ಮಂಗಳವಾರ, ಏಪ್ರಿಲ್ 11, 2017

ವಿಶ್ವ ಹಾಕಿ ಲೀಗ್ ರೌಂಡ್-2: ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವಿಶ್ವ ಹಾಕಿ ಲೀಗ್ ರೌಂಡ್-2 : ಭಾರತದ ವನಿತೆಯರ ಮುಡಿಗೆ ಪ್ರಶಸ್ತಿ

ವೆಸ್ಟ್ ವ್ಯಾಂಕೊವರ್, ಏಪ್ರಿಲ್ 11 : ಸವಿತಾ ಪೂನಿಯಾ ಅವರ ಮನಮೋಹಕ ಆಟದಿಂದ ಭಾರತ ಮಹಿಳಾ ತಂಡ ವಿಶ್ವ ಹಾಕಿ ಲೀಗ್ ರೌಂಡ್-2 ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿಯಿತು.

ಸೋಮವಾರ ನಡೆದ ಫೈನಲ್ ಹಣಾಹಣಿಯ ಶೂಟೌಟ್ ನಲ್ಲಿ ಭಾರತ ತಂಡ 3-1 ಗೋಲುಗಳಿಂದ ಬಲಿಷ್ಠ ಚಿಲಿ ತಂಡದ ಗೆಲುವಿನ ನಗೆ ಬೀರಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದರಿಂದ ಶೂಟೌಟ್ ಮೊರೆ ಹೋಗಲಾಗಿತ್ತು. ಈ ಅವಕಾಶದಲ್ಲಿ ಭಾರತದ ವನಿತೆಯರು ಪ್ರಾಬಲ್ಯ ಮೆರೆದರು.

ಈ ಗೆಲುವಿನೊಂದಿಗೆ ರಾಣಿ ರಾಂಪಾಲ್ ಪಡೆ ಮುಂಬರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಗೆ ಅರ್ಹತೆ ಗಳಿಸಿದೆ. ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬೆಲಾರಸ್ ತಂಡವನ್ನು ಮಣಿಸಿ ವಿಶ್ವಾಸದಿಂದ ಬೀಗುತ್ತಿದ್ದ ಭಾರತದ ಆಟಗಾರ್ತಿಯರು ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾದರು.[ ಚಕ್ ದೇ ಇಂಡಿಯಾ : ಭಾರತದ ವನಿತೆಯರು ಏಷ್ಯನ್ ಚಾಂಪಿಯನ್ಸ್ ]

ಬಲಿಷ್ಠ ಆಟಗಾರ್ತಿಯರ ಕಣಜ ಅನಿಸಿದ್ದ ಚಿಲಿ ತಂಡ ಐದನೇ ನಿಮಿಷದಲ್ಲೇ ಖಾತೆ ತೆರೆದು ಸುಲಭ ಗೆಲುವಿನ ಕನಸು ಕಂಡಿತ್ತು.
ಮರಿಯಾ ಮಲ್ಡೊ ನಾಡೊ ಚೆಂಡನ್ನು ಗುರಿ ಮುಟ್ಟಿಸಿ ಚಿಲಿ ಸಂಭ್ರಮಕ್ಕೆ ಕಾರಣರಾದರು.

ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿಸಿದ ಭಾರತ ತಂಡ 22ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಆದರೆ ಈ ಅವಕಾಶದಲ್ಲಿ ಭಾರತದ ಆಟಗಾರ್ತಿ ಬಾರಿಸಿದ ಚೆಂಡನ್ನು ಚಿಲಿ ತಂಡದ ಗೋಲ್ ಕೀಪರ್ ಕ್ಲಾಡಿಯಾ ಶುಲರ್ ಚೆಂಡನ್ನು ಗೋಲಿನತ್ತ ಬಿಡದೆ ತಡೆದರು.

ಹೀಗಾಗಿ 40ನೇ ನಿಮಿಷದವರೆಗೂ ಚಿಲಿ ತಂಡ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 41ನೇ ನಿಮಿಷ ದಲ್ಲಿ ಅನುಪಾ ಬಾರ್ಲಾ ಮೋಡಿ ಮಾಡಿದರು.

ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸುತ್ತಿದ್ದಂತೆ ಭಾರತದ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.

ಮೂರನೇ ಕ್ವಾರ್ಟರ್ ನ ಅಂತ್ಯಕ್ಕೆ ಪಂದ್ಯ 1-1ರಲ್ಲಿ ಸಮಬಲವಾಗಿದ್ದರಿಂದ ನಾಲ್ಕನೇ ಕ್ವಾರ್ಟರ್ ನ ಆಟ ಉಭಯ ತಂಡಗಳ ಪಾಲಿಗೂ ಮಹತ್ವದ್ದೆನಿಸಿತ್ತು.

ಈ ಕ್ವಾರ್ಟರ್ ನಲ್ಲಿ ಭಾರತದ ಸ್ಟ್ರೈಕರ್ ರಾಣಿ ಬಾರಿಸಿದ ಬ್ಯಾಕ್ ಹ್ಯಾಂಡ್ ಹೊಡೆತ ವನ್ನು ಚಿಲಿ ಗೋಲ್ಕೀಪರ್ ಕ್ಲಾಡಿಯಾ ಮನಮೋಹಕ ರೀತಿಯಲ್ಲಿ ತಡೆದು ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಸ್ವತಂತ್ರ ಪೂರ್ವದ ಸಾಮಾಜಿಕ,ಧಾರ್ಮಿಕ,ಚಳುವಳಿ

*🌕ಸ್ವತಂತ್ರ ಪೂರ್ವದಲ್ಲಿ ಸ್ಥಾಪನೆಗೊಂಡ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸುಧಾರಣಾ ಸಂಸ್ಥೆಗಳು, ಚಳುವಳಿಗಳು :*

🌕ಸ್ವತಂತ್ರ ಪೂರ್ವದ ಸುಧಾರಣಾ ಸಂಸ್ಥೆಗಳು ಮತ್ತು ಚಳುವಳಿಗಳು :

1) ಆತ್ಮೀಯ ಸಭಾ (1815) - ರಾಜ ರಾಮ್ ಮೋಹನ್ ರಾಯ್.

2) ಬ್ರಹ್ಮ ಸಮಾಜ (1828) - ರಾಜ ರಾಮ್ ಮೋಹನ್ ರಾಯ್.

3) ಸಾಧಾರಣ ಬ್ರಹ್ಮಸಮಾಜ - ಆನಂದ್ ಮೋಹನ್ ಬೋಸ್

4) ಇಂಡಿಯನ್ ನ್ಯಾಷನಲ್ ಸೋಷಿಯಲ್ ಕಾನ್ಫರೇನ್ಸ್ - ಎಮ್.ಜಿ ರಾನಡೆ.

5) ತತ್ವಭೋಧಿನಿ ಸಭಾ (1839) (ನಂತರ 1842ರಲ್ಲಿ ಬ್ರಹ್ಮ ಸಮಾಜದಲ್ಲಿ ವಿಲೀನಗೊಂಡಿತು• ಮಹರ್ಷಿ ದೇವೇಂದ್ರನಾಥ ಟ್ಯಾಗೋರ್.

6) ಸತ್ಯ ಶೋಧಕ ಸಮಾಜ (1873)  ಜ್ಯೋತಿರಾವ್ ಫುಲೆ (ಜಾತಿ ಶೋಷಣೆಯ ವಿರುದ್ಧ ಹೋರಾಟ).

