ಸೋಮವಾರ, ಏಪ್ರಿಲ್ 3, 2017

ರಘು ರೈಗೆ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ

6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟ: ರಘು ರೈಗೆ ಜೀವಮಾನ ಸಾಧನೆ ಪ್ರಶಸ್ತಿ
ನವದೆಹಲಿ: 6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಛಾಯಾಗ್ರಾಹಕ ರಘು ರೈ ಅವರು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1965ರಲ್ಲಿ ತಮ್ಮ ವೃತ್ತಿಪರ ಛಾಯಾಗ್ರಹಣ ಆರಂಭಿಸಿದ ರಘು ರೈ ಅವರು, 1972ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತೆಯೇ ಛಾಯಾಗ್ರಹಣ ಕಲೆಯಲ್ಲಿ ಅಗಾಧ ಅನುಭವ ಹೊಂದಿರುವ ರಘುರೈ ಅವರು, ಸುಮಾರು 18  ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು 1992ರಲ್ಲಿ ಅಮೆರಿಕದ ಪ್ರತಿಷ್ಠಿತ ವರ್ಷದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೂ ರಘುರೈ ಭಾಜನರಾಗಿದ್ದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಈ ಬಗ್ಗೆ  ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನಾರಾದ ರಘುರೈ ಅವರಿಗೆ ಶುಭಾಷಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣದ ಮೂಲಕ ಜಾಗೃತಿ ಮೂಡಿಸಬಹುದಾಗಿದ್ದು, ಛಾಯಾ ಗ್ರಹಣ ಉತ್ತಮ ಆಡಳಿತ ಪ್ರಸರಣದ ಮಾರ್ಗ ಕೂಡ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಳಿದಂತೆ ಪ್ರಶಸ್ತಿಗೆ ಭಾಜನರಾದ ಪ್ರಮುಖ ಛಾಯಾಗ್ರಾಹಕ ಹೆಸರು ಇಂತಿದೆ.

ವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿ-ರವೀಂದರ್ ಕುಮಾರ್

ವರ್ಷದ ವತ್ತಿಪರ ಛಾಯಾಗ್ರಾಹಕ ಪ್ರಶಸ್ತಿ-ಕೆಕೆ ಮುಸ್ತಾಫಾ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಒಪಿ ಸೋನಿ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಜಿ ನಾಗಶ್ರೀನಿವಾಸು

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ದಿಪಾಯನ್ ಬಿಹಾರ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಚ ನಾರಾಯಣ ರಾವ್

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಅತುಲ್ ಚೌಬೆ

ಸನ್ಯಾಸತ್ವ ತೊರೆದ: (ತಾಯೆ ದೋರ್ಜೆ) ಟಿಬೆಟಿಯನ್ನರ ಧರ್ಮ ಗುರು

ಸನ್ಯಾಸತ್ವ ತೊರೆದು ಬಾಲ್ಯ ಗೆಳತಿಯನ್ನು ವಿವಾಹವಾದ ಟಿಬೆಟಿಯನ್ನರ ಧರ್ಮಗುರು ತಾಯೆ ದೊರ್ಜೆ

ನವದೆಹಲಿ: ಟಿಬೆಟಿಯನ್ನರ ಹಿರಿಯ ಬೌದ್ಧಗುರುವೊಬ್ಬರು ಸನ್ಯಾಸತ್ವ ತ್ಯಜಿಸಿ ಭಾರತದಲ್ಲಿ ತಮ್ಮ ಬಾಲ್ಯ ಸ್ನೇಹಿತೆಯನ್ನು ವಿವಾಹವಾಗಿದ್ದಾರೆ.

33 ವರ್ಷದ ಬೌದ್ಧ ಗುರು ತಾಯೆ ದೊರ್ಜೆ ಟಿಬೆಟಿಯನ್ ಧಾರ್ಮಿಕ ಪ್ರಮುಖ ನಾಲ್ಕು ಶಾಲೆಗಳಲ್ಲಿ ಒಂದು ಶಾಲೆಯ ಗುರುಗಳಾಗಿದ್ದು ಕರ್ಮಪಾ ಲಾಮಾ ಅವರ ಪುನರ್ಜನ್ಮ ಎಂದು ಹೇಳಲಾಗುತ್ತಿತ್ತು.

ಆದರೆ ಕರ್ಮ ಕಾಗ್ಯು ಬೌದ್ಧ ಶಾಲೆಯ ಹಲವು ಅನುಯಾಯಿಗಳು ದಲೈಲಾಮಾ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರತಿಸ್ಪರ್ಧಿಯಾದ ಉರ್ಜಿನ್ ಟ್ರಿನ್ಲೆ ಎಂಬ ಶಿರೋನಾಮೆ ಇಟ್ಟುಕೊಂಡಿದ್ದವರೊಂದಿಗೆ ಗುರುತಿಸಿಕೊಂಡಿದ್ದರು.

ಈ ಭಿನ್ನಾಭಿಪ್ರಾಯಗಳುಂಟಾಗಿ ಟಿಬಿಟಿಯನ್ ಬೌದ್ಧಗುರುಗಳು ಇಬ್ಭಾಗವಾಗಿ ಅನೇಕ ವರ್ಷಗಳಾಗಿದ್ದವು. ಇಂದು ತಾಯೆ ದೊರ್ಜೆಯವರ ಕಚೇರಿ ಆಶ್ಚರ್ಯಕರ ಸಂಗತಿಯನ್ನು ಘೋಷಿಸಿದ್ದು, ಮೊನ್ನೆ ಮಾರ್ಚ್ 25ರಂದು ದೆಹಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಗುರು ದೊರ್ಜೆಯವರು ವಿವಾಹವಾಗಿ ಸನ್ಯಾಸತ್ವವನ್ನು ತ್ಯಜಿಸಿರುವುದಾಗಿ ಘೋಷಿಸಿತು.

''ನಾನು ಮದುವೆ ಮಾಡಿಕೊಂಡ ನಿರ್ಧಾರ ನನ್ನಲ್ಲಿ ಮಾತ್ರವಲ್ಲದೆ ನನ್ನ  ಅನುಯಾಯಿಗಳ ಮೇಲೆ ಕೂಡ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ದೃಢ ವಿಶ್ವಾಸ ನನಗಿದೆ. ಕೆಲವು ಸುಂದರವಾದ ಪ್ರಯೋಜನವಾಗುವ ವಿಷಯಗಳು ನಮ್ಮೆಲ್ಲರಲ್ಲಿ ಮೂಡಲಿದೆ'' ಎಂದು ಹೇಳಿದ್ದಾರೆ.

