

                      ಭಾರತೀಯ ಸಮಾಜದಲ್ಲಿ ತೃತೀಯ ಲಿಂಗಿಗಳು ಎಂದರೆ ಸಾಮಾನ್ಯವಾಗಿ ನಗೆಪಾಟಲಿನ ವಸ್ತು. ಹೀಗೊಂದು ಅಲಿಖಿತ ನಿಯಮ ನಮ್ಮ ಸಮಾಜದಲ್ಲಿದೆ ಇಂದಿಗೂ ಚಾಲ್ತಿಯಲ್ಲಿದೆ. ಇನ್ನೂ ತೃತೀಯ ಲಿಂಗಿಗಳನ್ನು ಹೀಯಾಳಿಸಲೆಂದೆ ನಮ್ಮ ಸಮಾಜದಲ್ಲಿ ನಾನಾ ಅನ್ವರ್ಥನಾಮಗಳು ಬಳಕೆಯಲ್ಲಿವೆ. ಇನ್ನೂ ಅಂತವರನ್ನು ಕಂಡರೆ ಮುಖ ಸಿಂಡರಿಸಿ ಮಾರು ದೂರ ಓಡುವ ಮಡಿವಂತ ಸಮಾಜವೂ ನಮ್ಮ ನಡುವೆಯೇ ಬದುಕಿದೆ. ಆದರೆ, ನಾವು ಅವರಿಗೂ ಒಂದು ಮನಸ್ಸಿದೆ ಅದರೊಳಗೂ ಭಾವನೆಗಳ ಸೆಳೆತವೊಂದಿದೆ ಎಂದು ನಾವು ಎಂದಿಗೂ ಊಹಿಸಿದವರಲ್ಲ.

               ಆಧುನಿಕ ಸಮಾಜದಲ್ಲೂ ಆಳಕ್ಕೆ ಬೇರೂರಿವ ಇಂತಹ ಮನಸ್ಥಿತಿಗಳನ್ನು, ಅಪಮಾನಗಳ ಅಗ್ನಿಕುಂಡವನ್ನು ಎದುರಿಸಿ ಸಮಾಜದ ಮುಖ್ಯವಾಹಿನಿಗೆ ಬಂದ ತೃತೀಯ ಲಿಂಗಿಗಳ ಸಂಖ್ಯೆ ಇಡೀ ದೇಶದಲ್ಲಿ ಅಧಿಕವಾಗಿಲ್ಲದಿದ್ದರೂ, ಹೀಗೆ ಜಯಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂಬುದೇ ತುಸು ಸಮಾಧಾನಕರ ವಿಚಾರ. ಇಂತಹ ಅಪಮಾನದ ಅಗ್ನಿ ಕುಂಡದಿಂದ ಎದ್ದು ಬಂದ ಆಕೆಯ ಹೆಸರು ದಯಾ ಗಾಯತ್ರಿ.

                      ತೃತೀಯ ಲಿಂಗಿಗಳು ಕಾಲೇಜಿಗೆ ಹೋಗುವುದಿರಲಿ ಶಾಲೆಯ ಮೆಟ್ಟಿಲುಗಳನ್ನೇ ಹತ್ತುವುದು ಅಸಾಧ್ಯವಾಗಿರುವ ಇಂದಿನ ದಿನಗಳಲ್ಲಿ 23 ವರ್ಷ ತೃತೀಯ ಲಿಂಗಿ ದಯಾ ಗಾಯಾತ್ರಿ ಕೇರಳ ರಾಜ್ಯದ ಐತಿಹಾಸಿಕ ಮಹಾರಾಜ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಂಘಟನೆಯ ನಾಯಕಿ ಎಂದರೆ ನೀವು ನಂಬಲೇಬೇಕು. ಬಿಎ ಮಳಯಾಳಂ ಸಾಹಿತ್ಯ ವಿದ್ಯಾರ್ಥಿನಿಯಾಗಿರುವ ಅವರನ್ನು ಕಾಲೇಜಿನ ಎಸ್ಎಫ್ಐ ವಿದ್ಯಾರ್ಥಿಗಳ ಸಂಘ ತಮ್ಮ ನಾಯಕಿಯನ್ನಾಗಿ ನಾಮನಿರ್ದೇಶನ ಮಾಡಿದೆ. ಈ ಮೂಲಕ ಕೇರಳದ ವಿದ್ಯಾರ್ಥಿ ಸಂಘಟನೆಯ ಮೊದಲ ತೃತೀಯ ಲಿಂಗಿ ನಾಯಕಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರವಾಗಿದ್ದಾರೆ.