7) ಶ್ರೀ ನಾರಾಯಣ ಧರ್ಮ ಪ್ರತಿಫಲನ - ಯೋಗಮಾ ಶ್ರೀ ನಾರಾಯಣ ಗುರು (ಜಾತಿ ಶೋಷಣೆಯ ವಿರುದ್ಧ ಹೋರಾಟ)

8) ಸೌಥ್ ಇಂಡಿಯನ್ ಲಿಬರಲ್ ಫೆಡರೇಷನ್ (ನಂತರ ಜಸ್ಟೀಸ್ ಪಾರ್ಟಿ & ದ್ರಾವಿಡ ಕಳಗಂ ಆಯಿತು) - ಟಿ ತ್ಯಾಗರಾಜ & ಟಿ.ಎಮ್ ನಾಯರ್ (ಆತ್ಮ ಗೌರವ).

9) ಹರಿಜನ ಸೇವಕ್ ಸಂಘ್ - ಮಹಾತ್ಮ ಗಾಂಧಿ.

10) ಪ್ರಾರ್ಥನಾ ಸಮಾಜ (1867)  ಆತ್ಮ ರಾಮ್ ಪಾಂಡುರಂಗ.

11) ಆರ್ಯ ಸಮಾಜ (1875) ಸ್ವಾಮಿ ದಯಾನಂದ.

12) ಹಿಂದೂ ಧರ್ಮ ಸಂಗ್ರಕ್ಷಣಿ  ಸಭಾ (1893 ನಾಸಿಕ್ ನಲ್ಲಿ) ಚಾಪೆಕರ್ ಸಹೋದರರು - ದಾಮೋದರ & ಬಾಲಕೃಷ್ಣ.

13) ಅಭಿನವ ಭಾರತ -ವಿ.ಡಿ. ಸಾವರ್ಕರ್.

14) ನ್ಯೂ ಇಂಡಿಯಾ ಅಸೋಸಿಯೇಶನ- ವಿ.ಡಿ. ಸಾವರ್ಕರ್.

15) ಅನುಶೀಲನ ಸಮಿತಿ - ಅರಬಿಂದೋ ಘೋಷ್ ಬರೀಂದ್ರ ಕುಮಾರ್ ಘೋಷ್, ಬಿ.ಪಿ ಮಿತ್ರ, ಅಭಿನಾಷ್ ಭಟ್ಟಾಚಾರ್ಯ & ಭೂಪೇಂದ್ರ ದತ್ತ.

16) ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿ (1905) - ಗೋಪಾಲ ಕೃಷ್ಣ ಗೋಖಲೆ (ನೈಟ್ ಹುಡ್ ಗೌರವವನ್ನು ತಿರಸ್ಕರಿಸಿದ್ದರು).

17) ಆಂಗ್ಲೊ-ಒರಿಯಂಟಲ್ ಡಿಫೆನ್ಸ್ ಅಸೋಸಿಯೇಶನ್ - ಸಯ್ಯಿದ್ ಅಹ್ಮದ್ ಖಾನ್

18) ಬಹಿಷ್ಕ್ರಿತ ಹಿತಕರ್ಣಿ ಸಭಾ (1924), ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ -ಬಿ ಅಂಬೇಡ್ಕರ್.

19) ಅಖಿಲ ಭಾರತೀಯ ದಲಿತ ವರ್ಗ ಸಭಾ -ಬಿ.ಆರ್ ಅಂಬೇಡ್ಕರ್.

20) ಪೆಟ್ರೋಯಿಟಿಕ್  ಅಸೋಸಿಯೇಶನ-
ಸಯ್ಯಿದ್ ಅಹ್ಮದ್ ಖಾನ್ ಮುಹಮ್ಮದ್.

ಸೋಮವಾರ, ಏಪ್ರಿಲ್ 10, 2017

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಸಿಗಲ್ಲ ಸರ್ಕಾರಿ ನೌಕರಿ..!

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಸಿಗಲ್ಲ ಸರ್ಕಾರಿ ನೌಕರಿ..!

ಅಸ್ಸಾಂನ ಸರ್ಬಾನಂದ್ ಸೋನೊವಾಲ್ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಹೊಸ ಕರಡು ಸಿದ್ಧಪಡಿಸಿದೆ. ಈ ಜನಸಂಖ್ಯೆ ನೀತಿ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಪಾಲಕರಿಗೆ ಸರ್ಕಾರಿ ನೌಕರಿ ಸಿಗುವುದಿಲ್ಲ. ಹಾಗೆ ಪದವಿಯವರೆಗೆ ವಿದ್ಯಾರ್ಥಿನಿಯರಿಗೆ ನೀಡಲಾಗ್ತಾ ಇರುವ ಉಚಿತ ಶಿಕ್ಷಣ ಸಿಗುವುದಿಲ್ಲ.

ಅಸ್ಸಾಂನ ಆರೋಗ್ಯ ಸಚಿವ ಹಿಮಂತ್ ವಿಶ್ವ ಶರ್ಮಾ ಈ ವಿಷಯ ತಿಳಿಸಿದ್ದಾರೆ. ಇದು ಜನಸಂಖ್ಯಾ ನೀತಿಯಾಗಿದ್ದು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ನೌಕರಿ ಸಿಗುವುದಿಲ್ಲ. ಕೆಲಸ ಸಿಕ್ಕ ನಂತ್ರ ನೌಕರಿಯ ಅವಧಿ ಮುಗಿಯುವವರೆಗೂ ಇದನ್ನು ಪರಿಪಾಲಿಸಬೇಕಾಗುತ್ತದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ಟ್ರ್ಯಾಕ್ಟರ್, ವಸತಿ, ಸರ್ಕಾರಿ ಯೋಜನೆಗಳನ್ನು ಪಡೆಯಲೂ ಈ ದ್ವಿಸಂತಾನ ನೀತಿ ಅನ್ವಯಿಸಲಿದೆ. ರಾಜ್ಯ ಚುನಾವಣಾ ಆಯೋಗ ಅಡಿಯಲ್ಲಿ ನಡೆಯುವ ಪಂಚಾಯತಿ, ಪುರಸಭೆ ಅಧ್ಯಕ್ಷರು, ಸದಸ್ಯರ ಚುನಾವಣೆಗೂ ಈ ನೀತಿ ಅನ್ವಯವಾಗಲಿದೆ.

'ದಲೈ ಲಾಮಾ' ಉತ್ತರಾಧಿಕಾರಿ ನೇಮಕಕ್ಕೆ ಚೀನಾ ಒಪ್ಪಿಗೆ ಅತ್ಯಗತ್ಯ

'ದಲೈ ಲಾಮಾ ಉತ್ತರಾಧಿಕಾರಿ ನೇಮಕಕ್ಕೆ ಚೀನಾ ಒಪ್ಪಿಗೆ ಅತ್ಯಗತ್ಯ'

