ಸೋಮವಾರ, ಏಪ್ರಿಲ್ 3, 2017

ಕಾಯಂ ಆಯ್ತು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧದ ತೀರ್ಪು

ಕಾಯಂ ಆಯ್ತು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧದ ತೀರ್ಪು

ನವದೆಹಲಿ, ಮಾರ್ಚ್ 30: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ನಡುವಿನ ದೂರವನ್ನು 500 ಮೀ.ಗಳಿಗೆ ನಿಗದಿಗೊಳಿಸಿ ನೀಡಿದ್ದ ತನ್ನ ತೀರ್ಪು ಪುನರ್ ಪರಿಶೀಲಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಇದಲ್ಲದೆ, ಈ ಮದ್ಯದಂಗಡಿಗಳ ಪರವಾನಗಿಯನ್ನು ಏ. 1ರ ನಂತರ ನವೀಕರಣಗೊಳಿಸದಿರುವಂತೆಯೂ ಸುಪ್ರೀಂ ಕೋರ್ಟ್ ಸ್ಪಷ್ಟ ನುಡಿಗಳಲ್ಲಿ ಹೇಳಿರುವುದರಿಂದ ಏ. 1ರಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಆಸುಪಾಸಿನ ಪ್ರಾಂತ್ಯಗಳಲ್ಲಿರುವ ಪರಸ್ಪರ 500 ಮೀ. ಅಂತರದೊಳಗಿರುವ ಮದ್ಯ ಮಾರಾಟದ ಅಂಗಡಿಗಳು ಎತ್ತಂಗಡಿಯಾಗಲಿವೆ.[ಟ್ರಿಪಲ್ ತಲಾಖ್ ಪ್ರಕರಣ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ]

ಕಳೆದ ವರ್ಷ ಡಿಸೆಂಬರ್ 15ರಂದು ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿನ ಮದ್ಯದಂಗಡಿಗಳ ನಡುವಿನ ಅಂತರವನ್ನು500 ಮೀ.ಗಳಿಗೆ ಹೆಚ್ಚಿಸಿ ತೀರ್ಪು ನೀಡಿತ್ತು.

ಆದರೆ, ಈ ಬಗ್ಗೆ ಕೇರಳ, ತೆಲಂಗಾಣ ಹಾಗೂ ಪಂಬಾಜ್ ರಾಜ್ಯಗಳ ಮದ್ಯ ಮಾರಾಟಗಳ ಒಕ್ಕೂಟಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಆದೇಶವನ್ನು ಮರುಪರಿಶೀಲಿಸಬೇಕು ಹಾಗೂ ಮದ್ಯದಂಗಡಿಗಳ ಅಂತರವನ್ನು 500 ಮೀ.ಗಳಿಗಿಂತಲೂ ಕಡಿಮೆ ಮಾಡಬೇಕೆಂದು ಕೋರಿದ್ದವು.

ಸರ್ಕಾರದ ಪರವಾಗಿ ಮನವಿ ಮಾಡಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೂಡಾ, ಈ ಅಂತರ ಕಡಿಮೆ ಮಾಡಬೇಕೆಂದು ಕೋರಿದ್ದರು.

ಈ ಮನವಿಗಳನ್ನು ಮಾರ್ಚ್ 29ರಂದು ವಿಚಾರಣೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ (ಮಾರ್ಚ್ 30) ಮುಂದೂಡಿತ್ತು.

ಗುರುವಾರದ ವಿಚಾರಣೆ ವೇಳೆ, ಮದ್ಯ ಮಾರಾಟಗಾರರ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತಲ್ಲದೆ, ಜನರ ಜೀವಕ್ಕಿಂತ ಯಾವುದೂ ದೊಡ್ಡದಲ್ಲ ಎಂದು ಹೇಳಿತು.

ಇದರ ಅನ್ವಯ, ಹೆದ್ದಾರಿಗಳಲ್ಲಿನ ಮದ್ಯ ಮಾರಾಟವು ಇನ್ನು ಅರ್ಧ ಕಿ.ಮೀಗಳಿಗೊಂದರಂತೆ ಲಭ್ಯವಾಗಲಿದೆ .

ಹಣಕಾಸು ಮಸೂದೆ 2017 ಗೆ ಸಂಸತ್ತು ಅಂಗೀಕಾರ

ಹಣಕಾಸು ಮಸೂದೆ 2017 ಗೆ ಸಂಸತ್ತು ಅಂಗೀಕಾರ

ನವದೆಹಲಿ: ರಾಜ್ಯಸಭೆ ಮಾಡಿದ ಎಲ್ಲಾ 5 ತಿದ್ದುಪಡಿಗಳನ್ನು ಲೋಕಸಭೆ ನಿರಾಕರಿಸುವ ಮೂಲಕ ಸಂಸತ್ತಿನಲ್ಲಿ ಇಂದು ಹಣಕಾಸು ಮಸೂದೆ 2017 ಅಂಗೀಕಾರಗೊಂಡಿದೆ.

ರಾಜ್ಯಸಭೆಯ ತಿದ್ದುಪಡಿ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮೇಲ್ಮನೆಯ ತಿದ್ದುಪಡಿಗಳನ್ನು ಸ್ವೀಕರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಮಸೂದೆ ಮೇಲಿನ ಚರ್ಚೆ ಆರಂಭಿಸಿದ ಕಾಂಗ್ರೆಸ್ ನ ದೀಪೇಂದ್ರ ಹೂಡಾ ರಾಜ್ಯಸಭೆಯ ತಿದ್ದುಪಡಿಯನ್ನು ಬೆಂಬಲಿಸಿದರು. ಹಣಕಾಸು ಮಸೂದೆ ಮೂಲಕ ವಿವಿಧ ಕಾನೂನುಗಳಿಗೆ 40 ತಿದ್ದುಪಡಿಗಳ ಪ್ರಸ್ತಾವನೆ ಮಾಡಿದ ಸರ್ಕಾರವನ್ನು ಪ್ರಶ್ನಿಸಿದರು.

ಚುನಾವಣಾ ನಿಧಿಗಾಗಿ ಪ್ರತ್ಯೇಕ ಕಾನೂನಿಗೆ ಅವರು ಒತ್ತಾಯಿಸಿದರು. ರಾಜಕೀಯ ಪಕ್ಷಗಳು ಹಣ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕೆಂದು ಬಿಜೆಪಿ ನಾಯಕ ಬಾರ್ತುಹರಿ ಮಹತಾಬ್ ಹೇಳಿದರು.

