ಸೋಮವಾರ, ಏಪ್ರಿಲ್ 10, 2017

ಈಜಿಪ್ಟ್ ನ ಎರಡು ಚರ್ಚಗಳಲ್ಲಿ ಸ್ಫೋಟ

ಈಜಿಪ್ಟ್‌ನ ಎರಡು ಚರ್ಚ್‌ಗಳಲ್ಲಿ ಸ್ಫೋಟ: 45 ಸಾವು

ಕೈರೊ: ಈಜಿಪ್ಟ್‌ನ ಟಂಟಾ ಮತ್ತು ಅಲೆಕ್ಸಾಂಡ್ರಿಯಾ ಪಟ್ಟಣದ ಚರ್ಚ್‌ಗಳಲ್ಲಿ ಐಎಸ್‌ ಉಗ್ರರು ಭಾನುವಾರ ನಡೆಸಿದ  ಬಾಂಬ್‌ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟು, 119ಕ್ಕೂ  ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
  ‘ಕೈರೊದಿಂದ 120 ಕಿ.ಮೀ. ದೂರದಲ್ಲಿರುವ ಟಂಟಾ ಪಟ್ಟಣದ ಮಾರ್‌ ಗರ್ಜೆಸ್‌ ಚರ್ಚ್‌ನ ಒಳಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, 27ಮಂದಿ ಮೃತಪಟ್ಟು 78 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಇದಾದ ಒಂದು ಗಂಟೆಯ ಬಳಿಕ  ಅಲೆಕ್ಸಾಂಡ್ರಿಯಾದ ಮಾನ್‌ಶಿಯಾ ಜಿಲ್ಲೆಯ ಸೇಂಟ್‌ ಮಾರ್ಕ್ಸ್‌ ಚರ್ಚ್‌ ಬಳಿ ಇನ್ನೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.   ‘ಆತ್ಮಾಹುತಿ ದಾಳಿಕೋರನೊಬ್ಬ ಸೇಂಟ್‌ ಮಾರ್ಕ್ಸ್‌  ಚರ್ಚ್‌ನ ಒಳಗೆ ನುಗ್ಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು  ತಡೆದಾಗ ಬಾಂಬ್‌ ಸ್ಫೋಟಿಸಿಕೊಂಡಿದ್ದಾನೆ’ ಎಂದು ಪೋಲಿಸರು ತಿಳಿಸಿದ್ದಾರೆ.   ಪಾಮ್‌ ಸಂಡೆ (ಗರಿಗಳ ಭಾನುವಾರ)  ಆಚರಣೆ ಅಂಗವಾಗಿ ಪ್ರಾರ್ಥನೆ ಸಲ್ಲಿಸಲು ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ  ಚರ್ಚ್‌ಗಳಿಗೆ ಬಂದಿದ್ದರು. ಅಲೆಕ್ಸಾಂಡ್ರಿಯಾದ ಪೋಪ್‌ ಎರಡನೇ ಟವಾಡ್ರೋಸ್‌  ನೇತೃತ್ವದಲ್ಲಿ ಪಾಮ್‌ ಸಂಡೆ ಮೆರವಣಿಗೆ ನಡೆಯುವ ಕೆಲವೇ ಸಮಯದ ಮೊದಲು ಎರಡನೇ ಸ್ಫೋಟ ನಡೆದಿದೆ.   ಬಾಂಬ್‌ ಸ್ಫೋಟದಲ್ಲಿ ಟಂಟಾ ನ್ಯಾಯಾಲಯದ ಮುಖ್ಯಸ್ಥ ಸಾಮ್ಯುವೆಲ್ ಜಾರ್ಜ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಾರ್‌ ಗರ್ಜೆಸ್‌ ಚರ್ಚ್‌ನಲ್ಲಿ ಪ್ರಾರ್ಥನೆ ವೇಳೆ ವ್ಯಕ್ತಿಯೊಬ್ಬ  ಒಳಭಾಗಕ್ಕೆ ಸ್ಫೋಟಕ  ಕೊಂಡೊಯ್ದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು  ಹೇಳಿದ್ದಾರೆ.
  ಏ. 28,29 ರಂದು ಪೋಪ್‌ ಫ್ರಾನ್ಸಿಸ್‌ ಅವರ ಈಜಿಪ್ಟ್‌ ಭೇಟಿ ನಿಗದಿಯಾಗಿದ್ದು,  ಇದಕ್ಕೂ ಮೊದಲು ಈ ದಾಳಿ ನಡೆದಿದೆ. ‘ಟಂಟಾ ಪಟ್ಟಣದ ಮಸೀದಿಯೊಂದರ ಬಳಿ ಇಟ್ಟಿದ್ದ ಎರಡು ಸ್ಫೋಟಕಗಳನ್ನು ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ, ಏಪ್ರಿಲ್ 9, 2017

2 ಶತಕೋಟಿ ಡಾಲರ್ ಕ್ಷಿಪಣಿ ಒಪ್ಪಂದಕ್ಕೆ ಭಾರತ - ಇಸ್ರೇಲ್ ಸಹಿ

2 ಶತಕೋಟಿ ಡಾಲರ್ ಕ್ಷಿಪಣಿ ಒಪ್ಪಂದಕ್ಕೆ ಭಾರತ-ಇಸ್ರೇಲ್ ಸಹಿ

  ಜೆರುಸಲೆಂ, ಏ.7- ಇಸ್ರೇಲ್ ಮತ್ತು ಭಾರತದ ನಡುವೆ ಎರಡು ಶತಕೋಟಿ ಡಾಲರ್ ಮೊತ್ತದ ಮಹತ್ವದ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತಕ್ಕೆ ಸುಧಾರಿತ ಮಧ್ಯಮ ಶ್ರೇಣಿಯ ಭೂಮಿಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ (ಎಂಆರ್‍ಎಸ್‍ಎಎಂ) ಪೂರೈಕೆಗಾಗಿ ಈ ಬೃಹತ್ ರಕ್ಷಣಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡಸ್ಡ್ರೀಸ್ (ಎಐಎ) ತಿಳಿಸಿದೆ.  ಭಾರತದಲ್ಲಿ ಪ್ರಥಮ ಬಾರಿಗೆ ದೇಶಿಯವಾಗಿ ಉತ್ಪಾದನೆಯಾಗುವ ವಿಮಾನಗಳನ್ನು ಕೊಂಡೊಯ್ಯವ ನೌಕೆಗೆ ಹೆಚ್ಚುವರಿಯಾಗಿ ದೂರ-ಶ್ರೇಣಿ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು (ಎಲ್‍ಆರ್‍ಎಸ್‍ಎಎಂ) ಸಹ ಇಸ್ರೇಲ್ ಸರಬರಾಜು ಮಾಡಲಿದೆ.