ಬೀಜಿಂಗ್: ದಲೈ ಲಾಮಾ ಅವರ ಉತ್ತರಾಧಿಕಾರಿ ಯಾರಾಗಬೇಕೆಂದು ಚೀನಾ ನಿರ್ಧರಿಸುವುದಿಲ್ಲ. ಆದರೆ ಟಿಬೆಟಿಯನ್ನರ ಮುಂದಿನ ಪರಮೋಚ್ಚ ಧರ್ಮಗುರು  ಆಗುವವರು ಚೀನಾದ ಒಪ್ಪಿಗೆ ಪಡೆದಿರಲೇಬೇಕು ಎಂದು  ಹೇಳುವ ಮೂಲಕ ಚೀನಾದ ಚಿಂತಕರ ಚಾವಡಿಯು ದಲೈ ಲಾಮಾ ಅವರಿಗೆ ತಿರುಗೇಟು ನೀಡಿದೆ.
  ಚೀನಾದ ಕ್ವಿಂಗ್ ರಾಜಮನೆತನ ರೂಪಿಸಿರುವ ನಿಯಮಾವಳಿಗಳನ್ನು ಆಧರಿಸಿ ಟಿಬೆಟ್‌ನ ಹೊಸ ಧರ್ಮಗುರು ನೇಮಕಕ್ಕೆ ಅನುಮೋದನೆ ನೀಡುವ ಅಧಿಕಾರ ಸರ್ಕಾರಕ್ಕಿದೆ ಎಂದು ಶಾಂಘೈನ ತೊಂಗ್‌ಜಿ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಸಹ ನಿರ್ದೇಶಕ ವಾಂಗ್ ದೆಹುವಾ ಅವರು ಹೇಳಿದ್ದಾರೆ.   ಶತಮಾನದಷ್ಟು ಹಳೆಯ ಸಂಪ್ರದಾಯವನ್ನು ಬದಲಾಯಿಸುತ್ತಿರುವುದಾಗಿ ದಲೈಲಾಮಾ ಅವರು ಹೇಳುತ್ತಿರುವುದು ಹಾಸ್ಯಾಸ್ಪದ. ಏಕೆಂದರೆ ಈ ಸಂಪ್ರದಾಯವನ್ನು 1959ರಲ್ಲೇ  ಬದಲಿಸಲಾಗಿದೆ.
  ಟಿಬೆಟಿಯನ್ನರ ಇಚ್ಛೆಗೆ ಅನುಸಾರವಾಗಿ, ಚೀನಾದ ಕಾನೂನು ಹಾಗೂ ಐತಿಹಾಸಿಕ ನಿಯಮಗಳ ಪ್ರಕಾರ ದಲೈ ಲಾಮಾ ಅವರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದರೆ ಅದನ್ನು ಬೆಂಬಲಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.   ತಮ್ಮ ನಂತರ ಯಾರು ಎಂಬುದನ್ನು ಚೀನಾ ನಿರ್ಧರಿಸುವಂತಿಲ್ಲ ಎಂದು ಚೀನಾ ಗಡಿಗೆ ಸಮೀಪದಲ್ಲಿರುವ  ತವಾಂಗ್‌ನಲ್ಲಿ ದಲೈ ಲಾಮಾ ಅವರು ಶನಿವಾರ ಹೇಳಿದ್ದರು. ಈ ಮೂಲಕ ಚೀನಾಕ್ಕೆ ತಿರುಗೇಟು ನೀಡಿದ್ದರು.    ಫುಡನ್ ವಿಶ್ವವಿದ್ಯಾಲಯದ  ಅಮೆರಿಕ ಅಧ್ಯಯನ ವಿಭಾಗದ ಡೀನ್ ಶೆನ್ ಡಿಂಗ್ಲಿ ಅವರು ಕೂಡಾ ಚೀನಾದ ಅನುಮೋದನೆ ಬೇಕು ಎಂದು ಪ್ರತಿಪಾದಿಸಿದ್ದಾರೆ.

ಕೊರಿಯಾ ಪರ್ಯಾಯ ದ್ವೀಪದತ್ತ ಅಮೇರಿಕದ ನೌಕಾಪಡೆಯ ದಾಳಿ ತಂಡ

ಕೊರಿಯಾ ಪರ್ಯಾಯ ದ್ವೀಪದತ್ತ ಅಮೆರಿಕದ ನೌಕಾಪಡೆಯ ದಾಳಿ ತಂಡ

ವಾಷಿಂಗ್ಟನ್, ಎ.9: ಉತ್ತರ ಕೊರಿಯಾ ನಡೆಸುತ್ತಿರುವ ‘ಭಂಡ ಧೈರ್ಯದ’ ಪರಮಾಣು ಅಸ್ತ್ರ ಕಾರ್ಯಕ್ರಮಕ್ಕೆ ಎಚ್ಚರಿಕೆ ನೀಡುವ ಕ್ರಮವಾಗಿ ತನ್ನ ದಾಳಿ ತಂಡವನ್ನು ಕೊರಿಯಾ ಪರ್ಯಾಯ ದ್ವೀಪದತ್ತ ಕಳುಹಿಸಿರುವುದಾಗಿ ಅಮೆರಿಕದ ನೌಕಾಪಡೆ ತಿಳಿಸಿದೆ.

ಅಮೆರಿಕದ ಈ ಕ್ರಮದಿಂದ ಕೊರಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಉದ್ವಿಗ್ನತೆ ತಲೆದೋರಲಿದೆ. ಸಿರಿಯಾದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿರುವುದು ಪರೋಕ್ಷವಾಗಿ ಉತ್ತರಕೊರಿಯಾಕ್ಕೆ ನೀಡಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಸಿದ್ದತೆಯನ್ನು ಕಾಯ್ದುಕೊಳ್ಳಲು ಎಚ್ಚರಿಕೆಯ ಕ್ರಮವಾಗಿ ಕಾರ್ಲ್ ವಿನ್ಸನ್ ದಾಳಿ ತಂಡವನ್ನು ಉತ್ತರದತ್ತ ಸಾಗಲು ಅಮೆರಿಕದ ಪೆಸಿಫಿಕ್ ಕಮಾಂಡ್ ಆದೇಶಿಸಿದೆ ಎಂದು ಅಮೆರಿಕದ ಪೆಸಿಫಿಕ್ ಕಮಾಂಡ್‌ನ ವಕ್ತಾರ ಕಮಾಂಡರ್ ಡೇವ್ ಬೆನ್‌ಹ್ಯಾಮ್ ತಿಳಿಸಿದ್ದಾರೆ.

ಉತ್ತರ ಕೊರಿಯಾ ಈ ವಲಯದಲ್ಲಿ ಭದ್ರತೆಗೆ ಎದುರಾಗಿರುವ ಅಗ್ರ ಬೆದರಿಕೆ ಎಂದವರು ವಿಶ್ಲೇಷಿಸಿದ್ದಾರೆ. ಅಮೆರಿಕ ನೌಕಾಪಡೆಯ ದಾಳಿ ತಂಡ ಅತ್ಯಾಧುನಿಕ ಯುಎಸ್‌ಎಸ್ ಕಾರ್ಲ್ ವಿನ್ಸನ್ ಯುದ್ದವಿಮಾನದಿಂದ ಸುಸಜ್ಜಿತವಾಗಿದೆ. ಸಿಂಗಾಪುರದಿಂದ ಇದೀಗ ಈ ದಾಳಿ ತಂಡ ಪಶ್ಚಿಮ ಪೆಸಿಫಿಕ್ ಪ್ರದೇಶದತ್ತ ಸಾಗುತ್ತಿದೆ.

ಸಿರಿಯಾದ ಮೇಲೆ ಅಮೆರಿಕ ನಡೆಸಿದ್ದ ದಾಳಿಯನ್ನು ‘ಸಹಿಸಲಾಗದ ಆಕ್ರಮಣ’ ಎಂದು ದೂಷಿಸಿದ್ದ ಉತ್ತರ ಕೊರಿಯಾ, ಉತ್ತರ ಕೊರಿಯಾವು ಪರಮಾಣು ಶಕ್ತ ರಾಷ್ಟ್ರವಾಗಲು ಬಯಸುತ್ತಿರುವುದನ್ನು ಈ ಘಟನೆ ಸಮರ್ಥಿಸುತ್ತಿದೆ ಎಂದು ಹೇಳಿಕೆ ನೀಡಿತ್ತು.

ಚೀನಾಕ್ಕೆ ಕತ್ತೆ ರಫ್ತು ಮಾಡಲಿರುವ ಪಾಕ್

ಚೀನಾಕ್ಕೆ ಕತ್ತೆ ರಫ್ತು ಮಾಡಲಿರುವ ಪಾಕ್

ಪೇಷಾವರ, ಎ.9: ಒಂದು ಬಿಲಿಯನ್ ರೂಪಾಯಿ ಬಂಡವಾಳದ ‘ಕತ್ತೆ ಅಭಿವೃದ್ಧಿ ಕಾರ್ಯಕ್ರಮ‘ದಲ್ಲಿ ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡಲು ಪಾಕಿಸ್ತಾನ ಚಿಂತನೆ ನಡೆಸಿದೆ.