ನಿನ್ನೆ 5 ತಿದ್ದುಪಡಿಗಳನ್ನು ಸೂಚಿಸಿ ಹಣಕಾಸು ಮಸೂದೆ-2017ನ್ನು ರಾಜ್ಯಸಭೆ ಲೋಕಸಭೆಗೆ ಕಳುಹಿಸಿತ್ತು.ಆದರೆ ಅದನ್ನು ಲೋಕಸಭೆ ಇಂದು ಧ್ವನಿಮತದ ಮೂಲಕ ತಿರಸ್ಕರಿಸಿ ಹಣಕಾಸು ಮಸೂದೆಗೆ ಅಂಗೀಕಾರ ನೀಡಿ ಬಜೆಟ್ ಕಾರ್ಯವನ್ನು ಮುಗಿಸಿತು.

ಇಂದು ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿರುವ ಹಣವು ಅಪಾರದರ್ಶಕವಾಗಿದೆ.
ಬಜೆಟ್ ಪ್ರಸ್ತಾವನೆ ಪರವಾಗಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ದಾನಿಗಳ ಸಂಖ್ಯೆಯನ್ನು ಸೀಮಿತಗೊಳಿಸುವುದರಿಂದ ರಾಜ್ಯಸಭೆಯಲ್ಲಿ ಮಾಡಿರುವ ತಿದ್ದುಪಡಿಯನ್ನು ಸ್ವೀಕಚುರಿಸಲಾಗುವುದಿಲ್ಲ ಎಂದು ಹೇಳಿದರು.

ಅಂಗೀಕಾರಗೊಂಡ ಮಸೂದೆಗಳು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ, ಸಮಗ್ರ ಜಿ.ಎಸ್.ಟಿ ಮಸೂದೆ, ಕೇಂದ್ರಾಡಳಿತ ಜಿಎಸ್‍ಟಿ ಮಸೂದೆ ಮತ್ತು ಜಿಎಸ್‍ಟಿ ಪರಿಹಾರ ಮಸೂದೆಗಳಾಗಿವೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪದ್ಮಾ ಕುಮುಟ ವಿಧಿವಶ

ಶೂಟಿಂಗ್ ವೇಳೆ ಹೃದಯಾಘಾತ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪದ್ಮಾ ಕುಮುಟ ವಿಧಿವಶ
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ಕಿರುತೆರೆಯ ಹಿರಿಯ ನಟಿ ಪದ್ಮಾ ಕುಮುಟಾ (58) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೂಟಿಂಗ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಪದ್ಮಾ ಕುಮುಟಾ ಅವರು ಬಯಲುದಾರಿ, ಅರಿವು, ಫಲಿತಾಂಶ, ಅವಸ್ಥೆ, ಮೌನಗೀತೆ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ಚೋಮನದುಡಿ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು.

ಪದ್ಮಾ ಕುಮುಟಾ ಸೋಮವಾರದಂದು ಶೃತಿ ನಾಯ್ಡು ಅವರ ಮಹಾನದಿ ಸಿರೀಯಲ್ ಶೂಟಿಂಗ್ ಸಮಯದಲ್ಲಿ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಿಂದಾಗಿ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದರು.

ಆರ್, ಅಶ್ವಿನ್ ಗೆ ಸರ್, ಗಾರ್ಫಿಲ್ಡ್ ಸೋಬರ್ಸ್ ಪ್ರಶಸ್ತಿ

ಆರ್ ಅಶ್ವಿನ್ ಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪ್ರದಾನ
ಧರ್ಮಶಾಲಾ: ತಮ್ಮ ಆಮೋಘ ಪ್ರದರ್ಶನದ ಮೂಲಕ ಐಸಿಸಿಯ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಮಂಗಳವಾರ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಜನವರಿಯಲ್ಲಿ ಪ್ರಕಟವಾಗಿದ್ದ ಐಸಿಸಿ ಕ್ರಿಕೆಟ್ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಆಫ್ ಸ್ಪಿನ್ನರ್ ಆರ್ ಆಶ್ವಿನ್ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು. ಇಂದು ಧರ್ಮಶಾಲಾದಲ್ಲಿ  ನಡೆದ ಅಂತಿಮ ಟೆಸ್ಟ್ ಮುಕ್ತಾಯದ ಬಳಿಕ ಅಶ್ವಿನ್ ಅವರಿಗೆ ಈ ಎರಡೂ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ವಿಜೇತ ಕ್ರಿಕೆಟಿಗ ಆರ್ ಅಶ್ವಿನ್, ನಿಜಕ್ಕೂ  ನನ್ನ ಕನಸೊಂದು ನನಾಸಾದ ವಿಶೇಷ ದಿನ ಇದು. ಉತ್ತಮ ಪ್ರದರ್ಶನದ ಮೂಲಕ ತಂಡ ಉತ್ತಮ ಸಾಧನೆಗೈಯಲು ನಾನು ಪ್ರಯತ್ನಿಸಿದ್ದೆ.
ಎಲ್ಲ ಬಗೆಯ ಕ್ರಿಕೆಟ್ ಮಾದರಿಗಳಲ್ಲೂ ನಾವು ಒಂದು ತಂಡವಾಗಿ ಆಡಿದ್ದೇವೆ. ಇದಕ್ಕೆ  ನಮಗೆ ದೊರೆತ ಗೆಲುವುಗಳೇ ಸಾಕ್ಷಿ ಎಂದು ಅಶ್ವಿನ್ ಹೇಳಿದರು.

ಪ್ರಮುಖವಾಗ ನಮ್ಮ ತಂಡದ ಹಾಗೂ ನನ್ನ ಯಶಸ್ಸಿನಲ್ಲಿ ಇಡೀ ತಂಡದ ಸದಸ್ಯರು ಹಾಗೂ ತಂಡದ ನಿರ್ವಾಹಕರ ತಂಡದ ದೊಡ್ಡ ಕೊಡುಗೆ ಇದ್ದು, ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಪ್ರಮುಖವಾಗಿ ನನ್ನ  ಕುಟುಂಬ ಮತ್ತು ಪಂದ್ಯದ ನಡುವೆಯೇ ನನ್ನ ಅಂಕಲ್ ಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನ ಕುಟುಂಬದ ಬೆಂಬಲವಿಲ್ಲದೇ ಹೋಗಿದ್ದರೇ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ  ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸುವ ಭರವಸೆ ಇದೆ ಎಂದು ಅಶ್ವಿನ್ ಹೇಳಿದರು.