ಸಂಸಾರಿಯಾಗಿದ್ದು ಕರ್ಮಪಾ ಪಾತ್ರವನ್ನು ತಾಯೆ ಮುಂದುವರಿಸಲಿದ್ದು ವಿಶ್ವಾದ್ಯಂತ ಇರುವ ಅವರ ವಿದ್ಯಾರ್ಥಿಗಳಿಗೆ, ಅನುಯಾಯಿಗಳಿಗೆ ತಮ್ಮ ಬೋಧನೆಗಳನ್ನು ಮುಂದುವರಿಸಲಿದ್ದಾರೆ.ಅವರ ಪತ್ನಿ 36 ವರ್ಷದ ರಿಂಚನ್ ಯಂಗ್ ಝೊಮ್ ಭೂತಾನ್ ನಲ್ಲಿ ಜನಿಸಿ ಭಾರತ ಮತ್ತು ಯುರೋಪ್ ನಲ್ಲಿ ಶಿಕ್ಷಣ ಗಳಿಸಿದ್ದಾರೆ.

ಅಮೇಜನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!

ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!

ಆನ್ ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಸಿರಿವಂತರಾಗಿ ಹೊರಹೊಮ್ಮಿದ್ದಾರೆ.

ಬ್ಲೂಂಬರ್ಗ್ ಮೂಲಗಳ ಪ್ರಕಾರ, ಜೆಫ್ ಬೆಜೋಸ್ ಇಂಡಿಟೆಕ್ಸ್ ಸಂಸ್ಥಾಪಕ ಅಮಾನ್ಸಿಯೋ ಒರ್ಟೆಗಾ ಮತ್ತು ವಾರೆನ್ ಬಫೆಟ್ ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ ಬೆಜೋಸ್ 1.5 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ಅವರ ಕಂಪನಿ ಶೇರ್ ಅದೃಷ್ಠವಶತ್ ಮಾರ್ಚ್ 29ಕ್ಕೆ 18.35 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ. ಕಾರಣ ಮಧ್ಯಪ್ರಾಚ್ಯ ದೇಶದ ಆನ್ ಲೈನ್ ಸಂಸ್ಥೆ ಸೌಕ್.ಕಾಂ ಅನ್ನು ಖರೀದಿಸುವುದಾಗಿ ಹೇಳಿದ ನಂತರ ಅವರ ಶೇರು ಗಗನಕ್ಕೆ ಏರಿದೆ.

ಇನ್ನು ಎಂದಿನಂತೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗ್ರೇಟ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ಆಸ್ಕರ್: ಪ್ರಕಟಣೆಯಲ್ಲಿ ಎಡವಟ್ಟು ಮೂನ್ಲೈಟ್ ಶ್ರೇಷ್ಟ ಚಿತ್ರ

ಆಸ್ಕರ್ : ಪ್ರಕಟನೆಯಲ್ಲಿ ಎಡವಟ್ಟು, ಮೂನ್ಲೈಟ್ ಶ್ರೇಷ್ಠ ಚಿತ್ರ

ಹೊಸದಿಲ್ಲಿ : 89ರ ಆಸ್ಕರ್ ಪ್ರಶಸ್ತಿ ಪ್ರಕಟನೆಯಲ್ಲಿ ಎಡವಟ್ಟಾಗಿದೆ. ಹಾಗಾಗಿ ಲಾ ಲಾ ಲ್ಯಾಂಡ್ ಚಿತ್ರಕ್ಕೆ ಈ ಮೊದಲು ಘೋಷಿಸಲಾಗಿದ್ದ ಶ್ರೇಷ್ಠ ಚಿತ್ರ ಪ್ರಶಸ್ತಿಯು ಇದೀಗ ಮೂನ್ಲೈಟ್ ಚಿತ್ರದ ಪಾಲಾಗಿದೆ.

ಈ ಮೊದಲು ಬಹು ನಿರೀಕ್ಷೆಯ ಲಾ ಲಾ ಲ್ಯಾಂಡ್ ಅತ್ಯುತ್ತಮ ಚಿತ್ರವೆಂದು ಪ್ರಕಟಿಸಲಾಗಿತ್ತು. ಅದೀಗ ಬದಲಾಗಿ ಮೂನ್ಲೈಟ್ ಚಿತ್ರಕ್ಕೆ ಶ್ರೇಷ್ಠ ಪ್ರಶಸ್ತಿ ಸಂದಿರುವುದಾಗಿ ತಿಳಿದು ಬಂದಿದೆ.

ಅಮೆರಕದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಲಾ ಲಾ ಲ್ಯಾಂಡ್ ಚಿತ್ರವನ್ನು ಡೇಮಿಯಲ್ ಚ್ಯಾಝೆಲ್ ನಿರ್ದೇಶಿಸಿದ್ದು ರಾನ್ ಗ್ಲಾಸಿಂಗ್ ಮತ್ತು ಎಮಾ ಸ್ಟೋನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಶೇಷವೆಂದರೆ ಲಾ ಲಾ ಲ್ಯಾಂಡ್ ಚಿತ್ರ 2017ರ ಸಾಲಿನ ಗೋಲ್ಡನ್ ಗ್ಲೋಬ್ ನಲ್ಲಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ಮಾತ್ರವಲ್ಲದೆ 14ನೇ ಅಕಾಡೆಮಿ ಅವಾರ್ಡ್ಸ್ಗೆ ನಾಮಾಂಕನ ಪಡೆದಿದ್ದ ಈ ಚಿತ್ರ ಅಪಾರ ಜನಮೆಚ್ಚುಗೆಯನ್ನು ಗಳಿಸಿತ್ತು.

ಇದೇ ಸಂದರ್ಭದಲ್ಲಿ ಮೂನ್ಲೈಟ್ ಚಿತ್ರದ ಅತ್ಯುತ್ತಮ ನಟನೆಗಾಗಿ ನಿರ್ದೇಶಸಿದ ಅಲಿ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ವಿಯೋಲಾ ಡೇವಿಸ್ ಅವರಿಗೆ ಫೆನ್ಸಸ್ ಚಿತ್ರದಲ್ಲಿನ ನಟನೆಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅಂದ ಹಾಗೆ ಆಸ್ಕರ್ ಪ್ರಶಸ್ತಿ ಗಳಿಸಿರುವ ಪ್ರಪ್ರಥಮ ಕಪ್ಪುವರ್ಣೀಯ ನಟಿ ಈಕೆ ಎನಿಸಿಕೊಂಡಿದ್ದಾರೆ.

