ಗುರುವಾರ, ಏಪ್ರಿಲ್ 6, 2017

ಎಲೆಕ್ಟ್ರಾನಿಕ್ ಮತಯಂತ್ರ ಬೇಡವೇ ಬೇಡ

ಎಲೆಕ್ಟ್ರಾನಿಕ್‌ ಮತಯಂತ್ರ ಬೇಡವೇ ಬೇಡ

ನವದೆಹಲಿ: ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಮಾರ್ಪಡಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌, ಎಸ್‌ಪಿ ಮತ್ತು ಬಿಎಸ್‌ಪಿ ರಾಜ್ಯಸಭೆಯಲ್ಲಿ ಗದ್ದಲ ನಡೆಸಿದವು. ಮುಂದೆ ನಡೆಯುವ ಚುನಾವಣೆಗಳಲ್ಲಿ ಮತಯಂತ್ರಗಳನ್ನು ಬಳಸಲೇಬಾರದು ಎಂದು ಒತ್ತಾಯಿಸಿದವು. ಪರಿಣಾಮವಾಗಿ ಅಲ್ಪಕಾಲ ಸದನವನ್ನು ಮುಂದೂಡಬೇಕಾಯಿತು.

‘ಸರ್ಕಾರ ವಂಚಕ’ ಎಂದು ಘೋಷಣೆ ಕೂಗುತ್ತಾ ವಿರೋಧ ಪಕ್ಷಗಳ ಸದಸ್ಯರು ಸಭಾಪತಿ ಪೀಠದ ಮುಂದೆ ಜಮಾಯಿಸಿದರು. ಉಪಸಭಾಪತಿ ಪಿ.ಜೆ. ಕುರಿಯನ್‌ ಅವರು ಸದನವನ್ನು ಏಳು ನಿಮಿಷ ಮುಂದೂಡಿದರು.

ವಿರೋಧ ಪಕ್ಷಗಳ ಆರೋಪವನ್ನು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್‌ ನಖ್ವಿ ಅವರು ಅಷ್ಟೇ ಬಲವಾಗಿ ವಿರೋಧಿಸಿದರು. ಮತಯಂತ್ರಗಳ ಬಗ್ಗೆ ಯಾರಿಗಾದರೂ ಅನುಮಾನ ಇದ್ದರೆ ಆ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಬೇಕು.
ಈ ವಿಚಾರದಲ್ಲಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಬಾರದು ಎಂದರು.

ಕೆಲವು ರಾಜಕೀಯ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟೀಕರಣ ನೀಡಿದೆ ಎಂದೂ ಅವರು ತಿಳಿಸಿದರು.
ಸರ್ಕಾರವನ್ನು ‘ವಂಚಕ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಕರೆದದ್ದು ಗದ್ದಲಕ್ಕೆ ಕಾರಣವಾಯಿತು. ಜನರು ಹಾಗೂ ಪ್ರಜಾಪ್ರಭುತ್ವವನ್ನು ಮಾಯಾವತಿ ಅವರು ಅವಮಾನಿಸಿದ್ದಾರೆ ಎಂದು ನಖ್ವಿ ಹೇಳಿದರು.

ಮಾಯಾವತಿ ಅವರ ಹೇಳಿಕೆ ಬಿಜೆಪಿಯನ್ನು ಕುರಿತೇ ಹೊರತು ಜನರ ಬಗ್ಗೆ ಅಲ್ಲ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದವು. 2004 ಮತ್ತು 2009ರಲ್ಲಿ ಬಿಹಾರ ಮತ್ತು ದೆಹಲಿ ಹಾಗೂ ಈ ಬಾರಿ ಪಂಜಾಬ್‌ನಲ್ಲಿ ನಡೆದ ಚುನಾವಣೆಗಳಲ್ಲಿಯೂ ಇವೇ ಮತಯಂತ್ರಗಳನ್ನು ಬಳಸಲಾಗಿತ್ತು. ಅಲ್ಲೆಲ್ಲ ಬಿಜೆಪಿ ಸೋತಿದೆ. ಆಗ ಕಾಂಗ್ರೆಸ್‌ ಯಾವುದೇ ವಿರೋಧ ಮಾಡಿಲ್ಲ ಎಂದು ನಖ್ವಿ ಹೇಳಿದರು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್‌ ಅವರು ಅದಕ್ಕೆ ತಿರುಗೇಟು ನೀಡಿ, ಆಗ ಆಡಳಿತದಲ್ಲಿದ್ದ ಕಾಂಗ್ರೆಸ್‌ ಮತಯಂತ್ರಕ್ಕೆ ಕನ್ನ ಹಾಕಿಲ್ಲ ಎಂದರು. ಆದರೆ ಈಗ ಅಂತಹ ಪ್ರವೃತ್ತಿ ಆರಂಭವಾಗಿದೆ ಎಂದು ಆರೋಪಿಸಿದರು.

ಮುಂದೆ ನಡೆಯಲಿರುವ ಚುನಾವಣೆ ಗಳು ಮತ್ತು ಉಪ ಚುನಾವಣೆಗಳಲ್ಲಿ ಮತಯಂತ್ರಗಳ ಬದಲಿಗೆ ಮತಪತ್ರಗಳನ್ನೇ ಬಳಸಬೇಕು ಎಂದು ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌, ಎಸ್‌ಪಿಯ ರಾಮ್‌ಗೋಪಾಲ್ ಯಾದವ್‌ ಆಗ್ರಹಿಸಿದರು.

ಮಧ್ಯಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ನಡೆದ ಮತಯಂತ್ರ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಯಾವ ಗುಂಡಿ ಒತ್ತಿದರೂ ಮತ ಬಿಜೆಪಿಗೇ ಚಲಾವಣೆಯಾದ ಪ್ರಸಂಗವನ್ನು ವಿರೋಧ ಪಕ್ಷಗಳ ಸದಸ್ಯರು ಉಲ್ಲೇಖಿಸಿದರು.

ಮುಕ್ತ ಮತ್ತು ನ್ಯಾಯಬದ್ಧ ಚುನಾವಣೆಯೇ ಭಾರತೀಯ ಪ್ರಜಾಪ್ರಭುತ್ವದ ತಳಹದಿ. ಆದರೆ ಇದೇ ಮೊದಲ ಬಾರಿ ಚುನಾವಣೆ ಬಗ್ಗೆ ಪ್ರಶ್ನೆಗಳು  ಮೂಡಿವೆ ಎಂದು ಆಜಾದ್‌ ಹೇಳಿದರು.