ಇದೇ ವೇಳೆ ಅಶ್ವಿನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು, ವಿಶ್ವ ಕ್ರಿಕೆಟ್ ಗೆ ಭಾರತ ಸದಾಕಾಲ ಉತ್ತಮ ಸ್ಪಿನ್ನರ್ ಗಳನ್ನು ನೀಡುತ್ತಾ ಬಂದಿದೆ. ಆ ಪಟ್ಟಿಗೆ ಅಶ್ವಿನ್ ಮತ್ತು ರವೀಂದ್ರ  ಜಡೇಜಾ ಇತ್ತೀಚಿನ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಸಿಸಿ ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ ಸನ್ ಅವರು, ನಿಜಕ್ಕೂ ಅಶ್ವಿನ್ ಓರ್ವ ಅದ್ಭುತ ಆಟಾಗಾರ,  ಅಗತ್ಯ ಬಿದ್ದಾಗಲೆಲ್ಲಾ ತಮ್ಮ ಉತ್ತಮ ಪ್ರದರ್ಶನ ತೋರಿದ ಅಶ್ವಿನ್ ತಂಡಕ್ಕೆ ನೆರವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಾಬ್ ಡೈಲನ್ ಅವರ ಕೈಸೇರಿದ ನೋಬೆಲ್ ಸಾಹಿತ್ಯ ಪ್ರಶಸ್ತಿ

ಬಾಬ್ ಡೈಲನ್ ಅವರ ಕೈಸೇರಿದ ನೊಬೆಲ್ ಸಾಹಿತ್ಯ ಪ್ರಶಸ್ತಿ

ಸ್ಟಾಕ್ಹೋಮ್: ಬಾಬ್ ಡೈಲನ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಡೈಲನ್ ಅವರು ಅಮೆರಿಕಾದ ಸಂಗೀತಗಾರ ಮತ್ತು ಗೀತ ರಚನೆಕಾರರಾಗಿದ್ದು ನಿನ್ನೆ ರಾತ್ರಿ ಅವರು ಪ್ರದರ್ಶನ ನೀಡುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ಸ್ವೀಡನ್ ಅಕಾಡೆಮಿಯ ಸದಸ್ಯ ಕ್ಲಾಸ್ ಒಸ್ಟೆರ್ಗ್ರೆನ್ ತಿಳಿಸಿದ್ದಾರೆ.

ಬಾಬ್ ಅವರ ಆಶಯದಂತೆ ಕಾರ್ಯಕ್ರಮ ಸರಳ ಮತ್ತು ಖಾಸಗಿಯಾಗಿತ್ತು. ಅಕಾಡೆಮಿ ಸದಸ್ಯರು ಮತ್ತು ಡೈಲನ್ ಅವರ ಕಚೇರಿ ಸಿಬ್ಬಂದಿಗಳು ಮಾತ್ರ ಭಾಗವಹಿಸಿದ್ದರು.

2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಬಾಬ್ ಡೈಲನ್ ಅವರಿಗೆ ಸಂದಿದೆ. ಅವರ ಕಾವ್ಯದ ಬರವಣಿಗೆಗಾಗಿ ಈ ಪ್ರಶಸ್ತಿ ಸಂದಿದೆ.

ರಘು ರೈಗೆ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ

6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟ: ರಘು ರೈಗೆ ಜೀವಮಾನ ಸಾಧನೆ ಪ್ರಶಸ್ತಿ
ನವದೆಹಲಿ: 6ನೇ ರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ಪ್ರಕಟವಾಗಿದ್ದು, ಖ್ಯಾತ ಛಾಯಾಗ್ರಾಹಕ ರಘು ರೈ ಅವರು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1965ರಲ್ಲಿ ತಮ್ಮ ವೃತ್ತಿಪರ ಛಾಯಾಗ್ರಹಣ ಆರಂಭಿಸಿದ ರಘು ರೈ ಅವರು, 1972ರಲ್ಲಿ ಪದ್ಮ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತೆಯೇ ಛಾಯಾಗ್ರಹಣ ಕಲೆಯಲ್ಲಿ ಅಗಾಧ ಅನುಭವ ಹೊಂದಿರುವ ರಘುರೈ ಅವರು, ಸುಮಾರು 18  ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು 1992ರಲ್ಲಿ ಅಮೆರಿಕದ ಪ್ರತಿಷ್ಠಿತ ವರ್ಷದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೂ ರಘುರೈ ಭಾಜನರಾಗಿದ್ದರು.

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಈ ಬಗ್ಗೆ  ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನಾರಾದ ರಘುರೈ ಅವರಿಗೆ ಶುಭಾಷಯ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಛಾಯಾಗ್ರಹಣದ ಮೂಲಕ ಜಾಗೃತಿ ಮೂಡಿಸಬಹುದಾಗಿದ್ದು, ಛಾಯಾ ಗ್ರಹಣ ಉತ್ತಮ ಆಡಳಿತ ಪ್ರಸರಣದ ಮಾರ್ಗ ಕೂಡ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಳಿದಂತೆ ಪ್ರಶಸ್ತಿಗೆ ಭಾಜನರಾದ ಪ್ರಮುಖ ಛಾಯಾಗ್ರಾಹಕ ಹೆಸರು ಇಂತಿದೆ.