ಐಎಐಗೆ 1.6 ಶತಕೋಟಿ ಡಾಲರ್ ಮೌಲ್ಯದ ಹಾಗೂ ರಕ್ಷಣಾ ಬಿಡಿಭಾಗಗಳ ಪೂರೈಕೆಗಾಗಿ ಮತ್ತೊಂದು ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿ ರಫೇಲ್ ಉಳಿದ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಐಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೋಸೆಫ್ ವೀಸ್ ಜೆರುಸಲೆಂನಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.


ಈಜಿಪ್ಟ್ ನಲ್ಲಿ 3700 ವರ್ಷಗಳ ಪ್ರಾಚೀನ ಪಿರಮಿಡ್ ಪತ್ತೆ..!

ಈಜಿಪ್ಟ್'ನಲ್ಲಿ 3,700 ವರ್ಷಗಳ ಪ್ರಾಚೀನ ಪಿರಮಿಡ್ ಪತ್ತೆ..!

ಕೈರೋ, ಏ.7- ಅನೇಕ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈಜಿಪ್ಟ್ ನಲ್ಲಿ ಸುಮಾರು 3,700 ವರ್ಷಗಳಷ್ಟು ಪ್ರಾಚೀನ ಪಿರಮಿಡ್‍ನ ಅವಶೇಷಗಳು ಪತ್ತೆಯಾಗಿವೆ. ಈಜಿಪ್ಟ್‍ನ ನೈಕ್ರೊಪೊಲಿಸ್‍ನಲ್ಲಿ ಉತ್ಖನನ ನಡೆಸಿದ ತಂಡ ಇದನ್ನು ಪತ್ತೆ ಮಾಡಿದೆ ಎಂದು ಪ್ರಾಚ್ಯವಸ್ತು ಅಧಿಕಾರಿಗಳು ತಿಳಿಸಿದ್ದಾರೆ. 13ನೇ ರಾಜವಂಶಕ್ಕೆ ಸೇರಿದ ಪಿರಮಿಡ್ ಇದಾಗಿದೆ ಎಂದು ಅಂದಾಜು ಮಾಡಲಾಗಿದೆ.  ನೈಕ್ರೋಪೊಲಿಸ್‍ನಲ್ಲಿರುವ ಸ್ಲೈಫರ್ ದೊರೆಯ ಪಿರಮಿಡ್ ಬಳಿ ಇದರ ಒಳಭಾಗದ ಆವಶೇಷಗಳು ಪತ್ತೆಯಾಗಿವೆ.

ಆಗಿನ ಚಕ್ರವರ್ತಿಗಳು ಮತ್ತು ಅವರ ವಂಶಸ್ಥರ ಜೀವನ ಶೈಲಿ, ಅವರು ಬಳಸುತ್ತಿದ್ದ ಪ್ರಾಚೀನ ವಸ್ತುಗಳು ಮೊದಲಾದ ಸಂಗತಿಗಳ ಮೇಲೆ ಇದು ಬೆಳಕು ಚೆಲ್ಲಲಿದೆ ಎಂದು ಈಜಿಪ್ಟ್‍ನ ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಮಹ್ಮೂದ್ ಅಫಿಫಿ ತಿಳಿಸಿದ್ದಾರೆ.
ಈಜಿಪ್ಟ್‍ನ ಅರಮನೆಯ ಮಂತ್ರಿಗಳು, ಸಭಾಸದಸ್ಯರು ಮತ್ತು ಉನ್ನತಾಧಿಕಾರಿಗಳ ಶವ ಸಂಸ್ಕಾರ ನಡೆಸುವ ಸ್ಥಳವನ್ನು ನೈಕ್ರೋ ಪೊಲಿಸ್ ಎನ್ನುತ್ತಾರೆ.

ಗೋವಿನ ವಿಚಾರಕ್ಕೆ ಗಲಾಟೆ : 5 ರಾಜ್ಯಗಳಿಗೆ ಸುಪ್ರೀಂ ನೊಟೀಸ್

ಗೋವಿನ ವಿಚಾರಕ್ಕೆ ಗಲಾಟೆ: 5 ರಾಜ್ಯಗಳಿಗೆ ಸುಪ್ರೀಂ ನೊಟೀಸ್

ಹೊಸದಿಲ್ಲಿ: ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆ ಮತ್ತು ಹಲ್ಲೆಗಳನ್ನು ಪ್ರಶ್ನಿಸಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ನೀಡಿದೆ.

ಬಿಜೆಪಿ ಆಳ್ವಿಕೆಯಲ್ಲಿರುವ ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ್ ಮತ್ತು  ಜಾರ್ಖಂಡ್ ರಾಜ್ಯಗಳಿಗೆ ನೊಟೀಸ್ ನೀಡಲಾಗಿದೆ.

ಗೋಸಂರಕ್ಷಕರ ಮೇಲೆ ನಿಯಂತ್ರಣ ಹೇರಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟ್ ನೊಟೀಸ್ ನೀಡಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 3 ಕ್ಕೆ ಮುಂದೂಡಿದೆ.

ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗೋರಕ್ಷರೆನಿಸಿಕೊಂಡವರ ಸಮೂಹವೊಂದು ಹೊಡೆದು ಸಾಯಿಸಿದೆ. ಕರ್ನಾಟಕದ ಉಡುಪಿ ಕೆಂಜೂರಿನಲ್ಲೂ ಗೋಸಾಗಾಟ ನಡೆಸುತ್ತಿದ್ದ ವೇಳೆ ಪ್ರವೀಣ್ ಪೂಜಾರಿ ಎಂಬಾತನ ಹತ್ಯೆ ನಡೆದಿತ್ತು. 

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಬೇಲೂರು, ಏ.7- ಚನ್ನಕೇಶವ ದೇವಾಲಯ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯವು ದೇವಾಲಯದ ಪರವಾಗಿ ತೀರ್ಪು ನೀಡಿದೆ ಎಂದು ಚನ್ನಕೇಶವ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಾಲಯಕ್ಕೆ ಸೇರಿದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದವರ ವಿರುದ್ದ ಆಸ್ತಿಯೂ ದೇವಾಲಯಕ್ಕೆ ಸೇರಿದ್ದೆಂದು ದೇವಾಲಯ ವ್ಯವಸ್ಥಾಪನ ಸಮಿತಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.ಆದರಂತೆ ನ್ಯಾಯಾಲಯದಲ್ಲಿ ಆಸ್ತಿಯೂ ದೇವಾಲಯಕ್ಕೆ ಸೇರಿದ್ದೆಂದು ತೀರ್ಪು ಬಂದಿರುವುದರಿಂದ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿದ್ದ ಪ್ರತಿವಾದಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.