                          ತೃತೀಯ ಲಿಂಗಿಗಳ ವಿಚಾರದಲ್ಲಿ ಇತಿಹಾಸದ ಹೊಸ್ತಿಲಲ್ಲಿ ನಿಂತು ಎಡವಿದ ಕರ್ನಾಟಕ ತೃತೀಯ ಲಿಂಗಿಗಳ ಕುರಿತು 2014ರಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ತೃತೀಯ ಲಿಂಗಿಗಳೂ ಸಹ ಶಿಕ್ಷಣ ಪಡೆಯುವಂತಹ ವಾತಾವರಣವನ್ನು ಕೇಂದ್ರ ಸರ್ಕಾರ ನಿರ್ಮಾಣಮಾಡಬೇಕು. ಅಲ್ಲದೆ, ಶಿಕ್ಷಣ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಅವರಿಗೆ ಮೀಸಲಾತಿ ನೀಡುವ ಮೂಲಕ ಈ ವರ್ಗದ ಜನರ ಅಭಿವೃದ್ಧಿಗೆ ಮುನ್ನುಡಿ ಹಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ವಿಪರ್ಯಾಸ ಎಂದರೆ ಈ ವರೆಗೆ ಕೇಂದ್ರ ಸರ್ಕಾರ ಈ ಕುರಿತು ಆಲೋಚಿಸುವ ಗೋಜಿಗೂ ಹೋಗಿಲ್ಲ. ಆದರೆ, ರಾಜ್ಯ ಸರ್ಕಾರಗಳ ಪೈಕಿ ಕರ್ನಾಟಕ ಮೊದಲ ಬಾರಿಗೆ ಇಂತಹ ಸಾಹಸಕ್ಕೆ ಕೈಹಾಕುವ ಮೂಲಕ ಇತಿಹಾಸ ನಿರ್ಮಿಸಲು ಅಣಿಯಾಗಿತ್ತು. 2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೃತೀಯ ಲಿಂಗಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡಲು ಮನಸ್ಸು ಮಾಡಿತ್ತು. ಇಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಶಿಕ್ಷಣವನ್ನೂ ತೃತೀಯ ಲಿಂಗಿಗಳಿಗೆ ಮುಕ್ತವಾಗಿರುವ ಕುರಿತ ಪ್ರಸ್ತಾವನೆಯನ್ನೂ ಸರ್ಕಾರ ಸಿದ್ದಪಡಿಸಿತ್ತು. ರಾಜ್ಯ ಸರ್ಕಾರದ ಈ ದಿಟ್ಟ ಕ್ರಮವನ್ನು ಇಡೀ ದೇಶ ಶ್ಲಾಘಿಸಿತ್ತು. ಈ ಕುರಿತು ಅಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ತೃತೀಯ ಲಿಂಗಿ ನಾಯಕಿ ಅಕ್ಕೈ ಪದ್ಮಶಾಲಿ “ಸರ್ಕಾರ ಈ ಪ್ರಸ್ತಾವವನ್ನು ಸರಿಯಾಗಿ ಜಾರಿಗೆ ತಂದರೆ ಇಡೀ ದೇಶದಲ್ಲಿ ಕರ್ನಾಟಕ ಹೊಸದೊಂದು ಇತಿಹಾಸಕ್ಕೆ ಕಾರಣವಾಗಲಿದೆ” ಎಂದು ಸಂತಸ ವ್ಯಕ್ತಪಡಿಸಿದ್ದರು. ಆದರೆ, ಇತಿಹಾಸಕ್ಕೆ ಕಾರಣವಾಗಲಿದ್ದ ಈ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ.