ವರ್ಷದ ಹವ್ಯಾಸಿ ಛಾಯಾಗ್ರಾಹಕ ಪ್ರಶಸ್ತಿ-ರವೀಂದರ್ ಕುಮಾರ್

ವರ್ಷದ ವತ್ತಿಪರ ಛಾಯಾಗ್ರಾಹಕ ಪ್ರಶಸ್ತಿ-ಕೆಕೆ ಮುಸ್ತಾಫಾ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಒಪಿ ಸೋನಿ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಜಿ ನಾಗಶ್ರೀನಿವಾಸು

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ದಿಪಾಯನ್ ಬಿಹಾರ

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಚ ನಾರಾಯಣ ರಾವ್

ವಿಶೇಷ ಪ್ರಶಸ್ತಿ (ವೃತ್ತಿಪರ ಛಾಯಾಗ್ರಾಹಣ ವಿಭಾಗ)-ಅತುಲ್ ಚೌಬೆ

ಸನ್ಯಾಸತ್ವ ತೊರೆದ: (ತಾಯೆ ದೋರ್ಜೆ) ಟಿಬೆಟಿಯನ್ನರ ಧರ್ಮ ಗುರು

ಸನ್ಯಾಸತ್ವ ತೊರೆದು ಬಾಲ್ಯ ಗೆಳತಿಯನ್ನು ವಿವಾಹವಾದ ಟಿಬೆಟಿಯನ್ನರ ಧರ್ಮಗುರು ತಾಯೆ ದೊರ್ಜೆ

ನವದೆಹಲಿ: ಟಿಬೆಟಿಯನ್ನರ ಹಿರಿಯ ಬೌದ್ಧಗುರುವೊಬ್ಬರು ಸನ್ಯಾಸತ್ವ ತ್ಯಜಿಸಿ ಭಾರತದಲ್ಲಿ ತಮ್ಮ ಬಾಲ್ಯ ಸ್ನೇಹಿತೆಯನ್ನು ವಿವಾಹವಾಗಿದ್ದಾರೆ.

33 ವರ್ಷದ ಬೌದ್ಧ ಗುರು ತಾಯೆ ದೊರ್ಜೆ ಟಿಬೆಟಿಯನ್ ಧಾರ್ಮಿಕ ಪ್ರಮುಖ ನಾಲ್ಕು ಶಾಲೆಗಳಲ್ಲಿ ಒಂದು ಶಾಲೆಯ ಗುರುಗಳಾಗಿದ್ದು ಕರ್ಮಪಾ ಲಾಮಾ ಅವರ ಪುನರ್ಜನ್ಮ ಎಂದು ಹೇಳಲಾಗುತ್ತಿತ್ತು.

ಆದರೆ ಕರ್ಮ ಕಾಗ್ಯು ಬೌದ್ಧ ಶಾಲೆಯ ಹಲವು ಅನುಯಾಯಿಗಳು ದಲೈಲಾಮಾ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರತಿಸ್ಪರ್ಧಿಯಾದ ಉರ್ಜಿನ್ ಟ್ರಿನ್ಲೆ ಎಂಬ ಶಿರೋನಾಮೆ ಇಟ್ಟುಕೊಂಡಿದ್ದವರೊಂದಿಗೆ ಗುರುತಿಸಿಕೊಂಡಿದ್ದರು.

ಈ ಭಿನ್ನಾಭಿಪ್ರಾಯಗಳುಂಟಾಗಿ ಟಿಬಿಟಿಯನ್ ಬೌದ್ಧಗುರುಗಳು ಇಬ್ಭಾಗವಾಗಿ ಅನೇಕ ವರ್ಷಗಳಾಗಿದ್ದವು. ಇಂದು ತಾಯೆ ದೊರ್ಜೆಯವರ ಕಚೇರಿ ಆಶ್ಚರ್ಯಕರ ಸಂಗತಿಯನ್ನು ಘೋಷಿಸಿದ್ದು, ಮೊನ್ನೆ ಮಾರ್ಚ್ 25ರಂದು ದೆಹಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಗುರು ದೊರ್ಜೆಯವರು ವಿವಾಹವಾಗಿ ಸನ್ಯಾಸತ್ವವನ್ನು ತ್ಯಜಿಸಿರುವುದಾಗಿ ಘೋಷಿಸಿತು.

''ನಾನು ಮದುವೆ ಮಾಡಿಕೊಂಡ ನಿರ್ಧಾರ ನನ್ನಲ್ಲಿ ಮಾತ್ರವಲ್ಲದೆ ನನ್ನ  ಅನುಯಾಯಿಗಳ ಮೇಲೆ ಕೂಡ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ದೃಢ ವಿಶ್ವಾಸ ನನಗಿದೆ. ಕೆಲವು ಸುಂದರವಾದ ಪ್ರಯೋಜನವಾಗುವ ವಿಷಯಗಳು ನಮ್ಮೆಲ್ಲರಲ್ಲಿ ಮೂಡಲಿದೆ'' ಎಂದು ಹೇಳಿದ್ದಾರೆ.

ಸಂಸಾರಿಯಾಗಿದ್ದು ಕರ್ಮಪಾ ಪಾತ್ರವನ್ನು ತಾಯೆ ಮುಂದುವರಿಸಲಿದ್ದು ವಿಶ್ವಾದ್ಯಂತ ಇರುವ ಅವರ ವಿದ್ಯಾರ್ಥಿಗಳಿಗೆ, ಅನುಯಾಯಿಗಳಿಗೆ ತಮ್ಮ ಬೋಧನೆಗಳನ್ನು ಮುಂದುವರಿಸಲಿದ್ದಾರೆ.ಅವರ ಪತ್ನಿ 36 ವರ್ಷದ ರಿಂಚನ್ ಯಂಗ್ ಝೊಮ್ ಭೂತಾನ್ ನಲ್ಲಿ ಜನಿಸಿ ಭಾರತ ಮತ್ತು ಯುರೋಪ್ ನಲ್ಲಿ ಶಿಕ್ಷಣ ಗಳಿಸಿದ್ದಾರೆ.

ಅಮೇಜನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!

ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಶ್ರೀಮಂತ!

ಆನ್ ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಸಿರಿವಂತರಾಗಿ ಹೊರಹೊಮ್ಮಿದ್ದಾರೆ.

ಬ್ಲೂಂಬರ್ಗ್ ಮೂಲಗಳ ಪ್ರಕಾರ, ಜೆಫ್ ಬೆಜೋಸ್ ಇಂಡಿಟೆಕ್ಸ್ ಸಂಸ್ಥಾಪಕ ಅಮಾನ್ಸಿಯೋ ಒರ್ಟೆಗಾ ಮತ್ತು ವಾರೆನ್ ಬಫೆಟ್ ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ ಬೆಜೋಸ್ 1.5 ಬಿಲಿಯನ್ ಅಮೆರಿಕನ್ ಡಾಲರ್ ಇದ್ದ ಅವರ ಕಂಪನಿ ಶೇರ್ ಅದೃಷ್ಠವಶತ್ ಮಾರ್ಚ್ 29ಕ್ಕೆ 18.35 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ. ಕಾರಣ ಮಧ್ಯಪ್ರಾಚ್ಯ ದೇಶದ ಆನ್ ಲೈನ್ ಸಂಸ್ಥೆ ಸೌಕ್.ಕಾಂ ಅನ್ನು ಖರೀದಿಸುವುದಾಗಿ ಹೇಳಿದ ನಂತರ ಅವರ ಶೇರು ಗಗನಕ್ಕೆ ಏರಿದೆ.