ಇವಿಎಂ ಸರಿಯಿಲ್ಲ ಎಂದವರ ಬಗ್ಗೆ ನಾಯ್ಡು ವ್ಯಂಗ್ಯ: ಎಲೆಕ್ಟ್ರಾನಿಕ್‌ ಮತ ಯಂತ್ರಗಳು (ಇವಿಎಂ) ಸರಿಯಿಲ್ಲ ಎನ್ನುತ್ತಿರುವ ರಾಜಕೀಯ ಎದುರಾಳಿಗಳ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು, ‘ಹೀಗೆ ಹೇಳುವವರ ಪಾಲಿಗೆ ಇವಿಎಂಗಳು ಎವೆರಿ ವೋಟ್‌ ಮೋದಿ (ಪ್ರತಿ ಮತವೂ ಮೋದಿಗೆ) ಎಂಬಂತಾಗಿವೆ’ ಎಂದರು. ಅಭಿವೃದ್ಧಿ ಪರ ಇರುವ ಜನರ ಮನಸ್ಸಿನಲ್ಲಿ ಒಂದು ಬದಲಾವಣೆ ಕಂಡುಬಂತು. ಅಭಿವೃದ್ಧಿಪರ ಕೆಲಸಗಳನ್ನು ಬಿಜೆಪಿ ಮಾಡಬಲ್ಲದು ಎಂದರು.

ಗಾಯಕ್‌ವಾಡ್‌ಗೆ ನಿಷೇಧ: ನಿಲುವಳಿ ನೋಟಿಸ್‌
ಸಂಸದ ರವೀಂದ್ರ ಗಾಯಕ್‌ವಾಡ್‌ ಮೇಲೆ ದೇಶದ ವಿಮಾನ ಯಾನ ಸಂಸ್ಥೆಗಳು ಹೇರಿರುವ ನಿಷೇಧದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಶಿವಸೇನಾ ಸಜ್ಜಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ನಿಲುವಳಿ ಸೂಚನೆ ಮಂಡಿಸಲು ನೋಟಿಸ್‌ ನೀಡಲಾಗಿದೆ.

ಏರ್‌ ಇಂಡಿಯಾ ವ್ಯವಸ್ಥಾಪಕರೊಬ್ಬರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ಗಾಯಕ್‌ವಾಡ್‌ ಮೇಲೆ ದೇಶದ ಎಲ್ಲ ಪ್ರಮುಖ ವಿಮಾನ ಯಾನ ಸಂಸ್ಥೆಗಳು ನಿಷೇಧ ಹೇರಿವೆ.

ಹಲ್ಲೆ ಬಗ್ಗೆ ಗಾಯಕ್‌ವಾಡ್‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ವಿಮಾನ ಪ್ರಯಾಣ ನಿಷೇಧ ಹಿಂದೆಗೆಯಲು ನಾಗರಿಕ ವಾಯುಯಾನ ಸಚಿವಾಲಯ ಮುಂದಾಗಿಲ್ಲ ಎಂಬುದು ಶಿವಸೇನಾದ ಅತೃಪ್ತಿ. ಹಾಗಾಗಿ ಸೇನಾದ ಸಂಸದೀಯ ಪಕ್ಷ ಬುಧವಾರ ಹಲವು ಬಾರಿ ಸಭೆ ಸೇರಿ ಚರ್ಚೆ ನಡೆದಿದೆ.

ಲೋಕಸಭೆ ಕಲಾಪದಲ್ಲಿ ಭಾಗವಹಿಸಲು ಗುರುವಾರ ದೆಹಲಿಗೆ ತೆರಳುವುದಕ್ಕಾಗಿ ಗಾಯಕ್‌ವಾಡ್‌ ಅವರಿಗೆ ಸೇನಾ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ ಎಂದು ತಿಳಿದು ಬಂದಿದೆ.

‘ಸದನದ ಹಕ್ಕನ್ನು ರಕ್ಷಿಸುವುದು ಸ್ಪೀಕರ್‌ ಕರ್ತವ್ಯ. ಆದರೆ ನಮ್ಮ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಸಮಸ್ಯೆ ಪರಿಹಾರ ಆಗದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ. ಸರ್ಕಾರದ ಭಾಗವಾಗಿರುವ ನಾವು ಪ್ರತಿಭಟನೆ ನಡೆಸಲು ಬಯಸುವುದಿಲ್ಲ’ ಎಂದು ಸೇನಾ ಸಂಸದ ಆನಂದರಾವ್‌ ಅಡ್ಸುಲ್‌ ಹೇಳಿದ್ದಾರೆ.

ಗಾಯಕ್‌ವಾಡ್‌ ಎದುರಿಸಿದಂತಹ ಸಮಸ್ಯೆಯನ್ನು ಇತರ ಸಂಸದರೂ ಎದುರಿಸಿದ್ದಾರೆ. ಖಾಸಗಿ ವಿಮಾನ ಯಾನ ಸಂಸ್ಥೆಗಳು ದೌರ್ಜನ್ಯ ನಡೆಸಲು ಯತ್ನಿಸುತ್ತಿವೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಅಡ್ಸುಲ್‌ ಹೇಳಿದ್ದಾರೆ.

₹2,000 ನೋಟು ರದ್ದು ಇಲ್ಲ
ಹೊಸ  ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ. ‘ನಾವು ನಕಲಿ ನೋಟುಗಳನ್ನು ಜಪ್ತಿ ಮಾಡುತ್ತಿದ್ದೇವೆ. ₹2,000ದ ನೋಟು ರದ್ದಾಗಲಿದೆ ಎಂಬ ವದಂತಿಗಳು ಹೊರಗೆ ಇವೆ. ಆದರೆ ವದಂತಿ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ’ ಎಂದು  ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಗಿಲ್ಗಿಟ್ ಸಮಸ್ಯೆ :ಭಾರತ ಕಿಡಿ

ಪಾಕ್‌ ಕ್ರಮಕ್ಕೆ ಭಾರತ ಕಿಡಿ

ನವದೆಹಲಿ (ಐಎಎನ್‌ಎಸ್): ಗಿಲ್ಗಿಟ್ ಮತ್ತು ಬಾಲ್ಟಿಸ್ತಾನವನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸಲು ಮುಂದಾಗಿರುವ ಪಾಕಿಸ್ತಾನದ ಕ್ರಮವನ್ನು  ಕೇಂದ್ರ ಸರ್ಕಾರ ಪ್ರಬಲವಾಗಿ ಖಂಡಿಸಿದೆ.

ಜತೆಗೆ, ‘ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರ ಒಳಗೊಂಡಂತೆ, ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಬಿಜು ಜನತಾ ದಳ ಸಂಸದ ಭ್ರತೃಹರಿ ಮಹತಾಬ್ ಅವರು ಶೂನ್ಯವೇಳೆಯಲ್ಲಿ, ‘ಈ ಪ್ರದೇಶಗಳನ್ನು ತನ್ನ ಐದನೇ ಪ್ರಾಂತ್ಯಗಳೆಂದು ಘೋಷಿಸಲು ಪಾಕಿಸ್ತಾನ ಸಿದ್ಧತೆ ನಡೆಸಿದೆ’ ಎಂದು ವಿಷಯವನ್ನು ಪ್ರಸ್ತಾಪಿಸಿದರು.