ಮ್ಯಾಂಚೆಸ್ಟರ್ ಬೈ ದಿ ಸೀ ಚಿತ್ರದಲ್ಲಿನ ನಟನೆಗಾಗಿ ಆಯಫ್ಲೆಕ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.

ಜಂಗಲ್ ಬುಕ್ ಆಕರ್ಷಣೆ : ಬೆಸ್ಟ್ ವಿಶುವಲ್ ಅವಾರ್ಡ್ ಪ್ರಶಸ್ತಿಯನ್ನು ಜಂಗಲ್ ಬುಕ್ ಪಡೆಯಿತು.

ದೇವ್ ಪಟೇಲ್ಗೆ ನಿರಾಶೆ : ಆಸ್ಕರ್ ಪ್ರಶಸ್ತಿಯ ರೇಸ್ನಲ್ಲಿದ್ದ ಭಾರತದ ದೇವ್ ಪಟೇಲ್ಗೆ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿರುವುದು ನಿರಾಶೆಗೆ ಕಾರಣವಾಗಿದೆ. ಪಟೇಲ್ ಅವರು ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಪ್ರಶಸ್ತಿ ಮೂನ್ ಲೈಟ ಚಿತ್ರಕ್ಕಾಗಿ ಮಹೆರ್ಶಿ ಅಲ್ ಅಲಿ ಅವರ ಪಾಲಿಗೆ ಹೋಯಿತು.

ಆಸ್ಕರ್ ಪ್ರಶಸ್ತಿಯ ಪೂರ್ಣ ಪಟ್ಟಿ ಹೀಗಿದೆ :

ಶ್ರೇಷ್ಠ ಚಿತ್ರ : ಮೂನ್ ಲೈಟ್
ಶ್ರೇಷ್ಠ ನಟಿ : ಎಮಾ ಸ್ಟೋನ್ - ಲಾ ಲಾ ಲ್ಯಾಂಡ್
ಶ್ರೇಷ್ಠ ನಟ : ಕ್ಯಾಸೇ ಆಫ್ ಲೆಕ್ - ಮ್ಯಾಂಚೆಸ್ಟರ್ ಬೈ ದಿ ಸೀ
ಶ್ರೇಷ್ಠ ನಿರ್ದೇಶಕ : ಡೇಮಿಯನ್ ಶಾಝೆಲ್ - ಲಾ ಲಾ ಲ್ಯಾಂಡ್
ಶ್ರೇಷ್ಠ ಪೋಷಕ ನಟಿ : ವಯೋಲಾ ಡೇವಿಸ್ - ಫೆನ್ಸಸ್
ಶ್ರೇಷ್ಠ ಪೋಷಕ ನಟ : ಮಹೆರ್ಶಲಾಅಲಿ - ಮೂನ್ ಲೈಟ್
ಒರಿಜಿನಲ್ ಸ್ಕ್ರೀನ್ ಪ್ಲೇ : ಮ್ಯಾಂಚೆಸ್ಟರ್ ಬೈ ದಿ ಸೀ
ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ : ಮೂನ್ ಲೈಟ್
ಬೆಸ್ಟ್ ಆಯನಿಮೇಟೆಡ್ ಫೀಚರ್ : ಝೂಟೋಪಿಯಾ

ಬೆಸ್ಟ್ ಆಯನಿಮೇಟೆಡ್ ಶಾರ್ಟ್ ಫಿಲಂ : ಪೈಪರ್
ಬೆಸ್ಟ್ ಲೈವ್ ಆಯಕ್ಷನ್ ಶಾರ್ಟ್ ಫಿಲಂ : ಸಿಂಗ್
ಶ್ರೇಷ್ಠ ವಿದೇಶೀ ಭಾಷಾ ಚಿತ್ರ : ದ ಸೇಲ್ಸ್ಮನ್
ಶ್ರೇಷ್ಠ ಸಾಕ್ಷ್ಯ ಚಿತ್ರ : ಎರ್ಜಾ ಎಡಲ್ವುನ್ ಮತ್ತು ಕ್ಯಾರೋಲಿನ್ ವಾಟರ್ಲೋ, ಓ ಜೆ ಮೇಡ್ ಇನ್ ಅಮೆರಿಕ
ಬೆಸ್ಟ್ ಸಿನೆಮಟೋಗ್ರಫಿ : ಲೈನಸ್ ಸ್ಯಾಂಡ್ಗೆÅನ್, ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸಾಂಗ್ : ಸಿಟಿ ಆಫ್ ಸ್ಟಾರ್ - ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸ್ಕೋರ : ಲಾ ಲಾ ಲ್ಯಾಂಡ್
ಬೆಸ್ಟ್ ವಿಶುವಲ್ ಅಫೆಕ್ಟ್ : ದಿ ಜಂಗಲ್ ಬುಕ್
ಬೆಸ್ಟ್ ಪ್ರೊಡಕ್ಷನ್ ಡಿಸೈನ್ : ಲಾ ಲಾ ಲ್ಯಾಂಡ್
ಬೆಸ್ಟ್ ಸೌಂಡ್ ಎಡಿಟಿಂಗ್ : ಅರೈವಲ್
ಬೆಸ್ಟ್ ಸೌಂಡ್ ಮಿಕ್ಸಿಂಗ್ : ಹ್ಯಾಕ್ಸಾ ರಿಜ್
ಬೆಸ್ಟ್ ಮೇಕಪ್ ಆಯಂಡ್ ಹೇರ್ಸ್ಟೈಲಿಂಗ್ : ಸುಯಿಸೈಡ್ ಸ್ಕ್ವಾಡ್
ಬೆಸ್ಟ್ costume ಡಿಸೈನ್ : ಫೆನಾಟಿಕ್ ಬೀಸ್ಟ್ಸ್ ಆಯಂಡ್ ವೇರ್ ಟು ಫೈಂಡ್ ದೆಮ್

IIFA ಉತ್ಸವ್...