                         ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ ನೀಡುವ ಕರ್ನಾಟಕದ ಪ್ರಸ್ತಾವನೆಯನ್ನು ಅದೇ ವರ್ಷ ಅನುಷ್ಠಾನಕ್ಕೆ ತರುವ ಮೂಲಕ ಕೇರಳ ಇದೀಗ ಇಡೀ ದೇಶಕ್ಕೆ ಮಾದರಿಯಾಗಿದೆ. ತೃತೀಯ ಲಿಂಗಿಗಳ ಏಳಿಗೆಯಲ್ಲಿ ಇಡೀ ದೇಶಕ್ಕೆ ಮಾದರಿಯಾದ ಕೇರಳ ಕೇರಳದಲ್ಲಿ ತೃತೀಯ ಲಿಂಗಿಗಳ ಏಳಿಗೆಗಾಗಿ ಅಲ್ಲಿನ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಶೈಕ್ಷಣಿಕವಾಗಿ ಅವರನ್ನು ಅಭಿವೃದ್ಧಿಯ ಪಥಕ್ಕೆ ಮರಳಿಸಲು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಗಿದೆ. ಕೇರಳ ಸರ್ಕಾರ ಈಗಾಗಲೇ ರಾಜ್ಯದ ಎಲ್ಲಾ ಶಾಲೆ ಹಾಗೂ ಕಾಲೇಜುಗಳಲ್ಲಿ ಶೇ.2 ರಷ್ಟು ತೃತೀಯ ಲಿಂಗಿಗಳಿಗೆ ಮೀಸಲಾತಿಯನ್ನು ಜಾರಿಗೊಳಿಸಿದೆ. ವಿಶ್ವವಿದ್ಯಾಲಯಗಳ ಎಲ್ಲಾ ವಿಭಾಗಗಳಲ್ಲೂ 2 ಸ್ಥಾನವನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ. ಅಲ್ಲದೆ, ಶಿಕ್ಷಣದಲ್ಲಿ ತೊಡಗುವ ತೃತೀಯ ಲಿಂಗಿಗಳಿಗೆ ಮಾಸಿಕ 4,000 ವಿದ್ಯಾರ್ಥಿ ನಿಲಯದ ಬಾಡಿಗೆ ನೀಡುವ ಅಲ್ಲಿನ ಸರ್ಕಾರ, ವಾರ್ಷಿಕ 20,000 ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ತೃತೀಯ ಲಿಂಗಿಗಳು ಅಧಿಕ ಸಂಖ್ಯೆಯಲ್ಲಿ ಶಿಕ್ಷಣದಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದೆ. ಪರಿಣಾಮ ಇಡೀ ಭಾರತದಲ್ಲೇ ಅತಿಹೆಚ್ಚು ತೃತೀಯ ಲಿಂಗಿ ವಿದ್ಯಾರ್ಥಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ. ಅದರಲ್ಲೂ ದಯಾ ಗಾಯತ್ರಿ ಓದುತ್ತಿರುವ ಕೇರಳದ ಮಹಾರಾಜ ಕಾಲೇಜು ಇಡೀ ರಾಜ್ಯದಲ್ಲಿ ಅಧಿಕ ಸಂಖ್ಯೆಯ ತೃತೀಯ ಲಿಂಗಿಗಳನ್ನು ಹೊಂದಿರುವ ಕಾಲೇಜು ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಈ ಕಾಲೇಜಿನಲ್ಲಿ ಓದುತ್ತಲೇ ಶಿಕ್ಷಣದ ಜೊತೆ ಜೊತೆಗೆ ರಂಗಭೂಮಿ ಹಾಗೂ ಫ್ಯಾಷನ್​ ಡಿಸೈನ್​ನಲ್ಲೂ ತೊಡಗಿಕೊಂಡಿರುವ ದಯಾ ಗಾಯತ್ರಿ, ತನ್ನ ಜೊತೆಗೆ ರಂಗ ಕಲಾವಿದೆಯಾಗಿರುವ 25 ವರ್ಷದ ಸಿದ್ದಾರ್ಥ್​ ಎಂಬ ಮತ್ತೋರ್ವ ತೃತೀಯ ಲಿಂಗಿಯನ್ನು ತನ್ನ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದು ಇದೀಗ ಸಂತಸದಿಂದ ಬದುಕು ಸಾಗಿಸುತ್ತಿದ್ದಾರೆ. ನೆರೆಯ ಕೇರಳ ರಾಜ್ಯದಲ್ಲಿ ಸಂಘಟಿಸಿರುವ ಈ ಕ್ರಾಂತಿಯನ್ನು ಒಮ್ಮೆ ಅವಲೋಕಿಸಿದರೆ, ಸಂವಿಧಾನದಲ್ಲಿ ಎಲ್ಲರಿಗೂ ಕಲ್ಪಿಸಲಾಗಿರುವ "ಗೌರವಯುತವಾಗಿ ಬದುಕುವ ಹಕ್ಕನ್ನು" ಕೇರಳ ಸರ್ಕಾರ ಅದೆಷ್ಟು ಪ್ರಾಮಾಣಿಕವಾಗಿ ಜಾರಿಗೆ ತರುವ ಮೂಲಕ ತೃತೀಯ ಲಿಂಗಿಗಳಿಗೂ ಈ ಮಡಿವಂತ ಸಮಾಜದ ನಡುವೆ ಗೌರವಯುತವಾಗಿ ಬದುಕುವ ಅವಕಾಶವನ್ನು ಕಟ್ಟಿಕೊಟ್ಟಿದೆ ಎಂದೆನಿಸದಿರದು. ಕೇರಳ ಸರ್ಕಾರದ ಈ ದಿಟ್ಟ ಯೋಜನೆ ಹಾಗೂ ನಿರ್ಧಾರ ಇತರೆ ರಾಜ್ಯಗಳಿಗೂ ಮಾದರಿಯಾಗಲಿ, ಎಲ್ಲಾ ರಾಜ್ಯಗಳೂ ತೃತೀಯ ಲಿಂಗಿಗಳನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಶಿಕ್ಷಣ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅವರಿಗೂ ಮೀಸಲಾತಿ ನೀಡುವಂತಾಗಲಿ ಎಂಬುದೇ ಎಲ್ಲರ ಆಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