ನಂತರ, ‘ಈ ಪ್ರದೇಶಗಳು ಭಾರತದ ಭಾಗ ಎಂದು ನಮ್ಮ ಸಂವಿಧಾನ ಗುರುತಿಸಿದೆ. ಆದರೆ, ದೇಶ ವಿಭಜನೆ ವೇಳೆ ಈ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೈನಿಕರಿಗೆ ಬ್ರಿಟಿಷ್ ಅಧಿಕಾರಿಗಳು ಅವಕಾಶ ನೀಡಿದ್ದರು.
ಬ್ರಿಟನ್‌ ಸಂಸತ್ತು ಈ ಬಗ್ಗೆ ಬಹಳ ಹಿಂದೆಯೇ ನಿರ್ಣಯ ಮಂಡಿಸಿದೆ. ಅದರಲ್ಲಿ, ‘ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ ಭಾರತದ ಭಾಗಗಳು. ಆದರೆ ಪಾಕಿಸ್ತಾನ ಇವನ್ನು 1947ರಿಂದಲೂ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ’ ಎಂದು ವಿವರಿಸಲಾಗಿದೆ. ಅದನ್ನು ತನ್ನ ಐದನೇ ಪ್ರಾಂತ್ಯ ಎಂದು ಘೋಷಿಸುವ ಪಾಕಿಸ್ತಾನದ ನಡೆ ಏಕಪಕ್ಷೀಯವಾದುದು. ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ‘ಪಾಕಿಸ್ತಾನ ಮಾಡಿದ್ದು ಮಾತ್ರ ನಿಮಗೆ ಕಾಣುತ್ತಿದೆ. ಅದಕ್ಕೆ ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ ಎಂಬುದು ನಿಮಗೆ ಕಾಣುವುದಿಲ್ಲ. ಪಾಕಿಸ್ತಾನದ ನಡೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಖಂಡಿಸಲಾಗಿದೆ. ಈ ಪ್ರದೇಶಗಳು ಭಾರತದ ಭಾಗಗಳು ಎಂಬುದರಲ್ಲಿ ಅನುಮಾನವೇ ಬೇಡ’ ಎಂದು ಅವರ ಉತ್ತರಿಸಿದರು.

‘ಜನಾಂಗೀಯ ದಾಳಿ ಎನ್ನಲಾಗದು’

‘ಗ್ರೇಟರ್‌ ನೋಯ್ಡಾದಲ್ಲಿ ಆಫ್ರಿಕಾ ದೇಶಗಳ ಪ್ರಜೆಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಅದನ್ನು  ಈಗಲೇ, ಜನಾಂಗೀಯ ದಾಳಿ ಎಂದು  ಕರೆಯಲು ಸಾಧ್ಯವಿಲ್ಲ’ ಎಂದು ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಹೇಳಿದ್ದಾರೆ.

‘ಆಫ್ರಿಕಾ ದೇಶಗಳ ನಿಯೋಗದ ಮುಖ್ಯಸ್ಥರು ಇದನ್ನು ಜನಾಂಗೀಯ ದಾಳಿ  ಮತ್ತು ಭಾರತ ಸರ್ಕಾರ ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ದುರದೃಷ್ಟದ ಹೇಳಿಕೆ. ಆಫ್ರಿಕಾದ ನಿಯೋಗದ ಹೇಳಿಕೆಯಿಂದ ಭಾರತಕ್ಕೆ ನೋವಾಗಿದೆ ಎಂಬುದನ್ನು, ಈಗಾಗಲೇ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ’ ಎಂದು ಅವರು ಹೇಳಿದರು.
‘ದಾಳಿಗಳು ಪೂರ್ವಯೋಜಿತವಾಗಿರುತ್ತವೆ’ ಎಂದರು.

ನರ ನಿಷ್ಕ್ರಿಯಗೊಳಿಸುವ ವಿಷ ಬಳಕೆ:ವಿಶ್ವ ಆರೊಗ್ಯ ಸಂಸ್ಥೆ

ನರ ನಿಷ್ಕ್ರಿಯಗೊಳಿಸುವ ವಿಷ ಬಳಕೆ: ವಿಶ್ವ ಆರೋಗ್ಯ ಸಂಸ್ಥೆ

ಖಾನ್‌ ಶೇಕ್‌ಹೌನ್, ಸಿರಿಯಾ: ರಾಸಾಯನಿಕ ದಾಳಿಗೆ ಒಳಗಾದವರ ಲಕ್ಷಣಗಳನ್ನು ಗಮನಿಸಿದರೆ ನರಮಂಡಲವನ್ನು ನಿಷ್ಕ್ರಿಯಗೊಳಿಸುವ  ಸಾಮರ್ಥ್ಯದ ವಿಷ (ನರ್ವ್ ಏಜೆಂಟ್) ಬಳಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ನರ್ವ್ ಏಜೆಂಟ್ ವಿಷದಿಂದ ದೇಹದ ಹೊರಭಾಗದಲ್ಲಿ ಗಾಯಗಳಾಗಿರುವ ಪ್ರಕರಣ ಹೆಚ್ಚು ಕಂಡುಬಂದಿಲ್ಲ. ಬಹುತೇಕರಿಗೆ ತೀವ್ರತರವಾದ ಉಸಿರಾಟದ ಸಮಸ್ಯೆ ಎದುರಾಗಿದೆ. ಇದು ಸಾವನ್ನು ತರುತ್ತದೆ ಎಂದು ಸಂಸ್ಥೆ ಹೇಳಿದೆ. ನರ್ವ್ ಏಜೆಂಟ್ ಸೇರಿರುವ ಆರ್ಗನೋಫೋರಸ್ ರಾಸಾಯನಿಕ ಸೇವಿಸಿದಾಗ ಕಾಣುವ ಲಕ್ಷಣಗಳು ಕೆಲವರಲ್ಲಿ ಕಂಡಬಂದಿವೆ ಎಂದೂ ಹೇಳಿದೆ.