ಚನ್ನಕೇಶವ ದೇವಾಲಯದ ಆಸ್ತಿಯನ್ನು ಯಾವುದೆ ಕಾರಣಕ್ಕೂ ಮಾರಾಟವಾಗಲಿ ಅಥವಾ ಪರ ಬಾರೆಯಾಗಲಿ ಮಾಡಬಾರದು. ಆ ರೀತಿ ಮಾಡಲು ಮುಂದಾದಲ್ಲಿ ಚನ್ನಕೇಶವ ದೇವಾಲಯ ಆಸ್ತಿ ಹಿತ ರಕ್ಷಣಾ ಸಮಿತಿಯಿಂದ ಉಗ್ರವಾದ ಹೊರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿ ಗೌರವಧ್ಯಕ್ಷ ಕೆ.ಎಸ್.ಪೂರ್ಣೇಶ್  ಮಾತನಾಡಿ, ಈಗಾಗಲೆ ದೇವಾಲಯದ ಆಸ್ತಿಯನ್ನು ಕಬಳಿಸುತ್ತಿರುವವರ ಗುಂಪು ಮತ್ತಷ್ಟು ನಕಲಿ ದಾಖಲೆಗಳನ್ನು ಸೃಷಿಸಿ ಸರ್ಕಾರಿ ಮತ್ತು ಇತರೆ ಆಸ್ತಿಯನ್ನು ಕಬ್ಬಳಿಸುತ್ತಿರುವುದು ಕಂಡು ಬಂದಿದ್ದು, ಇವರಿಗೆ ಉನ್ನತ ಹುದ್ದೆಗಳಲ್ಲಿರುವ ಜನಪ್ರತಿನಿಧಿಗಳೆ ಬೆಂಬಲ ನೀಡುತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿಯ ಗಂಗೇಶ್. ಕೆ.ಸುದರ್ಶನ್. ರಂಗನಾಥ್ ಇದ್ದರು.

ಬೇಲೂರಿನ ಚನ್ನಕೇಶವ ದೇಗುಲಕ್ಕೆ 900 ವರ್ಷ ಇತಿಹಾಸ

ಬೇಲೂರು, ಮಾ.14- ಶಿಲ್ಪಕಲೆಯ ತವರೂರೆಂದೇ ಪ್ರಸಿದ್ಧಿ ಪಡೆದಿರುವ ವಿಶ್ವ ಪ್ರವಾಸಿ ತಾಣ ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯ ನಿರ್ಮಾಣವಾಗಿ 900 ವರ್ಷಗಳು ಕಳೆದಿದೆ..! ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟ ಬೇಲೂರು-ಹಳೇಬೀಡುಗಳ ದೇವಾಲಯಗಳ ಸೊಬಗನ್ನು ನೋಡಲು ಕಲಾ ರಸಿಕರ, ಪ್ರವಾಸಿಗರ ಪ್ರತಿ ದಿನ ಕೈ ಬೀಸಿ ಕರೆಯುತ್ತಿದೆ.  ವಾಸ್ತುಶಿಲ್ಪಗಳಿಂದ ನಾಡಿನ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಹೊಯ್ಸಳ ರಾಜ ವಿಷ್ಣುವರ್ಧನರ ಕನಸಿನ ಕಲಾಪೂರ್ಣತೆ ಶಿಲ್ಪಕಲೆ, ವಾಸ್ತುಶಿಲ್ಪಗಳು ಅಧುನಿಕ ಜಗತ್ತಿಗೆ ಸವಾಲು ಹಾಕಿವೆ. ಇದು ನಿರ್ಮಾಣಗೊಂಡು 900 ವರ್ಷ ಕಳೆದಿದ್ದರೂ ಕೀರ್ತಿ ಮಾತ್ರ ಕಳೆಗುಂದದೆ ಇರುವುದು ವಿಶೇಷ. ನಾಡಿನಲ್ಲಿ ಶಿಲ್ಪಕಲೆಗಳಿಗೆ ಹೊಯ್ಸಳರ ಕಾಲವು ತಮ್ಮದೆ ಆದ ಕಾಣಿಕೆಯನ್ನೂ ನೀಡಿದೆ. ಪ್ರವಾಸಿ ತಾಣ ಎಂದಾಕ್ಷಣ ಬೇಲೂರು ಹಾಗೂ ಹಳೇಬೀಡು ಕಣ್ಮುಂದೆ ಬರುತ್ತದೆ.
ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ವಿಶ್ವದ ಭೂಪಟದಲ್ಲಿ ತಮ್ಮದೆ ಆದದ ಛಾಪನ್ನು ಮೂಡಿಸಿದ್ದು, ಇಂದಿಗೂ ತಮ್ಮ ನೈಜತೆಯಿಂದ ಕಂಗೊಳಿಸುತ್ತಿವೆ. ಹೊಯ್ಸಳರ ದೊರೆ ವಿಷ್ಣುವರ್ಧನ, ಬೇರೆ ಬೇರೆ ರಾಜರುಗಳ ವಿರುದ್ದ ಯುದ್ದಗಳಲ್ಲಿ ಜಯ ಗಳಿಸಿದ ನೆನಪಿಗಾಗಿ ದೇವಾಲಯವನ್ನು ಕಟ್ಟಿಸಿದ ಎನ್ನಲಾಗಿದೆ. ಬೇಲೂರು ದೇವಾಲಯವು ಬೇರೆ ದೇವಾಲಯಕ್ಕಿಂತ ಶ್ರೇಷ್ಠ ಶಿಲ್ಪಕಲೆಗಳಿಗಿಂತ ವಿಭಿನ್ನವಾಗಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ ವಿಷ್ಣುವರ್ಧನನು ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ನಿರ್ಮಾಣವನ್ನು ಶಾಸನದಲ್ಲಿರುವಂತೆ ಕಟ್ಟಿಸಿ ಶಕ 1039ರ ಹೇಮಲಂಬಿ ಸಂವತ್ಸರದ ಚೈತ್ರ ಶುದ್ದ ಪಂಚಮಿ ವಡ್ಡವಾರದಂದು(ಮಂಗಳವಾರ)ನೀಡಿದ್ದಾರೆ. ಕ್ರಿ.ಶ. ಪ್ರಕಾರ ಇದು 1117ರ ಮಾ.10 ಶನಿವಾರ ಆಗುತ್ತದೆ. ಈ ಪ್ರಕಾರದಲ್ಲಿ 2017ರ ಮಾ.10ಕ್ಕೆ 900 ವರ್ಷಗಳು ಪೂರ್ಣವಾಗಿದೆ.  ಇತಿಹಾಸವನ್ನು ಮೆಲುಕು ಹಾಕಿದರೆ ಈಗಿರುವ ಬೇಲೂರಿನ ಮೂಲ ಹೆಸರು ಬೆಲಹೂರು ಕಾಲ ಕ್ರಮೇಣ ಬೆಲವೂರು, ಬೇಲೂರು ಆಗಿರಬಹದು. ಚನ್ನಕೇಶವ ದೇವಾಲಯವು ಪ್ರತಿಷ್ಠಾಪನೆಯ ಕಾಲಕ್ಕೆ ಸಂಸ್ಕøತ ಶಾಸನಗಳಲ್ಲಿ ಬೇಲಪುರ ಎಂಬುದನ್ನು ವೇಲಾಪುರಿ ಎಂದು ಕರೆಯಲಾಗಿದೆ. ವೇಲಾಪುರಿಯಿಂದ ಬೇಲೂರು ಪದ ಹುಟ್ಟಿದೆ ಎಂದು ಕೆಲವರ ಭಾವನೆಯಿದೆ. ಆದರೆ ವೇಲಾಪುರ ಎಂಬ ನಾಮರೂಪ ಕ್ರಿ.ಶ.1117 ಕ್ಕಿಂತ ಮೊದಲು ಕಾಣುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಬೇಲೂರು ದೇವಾಲಯದ ಬಗ್ಗೆ ಕೆಲ ಐತಿಹ್ಯಗಳಿವೆ. ಬೇಲೂರು ದೇವಾಲಯ ನಿರ್ಮಿಸಿಬೇಕು ಎಂದು ಚನ್ನಕೇಶವನೇ ಆದೇಶ ನೀಡಿದ್ದ ಎಂಬ ನಿಟ್ಟಿನಲ್ಲಿ ರಾಜ ವಿಷ್ಣುವರ್ಧನನು ಬೇಲೂರು ದೇವಾಲಯವನ್ನು ಜಕಣಾಚಾರಿ ಮತ್ತು ಡಂಕಣಾಚಾರಿ ಎಂಬ ಶಿಲ್ಪಿಗಳಿಂದ ನಿರ್ಮಿಸಿದ್ದಾನೆ ಎಂಬ ಕೆಲವು ಐತಿಹ್ಯಗಳು ಹೇಳುತ್ತವೆ. ಇಂದಿನ ಹಳೇಬೀಡು ಅಂದಿನ ದ್ವಾರಸಮುದ್ರ ಹೊಯ್ಸಳರ ರಾಜಧಾನಿಯಾಗಿತ್ತು. ಅದಕ್ಕೂ ಮುನ್ನ ಬೇಲೂರನ್ನು ಹೊಯ್ಸಳರು ರಾಜಧಾನಿಯಾಗಿ ಮಾಡಿಕೊಂಡಿರುವ ಊರಿನ ಸುತ್ತ ಮಣ್ಣಿನ ಕಂದಕ ಸೇರಿದಂತೆ ಮುಂತಾದವುಗಳು ಕಾಣಬಹುದಾಗಿದೆ. ಅಲ್ಲದೆ ಹೊಯ್ಸಳರ ಶಿಲ್ಪಕಲೆಯ ವೈಶಿಷ್ಟ್ಯತೆ ಹಾಗೂ ಸೃಜನಶೀಲತೆಯೂ ಇಂದಿಗೂ ಜೀವಂತವಾಗಿದೆ. ಅಂದು ಬಾದಾಮಿ, ಚಾಲುಕ್ಯರು, ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪಗಳ ಪ್ರಯೋಗಗಳು ಹಾಗೂ ಹೊಯ್ಸಳರ ವಾಸ್ತುಶಿಲ್ಪಗಳಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ.