IIFA ಉತ್ಸವ್; ಕಿರಿಕ್ ಪಾರ್ಟಿ, ಯೂ ಟರ್ನ್ ಮುಡಿಗೆ ಟಾಪ್ ಪ್ರಶಸ್ತಿ

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಇಂಟರ್ ನ್ಯಾಶನಲ್‌ ಇಂಡಿಯನ್‌ ಫಿಲ್ಮ್ ಅಕಾಡೆಮಿ(ಐಐಎಫ್ ಎ)ನ ಉತ್ಸವದಲ್ಲಿ ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ, ಯೂ ಟರ್ನ್ ಭರ್ಜರಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ, ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಅವರ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ್ದ ಕೊಡುಗೆಗಾಗಿ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಬುಧವಾರ, ಗುರುವಾರ ಸೇರಿದಂತೆ 2 ದಿನಗಳ ಕಾಲ ಹೈದರಾಬಾದ್ ನಲ್ಲಿ ಫಾರ್ಚೂನ್ ಸನ್ ಫ್ಲವರ್ ಪ್ರಾಯೋಜಿತ 2016-17ನೇ ಸಾಲಿನ ಐಐಎಎಫ್ ಉತ್ಸವದಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟ, ನಟಿಯರಿಗೆ, ಚಿತ್ರಕ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

"ಕಿರಿಕ್ ಪಾರ್ಟಿ'ಗೆ 5 ಪ್ರಶಸ್ತಿ:
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ 5 ಪ್ರಶಸ್ತಿಗಳನ್ನು ಗೆದ್ದಿದೆ.
ಉತ್ತಮ ಚಿತ್ರ, ಉತ್ತಮ ಸಂಗೀತ ನಿರ್ದೇಶನ ಸೇರಿದಂತೆ 5 ಪ್ರಶಸ್ತಿ ಗೆದ್ದಿದೆ. ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಹಿನ್ನೆಲೆ ಸಂಗೀತಗಾರ ವಿಜಯ್ ಪ್ರಕಾಶ್ ಗೆ ಪ್ರಶಸ್ತಿ ಲಭಿಸಿದೆ.

ಯೂ ಟರ್ನ್ ಚಿತ್ರಕ್ಕಾಗಿ ಪವನ್ ಕುಮಾರ್ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಹಾಗೂ ಉತ್ತಮ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಿಕ್ಕಣ್ಣಗೆ ಉತ್ತಮ ಹಾಸ್ಯ ನಟ:
ನಟ ಚಿಕ್ಕಣ್ಣಗೆ ಕೋಟಿಗೊಬ್ಬ 2 ಚಿತ್ರಕ್ಕಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ಲಭಿಸಿದೆ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿನ ನಟನೆಗಾಗಿ ಪಾರೂಲ್ ಯಾದವ್, ಯಜ್ಞ ಶೆಟ್ಟಿಗೆ ಪ್ರಶಸ್ತಿ ಲಭಿಸಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿನ ನಟನೆಗಾಗಿ ವಶಿಷ್ಠಾಗೆ ಪ್ರಶಸ್ತಿ, ಇಂಚರ ರಾವ್ ಹಿನ್ನೆಲೆ ಸಂಗೀತಕ್ಕೆ ಅವಾರ್ಡ್ ಸಿಕ್ಕಿದೆ. ರಕ್ಷಿತ್ ಶೆಟ್ಟಿಗೆ ಬೆಸ್ಟ್ ಸಪೋರ್ಟಿಂಗ್ ಮೇಲ್ ಅವಾರ್ಡ್ ಲಭಿಸಿದೆ.

ಮಲಯಾಳಂನ ಜನತಾ ಗ್ಯಾರೇಜ್ ಗೆ 6 ಪ್ರಶಸ್ತಿ:

ನಟ ಮೋಹನ್ ಲಾಲ್, ಜ್ಯೂನಿಯರ್ ಎನ್ ಟಿಆರ್ ಅಭಿನಯದ ಜನತಾ ಗ್ಯಾರೇಜ್ ಚಿತ್ರ ಒಟ್ಟು ಆರು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ.

ಬರಪರಿಹಾರ ಕರ್ನಾಟಕ ರಾಜ್ಯಕ್ಕೆ ₹1235.52 ಕೋಟಿ

ಬರ ಪರಿಹಾರ: ರಾಜ್ಯಕ್ಕೆ ₹1235.52 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ.

ಉನ್ನತ ಮಟ್ಟದ ಸಮಿತಿ ಅನುಮೋದನೆ ಮೇರೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕೆ ₹1235.52 ಕೋಟಿ ಹಾಗೂ ತಮಿಳುನಾಡಿಗೆ ₹1712.10 ಕೋಟಿ ಬಿಡುಗಡೆ ಮಾಡಿದೆ.

ಎರಡೂ ರಾಜ್ಯಗಳು ಬರ ಹಾಗೂ ಚಂಡಮಾರುತದಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೋರಿದ್ದವು. ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕರ್ನಾಟಕದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ₹96.92 ಕೋಟಿ ಬಾಕಿ ಉಳಿದಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿರುವ ₹450 ಕೋಟಿ ಹಾಗೂ ಈಗಿನ ₹1235.52 ಕೋಟಿ ಸೇರಿ ರಾಜ್ಯಕ್ಕೆ ಒಟ್ಟು ₹1782.44 ಕೋಟಿ ನೆರವು ಸಿಕ್ಕಂತಾಗಿದೆ.

ರಾಜ್ಯದ 9 ಅಣೆಕಟ್ಟೆಗಳಲ್ಲಿ ಶೇ.20ಕ್ಕಿಂತ ಕಡಿಮೆ ನೀರಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ  ಎದುರಾಗುವ ಸಂಭವ ಹೆಚ್ಚಿದೆ. ಮಳೆಯ ಅಭಾವದಿಂದ ಈಗಾಗಲೇ 160–176 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ.

ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು ಕಣ್ಮರೆಯಾಗಲಿವೆ: ನೀತಿ ಆಯೋಗ

ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಕಣ್ಮರೆಯಾಗಲಿವೆ: ನೀತಿ ಆಯೋಗ

ಹೊಸದಿಲ್ಲಿ,ಎ.1: ಭಾರತವು ತ್ವರಿತ ಗತಿಯಲ್ಲಿ ತಂತ್ರಜ್ಞಾನ ಅನ್ವಯಗಳನ್ನು ಅಪ್ಪಿ ಕೊಳ್ಳುತ್ತಿರುವುದರೊಂದಿಗೆ ಡಿಜಿಟಲ್ ವಹಿವಾಟುಗಳು ಮೊಬೈಲ್ ವ್ಯಾಲೆಟ್‌ಗಳು ಮತ್ತು ಬಯೊಮೆಟ್ರಿಕ್ ವಿಧಾನಗಳ ಮೂಲಕ ನಡೆಯಲಿವೆ ಹಾಗೂ ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮುಂದಿನ 3-4 ವರ್ಷಗಳಲ್ಲಿ ಕಣ್ಮರೆಯಾಗಲು ಸಜ್ಜಾಗಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಹೇಳಿದ್ದಾರೆ.