ಅಮೆರಿಕ, ಬ್ರಿಟನ್ ಖಂಡನೆ: ಬಷಲ್ ಅಲ್ ಅಸದ್ ನೇತೃತ್ವದ ಸಿರಿಯಾ ಸರ್ಕಾರದತ್ತ ಅಮೆರಿಕ ಹಾಗೂ ಬ್ರಿಟನ್ ಬೊಟ್ಟು ಮಾಡಿವೆ. ಸಿರಿಯಾ ಮಿತ್ರದೇಶಗಳಾದ ರಷ್ಯಾ, ಇರಾನ್‌ ಅಮಾಯಕರ ಸಾವಿನ ನೈತಿಕ ಹೊಣೆ ಹೊರಬೇಕು ಎಂದು ಅಮೆರಿಕ ಹೇಳಿದೆ.
ಬಷರ್ ಅಲ್ ಅಸದ್ ಅವರ ಆಡಳಿತದ ಕ್ರೌರ್ಯವನ್ನು ಇದು ತೋರಿಸುತ್ತದೆ ಎಂದು ಬ್ರಿಟನ್ ವಿದೇಶಾಂಗ ಸಚಿವ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಸಿರಿಯಾ ಬೆಂಬಲಕ್ಕೆ ನಿಂತ ರಷ್ಯಾ: ಶಂಕಿತ ರಾಸಾಯನಿಕ ದಾಳಿ ಬಗ್ಗೆ ಜಾಗತಿಕವಾಗಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ತನ್ನ ಮಿತ್ರದೇಶ ಸಿರಿಯಾ ಬೆಂಬಲಕ್ಕೆ ರಷ್ಯಾ ನಿಂತಿದೆ. ಭಯೋತ್ಪಾದಕರ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ಸಿರಿಯಾ ವಾಯುದಾಳಿ ನಡೆಸಿದೆ  ಎಂದು ಅದು ಸಮರ್ಥಿಸಿಕೊಂಡಿದೆ.

ಬಂಡುಕೋರರ ಶಸ್ತ್ರಾಸ್ತ್ರ ಉಗ್ರಾಣದ  ಮೇಲೆ ಸಿರಿಯಾ ಪಡೆ  ದಾಳಿ ನಡೆಸಿದಾಗ ವಿಷಕಾರಿ ಅನಿಲ ಬಿಡುಗಡೆಯಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

‘ಈ ಉಗ್ರಾಣದಲ್ಲಿ ವಿಷಕಾರಿ ವಸ್ತುಗಳಿಂದ ಕೂಡಿದ ಬಾಂಬ್ ತಯಾರಿಸಲಾಗುತ್ತಿತ್ತು’ ಎಂದಿರುವ ಸಚಿವಾಲಯವು, ಈ ದಾಳಿ ಆಕಸ್ಮಿಕವೇ ಅಥವಾ  ಪೂರ್ವನಿಯೋಜಿತವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಇರಾಕ್‌ ಬಂಡುಕೋರರ ಬಳಕೆಗಾಗಿ ವಿಷಕಾರಿ ರಾಸಾಯನಿಕ ಅಸ್ತ್ರಗಳನ್ನು ತಯಾರಿಸಲಾಗುತ್ತಿತ್ತು. ಈ ಬಗ್ಗೆ ವಿಶ್ವಾಸಾರ್ಹ ಹಾಗೂ ವಸ್ತುನಿಷ್ಠ ಮಾಹಿತಿಗಳಿವೆ ಎಂದು ರಷ್ಯಾ ಹೇಳಿಕೊಂಡಿದೆ.

ಆದರೆ ದಾಳಿಯನ್ನು ಸಿರಿಯಾ ಅಲ್ಲಗಳೆದಿದೆ. ತಾನು ರಾಸಾಯನಿಕ ಅಸ್ತ್ರ ಬಳಸಿಲ್ಲ ಎಂದು ಈ ಮೊದಲೂ ಸ್ಪಷ್ಟಪಡಿಸಿದ್ದ ಸಿರಿಯಾ, ಎಂದಿಗೂ ಇಂತಹ ಕೃತ್ಯ ಎಸಗುವುದಿಲ್ಲ ಎಂದಿದೆ.

ಈ ಭೀಕರ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಅಡಗಿಕೊಂಡಿದ್ದ ಕೆಲವರು  ಅಚ್ಚರಿಯೆಂಬಂತೆ ಬದುಕುಳಿದಿರುವುದನ್ನು ರಕ್ಷಣಾ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ. ದಾಳಿಗೆ ಒಳಗಾಗಿದ್ದ ಖಾನ್‌ಶೇಕ್‌ಹೌನ್ ಪಟ್ಟಣದ ಮೇಲೆ  ಮತ್ತೆ ವಾಯುದಾಳಿ ನಡೆದಿದೆ.

ಮೃತರ ಸಂಖ್ಯೆ 72: ಬಂಡುಕೋರರ ನೆಲೆ ಖಾನ್‌ ಶೇಕ್‌ಹೌನ್‌ ಪಟ್ಟಣದ ಮೇಲೆ ಮಂಗಳವಾರ ಶಂಕಿತ ರಾಸಾಯನಿಕ ದಾಳಿ ನಡೆದಿತ್ತು. ಮೃತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.

ಖಂಡಾಂತರ ಕ್ಷಿಪಣಿ ಉಡಾವಣೆ

ಖಂಡಾಂತರ ಕ್ಷಿಪಣಿ ಉಡಾವಣೆ

ಸೋಲ್: ಅಣ್ವಸ್ತ್ರ ಸಜ್ಜಿತ ಖಂಡಾಂತರ ಕ್ಷಿಪಣಿಯನ್ನು ಜಪಾನ್ ಸಮುದ್ರದತ್ತ ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದೆ ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಸೇನೆ ಹೇಳಿವೆ.

ಕ್ಷಿಪಣಿಯು 60 ಕಿ.ಮೀ ದೂರಕ್ಕೆ ಹಾರಿದೆ ಎಂದು ಹೇಳಿರುವ ದಕ್ಷಿಣ ಕೊರಿಯಾ, ಉತ್ತರ ಕೊರಿಯಾದ ಪ್ರಚೋದನಕಾರಿ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸನ್ನದ್ಧ ಸ್ಥಿತಿಯಲ್ಲಿರುವುದಾಗಿ ತಿಳಿಸಿದೆ.

ಉತ್ತರ ಕೊರಿಯಾ ಬೆದರಿಕೆಯನ್ನು ಹತ್ತಿಕ್ಕಲು ಎಲ್ಲ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿರುವುದಾಗಿ ಅಮೆರಿಕ ಹೇಳಿದೆ.

ಏಷ್ಯನ್ ಬಿಲಿಯರ್ಡ್ಸ್ ತಂಡದಲ್ಲಿ ಪಂಕಜ್

ಏಷ್ಯನ್ ಬಿಲಿಯರ್ಡ್ಸ್ ತಂಡದಲ್ಲಿ ಪಂಕಜ್

ಚೆನ್ನೈ: ಕರ್ನಾಟಕದ ಪಂಕಜ್ ಅಡ್ವಾಣಿ ಬುಧವಾರ ಭಾರತ ಬಿಲಿಯರ್ಡ್ಸ್‌ ಮತ್ತು ಸ್ನೂಕರ್ ಸಂಸ್ಥೆ  (ಬಿಎಸ್‌ಎಫ್‌ಐ) ಪ್ರಕಟಿಸಿದ ಏಷ್ಯನ್‌ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬಿಎಸ್‌ಎಫ್‌ಐ ಮೂರು ಟೂರ್ನಿಗಳಿಗೆ ಒಟ್ಟು 24 ಸ್ಪರ್ಧಿಗಳ ತಂಡವನ್ನು ಅಂತಿಮಗೊಳಿಸಿದೆ.

ಏಷ್ಯನ್ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್ ತಂಡದಲ್ಲಿ ಪಂಕಜ್ ಅಡ್ವಾಣಿ, ರೂಪೇಶ್ ಷಾ, ಸೌರವ್ ಕೊಠಾರಿ, ಬ್ರಿಜೇಷ್ ದಮಾನಿ, ಧ್ರುವ್ ಸಿತ್ವಾಲ, ಧ್ವಜ್‌ ಹರಿಯಾ, ಸಿದ್ದಾರ್ಥ್‌ ಪಾರಿಖ್‌, ಬಿ. ಭಾಸ್ಕರ್‌ ಇದ್ದಾರೆ.

ಏಷ್ಯನ್ ಬಿಲಿಯರ್ಡ್ಸ್‌ಗೆ ಆಯ್ಕೆಯಾದ ಮಹಿಳೆಯರ ತಂಡದಲ್ಲಿ ಆಮೀ ಕರಮಿ, ಅರಂತಾ ಸಂಚಿತ್‌, ವರ್ಷಾ ಸಂಜೀವ್‌, ವಿದ್ಯಾ ಪಿಳ್ಳೈ, ಎಮ್‌.ಚಿತ್ರಾ, ಕೀರತ್ ಭಂಡಾಲ್‌, ಮೀನಲ್ ಠಾಕೂರ್‌ ಮತ್ತು ಸುನಿತಿ ದಾಮಿನಿ ಸೇರಿದ್ದಾರೆ.

ರಷ್ಯಾದ ಈಜುಪಟು ನತಾಲಿಯಾ ಇಶ್ಚೆಂ ಕೋ ನಿವೃತ್ತಿ

ಇಶ್ಚೆಂಕೊ ನಿವೃತ್ತಿ

ಮಾಸ್ಕೊ: ಒಲಿಂಪಿಕ್ಸ್‌ ನಲ್ಲಿ ಐದು ಚಿನ್ನ ಗೆದ್ದ ಹೆಗ್ಗಳಿಕೆಯ ರಷ್ಯಾದ ಈಜುಪಟು ನತಾಲಿಯಾ ಇಶ್ಚೆಂ ಕೊ ಬುಧವಾರ ನಿವೃತ್ತಿ ಪ್ರಕಟಿಸಿದ್ದಾರೆ.

ಸಿಂಕ್ರನೈಸ್ಡ್‌ ವಿಭಾಗದಲ್ಲಿ ನೈಪುಣ್ಯತೆ ಸಾಧಿಸಿದ್ದ  30 ವರ್ಷ ವಯಸ್ಸಿನ ಇವರು ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ 19 ಚಿನ್ನ ಗೆದ್ದಿದ್ದರಲ್ಲದೆ,  ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ 12 ಚಿನ್ನ ಗಳಿಸಿ ದ್ದರು. ಸಿಂಕ್ರನೈಸ್ಡ್‌ ವಿಭಾಗದಲ್ಲಿ ಈ  ಸಾಧನೆ ಮಾಡಿದ ಯೂರೊಪ್‌ನ ಮೊದಲ ಈಜುಗಾರ್ತಿ  ಇವರಾಗಿದ್ದಾರೆ.

ಗಿಲ್ಗಿಟ್- ಬಲಟಿಸ್ತಾನ್ ಸೇರಿದಂತೆ ಇಡೀ ಕಾಶ್ಮೀರ ನಮ್ಮದು ಪಾಕ್ಗೆ ಸುಷ್ಮಾ ಎಚ್ಚರಿಕೆ

ಗಿಲ್ಗಿಟ್-ಬಲ್ಟಿಸ್ತಾನ್ ಸೇರಿದಂತೆ ಇಡೀ ಕಾಶ್ಮೀರ ನಮ್ಮದು: ಪಾಕ್ ಗೆ ಸುಷ್ಮಾ ಎಚ್ಚರಿಕೆ

ನವದೆಹಲಿ: ಗಿಲ್ಗಿಟ್-ಬಲ್ಟಿಸ್ತಾನ್ ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸಲು ಮುಂದಾಗಿರುವ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ ಆಕ್ರಮಿತ ಪ್ರದೇಶ ಸೇರಿದಂತೆ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಬುಧವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬಿಜು ಜನತಾ ದಳ ಸಂಸದ ಭರ್ತೃಹರಿ ಮೆಹ್ತಾಬ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸುಷ್ಮಾ ಸ್ವರಾಜ್, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದರ ಬಗ್ಗೆ ಯಾವುದೇ ಅನುಮಾನ ಬೇಡ. ಗಿಲ್ಗಿಟ್-ಬಲ್ಟಿಸ್ತಾನ್ ಸೇರಿದಂತೆ ಇಡೀ ಕಾಶ್ಮೀರ ನಮ್ಮದು ಎಂದು ಹೇಳಿದರು.

ಗಿಲ್ಗಿಟ್-ಬಲ್ಟಿಸ್ತಾನ್ ಪಾಕಿಸ್ತಾನದ ಐದನೇ ಪ್ರಾಂತ್ಯ ಎಂದು ಘೋಷಿಸಲು ಪಾಕಿಸ್ತಾನ ನಿರ್ಧರಿಸಿದೆ.
ಆದರೆ ಪಾಕಿಸ್ತಾನದ ಈ ನಿರ್ಧಾರವನ್ನು ಖಂಡಿಸಿ ಲೋಕಸಭೆ ಮತ್ತು ರಾಜ್ಯಸಭೆ ನಿರ್ಣಯ ಅಂಗೀಕರಿಸಬೇಕು ಎಂದು ಮೆಹ್ತಾಬ್ ಅವರು ಒತ್ತಾಯಿಸಿದರು.

ಬುಧವಾರ, ಏಪ್ರಿಲ್ 5, 2017

ಮಹಿಳಾ ವಿಶ್ವ ಹಾಕಿ ಲೀಗ್: ಭಾರತಕ್ಕೆ ಸತತ 2ನೇಯ ಜಯ

ಮಹಿಳಾ ವಿಶ್ವ ಹಾಕಿ ಲೀಗ್; ಭಾರತಕ್ಕೆ ಸತತ 2ನೇ ಜಯ: ಸೆಮಿಫೈನಲ್ ಪ್ರವೇಶ

ವೆಸ್ಟ್ ವಾಂಕೊವರ್: ಮಹಿಳೆಯರ ವಿಶ್ವ ಹಾಕಿ ಲೀಗ್'ನಲ್ಲಿ ಭಾರತೀಯ ವನಿತೆಯರ ತಂಡ ಸೋಮವಾರ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಇಂದು ನಡೆದ ರೌಂಡ್-2 ಪಂದ್ಯದಲ್ಲಿ ವಂದನಾ ಕಟಾರಿಯಾ ಅವರ ಗೋಲಿನ ಸಹಾಯದಿಂದ ಭಾರತ ಮಹಿಳಾ ಹಾಕಿ ತಂಡ 1-0 ಗೋಲಿನಿಂದ ಬೆಲಾರಸ್ ಮಹಿಳೆಯರನ್ನು ಮಣಿಸಿತು. ಎ ಗುಂಪಿನ ಈ ಪಂದ್ಯದಲ್ಲಿ ವಂದನಾ 26ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಬೆಲಾರಸ್ ವನಿತೆಯರು ತೀವ್ರ ಪೈಪೋಟಿ ನೀಡಿದರಾದರೂ, ಭಾರತೀಯರು ಇಡೀ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದರು. ಮೂರ್ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶಗಳೂ ಭಾರತಕ್ಕೆ ಸಿಕ್ಕಿದ್ದವು. ಭಾರತದ ಗೋಲ್'ಕೀಪರ್ ಸವಿತಾ ಅವರ ಪ್ರದರ್ಶನವೂ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಉರುಗ್ವೆ ವಿರುದ್ಧ ಶೂಟೌಟ್‌'ನಲ್ಲಿ 4-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತ್ತು.
ಉಭಯ ತಂಡಗಳು ನಿಗದಿತ ಸಮಯದಲ್ಲಿ 2-2ರಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಅನ್ನು ನೀಡಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ನಾಯಕಿ ರಾಣಿ, ಮೋನಿಕಾ, ದೀಪಿಕಾ ಹಾಗೂ ನವಜೋತ್ ಕೌರ್ ತಲಾ ಒಂದು ಗೋಲು ಬಾರಿಸುವ ಮೂಲಕ 4-2ರಿಂದ ಉರುಗ್ವೆ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರು.

ಸತತ ಎರಡು ಗೆಲುವುಗಳ ಮೂಲಕ ನಾಕೌಟ್ ಹಂತ ಪ್ರವೇಶಿಸಿರುವ ಭಾರತ ತಂಡ ಏಪ್ರಿಲ್ 8ರಂದು ಸೆಮಿಫೈನಲ್ ಪಂದ್ಯವಾಡಲಿದೆ.

ಜಸ್ವೀರ್ ಸಿಂಗ್ ಗೆ "ಆರ್ಡರ್ ಆಫ್ ದ ಬ್ರೀಟಿಶ್ ಎಂಪಯರ್" ಪ್ರಶಸ್ತಿ

ಜಸ್ವೀರ್ ಸಿಂಗ್‌ಗೆ 'ಆರ್ಡರ್ ಆಫ್ ದ ಬ್ರಿಟಿಶ್ ಎಂಪಯರ್' ಪ್ರಶಸ್ತಿ

ಲಂಡನ್, ಎ. 3: ಲಂಡನ್ ಬ್ಯಾರಿಸ್ಟರ್ ಜಸ್ವೀರ್ ಸಿಂಗ್ ‘ಆರ್ಡರ್ ಆಫ್ ದ ಬ್ರಿಟಿಶ್ ಎಂಪಯರ್ (ಒಬಿಇ)’ ಪ್ರಶಸ್ತಿ ಪಡೆದ ಜಗತ್ತಿನ ಅತ್ಯಂತ ಕಿರಿಯ ಸಿಖ್ ಆಗಿದ್ದಾರೆ.

ಜಸ್ವೀರ್ ಸಿಂಗ್ ಲಂಡನ್‌ನಲ್ಲೇ ಹುಟ್ಟಿ ಬೆಳೆದವರು. ಅವರ ಕುಟುಂಬಿಕರು ಪಂಜಾಬ್‌ನ ಡೊವೊಬ ಎಂಬ ಗ್ರಾಮದವರು.

‘‘ಆರ್ಡರ್ ಆಫ್ ದ ಬ್ರಿಟಿಶ್ ಎಂಪಯರ್ ಪ್ರಶಸ್ತಿ ಪಡೆದಿರುವುದಕ್ಕೆ ನನಗೆ ಹೆಮ್ಮೆಯೆನಿಸುತ್ತಿದೆ. ಇದು ನನಗೆ ಅಚ್ಚರಿಯ ವಿಷಯವಾಗಿದೆ. ಕಳೆದ ಏಳು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಏಕತೆಗಾಗಿ ನಾನು ನಡೆಸಿದ ಪ್ರಯತ್ನಗಳು ಈ ರೀತಿಯಲ್ಲಿ ಫಲ ನೀಡಿರುವುದಕ್ಕೆ ಸಂತೋಷವಾಗಿದೆ’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸಿಂಗ್ ‘ಸಿಟಿ ಸಿಖ್ಸ್’ ಎಂಬ ಸಂಘಟನೆಯ ಸ್ಥಾಪಕ ಅಧ್ಯಕ್ಷ ಹಾಗೂ ‘ಫೇತ್ಸ್ ಫೋರಂ ಫಾರ್ ಲಂಡನ್’ನ ಅಧ್ಯಕ್ಷರಾಗಿದ್ದಾರೆ.
ಈ ಸಂಘಟನೆಗಳು ಲಂಡನ್‌ನಲ್ಲಿರುವ ಕ್ರೈಸ್ತ, ಮುಸ್ಲಿಮ್, ಯಹೂದಿ, ಹಿಂದೂ, ಸಿಖ್, ಬೌದ್ಧ, ಜೈನ್, ರೊರಾಸ್ಟ್ರಿಯನ್ ಮತ್ತು ಬಹಾಯಿ ಎಂಬ ಏಳು ಪ್ರಮುಖ ಧರ್ಮಗಳ ಅನುಯಾಯಿಗಳ ಹಿತಾಸಕ್ತಿಗಳನ್ನು ಕಾಯ್ದುಕೊಂಡು ಬರುತ್ತಿವೆ.