ಚನ್ನಕೇಶವ ದೇವಾಲಯದ ನಿರ್ಮಾಣವು 103 ವರ್ಷಗಳ ಸತತ ಪ್ರತಿಫಲವಾಗಿದೆ. ಇಂತಹ ಅಪರೂಪದ ಶಿಲ್ಪಕಲೆಗಳು ನೋಡುಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಬೇಲೂರು ಶ್ರೀ ಚನ್ನಕೇಶವ ದೇವಾಲಯಕ್ಕೆ ಸೂಕ್ತವಾದ ಭದ್ರತೆ ಇಲ್ಲವಾಗಿದೆ. ಹಾಗೂ ಈ ದೇವಾಲಯವು ಉಗ್ರರ ಪಟ್ಟಿಯಲ್ಲಿರುವ ಬಗ್ಗೆ ಇಂಟಲಿಜೆನ್ಸಿ ರಿಪೋರ್ಟ್  ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ದೇವಾಲಯಕ್ಕೆ ಕೇಂದ್ರ ಪುರಾತತ್ವ ಇಲಾಖೆಯೂ ಹೆಚ್ಚಿನ ಭದ್ರತೆ ನೀಡುವುದಕ್ಕೆ ಮುಂದಾಗಬೇಕು. ಕಾರಣ 900 ವರ್ಷದ ಇತಿಹಾಸವನ್ನು ಸಾರುತ್ತಿರುವ ದೇವಾಲಯವನ್ನು ಕಾಪಾಡಿ ಕೊಳ್ಳವತ್ತ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವ ಮೂಲಕ ಈ ದೇವಾಲಯವು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವುದಕ್ಕೆ ಮುಂದಾಗಬೇಕು. ಇದನ್ನು ಸರ್ಕಾರಗಳು ಹಾಗೂ ಜನ ಪ್ರತಿನಿಗಳು ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.

ಸುಷ್ಮಾ ಸ್ವರಾಜ್ ಗೆ ರಾಷ್ಟ್ರಪತಿ ಪಟ್ಟ...?

ಸುಷ್ಮಾ ಸ್ವರಾಜ್‍ಗೆ ರಾಷ್ಟ್ರಪತಿ ಪಟ್ಟ..?

ನವದೆಹಲಿ, ಏ.7-ತಮ್ಮ ಕಾರ್ಯವೈಖರಿ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ನಂಬರ್ ಒನ್ ಸಚಿವೆ ಎಂದು ಮನ್ನಣೆ ಪಡೆದಿರುವ ಸುಷ್ಮಾ ಸ್ವರಾಜ್ ಅವರಿಗೆ ರಾಷ್ಟ್ರಪತಿ ಹುದ್ದೆ ಲಭಿಸುವ ಸಾಧ್ಯತೆ ಇಂದು ಎಂದು ಉನ್ನತ ಮೂಲಗಳು ಹೇಳಿವೆ. ನೂತನ ರಾಷ್ಟ್ರಪತಿಯಾಗುವವರ ಪಟ್ಟಿಯಲ್ಲೂ ವಿದೇಶಾಂಗ ವ್ಯವಹಾರಗಳ ಸಚಿವರು ಮುಂದಿದ್ದಾರೆ. ಮಹಿಳೆಯೊಬ್ಬರಿಗೆ ರಾಷ್ಟ್ರಪತಿ ಸ್ಥಾನ ನೀಡಬೇಕೆಂಬ ತೀರ್ಮಾನವಾದರೆ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಥಮ ಆದ್ಯತೆಯ ಅಭ್ಯರ್ಥಿ ಸುಷ್ಮಾ ಎಂದೂ ಹೇಳಲಾಗುತ್ತಿದೆ.

ಇನ್ನೊಂದು ಮೂಲದ ಪ್ರಕಾರ ಸುಷ್ಮಾಗೆ ತಮಿಳುನಾಡು ರಾಜ್ಯಪಾಲರ ಹುದ್ದೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಬೆಳವಣಿಗೆಗೆ ಕಾರಣವೂ ಇದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಬಳಿಕ ಮೋದಿ ತಮ್ಮ ಸಂಪುಟಕ್ಕೆ ಸರ್ಜರಿ ಮಾಡಲು ಹೊರಟಿದ್ದಾರೆ.
ಅನಾರೋಗ್ಯದಿಂದಾಗಿ (ಮೂತ್ರಪಿಂಡ ವೈಫಲ್ಯದಿಂದ ಚೇತರಿಸಿಕೊಳ್ಳುತ್ತಿರುವ) ಸುಷ್ಮಾ ಅವರಿಗೆ ವಿದೇಶಾಂಗ ವ್ಯವಹಾರದಂಥ ಮಹತ್ವದ ಹುದ್ದೆಯಲ್ಲಿ ಮುಂದುವರಿಯಲು ಕಷ್ಟವಾಗಬಹುದು ಎಂಬ ಮಾತುಗಳಿವೆ. ಹೀಗಾಗಿ ಅವರನ್ನು ರಾಷ್ಟ್ರಪತಿ ಅಥವಾ ರಾಜ್ಯಪಾಲರ ಹುದ್ದೆಗೆ ನಿಯೋಜಿಸುವ ಲೆಕ್ಕಾಚಾರ ಮೋದಿಯವರದ್ದು.

ಇದೇ ವೇಳೆ ಸುಷ್ಮಾ ಅವರ ಜಾಗಕ್ಕೆ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಬರಲಿದ್ದಾರೆ. ಓಂ ಮಾಥುರ್ ರಾಜಸ್ತಾನದ ನೂತನ ಸಿಎಂ ಆಗಲಿದ್ದಾರೆ. ಈ ಬೆಳವಣಿಗೆಯಾದಲ್ಲಿ, ಗೋವಾ ಮುಖ್ಯಮಂತ್ರಿ ಹುದ್ದೆಗಾಗಿ ಸಂಪುಟದ ಒಬ್ಬ ಪ್ರಮುಖ ಸಚಿವರನ್ನು (ಮನೋಹರ್ ಪರಿಕರ್) ಕಳೆದಕೊಂಡ ಮೋದಿ ಮಂತ್ರಿಮಂಡಲದ ಇನ್ನೊಂದು ಮಹತ್ವದ ಹುದ್ದೆಗೆ ಪಕ್ಷದ ಪ್ರಭಾವಿ ನಾಯಕಿಯೊಬ್ಬರು ಮುಖ್ಯಮಂತ್ರಿ ಪದವಿ ಬಿಟ್ಟು ಸಚಿವರಾಗಲಿದ್ದಾರೆ. ಹೀಗಾಗಿ ವಸುಂಧರಾ ಅವರನ್ನು ಕೇಂದ್ರ ರಾಜಕಾರಣಕ್ಕೆ ವರ್ಗಾವಣೆ ಮಾಡಿ ಪಕ್ಷದಲ್ಲಿ ಎರಡನೇ ತಲೆಮಾರಿನ ನಾಯಕತ್ವ ರೂಪಿಸುವುದು ನರೇಂದ್ರ ಮೋದಿಯವರ ಗುರಿಯಾಗಿದೆ.

ರಾಷ್ಟ್ರಪತಿ ಹುದ್ದೆಗೆ ಸುಷ್ಮಾರನ್ನು ಕೂರಿಸಲು ಸಾಧ್ಯವಾಗದಿದ್ದರೆ ಅವರನ್ನು ತಮಿಳುನಾಡು ರಾಜ್ಯಪಾಲರನ್ನಾಗಿ ನೇಮಕ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಮಹಾರಾಷ್ಟ್ರದ ರಾಜ್ಯಪಾಲ್ಯರಾಗಿರುವ ಸಿ. ವಿದ್ಯಾಸಾಗರ್ ರಾವ್ ಅವರು ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರೂ ಆಗಿದ್ದಾರೆ. ಹೀಗಾಗಿ ಸುಷ್ಮಾ ಅವರನ್ನು ತಮಿಳುನಾಡು ಗೌರ್ನರ್ ಆಗಿ ನೇಮಕ ಮಾಡುವ ಸಾಧ್ಯತೆಯೂ ಇನ್ನೊಂದು ಪರ್ಯಾಯ ಹಾದಿಯಾಗಿದೆ.  ಗೋವಾ ಮುಖ್ಯಮಂತ್ರಿಯಾಗಲು ರಕ್ಷಣಾ ಸಚಿವರ ಹುದ್ದೆಗೆ ಮನೋಹರ್ ರಾಜೀನಾಮೆ ನೀಡಿದ ಬಳಿಕ ಅದರ ಹೆಚ್ಚುವರಿ ಹೊಣೆಗಾರಿಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮೇಲಿದೆ. ಈ ಎರಡೂ ಹುದ್ದೆಗಳನ್ನು ನಿರ್ವಹಿಸುವುದು ಜೇಟ್ಲಿ ಅವರಿಗೆ ತ್ರಾಸದಾಯಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಗೆ ಜೈಟ್ಲಿ ಅವರನ್ನು ಸೀಮಿತಗೊಳಿಸಿ, ಕೇಂದ್ರ ವಿದ್ಯುತ್ ಖಾತೆ ಮಂತ್ರಿ ಪಿಯೂಷ್ ಗೋಯೆಲ್‍ಗೆ ಮುಂಬಡ್ತಿ ನೀಡಿ ವಿತ್ತ ಖಾತೆ ವಹಿಸುವ ಸಾಧ್ಯತೆಯಿದೆ. ಇದೇ ವೇಳೆ ಕೆಲವು ಮಹತ್ವದ ಬದಲಾವಣೆಗಳಿಗೂ ಮೋದಿ ಕೈಹಾಕಲಿದ್ದಾರೆ ಎಂದು ಹೇಳಲಾಗಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಹುದ್ದೆಯನ್ನು ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರಿಗೆ ಸಂಪುಟದಲ್ಲಿ ಬಡ್ತಿ ನೀಡಲು ಮೋದಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ 76 ವರ್ಷವಾಗಿರುವ ಪಕ್ಷದ ಹಿರಿಯ ನಾಯಕ ಕಲ್‍ರಾಜ್ ಮಿಶ್ರಾ ಅವರು ಸಂಪುಟದಿಂದ ನಿರ್ಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೋ, ಶ್ರೀನಿವಾಸಯ್ಯ ನಿಧನ

ಹೊ.ಶ್ರೀನಿವಾಸಯ್ಯ ನಿಧನದಿಂದ ದೇಶ ಸಮಾಜಮುಖಿ ಶ್ರೇಷ್ಠ ವ್ಯಕ್ತಿ ಕಳೆದುಕೊಂಡಂತಾಗಿದೆ : ಕುಮಾರಸ್ವಾಮಿ

ಬೆಂಗಳೂರು, ಏ.7-ಕನ್ನಡ ನಾಡು ಕಂಡ ಒಬ್ಬ ಅಪ್ಪಟ ಗಾಂಧಿವಾದಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ ಹೊ. ಶ್ರೀನಿವಾಸಯ್ಯ ಅವರ ನಿಧನದಿಂದ ನಮ್ಮ ದೇಶ ಅಪ್ರತಿಮ ಸಮಾಜ ಮುಖಿ ಶ್ರೇಷ್ಠ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಾದಿಸಿದ್ದಾರೆ.  ಶ್ರೀನಿವಾಸಯ್ಯ ಅವರು ಇನ್ನಿಲ್ಲ ಎನ್ನುವ ಸುದ್ದಿ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಶೋಕ ಸಂದೇಶದಲ್ಲಿ ಕುಮಾರಸ್ವಾಮಿ ತಿಳಿಸಿದ್ದಾರೆ. ತಮ್ಮ ಕೃತಿ ಹಾಗೂ ವಿಚಾರಗಳ ಮೂಲಕ ಜನಪ್ರಿಯವಾಗಿದ್ದ ಶ್ರೀನಿವಾಸಯ್ಯ ಅವರು, ಮಹಾತ್ಮ ಗಾಂಧಿ ವಿಚಾರಧಾರೆಗಳ ಪ್ರಚಾರಕ್ಕೆ ತಮ್ಮನ್ನು ತೊಡಗಿಸಿಕೊಂಡರು.

ಕೊನೆಯ ಉಸಿರುವವರೆಗೂ ಗಾಂಧೀ ತತ್ವಗಳನ್ನು ಜಾರಿಗೆ ತರಲು ಮತ್ತು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶ್ರೀನಿವಾಸಯ್ಯ ಅವರ ಮನವಿ ಮೇರೆಗೆ ಗಾಂಧಿ ಸ್ಮಾರಕ ನಿಧಿಗೆ ಒಂದು ಕೋಟಿ ರೂ ಬಿಡುಗಡೆ ಮಾಡಲಾಯಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಗಾಂಧಿ ಭವನವನ್ನು ಒಂದು ಉತ್ತಮ ವೈಚಾರಿಕ ಕೇಂದ್ರವನ್ನಾಗಿ ಮಾಡಲಾಯಿತು ಎಂದು ಕುಮಾರಸ್ವಾಮಿ ಗುಣಗಾನ ಮಾಡಿದ್ದಾರೆ. ಗಾಂಧೀಜಿ ಅವರನ್ನು ಭೇಟಿ ಮಾಡಿದ ನಂತರ ಶ್ರೀನಿವಾಸಯ್ಯ ಅವರು ಸಂಪೂರ್ಣವಾಗಿ ಗಾಂಧೀಜಿ ತತ್ವ ಪ್ರಚಾರಕ್ಕೆ ದುಡಿದರು. ಶ್ರೀನಿವಾಸಯ್ಯ ಅವರ ರೈತಪರ ಕಾಳಜಿಯಿಂದಾಗಿ ನಾನು ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಕಾರಣವಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿದ್ದ ಶ್ರೀನಿವಾಸಯ್ಯ ಅವರು, ನಿಸ್ವಾರ್ಥ ಸೇವೆ ಮೂಲಕ ಆ ಸಂಸ್ಥೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಪ್ರಕೃತಿ ಚಿಕಿತ್ಸೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀನಿವಾಸಯ್ಯ ಅವರು ಈ ಸಂಬಂಧ ರೂಪಿಸಿದ ಯೋಜನೆಗಳಿಗೆ 30 ಎಕರೆ ಜಾಗವನ್ನು ಮಂಜೂರು ಮಾಡಿದ್ದೆ. ಅವರ ಊರಾದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೌದರಿಕೊಪ್ಪಲಿನ ಜೊತೆ ಶ್ರೀನಿವಾಸಯ್ಯ ಕರುಳುಬಳ್ಳಿ ಸಂಬಂಧವನ್ನು ಹೊಂದಿದ್ದರು.
ಶ್ರೀನಿವಾಸಯ್ಯ ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಕುಮಾರಸ್ವಾಮಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇವಿಎಂ ಬಳಕೆ ಚರ್ಚೆ ಆಗಲಿ: ದೇವೇಗೌಡ

ಇವಿಎಂ ಬಳಕೆ ಚರ್ಚೆ ಆಗಲಿ: ದೇವೇಗೌಡ

ನವದೆಹಲಿ: ‘ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಳಕೆಯನ್ನು ಮುಂದುವರಿಸ ಬೇಕೇ, ಬೇಡವೇ ಎಂಬುದರ ಕುರಿತು ವಿಸ್ತೃತ ಚರ್ಚೆ ಆಗಬೇಕು’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವಿಎಂ ಬಳಕೆ ಕುರಿತು ರಾಜಕೀಯ ಮುಖಂಡರು ಆರೋಪ ಮಾಡುತ್ತಿದ್ದಾರೆ. ಸೋತ ಕೂಡಲೇ ಇಂತಹ ಆರೋಪಗಳು ಕೇಳಿಬರುವುದು ಸಹಜ ಎಂದು ಹೇಳಿದರು.

‘ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಚಲಾವಣೆಯಾದ ಪ್ರತಿ ನಾಲ್ಕು ಮತಗಳ ಪೈಕಿ ಮೂರು ಮತಗಳು ಬಿಜೆಪಿಗೇ ಹೋಗುತ್ತಿದ್ದವು ಎಂಬ ಆರೋಪಗಳು ಕೇಳಿಬಂದಿವೆ. ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೊದಲು ಮತಯಂತ್ರಗಳ ಮಾದರಿ ಪರೀಕ್ಷೆ ನಡೆಸಿದಾಗಲೂ ಬಿಜೆಪಿಗೆ ಮತಗಳು ದಾಖಲಾಗಿದ್ದು ಕಂಡುಬಂದಿದೆ.
ನಾನು ಯಾವುದೇ ರೀತಿಯ ಆರೋಪ ಮಾಡುವುದಿಲ್ಲ. ಬದಲಿಗೆ, ಚರ್ಚೆ ಆಗಬೇಕು ಎಂದಷ್ಟೇ ಹೇಳಬಲ್ಲೆ’ ಎಂದರು.

1996ರಲ್ಲಿ ಬೆಳಗಾವಿ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಶಿವಾನಂದ ಕೌಜಲಗಿ ಅವರ ವಿರುದ್ಧ 267 ಜನ ಸ್ಪರ್ಧಿಸಿದ್ದರು. ಉದ್ದನೆಯ ಮತಪತ್ರದಲ್ಲಿ ಜನರು ಕೌಜಲಗಿ ಅವರ ಹೆಸರನ್ನು ಹುಡುಕಿ ಮತ ಹಾಕಿ ಗೆಲ್ಲಿಸಿದರು. ಈಗ ಜನರ ಸಾಕ್ಷರತಾ ಪ್ರಮಾಣ ಶೇ 70ರಷ್ಟಿದೆ. ದೇಶದಲ್ಲಿ ಮೊದಲಿನಂತೆಯೇ ಮತಪತ್ರಗಳ ಬಳಕೆ ಮಾಡಬಹುದೇ ಎಂಬುದರ ಕುರಿತೂ ತಜ್ಞರು ತಿಳಿಸಬೇಕು ಎಂದರು.

ಸೇರ್ಪಡೆ ನಂತರ ಉತ್ತರ: ‘ಜೆಡಿಎಸ್‌ ತೊರೆದಿರುವ 7 ಜನ ಶಾಸಕರು ಇದೇ 14ರಂದು ನಾಗಮಂಗಲದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅಂದೇ ಆ 7 ಜನ ನನ್ನ ಹಾಗೂ ಕುಮಾರಸ್ವಾಮಿ ಅವರ ಹಗರಣಗಳನ್ನು ಬಹಿರಂಗ ಪಡಿಸುವುದಾಗಿಯೂ ಹೇಳಿದ್ದಾರೆ. ಅವರು ಹೇಳಿದ ನಂತರ ನಾನೂ ಅದೇ ಜಾಗದಲ್ಲಿ ಸಭೆ ನಡೆಸಿ ತಕ್ಕ ಉತ್ತರ ನೀಡುತ್ತೇನೆ’ ಎಂದರು.

ಮೋದಿ ತಡೆಯಕ್ಕಾಗಲ್ಲ
ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯ ವಿಚಾರವಿಲ್ಲ. ಯಾರೇ ಒಂದಾಗಿ ಹೋರಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡೆಯುವುದಕ್ಕೆ ಆಗುವುದಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಮೋದಿ ಯಾವ ರೀತಿ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಮಿಕ್ಕ ಪಕ್ಷಗಳ ಭವಿಷ್ಯ ನಿರ್ಧರಿತವಾಗಲಿದೆ ಎಂದು ಹೇಳಿದರು.

ಹಣ ಇಲ್ಲ.. ಸ್ಪರ್ಧೆ ಇಲ್ಲ
ಗುಂಡ್ಲುಪೇಟೆ ಮತ್ತು ನಂಜನ ಗೂಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಹಣದ ಹೊಳೆಯೇ ಹರಿಯುತ್ತಿದೆ. ಹಣ ಇಲ್ಲದ್ದರಿಂದ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯ್ಲಿ ಎಲ್ಲ 224 ಕ್ಷೇತ್ರಗಳಿಂದ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸ್ವಚ್ಛ ಭಾರತ, ಸ್ವಚ್ಛ ಚುನಾವಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರಾದರೂ ನಿಯಂತ್ರಣ ಮಾಡುತ್ತಿಲ್ಲ. ಸ್ವಚ್ಛ ಚುನಾವಣೆ ಎಂದು ಅವರು ಹೇಳುತ್ತಿದ್ದರೂ ವೆಚ್ಚಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ದೇವೇಗೌಡ ವ್ಯಂಗ್ಯವಾಡಿದರು.

ಮಹಿಳಾ ಸಾರಥ್ಯದಲ್ಲಿ ನಾಲ್ಕು ಹೈಕೋರ್ಟಗಳು

ಮಹಿಳಾ ಸಾರಥ್ಯದಲ್ಲಿ ನಾಲ್ಕು ಹೈಕೋರ್ಟ್‌ಗಳು

ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮಹಿಳಾ ನ್ಯಾಯಮೂರ್ತಿಗಳು ಮುನ್ನಡೆಸುತ್ತಿರುವ  ಹೈಕೋರ್ಟ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಏಕಕಾಲದಲ್ಲಿ ದೇಶದ ನಾಲ್ಕು ಹೈಕೋರ್ಟ್‌ಗಳಲ್ಲಿ ಮಹಿಳೆಯರು ಮುಖ್ಯ ನ್ಯಾಯಮೂರ್ತಿಗಳಾಗಿರುವುದು ಇದೇ ಮೊದಲು. ದೇಶದ ಎಲ್ಲಾ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಒಟ್ಟು  ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 10ರಷ್ಟು ಮಾತ್ರ.

* 1989ರವರೆಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಯಾವ ಮಹಿಳೆಯೂ ನೇಮಕವಾಗಿರಲಿಲ್ಲ. ಈ ಹುದ್ದೆಯನ್ನು ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಕೇರಳದವರಾದ, ನ್ಯಾಯಮೂರ್ತಿ ಫಾತಿಮಾ ಬೀವಿ ಅವರದ್ದು. 1989ರಿಂದ ಈವರೆಗೆ ಕೇವಲ ಆರು ಮಂದಿ ಮಹಿಳೆಯರಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ  ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಆರ್‌. ಭಾನುಮತಿ ಅವರು ಮಾತ್ರ ಸುಪ್ರೀಂ ಕೋರ್ಟ್‌ನ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ.

* ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು, ಬಾಂಬೆ ಹೈಕೋರ್ಟ್

* ನ್ಯಾಯಮೂರ್ತಿ ಜಿ.ರೋಹಿಣಿ, ದೆಹಲಿ ಹೈಕೋರ್ಟ್

* ನ್ಯಾಯಮೂರ್ತಿ ನಿಶಿತಾ ನಿರ್ಮಲ್ ಮ್ಹಾತ್ರೆ (ಹಂಗಾಮಿ ಮುಖ್ಯ ನ್ಯಾಯಮೂರ್ತಿ), ಕೋಲ್ಕತ್ತ ಹೈಕೋರ್ಟ್‌

* ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಮದ್ರಾಸ್‌ ಹೈಕೋರ್ಟ್

* ನ್ಯಾಯಮೂರ್ತಿ ಆರ್.ಭಾನುಮತಿ

––––––––

24 ದೇಶದ ಹೈಕೋರ್ಟ್‌ಗಳ ಸಂಖ್ಯೆ

652 ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ

69 ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ

28 ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ

1 ಸುಪ್ರೀಂಕೋರ್ಟ್‌ನಲ್ಲಿ ಇರುವ ಮಹಿಳಾ ನ್ಯಾಯಮೂರ್ತಿ ಸಂಖ್ಯೆ

2018 ರೊಳಗೆ ಗಂಗಾ ನೈರ್ಮಲ್ಯಿಕರಣ ಅಸಾಧ್ಯ: ಎನ್ಎಂಸಿಜಿ

2018ರೊಳಗೆ ಗಂಗಾ ನೈರ್ಮಲ್ಯೀಕರಣ ಅಸಾಧ್ಯ: ಎನ್ ಎಂಸಿಜಿ

ನವದೆಹಲಿ, ಏಪ್ರಿಲ್ 6: ಕಲುಷಿತವಾಗಿರುವ ಗಂಗಾ ನದಿಯನ್ನು ಈಗ ನಿಗದಿಗೊಳಿಸಲಾಗಿರುವಂತೆ 2018ರೊಳಗೆ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್‌ಎಂಸಿಜಿ) ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಗಂಗಾ ನದಿ ಶುದ್ಧೀಕರಣದ ಗುರಿಯನ್ನು 2019ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಹುಕೋಟಿ ವೆಚ್ಛದ ಗಂಗಾ ನದಿ ಶುದ್ಧೀಕರಣ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಎನ್‌ಎಂಸಿಜಿ ಅಧಿಕಾರಿಗಳ ಸಭೆ ಕರೆದಿದ್ದರು.

ಈ ಸಭೆಯಲ್ಲಿ, ಪ್ರಧಾನಿ ಮೋದಿಯವರಿಗೆ ಅಂಕಿ-ಅಂಶಗಳ ಸಹಿತ ವಿವರಗಳನ್ನು ನೀಡಿದ ಅಧಿಕಾರಿಗಳು, ಗಂಗಾ ನದಿಯನ್ನು ಇನ್ನೊಂದೇ ವರ್ಷದಲ್ಲಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಗಂಗಾ ನದಿಯ ಜನ ಬಳಕೆ ಇಲ್ಲದ ಜಾಗಗಳಲ್ಲಿ ಒಟ್ಟಾರೆ ಅಂದಾಜು 2,525 ಕಿ.ಮೀ.ವರೆಗೂ ಕೊಳಚೆ ತುಂಬಿಕೊಂಡಿದೆ. ಇದನ್ನು ಗುರುತಿಸಲೇ ಇಷ್ಟು ದಿನ ಬೇಕಾಯಿತು.

ಅಲ್ಲದೆ, ಶುದ್ಧೀಕರಣ ಪ್ರಕ್ರಿಯೆ ಆರಂಭಕ್ಕೂ ಮೊದಲು ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕಿದೆ. ಆದರೆ, ಈ ಘಟಕಗಳನ್ನು ಎಲ್ಲಿ ಸ್ಥಾಪಿಸಬೇಕೆಂಬುದೇ ದೊಡ್ಡ ಸಮಸ್ಯೆಯಾಗಿದೆ. ಗಂಗಾ ನದಿಯ ಇಕ್ಕೆಲಗಳಲ್ಲಿ ಸಮತಟ್ಟಾದ ಪ್ರದೇಶಗಳೆಲ್ಲವೂ ಜನ ವಸತಿಯಿಂದ ತುಂಬಿ ಹೋಗಿವೆ. ಬಹುತೇಕ ಕಡೆ ನದಿಯ ಪಾತ್ರಗಳಲ್ಲಿ ಬೆಟ್ಟ ಗುಡ್ಡ, ಕಾಡು, ಕಣಿವೆ ಕಂದರಗಳಿವೆ.

ಹಾಗಾಗಿ, ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಸ್ಥಳ ಗುರುತಿಸುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಪ್ರಧಾನಿಗೆ ಬುಧವಾರದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟರು.

ಸಭೆಯ ಅಂತಿಮ ನಿಮಿಷಗಳಲ್ಲಿ ಮಾತನಾಡಿದ ಪ್ರಧಾನಿ, ಈ ಬಗ್ಗೆ ವಿವರವಾಗಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

2014ರ ಲೋಕಸಭಾ ಚುನಾವಣೆ ವೇಳೆ, ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಯೋಜನೆಗಳಲ್ಲಿ ಗಂಗಾ ನದಿ ನೈರ್ಮಲ್ಯೀಕರಣವೂ ಒಂದು. ಹಾಗಾಗಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಸುಮಾರು 20,000 ಕೋಟಿ ವೆಚ್ಛದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ದೇಶದ ನಾಲ್ಕು ಹೈಕೋರ್ಟ್ ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳು

ದೇಶದ ನಾಲ್ಕು ಹೈಕೋರ್ಟ್ ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳು

ನವದೆಹಲಿ:
ದೇಶದ ನಾಲ್ಕು ಪ್ರಮುಖ ಹೈಕೋರ್ಟ್ ಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ.

ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ಅಧಿಕಾರ ಸ್ವೀಕರಿಸಿದ್ದು, ಇವರನ್ನು ಸೇರಿಸಿ ಮದ್ರಾಸ್ ಹೈಕೋರ್ಟ್ ನಲ್ಲೇ ಒಟ್ಟು ಆರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಮುಂಬಯಿ, ದಿಲ್ಲಿ, ಕೋಲ್ಕತ್ತಾ ಹಾಗೂ ಚೆನ್ನೈ ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳಾಗಿ ಮಹಿಳೆಯರ ನೇಮಕ ದಾಖಲೆ ಸೃಷ್ಠಿಸಿದೆ.

2012 ರಲ್ಲಿ ಮಂಜುಳಾ ಚೆಲ್ಲರ್ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್ ಗೆ ನೇಮಕಗೊಂಡಿದ್ದರು. ನಂತರ ಎಂ ತಹಿಲ್ರಮಣಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ನ್ಯಾಯಮೂರ್ತಿ ಜಿ ರೋಹಿಣಿ 2014 ರಲ್ಲಿ ದಿಲ್ಲಿ ಹೈಕೋರ್ಟ್ ನ ನ್ಯಾಯ ಮೂರ್ತಿಯಾಗಿ ಆಯ್ಕೆಯಾಗಿದ್ದರು, ಎರಡನೇ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್ ಸೇವೆ ಸಲ್ಲಿಸುತ್ತಿದ್ದಾರೆ.
ಕೋಲ್ಕತ್ತಾದಲ್ಲಿ ಪ್ರಭಾರಿ ಮುಖ್ಯ ನ್ಯಾಯ ಮೂರ್ತಿಯಾಗಿ ನಿಷಿತಾ ನಿರ್ಮಲ್ ಸೇವೆ ಸಲ್ಲಿಸುತ್ತಿದ್ದಾರೆ.