ಕತ್ತೆಯ ಚರ್ಮವನ್ನು ಔಷಧ ತಯಾರಿಕೆಗೆ ಬಳಸಲಾಗುವ ಕಾರಣ ಕತ್ತೆಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ವಾಯುವ್ಯ ಪಾಕಿಸ್ತಾನದ ಖೈಬರ್- ಫಖ್ತೂನ್‌ಕ್ವ ಪ್ರದೇಶದಲ್ಲಿ ಕತ್ತೆ ಅಭಿವೃದ್ಧಿ ಕಾರ್ಯಕ್ರಮದಡಿ ಚೀನಾದಿಂದ ಬಂಡವಾಳ ಆಕರ್ಷಿಸಲು ಪಾಕಿಸ್ತಾನ ಯೋಜನೆ ರೂಪಿಸಿದೆ.

46 ಬಿಲಿಯನ್ ಡಾಲರ್ ವೆಚ್ಚದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಚೀನಾ-ಪಾಕಿಸ್ತಾನ ಆರ್ಥಿಕ ವಲಯ ಯೋಜನೆಯಡಿ ಕತ್ತೆಗಳನ್ನು ಅಭಿವೃದ್ಧಿಗೊಳಿಸಿ ರಫ್ತು ಮಾಡುವ ಯೋಜನೆ ರೂಪಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕತ್ತೆಗಳ ವಂಶಾಭಿವೃದ್ಧಿಗೊಳಿಸುವ ಮತ್ತು ಕತ್ತೆಗಳ ಕಾರ್ಯನಿರ್ವಹಣೆ ಹೆಚ್ಚಿಸುವ ಕಾರ್ಯ ನಡೆಸಲಾಗುವುದು ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

26,684 ಕೋ.ರೂ.ಮೌಲ್ಯದ ಬೀಫ್ ರಫ್ತು ಮಾಡಿದ ಭಾರತ


26,684 ಕೋ. ರೂ. ಮೌಲ್ಯದ ಬೀಫ್ ರಫ್ತು ಮಾಡಿದ ಭಾರತ

ಹೊಸದಿಲ್ಲಿ, ಮಾ.27: ಕಳೆದ (2015-16)ರ ಆರ್ಥಿಕ ವರ್ಷದಲ್ಲಿ ಭಾರತ 26,684 ಕೋಟಿ ರೂ. ಮೊತ್ತದ ಕೋಣದ ಮಾಂಸವನ್ನು ರಫ್ತು ಮಾಡಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

  ವಿಯೆಟ್ನಾಮ್, ಮಲೇಶ್ಯಾ, ಈಜಿಪ್ಟ್, ಇಂಡೋನೇಶಿಯಾ ಮತ್ತು ಸೌದಿ ಅರೆಬಿಯಾ ದೇಶಗಳಿಗೆ ಭಾರತ ಮಾಂಸ ರಪ್ತು ಮಾಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

  ಹಾಲಿ ಇರುವ ರಫ್ತು ನೀತಿಯ ಪ್ರಕಾರ ದನದ ಮಾಂಸವನ್ನು ರಫ್ತು ಮಾಡುವುದಕ್ಕೆ ನಿಷೇಧವಿದೆ. ಕೋಣದ ಮೂಳೆರಹಿತ ಮಾಂಸ, ಆಡು, ಕುರಿ ಮತ್ತು ಪಕ್ಷಿಗಳ ಮಾಂಸ ರಪ್ತು ಮಾಡಲು ಅವಕಾಶವಿದೆ. ಈ ವರ್ಷದ ಜನವರಿಯಿಂದ ಎಪ್ರಿಲ್ ವರೆಗಿನ ಅವಧಿಯಲ್ಲಿ 2.82 ಕೋಟಿ ರೂ.
ಸಂಸ್ಕರಿಸಿದ ಮಾಂಸ ರಫ್ತು ಮಾಡಲಾಗಿದೆ. ಇದೇ ಅವಧಿಯಲ್ಲಿ 727.16 ಕೋಟಿ ರೂ. ಮೌಲ್ಯದ ಆಡು/ಕುರಿ/ ಮಾಂಸ ಮತ್ತು 22,073.5 ಕೋಟಿ ರೂ. ಮೌಲ್ಯದ ಹಕ್ಕಿಗಳ ಮಾಂಸವನ್ನು ರಫ್ತು ಮಾಡಲಾಗಿದೆ ಎಂದವರು ತಿಳಿಸಿದರು.

ಭಾರತಕ್ಕೆ ಬಾಂಗ್ಲಾವನ್ನು ಮಾರಿದ ಹಸೀನಾ

ಅಧಿಕಾರಕ್ಕೆ ಅಂಟಿಕೊಳ್ಳುವ ಆಸೆಯಿಂದ ಬಾಂಗ್ಲಾವನ್ನು ಭಾರತಕ್ಕೆ ಮಾರುತ್ತಿರುವ ಹಸೀನಾ : ಖಾಲಿದಾ ಝಿಯಾ ಆರೋಪ

ಢಾಕಾ, ಎ.9: ಜೀವಮಾನವಿಡೀ ಅಧಿಕಾರದಲ್ಲಿ ಉಳಿಯಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾವನ್ನು ಭಾರತಕ್ಕೆ ಮಾರುತ್ತಿದ್ದಾರೆ ಎಂದು ಬಾಂಗ್ಲಾದ ವಿಪಕ್ಷ ನಾಯಕಿ ಖಾಲಿದಾ ಝಿಯಾ ಆರೋಪಿಸಿದ್ದಾರೆ.

ಹಸೀನಾ ಜೀವಮಾನವಿಡೀ ಅಧಿಕಾರದಲ್ಲಿರಬೇಕೆಂದು ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಹಲವು ಕೃತ್ಯಗಳನ್ನು ನಡೆಸಿದ್ದಾರೆ. ದೇಶಕ್ಕೆ ಯಾವುದನ್ನೂ ಉಳಿಸದೆ ಎಲ್ಲವನ್ನೂ ಮಾರಿಬಿಟ್ಟಿದ್ದಾರೆ . ಆದರೆ ದೇಶ ಮಾರಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಜಾಗತಿಕ ಇತಿಹಾಸ ತಿಳಿಸುತ್ತದೆ ಎಂದು ಖಾಲಿದಾ ಹೇಳಿದರು.

ಭಾರತ ಮತ್ತು ಬಾಂಗ್ಲಾ ದೇಶಗಳು 22 ಒಪ್ಪಂದಕ್ಕೆ ಸಹಿ ಹಾಕಿದ ಕೆಲ ಗಂಟೆಗಳ ಬಳಿಕ ಬಾಂಗ್ಲಾದ ಸಂಸತ್ ಭವನದ ಮುಂಭಾಗದ ಪಕ್ಷದ ಸಭೆಯೊಂದರಲ್ಲಿ ಮಾಜಿ ಪ್ರಧಾನಿ, ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ)ಯ ಅಧ್ಯಕ್ಷೆ ಖಾಲಿದಾ ಮಾತನಾಡಿದರು.

ಭಾರತದೊಂದಿಗೆ ರಕ್ಷಣಾ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕುವುದು ಬಾಂಗ್ಲಾಕ್ಕೆ ಮತ್ತು ದೇಶದ ಜನತೆಗೆ ಎಸಗಿರುವ ದ್ರೋಹವಾಗಿದೆ . ಈ ಬೆಳವಣಿಗೆಯಿಂದ ಕೆ ನೀಬಾಂಗ್ಲಾದ ಭದ್ರತಾ ರಹಸ್ಯವನ್ನು ಭಾರತಕ್ಕೆ ಬಿಟ್ಟುಕೊಟ್ಟಂತಾಗುತ್ತದೆ ಎಂದು ಶನಿವಾರ ಬಿಎನ್‌ಪಿಯ ವಕ್ತಾರ ರುಹುಲ್ ಕಬೀರ್ ರಿಝ್ವಿ ಹೇಳಿಡಿದ್ದರು. ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ದೇಶದ ಭದ್ರತೆ ಮತ್ತು ಅಸ್ತಿತ್ವವನ್ನು ಪಣಕ್ಕೆ ಇಟ್ಟಂತಾಗಿದೆ ಎಂದವರು ಹೇಳಿದ್ದರು.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಆಡಳಿತ ಪಕ್ಷವಾದ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಮತ್ತು ರಸ್ತೆ ಸಾರಿಗೆ ಸಚಿವ ಒಬೈದುಲ್ ಖಾದರ್, ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಬಗ್ಗೆ ಸಂಪೂರ್ಣ ತಿಳಿದುಕೊಳ್ಳದೆ ಬಿಎನ್‌ಪಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಇದು ತಂತ್ರಜ್ಞಾನದ ಯುಗ.

ಇಲ್ಲಿ ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.

2014ರ ಮಹಾಚುನಾವಣೆಯನ್ನು ಬಹಿಷ್ಕರಿಸಿದ್ದ ಬಿಎನ್‌ಪಿ, ಆ ಬಳಿಕ ದೇಶದ ರಾಜಕೀಯ ರಂಗದಲ್ಲಿ ತನ್ನ ಇರುವಿಕೆಯನ್ನು ಪ್ರಸ್ತುತಪಡಿಸಲು ಹೆಣಗಾಡುತ್ತಿದೆ. ಇದೀಗ ಭಾರತ-ಬಾಂಗ್ಲಾ ಒಪ್ಪಂದದ ವಿಷಯವನ್ನು ವಿವಾದವನ್ನಾಗಿಸುವ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು , ಈ ಮೂಲಕ ಪಕ್ಷದ ಕಾರ್ಯಕರ್ತರ ಮತ್ತು ಬೆಂಬಲಿಗರ ಮನೋಬಲ ಹೆಚ್ಚಿಸಲು ಬಯಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ವಿಷಯದಲ್ಲಿ ಬಿಎನ್‌ಪಿ ದ್ವಿಮುಖ ಧೋರಣೆ ತಳೆಯುತ್ತಿದೆ ಎಂದು ಇತ್ತೀಚೆಗೆ ಆರೋಪಿಸಿದ್ದ ಪ್ರಧಾನಿ ಶೇಖ್ ಹಸೀನಾ, ಭಾರತಕ್ಕೆ ಗ್ಯಾಸ್ ಮಾರಾಟ ಮಾಡುವ ಆಶ್ವಾಸನೆ ನೀಡಿ 2001ರಲ್ಲಿ ಖಾಲಿದಾ ಝಿಯಾ ಅಧಿಕಾರಕ್ಕೆ ಬಂದಿದ್ದರು. ಬಾಂಗ್ಲಾದೇಶದ ಹಿತಾಸಕ್ತಿಯನ್ನು ಕಡೆಗಣಿಸಿದ ಇಂತವರ ಬಾಯಲ್ಲಿ ಭಾರತ ವಿರೋಧಿ ಪದಗಳು ಶೋಭಿಸುವುದಿಲ್ಲ ಎಂದು ಟೀಕಿಸಿದ್ದರು.

ತನ್ನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರುತ್ತಿರುವ ಝಿಯಾರಿಗೆ ನ್ಯಾಯಾಲಯದಲ್ಲಿ ಹಾಜರಾಗಲೂ ಧೈರ್ಯ ಇಲ್ಲ ಎಂದು ಹಸೀನಾ ಟೀಕಿಸಿದ್ದರು. ಚಾರಿಟೇಬಲ್ ಟ್ರಸ್ಟ್‌ನ ಹೆಸರಲ್ಲಿ ಝಿಯಾ 4 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

71 ವರ್ಷದ ಝಿಯಾ ಮತ್ತು 69 ವರ್ಷದ ಹಸೀನಾರ ಮಧ್ಯೆ ತೀವ್ರ ರಾಜಕೀಯ ವೈಷಮ್ಯವಿದ್ದು ‘ಕಾದಾಡುವ ಬೇಗಂಗಳು’ ಎಂದೇ ಇವರು ಹೆಸರಾಗಿದ್ದಾರೆ.

ಈಜಿಪ್ಟ್ ನ ಎರಡು ಚರ್ಚಗಳಲ್ಲಿ ಸ್ಫೋಟ

ಈಜಿಪ್ಟ್‌ನ ಎರಡು ಚರ್ಚ್‌ಗಳಲ್ಲಿ ಸ್ಫೋಟ: 45 ಸಾವು

ಕೈರೊ: ಈಜಿಪ್ಟ್‌ನ ಟಂಟಾ ಮತ್ತು ಅಲೆಕ್ಸಾಂಡ್ರಿಯಾ ಪಟ್ಟಣದ ಚರ್ಚ್‌ಗಳಲ್ಲಿ ಐಎಸ್‌ ಉಗ್ರರು ಭಾನುವಾರ ನಡೆಸಿದ  ಬಾಂಬ್‌ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟು, 119ಕ್ಕೂ  ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
  ‘ಕೈರೊದಿಂದ 120 ಕಿ.ಮೀ. ದೂರದಲ್ಲಿರುವ ಟಂಟಾ ಪಟ್ಟಣದ ಮಾರ್‌ ಗರ್ಜೆಸ್‌ ಚರ್ಚ್‌ನ ಒಳಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿದ್ದು, 27ಮಂದಿ ಮೃತಪಟ್ಟು 78 ಮಂದಿ ಗಾಯಗೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   ಇದಾದ ಒಂದು ಗಂಟೆಯ ಬಳಿಕ  ಅಲೆಕ್ಸಾಂಡ್ರಿಯಾದ ಮಾನ್‌ಶಿಯಾ ಜಿಲ್ಲೆಯ ಸೇಂಟ್‌ ಮಾರ್ಕ್ಸ್‌ ಚರ್ಚ್‌ ಬಳಿ ಇನ್ನೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಪೊಲೀಸರು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.   ‘ಆತ್ಮಾಹುತಿ ದಾಳಿಕೋರನೊಬ್ಬ ಸೇಂಟ್‌ ಮಾರ್ಕ್ಸ್‌  ಚರ್ಚ್‌ನ ಒಳಗೆ ನುಗ್ಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು  ತಡೆದಾಗ ಬಾಂಬ್‌ ಸ್ಫೋಟಿಸಿಕೊಂಡಿದ್ದಾನೆ’ ಎಂದು ಪೋಲಿಸರು ತಿಳಿಸಿದ್ದಾರೆ.   ಪಾಮ್‌ ಸಂಡೆ (ಗರಿಗಳ ಭಾನುವಾರ)  ಆಚರಣೆ ಅಂಗವಾಗಿ ಪ್ರಾರ್ಥನೆ ಸಲ್ಲಿಸಲು ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ  ಚರ್ಚ್‌ಗಳಿಗೆ ಬಂದಿದ್ದರು. ಅಲೆಕ್ಸಾಂಡ್ರಿಯಾದ ಪೋಪ್‌ ಎರಡನೇ ಟವಾಡ್ರೋಸ್‌  ನೇತೃತ್ವದಲ್ಲಿ ಪಾಮ್‌ ಸಂಡೆ ಮೆರವಣಿಗೆ ನಡೆಯುವ ಕೆಲವೇ ಸಮಯದ ಮೊದಲು ಎರಡನೇ ಸ್ಫೋಟ ನಡೆದಿದೆ.   ಬಾಂಬ್‌ ಸ್ಫೋಟದಲ್ಲಿ ಟಂಟಾ ನ್ಯಾಯಾಲಯದ ಮುಖ್ಯಸ್ಥ ಸಾಮ್ಯುವೆಲ್ ಜಾರ್ಜ್‌ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಾರ್‌ ಗರ್ಜೆಸ್‌ ಚರ್ಚ್‌ನಲ್ಲಿ ಪ್ರಾರ್ಥನೆ ವೇಳೆ ವ್ಯಕ್ತಿಯೊಬ್ಬ  ಒಳಭಾಗಕ್ಕೆ ಸ್ಫೋಟಕ  ಕೊಂಡೊಯ್ದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು  ಹೇಳಿದ್ದಾರೆ.
  ಏ. 28,29 ರಂದು ಪೋಪ್‌ ಫ್ರಾನ್ಸಿಸ್‌ ಅವರ ಈಜಿಪ್ಟ್‌ ಭೇಟಿ ನಿಗದಿಯಾಗಿದ್ದು,  ಇದಕ್ಕೂ ಮೊದಲು ಈ ದಾಳಿ ನಡೆದಿದೆ. ‘ಟಂಟಾ ಪಟ್ಟಣದ ಮಸೀದಿಯೊಂದರ ಬಳಿ ಇಟ್ಟಿದ್ದ ಎರಡು ಸ್ಫೋಟಕಗಳನ್ನು ಭದ್ರತಾ ಸಿಬ್ಬಂದಿ ನಿಷ್ಕ್ರಿಯಗೊಳಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ, ಏಪ್ರಿಲ್ 9, 2017