‘‘ನಮ್ಮಲ್ಲಿ ಹಲವಾರು ರಾಷ್ಟ್ರವ್ಯಾಪಿ ಯೋಜನೆಗಳಿವೆ. ಅವುಗಳ ಪೈಕಿ ಒಂದು ವಿಭಜನೆ ಪೂರ್ವ ಭಾರತ, ವಿಭಜನೆ ಅವಧಿಯ ಭಾರತ ಮತ್ತು ಈಗಿನ ಬ್ರಿಟನ್‌ನಲ್ಲಿರುವ ಹಿಂದೂ, ಸಿಖ್ ಮತ್ತು ಮುಸ್ಲಿಮ್ ಸಮುದಾಯಗಳ ನಡುವಿನ ಸಂಬಂಧಗಳ ಬಗ್ಗೆ ಅಧ್ಯಯನ ಮಾಡುತ್ತಿದೆ’’ ಎಂದು ಸಿಂಗ್ ಹೇಳುತ್ತಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ದೇಶದ ನಂ.1 ಉನ್ನತ ಶಿಕ್ಷಣ ಸಂಸ್ಥೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ನಂ.1 ಉನ್ನತ ಶಿಕ್ಷಣ ಸಂಸ್ಥೆ

ನವದೆಹಲಿ: ದೇಶದ ಟಾಪ್ 10 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲ ಸ್ಥಾನ ಪಡೆದಿದ್ದು, ಪ್ರಬಂಧಕ ಸಂಸ್ಥೆಗಳ ಪೈಕಿ ಗುಜರಾತ್ ನ ಅಹಮದಾಬಾದ್ ಮೊದಲ ಸ್ಥಾನ ಪಡೆದಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೆಕರ್ ಅವರು ಬಿಡುಗಡೆ ಮಾಡಿರುವ ಟಾಪ್ 10 ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಏಳು ಐಐಟಿಗಳು ಸ್ಥಾನ ಪಡೆದಿದ್ದು, ಆ ಪೈಕಿ ಭಾರತೀಯ ವಿಜ್ಞಾನ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಇನ್ನು ಶ್ರೆಷ್ಠ ಕಾಲೇಜುಗಳ ಪಟ್ಟಿಯಲ್ಲಿ ದೆಹಲಿಯ ಮಿರಂದಾ ಹೌಸ್ ಮೊದಲ ಸ್ಥಾನ ಪಡೆದಿದೆ.

ಜಾವಡೆಕರ್ ಬಿಡುಗಡೆ ಮಾಡಿರುವ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ರಾಷ್ಟ್ರೀಯತೆ ಚರ್ಚೆ ಹಾಗೂ ಪ್ರತಿಭಟನೆಗಳ ಮೂಲಕ ದೇಶದ ಗಮನ ಸೆಳೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ಎರಡನೇ ಸ್ಥಾನದಲ್ಲಿದೆ.

ಅತ್ಯುತ್ತಮ ವಿಶ್ವವಿದ್ಯಾಲಯಗಳು

1) ಐಐಎಸ್‌ಸಿ, ಬೆಂಗಳೂರು

2) ಜೆಎನ್‌ಯು, ನವದೆಹಲಿ

3) ಬಿಎಚ್‌ಯು, ವಾರಣಾಸಿ

ಅತ್ಯುತ್ತಮ ಕಾಲೇಜುಗಳು

1) ಮಿರಂದಾ ಹೌಸ್‌, ನವದೆಹಲಿ

2) ಲಾಯಲ್ ಕಾಲೇಜ್, ಚೆನ್ನೈ

3) ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌, ನವದೆಹಲಿ

ಕಡಲಾಮೆಗಳು ಮೊಟ್ಟೆಯಿಡುವ ಸಮಯ: ಫುವೈರಿತ್ ಕಡಲ ಕಿನಾರೆಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಕಡಲಾಮೆಗಳು ಮೊಟ್ಟೆಡುವ ಸಮಯ: ಫುವೈರಿತ್ ಕಡಲ ಕಿನಾರೆಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧ

ದೋಹಾ: ವಂಶ ನಾಶ ಭೀತಿಯಲ್ಲಿರುವ ಕಡಲಾಮೆಗಳು ಮೊಟ್ಟೆಯಿಡುವ ಸಮಯವಾಗಿರುವುದರಿಂದ ಫುವೈರಿತ್ ಕಡಲಕಿನಾರೆಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.

ಕತಾರ್‍‍ನ ಉತ್ತರಭಾಗದಲ್ಲಿರುವ ಫುವೈರತ್ ಕಡಲ ಕಿನಾರೆಯಲ್ಲಿ  ಹಾಕ್ಸ್ ಬಿಲ್ ಎಂಬ ಜಾತಿಗೆ ಸೇರಿದ ಕಡಲಾಮೆಗಳು ಏಪ್ರಿಲ್ ನಿಂದ ಜುಲೈ ತಿಂಗಳವರೆಗೆ ಮೊಟ್ಟೆಯಿಡುವುದಕ್ಕಾಗಿ ದಡ ಸೇರುತ್ತವೆ.

ಹಾಗಾಗಿ, ಆ ತಿಂಗಳುಗಳಲ್ಲಿ ಪ್ರವಾಸಿಗರು ಫುವೈರಿತ್  ಬೀಚ್‍ಗೆ ಭೇಟಿ ನೀಡಬಾರದೆಂದು ಪರಿಸರ ಸಚಿವಾಲಯ ಹೇಳಿದೆ. ಆಗಸ್ಟ್  ತಿಂಗಳ ನಂತರವೇ ಈ ನಿರ್ಬಂಧವನ್ನು ತೆಗೆಯಲಾಗುವುದು.

ಕಡಲು ತೀರ ಪ್ರದೇಶಗಳಲ್ಲಿ ವಾಹನ ಸಂಚಾರ, ಬಲೆ ಬೀಸಿ ಮೀನು ಹಿಡಿಯುವುದು ಸೇರಿದಂತೆ ಈ ಪ್ರದೇಶಗಳನ್ನು ಮಾಲಿನ್ಯ ಮುಕ್ತಗೊಳಿಸುವಂತೆ ಸಚಿವಾಲಯ ಇಲ್ಲಿನ ನಾಗರಿಕರಿಗೆ ಹೇಳಿದೆ.

ಫುವೈರಿತ್, ಅಲ್ ಖಾರಿಯಾ, ರಾಸ್ ಲಫಾನ್, ಅಲ್ ಮರೂಣ  ಮೊದಲಾದ ಕಡಲ ಕಿನಾರೆಗಳಲ್ಲಿಯೂ ಹಲೂರ್, ಶರೀವು, ರಾಸ್ ರಖೇಲ್, ಉಂತೇಯಿಸ್ ಮೊದಲಾದ ದ್ವೀಪಗಳಲ್ಲಿ ಕಡಲಾಮೆಗಳ ಸಂಖ್ಯೆ ಜಾಸ್ತಿ ಇದೆ. ಪ್ರತಿ ಋತುಗಳಲ್ಲಿ ಗುಂಪಾಗಿ ಕಡಲ ತೀರಕ್ಕೆ ಆಗಮಿಸುವ ಈ ಆಮೆಗಳು 70 ರಿಂದ 95 ಮೊಟ್ಟೆಗಳನ್ನಿರಿಸುತ್ತವೆ. 52 ರಿಂದ 62 ದಿನಗಳಲ್ಲಿ ಈ ಮೊಟ್ಟೆಯಿಂದ ಮರಿ ಹೊರಬರುತ್ತದೆ.

ಮಂಜುನಾಥ್ ಸಾಗರ್ ಗೆ ಗುಲ್ವಾಡಿ ಪ್ರಶಸ್ತಿ

ಸಾಧಕ ಮಂಜುನಾಥ್ ಸಾಗರ್ ಗೆ ಗುಲ್ವಾಡಿ ಪ್ರಶಸ್ತಿ

ಕುಂದಾಪುರ, ಏಪ್ರಿಲ್ 3: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದವರಿಗೆ ನೀಡಲಾಗುವ 2016 ನೇ ಸಾಲಿನ ಸಂತೋಷ್ ಕುಮಾರ್ ಗುಲ್ವಾಡಿ ಗೌರವ ಪುರಸ್ಕಾರಕ್ಕೆ ಕೆ.ಪಿ.ಮಂಜುನಾಥ್ ಸಾಗರ್ ಆಯ್ಕೆಯಾಗಿದ್ದಾರೆ.

ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಗಳ ಮೂಲಕ ಕನ್ನಡ ಭಾಷೆಗೆ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ ಮಂಜುನಾಥ್ ಸಾಗರ್ ಅವರಿಗೆ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆಯಲ್ಲಿ ಏಪ್ರಿಲ್ 9 ರ ಸಂಜೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನ ತಿಳಿಸಿದೆ.[ಅಂತರಂಗ ಬಹಿರಂಗ ಖ್ಯಾತಿ ಗುಲ್ವಾಡಿ ಇನ್ನಿಲ್ಲ]

ಹತ್ತು ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಹೊಂದಿರುವ ಈ ಪ್ರಶಸ್ತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಗುಲ್ವಾಡಿ ಟಾಕೀಸ್ ನಿರ್ಮಾಣದ ಕಲಾತ್ಮಕ ಚಿತ್ರ 'ರಿಸರ್ವೇಶನ್' ನ ಟ್ರೈಲರ್ ಮತ್ತು ಪೋಸ್ಟರ್ ಬಿಡುಗಡೆಗೊಳ್ಳಲಿವೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ಗುಲ್ವಾಡಿ ಪ್ರತಿಷ್ಠಾನವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ, ಮಾಧ್ಯಮ, ಸಿನೆಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಿದೆ.

ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ ಸಂತೋಷ್ ಕುಮಾರ್ ಗುಲ್ವಾಡಿ ಅವರ ಸ್ಮರಣೆಗಾಗಿ ಪ್ರತಿಷ್ಠಾನ ಈ ಪ್ರಶಸ್ತಿ ಪ್ರದಾನ ಮಾಡುತ್ತಿದೆ ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಯಾಕೂಬ್ ಖಾದರ್ ಗುಲ್ವಾಡಿ ಹೇಳಿದ್ದಾರೆ.

ಸಾಕ್ಷಿಮಲಿಕ್ - ಸತ್ಯವರ್ತ ಮದುವೆಯಾಗಿದ್ದು

ಹೊಸ ಬಾಳಿಗೆ ಅಡಿಯಿಟ್ಟ ಸಾಕ್ಷಿ ಮಲಿಕ್ - ಸತ್ಯವರ್ತ್

ನವದೆಹಲಿ: 2016 ರಿಯೊ ಒಲಿಂಪಿಕ್ಸ್ ಕುಸ್ತಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್ ಮತ್ತು ಅಂತರರಾಷ್ಟ್ರೀಯ ಕುಸ್ತಿ ಪಟು ಸತ್ಯವರ್ತ್ ಕಾದಿಯಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರೋಹ್ಟಕ್‌ನಲ್ಲಿ ಭಾನುವಾರ ನಡೆದ ವಿವಾಹ ಮಹೋತ್ಸವದಲ್ಲಿ ಸಾಕ್ಷಿ ಅವರನ್ನು ಸತ್ಯವರ್ತ್‌ ವರಿಸಿದ್ದಾರೆ. ತಮಗಿಂತ ಎರಡು ವರ್ಷ ಕಿರಿಯರಾದ ಸತ್ಯವರ್ತ್‌ ಅವರನ್ನು ವಿವಾಹವಾಗುವುದಾಗಿ ಸಾಕ್ಷಿ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಘೋಷಿಸಿದ್ದರು.

    Time to get colored with Mehendi for the big day #excited pic.twitter.com/BjcBpIyrx3
    — Sakshi Malik (@SakshiMalik) April 1, 2017

ಸತ್ಯವರ್ತ್‌ 2010ರಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ ನಲ್ಲಿ ಕಂಚು ಗೆದ್ದಿದ್ದಾರೆ. 2013ರ ವಿಶ್ವ ಯುವ ಕುಸ್ತಿ ಪಂದ್ಯದಲ್ಲಿ ಟರ್ಕಿಯ ಕುಸ್ತಿಪಟುವನ್ನು ಸೋಲಿಸಿ ಕಂಚು ಗೆದ್ದಿದ್ದಾರೆ. ಅಷ್ಟೇ ಇಲ್ಲದೆ 2014 ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್, 2014 ಕಾಮನ್‍ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹರಿಯಾಣದ ರೋಹ್ಟಕ್‍ನವರೇ ಆಗಿರುವ ಸತ್ಯವರ್ತ್ ಮತ್ತು ಸಾಕ್ಷಿ ಮಲಿಕ್ ಕುಸ್ತಿ ತರಬೇತಿ ಕೇಂದ್ರದಲ್ಲಿ ಸಹಪಾಠಿಗಳಾಗಿದ್ದರು. ಒಲಿಂಪಿಕ್ಸ್ ಪಂದ್ಯದ ನಂತರ ಮದುವೆಯಾಗುವುದಾಗಿ ತೀರ್ಮಾನಿಸಿದ್ದರು.

ಸಾಕ್ಷಿ– ಸತ್ಯವರ್ತ್‌ ಅವರ ವಿವಾಹ ಸಮಾರಂಭದಲ್ಲಿ ಪ್ರಮುಖ ಕ್ರೀಡಾ ಪಟುಗಳು, ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.