ಶುಕ್ರವಾರ ಇಲ್ಲಿಯ ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಸೌಲಭ್ಯ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಿಶ್ವಾದ್ಯಂತ ನಿರಾಶಾದಾಯಕ ಆರ್ಥಿಕ ಚಿತ್ರಣದ ನಡುವೆಯೂ ಭಾರತವು ವಾರ್ಷಿಕ ಶೇ.7.6 ದರದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ ಎಂದ ಅವರು, ಅಮೆರಿಕಾ ಮತ್ತು ಯುರೋಪಗಳಲ್ಲಿ ಜನಸಂಖ್ಯೆ ವಯಸ್ಸಾಗುತ್ತ ಸಾಗಿದರೆ, ಭಾರತದ ಜನಸಂಖ್ಯೆ ಹೆಚ್ಚೆಚ್ಚು ಯುವಜನರೊಂದಿಗೆ ಮುನ್ನಡೆಯಲಿದೆ ಎಂದರು.

ಉದ್ಯಮ-ವ್ಯವಹಾರಗಳನ್ನು ಸುಲಭಗೊಳಿಸಲು ಕಳೆದ ವರ್ಷ 1,200 ಕಾನೂನು ಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂತ್ ನುಡಿದರು.

ಐರೋಪ್ಯ ಒಕ್ಕೂಟದ 24 ರಾಷ್ಟ್ರಗಳಿಗಿಂತಲೂ ಭಾರತವು ದೊಡ್ಡದಾಗಿದೆ ಎಂದ ಅವರು, ರಾಜ್ಯಗಳು ಬೆಳವಣಿಗೆಯ ಅಗ್ರಣಿಗಳಾಗಿ ಮೂಡಿ ಬರಬೇಕಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಹೆಚ್ಚಿನ ನಗರೀಕರಣಕ್ಕೆ ಭಾರತವು ಸಾಕ್ಷಿಯಾಗಲಿದೆ ಮತ್ತು ಇದರಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಅವರು ಹೇಳಿದರು.

ಮೀನುಗಾರರನ್ನು ಬಂಧಮುಕ್ತಗೊಳಿಸಿದ ಇರಾನ್

ಭಾರತದ 15 ಮಂದಿ ಮೀನುಗಾರರನ್ನು ಬಂಧಮುಕ್ತಗೊಳಿಸಿದ ಇರಾನ್

ನವದೆಹಲಿ: ಇರಾನ್‍ನಲ್ಲಿ ಬಂಧಿಯಾಗಿದ್ದ ಭಾರತದ ಮೂಲದ 15 ಮಂದಿ ಮೀನುಗಾರರನ್ನು ಇರಾನ್ ಸರ್ಕಾರ ಬಂಧಮುಕ್ತಗೊಳಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮೂಲದ 15 ಮಂದಿ ಮೀನುಗಾರರನ್ನು ಮತ್ತು ಅವರ ಮೂರು ಬಹರೈನಿ ಬೋಟ್‍ಗಳನ್ನು ಇರಾನ್ ವಶಪಡಿಸಿಕೊಂಡಿತ್ತು. ಆ ಮೀನುಗಾರರನ್ನು ಇರಾನ್ ಬಂಧಮುಕ್ತಗೊಳಿಸಿದೆ ಎಂದು ಸುಷ್ಮಾ ಅವರು ಹೇಳಿದ್ದಾರೆ.

ಬಹರೈನ್‍ನಾಗಿ ಕೆಲಸ ಮಾಡುತ್ತಿದ್ದ ಈ ಮೀನುಗಾರರು ಸೆಪ್ಟೆಂಬರ್ 22ರಂದು ಅನುಮತಿ ಪಡೆಯದೆಯೇ ಇರಾನ್ ಸಮುದ್ರಭಾಗಕ್ಕೆ ಪ್ರವೇಶಿಸಿದ್ದರಿಂದ ಇರಾನ್ ಮೀನುಗಾರರನ್ನು ವಶ ಪಡಿಸಿಕೊಂಡಿತ್ತು.

ಮಿಯಾಮಿ ಓಪನ್ ಫೈನಲ್

ಮಿಯಾಮಿ ಓಪನ್ ಫೈನಲ್‍ನಲ್ಲಿ ನಡಾಲ್‍ ವಿರುದ್ಧ ಫೆಡರೆರ್‍ಗೆ ರೋಚಕ ಗೆಲುವು

ಮಿಯಾಮಿ (ಅಮೆರಿಕ), ಏ.3-ಮಿಯಾಮಿ ಓಪನ್ ಟೆನಿಸ್ ಫೈನಲ್‍ನಲ್ಲಿ ಸ್ವಿಟ್ಜರ್‍ಲೆಂಡ್‍ನ ರೋಜರ್ ಫೆಡರೆರ್ ತಮ್ಮ ಬಹುಕಾಲದ ಪ್ರತಿಸ್ಪರ್ಧಿ ಸ್ಪೇನ್‍ನ ರಫಾಯಿಲ್ ನಡಾಲ್‍ರನ್ನು ಮಣಿಸಿ ರೋಚಕ ಗೆಲುವು ದಾಖಲಿಸಿದ್ದಾರೆ. ನಡಾಲ್ ವಿರುದ್ಧ 6-3, 6-4ರಿಂದ ಗೆಲುವು ಸಾಧಿಸಿ ಫೆಡರೆರ್ ಈ ವರ್ಷದಲ್ಲೂ ಜೈತ್ರಯಾತ್ರೆಯನ್ನು ಮುಂದುವರಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಆರು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ಫೆಡರೆರ್ ಇತ್ತೀಚೆಗಷ್ಟೇ ಟೆನಿಸ್ ಅಂಕಣಕ್ಕೆ ಹಿಂದಿರುಗಿದ್ದರು. ಈಗಾಗಲೇ ಆಸ್ಟ್ರೇಲಿಯನ್ ಓಪನ್ ಮತ್ತು ಇಂಡಿಯನ್ ವೆಲ್ಸ್ ಪಂದ್ಯಾವಳಿಗಳಲ್ಲಿ ವಿಜಯಿಯಾಗಿರುವ ಸ್ವಿಸ್ ಆಟಗಾರ ಈ ವರ್ಷ 19-1ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‍ನಲ್ಲಿ ನಡಾಲ್ ವಿರುದ್ಧ ಐದು ಸೆಟ್‍ಗಳಿಂದ ವಿಜೇತರಾಗಿದ್ದ ಫೆಡರೆರ್ ಈ ಫೈನಲ್ ಪಂದ್ಯದಲ್ಲೂ ಸ್ಪೇನ್ ಆಟಗಾರನಿಗೆ ಸೋಲಿನ ಕಹಿ ಅನುಭವ ನೀಡಿದರು.
  ಫೈನಲ್‍ನಲ್ಲಿ ಜಯಗಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ರೋಚಕ ಗೆಲುವು. ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಹೇಳಿದರು.