ಇನ್ನು ಎಂದಿನಂತೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗ್ರೇಟ್ಸ್ ಮೊದಲ ಸ್ಥಾನದಲ್ಲಿದ್ದಾರೆ.

ಆಸ್ಕರ್: ಪ್ರಕಟಣೆಯಲ್ಲಿ ಎಡವಟ್ಟು ಮೂನ್ಲೈಟ್ ಶ್ರೇಷ್ಟ ಚಿತ್ರ

ಆಸ್ಕರ್ : ಪ್ರಕಟನೆಯಲ್ಲಿ ಎಡವಟ್ಟು, ಮೂನ್ಲೈಟ್ ಶ್ರೇಷ್ಠ ಚಿತ್ರ

ಹೊಸದಿಲ್ಲಿ : 89ರ ಆಸ್ಕರ್ ಪ್ರಶಸ್ತಿ ಪ್ರಕಟನೆಯಲ್ಲಿ ಎಡವಟ್ಟಾಗಿದೆ. ಹಾಗಾಗಿ ಲಾ ಲಾ ಲ್ಯಾಂಡ್ ಚಿತ್ರಕ್ಕೆ ಈ ಮೊದಲು ಘೋಷಿಸಲಾಗಿದ್ದ ಶ್ರೇಷ್ಠ ಚಿತ್ರ ಪ್ರಶಸ್ತಿಯು ಇದೀಗ ಮೂನ್ಲೈಟ್ ಚಿತ್ರದ ಪಾಲಾಗಿದೆ.

ಈ ಮೊದಲು ಬಹು ನಿರೀಕ್ಷೆಯ ಲಾ ಲಾ ಲ್ಯಾಂಡ್ ಅತ್ಯುತ್ತಮ ಚಿತ್ರವೆಂದು ಪ್ರಕಟಿಸಲಾಗಿತ್ತು. ಅದೀಗ ಬದಲಾಗಿ ಮೂನ್ಲೈಟ್ ಚಿತ್ರಕ್ಕೆ ಶ್ರೇಷ್ಠ ಪ್ರಶಸ್ತಿ ಸಂದಿರುವುದಾಗಿ ತಿಳಿದು ಬಂದಿದೆ.

ಅಮೆರಕದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಲಾ ಲಾ ಲ್ಯಾಂಡ್ ಚಿತ್ರವನ್ನು ಡೇಮಿಯಲ್ ಚ್ಯಾಝೆಲ್ ನಿರ್ದೇಶಿಸಿದ್ದು ರಾನ್ ಗ್ಲಾಸಿಂಗ್ ಮತ್ತು ಎಮಾ ಸ್ಟೋನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಶೇಷವೆಂದರೆ ಲಾ ಲಾ ಲ್ಯಾಂಡ್ ಚಿತ್ರ 2017ರ ಸಾಲಿನ ಗೋಲ್ಡನ್ ಗ್ಲೋಬ್ ನಲ್ಲಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.
ಮಾತ್ರವಲ್ಲದೆ 14ನೇ ಅಕಾಡೆಮಿ ಅವಾರ್ಡ್ಸ್ಗೆ ನಾಮಾಂಕನ ಪಡೆದಿದ್ದ ಈ ಚಿತ್ರ ಅಪಾರ ಜನಮೆಚ್ಚುಗೆಯನ್ನು ಗಳಿಸಿತ್ತು.

ಇದೇ ಸಂದರ್ಭದಲ್ಲಿ ಮೂನ್ಲೈಟ್ ಚಿತ್ರದ ಅತ್ಯುತ್ತಮ ನಟನೆಗಾಗಿ ನಿರ್ದೇಶಸಿದ ಅಲಿ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ವಿಯೋಲಾ ಡೇವಿಸ್ ಅವರಿಗೆ ಫೆನ್ಸಸ್ ಚಿತ್ರದಲ್ಲಿನ ನಟನೆಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅಂದ ಹಾಗೆ ಆಸ್ಕರ್ ಪ್ರಶಸ್ತಿ ಗಳಿಸಿರುವ ಪ್ರಪ್ರಥಮ ಕಪ್ಪುವರ್ಣೀಯ ನಟಿ ಈಕೆ ಎನಿಸಿಕೊಂಡಿದ್ದಾರೆ.

ಮ್ಯಾಂಚೆಸ್ಟರ್ ಬೈ ದಿ ಸೀ ಚಿತ್ರದಲ್ಲಿನ ನಟನೆಗಾಗಿ ಆಯಫ್ಲೆಕ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.

ಜಂಗಲ್ ಬುಕ್ ಆಕರ್ಷಣೆ : ಬೆಸ್ಟ್ ವಿಶುವಲ್ ಅವಾರ್ಡ್ ಪ್ರಶಸ್ತಿಯನ್ನು ಜಂಗಲ್ ಬುಕ್ ಪಡೆಯಿತು.

ದೇವ್ ಪಟೇಲ್ಗೆ ನಿರಾಶೆ : ಆಸ್ಕರ್ ಪ್ರಶಸ್ತಿಯ ರೇಸ್ನಲ್ಲಿದ್ದ ಭಾರತದ ದೇವ್ ಪಟೇಲ್ಗೆ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿರುವುದು ನಿರಾಶೆಗೆ ಕಾರಣವಾಗಿದೆ. ಪಟೇಲ್ ಅವರು ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಪ್ರಶಸ್ತಿ ಮೂನ್ ಲೈಟ ಚಿತ್ರಕ್ಕಾಗಿ ಮಹೆರ್ಶಿ ಅಲ್ ಅಲಿ ಅವರ ಪಾಲಿಗೆ ಹೋಯಿತು.