2 ಶತಕೋಟಿ ಡಾಲರ್ ಕ್ಷಿಪಣಿ ಒಪ್ಪಂದಕ್ಕೆ ಭಾರತ - ಇಸ್ರೇಲ್ ಸಹಿ

2 ಶತಕೋಟಿ ಡಾಲರ್ ಕ್ಷಿಪಣಿ ಒಪ್ಪಂದಕ್ಕೆ ಭಾರತ-ಇಸ್ರೇಲ್ ಸಹಿ

  ಜೆರುಸಲೆಂ, ಏ.7- ಇಸ್ರೇಲ್ ಮತ್ತು ಭಾರತದ ನಡುವೆ ಎರಡು ಶತಕೋಟಿ ಡಾಲರ್ ಮೊತ್ತದ ಮಹತ್ವದ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತಕ್ಕೆ ಸುಧಾರಿತ ಮಧ್ಯಮ ಶ್ರೇಣಿಯ ಭೂಮಿಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ (ಎಂಆರ್‍ಎಸ್‍ಎಎಂ) ಪೂರೈಕೆಗಾಗಿ ಈ ಬೃಹತ್ ರಕ್ಷಣಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡಸ್ಡ್ರೀಸ್ (ಎಐಎ) ತಿಳಿಸಿದೆ.  ಭಾರತದಲ್ಲಿ ಪ್ರಥಮ ಬಾರಿಗೆ ದೇಶಿಯವಾಗಿ ಉತ್ಪಾದನೆಯಾಗುವ ವಿಮಾನಗಳನ್ನು ಕೊಂಡೊಯ್ಯವ ನೌಕೆಗೆ ಹೆಚ್ಚುವರಿಯಾಗಿ ದೂರ-ಶ್ರೇಣಿ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು (ಎಲ್‍ಆರ್‍ಎಸ್‍ಎಎಂ) ಸಹ ಇಸ್ರೇಲ್ ಸರಬರಾಜು ಮಾಡಲಿದೆ.

ಐಎಐಗೆ 1.6 ಶತಕೋಟಿ ಡಾಲರ್ ಮೌಲ್ಯದ ಹಾಗೂ ರಕ್ಷಣಾ ಬಿಡಿಭಾಗಗಳ ಪೂರೈಕೆಗಾಗಿ ಮತ್ತೊಂದು ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿ ರಫೇಲ್ ಉಳಿದ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಐಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೋಸೆಫ್ ವೀಸ್ ಜೆರುಸಲೆಂನಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.


ಈಜಿಪ್ಟ್ ನಲ್ಲಿ 3700 ವರ್ಷಗಳ ಪ್ರಾಚೀನ ಪಿರಮಿಡ್ ಪತ್ತೆ..!

ಈಜಿಪ್ಟ್'ನಲ್ಲಿ 3,700 ವರ್ಷಗಳ ಪ್ರಾಚೀನ ಪಿರಮಿಡ್ ಪತ್ತೆ..!

ಕೈರೋ, ಏ.7- ಅನೇಕ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈಜಿಪ್ಟ್ ನಲ್ಲಿ ಸುಮಾರು 3,700 ವರ್ಷಗಳಷ್ಟು ಪ್ರಾಚೀನ ಪಿರಮಿಡ್‍ನ ಅವಶೇಷಗಳು ಪತ್ತೆಯಾಗಿವೆ. ಈಜಿಪ್ಟ್‍ನ ನೈಕ್ರೊಪೊಲಿಸ್‍ನಲ್ಲಿ ಉತ್ಖನನ ನಡೆಸಿದ ತಂಡ ಇದನ್ನು ಪತ್ತೆ ಮಾಡಿದೆ ಎಂದು ಪ್ರಾಚ್ಯವಸ್ತು ಅಧಿಕಾರಿಗಳು ತಿಳಿಸಿದ್ದಾರೆ. 13ನೇ ರಾಜವಂಶಕ್ಕೆ ಸೇರಿದ ಪಿರಮಿಡ್ ಇದಾಗಿದೆ ಎಂದು ಅಂದಾಜು ಮಾಡಲಾಗಿದೆ.  ನೈಕ್ರೋಪೊಲಿಸ್‍ನಲ್ಲಿರುವ ಸ್ಲೈಫರ್ ದೊರೆಯ ಪಿರಮಿಡ್ ಬಳಿ ಇದರ ಒಳಭಾಗದ ಆವಶೇಷಗಳು ಪತ್ತೆಯಾಗಿವೆ.

ಆಗಿನ ಚಕ್ರವರ್ತಿಗಳು ಮತ್ತು ಅವರ ವಂಶಸ್ಥರ ಜೀವನ ಶೈಲಿ, ಅವರು ಬಳಸುತ್ತಿದ್ದ ಪ್ರಾಚೀನ ವಸ್ತುಗಳು ಮೊದಲಾದ ಸಂಗತಿಗಳ ಮೇಲೆ ಇದು ಬೆಳಕು ಚೆಲ್ಲಲಿದೆ ಎಂದು ಈಜಿಪ್ಟ್‍ನ ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಮಹ್ಮೂದ್ ಅಫಿಫಿ ತಿಳಿಸಿದ್ದಾರೆ.
ಈಜಿಪ್ಟ್‍ನ ಅರಮನೆಯ ಮಂತ್ರಿಗಳು, ಸಭಾಸದಸ್ಯರು ಮತ್ತು ಉನ್ನತಾಧಿಕಾರಿಗಳ ಶವ ಸಂಸ್ಕಾರ ನಡೆಸುವ ಸ್ಥಳವನ್ನು ನೈಕ್ರೋ ಪೊಲಿಸ್ ಎನ್ನುತ್ತಾರೆ.

ಗೋವಿನ ವಿಚಾರಕ್ಕೆ ಗಲಾಟೆ : 5 ರಾಜ್ಯಗಳಿಗೆ ಸುಪ್ರೀಂ ನೊಟೀಸ್

ಗೋವಿನ ವಿಚಾರಕ್ಕೆ ಗಲಾಟೆ: 5 ರಾಜ್ಯಗಳಿಗೆ ಸುಪ್ರೀಂ ನೊಟೀಸ್

ಹೊಸದಿಲ್ಲಿ: ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆ ಮತ್ತು ಹಲ್ಲೆಗಳನ್ನು ಪ್ರಶ್ನಿಸಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೊಟೀಸ್ ನೀಡಿದೆ.

