ಸೋಮವಾರ, ಏಪ್ರಿಲ್ 3, 2017

ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು ಕಣ್ಮರೆಯಾಗಲಿವೆ: ನೀತಿ ಆಯೋಗ

ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಕಣ್ಮರೆಯಾಗಲಿವೆ: ನೀತಿ ಆಯೋಗ

ಹೊಸದಿಲ್ಲಿ,ಎ.1: ಭಾರತವು ತ್ವರಿತ ಗತಿಯಲ್ಲಿ ತಂತ್ರಜ್ಞಾನ ಅನ್ವಯಗಳನ್ನು ಅಪ್ಪಿ ಕೊಳ್ಳುತ್ತಿರುವುದರೊಂದಿಗೆ ಡಿಜಿಟಲ್ ವಹಿವಾಟುಗಳು ಮೊಬೈಲ್ ವ್ಯಾಲೆಟ್‌ಗಳು ಮತ್ತು ಬಯೊಮೆಟ್ರಿಕ್ ವಿಧಾನಗಳ ಮೂಲಕ ನಡೆಯಲಿವೆ ಹಾಗೂ ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮುಂದಿನ 3-4 ವರ್ಷಗಳಲ್ಲಿ ಕಣ್ಮರೆಯಾಗಲು ಸಜ್ಜಾಗಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಹೇಳಿದ್ದಾರೆ.

ಶುಕ್ರವಾರ ಇಲ್ಲಿಯ ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಸೌಲಭ್ಯ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಿಶ್ವಾದ್ಯಂತ ನಿರಾಶಾದಾಯಕ ಆರ್ಥಿಕ ಚಿತ್ರಣದ ನಡುವೆಯೂ ಭಾರತವು ವಾರ್ಷಿಕ ಶೇ.7.6 ದರದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ ಎಂದ ಅವರು, ಅಮೆರಿಕಾ ಮತ್ತು ಯುರೋಪಗಳಲ್ಲಿ ಜನಸಂಖ್ಯೆ ವಯಸ್ಸಾಗುತ್ತ ಸಾಗಿದರೆ, ಭಾರತದ ಜನಸಂಖ್ಯೆ ಹೆಚ್ಚೆಚ್ಚು ಯುವಜನರೊಂದಿಗೆ ಮುನ್ನಡೆಯಲಿದೆ ಎಂದರು.

ಉದ್ಯಮ-ವ್ಯವಹಾರಗಳನ್ನು ಸುಲಭಗೊಳಿಸಲು ಕಳೆದ ವರ್ಷ 1,200 ಕಾನೂನು ಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂತ್ ನುಡಿದರು.

ಐರೋಪ್ಯ ಒಕ್ಕೂಟದ 24 ರಾಷ್ಟ್ರಗಳಿಗಿಂತಲೂ ಭಾರತವು ದೊಡ್ಡದಾಗಿದೆ ಎಂದ ಅವರು, ರಾಜ್ಯಗಳು ಬೆಳವಣಿಗೆಯ ಅಗ್ರಣಿಗಳಾಗಿ ಮೂಡಿ ಬರಬೇಕಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಹೆಚ್ಚಿನ ನಗರೀಕರಣಕ್ಕೆ ಭಾರತವು ಸಾಕ್ಷಿಯಾಗಲಿದೆ ಮತ್ತು ಇದರಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಅವರು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