ಆಸ್ಕರ್ ಪ್ರಶಸ್ತಿಯ ಪೂರ್ಣ ಪಟ್ಟಿ ಹೀಗಿದೆ :

ಶ್ರೇಷ್ಠ ಚಿತ್ರ : ಮೂನ್ ಲೈಟ್
ಶ್ರೇಷ್ಠ ನಟಿ : ಎಮಾ ಸ್ಟೋನ್ - ಲಾ ಲಾ ಲ್ಯಾಂಡ್
ಶ್ರೇಷ್ಠ ನಟ : ಕ್ಯಾಸೇ ಆಫ್ ಲೆಕ್ - ಮ್ಯಾಂಚೆಸ್ಟರ್ ಬೈ ದಿ ಸೀ
ಶ್ರೇಷ್ಠ ನಿರ್ದೇಶಕ : ಡೇಮಿಯನ್ ಶಾಝೆಲ್ - ಲಾ ಲಾ ಲ್ಯಾಂಡ್
ಶ್ರೇಷ್ಠ ಪೋಷಕ ನಟಿ : ವಯೋಲಾ ಡೇವಿಸ್ - ಫೆನ್ಸಸ್
ಶ್ರೇಷ್ಠ ಪೋಷಕ ನಟ : ಮಹೆರ್ಶಲಾಅಲಿ - ಮೂನ್ ಲೈಟ್
ಒರಿಜಿನಲ್ ಸ್ಕ್ರೀನ್ ಪ್ಲೇ : ಮ್ಯಾಂಚೆಸ್ಟರ್ ಬೈ ದಿ ಸೀ
ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ : ಮೂನ್ ಲೈಟ್
ಬೆಸ್ಟ್ ಆಯನಿಮೇಟೆಡ್ ಫೀಚರ್ : ಝೂಟೋಪಿಯಾ

ಬೆಸ್ಟ್ ಆಯನಿಮೇಟೆಡ್ ಶಾರ್ಟ್ ಫಿಲಂ : ಪೈಪರ್
ಬೆಸ್ಟ್ ಲೈವ್ ಆಯಕ್ಷನ್ ಶಾರ್ಟ್ ಫಿಲಂ : ಸಿಂಗ್
ಶ್ರೇಷ್ಠ ವಿದೇಶೀ ಭಾಷಾ ಚಿತ್ರ : ದ ಸೇಲ್ಸ್ಮನ್
ಶ್ರೇಷ್ಠ ಸಾಕ್ಷ್ಯ ಚಿತ್ರ : ಎರ್ಜಾ ಎಡಲ್ವುನ್ ಮತ್ತು ಕ್ಯಾರೋಲಿನ್ ವಾಟರ್ಲೋ, ಓ ಜೆ ಮೇಡ್ ಇನ್ ಅಮೆರಿಕ
ಬೆಸ್ಟ್ ಸಿನೆಮಟೋಗ್ರಫಿ : ಲೈನಸ್ ಸ್ಯಾಂಡ್ಗೆÅನ್, ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸಾಂಗ್ : ಸಿಟಿ ಆಫ್ ಸ್ಟಾರ್ - ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸ್ಕೋರ : ಲಾ ಲಾ ಲ್ಯಾಂಡ್
ಬೆಸ್ಟ್ ವಿಶುವಲ್ ಅಫೆಕ್ಟ್ : ದಿ ಜಂಗಲ್ ಬುಕ್
ಬೆಸ್ಟ್ ಪ್ರೊಡಕ್ಷನ್ ಡಿಸೈನ್ : ಲಾ ಲಾ ಲ್ಯಾಂಡ್
ಬೆಸ್ಟ್ ಸೌಂಡ್ ಎಡಿಟಿಂಗ್ : ಅರೈವಲ್
ಬೆಸ್ಟ್ ಸೌಂಡ್ ಮಿಕ್ಸಿಂಗ್ : ಹ್ಯಾಕ್ಸಾ ರಿಜ್
ಬೆಸ್ಟ್ ಮೇಕಪ್ ಆಯಂಡ್ ಹೇರ್ಸ್ಟೈಲಿಂಗ್ : ಸುಯಿಸೈಡ್ ಸ್ಕ್ವಾಡ್
ಬೆಸ್ಟ್ costume ಡಿಸೈನ್ : ಫೆನಾಟಿಕ್ ಬೀಸ್ಟ್ಸ್ ಆಯಂಡ್ ವೇರ್ ಟು ಫೈಂಡ್ ದೆಮ್

IIFA ಉತ್ಸವ್...

IIFA ಉತ್ಸವ್; ಕಿರಿಕ್ ಪಾರ್ಟಿ, ಯೂ ಟರ್ನ್ ಮುಡಿಗೆ ಟಾಪ್ ಪ್ರಶಸ್ತಿ

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಇಂಟರ್ ನ್ಯಾಶನಲ್‌ ಇಂಡಿಯನ್‌ ಫಿಲ್ಮ್ ಅಕಾಡೆಮಿ(ಐಐಎಫ್ ಎ)ನ ಉತ್ಸವದಲ್ಲಿ ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ, ಯೂ ಟರ್ನ್ ಭರ್ಜರಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ, ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಅವರ ಭಾರತೀಯ ಸಿನಿಮಾ ರಂಗಕ್ಕೆ ನೀಡಿದ್ದ ಕೊಡುಗೆಗಾಗಿ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಬುಧವಾರ, ಗುರುವಾರ ಸೇರಿದಂತೆ 2 ದಿನಗಳ ಕಾಲ ಹೈದರಾಬಾದ್ ನಲ್ಲಿ ಫಾರ್ಚೂನ್ ಸನ್ ಫ್ಲವರ್ ಪ್ರಾಯೋಜಿತ 2016-17ನೇ ಸಾಲಿನ ಐಐಎಎಫ್ ಉತ್ಸವದಲ್ಲಿ ತೆಲುಗು ಮತ್ತು ಕನ್ನಡ ಸಿನಿಮಾ ರಂಗದ ಪ್ರತಿಭಾವಂತ ನಟ, ನಟಿಯರಿಗೆ, ಚಿತ್ರಕ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

"ಕಿರಿಕ್ ಪಾರ್ಟಿ'ಗೆ 5 ಪ್ರಶಸ್ತಿ:
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ 5 ಪ್ರಶಸ್ತಿಗಳನ್ನು ಗೆದ್ದಿದೆ.
ಉತ್ತಮ ಚಿತ್ರ, ಉತ್ತಮ ಸಂಗೀತ ನಿರ್ದೇಶನ ಸೇರಿದಂತೆ 5 ಪ್ರಶಸ್ತಿ ಗೆದ್ದಿದೆ. ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಹಿನ್ನೆಲೆ ಸಂಗೀತಗಾರ ವಿಜಯ್ ಪ್ರಕಾಶ್ ಗೆ ಪ್ರಶಸ್ತಿ ಲಭಿಸಿದೆ.