ಬಿಜೆಪಿ ಆಳ್ವಿಕೆಯಲ್ಲಿರುವ ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ್ ಮತ್ತು  ಜಾರ್ಖಂಡ್ ರಾಜ್ಯಗಳಿಗೆ ನೊಟೀಸ್ ನೀಡಲಾಗಿದೆ.

ಗೋಸಂರಕ್ಷಕರ ಮೇಲೆ ನಿಯಂತ್ರಣ ಹೇರಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟ್ ನೊಟೀಸ್ ನೀಡಿದ್ದು, ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 3 ಕ್ಕೆ ಮುಂದೂಡಿದೆ.

ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗೋರಕ್ಷರೆನಿಸಿಕೊಂಡವರ ಸಮೂಹವೊಂದು ಹೊಡೆದು ಸಾಯಿಸಿದೆ. ಕರ್ನಾಟಕದ ಉಡುಪಿ ಕೆಂಜೂರಿನಲ್ಲೂ ಗೋಸಾಗಾಟ ನಡೆಸುತ್ತಿದ್ದ ವೇಳೆ ಪ್ರವೀಣ್ ಪೂಜಾರಿ ಎಂಬಾತನ ಹತ್ಯೆ ನಡೆದಿತ್ತು. 

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಚನ್ನಕೇಶವ ದೇವಾಲಯದ ಪರವಾಗಿ ನ್ಯಾಯಾಲಯದ ತೀರ್ಪು

ಬೇಲೂರು, ಏ.7- ಚನ್ನಕೇಶವ ದೇವಾಲಯ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಲಯವು ದೇವಾಲಯದ ಪರವಾಗಿ ತೀರ್ಪು ನೀಡಿದೆ ಎಂದು ಚನ್ನಕೇಶವ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ.ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಾಲಯಕ್ಕೆ ಸೇರಿದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಪ್ರವಾಸೋಧ್ಯಮ ಇಲಾಖೆಗೆ ಮಾರಾಟ ಮಾಡಿದ್ದವರ ವಿರುದ್ದ ಆಸ್ತಿಯೂ ದೇವಾಲಯಕ್ಕೆ ಸೇರಿದ್ದೆಂದು ದೇವಾಲಯ ವ್ಯವಸ್ಥಾಪನ ಸಮಿತಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.ಆದರಂತೆ ನ್ಯಾಯಾಲಯದಲ್ಲಿ ಆಸ್ತಿಯೂ ದೇವಾಲಯಕ್ಕೆ ಸೇರಿದ್ದೆಂದು ತೀರ್ಪು ಬಂದಿರುವುದರಿಂದ ಆಸ್ತಿಯ ನಕಲಿ ದಾಖಲೆ ಸೃಷ್ಠಿಸಿದ್ದ ಪ್ರತಿವಾದಿಗಳಿಗೆ ನ್ಯಾಯಾಲಯ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು.

ಚನ್ನಕೇಶವ ದೇವಾಲಯದ ಆಸ್ತಿಯನ್ನು ಯಾವುದೆ ಕಾರಣಕ್ಕೂ ಮಾರಾಟವಾಗಲಿ ಅಥವಾ ಪರ ಬಾರೆಯಾಗಲಿ ಮಾಡಬಾರದು. ಆ ರೀತಿ ಮಾಡಲು ಮುಂದಾದಲ್ಲಿ ಚನ್ನಕೇಶವ ದೇವಾಲಯ ಆಸ್ತಿ ಹಿತ ರಕ್ಷಣಾ ಸಮಿತಿಯಿಂದ ಉಗ್ರವಾದ ಹೊರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿ ಗೌರವಧ್ಯಕ್ಷ ಕೆ.ಎಸ್.ಪೂರ್ಣೇಶ್  ಮಾತನಾಡಿ, ಈಗಾಗಲೆ ದೇವಾಲಯದ ಆಸ್ತಿಯನ್ನು ಕಬಳಿಸುತ್ತಿರುವವರ ಗುಂಪು ಮತ್ತಷ್ಟು ನಕಲಿ ದಾಖಲೆಗಳನ್ನು ಸೃಷಿಸಿ ಸರ್ಕಾರಿ ಮತ್ತು ಇತರೆ ಆಸ್ತಿಯನ್ನು ಕಬ್ಬಳಿಸುತ್ತಿರುವುದು ಕಂಡು ಬಂದಿದ್ದು, ಇವರಿಗೆ ಉನ್ನತ ಹುದ್ದೆಗಳಲ್ಲಿರುವ ಜನಪ್ರತಿನಿಧಿಗಳೆ ಬೆಂಬಲ ನೀಡುತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿಯ ಗಂಗೇಶ್. ಕೆ.ಸುದರ್ಶನ್. ರಂಗನಾಥ್ ಇದ್ದರು.