ಅಪ್ಪಿತಪ್ಪಿಯೂ ಇವರನ್ನು ಅವಮಾನಿಸಬೇಡಿ

ಅಪ್ಪಿತಪ್ಪಿಯೂ ಇವರನ್ನು ಅವಮಾನಿಸಬೇಡಿ

ಹಿರಿಯರನ್ನು ಸದಾ ಗೌರವಿಸಬೇಕು. ಹಿರಿಯರಿಗೆ ಅವಮಾನ ಮಾಡಿದ್ರೆ ಹತ್ತಿರಕ್ಕೆ ಬಂದ ಯಶಸ್ಸು ಕೂಡ ಕೈತಪ್ಪಿ ಹೋಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಕೂಡ ಇದನ್ನು ಹೇಳಲಾಗಿದೆ. ಯಾರಿಗೆ ಅವಮಾನ ಮಾಡಿದ್ರೆ ಏನೆಲ್ಲ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ವಿವರಿಸಲಾಗಿದೆ.

ತಾಯಿಗೆ ದೇವರ ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಾಯಿಯನ್ನು ಗೌರವಿಸಬೇಕು. ಭಕ್ತಿಯಿಂದ ನೋಡಿಕೊಳ್ಳಬೇಕು. ಎಂದೂ ಆಕೆಯನ್ನು ಅವಮಾನಿಸಬಾರದು. ಅಮ್ಮನ ಸೇವೆ ಮಾಡುವವರಿಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ಅದೇ ತಾಯಿಯನ್ನು ಅವಮಾನ ಮಾಡುವ ವ್ಯಕ್ತಿ ಮೇಲೆ ದೇವರು ಮುನಿಸಿಕೊಂಡು ಸದಾ ದುಃಖ ನೀಡ್ತಾನೆ. ಎಷ್ಟು ಪೂಜೆ-ಪುನಸ್ಕಾರ ಮಾಡಿದ್ರೂ ಫಲ ಸಿಗೋದಿಲ್ಲ.

ತಾಯಿಯ ಹಾಗೆ ತಂದೆಯನ್ನು ಗೌರವಿಸಬೇಕು. ತಂದೆ-ತಾಯಿಗೆ ಗೌರವ ನೀಡದವರನ್ನು ಪಶುವಿಗೆ ಹೋಲಿಸಲಾಗುತ್ತದೆ.
ಅವರು ಎಂದೂ ಜೀವನದಲ್ಲಿ ಪ್ರಗತಿ ಕಾಣುವುದಿಲ್ಲ.

ಗುರುವಿನಿಂದ ನಮಗೆ ಶಿಕ್ಷೆ ಹಾಗೂ ಜ್ಞಾನ ಲಭಿಸುತ್ತದೆ. ವಿದ್ಯೆ ನೀಡಿದ ಗುರು ದೇವರಿಗೆ ಸಮಾನ. ಗುರುವಿಗೆ ಎಂದೂ ಅವಮಾನ ಮಾಡಬಾರದು. ಗುರುವಿಗೆ ಅಗೌರವ ತೋರುವ ಹಾಗೆ ಅವರು ಹೇಳಿಕೊಟ್ಟ ಶಿಕ್ಷಣಕ್ಕೆ ಅವಮಾನ ಮಾಡಿದ್ರೆ ಜೀವನದಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ. ಗುರುವಿಗೆ ಅವಮಾನ ಮಾಡಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ಇದಕ್ಕೆ ಪ್ರಾಯಶ್ಚಿತವಿಲ್ಲ.

ಪಂಡಿತ ಅಥವಾ ಜ್ಞಾನಿಯನ್ನು ದೇವರಿಗೆ ಹೋಲಿಸಲಾಗುತ್ತದೆ. ಜ್ಞಾನಿ ಎಲ್ಲ ಕಷ್ಟಗಳಿಗೂ ಒಂದು ಪರಿಹಾರ ಕಂಡುಕೊಳ್ಳುತ್ತಾನೆ. ಇಂತಹ ವ್ಯಕ್ತಿಗಳನ್ನು ಅವಮಾನ ಮಾಡುವುದು ಪಾಪದ ಕೆಲಸ. ಇಂತವರನ್ನು ಅವಮಾನ ಮಾಡಿದ ವ್ಯಕ್ತಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಹಾಗಾಗಿ ಜ್ಞಾನಿಗಳು, ಪಂಡಿತರನ್ನು ಸದಾ ಗೌರವಿಸಬೇಕು.

ನೀಲಿ ಕ್ರಾಂತಿ ಸಾಧಿಸಲು ಕೇಂದ್ರ ಸರ್ಕಾರದ "ಮಿಷನ್ ಫಿಂಗರ್ಲಿಂಗ್" ಜಾರಿ

*ನೀಲಿ ಕ್ರಾಂತಿ ಸಾಧಿಸಲು ಕೇಂದ್ರ ಸರ್ಕಾರದ “ಮಿಷನ್ ಫಿಂಗರ್ಲಿಂಗ್” ಜಾರಿ*

ದೇಶದಲ್ಲಿ ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಕೇಂದ್ರ ಕೃಷಿ ಸಚಿವಾಲಯ “ಮಿಷನ್ ಫಿಂಗರ್ಲಿಂಗ್ (Mission Fingerling)” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ 52000 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ 2014-15ನೇ ಸಾಲಿನಲ್ಲಿ 10.79 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟಿರುವ ಮೀನು ಉತ್ಪಾದನೆಯನ್ನು 2020-21ನೇ ಅವಧಿಗೆ 15 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಿಸುವುದಾಗಿದೆ.

*ಪ್ರಮುಖಾಂಶಗಳು:*

ಮೀನು ಉತ್ಪಾದನೆಗೆ ಹೇರಳ ಅವಕಾಶವಿರುವ 20 ರಾಜ್ಯಗಳನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗುರುತಿಸಿದ್ದು, ಮೀನು ಮರಿಗಳ ಉತ್ಪಾದನೆ ಹಾಗೂ ಮೀನು ಉತ್ಪಾದನೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು.
ಮೀನು ಮರಿಗಳು, ಶ್ರಿಂಪ್ ಮತ್ತು ಕ್ರಾಬ್ ಗಳ ಉತ್ಪಾದನೆಗೆ ಹೊಂಡಗಳ ನಿರ್ಮಾಣಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು.
ಇದರಿಂದ ಪ್ರತಿ ವರ್ಷ 20 ಲಕ್ಷ ಟನ್ ಮೀನು ಉತ್ಪಾದನೆ ಹಾಗೂ ಸುಮಾರು 4 ಮಿಲಿಯನ್ ಕುಟುಂಬಗಳಿಗೆ ಅನುಕೂಲವಾಗಲಿದೆ.
*ನೀಲಿ ಕ್ರಾಂತಿ:*

ದೇಶದಲ್ಲಿ ಲಭ್ಯವಿರುವ ಅಪಾರ ಮೀನುಗಾರಿಕೆ ಸಂಪನ್ಮೂಲವನ್ನು ಗುರುತಿಸಿ ಸಮಗ್ರವಾಗಿ ಬಳಸಿಕೊಳ್ಳುವ ಸಲುವಾಗಿ ನೀಲಿ ಕ್ರಾಂತಿಯನ್ನು ಆರಂಭಿಸಲಾಗಿದೆ. ಜೊತೆಗೆ ಮೀನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಅಭಿವೃದ್ದಿಪಡಿಸುವುದು ನೀಲಿ ಕ್ರಾಂತ್ರಿಯ ಗುರಿ.

ಭಾನುವಾರ, ಏಪ್ರಿಲ್ 2, 2017

EVM: ತಿರುಚುವಿಕೆಗೆ ಕೇಜ್ರೀ, ಕೈ ನಾಯಕರ ಆಗ್ರಹ

EVM ತಿರುಚುವಿಕೆ: ಮತ್ತೆ ಮತ ಪತ್ರ ಬಳಕೆಗೆ ಕೇಜ್ರಿ, ಕೈ ನಾಯಕರ ಆಗ್ರಹ

ಹೊಸದಿಲ್ಲಿ : ಈಚಿನ ಪಂಚರಾಜ್ಯ ಚುನಾವಣೆಗಳಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಆರೋಪಗಳಿಗೆ ಕಳವಳ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕರನ್ನು ಒಳಗೊಂಡ ನಿಯೋಗವೊಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝಾಯಿದಿ ಅವರನ್ನು ಭೇಟಿಯಾಗಿ ತಿರುಚುವಿಕೆಯಿಂದ ಮಕ್ತವಾಗಿರುವ ಚುನಾವಣೆಗಳನ್ನು ಆಗ್ರಹಿಸಿದ್ದಾರೆ.

"ಆರಂಭದಿಂದಲೇ ನಾನು ವಿದುನ್ಮಾನ ಮತ ಯಂತ್ರ (ಇವಿಎಂ)ಗಳನ್ನು ನಂಬುತ್ತಿರಲಿಲ್ಲ. ಇಡಿಯ ಜಗತ್ತೇ ಚುನಾವಣೆಗೆ ಮತ ಪತ್ರಗಳನ್ನು ಬಳಸುತ್ತಿರುವಾಗ ನಾವು ಕೂಡ ಮತಪತ್ರಗಳನ್ನು ಬಳಸುವುದಕ್ಕೆ ಏನು ತೊಂದರೆ' ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಇದಕ್ಕೆ ಮೊದಲು ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಮತ ಯಂತ್ರಗಳನ್ನು ತಿರುಚಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಿ ವಿವಿಪಿಟಿ ಯಂತ್ರಗಳ ಮೂಲಕ ಕೊಡಲಾಗಿರುವ ಮತದಾನದ ಚೀಟಿಗಳನ್ನು ಚುನಾವಣಾ ಫಲಿತಾಂಶಗಳೊಂದಿಗೆ ತಾಳೆ ಹಾಕಲು ಆಗ್ರಹಿಸಿತು.

ಸಭೆಯ ಬಳಿಕ ಆಪ್ ನಾಯಕ ರಾಘವ ಛಡ್ಡಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಕ್ಷವು ಬೂತ್ ಮಟ್ಟದ ಮತದಾನದ ನಮೂನೆಯ ಬಗ್ಗೆ ನಡೆಸಿದ ಪ್ರಾಥಮಿಕ ವಿಶ್ಲೇಷಣೆಯು ಇವಿಎಂ ತಿರುಚುವಿಕೆ ನಡೆದಿರುವುದನ್ನು ತೋರಿಸಿದೆ ಎಂದು ಹೇಳಿದರು. 

ಇತಿಹಾಸದ ಪುಟ ಸೇರಿದ "ಸ್ಟೇಟ್ ಬ್ಯಾಂಕ್ ಆಪ್ ಮೈಸೂರು"

ಇತಿಹಾಸದ ಪುಟ ಸೇರಿದ ನಮ್ಮ "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು"!
ಬೆಂಗಳೂರು: ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕರ್ನಾಟಕ ರಾಜ್ಯದ ಕನ್ನಡಿಗರ ಹೆಮ್ಮೆಯ ಮತ್ತು ಕನ್ನಡಿಗರನ್ನು ಗುರುತಿಸುವ ಮೈಸೂರು ಬ್ಯಾಂಕ್‌ ಎಂದೇ ಮನೆ ಮಾತಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  ಇತಿಹಾಸದ ಪುಟ ಸೇರಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಅಧಿಕೃತವಾಗಿ ವಿಲೀನವಾಗಿದೆ.

ಸುಮಾರು 3 ದಶಕಗಳ ಹಗ್ಗಜಗ್ಗಾಟದ ನಂತರ ಸಾರ್ವಜನಿಕ ಸ್ವಾಮ್ಯದ ದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ ನಲ್ಲಿ (ಎಸ್‌ಬಿಐ), ಅದರ ಐದು ಸಹವರ್ತಿ ಬ್ಯಾಂಕ್‌ ಗಳು ಶನಿವಾರ ವಿಲೀನಗೊಳ್ಳಲಿವೆ.  ಇದರಿಂದಾಗಿ ಬ್ಯಾಂಕ್‌ ಗಳ ಕೇಂದ್ರೀಕರಣ ನೀತಿಯಿಂದಾಗಿ ಐದು ಐತಿಹಾಸಿಕ ಬ್ಯಾಂಕ್‌ ಗಳು ಎಸ್ ಬಿಐನಲ್ಲಿ ವಿಲೀನಗೊಳ್ಳುವಂತೆ ಮಾಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್‌ ತಿರುವಾಂಕೂರು, ಸ್ಟೇಟ್‌  ಬ್ಯಾಂಕ್‌ ಆಫ್‌ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಟಿಯಾಲಾ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್‌ ಹಾಗೂ ಜೈಪುರಗಳು ಈ ದಿನ ಎಸ್‌ಬಿಐನಲ್ಲಿ ಲೀನವಾಗಲಿವೆ.

ಈ ಸಹವರ್ತಿ ಬ್ಯಾಂಕ್‌ಗಳಿಗೆ ಶುಕ್ರವಾರ ಕೊನೆಯ ಕೆಲಸದ ದಿವಸವಾಗಿತ್ತು ಈಗ ಎಸ್‌ ಬಿಐನಲ್ಲಿ 2,07,000 ಉದ್ಯೋಗಿಗಳಿದ್ದು, ಈಗ ಸಹವರ್ತಿ ಬ್ಯಾಂಕ್‌ ಗಳ ವಿಲೀನದಿಂದ ಆ ಬ್ಯಾಂಕ್‌ಗಳ 70 ಸಾವಿರ ಉದ್ಯೋಗಿಗಳು  ಸೇರ್ಪಡೆಯಾಗಲಿದ್ದಾರೆ. ಇದರಿಂದಾಗಿ ಒಟ್ಟು ಉದ್ಯೋಗಿಗಳ ಸಂಖ್ಯೆ 2,77,000 ಆಗಲಿದೆ. ಖಾಸಗಿ ಬ್ಯಾಂಕ್‌ ಗಳಿಗೆ ಪೈಪೋಟಿ ಒಡ್ಡುವ ಕಾರಣಕ್ಕೆ ಸರ್ಕಾರವು ಎಲ್ಲ ಸಹವರ್ತಿ ಬ್ಯಾಂಕ್‌ಗಳನ್ನು ಎಸ್‌ ಬಿಐನಲ್ಲಿ, ತೀವ್ರ ವಿರೋಧದ  ನಡುವೆಯೂ ವಿಲೀನಗೊಳಿಸಿದೆ. ಎಸ್‌ ಬಿಎಂ 1913ರಲ್ಲಿ, ಎಸ್‌ಬಿಟಿ 1945, ಎಸ್‌ಬಿಬಿಜೆ 1944, ಎಸ್‌ಬಿಪಿ 1917, ಎಸ್‌ಬಿಎಚ್‌ 1941ರಲ್ಲಿ ಸ್ಥಾಪನೆಯಾಗಿದ್ದವು.

ಕರ್ನಾಟಕದ ಹೆಮ್ಮೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

1913ರ  ಅಕ್ಟೋಬರ್ 2ರಂದು,  ಬೆಂಗಳೂರಿನ ಅವೆನ್ಯೂ ರಸ್ತೆಯ ಸಣ್ಣ ಕಟ್ಟಡವೊಂದರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬ್ಯಾಂಕ್‌ ಕಾಲಾನುಕ್ರಮದಲ್ಲಿ  ಬೃಹತ್ ಮರವಾಗಿ ಬೆಳೆದಿತ್ತು. ಸರ್‌. ಎಂ. ವಿಶ್ವೇಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ  ರಚಿತವಾದ ಬ್ಯಾಂಕಿಂಗ್‌ ಸಮಿತಿಯ ಶಿಫಾರಸಿನ ಮೇರೆಗೆ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ 1913ರ ಅಕ್ಟೋಬರ್‌ 2ರಂದು ದಿ ಬ್ಯಾಂಕ್‌ ಆಫ್‌ ಮೈಸೂರು ಲಿ., ಸ್ಥಾಪಿಸಲಾಯಿತು. ಪ್ರಪ್ರಥಮ 20 ಲಕ್ಷ ರು. ಬಂಡವಾಳ ನಿಧಿಯನ್ನು  ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹೂಡಿದರು. ಬಳಿಕ ದಿ ಬ್ಯಾಂಕ್‌ ಆಫ್‌ ಮೈಸೂರು ಲಿ., ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ ಬಿಎಂ) ಎಂದು ನಾಮಕರಣಗೊಂಡು103 ವರ್ಷಗಳನ್ನು ಪೂರೈಸಿತು.

ಸರ್‌.ಎಂ.ವಿ  ಮತ್ತು ಮೈಸೂರು ಅರಸರ ಮಾರ್ಗ ದರ್ಶನದಲ್ಲಿ ಸ್ಥಾಪಿಸಿದ ಮೈಸೂರು ಬ್ಯಾಂಕ್‌ಗೆ 103 ವರ್ಷಗಳ ಇತಿಹಾಸವಿದೆ. 1960ರಲ್ಲಿ ಎಸ್‌ಬಿಎಂ ಅನ್ನು ಸಹವರ್ತಿ ಬ್ಯಾಂಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ  ತೆಗೆದುಕೊಂಡಿತು.  ಆಗ ಎಸ್‌ಬಿಎಂನ ಶೇ.75 ರಷ್ಟು ಷೇರುಗಳನ್ನು ಎಸ್‌ಬಿಐ ಹಿಡಿದುಕೊಂಡಿತ್ತು. ಉಳಿದ ಶೇ.25 ರಷ್ಟು ಮಾತ್ರ ಸಾರ್ವಜನಿಕರಲ್ಲಿತ್ತು. ಹಾಗಾಗಿ ಒಟ್ಟಾರೆ ಎಲ್ಲ ಸಹವರ್ತಿ ಬ್ಯಾಂಕಿನ ನಿಯಂತ್ರಣ ಎಸ್ ಬಿಐ  ಕೈಲಿತ್ತು. ಅಂದಿನಿಂದಲೇ ಎಲ್ಲ ಸಹವರ್ತಿ ಬ್ಯಾಂಕುಗಳು ಎಸ್‌ ಬಿಐನಲ್ಲಿ ವಿಲೀನವಾಗುತ್ತವೆ ಎಂದು ಹೇಳಿಕೊಂಡು ಬರುತ್ತಲೇ ಇದ್ದವು.

ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರದಿಂದ ಎಲ್ಲ ಎಸ್‌ ಬಿಐ ಸಹವರ್ತಿ ಬ್ಯಾಂಕ್‌ ಗಳು ಮತ್ತು ಮಹಿಳಾ ಬ್ಯಾಂಕ್‌ ಗಳು ಏಪ್ರಿಲ್‌ 1, 2017ರಿಂದ ಎಸ್‌ಬಿಐನಲ್ಲಿ ವಿಲೀನವಾಗಲಿವೆ ಎಂದು ನಿರ್ಧರಿಸಲಾಯಿತು. ಆ  ದಿಸೆಯಲ್ಲಿ ಫೆಬ್ರವರಿಯಲ್ಲಿ ಆದೇಶ ಬಂತು. ಅದೇ ರೀತಿ ಸಂಸತ್ತಿ ಸದನಗಳಲ್ಲಿ ಕೂಡ ಇದಕ್ಕೆ ಅನುಮೋದನೆ ಪಡೆಯಲಾಗಿತ್ತು.