ಯೂ ಟರ್ನ್ ಚಿತ್ರಕ್ಕಾಗಿ ಪವನ್ ಕುಮಾರ್ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಹಾಗೂ ಉತ್ತಮ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚಿಕ್ಕಣ್ಣಗೆ ಉತ್ತಮ ಹಾಸ್ಯ ನಟ:
ನಟ ಚಿಕ್ಕಣ್ಣಗೆ ಕೋಟಿಗೊಬ್ಬ 2 ಚಿತ್ರಕ್ಕಾಗಿ ಉತ್ತಮ ಹಾಸ್ಯ ನಟ ಪ್ರಶಸ್ತಿ ಲಭಿಸಿದೆ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿನ ನಟನೆಗಾಗಿ ಪಾರೂಲ್ ಯಾದವ್, ಯಜ್ಞ ಶೆಟ್ಟಿಗೆ ಪ್ರಶಸ್ತಿ ಲಭಿಸಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಲ್ಲಿನ ನಟನೆಗಾಗಿ ವಶಿಷ್ಠಾಗೆ ಪ್ರಶಸ್ತಿ, ಇಂಚರ ರಾವ್ ಹಿನ್ನೆಲೆ ಸಂಗೀತಕ್ಕೆ ಅವಾರ್ಡ್ ಸಿಕ್ಕಿದೆ. ರಕ್ಷಿತ್ ಶೆಟ್ಟಿಗೆ ಬೆಸ್ಟ್ ಸಪೋರ್ಟಿಂಗ್ ಮೇಲ್ ಅವಾರ್ಡ್ ಲಭಿಸಿದೆ.

ಮಲಯಾಳಂನ ಜನತಾ ಗ್ಯಾರೇಜ್ ಗೆ 6 ಪ್ರಶಸ್ತಿ:

ನಟ ಮೋಹನ್ ಲಾಲ್, ಜ್ಯೂನಿಯರ್ ಎನ್ ಟಿಆರ್ ಅಭಿನಯದ ಜನತಾ ಗ್ಯಾರೇಜ್ ಚಿತ್ರ ಒಟ್ಟು ಆರು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ.

ಬರಪರಿಹಾರ ಕರ್ನಾಟಕ ರಾಜ್ಯಕ್ಕೆ ₹1235.52 ಕೋಟಿ

ಬರ ಪರಿಹಾರ: ರಾಜ್ಯಕ್ಕೆ ₹1235.52 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ.

ಉನ್ನತ ಮಟ್ಟದ ಸಮಿತಿ ಅನುಮೋದನೆ ಮೇರೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಕರ್ನಾಟಕಕ್ಕೆ ₹1235.52 ಕೋಟಿ ಹಾಗೂ ತಮಿಳುನಾಡಿಗೆ ₹1712.10 ಕೋಟಿ ಬಿಡುಗಡೆ ಮಾಡಿದೆ.

ಎರಡೂ ರಾಜ್ಯಗಳು ಬರ ಹಾಗೂ ಚಂಡಮಾರುತದಿಂದ ಆಗಿರುವ ನಷ್ಟಕ್ಕೆ ಪರಿಹಾರ ಕೋರಿದ್ದವು. ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕರ್ನಾಟಕದ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ₹96.92 ಕೋಟಿ ಬಾಕಿ ಉಳಿದಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿರುವ ₹450 ಕೋಟಿ ಹಾಗೂ ಈಗಿನ ₹1235.52 ಕೋಟಿ ಸೇರಿ ರಾಜ್ಯಕ್ಕೆ ಒಟ್ಟು ₹1782.44 ಕೋಟಿ ನೆರವು ಸಿಕ್ಕಂತಾಗಿದೆ.

ರಾಜ್ಯದ 9 ಅಣೆಕಟ್ಟೆಗಳಲ್ಲಿ ಶೇ.20ಕ್ಕಿಂತ ಕಡಿಮೆ ನೀರಿದ್ದು, ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ  ಎದುರಾಗುವ ಸಂಭವ ಹೆಚ್ಚಿದೆ. ಮಳೆಯ ಅಭಾವದಿಂದ ಈಗಾಗಲೇ 160–176 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ.

ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು ಕಣ್ಮರೆಯಾಗಲಿವೆ: ನೀತಿ ಆಯೋಗ

ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಕಣ್ಮರೆಯಾಗಲಿವೆ: ನೀತಿ ಆಯೋಗ

ಹೊಸದಿಲ್ಲಿ,ಎ.1: ಭಾರತವು ತ್ವರಿತ ಗತಿಯಲ್ಲಿ ತಂತ್ರಜ್ಞಾನ ಅನ್ವಯಗಳನ್ನು ಅಪ್ಪಿ ಕೊಳ್ಳುತ್ತಿರುವುದರೊಂದಿಗೆ ಡಿಜಿಟಲ್ ವಹಿವಾಟುಗಳು ಮೊಬೈಲ್ ವ್ಯಾಲೆಟ್‌ಗಳು ಮತ್ತು ಬಯೊಮೆಟ್ರಿಕ್ ವಿಧಾನಗಳ ಮೂಲಕ ನಡೆಯಲಿವೆ ಹಾಗೂ ಎಟಿಎಂ,ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮುಂದಿನ 3-4 ವರ್ಷಗಳಲ್ಲಿ ಕಣ್ಮರೆಯಾಗಲು ಸಜ್ಜಾಗಿವೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಹೇಳಿದ್ದಾರೆ.

ಶುಕ್ರವಾರ ಇಲ್ಲಿಯ ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಸೌಲಭ್ಯ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ವಿಶ್ವಾದ್ಯಂತ ನಿರಾಶಾದಾಯಕ ಆರ್ಥಿಕ ಚಿತ್ರಣದ ನಡುವೆಯೂ ಭಾರತವು ವಾರ್ಷಿಕ ಶೇ.7.6 ದರದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ ಎಂದ ಅವರು, ಅಮೆರಿಕಾ ಮತ್ತು ಯುರೋಪಗಳಲ್ಲಿ ಜನಸಂಖ್ಯೆ ವಯಸ್ಸಾಗುತ್ತ ಸಾಗಿದರೆ, ಭಾರತದ ಜನಸಂಖ್ಯೆ ಹೆಚ್ಚೆಚ್ಚು ಯುವಜನರೊಂದಿಗೆ ಮುನ್ನಡೆಯಲಿದೆ ಎಂದರು.