ಬೇಲೂರಿನ ಚನ್ನಕೇಶವ ದೇಗುಲಕ್ಕೆ 900 ವರ್ಷ ಇತಿಹಾಸ

ಬೇಲೂರು, ಮಾ.14- ಶಿಲ್ಪಕಲೆಯ ತವರೂರೆಂದೇ ಪ್ರಸಿದ್ಧಿ ಪಡೆದಿರುವ ವಿಶ್ವ ಪ್ರವಾಸಿ ತಾಣ ಹಾಸನ ಜಿಲ್ಲೆಯ ಬೇಲೂರು ಚನ್ನಕೇಶವ ದೇವಾಲಯ ನಿರ್ಮಾಣವಾಗಿ 900 ವರ್ಷಗಳು ಕಳೆದಿದೆ..! ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟ ಬೇಲೂರು-ಹಳೇಬೀಡುಗಳ ದೇವಾಲಯಗಳ ಸೊಬಗನ್ನು ನೋಡಲು ಕಲಾ ರಸಿಕರ, ಪ್ರವಾಸಿಗರ ಪ್ರತಿ ದಿನ ಕೈ ಬೀಸಿ ಕರೆಯುತ್ತಿದೆ.  ವಾಸ್ತುಶಿಲ್ಪಗಳಿಂದ ನಾಡಿನ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಹೊಯ್ಸಳ ರಾಜ ವಿಷ್ಣುವರ್ಧನರ ಕನಸಿನ ಕಲಾಪೂರ್ಣತೆ ಶಿಲ್ಪಕಲೆ, ವಾಸ್ತುಶಿಲ್ಪಗಳು ಅಧುನಿಕ ಜಗತ್ತಿಗೆ ಸವಾಲು ಹಾಕಿವೆ. ಇದು ನಿರ್ಮಾಣಗೊಂಡು 900 ವರ್ಷ ಕಳೆದಿದ್ದರೂ ಕೀರ್ತಿ ಮಾತ್ರ ಕಳೆಗುಂದದೆ ಇರುವುದು ವಿಶೇಷ. ನಾಡಿನಲ್ಲಿ ಶಿಲ್ಪಕಲೆಗಳಿಗೆ ಹೊಯ್ಸಳರ ಕಾಲವು ತಮ್ಮದೆ ಆದ ಕಾಣಿಕೆಯನ್ನೂ ನೀಡಿದೆ. ಪ್ರವಾಸಿ ತಾಣ ಎಂದಾಕ್ಷಣ ಬೇಲೂರು ಹಾಗೂ ಹಳೇಬೀಡು ಕಣ್ಮುಂದೆ ಬರುತ್ತದೆ.
ಬೇಲೂರಿನ ಚನ್ನಕೇಶವ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ವಿಶ್ವದ ಭೂಪಟದಲ್ಲಿ ತಮ್ಮದೆ ಆದದ ಛಾಪನ್ನು ಮೂಡಿಸಿದ್ದು, ಇಂದಿಗೂ ತಮ್ಮ ನೈಜತೆಯಿಂದ ಕಂಗೊಳಿಸುತ್ತಿವೆ. ಹೊಯ್ಸಳರ ದೊರೆ ವಿಷ್ಣುವರ್ಧನ, ಬೇರೆ ಬೇರೆ ರಾಜರುಗಳ ವಿರುದ್ದ ಯುದ್ದಗಳಲ್ಲಿ ಜಯ ಗಳಿಸಿದ ನೆನಪಿಗಾಗಿ ದೇವಾಲಯವನ್ನು ಕಟ್ಟಿಸಿದ ಎನ್ನಲಾಗಿದೆ. ಬೇಲೂರು ದೇವಾಲಯವು ಬೇರೆ ದೇವಾಲಯಕ್ಕಿಂತ ಶ್ರೇಷ್ಠ ಶಿಲ್ಪಕಲೆಗಳಿಗಿಂತ ವಿಭಿನ್ನವಾಗಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ ವಿಷ್ಣುವರ್ಧನನು ಇಲ್ಲಿನ ಚನ್ನಕೇಶವಸ್ವಾಮಿ ದೇವಾಲಯದ ನಿರ್ಮಾಣವನ್ನು ಶಾಸನದಲ್ಲಿರುವಂತೆ ಕಟ್ಟಿಸಿ ಶಕ 1039ರ ಹೇಮಲಂಬಿ ಸಂವತ್ಸರದ ಚೈತ್ರ ಶುದ್ದ ಪಂಚಮಿ ವಡ್ಡವಾರದಂದು(ಮಂಗಳವಾರ)ನೀಡಿದ್ದಾರೆ. ಕ್ರಿ.ಶ. ಪ್ರಕಾರ ಇದು 1117ರ ಮಾ.10 ಶನಿವಾರ ಆಗುತ್ತದೆ. ಈ ಪ್ರಕಾರದಲ್ಲಿ 2017ರ ಮಾ.10ಕ್ಕೆ 900 ವರ್ಷಗಳು ಪೂರ್ಣವಾಗಿದೆ.  ಇತಿಹಾಸವನ್ನು ಮೆಲುಕು ಹಾಕಿದರೆ ಈಗಿರುವ ಬೇಲೂರಿನ ಮೂಲ ಹೆಸರು ಬೆಲಹೂರು ಕಾಲ ಕ್ರಮೇಣ ಬೆಲವೂರು, ಬೇಲೂರು ಆಗಿರಬಹದು. ಚನ್ನಕೇಶವ ದೇವಾಲಯವು ಪ್ರತಿಷ್ಠಾಪನೆಯ ಕಾಲಕ್ಕೆ ಸಂಸ್ಕøತ ಶಾಸನಗಳಲ್ಲಿ ಬೇಲಪುರ ಎಂಬುದನ್ನು ವೇಲಾಪುರಿ ಎಂದು ಕರೆಯಲಾಗಿದೆ. ವೇಲಾಪುರಿಯಿಂದ ಬೇಲೂರು ಪದ ಹುಟ್ಟಿದೆ ಎಂದು ಕೆಲವರ ಭಾವನೆಯಿದೆ. ಆದರೆ ವೇಲಾಪುರ ಎಂಬ ನಾಮರೂಪ ಕ್ರಿ.ಶ.1117 ಕ್ಕಿಂತ ಮೊದಲು ಕಾಣುವುದಿಲ್ಲ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಬೇಲೂರು ದೇವಾಲಯದ ಬಗ್ಗೆ ಕೆಲ ಐತಿಹ್ಯಗಳಿವೆ. ಬೇಲೂರು ದೇವಾಲಯ ನಿರ್ಮಿಸಿಬೇಕು ಎಂದು ಚನ್ನಕೇಶವನೇ ಆದೇಶ ನೀಡಿದ್ದ ಎಂಬ ನಿಟ್ಟಿನಲ್ಲಿ ರಾಜ ವಿಷ್ಣುವರ್ಧನನು ಬೇಲೂರು ದೇವಾಲಯವನ್ನು ಜಕಣಾಚಾರಿ ಮತ್ತು ಡಂಕಣಾಚಾರಿ ಎಂಬ ಶಿಲ್ಪಿಗಳಿಂದ ನಿರ್ಮಿಸಿದ್ದಾನೆ ಎಂಬ ಕೆಲವು ಐತಿಹ್ಯಗಳು ಹೇಳುತ್ತವೆ. ಇಂದಿನ ಹಳೇಬೀಡು ಅಂದಿನ ದ್ವಾರಸಮುದ್ರ ಹೊಯ್ಸಳರ ರಾಜಧಾನಿಯಾಗಿತ್ತು. ಅದಕ್ಕೂ ಮುನ್ನ ಬೇಲೂರನ್ನು ಹೊಯ್ಸಳರು ರಾಜಧಾನಿಯಾಗಿ ಮಾಡಿಕೊಂಡಿರುವ ಊರಿನ ಸುತ್ತ ಮಣ್ಣಿನ ಕಂದಕ ಸೇರಿದಂತೆ ಮುಂತಾದವುಗಳು ಕಾಣಬಹುದಾಗಿದೆ. ಅಲ್ಲದೆ ಹೊಯ್ಸಳರ ಶಿಲ್ಪಕಲೆಯ ವೈಶಿಷ್ಟ್ಯತೆ ಹಾಗೂ ಸೃಜನಶೀಲತೆಯೂ ಇಂದಿಗೂ ಜೀವಂತವಾಗಿದೆ. ಅಂದು ಬಾದಾಮಿ, ಚಾಲುಕ್ಯರು, ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪಗಳ ಪ್ರಯೋಗಗಳು ಹಾಗೂ ಹೊಯ್ಸಳರ ವಾಸ್ತುಶಿಲ್ಪಗಳಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ.

ಚನ್ನಕೇಶವ ದೇವಾಲಯದ ನಿರ್ಮಾಣವು 103 ವರ್ಷಗಳ ಸತತ ಪ್ರತಿಫಲವಾಗಿದೆ. ಇಂತಹ ಅಪರೂಪದ ಶಿಲ್ಪಕಲೆಗಳು ನೋಡುಗರನ್ನು ಕೈಬೀಸಿ ಕರೆಯುತ್ತವೆ. ಆದರೆ ಬೇಲೂರು ಶ್ರೀ ಚನ್ನಕೇಶವ ದೇವಾಲಯಕ್ಕೆ ಸೂಕ್ತವಾದ ಭದ್ರತೆ ಇಲ್ಲವಾಗಿದೆ. ಹಾಗೂ ಈ ದೇವಾಲಯವು ಉಗ್ರರ ಪಟ್ಟಿಯಲ್ಲಿರುವ ಬಗ್ಗೆ ಇಂಟಲಿಜೆನ್ಸಿ ರಿಪೋರ್ಟ್  ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ದೇವಾಲಯಕ್ಕೆ ಕೇಂದ್ರ ಪುರಾತತ್ವ ಇಲಾಖೆಯೂ ಹೆಚ್ಚಿನ ಭದ್ರತೆ ನೀಡುವುದಕ್ಕೆ ಮುಂದಾಗಬೇಕು. ಕಾರಣ 900 ವರ್ಷದ ಇತಿಹಾಸವನ್ನು ಸಾರುತ್ತಿರುವ ದೇವಾಲಯವನ್ನು ಕಾಪಾಡಿ ಕೊಳ್ಳವತ್ತ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವ ಮೂಲಕ ಈ ದೇವಾಲಯವು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವುದಕ್ಕೆ ಮುಂದಾಗಬೇಕು. ಇದನ್ನು ಸರ್ಕಾರಗಳು ಹಾಗೂ ಜನ ಪ್ರತಿನಿಗಳು ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.