ಉದ್ಯಮ-ವ್ಯವಹಾರಗಳನ್ನು ಸುಲಭಗೊಳಿಸಲು ಕಳೆದ ವರ್ಷ 1,200 ಕಾನೂನು ಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂತ್ ನುಡಿದರು.

ಐರೋಪ್ಯ ಒಕ್ಕೂಟದ 24 ರಾಷ್ಟ್ರಗಳಿಗಿಂತಲೂ ಭಾರತವು ದೊಡ್ಡದಾಗಿದೆ ಎಂದ ಅವರು, ರಾಜ್ಯಗಳು ಬೆಳವಣಿಗೆಯ ಅಗ್ರಣಿಗಳಾಗಿ ಮೂಡಿ ಬರಬೇಕಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಹೆಚ್ಚಿನ ನಗರೀಕರಣಕ್ಕೆ ಭಾರತವು ಸಾಕ್ಷಿಯಾಗಲಿದೆ ಮತ್ತು ಇದರಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಅವರು ಹೇಳಿದರು.

ಮೀನುಗಾರರನ್ನು ಬಂಧಮುಕ್ತಗೊಳಿಸಿದ ಇರಾನ್

ಭಾರತದ 15 ಮಂದಿ ಮೀನುಗಾರರನ್ನು ಬಂಧಮುಕ್ತಗೊಳಿಸಿದ ಇರಾನ್

ನವದೆಹಲಿ: ಇರಾನ್‍ನಲ್ಲಿ ಬಂಧಿಯಾಗಿದ್ದ ಭಾರತದ ಮೂಲದ 15 ಮಂದಿ ಮೀನುಗಾರರನ್ನು ಇರಾನ್ ಸರ್ಕಾರ ಬಂಧಮುಕ್ತಗೊಳಿಸಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮೂಲದ 15 ಮಂದಿ ಮೀನುಗಾರರನ್ನು ಮತ್ತು ಅವರ ಮೂರು ಬಹರೈನಿ ಬೋಟ್‍ಗಳನ್ನು ಇರಾನ್ ವಶಪಡಿಸಿಕೊಂಡಿತ್ತು. ಆ ಮೀನುಗಾರರನ್ನು ಇರಾನ್ ಬಂಧಮುಕ್ತಗೊಳಿಸಿದೆ ಎಂದು ಸುಷ್ಮಾ ಅವರು ಹೇಳಿದ್ದಾರೆ.

ಬಹರೈನ್‍ನಾಗಿ ಕೆಲಸ ಮಾಡುತ್ತಿದ್ದ ಈ ಮೀನುಗಾರರು ಸೆಪ್ಟೆಂಬರ್ 22ರಂದು ಅನುಮತಿ ಪಡೆಯದೆಯೇ ಇರಾನ್ ಸಮುದ್ರಭಾಗಕ್ಕೆ ಪ್ರವೇಶಿಸಿದ್ದರಿಂದ ಇರಾನ್ ಮೀನುಗಾರರನ್ನು ವಶ ಪಡಿಸಿಕೊಂಡಿತ್ತು.

ಮಿಯಾಮಿ ಓಪನ್ ಫೈನಲ್

ಮಿಯಾಮಿ ಓಪನ್ ಫೈನಲ್‍ನಲ್ಲಿ ನಡಾಲ್‍ ವಿರುದ್ಧ ಫೆಡರೆರ್‍ಗೆ ರೋಚಕ ಗೆಲುವು

ಮಿಯಾಮಿ (ಅಮೆರಿಕ), ಏ.3-ಮಿಯಾಮಿ ಓಪನ್ ಟೆನಿಸ್ ಫೈನಲ್‍ನಲ್ಲಿ ಸ್ವಿಟ್ಜರ್‍ಲೆಂಡ್‍ನ ರೋಜರ್ ಫೆಡರೆರ್ ತಮ್ಮ ಬಹುಕಾಲದ ಪ್ರತಿಸ್ಪರ್ಧಿ ಸ್ಪೇನ್‍ನ ರಫಾಯಿಲ್ ನಡಾಲ್‍ರನ್ನು ಮಣಿಸಿ ರೋಚಕ ಗೆಲುವು ದಾಖಲಿಸಿದ್ದಾರೆ. ನಡಾಲ್ ವಿರುದ್ಧ 6-3, 6-4ರಿಂದ ಗೆಲುವು ಸಾಧಿಸಿ ಫೆಡರೆರ್ ಈ ವರ್ಷದಲ್ಲೂ ಜೈತ್ರಯಾತ್ರೆಯನ್ನು ಮುಂದುವರಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಆರು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ಫೆಡರೆರ್ ಇತ್ತೀಚೆಗಷ್ಟೇ ಟೆನಿಸ್ ಅಂಕಣಕ್ಕೆ ಹಿಂದಿರುಗಿದ್ದರು. ಈಗಾಗಲೇ ಆಸ್ಟ್ರೇಲಿಯನ್ ಓಪನ್ ಮತ್ತು ಇಂಡಿಯನ್ ವೆಲ್ಸ್ ಪಂದ್ಯಾವಳಿಗಳಲ್ಲಿ ವಿಜಯಿಯಾಗಿರುವ ಸ್ವಿಸ್ ಆಟಗಾರ ಈ ವರ್ಷ 19-1ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‍ನಲ್ಲಿ ನಡಾಲ್ ವಿರುದ್ಧ ಐದು ಸೆಟ್‍ಗಳಿಂದ ವಿಜೇತರಾಗಿದ್ದ ಫೆಡರೆರ್ ಈ ಫೈನಲ್ ಪಂದ್ಯದಲ್ಲೂ ಸ್ಪೇನ್ ಆಟಗಾರನಿಗೆ ಸೋಲಿನ ಕಹಿ ಅನುಭವ ನೀಡಿದರು.
  ಫೈನಲ್‍ನಲ್ಲಿ ಜಯಗಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ರೋಚಕ ಗೆಲುವು. ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಹೇಳಿದರು.